ಪ್ರಶಾಂತ ಪರಿಸರದಲ್ಲಿ 45 ನಿಮಿಷಗಳ ಓದು!
ಪುಸ್ತಕ ಪ್ರೇಮಿಗಳಿಗೊಂದು ವಿನೂತನ ಕಾರ್ಯಕ್ರಮ
ಮಂಗಳೂರು: ನಿಮಗೆ ಪುಸ್ತಕ ಓದಲು ಮನಸ್ಸಿದೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಮನೆಯಲ್ಲಿಲ್ಲ, ಅಥವಾ ಕೈಯಲ್ಲಿರುವ ಮೊಬೈಲ್ ಫೋನ್ ಗೀಳು ನಿಮ್ಮ ಮೆಚ್ಚಿನ ಪುಸ್ತಕ ಓದಲು ಸಮಯಾವಕಾಶ ನೀಡುತ್ತಿಲ್ಲವೇ? ಚಿಂತೆ ಬೇಡ, ಮಂಗಳೂರಿನ ಪುಸ್ತಕ ಪ್ರೇಮಿಗಳ ತಂಡ (ಬುಕಹಾಲಿಕ್ಸ್) ತಿಂಗಳಿಗೊಮ್ಮೆ ನಿಶ್ಶಬ್ದದಿಂದ ಕೂಡಿದ ಪ್ರಶಾಂತ ವಾತಾವರಣದಲ್ಲಿ ನಿಮ್ಮ ಆಯ್ಕೆಯ, ನಿಮ್ಮ ಇಷ್ಟದ ಪುಸ್ತಕ ಓದಲು 45 ನಿಮಿಷಗಳ ಕಾಲಾವಕಾಶ ಒದಗಿಸಿಕೊಡಲಿದೆ.
ಓದುವ ಹವ್ಯಾಸವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ 2018ರಿಂದ ಆರಂಭಗೊಂಡ ಬುಕಹಾಲಿಕ್ಸ್ ತಂಡವು ಕಳೆದ ಆರು ವರ್ಷಗಳಿಂದ ಹಲವು ರೀತಿಯ ಕಾರ್ಯಕ್ರಮಗಳ ಮೂಲಕ ಗಮನಸೆಳೆಯುತ್ತಿದೆ. ಇದರ ಮುಂದಿನ ಭಾಗವಾಗಿ ತಂಡದ ಸಹ ಸಂಸ್ಥಾಪಕಿ, ವೃತ್ತಿಯಲ್ಲಿ ಸಿಎ ಆಗಿರುವ ಹಸ್ತ ನಾರಾಯಣ್‌ರವರು ನಗರದ ಕದ್ರಿ ರಾಕ್ಸ್‌ನಲ್ಲಿ ತಿಂಗಳಿಗೊಮ್ಮೆ 45 ನಿಮಿಷಗಳ ಪ್ರಶಾಂತತೆಯ ಓದು ಕಾರ್ಯಕ್ರಮ ಆರಂಭಿಸಿದ್ದಾರೆ.
‘ಬುಕ್ಡ್ ಇನ್ ಸೈಲೆನ್ಸ್’ ಎಂಬ ಹೆಸರಿನಲ್ಲಿ ಅ.6ರಂದು ಈ ಕಾರ್ಯಕ್ರಮ ಆರಂಭಗೊಂಡಿದೆ. ಕದ್ರಿ ರಾಕ್ಸ್‌ನ ವಿಶಾಲವಾದ ತೆರೆದ ಪ್ರದೇಶದಲ್ಲಿ ಹಾಕಲಾಗಿರುವ ಚೆಯರ್‌ಗಳು, ತೂಗುವ ಚೆಯರ್‌ಗಳು, ನೆಲಹಾಸು, ಸೋಫಾ ಮೊದಲಾದವುಗಳಲ್ಲಿ ಪುಸ್ತಕಪ್ರಿಯರು ತಮ್ಮ ಇಷ್ಟದ ಪುಸ್ತಕಗಳನ್ನು ತಂದು ಯಾವುದೇ ಅಡೆತಡೆ ಇಲ್ಲದೆ 45 ನಿಮಿಷಗಳ ಕಾಲ ಓದಬಹುದು. ತಿಂಗಳಿಗೆ ಒಂದು ರವಿವಾರ ಈ ಓದಿಗಾಗಿ ಮೀಸಲಿಡಲಾಗುತ್ತದೆ. ಓದಿನ ಬಳಿಕ ತಾವು ಓದಿದ ಪುಸ್ತಕದ ಬಗ್ಗೆ ಸೇರಿರುವರು ಪರಸ್ಪರ ಮಾಹಿತಿ ಹಂಚಿಕೊಳ್ಳಲು, ಪುಸ್ತಕ ಓದಿನ ಹವ್ಯಾಸವನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲು ಅವಕಾಶವೂ ನೀಡಲಾಗುತ್ತದೆ’ ಎನ್ನುತ್ತಾರೆ ಹಸ್ತ ನಾರಾಯಣ್.
