ಝೀ ಟಿವಿ ಸಂಸ್ಥಾಪಕ ಸುಭಾಶ್ ಚಂದ್ರ, ಅವರ ಪುತ್ರನ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಸೆಬಿ ಆಗ್ರಹ
Photo Credit- Twitter@subhashchandra
ಮುಂಬೈ: ಆಡಳಿತ ಮಂಡಳಿ, ಹೂಡಿಕೆದಾರರು ಹಾಗೂ ಇನ್ನಿತರ ಷೇರುದಾರರ ಹಿತಾಸಕ್ತಿಯನ್ನು ಕಾಪಾಡಲು ನಿಧಿ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ನ ಪ್ರವರ್ತಕರ ವಿರುದ್ಧ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮಾರುಕಟ್ಟೆ ನಿಯಂತ್ರಣ ಪ್ರಾದಿಕಾರವಾದ ಸೆಬಿಯು ಭದ್ರತೆಗಳು ಮತ್ತು ಮೇಲ್ಮನವಿ ನ್ಯಾಯಮಂಡಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಆಗ್ರಹಿಸಿದೆ ಎಂದು ndtv.com ವರದಿ ಮಾಡಿದೆ.
ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿರುವ ಭಾರತೀಯ ಭದ್ರತೆಗಳು ಹಾಗೂ ವಿನಿಮಯ ಮಂಡಳಿ(SEBI)ಯು, ಜುಲೈ 6, 2022ರಂದು ಸಂಸ್ಥೆಯ ಮಾಜಿ ಅಧ್ಯಕ್ಷ ಸುಭಾಶ್ ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಗೋಯೆಂಕಾ ಅವರು, "ಈ ವಿಷಯದಲ್ಲಿ ಯಾವುದೇ ತುರ್ತಿಲ್ಲ ಹಾಗೂ ಈ ವಿಷಯವು ಜುಲೈ 6, 2022ರಂದು ನೀಡಲಾಗಿರುವ ಶೋಕಾಸ್ ನೋಟಿಸ್ಗೇ ಸಂಬಂಧಿಸಿರುವ ವಸ್ತು ವಿಷಯವಾಗಿದೆ" ಎಂದು ಸಲ್ಲಿಸಿರುವ ಅರ್ಜಿಯು ಸಂಪೂರ್ಣವಾಗಿ ತಪ್ಪು ಮತ್ತು ದಾರಿ ತಪ್ಪಿಸುವ ಸಂಗತಿಯಿಂದ ಕೂಡಿದೆ ಎಂದು ಹೇಳಿದೆ. "ಈ ಪ್ರಕರಣದಲ್ಲಿ ಕೇವಲ ಉಲ್ಲಂಘನೆ ಮಾತ್ರ ನಡೆದಿಲ್ಲ; ಬದಲಿಗೆ ತಮ್ಮ ಅಕ್ರಮಗಳನ್ನು ಮರೆ ಮಾಚಲು ಹಲವಾರು ತಪ್ಪು ಮಾಹಿತಿಗಳು ಹಾಗೂ ಹೇಳಿಕೆಗಳನ್ನು ದಾಖಲಿಸಲಾಗಿದೆ" ಎಂದೂ ಸೆಬಿ ಪ್ರತಿಪಾದಿಸಿದೆ.
ಭದ್ರತೆಗಳು ಮತ್ತು ಮೇಲ್ಮನವಿ ನ್ಯಾಯಮಂಡಳಿಗೆ ಸಲ್ಲಿಸಿರುವ ತನ್ನ ಪ್ರಮಾಣ ಪತ್ರದಲ್ಲಿ, "ಈ ಪ್ರಕರಣದ ನಿದರ್ಶನದಲ್ಲಿ, ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿಯಾಗಿರುವ ಈ ಬೃಹತ್ ಸಂಸ್ಥೆಯು ಅಸಂಖ್ಯಾತ ವಿವಿಧ ಯೋಜನೆಗಳಲ್ಲಿ ಪಾಲ್ಗೊಂಡಿದೆ ಮತ್ತು ಈ ಪಟ್ಟಿಗೊಂಡಿರುವ ಸಂಸ್ಥೆಗಳಲ್ಲಿನ ಸಾರ್ವಜನಿಕರಿಗೆ ಸೇರಿದ ಭಾರಿ ಮೊತ್ತವನ್ನು ಈ ವ್ಯಕ್ತಿಗಳ ಮಾಲಕತ್ವ ಹಾಗೂ ನಿಯಂತ್ರಣ ಹೊಂದಿರುವ ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ" ಎಂದು ಸೆಬಿ ತಿಳಿಸಿದೆ.
ತಾನು ಪ್ರಕರಣವನ್ನು ಅಂತಿಮವಾಗಿ ವಿಲೇವಾರಿ ಮಾಡುವುದಕ್ಕೂ ಮುನ್ನ ಜೂನ್ 19ರೊಳಗೆ ತನ್ನ ಪ್ರತಿಕ್ರಿಯೆಯನ್ನು ದಾಖಲಿಸಬೇಕು ಎಂದು ಜೂನ್ 15ರಂದು ಭದ್ರತೆಗಳು ಮತ್ತು ಮೇಲ್ಮನವಿ ನ್ಯಾಯಮಂಡಳಿಯು ಸೆಬಿಗೆ ನಿರ್ದೇಶನ ನೀಡಿತ್ತು.