ಗಾಂಧೀಜಿ ಬದುಕಿನ ಕೊನೆಯ ಜಯಂತಿ 1947
ರಾಷ್ಟ್ರದ ಮಹಾದಿನಗಳಲ್ಲೊಂದಾದ ಆ ಅಕ್ಟೋಬರ್ ಎರಡು ಉದಯಿಸಿದಾಗ ಸ್ವತಂತ್ರ ಭಾರತವೂ ಜನ್ಮ ತಾಳಿತ್ತು. ಮೂವತ್ತು ವರ್ಷಗಳಿಗೂ ಮೀರಿ ಲಕ್ಷಾಂತರ ಜನರು ಪವಿತ್ರದಿನವೆಂದು ಸ್ಫೂರ್ತಿ ಪಡೆಯುವ ಆಚರಣೆ ನಡೆದು ಬಂದಿತ್ತು. 78ನೆಯ ಈ ಜನ್ಮದಿನದಂದು ಗಾಂಧೀಜಿ ಭವಿಷ್ಯ ಭಾರತವನ್ನು ಕುರಿತು ಚಿಂತಾಕ್ರಾಂತರಾಗಿದ್ದರು. ಹಿಂದಿನ ಜಯಂತಿಗಳಲ್ಲಿ ಲೋಕಕ್ಕೆ ಲೋಕವೇ ಮಹಾತ್ಮನ ಪವಿತ್ರತಮ ಜೀವನ ಸಂದೇಶಕ್ಕೆ ಓಗೊಟ್ಟು ನಮನ ಸಲ್ಲಿಸಲು ಧಾವಿಸುತ್ತಿತ್ತು. ಆತನ ಸತ್ಯ - ಅಹಿಂಸೆಗಳ ಸಂದೇಶಗಳು ತೇಜೋಪೂರ್ಣವಾಗಿ ಬಾಳಿನ ಸಮಸ್ತ ಕ್ಷೇತ್ರಗಳಲ್ಲೂ ಬೆಳಕಿನ ಪ್ರಭೆಯಂತೆ ಪಾವನಗೊಳಿಸುವ ಪ್ರೇರಣೆ ನೀಡುತ್ತಿದ್ದವು. ಸ್ವಾತಂತ್ರ್ಯ ಪೂರ್ವದ ಒಂದು ಗಾಂಧಿ ಜಯಂತಿಯ ದಿನ ಕವಿ ಕುವೆಂಪು ಭಾವಪೂರಿತರಾಗಿ ಹೃದಯತುಂಬಿ ಹಾಡಿದ್ದರು.
‘‘ಲೋಕ ಲೋಚನದಂತರಾಳದಾರಾಮದಲಿ!
ವಿಶ್ವಕಂಪನಕಾರಿಯಾದ ಧರ್ಮದಬಲಂ!
ಮೂರ್ತಿಗೊಳೆ ಮೂಡಿದೀತನು ಮಹಾತ್ಮನೆವಲಂ!
ಬಾಳು ಪಾವನವಾದುದೀತನಿಂ ಭೂಮಿಯಲಿ!’’
(ಗಾಂಧೀಜಿಗೆ ಭಾಷ್ಪಾಂಜಲಿ)
ಬಾಪೂ ಎಂದಿನಂತೆ ಆ ದಿನವೂ ಬೆಳಗಿನ ಜಾವ ಮೂರಕ್ಕೆ ಎದ್ದು ತಮ್ಮ ದಿನಚರಿ ಪ್ರಾರಂಭಿಸಿದರು. ದಿಲ್ಲಿಯನ್ನಾವರಿಸಿದ್ದ ಪ್ರಖರ ಜ್ವಾಲಾಮುಖಿಯ ಕಾವಿನಿಂದ ಮನಸ್ಸು ಮುದುಡಿತ್ತು. ಚರಕದಲ್ಲಿ ನೂಲುವ ಸೂತ್ರಯಜ್ಞದ ಝೇಂಕಾರನಾದದಲ್ಲಿ ಲೀನವಾಗಿಹೋಗಿದ್ದರು. ಸಂಪೂರ್ಣ ಗೀತಾಪಠಣ ಮಂದರ ದನಿಯಲ್ಲಿ ಮಾಡುತ್ತಾ ನಾಲ್ಕಾರು ಆಶ್ರಮವಾಸಿಗಳು ಸೇರಿದ್ದರು.
