ಉರಿಯುತ್ತಿರುವ ಮಣಿಪುರದಲ್ಲಿ ಶಾಂತಿ ಕಾರ್ಯಕರ್ತ ಕಂಡ ಕಠೋರ ಚಿತ್ರಗಳು
ಮಣಿಪುರದ ಜನರ ಅಗಾಧವಾದ ಮಾನವೀಯ ದುರಂತದ ಬಗ್ಗೆ ಯೋಚಿಸಬೇಕಿದೆ. ಅವರ ಹಳ್ಳಿಗಳನ್ನು ಸುಟ್ಟುಹಾಕಲಾಗಿದೆ. ಅವರೆಂದೂ ಹಿಂದಿರುಗಲು ಸಾಧ್ಯವಾಗುವುದಿಲ್ಲ ಮತ್ತು ನಾಳೆ ಹೇಗೆಂಬ ಅರಿವಿಲ್ಲದೆ ಅವರು ಶಿಬಿರಗಳಲ್ಲಿದ್ದಾರೆ. ಇವೆಲ್ಲದರ ನಡುವೆ, ಬಂದೂಕಿನಿಂದ ಗುಂಡುಗಳು ಸಿಡಿಯುತ್ತಿರುವಾಗ ಶಿಶುಗಳು ಜನಿಸುತ್ತಿವೆ. ಈ ಮಾನವೀಯ ಬಿಕ್ಕಟ್ಟಿನ ಆಚೆಗೆ ಅವರಿಗೆ ನೆರವಾಗಲು ದೇಶ ಸಂಕಲ್ಪ ಮಾಡಬೇಕು.
ಗುಂಡಿನ ಮೊರೆತವೇ ಕಿವಿಗಡಚಿಕ್ಕುವ, ರಣರಂಗದಂತಾಗಿ ಹೋಗಿರುವ ಮಣಿಪುರದಲ್ಲಿ ನಾಲ್ಕು ದಿನ ಇದ್ದು, ಹಲವು ವಾಸ್ತವಗಳನ್ನು ಕಣ್ಣಾರೆ ಕಂಡು, ಅಲ್ಲಿನ ಭಯಗ್ರಸ್ಥ ಸನ್ನಿವೇಶವನ್ನು ಸ್ವತಃ ಉದ್ವೇಗದಿಂದಲೇ ಎದುರಿಸಿ ಇಂಫಾಲಕ್ಕೆ ಮರಳಿರುವ ಹತ್ತು ಶಾಂತಿ ಕಾರ್ಯಕರ್ತರ ತಂಡದ ನೇತೃತ್ವ ವಹಿಸಿದ್ದವರು ಮಾಜಿ ಐಎಎಸ್ ಅಧಿಕಾರಿ, ಹೋರಾಟಗಾರ ಹರ್ಷ ಮಂದರ್. ಅವರು 2017ರಲ್ಲಿ ಆರಂಭಿಸಿದ್ದ ಶಾಂತಿ ಮತ್ತು ಒಗ್ಗಟ್ಟಿನ ಅಭಿಯಾನವೇ ‘ಕಾರವಾನ್ ಎ ಮೊಹಬ್ಬತ್.’ ಅದರ ಭಾಗವಾಗಿ ಶಾಂತಿ ಕಾರ್ಯಕರ್ತರನ್ನು ಮಣಿಪುರಕ್ಕೆ ಕರೆದೊಯ್ದಿದ್ದ ಅವರು, ಅದನ್ನೊಂದು ಭಯಾನಕ ಅನುಭವವೆನ್ನುತ್ತಾರೆ.
‘‘ಕೂಗಳತೆ ದೂರದಲ್ಲೇ ಗುಂಡಿನ ಸದ್ದು ಮತ್ತು ಮೋರ್ಟರ್ ಬಾಂಬ್ಗಳ ಸದ್ದು ಕೇಳಿಸುತ್ತಿತ್ತು. ಏನು ಮಾಡಬೇಕೆಂದೇ ತೋಚದ ಸ್ಥಿತಿ. ಗಡಿಯನ್ನು ತಲುಪಿದಾಗ ಈ ಅಂತರ 100 ಮೀಟರ್ಗಿಂತ ಕಡಿಮೆಯಿತ್ತು’’ ಎಂದು ನೆನೆಯುತ್ತಾರೆ ಹರ್ಷ ಮಂದರ್.
32 ಲಕ್ಷ ಜನರಿರುವ ರಾಜ್ಯದಲ್ಲಿ, ಮೈತೈಗಳು ಬಹುತೇಕ ವೈಷ್ಣವ ಹಿಂದೂಗಳು. ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅವರೇ ಇದ್ದಾರೆ. ಅವರಿರುವುದು ಇಂಫಾಲ ಕಣಿವೆಯಲ್ಲಿ. ಆದರೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾದ ಕುಕಿಗಳ ಸಂಖ್ಯೆ ತೀರಾ ಕಡಿಮೆ. ಅವರು ವಾಸಿಸುತ್ತಿರುವುದು ಗುಡ್ಡಗಾಡು ಜಿಲ್ಲೆಗಳಲ್ಲಿ.
ಸರಕಾರಿ ಅಂಕಿಅಂಶಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿರುವ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಹಿಂಸಾಚಾರಕ್ಕೆ ಬಲಿಯಾದವರು 182 ಮಂದಿ. ಅವರಲ್ಲಿ 113 ಕುಕಿಗಳು ಮತ್ತು 62 ಮೈತೈಗಳು. ಈ ಅಂಕಿಅಂಶಗಳೇ ಸಾಕು, ಬಿಜೆಪಿ ಆಡಳಿತದ ರಾಜ್ಯದಲ್ಲಿ ಅಲ್ಪಸಂಖ್ಯಾತ ಕುಕಿ ಸಮುದಾಯ ಮೂರು ತಿಂಗಳ ಹಿಂಸಾಚಾರದ ಭಾರದಡಿ ನಲುಗುತ್ತಿದೆ ಎಂಬುದನ್ನು ಗ್ರಹಿಸುವುದಕ್ಕೆ.
