ಆ. 30ರಿಂದ ಏಶ್ಯ ಕಪ್ ಪಂದ್ಯಾವಳಿ
ಸೆ. 2ರಂದು ಕ್ಯಾಂಡಿಯಲ್ಲಿ ಭಾರತ-ಪಾಕ್ ಪಂದ್ಯ
ಮುಂಬೈ: ಏಶ್ಯ ಕಪ್ 2023 ಕ್ರಿಕೆಟ್ ಪಂದ್ಯಾವಳಿಯು ಆಗಸ್ಟ್ 30ರಂದು ಆರಂಭಗೊಳ್ಳಲಿದೆ. ಏಳು ಬಾರಿಯ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಶ್ರೀಲಂಕಾದ ಕ್ಯಾಂಡಿಯಲ್ಲಿ ಸೆಪ್ಟಂಬರ್ 2ರಂದು ನಡೆಯಲಿದೆ. ಭಾರತವು ಇದೇ ಮೈದಾನದಲ್ಲಿ ನಡೆಯುವ ತನ್ನ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸೆಪ್ಟಂಬರ್ 4ರಂದು ನೇಪಾಳವನ್ನು ಎದುರಿಸಲಿದೆ.
ಪಾಕಿಸ್ತಾನ ಆತಿಥ್ಯ ವಹಿಸುವ ಪಂದ್ಯಾವಳಿಯ ವೇಳಾಪಟ್ಟಿಯನ್ನು ಏಶ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಬುಧವಾರ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. 50 ಓವರ್ಗಳ ಪಂದ್ಯಾವಳಿಯ ಮೊದಲ ಪಂದ್ಯವು ಪಾಕಿಸ್ತಾನದ ಮುಲ್ತಾನ್ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳ ನಡುವೆ ನಡೆಯಲಿದೆ.
ಆರು ತಂಡಗಳು ಭಾಗವಹಿಸುವ ಏಶ್ಯ ಕಪ್ ಪಂದ್ಯಾವಳಿಯಲ್ಲಿ ತಲಾ ಮೂರು ತಂಡಗಳ ಎರಡು ಗುಂಪುಗಳು ಇರುತ್ತವೆ. ಪ್ರತೀ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತವನ್ನು ತಲುಪುತ್ತವೆ. ಬಳಿಕ ಸೂಪರ್ ಫೋರ್ ಹಂತದ ಎರಡು ಅಗ್ರ ತಂಡಗಳು ಫೈನಲ್ನಲ್ಲಿ ಸೆಣಸಲಿವೆ.
ಪಂದ್ಯಾವಳಿಯಲ್ಲಿ ಒಟ್ಟು 13 ಪಂದ್ಯಗಳು ಇರುತ್ತವೆ. ‘ಎ’ ಗುಂಪಿನಲ್ಲಿ ಪಾಕಿಸ್ತಾನ, ಭಾರತ ಮತ್ತು ನೇಪಾಳ ಇದ್ದರೆ, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇರುತ್ತವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಒಂಭತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.