‘‘ಈಶಾವಾಸ್ಯಮಿದಮ್‌ಸರ್ವಂ’’ ಎಂಬ ಪ್ರಾತಸ್ಮರಣೀಯ ಶ್ಲೋಕಗಳು ಸಾಮೂಹಿಕ ಧ್ವನಿಯಾಗಿ ತೇಲಿಬಂದವು. ಬಿರ್ಲಾಭವನದ ವಿಶಾಲ ಕೊಠಡಿ ತುಂಬಿಹೋಗಿತ್ತು. ಅತಿಥಿಗಳು ಬಂದು ಸೇರುತ್ತಲೇ ಇದ್ದರು.
ಗಾಂಧಿ ಪರಿವಾರದ ಕಿರಿಯ ಬಂಧುವೊಬ್ಬ ಅತ್ಯಂತ ಸಲಿಗೆಯಿಂದ ‘‘ಬಾಪೂ! ನಮ್ಮ ಹುಟ್ಟುಹಬ್ಬದ ದಿನ ನಾವೇ ಎಲ್ಲರಿಗೂ ನಮಸ್ಕರಿಸಿ ಆಶೀರ್ವಾದ ಪಡೆಯುತ್ತೇವೆ. ಆದರೆ ನಿಮ್ಮ ವಿಷಯದಲ್ಲಿ ಇದೇಕೆ ತಿರುಗುಮುರುಗಾಗುತ್ತದೆ!’’ ಎಂದು ನಗುತ್ತಾ ಕೇಳಿದ. ಗಾಂಧೀಜಿಯ ಮುಖದಲ್ಲೂ ನಗೆಯ ಮಿಂಚು ಮೂಡಿತು. ಆತನನ್ನು ಕುರಿತು ‘‘ಮಹಾತ್ಮಾ ಎನಿಸಿಕೊಳ್ಳುವವರ ರೀತಿಯೇ ಬೇರೆ ಅಲ್ಲವೇ! ಆ ಪದವಿಗೆ ನಾನೆಷ್ಟೇ ಅನರ್ಹನೆನಿಸಿದ್ದರೂ ನೀವೇ ನನ್ನನ್ನು ಮಹಾತ್ಮಾ ಎಂದು ಪೀಠದಲ್ಲಿ ಕೂರಿಸಿಬಿಟ್ಟಿರಿ. ಇದು ನಿಮ್ಮದೇ ತಪ್ಪು. ನನ್ನದೇನೂ ಇಲ್ಲ. ಆದ್ದರಿಂದ ನೀವೇ ಬೆಲೆ ತೆರಬೇಕಾಗಿದೆ!’’ ಎಂದರು. ಸುತ್ತಲೂ ನಗೆಯ ಅಲೆ ಸ್ವಲ್ಪ ಹೊತ್ತು ಪಸರಿಸಿತು.
ಜವಾಹರಲಾಲರು ಒಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣ ಮಾಡುತ್ತಾ ‘‘ನಮ್ಮ ಬಹುದಿನದ ಆಕಾಂಕ್ಷೆಯಾಗಿದ್ದ ಸ್ವಾತಂತ್ರ್ಯ ಬಂದಿದೆ. ನಮ್ಮ ದುರ್ದೈವದಿಂದ ಆ ಕೂಡಲೇ ದುರಂತಗಳ ಮೇಲೆ ದುರಂತಗಳು ಸಂಭವಿಸುತ್ತಲೇ ಇವೆ. ಅಮಾನುಷ ಕೃತ್ಯಗಳ ಕತ್ತಲು ಕವಿಯುತ್ತಿದೆ. ಆದರೂ ನಮ್ಮ ಮಧ್ಯೆ ಒಂದು ಪ್ರಖರ ಜ್ಯೋತಿ ಬೆಳಗುತ್ತಲೇ ಇದೆ. ಅದನ್ನು ನೋಡು ನೋಡುತ್ತಲೇ ನಮ್ಮ ಎದೆಗಳಲ್ಲಿ ಶಕ್ತಿ ತುಂಬಿ ಭರವಸೆ ಮೂಡುತ್ತದೆ. ಮಹಾತ್ಮಾ ಗಾಂಧಿ ಈ ಕಷ್ಟದ ದಿನಗಳಲ್ಲಿ ಅಚಲ ಆಶ್ವಾಸನೆಯ ಶಿಖರದಂತೆ ನಿಂತಿದ್ದಾರೆ. ಸುತ್ತಲೂ ಲೋಕ ಒಡೆದು ಚೂರಾಗುತ್ತಿರುವಾಗ ಅವರೊಬ್ಬರೇ ನಿಶ್ಚಲ ಸಾರ್ಥಕತೆಯ ಗಟ್ಟಿ ಶಿಲೆಯಂತೆ ಸತ್ಯದರ್ಶನದ ದೀಪಸ್ತಂಭವಾಗಿ ಸುಭದ್ರವಾಗಿ ನಿಂತು ಶ್ರಮಿಸುತ್ತಿದ್ದಾರೆ’’ ಎಂದರು.
