ಇಸ್ರೋದ ಬಾಹ್ಯಾಕಾಶ ಕಾರ್ಯಕ್ರಮಗಳ ಖಾಸಗೀಕರಣ: 20 ಕಂಪನಿಗಳಿಂದ ಬಿಡ್ ಸಲ್ಲಿಕೆ
ಬೆಂಗಳೂರು: ತನ್ನ ಸಣ್ಣ ಉಪಗ್ರಹ ಉಡಾವಣಾ ರಾಕೆಟ್ ಅನ್ನು ನಿರ್ಮಿಸಲು ಬಿಡ್ಗಳನ್ನು ಆಹ್ವಾನಿಸುವ ಮೂಲಕ ತನ್ನ ಬಾಹ್ಯಾಕಾಶ ಕಾರ್ಯಕ್ರಮದ ಭಾಗಶಃ ಖಾಸಗೀಕರಣಕ್ಕೆ ಭಾರತದ ಸರಕಾರದ ಪ್ರಯತ್ನದಲ್ಲಿ 20 ಕಂಪನಿಗಳು ಆರಂಭಿಕ ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ಪ್ರಕ್ರಿಯೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ Reuters ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್ಎಸ್ಎಲ್ವಿ)ವನ್ನು ಇಸ್ರೋ ಅಭಿವೃದ್ಧಿಗೊಳಿಸಿದ್ದು,ಅದು ತನ್ನ ಮೊದಲ ಉಪಗ್ರಹ ಉಡಾವಣೆಯನ್ನು ಫೆಬ್ರವರಿಯಲ್ಲಿ ಯಶಸ್ವಿಯಾಗಿ ನಡೆಸಿತ್ತು.
ಎಸ್ಎಸ್ಎಲ್ವಿ ಅನ್ನು 500 ಕೆ.ಜಿ (1,102 ಪೌಂಡ್)ವರೆಗಿನ ತೂಕದ ಉಪಗ್ರಹಗಳ ಉಡಾವಣೆಗಾಗಿ ಕಡಿಮೆ ವೆಚ್ಚದ ಸಾಧನವನ್ನಾಗಿ ವಿನ್ಯಾಸಗೊಳಿಸಲಾಗಿತ್ತು. ಸಂವಹನಗಳು ಮತ್ತು ಡೇಟಾಕ್ಕಾಗಿ ಉಪಗ್ರಹಗಳ ಸಮೂಹಗಳ ಉಡಾವಣೆಗಾಗಿ ಹೆಚ್ಚುತ್ತಿರುವ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳುವುದು ಎಸ್ಎಸ್ಎಲ್ವಿ ನಿರ್ಮಾಣದ ಉದ್ದೇಶವಾಗಿದೆ. ಈಗ ಸ್ಪೇಸ್ಎಕ್ಸ್ ಮತ್ತು ಪ್ರತಿಸ್ಪರ್ಧಿ ಕಂಪನಿಗಳು ಇಂತಹ ಉಪಗ್ರಹಗಳ ಉಡಾವಣೆಯಲ್ಲಿ ತೊಡಗಿಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿಯವರ ನೀತಿ ಅಭಿಯಾನದಡಿ ಭಾರತವು ಉಪಗ್ರಹ ಉಡಾವಣೆ ಮತ್ತು ಇತರ ಬಾಹ್ಯಾಕಾಶ ವ್ಯವಹಾರಗಳಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಿರುವ ನಾಸಾದ ಹೆಜ್ಜೆಗಳನ್ನು ಅನುಸರಿಸುತ್ತಿದೆ.
ಈ ನೀತಿಯಡಿ ಎಸ್ಎಸ್ಎಲ್ವಿ ರಾಕೆಟ್ ಕಾರ್ಯಕ್ರಮದ ತಯಾರಿಕೆ ಮತ್ತು ಅಭಿವೃದ್ಧಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಡ್ ಅಂತಹ ಮೊದಲ ಖಾಸಗೀಕರಣವಾಗಿದೆ.
ಭಾರತದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಾಹ್ಯಾಕಾಶ ನಿಯಂತ್ರಣ ಸಂಸ್ಥೆ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (ಇನ್-ಸ್ಪೇಸ್) ಜು.11ರಂದು ತಮ್ಮ ಆಸಕ್ತಿಯನ್ನು ದಾಖಲಿಸಲು ಅರ್ಹ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿತ್ತು.
20 ಕಂಪನಿಗಳು ರಾಕಟ್ ಕಾರ್ಯಕ್ರಮದಲ್ಲಿ ‘ಆಸಕ್ತಿಯ ಅಭಿವ್ಯಕ್ತಿ (ಇಒಐ)’ಗಳನ್ನು ಸಲ್ಲಿಸಿವೆ ಎಂದು ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೊಯೆಂಕಾ ಸುದ್ದಿಸಂಸ್ಥೆಗೆ ತಿಳಿಸಿದರು.
ಇನ್-ಸ್ಪೇಸ್ ಎರಡು ವಾರಗಳಲ್ಲಿ ಈ 20 ಅರ್ಜಿದಾರರೊಂದಿಗೆ ಪೂರ್ವ-ಇಒಐ ಸಮಾಲೋಚನೆಗಳನ್ನು ನಡೆಸಲಿದೆ ಎಂದು ಹೇಳಿದ ಅವರು,ಕಂಪನಿಗಳನ್ನು ಹೆಸರಿಸಲಿಲ್ಲ.
ಬಿಡ್ ಸಲ್ಲಿಕೆಗೆ ಅರ್ಹರಾಗಲು ಕಂಪನಿಗಳು ಲಾಭದಲ್ಲಿರಬೇಕು ಮತ್ತು ಬಿಡ್ಡರ್ಗಳ ಕೂಟದಲ್ಲಿ ಅಗ್ರ ಬಿಡ್ಡರ್ ಕನಿಷ್ಠ ಐದು ವರ್ಷಗಳ ತಯಾರಿಕೆ ಅನುಭವವನ್ನು ಮತ್ತು 4,00 ಕೋ.ರೂ.ಗಳ ವಾರ್ಷಿಕ ಆದಾಯವನ್ನು ಹೊಂದಿರಬೇಕು.
ಮುಂದಿನ ಐದು ದಶಕದೊಳಗೆ ಜಾಗತಿಕ ಉಪಗ್ರಹ ಉಡಾವಣೆ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಐದು ಪಟ್ಟು ಹೆಚ್ಚಿಸುವ ಗುರಿಯನ್ನು ಭಾರತವು ಹೊಂದಿದೆ.
ಎಸ್ಎಸ್ಎಲ್ವಿ ಕಾರ್ಯಕ್ರಮಕ್ಕಾಗಿ ವಿಜೇತ ಬಿಡ್ಡರ್ಗೆ ಸಣ್ಣ ಉಪಗ್ರಹ ಉಡಾವಣೆ ವ್ಯವಹಾರವನ್ನು ಅಭಿವೃದ್ಧಿಗೊಳಿಸಲು ಮತ್ತು ಇಂತಹ ಉಡಾವಣೆಗಳಿಗಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸಲು ಸಾಧ್ಯವಾಗುತ್ತದೆ ಎಂದು ಇನ್-ಸ್ಪೇಸ್ ನಿರೀಕ್ಷಿಸಿದೆ ಎಂದು ಗೊಯೆಂಕಾ ಹಿಂದೆ ಹೇಳಿದ್ದರು.