ಎಷ್ಟೋ ಮಂದಿ ಅಮಾಯಕರ ಬಲಿ, ಸಾವಿರಾರು ಮಂದಿಯ ಸ್ಥಳಾಂತರ, ಪ್ರೀತಿಪಾತ್ರರನ್ನು ಕಳೆದುಕೊಂಡವರ ಸಂಕಟ ಇವೆಲ್ಲದರ ಹಿಂದೆ ಮುಖ್ಯಮಂತ್ರಿ, ಸ್ವತಃ ಮೈತೈ ಸಮುದಾಯದ ಬಿರೇನ್ ಸಿಂಗ್ ಪಕ್ಷಪಾತಿ ಧೋರಣೆಯಿದೆ ಎಂಬುದು ಕಠೋರ ಸತ್ಯವಾಗಿದೆ.
ಮಾದಕದ್ರವ್ಯ ವಿರುದ್ಧದ ಬಿರೇನ್ ಸಿಂಗ್ ಸರಕಾರದ ಕ್ರಮಗಳಂತೂ ನೇರ ಕುಕಿಗಳನ್ನೇ ಗುರಿಯಾಗಿಸಿದ್ದವು. ಸರಕಾರ ಈ ನಡೆಯ ಮೂಲಕ, ಕುಕಿಗಳು ಮ್ಯಾನ್ಮಾರ್ನ ಅಕ್ರಮ ವಲಸಿಗರೆಂದೂ, ಅವರು ಗಸಗಸೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಅದರಿಂದ ತಯಾರಾಗುವ ಮಾದಕದ್ರವ್ಯದಿಂದ ಮೈತೈ ಯುವಕರು ಹಾಳಾಗುತ್ತಿದ್ದಾರೆ ಎಂದೂ ದೂಷಿಸುವುದು ಹೆಚ್ಚಾಯಿತು. ಕುಕಿಗಳಿಂದಾಗಿ ಸಂರಕ್ಷಿತ ಅರಣ್ಯಗಳ ನಾಶವಾಗುತ್ತಿದೆ, ಪರಿಸರಕ್ಕೆ ಘಾಸಿಯಾಗುತ್ತಿದೆ ಎಂದು ಆರೋಪಿಸುವುದೂ ಹೆಚ್ಚಿತು.
ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗಾಗಿ ಪರಿಗಣಿಸುವಂತೆ ಮಣಿಪುರ ಹೈಕೋರ್ಟ್ ತೀರ್ಪಿತ್ತ ಬಳಿಕ ಶುರುವಾದ ಕುಕಿಗಳ ಪ್ರತಿಭಟನೆ, ಜನಾಂಗೀಯ ಹಿಂಸಾಚಾರವಾಗಿ ಭುಗಿಲೇದ್ದುದು ಹೇಗೆ ಎಂಬುದನ್ನು ಇದೆಲ್ಲದರ ಹಿನ್ನೆಲೆಯಲ್ಲಿ ಸುಲಭವಾಗಿ ಊಹಿಸಬಹುದಾಗಿದೆ.
ಐಎಎಸ್ ಅಧಿಕಾರಿಯಾಗಿದ್ದ ಮತ್ತು ಈಗ ಹೋರಾಟಗಾರನಾಗಿ ರುವ ಇಷ್ಟೂ ವರ್ಷಗಳಲ್ಲಿ ಎಂದೂ ಮಣಿಪುರದಲ್ಲಿ ನಡೆದಿರು ವಂಥದ್ದನ್ನು ನೋಡಿಲ್ಲ ಎನ್ನುತ್ತಾರೆ ಹರ್ಷ ಮಂದರ್. ಇಲ್ಲಿನ ರಾಜ್ಯ ಸರಕಾರದ ಪಕ್ಷಪಾತಿ ಧೋರಣೆ, ಅಲ್ಪಸಂಖ್ಯಾತರನ್ನು ರಕ್ಷಿಸದ ಅದರ ನಡೆ ಮತ್ತು ಕೇಂದ್ರ ಸರಕಾರದ ಮೌನ ಇವೆಲ್ಲವೂ, ಮುಸ್ಲಿಮರನ್ನು ಅನ್ಯಾಯವಾಗಿ ಗುರಿಯಾಗಿಸಿದ್ದ 2002ರ ಗುಜರಾತ್ ಗಲಭೆಯನ್ನೇ ಹೋಲುತ್ತವೆ. ಆದರೆ ಮಣಿಪುರದಲ್ಲಿ ಬಳಸಲಾಗುತ್ತಿರುವ ಆಯುಧಗಳು ಹೆಚ್ಚು ಆಧುನಿಕ ಮತ್ತು ಮಾರಕ. ಸರಕಾರದ ವೈಫಲ್ಯವಂತೂ ಗಣನೀಯ ಎಂಬುದು ಅವರ ಅಭಿಪ್ರಾಯ.