(‘ಮಾರ್ಜೊರಿ ಸೈಕ್ಸ್’ ಗಾಂಧಿ - ಹಿಸ್ ಗಿಪ್ಟ್ ಆಫ್ ದಿ ಫೈಟ್)
ತಮ್ಮ ಜಯಂತಿಯನ್ನು ಗಾಂಧೀಜಿ ಭಾರತದ ಪುನರುತ್ಥಾನದ ಸಂಕೇತವೆನಿಸಿದ್ದ ಚರಕದ ಜಯಂತಿ ಎಂದೇ ಆಚರಿಸುತ್ತಿದ್ದರು. ಅಹಿಂಸೆಯ ಸಾಕಾರ ಸ್ವರೂಪವೇ ಚರಕದ ಸಂದೇಶ. ಆದರೆ ಈ ದಿನ ಆ ಸಂದೇಶ ಮರೆಯಾಗುತ್ತಿದೆ. ತನ್ನ ಉಪಯುಕ್ತತೆಯೂ ಕ್ಷೀಣಿಸುತ್ತಿದೆ ಎಂದು ತಿಳಿದಿದ್ದರು. ಹಿಂಸೆ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಸೋದರನೇ ಸೋದರನನ್ನು ನಿರ್ದಯವಾಗಿ ನಾಶ ಮಾಡಹೊರಟಿದ್ದಾನೆ. ಗಾಂಧೀಜಿಯ ಸ್ವರಾಜ್ಯದ ಸ್ವಪ್ನಗಳು ಚೂರಾಗುತ್ತಿವೆ ಎನಿಸುತ್ತಿತ್ತು. ಸಾಮಾನ್ಯ ಭಾರತೀಯರ ಹೃದಯಸ್ಪಂದನಗಳು ಮಾತ್ರ ಶಾಂತಿ ಸೌಹಾರ್ದಗಳ ಆದರ್ಶಗಳಿಗೆ ಎಂದೂ ವಿರುದ್ಧವಾಗದು ಎಂಬ ಪೂರ್ಣ ಶ್ರದ್ಧೆಯಿಂದ ಬಾಪೂ ತಮ್ಮ ತಪಶ್ಚರ್ಯದಲ್ಲಿ ಮುಂದುವರಿಯುತ್ತ ಹೋದರು. ಕೋಟ್ಯಂತರ ವ್ಯಕ್ತಿಗಳು ಈ ಆದರ್ಶಗಳನ್ನೇ ನಂಬಿ ನಡೆಯುತ್ತಾ ತಮ್ಮ ಮಾರ್ಗದರ್ಶನ ಬಯಸಿ ಬರುತ್ತಿದ್ದ ಪತ್ರಗಳೇ ಸಾಕ್ಷಿಯಾಗಿದ್ದವು. ಸತ್ಯ, ಅಹಿಂಸೆಗಳಲ್ಲಿ ಅವರ ಗಾಢ ಶ್ರದ್ಧೆ ವೃದ್ಧಿಸುತ್ತಲೇ ಇತ್ತು.
