ಮಣಿಪುರ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿ ಮೋದಿ ‘ವಿಶ್ವ ದರ್ಶನ’: ದಿಗ್ವಿಜಯ ಸಿಂಗ್ ವಾಗ್ದಾಳಿ
ದಿಗ್ವಿಜಯ ಸಿಂಗ್, Photo: PTI
ಹೊಸದಿಲ್ಲಿ: ಕಳೆದ ಒಂದೂವರೆ ತಿಂಗಳಿನಿಂದ ಮಣಿಪುರ ರಾಜ್ಯವು ಹಿಂಸಾತ್ಮಕ ಜನಾಂಗೀಯ ಘರ್ಷಣೆಗಳಿಂದ ತತ್ತರಿಸಿರುವ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸ ಹಾಗೂ ಯೋಗ ಪ್ರದರ್ಶನದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗುರುವಾರ ವಾಗ್ದಾಳಿ ನಡೆಸಿದರು.
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದರೂ ರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಾಗೂ 2008ರ ಮುಂಬೈ ದಾಳಿಯ ಆರೋಪಿ ಸಾಜಿದ್ ಮಿರ್ನನ್ನು ಜಾಗತಿಕ ಭಯೋತ್ಪಾದಕನಾಗಿ ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಚೀನಾ ತಡೆದಿದ್ದಕ್ಕಾಗಿ ದಿಗ್ವಿಜಯ ಸಿಂಗ್ ಟ್ವಿಟರ್ನಲ್ಲಿ ಟೀಕಿಸಿದ್ದಾರೆ."ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ನಮ್ಮ ಪ್ರಧಾನಿ ವಿಶ್ವಸಂಸ್ಥೆಯಲ್ಲಿ ಯೋಗ ಮಾಡುತ್ತಿದ್ದರು. ಸಾಜಿದ್ ಮಿರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ತಡೆಯೊಡ್ಡಿದಾಗ, ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಯೋಗ ಮಾಡುತ್ತಿದ್ದರು. ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸಿದ್ದು ನಿಮಗೆ ನೆನಪಾಗುತ್ತಿಲ್ಲವೇ? . ಮೋದಿ ಆಡಳಿತವು ನೀರೋ ಆಡಳಿತದ ರೀತಿಯಲ್ಲಿ ಇಲ್ಲವೇ? ”ಎಂದು ಕಾಂಗ್ರೆಸ್ ನಾಯಕ ಪ್ರಧಾನಿಯನ್ನು ಟ್ಯಾಗ್ ಮಾಡಿ ಬರೆದಿದ್ದಾರೆ.
ಮಣಿಪುರದ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರ ಮೌನ ಹಾಗೂ ಅವರ ಅಮೆರಿಕದ ಭೇಟಿಯ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ, ಈ ಸಮಯದಲ್ಲಿ ಕಲಹ ಪೀಡಿತ ರಾಜ್ಯದಲ್ಲಿ ಆತಂಕ ನೆಲೆಸಿದೆ. ಇಲ್ಲಿಯವರೆಗೆ ಜನಾಂಗೀಯ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.