ಸರಕಾರ ಹಿಂಸಾಚಾರ ತಡೆಯಲು ವಿಫಲವಾಗಿದೆ. ಹಿಂಸಾಚಾರವನ್ನು ಪ್ರಚೋದಿಸಿದ ಅಥವಾ ಅದರಲ್ಲಿ ಭಾಗಿಯಾದ ಜನರನ್ನು ನಿಯಂತ್ರಿಸಲು ಮತ್ತು ಬಂಧಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಅಮಾಯಕರನ್ನು ರಕ್ಷಿಸಿ, ಅವರಿಗೆ ಸೂಕ್ತ ಪರಿಹಾರ ಶಿಬಿರ ಸ್ಥಾಪಿಸಿ, ಆಹಾರ ಸೇರಿದಂತೆ ಎಲ್ಲ ಅಗತ್ಯಗಳನ್ನು ಪೂರೈಸುವುದಕ್ಕಾಗಲೀ, ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸುವುದಕ್ಕಾಗಲೀ ಅದು ಪೂರ್ತಿ ವಿಫಲವಾಯಿತು. ಕುಕಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವೀಡಿಯೊ ಬಹಿರಂಗಕ್ಕೆ ಬರುವವರೆಗೂ ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಬಗ್ಗೆ ಒಂದು ಮಾತೂ ಆಡಿರಲಿಲ್ಲ.
ಹರ್ಷ ಮಂದರ್ ಅವರು ‘ಕಾರವಾನ್ ಎ ಮೊಹಬ್ಬತ್’ ಆರಂಭಿಸಿದ್ದು ಇಸ್ಲಾಮೋಫೋಬಿಯಾ ತೀವ್ರವಾಗಿದ್ದ ಹೊತ್ತಿನಲ್ಲಿ ಹಿಂದೂ ಬಹುಸಂಖ್ಯಾತರಿರುವಲ್ಲಿ ಹತ್ಯೆಗೀಡಾದ ಮುಸ್ಲಿಮರ ಕುಟುಂಬಗಳಿಗೆ ಸಹಾಯ ಮಾಡುವುದಾಗಿತ್ತು. ಆದರೆ ವ್ಯಂಗ್ಯವೆಂದರೆ, ಮಣಿಪುರದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ನಡುವಿನ ಸಂಘರ್ಷದ ಈ ಸಮಯದಲ್ಲಿ ಮುಸ್ಲಿಮ್ ಗುರುತು ಮಾತ್ರವೇ ಸುರಕ್ಷತೆಯದ್ದಾಗಿದೆ. ಇದು ದೇಶದ ಬೇರೆ ಭಾಗಗಳಿಗಿಂತ ಭಿನ್ನ ಎಂದು ಹರ್ಷ ಮಂದರ್ ಹೇಳುತ್ತಾರೆ.
ಮಣಿಪುರದ ಸ್ಥಿತಿ ನಮ್ಮೆಲ್ಲರ ಸಾಮೂಹಿಕ ವೈಫಲ್ಯವೆನ್ನುವ ಅವರು, ತೀವ್ರ ತಪ್ಪಿತಸ್ಥ ಸ್ಥಾನದಲ್ಲಿರುವುದು ಯಾವ ಸಾಂವಿಧಾನಿಕ ಕರ್ತವ್ಯಗಳನ್ನೂ ನಿಭಾಯಿಸದ ಸರಕಾರ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಇದರಲ್ಲಿ ಸಮಭಾಗಿಗಳು ಎಂದಿದ್ದಾರೆ.
ಹರ್ಷ ಮಂದರ್, ‘‘ಮಣಿಪುರ ಯುದ್ಧಭೂಮಿಯಾಗಿ ಮಾರ್ಪಾಡಾಗಿದೆ. ಬೋಸ್ನಿಯಾಗೆ ಭೇಟಿ ನೀಡಿದಂತಿತ್ತು. ಬಾಂಬ್ಗಳು, ಮೋರ್ಟರ್ ಶೆಲ್ಗಳು ಸ್ಫೋಟಿಸುತ್ತಿದ್ದವು. ಎಲ್ಲೆಲ್ಲೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜನರೇ ಓಡಾಡುತ್ತಿದ್ದರು. ಅಲ್ಲಿದ್ದ ನಾಲ್ಕು ದಿನಗಳಲ್ಲಿ, ಎರಡೂ ಸಮುದಾಯಗಳ ಏಳು ಪರಿಹಾರ ಶಿಬಿರಗಳಲ್ಲಿನ ಜನರೊಂದಿಗೆ ಮತ್ತು ಎರಡೂ ಸಮುದಾಯಗಳ ಅನೇಕ ಮುಖಂಡರೊಂದಿಗೆ ಮಾತನಾಡಿದೆವು. ಎರಡೂ ಕಡೆಯವರು ಪರಸ್ಪರರನ್ನು ದೂಷಿಸುತ್ತಾರೆ. ಯಾವುದೇ ಒಂದು ಸಮುದಾಯದ ಮೇಲೆ ಆರೋಪ ಹೊರಿಸಲು ನಾನು ತಯಾರಿಲ್ಲ. ಅದು ಸೂಕ್ತವೆಂದು ಅನ್ನಿಸುತ್ತಿಲ್ಲ’’ ಎನ್ನುತ್ತಾರೆ.