ಜಯಂತಿಯ ಶುಭಾಶಯ ಸಮರ್ಪಿಸಲು ನಾಡಿನ ಅಂದಿನ ಎಲ್ಲ ಮಹಾವ್ಯಕ್ತಿಗಳೂ ಬಿರ್ಲಾ ಭವನಕ್ಕೆ ಧಾವಿಸಿ ಬಂದರು. ಗವರ್ನರ್ ಜನರಲ್ ಮೌಂಟ್ ಬೇಟನ್ನರು ಪತ್ನಿಯೊಡಗೊಡಿ ಬಂದರು. ಜವಾಹರಲಾಲರು, ಸರ್ದಾರ್ ಪಟೇಲರು, ಆತಿಥೇಯರಾದ ಜಿ.ಡಿ. ಬಿರ್ಲಾ ಬಂದು ಸೇರಿದವರಲ್ಲಿ ಮೊದಲಿಗರು. ಸಾದ್ವಿ ಶಿಷ್ಯೆ ಮೀರಾ ಬಹೆನ್ (ಮ್ಯಾಡಲೀನ್ ಸ್ಟೇಡ್) ತಮ್ಮ ಆಲ್ಮೋರದ ‘ಪಶುಲೋಕ್ ಆಶ್ರಮ’ ದಿಂದ ಬಂದು ಸೇರಿ ಆ ದಿನದ ಸಭೆಗೆ ಅಣಿಮಾಡಿದರು. ಹೂವಿನ ಹಸೆಗಳಿಂದ ಸುಂದರವಾಗಿ ಸಿಂಗರಿಸಿದರು. ಹೂವುಗಳಿಂದಲೇ ‘ಓಂ’ ‘ಹರೇ ರಾಮ್’ ಪದಗಳನ್ನೂ ಶಿಲುಬೆಯ ಆಕಾರವನ್ನೂ ರೂಪಿಸಿಟ್ಟರು. ಸರ್ವಧರ್ಮ ಪ್ರಾರ್ಥನೆಯ ನಂತರ ಗಾಂಧೀಜಿಯ ಮೆಚ್ಚಿನ ಸಂಗೀತಗಳಾದ ‘‘ಹೇ ಗೋವಿಂದ ರಾಖೋಶರಣ್’’ ಮತ್ತು ‘‘ವೆನ್ ಐ ಸರ್ವೆ ದಿ ವಂಡ್ರಸ್ ಕ್ರಾಸ್’’ಗಳನ್ನು ಸುಶ್ರಾವ್ಯವಾಗಿ ಹಾಡಿದರು. ಪೂರ್ಣ ನಿಶ್ಯಬ್ದದ ಪರಿಸರದಲ್ಲಿ ಭಾವನಾಲೋಕ ಊರ್ಧ್ವಮುಖವಾಗಿ ಮೇಲೇರುತ್ತಿತ್ತು. ಶಾಂತಿ ಮಂತ್ರ ಕೊನೆಗೆ ಮೊಳಗಿತ್ತು. ‘‘ಅಸತೋಮಾ ಸದ್ಗಮಯ/ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಮ್‌ಗಮಯ’’. ಅಂತರ್ಮುಖಿಗಳಾಗಿ ಗಾಂಧೀಜಿ ಅಂತರಾಳದಿಂದ ದೇವರೇ ಈ ಸಂಕಟಮಯ ಯಾದವೀ ಸಂಘರ್ಷದಿಂದ ದೇಶವನ್ನು ರಕ್ಷಿಸು ಎಂದು ಪ್ರಾರ್ಥಿಸಿದರು.
ಲೇಡಿ ಮೌಂಟಬೇಟನ್ನರು ಬಂದು ವಂದಿಸಿ ತಮ್ಮೊಡನೆ ವಿಶ್ವದ ಮೂಲೆ ಮೂಲೆಗಳಿಂದ ಬಾಪೂಜಿ ಕುರಿತು ಬಂದಿದ್ದ ಶುಭಾಶಯದ ಪತ್ರಗಳ ಕಟ್ಟನ್ನು ಸಮರ್ಪಿಸಿದ್ದರು. ಆಕಾಶವಾಣಿಯ ಪ್ರಧಾನಾಧಿಕಾರಿ ಉತ್ಸಾಹದಿಂದ ಮುಂದೆ ಬಂದು ‘‘ಬಾಪೂಜಿ ಈ ದಿನ ಸಂಜೆ ಅಖಿಲ ಭಾರತ ರೇಡಿಯೊನಿಂದ ಗಾಂಧಿ ಜಯಂತಿಯ ವಿಶೇಷ ಕಾರ್ಯಕ್ರಮ ರೂಪಿಸಿ ಬಿತ್ತರಿಸುತ್ತಿದ್ದೇವೆ. ದಯಮಾಡಿ ಆಲಿಸಬೇಕು’’ ಎಂದು ಕೇಳಿಕೊಂಡರು. ಗಾಂಧೀಜಿ ಗಂಭೀರವಾಗಿ ನುಡಿದರು ‘‘ಈ ಚರಕದ ಸುಶ್ರಾವ್ಯ ನಿನಾದದಲ್ಲಿ ನಾನು ಸಂಪೂರ್ಣ ಲೀನವಾಗಿರುತ್ತೇನೆ. ಮತ್ತಾವ ಕಾರ‌್ಯಕ್ರಮವನ್ನೂ ನಾನು ಕೇಳಲಿಚ್ಛಿಸುವುದೇ ಇಲ್ಲ’’. ಸರ್ದಾರ್ ಪಟೇಲರ ಪುತ್ರಿ ಮಣಿಬೆನ್ ಆ ದಿನದ ತಮ್ಮ ಡೈರಿಯಲ್ಲಿ ‘‘ಅತ್ಯುತ್ಸಾಹದಿಂದ ತಮ್ಮ ಪ್ರೀತಿಯ ಬಾಪುವಿನೆಡೆಗೆ ಬೆಳಗ್ಗೆ ಧಾವಿಸಿದೆವು. ಆದರೆ ಭಾರವಾದ ಹೃದಯದಿಂದ ಮನೆಗೆ ಹಿಂದಿರುಗಿದೆ’’ ಎಂದು ದಾಖಲಿಸಿದ್ದಾರೆ. ಗಾಂಧೀಜಿಗೆ ಇನ್ನು ದೀರ್ಘಕಾಲ ಜೀವಿಸಿರುವ ಉತ್ಸಾಹವೇ ನಡುಗಿಹೋಗುತ್ತಿತ್ತು.
ಮೌಲಾನಾ ಅಬುಲ್ ಕಲಾಮ್ ಆಝಾದರು ಆ ದಿನ ಆಕಾಶವಾಣಿಯಲ್ಲಿ ಮಾತನಾಡುತ್ತಾ ‘‘ತಮ್ಮ ಆಯುಷ್ಯದ ಅರ್ಧ ಶತಮಾನದಷ್ಟು ಕಾಲ ಅಹಿಂಸಾಧರ್ಮದ ಮೂಲಕ ಮಾನವ ಸೇವೆಯಲ್ಲಿ ತೊಡಗಿರುವ ನಮ್ಮ ರಾಷ್ಟ್ರಪಿತನ ಎಪ್ಪತ್ತೆಂಟನೆಯ ಜನ್ಮದಿನದಂದು ನನ್ನ ನಮನ ಸಲ್ಲಿಸುತ್ತೇನೆ. ಈ ದಿನ ನಮ್ಮ ಕೋಟ್ಯಂತರ ದೇಶಬಾಂಧವರು ಅನುಭವಿಸುತ್ತಿರುವ ನೋವು ಸಂಕಟಗಳನ್ನು ನಾವು ಮರೆಯದಿರೋಣ. ಯಾವ ಭಾರತ ಈ ಯುಗದ ಮಹಾಪುರುಷನೊಬ್ಬನಿಗೆ ಜನ್ಮ ಕೊಟ್ಟಿತೋ ಅದೇ ದೇಶ ಇಂದು ಅವರು ಬೋಧಿಸಿದ ಶಾಂತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ನಾಶ ಮಾಡಲು ಹವಣಿಸಿದೆ. ಸೋದರ ಸೋದರರು ಹೋರಾಡಿ ನಾಶವಾಗುತ್ತಿದ್ದೇವೆ. ಭಗವಂತ ನಮ್ಮನ್ನು ಕ್ಷಮಿಸಿಯಾನೆ?’’ ಎಂದು ದುಃಖಿಸಿದರು.
ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ಕವಯಿತ್ರಿ ಗಾಂಧಿ ಭಕ್ತೆ ಸರೋಜಿನಿ ದೇವಿ ತಮ್ಮ ಇಡೀ ಜೀವಮಾನ ಈ ಗುರುಶ್ರೇಷ್ಠನ ಪದತಲದಲ್ಲಿ ಕಳೆದ ದಿನಗಳ ಸಿಂಹಾವಲೋಕನ ಮಾಡಿದರು. ‘‘ಈ ಶಿಥಿಲ ದೇಹದ ವಿನಯಶೀಲ ಸಾಮಾನ್ಯ ಮಾನವನ ಅಂತಃಶಕ್ತಿಯ ಗುಟ್ಟೇನು? ಸೂಜಿಗಲ್ಲಿನಂತೆ ಮಾನವ ಕೋಟಿ ಆತನ ಪ್ರಭಾವಕ್ಕೆ ಮಣಿದು ನಮಿಸುತ್ತಿದೆ. ಈ ದಿನ ಯುದ್ಧ, ಹಗೆತನ, ದ್ವೇಷ, ಸೇಡುಗಳಿಂದ ಛಿದ್ರಛಿದ್ರವಾಗುತ್ತಿರುವ ಮಾನವಲೋಕ ಒಂದು ಹೊಸ ಹುಟ್ಟಿಗಾಗಿ ತವಕಪಡುತ್ತಾ ಮಹಾತ್ಮಾ ಗಾಂಧಿಯ ಕಡೆಗೆ ಆಶಾಭಾವನೆಯಿಂದ ನೋಡುತ್ತಿದೆ. ಆತನ ಸುವಾರ್ತೆ ಜಗತ್ತಿಗೆ ತಾರಕವಾಗಿ ಅನಂತಕಾಲದ ವರೆಗೆ ಪ್ರವಹಿಸುತ್ತಲೇ ಇರುತ್ತದೆ. ಆತನ ದಿವ್ಯ ಸನ್ನಿಧಿಯಲ್ಲಿ ನಮ್ಮ ಆತ್ಮಗಳು ಪುನೀತವಾಗಿ, ಸ್ವತಂತ್ರವಾಗಿ, ಮುಗಿಲಿಗೇರಿ ನಿಂತು, ನಿರರ್ಗಳವಾಗಿ ಕಾವ್ಯವಾಹಿನಿಯಾಗಿ ನಲಿಯುತ್ತವೆ. ಭಗವಂತನ ದಿವ್ಯ ನಿಯತಿಯನ್ನು ಪೂರ್ಣಗೊಳಿಸಲು ಈಗ ಅವರೊಬ್ಬರೇ ಅವನ ಯೋಗ್ಯ ಉಪಕರಣ’’ ಎಂದು ಸರೋಜಿನಿ ದೇವಿ ಅನನ್ಯ ಭಕ್ತಿಯಿಂದ ಪ್ರಣಾಮ ಸಲ್ಲಿಸಿದರು.
ಸರ್ ಸ್ಟಾಫರ್ಟ್ ಕ್ರಿಪ್ಸರು ದೀರ್ಘ ಪತ್ರ ಬರೆದು ತಿಳಿಸಿದರು.
‘‘ಈ ಸಂಕಟಮಯ ದಿನಗಳಲ್ಲಿ ನಿಮಗೆ ಪತ್ರ ಬರೆಯಲು ನಾನು ಹಿಂಜರಿದು ತವಕಪಡುತ್ತಿದ್ದೇನೆ. ನಿಮ್ಮ ಎರಡೂ ದೇಶಗಳು ಅತ್ಯಂತ ದಾರುಣ ಸ್ಥಿತಿಯಲ್ಲಿ ಸಾಗಿಹೋಗುತ್ತಿವೆ. ಈ ಸಮಯದಲ್ಲಿ ಕ್ರೋಧವನ್ನು ಅಕ್ರೋಧದಿಂದ, ದ್ವೇಷವನ್ನು ಪ್ರೇಮದಿಂದ ಗೆಲ್ಲುವುದಕ್ಕಾಗಿ ನೀವು ಮಾಡುತ್ತಿರುವ ಸಂಕಲ್ಪಬದ್ಧ ಮಹಾಕಾರ್ಯ ನಮಗೆಲ್ಲ - ಭಾರತದ ಹಿತೈಷಿಗಳಿಗೆಲ್ಲ ಸ್ಫೂರ್ತಿ ನೀಡುವ ಶಕ್ತಿ ಉಳ್ಳದ್ದು. ಚರಿತ್ರೆಯ ಪಥದಲ್ಲಿ ಸಾಗಿ ಬಂದ ಈ ದುರಂತ ಘಟನೆಗಳಲ್ಲಿ ನಮ್ಮೆಲ್ಲರ ಪಾತ್ರವೂ ಇದೆ ಎಂದು ನಮ್ಮ ಆತ್ಮಸಾಕ್ಷಿ ಧ್ವನಿಗೈಯುತ್ತದೆ. ನಿಮ್ಮ ತಾಳ್ಮೆ, ನಿಮ್ಮ ನಿಸ್ಸೀಮ ತಪಶ್ಚರ್ಯ, ಈ ದಿನದ ಈ ಮತೀಯ ವಿದ್ವೇಷದ ಜ್ವಾಲೆಯನ್ನಾರಿಸಿ, ಭಾರತ ಮತ್ತು ಪಾಕಿಸ್ತಾನವೆರಡೂ ಪ್ರಗತಿಪರ ಅಭಿವೃದ್ಧಿಯ ಕಡೆ ಸಾಗಿ, ಕೊನೆಯ ಹಂತವಾದ ಪ್ರೇಮಮಯ ಐಕ್ಯದಲ್ಲಿ ಒಂದುಗೂಡಿಸುವುದು ಎಂಬ ಮಹದಾಸೆಯಿಂದ ನಿಮಗೆ ಭಗವಂತ ದೀರ್ಘಾಯು ಕರುಣಿಸಲೆಂದು ಹಾರೈಸುತ್ತೇನೆ.’’
