ಪ್ರಭಾವೀ ಪಾಸ್‍ಪೋರ್ಟ್: ಸಿಂಗಾಪುರ ಪ್ರಥಮ; ಭಾರತಕ್ಕೆ 80ನೇ ಸ್ಥಾನ
ಲಂಡನ್: ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್‍ಪೋರ್ಟ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಸಿಂಗಾಪುರ ಅಗ್ರಸ್ಥಾನ ಗಳಿಸಿದ್ದು ಕಳೆದ ಐದು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಜಪಾನ್ ಮೂರನೇ ಸ್ಥಾನಕ್ಕೆ ಇಳಿದಿದೆ.
ಸಿಂಗಾಪುರದ ಪಾಸ್‍ಪೋರ್ಟ್ ಬಳಸಿ ವೀಸಾವಿಲ್ಲದೆ 192 ಜಾಗತಿಕ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಮಂಗಳವಾರ ಬಿಡುಗಡೆಗೊಂಡ ಹೆನ್ಲೆ ಪಾಸ್‍ಪೋರ್ಟ್ ಶ್ರೇಯಾಂಕ ಪಟ್ಟಿಯ ವರದಿ ಹೇಳಿದೆ. 189 ದೇಶಗಳ ಪಟ್ಟಿಯಲ್ಲಿ ಜರ್ಮನಿ, ಇಟಲಿ, ಸ್ಪೇನ್ ಜಂಟಿ 2ನೇ ಸ್ಥಾನದಲ್ಲಿವೆ.
ಆಸ್ಟ್ರಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜಪಾನ್, ದ.ಕೊರಿಯಾ, ಲಕ್ಸೆಂಬರ್ಗ್, ಸ್ವೀಡನ್ ಜಂಟಿ 3ನೇ ಸ್ಥಾನದಲ್ಲಿವೆ. ಬ್ರಿಟನ್ 4ನೇ ಸ್ಥಾನದಲ್ಲಿ, ಅಮೆರಿಕ 8ನೇ ಸ್ಥಾನದಲ್ಲಿವೆ. 80ನೇ ಸ್ಥಾನದಲ್ಲಿರುವ ಭಾರತದ ಪಾಸ್‍ಪೋರ್ಟ್ ಬಳಸಿ 57 ದೇಶಗಳಿಗೆ ವೀಸಾದ ಅಗತ್ಯವಿಲ್ಲದೆ ಭೇಟಿ ನೀಡಬಹುದಾಗಿದೆ.
ಅಫ್ಘಾನಿಸ್ತಾನ 103ನೇ ಸ್ಥಾನ ಪಡೆದು ಅಂತಿಮ ಸ್ಥಾನದಲ್ಲಿದ್ದರೆ, ಯೆಮನ್ 99ನೇ ಸ್ಥಾನ, ಪಾಕಿಸ್ತಾನ 100ನೇ ಸ್ಥಾನ, ಸಿರಿಯಾ 101ನೇ ಸ್ಥಾನ ಮತ್ತು ಇರಾಕ್ 102ನೇ ಸ್ಥಾನ ಪಡೆದಿದೆ.