ಇಸ್ರೇಲ್ ಸೇನೆಯಿಂದ ಮೂವರು ಫೆಲೆಸ್ತೀನೀಯರ ಹತ್ಯೆ
ಜೆರುಸಲೇಂ: ಆಕ್ರಮಿತ ಪಶ್ಚಿಮ ದಂಡೆಯ ಉತ್ತರ ಪ್ರಾಂತದಲ್ಲಿ ಮಂಗಳವಾರ ಮೂವರು ಫೆಲೆಸ್ತೀನಿಯನ್ ಬಂದೂಕುಧಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ.
ಪಶ್ಚಿಮದಂಡೆಯ ನಬ್ಲೂಸ್ ನಗರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಮೂವರು ಫೆಲೆಸ್ತೀನಿ ಬಂದೂಕುಧಾರಿಗಳು ಇಸ್ರೇಲಿ ಭದ್ರತಾ ಪಡೆಯತ್ತ ಗುಂಡು ಹಾರಿಸಿದಾಗ ಭದ್ರತಾ ಪಡೆ ಪ್ರತಿ ದಾಳಿ ನಡೆಸಿದೆ. ಆಗ ಮೂವರೂ ಮೃತಪಟ್ಟಿದ್ದು ಕಾರಿನಲ್ಲಿದ್ದ ಮೂರು ಎಂ-16 ರೈಫಲ್ಸ್ಗಳು ಹಾಗೂ ಇತರ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ಹೇಳಿದೆ.
ನಬ್ಲೂಸ್ ಬಳಿಯ ಯೆಹೂದಿ ವಸಾಹತು ಪ್ರದೇಶದಲ್ಲಿ ಬಂದೂಕುಧಾರಿಗಳು ಇಸ್ರೇಲ್ ಪಡೆಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸಿದಾಗ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹತರಾಗಿದ್ದಾರೆ ಎಂದು ಫೆಲೆಸ್ತೀನಿಯನ್ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪಿನ ದಾಳಿ ಹೆಚ್ಚುತ್ತಿರುವ ಕಾರಣ ಫೆಲೆಸ್ತೀನ್ ಮುಖಂಡರ ಜತೆಗೆ ಮಾತುಕತೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ದಾಳಿಗೆ ಇನ್ನಷ್ಟು ಆಕ್ರಮಣಕಾರಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.