-(ಪ್ಯಾರಿಲಾಲ್ ‘ಮಹಾತ್ಮಾ ಗಾಂಧಿ’)
ಗಾಂಧೀಜಿ ನಿರ್ಲಿಪ್ತರಾಗಿ ತಮ್ಮ ತುಮುಲಗಳನ್ನು ಆಪ್ತರೊಡನೆ ಹಂಚಿಕೊಳ್ಳುತ್ತಾ ಹೋದರು. ‘‘ನಾನಿಂದು ನಿರಾಶಾವಾದಿಯಲ್ಲ. ವಾಸ್ತವವಾಗಿ ಭಗವಂತನ ದಿವ್ಯೋದ್ದೇಶಗಳನ್ನು ಅರಿಯದೆ ಕತ್ತಲಲ್ಲಿ ತವಕಪಡುತ್ತಿದ್ದೇನೆ. ಒಂದು ಬಲಹೀನ ರಾಷ್ಟ್ರವನ್ನು ಚೇತನಗೊಳಿಸಿ ಸ್ವಾತಂತ್ರ್ಯದ ಕಡೆಗೆ ಸಾಗಿಹೋಗಲು ನನ್ನ ಮೂಲಕ ಅಲ್ಪಸೇವೆಗೆ ದೇವರೇ ಪ್ರೇರಣೆ ನೀಡಿದ. ಬಹುಶಃ ಮುಂದಿನ ಮಜಲಿಗೆ ನನಗಿಂತ ಶುದ್ಧನಾದ, ನಿರ್ಭಯನಾದ, ಸ್ಪಷ್ಟ ಭವಿಷ್ಯ ದೃಷ್ಟಿಯುಳ್ಳ, ಸಾಧಕಶ್ರೇಷ್ಠನ ಆವಶ್ಯಕತೆಯಿದೆ. ಅವನೇ ಅದನ್ನು ಕರುಣಿಸುತ್ತಾನೆ. ದುರ್ಬಲರ ಅಹಿಂಸೆ ಅಂತಹ ಸೀಮೋಲ್ಲಂಘನೆಯ ಸಾಹಸ ಮಾಡಲಾರದು. ಅಹಿಂಸೆಗೆ ಎಂದೂ ಸೋಲಿಲ್ಲ. ಕಾರಣ ಅದು ಜಗತ್ ರಕ್ಷಣೆಗೆ ಏಕೈಕ ಸಾಧನವಾದ ಶಾಶ್ವತ ಪ್ರೇಮಶಕ್ತಿ. ನನ್ನ ಪ್ರಯೋಗಗಳಲ್ಲಿ ಕೆಲವು ತಪ್ಪುಗಳಾಗಿರುವುದು ಸಾಧ್ಯ. ಮಾನವ ಕುಲ ಮುಂದೆ ಅವುಗಳನ್ನು ತಿದ್ದಿಕೊಂಡು ಸಾಗಬಲ್ಲದು’’ ಎಂದು ಬಂದವರೊಡನೆ ಆತ್ಮೀಯವಾಗಿ ನುಡಿದರು.
ಕೆ.ಎಸ್. ನಾರಾಯಣಸ್ವಾಮಿಯವರ ‘ಗಾಂಧೀಜಿಯ ಕಡೆೆಯ ದಿನಗಳು’ ಕೃತಿಯಿಂದ ಆಯ್ದ ಭಾಗ