ಈ ಗಲಭೆಗೆ, ಅದರಿಂದಾದ ಜೀವಹಾನಿಗೆ, ಇತರ ಸಂಕಷ್ಟಗಳಿಗೆ ಸಂಪೂರ್ಣವಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ಮತ್ತು ಹಿಂಸಾಚಾರ ತಡೆಯಲು, ತ್ವರಿತವಾಗಿ ನಿಯಂತ್ರಿಸಲು ವಿಫಲವಾದ ರಾಜ್ಯದ ಅಧಿಕಾರಿಗಳೇ ಹೊಣೆ. ಕುಕಿ ಅಲ್ಪಸಂಖ್ಯಾತರಿಗೆ ರಕ್ಷಣೆಯ ಭರವಸೆ ನೀಡುವುದು ಸರಕಾರದಿಂದ ಆಗಲಿಲ್ಲ. ತಮ್ಮ ವಿರುದ್ಧದ ಹೋರಾಟದಲ್ಲಿ ಸರಕಾರದ ಸಕ್ರಿಯ ಪಕ್ಷಪಾತವಿದೆ ಎಂಬ ಭಾವನೆ ಕುಕಿಗಳಲ್ಲಿ ವ್ಯಾಪಕವಾಗಿದೆ. ಅವರ ಕುರಿತ ಸ್ವತಃ ಮುಖ್ಯಮಂತ್ರಿಯ ದ್ವೇಷಪೂರಿತ ಹೇಳಿಕೆಗಳು ಇದನ್ನೇ ಸಾಬೀತುಪಡಿಸುತ್ತವೆ. ಬಹುಸಂಖ್ಯಾಕ ರಾಜಕೀಯದಲ್ಲಿ ದ್ವೇಷದ ಪಕ್ಷಪಾತ ತೋರುವ ಅಸ್ಸಾಮ್, ಉತ್ತರ ಪ್ರದೇಶದಂಥ ರಾಜ್ಯಗಳ ಮುಖ್ಯಮಂತ್ರಿಗಳೂ ಇದನ್ನೇ ಮಾಡುತ್ತಿರುವುದು. ಇಂಥ ಜನಾಂಗೀಯ ಕಲಹಗಳ ಹೊತ್ತಲ್ಲಿ ಮಧ್ಯಸ್ಥಿಕೆ ವಹಿಸಿ, ಎಲ್ಲವನ್ನೂ ಶಮನಗೊಳಿಸಬೇಕಾದ ಹೊಣೆ ಮುಖ್ಯಮಂತ್ರಿಯದ್ದಾಗಿತ್ತು. ಕುಕಿಗಳೂ ನಮ್ಮದೇ ನಾಗರಿಕರು ಮತ್ತು ಹಕ್ಕುಗಳನ್ನು ಹೊಂದಿದ್ದವರು.
‘‘ಕುಕಿ ಸಮುದಾಯದವರು ಸುಮಾರು 20,000 ಜನರಿದ್ದಾರೆ. ಅವರ ಹಳ್ಳಿಗಳು ಸುಟ್ಟು ಬೂದಿಯಾಗಿವೆ ಮತ್ತು ಅವರು ಓಡಿಹೋಗಬೇಕಾಯಿತು. ಅವರಿಗಾಗಿ ಒಂದೇ ಒಂದು ಸರಕಾರಿ ಪರಿಹಾರ ಶಿಬಿರ ಕಂಡುಬರಲಿಲ್ಲ. ಚರ್ಚ್ ಕ್ಯಾಂಪಸ್ಗಳಲ್ಲಿ ಕುಕಿಗಳಿಗೆ ವಸತಿ ಕಲ್ಪಿಸಲಾಗಿದೆ. ಹಣವನ್ನು ಸ್ಥಳೀಯರು ಸಂಗ್ರಹಿಸುತ್ತಾರೆ. ಚಿಕ್ಕ ಮಕ್ಕಳು ಗಂಜಿಗೆ ಉಪ್ಪು ಹಾಕಿ ತಿನ್ನುವುದನ್ನು ನೋಡಿದೆವು. ಅವರ ಶಿಕ್ಷಣಕ್ಕೆ ವ್ಯವಸ್ಥೆಯಿರಲಿಲ್ಲ’’ ಎಂದು ಅಲ್ಲಿನ ಸ್ಥಿತಿ ವಿವರಿಸುತ್ತಾರೆ.
ಇಂಫಾಲದ ಕೆಲವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದೆವು. ಮೈತೈಗಳಿದ್ದ ಶಿಬಿರಗಳಲ್ಲಿ ನಾವು ಕೇಳಿದ ಕಥೆಗಳು ಕುಕಿ ಜನರ ಕಥೆಗಳನ್ನೇ ಹೋಲುತ್ತಿದ್ದವು. ಮೈತೈಗಳು ಅಲ್ಪಸಂಖ್ಯಾತರಾಗಿದ್ದ ಗುಡ್ಡಗಾಡು ಪ್ರದೇಶಗಳಲ್ಲಿ ಅವರ ಮನೆಗಳು ಉರಿದುಹೋಗಿದ್ದವು. ತಲೆಮಾರುಗಳಿಂದ ಶಾಂತಿಯುತವಾಗಿ ಬದುಕುತ್ತಿದ್ದ ತಮ್ಮ ನೆರೆಹೊರೆಯವರು ಏಕಾಏಕಿ ತಮ್ಮ ವಿರುದ್ಧ ತಿರುಗಿಬಿದ್ದರೆಂದು ಅವರು ಹೇಳಿದರು. ಕುಕಿ ಜನರ ವಿರುದ್ಧ ದ್ವೇಷದ ಮಾತುಗಳಿದ್ದವು. ಮೈತೈಗಳು ಆಶ್ರಯ ಪಡೆಯುತ್ತಿದ್ದ ಶಿಬಿರಗಳನ್ನು ಯಾರು ನಡೆಸುತ್ತಿದ್ದರು ಎಂಬುದು ಸ್ಪಷ್ಟವಾಗಲಿಲ್ಲ. ಅವು ಸಮುದಾಯದಿಂದ ನಡೆಸಲ್ಪಡುತ್ತಿವೆ. ಆದರೆ ಸರಕಾರಿ ಕಟ್ಟಡಗಳನ್ನು ಬಳಸಿಕೊಳ್ಳಲಾಗಿದೆ. ರಾಜ್ಯ ಸರಕಾರದ ಬೆಂಬಲವೂ ಇದ್ದು, ಆಹಾರ ಪೂರೈಕೆಯಾಗುತ್ತಿದೆ. ಕುಕಿ ಶಿಬಿರಗಳ ಪಾಲಿಗೆ ಅಂಥ ನೆರವಿಲ್ಲ. ಕುಕಿ ಶಿಬಿರಗಳು ತುಂಬಾ ಚಿಕ್ಕದಾಗಿವೆ. ಕುಕಿ ಸಂತ್ರಸ್ತರ ಸಂಖ್ಯೆ ಹೆಚ್ಚು. ತೀವ್ರ ದಟ್ಟಣೆಯಿದೆ ಎಂಬುದು ಅಲ್ಲಿನ ಶಿಬಿರಗಳ ಬಗ್ಗೆ ಹರ್ಷ ಮಂದರ್ ವಿವರಣೆ.
