ವಿಶ್ವಕಪ್ ವೇಳಾಪಟ್ಟಿ ಬದಲಾವಣೆಗೆ ಪಾಕಿಸ್ತಾನ ಸಮ್ಮತಿ; ಅ.14ರಂದು ಭಾರತ ವಿರುದ್ಧ ಪಂದ್ಯ
twitter/saifahmed75
ಹೊಸದಿಲ್ಲಿ: 2023ರ ಏಕದಿನ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ನಡುವಣದ ಪಂದ್ಯವನ್ನು ಐಸಿಸಿ ಮೂಲ ವೇಳಾಪಟ್ಟಿ ಅಕ್ಟೋಬರ್ 15ರ ಬದಲಿಗೆ ಅಕ್ಟೋಬರ್ 14ರಂದು ಆಡಲಾಗುತ್ತದೆ. ಐಸಿಸಿ ಈ ಕುರಿತು ಇನ್ನಷ್ಟೇ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದು, ಈ ವಾರದ ಅಂತ್ಯಕ್ಕೆ ವೇಳಾಪಟ್ಟಿ ಪ್ರಕಟವಾಗಬಹುದು.
ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ದಿನಾಂಕ ಬದಲಾವಣೆಗೆ ಒಪ್ಪಿಕೊಂಡಿದೆ. ಪಂದ್ಯವು ಅಹಮದಾಬಾದ್ನಲ್ಲಿಯೇ ನಡೆಯಲಿದೆ.
ವಿಶ್ವಕಪ್ನ ಅತ್ಯಂತ ಪ್ರಮುಖ ಪಂದ್ಯದಲ್ಲಿನ ದಿನಾಂಕ ಬದಲಾವಣೆಯು ಪಾಕಿಸ್ತಾನದ ಮುಂದಿನ ಪಂದ್ಯದ ಮೇಲೆ ಪರಿಣಾಮಬೀರುತ್ತದೆ. ಪಾಕ್ ಆಡಲಿರುವ ಶ್ರೀಲಂಕಾ ವಿರುದ್ಧ ಪಂದ್ಯವು ಹೈದರಾಬಾದ್ನಲ್ಲೇ ನಡೆಯಲಿದ್ದು, ಆದರೆ ಅಕ್ಟೋಬರ್ 12ರ ಬದಲಿಗೆ ಅ.10ರಂದು ನಡೆಯಲಿದೆ. ಪಾಕ್ಗೆ ಎರಡು ಪಂದ್ಯಗಳ ನಡುವೆ ಸಾಕಷ್ಟು ಅಂತರ ಇರಲಿದೆ.
ಭಾರತ-ಪಾಕಿಸ್ತಾನ ನಡುವೆ ಅ.15ರಂದು ವಿಶ್ವಕಪ್ ಪಂದ್ಯ ನಿಗದಿಯಾಗಿದೆ. ಆದರೆ ಈ ದಿನ ನವರಾತ್ರಿ ಉತ್ಸವದ ಮೊದಲ ದಿನವಾಗಿದೆ. ಈ ದಿನ ಸಾಕಷ್ಟು ಭದ್ರತೆ ನೀಡಲು ಕಷ್ಟವಾಗುತ್ತದೆ ಎಂದು ಸ್ಥಳೀಯ ಪೊಲೀಸರು ಅಳಲು ತೋಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಪಿಸಿಬಿ ಬದಲಾವಣೆಯ ಕುರಿತಂತೆ ಐಸಿಸಿಗೆ ಪತ್ರ ಬರೆದಿದ್ದು, ಪಿಸಿಬಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
ವೇಳಾಪಟ್ಟಿ ಬದಲಾವಣೆಗೆ ನವರಾತ್ರಿಉತ್ಸವ ಕಾರಣವಲ್ಲ ಎಂದಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕಳೆದ ವಾರ ಹಲವು ಸದಸ್ಯ ರಾಷ್ಟ್ರಗಳು ವೇಳಾಪಟ್ಟಿ ಬದಲಾವಣೆಗೆ ಕೋರಿದ್ದರು. ಕೆಲವು ಬದಲಾವಣೆ ಮಾಡಲಾಗಿದೆ ಎಂದರು.