ಚೀನಾದ ಆರ್ಥಿಕತೆಗೆ ಹೊಸ ಸವಾಲು : ವರದಿ
ಬೀಜಿಂಗ್: ದೇಶದ ಆರ್ಥಿಕತೆಗೆ ಹೊಸ ಸವಾಲು ಮತ್ತು ಸಂಕಷ್ಟ ಎದುರಾಗಿದೆ ಎಂದು ಚೀನಾದ ಉನ್ನತ ಮುಖಂಡರು ಆತಂಕ ವ್ಯಕ್ತಪಡಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಚೀನಾ ಕಮ್ಯುನಿಸ್ಟ್ ಪಕ್ಷದ ಉನ್ನತ ಸಮಿತಿಯಾಗಿರುವ 24 ಸದಸ್ಯರ ಪಾಲಿಟ್‌ಬ್ಯೂರೊದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಈಗ ನಡೆಯುತ್ತಿರುವ ಆರ್ಥಿಕ ಕಾರ್ಯಾಚರಣೆಗೆ ಹೊಸ ಸವಾಲು ಮತ್ತು ಸಮಸ್ಯೆ ಎದುರಾಗಿದ್ದು ದೇಶೀಯ ಬೇಡಿಕೆ ಕುಸಿದಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಕೆಲವು ಉದ್ದಿಮೆಗಳ ಕಾರ್ಯನಿರ್ವಹಣೆಗೆ ಎದುರಾಗಿರುವ ಸಮಸ್ಯೆ, ಅಧಿಕ ಅಪಾಯ ಹಾಗೂ ಗುಪ್ತ ಅಪಾಯಗಳು, ತೀವ್ರ ಮತ್ತು ಸಂಕೀರ್ಣ ಬಾಹ್ಯ ಪರಿಸ್ಥಿತಿ ಇದಕ್ಕೆ ಇನ್ನಷ್ಟು ಕಾರಣವಾಗಿದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಸಿಸಿಟಿವಿ ವರದಿ ಮಾಡಿದೆ.
ಗ್ರಾಹಕರು ಖರ್ಚು ಮಾಡುವ ಪ್ರಮಾಣ ಕಡಿಮೆಯಾಗಿರುವುದರಿಂದ ವಿಶ್ವದ ಎರಡನೇ ಅತೀದೊಡ್ಡ ಆರ್ಥಿಕತೆಯಲ್ಲಿ ಕೋವಿಡ್ ಬಳಿಕದ ಚೇತರಿಕೆಯು ಇತ್ತೀಚಿನ ದಿನಗಳಲ್ಲಿ ವೇಗ ಕಳೆದುಕೊಂಡಿದೆ. ಚೀನಾವು ನಿಖರ ಮತ್ತು ಪರಿಣಾಮಕಾರಿ ಸ್ಥೂಲ ಆರ್ಥಿಕ ನಿಯಂತ್ರಣವನ್ನು ಜಾರಿಗೊಳಿಸಬೇಕು, ಮತ್ತು ಮೀಸಲು ನೀತಿಗಳನ್ನು ಬಲಪಡಿಸಬೇಕು . ಜತೆಗೆ ದೇಶೀಯ ಬಳಕೆಯನ್ನು ವಿಸ್ತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಅಧ್ಯಕ್ಷ ಕ್ಸಿಜಿಂಪಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.