ಕೊಡಗು ಜಿಲ್ಲೆಯಲ್ಲಿ ಮರುಸ್ಥಾಪನೆಯಾದ 29 ಜಿ.ಪಂ ಕ್ಷೇತ್ರಗಳು: ಜಿಲ್ಲಾ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಪಟ್ಟಿ ಪ್ರಕಟ
ಜುಲೈ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2016ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇದ್ದ 29 ಕ್ಷೇತ್ರಗಳು ಇದೀಗ ಮರುಸ್ಥಾಪನೆಯಾಗಿದ್ದು, ಕ್ಷೇತ್ರಗಳ ಸಂಖ್ಯೆ, ಗಡಿ, ಸದಸ್ಯರ ಸಂಖ್ಯೆ ರಾಜ್ಯ ಸರಕಾರ ಪ್ರಕಟಿಸಿದೆ. ಜುಲೈ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಹಿಂದೆ ಸೀಮಾಗಡಿ ನಿರ್ಣಯ ಆಯೋಗವು ಕೊಡಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆಯನ್ನು 29 ರಿಂದ 25ಕ್ಕೆ ಇಳಿಸಲಾಗಿತ್ತು. ಇದಕ್ಕೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಆಕ್ಷೇಪ ಕೂಡ ವ್ಯಕ್ತವಾಗಿತ್ತು.
ಜಿಲ್ಲೆಯ ಇಬ್ಬರು ಶಾಸಕರು ವಿಧಾನಸಭೆಯಲ್ಲಿ ಇದರ ಬಗ್ಗೆ ಗಮನ ಸೆಳೆದಿದ್ದರು. ನಂತರ 2024ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಡಿ ತಿದ್ದುಪಡಿ ತರಲಾಗಿತ್ತು. 2023 ಡಿಸೆಂಬರ್ ತಿಂಗಳಲ್ಲಿ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯ ಸ್ಥಾನ ಹಾಗೂ ವರ್ಗವಾರು ಮೀಸಲು ಸಂಖ್ಯೆಯನ್ನು ಪ್ರಕಟಿಸಿತ್ತು. ಆದರೆ, ಕರ್ನಾಟಕ ಪಂಚಾಯತ್ ರಾಜ್ಯ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸ್ಥಾನಗಳ ಸಂಖ್ಯೆ, ವರ್ಗವಾರು ಮೀಸಲಾತಿ ಸಂಖ್ಯೆ ಪ್ರಕಟಪಡಿಸಿರಲಿಲ್ಲ.
ಇದೀಗ ಇಳಿಕೆ ಮಾಡಲಾದ ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್‌ವಿಂಗಡನೆ ಗಡಿ ಕ್ಷೇತ್ರಗಳ ಸಂಖ್ಯೆ ಪ್ರಕಟಗೊಂಡಿದ್ದು, 2016ರಲ್ಲಿ ಇದ್ದ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಈ ಬಾರಿ ಕೆಲವೊಂದು ಕ್ಷೇತ್ರಗಳು ಅದಲು-ಬದಲಾಗಿದೆ. ಅದಲ್ಲದೇ ಕಳೆದ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇದ್ದ ಕ್ಷೇತ್ರಗಳ ಹೆಸರು ಈ ಬಾರಿ ಬದಲಾವಣೆ ಮಾಡಲಾಗಿದೆ.
ಮಡಿಕೇರಿ-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿನ ಗ್ರಾಮ ಪಂಚಾಯತ್‌ಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸೇರ್ಪಡೆ ಮಾಡಲಾಗಿದ್ದು, ನಾಪೋಕ್ಲು ಕ್ಷೇತ್ರದೊಂದಿಗೆ ಸೇರಿಕೊಂಡಿದ್ದ ಹೊದ್ದೂರು ಗ್ರಾಮ ಪಂಚಾಯತ್ ಭಾಗವನ್ನು ಕಾಂತೂರು ಮೂರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ. ಸಿದ್ದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿದ್ದ ಹಾಲುಗುಂದ ಗ್ರಾಮ ಪಂಚಾಯತ್ ಭಾಗವನ್ನು ಇದೀಗ ಹಾಲುಗುಂದ ಎಂದು ಹೊಸ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಸ್ಥಾಪಿಸಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ 7, ಸೋಮವಾರಪೇಟೆ 6, ಕುಶಾಲನಗರ 5, ವೀರಾಜಪೇಟೆ 5, ಪೊನ್ನಂಪೇಟೆ ತಾಲೂಕಿನಲ್ಲಿ 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಸೇರಿ ಒಟ್ಟು 29 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಜಿಲ್ಲೆಯಲ್ಲಿ ಮರುಸ್ಥಾಪನೆಯಾಗಿದೆ. ಜುಲೈ ಎರಡನೇ ವಾರದಲ್ಲಿ ಕ್ಷೇತ್ರವಾರು ಮೀಸಲು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಮಿನಿ ಸಮರಕ್ಕೆ ಎಲ್ಲಾ ಪಕ್ಷಗಳು ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ಗಡಿ ಆಯೋಗ ಜನ ಸಂಖ್ಯಾ ಆಧಾರದಲ್ಲಿ ಕ್ಷೇತ್ರ ವಿಂಗಡನೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಒಟ್ಟು 29 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳು ಕಡಿತಗೊಂಡು 25 ಕ್ಷೇತ್ರಗಳಿಗೆ ಸೀಮಿತಗೊಳಿಸಿ 2023ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಸಂದರ್ಭದಲ್ಲಿ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಹೋರಾಟದ ಮೂಲಕ ಮತ್ತೆ 4 ಕ್ಷೇತ್ರಗಳ ಸೇರ್ಪಡೆಗೆ ಸಹಕರಿಸಿದ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪನವರ ಕೋರಿಕೆ ಮೇರೆಗೆ ನ್ಯಾಯಾಂಗ ಮತ್ತು ಕಾರ್ಯಾಂಗಗಳಲ್ಲಿ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಪ್ರಶ್ನೆ ಮಾಡಿ ಮನವರಿಕೆ ಮಾಡಿದ್ದರು. ನಂತರದಲ್ಲಿ ಕ್ಯಾಬಿನೆಟ್ ಮುಂದೆ ಈ ಪ್ರಾಸ್ತಾವ ಚರ್ಚೆಗೆ ಬಂದು ಕೊಡಗಿನ ಭೌಗೋಳಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಸರಕಾರದ ಮುಂದಿಟ್ಟು ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ 29 ಕ್ಷೇತ್ರಗಳು ಉಳಿದಿವೆ.
-ತೆನ್ನಿರ ಮೈನಾ, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