ಎರಡನೇ ಚುರಾಚಾಂದ್ಪುರಕ್ಕೆ ಹೊರಟಾಗಿನ ಸಂದರ್ಭವನ್ನು ಅವರು ವಿವರಿಸುವುದು ಹೀಗೆ:
‘‘ಅಲ್ಲಿ ಚುರಾಚಾಂದ್ಪುರ ಜಿಲ್ಲೆಯ ಪ್ರದೇಶವನ್ನು ದಾಟಿ ಅದರಾಚೆಗೆ ಮೈತೈಗಳು ಹೋಗುವುದು ಸುರಕ್ಷಿತವಾಗಿರಲಿಲ್ಲ. ಮೈತೈ ಮೂಲದ ಮಾನವ ಹಕ್ಕುಗಳ ನಾಯಕ ಬಬ್ಲೂ ಲೋಯಿಟಾಂಗ್ಬಾಮ್ ನಮ್ಮೊಂದಿಗೆ ಬಂದರು. ಮೊದಲ ತಡೆ ಎದುರಾದಾಗ ಅವರು ಕೂಡ ಒಂದು ಹಂತದಲ್ಲಿ ನಿಲ್ಲಬೇಕಾಯಿತು. ಎರಡೂ ಸಮುದಾಯದವರು ಎದುರು ಬದುರು ಇದ್ದಂತಿದ್ದ ಯುದ್ಧವಲಯದಂತೆ ಕಂಡಿತು. ಟ್ಯಾಕ್ಸಿ ಚಾಲಕ ಮುಸ್ಲಿಮ್ ಆಗಿರಬೇಕು ಮತ್ತು ಎಲ್ಲರೂ ಬಹಳ ಜಾಗರೂಕರಾಗಿರಬೇಕು ಎಂದು ನಮಗೆ ಸೂಚಿಸಲಾಯಿತು.
ಅಲ್ಲಿ ಇನ್ನೊಂದು ವಿಚಾರವೂ ತಿಳಿದುಬಂತು. ಭಾರತೀಯ ಸೇನೆ ಅಂದರೆ ಅಸ್ಸಾಮ್ ರೈಫಲ್ಸ್ ಕುಕಿ ಜನರ ಬೆಂಬಲಕ್ಕೆ ನಿಂತಿದೆ ಎಂದು ಮೈತೈಗಳು ನಂಬುತ್ತಾರೆ ಮತ್ತು ಮಣಿಪುರದ ಅರೆಸೈನಿಕ ಪಡೆಗಳು ಮತ್ತು ಪೊಲೀಸರು ಮೈತೈಗಳ ಬೆಂಬಲಕ್ಕೆ ನಿಂತಿದ್ದಾರೆ ಎಂಬುದು ಕುಕಿಗಳ ಭಾವನೆ. ಹೀಗೆ ಸೃಷ್ಟಿಯಾಗಿರುವ ಒಡಕಿನಲ್ಲಿ ಸಮವಸ್ತ್ರಧಾರಿ ಪಡೆಗಳೂ ಕಾರ್ಯನಿರ್ವಹಿಸಲು ಸಾಧ್ಯವಾಗದ ವಿಚಿತ್ರ ಸ್ಥಳವಾಗಿದೆ ಅದು. ಪೂರ್ತಿ ಅಪನಂಬಿಕೆ. ಹೆಜ್ಜೆಹೆಜ್ಜೆಗೂ ಅಡೆತಡೆಗಳು. ಎಲ್ಲವನ್ನೂ ಪರಿಶೀಲಿಸಿದ ಮೇಲೆಯೇ ಹೋಗಲು ಬಿಡುತ್ತಾರೆ.
ಕುಕಿ ಜನರು ಇನ್ನು ಮುಂದೆ ಚುರಾಚಾಂದ್ಪುರ ಹೆಸರನ್ನು ಬಳಸಲು ಬಯಸುವುದಿಲ್ಲ ಎಂಬುದು ತಿಳಿಯಿತು. ಅದು ಒಬ್ಬ ಮೈತೈ ರಾಜನ ಹೆಸರು. ಅದರ ಹಳೆಯ ಹೆಸರು ಲಮ್ಕಾ. ಪಾದ್ರಿಯೊಬ್ಬರು ನಮ್ಮನ್ನು ಖುಲುಮ್ ಎಂಬ ಸ್ಥಳದಲ್ಲಿ ಕುಕಿ ಶಿಬಿರಕ್ಕೆ ಕರೆದೊಯ್ದರು. ಕುಕಿಗಳು ಅಲ್ಪಸಂಖ್ಯಾತರಾಗಿದ್ದ ಪ್ರದೇಶಗಳಲ್ಲಿ ನಡೆದ ಬಂದೂಕುಧಾರಿಗಳ ದಾಳಿ, ಮನೆಗಳನ್ನು ಸುಟ್ಟುಹಾಕಿದ್ದು ಎಲ್ಲವನ್ನು ಹೇಳಿದರು.