ಇವೆಲ್ಲವೂ ಯಾವುದೇ ಸದಸ್ಯ ಅಥವಾ ನೋಂದಣಿ ಶುಲ್ಕರಹಿತವಾಗಿ ಉಚಿತವಾಗಿ ಪುಸ್ತಕ ಓದಿನ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ನಡೆಸುವ ಕಾರ್ಯಕ್ರಮವಾಗಿದೆ. 2018ರಲ್ಲಿ ಪುಸ್ತಕ ಪ್ರಿಯರಾದ ಐವರಿಂದ ಆರಂಭಗೊಂಡ ತಂಡವು ಸದಸ್ಯ 200 ಸದಸ್ಯರಿಂದ ಕೂಡಿದೆ. ಈ ತಂಡ ಪುಸ್ತಕ ಓದಿನ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಹಸ್ತ ನಾರಾಯಣ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
‘ಈ 45 ನಿಮಿಷಗಳ ಪ್ರಶಾಂತತೆಯ ಓದಿನ ಪ್ರಥಮ ರವಿವಾರ 20 ಮಂದಿ ಆಗಮಿಸಿದ್ದರು. ಅವರಲ್ಲಿ ಬಹುತೇಕರು 25ರಿಂದ 35 ವರ್ಷದೊಳಗಿನವರು. ಓದಿನ ಆಸಕ್ತಿಯಿಂದ ಪುಸ್ತಕದೊಂದಿಗೆ ಬಂದವರಲ್ಲಿ ವಿದ್ಯಾರ್ಥಿಗಳು, ಗೃಹಿಣಿಯರೂ ಸೇರಿದ್ದರು. ಬಂದವರೆಲ್ಲರೂ ಮತ್ತೆ ಈ ಕಾರ್ಯಕ್ರಮ ಮುಂದಿನ ತಿಂಗಳೂ ಮುಂದುವರಿಸುವ ಬೇಡಿಕೆ ಇರಿಸಿದ್ದಾರೆ’ ಎಂದು ಹಸ್ತ ನಾರಾಯಣ್ ತಿಳಿಸಿದ್ದಾರೆ.
ತಂಡದ ಸದಸ್ಯರು ಪ್ರತಿ ತಿಂಗಳ ಮೂರನೇ ರವಿವಾರ ಸಭೆ ಸೇರಿ ವಿವಿಧ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಮೂಡಿಸುತ್ತೇವೆ. ಬುಕಹಾಲಿಕ್ಸ್ ತಂಡವು ಮುಂದಿನ ಕಾರ್ಯಕ್ರಮವಾಗಿ ವಿಶೇಷ ಲೇಖಕರಿಂದ ಹಾರರ್ ಕಥೆಗಳ ಬಗ್ಗೆ ಚರ್ಚೆ ನಡೆಸಲು ಚಿಂತಿಸಿದೆ. ಇದೇ ವೇಳೆ ಮಕ್ಕಳಿಗಾಗಿ ಕಥೆ ಹೇಳುವ ಕಾರ್ಯಕ್ರಮವನ್ನು ಆಯೋಜಿಸುವ ಚಿಂತನೆಯನ್ನೂ ನಡೆಸಿದೆ.
ಬುಕಹಾಲಿಕ್ಸ್ ತಂಡವನ್ನು ನಿರ್ವಹಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಗ್ರಂಥಾಲಯ ಮತ್ತು ಪುಸ್ತಕ ಕಾರ್ಯಗಳ ಪ್ರಮುಖರಾಗಿ ಹಾಗೂ ಅಧ್ಯಕ್ಷೆಯಾಗಿ ಶರೋನ್ ಡಯಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷೆ ಮತ್ತು ಕಾರ್ಯಕ್ರಮ ಸಂಯೋಜಕರಾಗಿ ಭಾಗ್ಯಾ ಕುಲಾಲ್, ಕಾರ್ಯದರ್ಶಿಯಾಗಿ ಡಾ.ಅನನ್ಯಾ ಮಡಿವಾಳ್, ಸದಸ್ಯತ್ವ ಸಂಯೋಜಕರಾಗಿ ದಾಮೋದರ್ ಬಾಳಿಗಾ ಮತ್ತು ಸಭೆಯ ಮುಖ್ಯಸ್ಥರಾಗಿ ಅನೂಪ್ ಪೈ, ತಂಡದ ಸಲಹೆಗಾರರಾಗಿ ಅಮರ್ ಕಾಮತ್ ಸಹಕರಿಸುತ್ತಿದ್ದಾರೆ.
ಯುವಜನತೆಯಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದೆ, ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಅಪವಾದವನ್ನು ದೂರ ಮಾಡುವ ಸಲುವಾಗಿ ನಮ್ಮ ಬುಕಹಾಲಿಕ್ಸ್ ತಂಡ ಹುಟ್ಟಿಕೊಂಡಿತ್ತು. ಹಲವು ಕಾರ್ಯಕ್ರಮಗಳ ಮೂಲಕ ಪುಸ್ತಕ ಓದುಗರನ್ನು ಒಟ್ಟುಗೂಡಿಸಿ ಮುಂದುವರಿಯುತ್ತಿರುವ ತಂಡವು ಈ ‘ಬುಕ್ಡ್ ಇನ್ ಸೈಲೆನ್ಸ್’ ಎಂಬ ವಿನೂತನ ಪರಿಕಲ್ಪನೆಯನ್ನು ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಿಂಗಳ ಒಂದು ರವಿವಾರದ 45 ನಿಮಿಷಗಳನ್ನು ಈ ಕಾರ್ಯಕ್ಕಾಗಿ ಮೀಸಲಿಡಲು ನಿರ್ಧರಿಸಲಾಗಿದೆ.
-ಹಸ್ತ ನಾರಾಯಣ್, ಸಹ ಸಂಸ್ಥಾಪಕರು, ಬುಕಹಾಲಿಕ್ಸ್ ತಂಡ.