ಕೊಡಗಿನಲ್ಲಿ 127 ಬಾಲ ಗರ್ಭಿಣಿಯರು ಪತ್ತೆ
Photo: freepik
ಮಡಿಕೇರಿ,ಜ.19: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವರ್ಷ(2023)ದಲ್ಲಿ 127 ಬಾಲ ಗರ್ಭಿಣಿಯರು ಪತ್ತೆಯಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
2023ರಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ (ಆರ್ಸಿಎಚ್)ಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗ ಕೊಡಗು, ಇವರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 127 ಬಾಲ ಗರ್ಭಿಣಿಯರು ಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಪ್ರೇಮ ಪ್ರಕರಣಗಳೇ ಹೆಚ್ಚು!
ಕೊಡಗು ಜಿಲ್ಲೆಯಲ್ಲಿ 2023ರಲ್ಲಿ ಪತ್ತೆಯಾಗಿರುವ 127 ಬಾಲ ಗರ್ಭಿಣಿಯರಲ್ಲಿ 40 ಪ್ರಕರಣಗಳು ಪ್ರೇಮ ಪ್ರಕರಣಗಳಾಗಿವೆ. ಇದರಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಪತ್ತೆಯಾಗಿರುವ ಪ್ರೇಮ ಪ್ರಕರಣಗಳಲ್ಲಿ ಗರ್ಭಿಣಿಗಳಾಗಿರುವ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಿರಳ. ಹೆಣ್ಣು ಹಾಗೂ ಗಂಡಿನ ಕುಟುಂಬಸ್ಥರು ಸಮಾಜಕ್ಕೆ ಹೆದರಿ ಇತ್ಯರ್ಥಗೊಳಿಸಿದ್ದಾರೆ ಎನ್ನಲಾಗಿದೆ.
17ರ ಹರೆಯದ ಹೆಣ್ಣು ಮಕ್ಕಳೇ ಹೆಚ್ಚು!
ಜಿಲ್ಲೆಯಲ್ಲಿ 2023ರಲ್ಲಿ ಪತ್ತೆಯಾಗಿರುವ ಗರ್ಭಧರಿಸಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರಲ್ಲಿ 17 ವರ್ಷದ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 6 ಫೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗಿ 16 ಬಾಲಕಿಯರು ಊರು ಬಿಟ್ಟು ತೆರಳಿರುವ ಘಟನೆಯೂ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಬಾಲ ಗರ್ಭಿಣಿಯರಲ್ಲಿ ಆದಿವಾಸಿ ಜನಾಂಗದ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಅಪ್ರಾಪ್ತ ವಯಸ್ಸಿನ ಬಾಲ ಗರ್ಭಿಣಿಯರೂ ಪತ್ತೆಯಾಗಿದ್ದಾರೆ.
ಅದಲ್ಲದೇ ಕೊಡಗು ಜಿಲ್ಲೆಯಲ್ಲಿ ಬಹುತೇಕ ಕಾಫಿ ತೋಟಗಳಲ್ಲಿ ದುಡಿಯುವ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.
ಅಸ್ಸಾಮ್ ಮೂಲದ ಕಾರ್ಮಿಕರ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಿಣಿಯಾಗಿದ್ದಾರೆ.ಇವರಲ್ಲಿ ಬಹುತೇಕ ಊರು ಬಿಟ್ಟು ತೆರಳಿರುವುದರಿಂದ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಾಗೃತಿ ಅನಿವಾರ್ಯ
ಬಾಲ್ಯ ವಿವಾಹ ತಡೆಗೆ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಬಾಲ್ಯ ವಿವಾಹ ತಡೆ ಕಾವಲು ಸಮಿತಿ, ಬಾಲ ರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸಿದರೂ,ಇಂದಿಗೂ ಸಮಾಜದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಇದರ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ಕೊಡಗು ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಜಾಗೃತಿ ಹಾಗೂ ಅರಿವು ಮೂಡಿಸಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 127 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ.ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಪ್ರಕರಣಗಳು ಪತ್ತೆಯಾಗಿವೆ. ಏಕಪಾಲಕರು ಇರುವ ಕುಟುಂಬದಲ್ಲಿ ಹೆಚ್ಚಾಗಿ ಬಾಲ ಗರ್ಭಿಣಿಯರು ಪತ್ತೆಯಾಗಿದ್ದು, ಪೊನ್ನಂಪೇಟೆ ವಿಭಾಗದಲ್ಲಿ ಅತೀ ಹೆಚ್ಚು ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು ಪತ್ತೆಯಾಗಿದ್ದಾರೆ.
-ಜಯಂತಿ ಪಿ.ಕೆ., ಕೇಸ್ ವರ್ಕರ್ ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಭಾಗ
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 49,000 ಅಪ್ರಾಪ್ತ ವಯಸ್ಕ ಬಾಲಕಿಯರು ಗರ್ಭಧರಿಸಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಆಯೋಗವು ಪ್ರತಿ ಜಿಲ್ಲೆಗಳಲ್ಲಿ ಸದಸ್ಯರನ್ನು ಸೇರಿಸಿ ಮರು ಸಮೀಕ್ಷೆ ನಡೆಸಲಿದೆ. ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಲಭ್ಯವಾಗಿವೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಿದೆ. ಇದೇ ವೇಳೆ ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
-ಕೆ.ನಾಗಣ್ಣ ಗೌಡ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