ಒಬ್ಬ ಕುಕಿ ವ್ಯಕ್ತಿಯ ಕಥೆ ಗಮನ ಸೆಳೆಯಿತು. ಇಂಫಾಲ ಪ್ರದೇಶದ ಪೆಟ್ರೋಲ್ ಬಂಕ್ನಲ್ಲಿ ಒಬ್ಬ ಕುಕಿ ಮನುಷ್ಯ ಇತರ ಇಬ್ಬರು ಕುಕಿಗಳೊಂದಿಗೆ ಕೆಲಸ ಮಾಡುತ್ತಿದ್ದ. ಒಂದು ಗುಂಪು ಬಂದು ಅವರಲ್ಲಿ ಒಬ್ಬನನ್ನು ಹೊಡೆದು ಸಾಯಿಸಲಾಯಿತು. ಎರಡನೆಯವನ ಕಥೆಯೂ ಹಾಗೆಯೇ ಆಯಿತು. ಈ ಮೂರನೆಯವನನ್ನು ಆಸ್ಪತ್ರೆಗೆ ಕರೆದೊಯ್ದು ಶವಾಗಾರಕ್ಕೆ ಕಳುಹಿಸಿದಾಗ ವೈದ್ಯರು ಅವನಿನ್ನೂ ಜೀವಂತವಾಗಿರುವುದನ್ನು ಪತ್ತೆಮಾಡಿದರು. ಐಸಿಯುಗೆ ಸಾಗಿಸಿದರು. ಹೀಗೆ ಸತ್ತವರ ಮಧ್ಯದಿಂದ ಬದುಕಿಬಂದಿದ್ದ ಅವನು ಶಿಬಿರದಲ್ಲಿ ತನ್ನ ಕುಟುಂಬವನ್ನು ಸೇರಿಕೊಂಡ. ಹೇಗನಿಸುತ್ತದೆ ಎಂದು ನಾನು ಕೇಳಿದೆ. ತನ್ನನ್ನು ಕೊಲ್ಲಲು ಪ್ರಯತ್ನಿಸಿದವರನ್ನು ಕೊಲ್ಲಬೇಕು ಎಂದು ಮೊದಲು ಯೋಚಿಸಿದ್ದೆ. ಈಗ ಕ್ಷಮಿಸಿದ್ದೇನೆ ಎಂದು ಹೇಳಿದ. ಅವನ ಭೇಟಿ ಹೃದಯಸ್ಪರ್ಶಿಯಾಗಿತ್ತು.
ಹಿಂಸಾಚಾರದಲ್ಲಿ ಸಾವಿಗೀಡಾದ ಕುಕಿ ಜನರ ಚಿತ್ರಗಳೊಂದಿಗೆ ನೆನಪಿನ ಭಿತ್ತಿ ನಿರ್ಮಿಸಿದ್ದಾರೆ. ಈ ಸ್ಮಾರಕ ಅಸಾಧಾರಣ. ಎರಡು ದಿನಗಳಿಗೊಮ್ಮೆ ಕೆಲವು ಸಾವಿರ ಮಹಿಳೆಯರು ಸೇರುತ್ತಾರೆ. ಶೋಕದ ಸಂಕೇತವಾಗಿ ಕಪ್ಪು ಬಟ್ಟೆ ಧರಿಸುತ್ತಾರೆ. ಅಲ್ಲಿ ಕುಳಿತು ಎಲ್ಲ ನೆನಪಿಸಿಕೊಳ್ಳುತ್ತ ಅಳುತ್ತಾರೆ. ದುಃಖಿಸುತ್ತಾರೆ. ನಾವು ಯಾವ ತಯಾರಿಯಿಲ್ಲದೆ ಸರ್ವಧರ್ಮ ಪ್ರಾರ್ಥನೆ ಆಯೋಜಿಸಿದೆವು.
ಅವರ ಅಭಿಪ್ರಾಯಗಳು ಮತ್ತು ಪರಿಹಾರದ ಸವಾಲುಗಳ ಬಗ್ಗೆ ಕೇಳಲು ನಾಗರಿಕ ಸಮಾಜ ಸಂಘಟನೆಗಳ ಸಭೆ ಕರೆದೆವು. ಆದರೆ ಇದೆಲ್ಲ ಅಷ್ಟು ಬೇಗ ತೀರ್ಮಾನವಾಗುವುದಲ್ಲ, ತಿಂಗಳುಗಟ್ಟಲೆ ಹಿಡಿಯಬಹುದು ಎಂಬುದು ಅರಿವಿಗೆ ಬಂತು. ಶಿಬಿರಗಳಲ್ಲಿನ ಇವರ ವಾಸ ಮುಂದುವರಿಯುತ್ತದೆ ಮತ್ತು ಹಿಂದಿರುಗಲು ಸಾಧ್ಯವಾಗುವುದಿಲ್ಲ. ಅವರು ಸಂಪನ್ಮೂಲಗಳಿಲ್ಲ ಎಂದು ಹೇಳಿದರು. ಒಟ್ಟಿಗೆ ಕುಳಿತು ರಾಜ್ಯದಿಂದ ಅದು ಸಿಗುವಂತಾಗಲು ಒತ್ತಾಯಿಸಬೇಕು ಎಂದು ನಾನು ಅವರಿಗೆ ಹೇಳಿದೆ. ಉಚಿತ ಪಡಿತರ ವಿತರಣೆ, ಪಿಂಚಣಿ ಹೆಚ್ಚಳ ಮತ್ತು ತಾತ್ಕಾಲಿಕ ಶಾಲೆಗಳ ವ್ಯವಸ್ಥೆ ಆಗಬೇಕು. ಏನೇನನ್ನು ಸರಕಾರದಿಂದ ಕೇಳಬಹುದು ಎಂಬುದನ್ನು ಯೋಚಿಸಲು ಅವರಿಗೆ ನೆರವಾದೆ.
ಇನ್ನೂ ಕೆಲವು ಶಿಬಿರಗಳನ್ನು ಭೇಟಿ ಮಾಡಬೇಕೆಂದಿದ್ದರೂ, ಕತ್ತಲಾದರೆ ಹೋಗುವುದು ಕಷ್ಟವೆಂದು ಚಾಲಕ ಹೇಳಿದ. ಮರಳಿ ಅದೇ ಅಡೆತಡೆಗಳನ್ನು ದಾಟುತ್ತ ಬಂದೆವು. ಗುಂಡಿನ ಚಕಮಕಿ ಮತ್ತು ಮೋರ್ಟರ್ ಬಾಂಬ್ಗಳ ಸದ್ದು ಕೇಳಿಸುತ್ತಿತ್ತು. ನಾವು ಕಾರೊಳಗೆ ಕೆಳಗೆ ಬಗ್ಗಿ, ಕಿಟಕಿಯಿಂದ ಹೊರಗೆ ಕಾಣಿಸದಂತೆ ಕುಳಿತೆವು ಮತ್ತು ವೇಗವಾಗಿ ಸಾಗಿದ್ದೆವು. ನಾನು ಗುಂಪಿನ ನಾಯಕನಾಗಿದ್ದರಿಂದ ಭಯವಿತ್ತು. ಎಲ್ಲರೂ ಸುರಕ್ಷಿತವಾಗಿ ದಾಟುವುದು ಮುಖ್ಯವಾಗಿತ್ತು. ಸೇನೆಯ ಘಟಕ ರಕ್ಷಣೆ ನೀಡಲು ನಿರಾಕರಿಸಿದ್ದಂತೂ ಆಶ್ಚರ್ಯಕರವಾಗಿತ್ತು. ನಮ್ಮ ರಕ್ಷಣೆ ನಮ್ಮದೇ ಹೊಣೆ ಎಂದು ಅವರು ಹೇಳಿಬಿಟ್ಟರು.
ಹೇಗೋ ದಾಟಿ ಇನ್ನೊಂದು ಬದಿಯಲ್ಲಿ ಹೊರಬಂದರೆ, ಅಲ್ಲಿ ಮೈತೈಗಳ ಮತ್ತೊಂದು ತಡೆ ಎದುರಾಗಿತ್ತು. ತುಂಬಾ ಸಿಟ್ಟಿನಿಂದ ನೋಡಿದರು. ಕಡೆಗೂ ಹೋಗಲು ಬಿಟ್ಟರು. ನೆರೆದಿದ್ದ ಸಾವಿರಾರು ಮೈತೈಗಳಿಂದ ರಸ್ತೆ ತುಂಬಿಹೋಗಿತ್ತು.
ಮೀರಾ ಪೈಬಿ ತಾಯಂದಿರ ಗುಂಪಿನ ಬಗ್ಗೆ ಹೇಳಬೇಕು. ಅವರು ಸೇನಾ ಸಿಬ್ಬಂದಿಯ ಅತ್ಯಾಚಾರವನ್ನು ಪ್ರತಿಭಟಿಸಿದ್ದು ಅತ್ಯಂತ ಅಪರೂಪದ ಕ್ಷಣವಾಗಿತ್ತು. ಕುಕಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವರು ಬಂಡುಕೋರರನ್ನು ಬೆಂಬಲಿಸಿದ್ದಾರೆ ಎಂಬ ಸುದ್ದಿಗಳಿವೆ.
ನಾವು ಮಣಿಪುರಕ್ಕೆ ಹೊರಡುವ ಮೊದಲು, ದಿಲ್ಲಿಯಲ್ಲಿ ಕುಕಿ ಜನರನ್ನು ಭೇಟಿಯಾಗಿದ್ದೆವು. ತಾವಿದ್ದ ಸ್ಥಳಕ್ಕೆ ಭೇಟಿ ನೀಡಬಹುದೇ ಎಂದು ಅವರು ಕೇಳಿದ್ದರು. ಅಲ್ಲಿ ಮನೆಗಳು ಮತ್ತು ಚರ್ಚ್ಗಳನ್ನು ಸುಟ್ಟುಹಾಕಲಾಗಿತ್ತು. ಅದೇ ನಾವು ಮಾಡಿದ ಕೊನೆಯ ಕೆಲಸ. ಅವರು ಬಯಸಿದಂತೆ ಇಂಫಾಲ ಪಟ್ಟಣದೊಳಗಿನ ಆ ಸ್ಥಳಗಳಿಗೆ ಭೇಟಿ ನೀಡಿದೆವು. ಚಿತ್ರಗಳನ್ನು ತೆಗೆದುಕೊಂಡೆವು. ಸತ್ತಿರುವ ಕುಕಿ ಜನರ ಶವಗಳು ಇನ್ನೂ ಶವಾಗಾರದಲ್ಲಿಯೇ ಇವೆ. ಲಮ್ಕಾದಲ್ಲಿನ ಶವಾಗಾರದಲ್ಲಿ ಕನಿಷ್ಠ 100 ಶವಗಳಿದ್ದವು. ಇಂಫಾಲದಲ್ಲಿ ಎಣಿಸಲಾಗದಷ್ಟಿವೆ.’’
ಕುಕಿಗಳು ತೀವ್ರ ಬಾಧಿತರಾಗಿರುವಾಗ ಶಾಂತಿ ಕಾರ್ಯಕರ್ತರು ಎರಡೂ ಕಡೆಯ ಮಾತುಗಳನ್ನು ಕೇಳುವುದು ಹೇಗೆ? ಎಂಬ ಪ್ರಶ್ನೆಗೆ ಹರ್ಷ ಮಂದರ್ ಉತ್ತರಿಸುವುದು ಹೀಗೆ: ‘‘ಮಾನವೀಯ ದುರಂತದಲ್ಲಿ ಭಾಗಿಯಾಗಿರುವುದರ ಬಗ್ಗೆ ಕೇಳುತ್ತೇವೆ ಎಂಬುದು ಸ್ಪಷ್ಟ. ಒಂದು ಸಮುದಾಯದ ಮೇಲಿನ ಅಪರಾಧಕ್ಕಾಗಿ ಇನ್ನೊಂದು ಸಮುದಾಯದ ಮೇಲೆ ನಾವು ತೀರ್ಪು ನೀಡುವುದಿಲ್ಲ. ಇದು ತುಂಬಾ ಜಟಿಲ. ಆದರೆ ಇಲ್ಲಿ ಸರಕಾರ ತಪ್ಪಿತಸ್ಥ ಎಂದು ಮಾತ್ರ ನಾನು ಬಲವಾಗಿ ನಂಬುತ್ತೇನೆ. ಸರಕಾರ ತನ್ನ ಸಾಂವಿಧಾನಿಕ ಕರ್ತವ್ಯಗಳಲ್ಲಿ ವಿಫಲವಾಗಿ, ಮಣಿಪುರದ ಜನರನ್ನು ಈ ಹಂತಕ್ಕೆ ತಂದಿದೆ. ಅದು ದೊಡ್ಡ ಅಪರಾಧ.
ಭೇಟಿಯ ನಂತರ ಮನಸ್ಸಿನಲ್ಲಿ ಉಳಿದಿರುವುದು: ಎರಡೂ ಸಮುದಾಯಗಳ ನಡುವಿನ ದ್ವೇಷ ಮತ್ತು ಹಿಂಸಾಚಾರ ಎಷ್ಟು ಉಗ್ರವಾಗಿದೆ ಎಂಬ ಕಥೆಗಳನ್ನು ನಾವು ಕೇಳಿದ್ದೇವೆ. ಆದರೆ ಇತರ ಸಮುದಾಯದವರು ತಮ್ಮ ಜೀವ ಉಳಿಸಿದರು ಎಂಬ ಕಥೆಗಳನ್ನೂ ಶಿಬಿರಗಳಲ್ಲಿದ್ದವರು ಹೇಳಿದರು. ಜೀವ ಉಳಿಸುವ ಇಂಥ ಮನುಷ್ಯತ್ವ ಈ ಭಯಾನಕ ವಾಸ್ತವದ ನಡುವೆಯೂ ಇರುವಲ್ಲಿಯವರೆಗೆ ಗೆಲ್ಲುವ ಭರವಸೆಯೂ ಉಳಿಯಲಿದೆ.
ಮಣಿಪುರದ ಜನರ ಅಗಾಧವಾದ ಮಾನವೀಯ ದುರಂತದ ಬಗ್ಗೆ ಯೋಚಿಸಬೇಕಿದೆ. ಅವರ ಹಳ್ಳಿಗಳನ್ನು ಸುಟ್ಟುಹಾಕಲಾಗಿದೆ. ಅವರೆಂದೂ ಹಿಂದಿರುಗಲು ಸಾಧ್ಯವಾಗುವುದಿಲ್ಲ ಮತ್ತು ನಾಳೆ ಹೇಗೆಂಬ ಅರಿವಿಲ್ಲದೆ ಅವರು ಶಿಬಿರಗಳಲ್ಲಿದ್ದಾರೆ. ಇವೆಲ್ಲದರ ನಡುವೆ, ಬಂದೂಕಿನಿಂದ ಗುಂಡುಗಳು ಸಿಡಿಯುತ್ತಿರುವಾಗ ಶಿಶುಗಳು ಜನಿಸುತ್ತಿವೆ. ಈ ಮಾನವೀಯ ಬಿಕ್ಕಟ್ಟಿನ ಆಚೆಗೆ ಅವರಿಗೆ ನೆರವಾಗಲು ದೇಶ ಸಂಕಲ್ಪ ಮಾಡಬೇಕು. ಅವರಿಗಾಗಿ ಸರಕಾರಗಳನ್ನು ಒತ್ತಾಯಿಸಬೇಕು ಮತ್ತು ಅವರಿಗಾದ ನೋವು, ಅನ್ಯಾಯವನ್ನು ನಿವಾರಿಸುವಲ್ಲಿ ಪಾಲ್ಗೊಳ್ಳಬೇಕು. ಅತ್ಯಾಚಾರ, ಹತ್ಯೆಯಂಥ ಅಪರಾಧಗಳನ್ನು ಮಾಡಿದ ಜನರು ಮುಕ್ತವಾಗಿ ಓಡಾಡಿಕೊಂಡಿರುವುದರ ಬಗ್ಗೆ ನಮಗೆ ಅಸಹನೆಯಿರಬೇಕು. ಅವರ ನೆರವಿಗೆ ನಿಲ್ಲುವ ದಾರಿ ದೂರವಿದ್ದರೂ, ಮೊದಲು ಮಾಡಬೇಕಿರುವುದು ಅವರ ನೋವಿನಲ್ಲಿ ಭಾಗಿಯಾಗುವುದು.’’
(ಕೃಪೆ: article-14.com)