ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ : ‘ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಹಂಸಿನಿ ಗೌಡ ’
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಮಂಚೇನಹಳ್ಳಿ ನಿವಾಸಿ ಮೋಹನ್, ನಂದಿನಿ( ಸುಮಾ)ದಂಪತಿಯ ಪುತ್ರಿ ಹಂಸಿನಿಗೌಡ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್’ ಪುಸ್ತಕದಲ್ಲಿ ಹೆಸರು ಮಾಡಿದ್ದಾಳೆ.
2021ರ ಅಕ್ಟೋಬರ್ 27 ರಂದು ಜನಿಸಿರುವ ಹಂಸಿನಿಗೌಡ ಎರಡುವರೆ ವರ್ಷಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದು, ಕನ್ನಡ ವರ್ಣಾಮಾಲೆಯಲ್ಲಿ 49 ಅಕ್ಷರವನ್ನು ಹೇಳುತ್ತಾಳೆ.ಇಂಗ್ಲಿಷ್ ವರ್ಣ ಮಾಲೆಯಲ್ಲಿ 26 ಅಕ್ಷರವನ್ನು ಉದಾಹರಣೆ ಸಹಿತವಾಗಿ ಹೇಳುವುದು, 1 ರಿಂದ 20 ಅಂಕಿಯನ್ನು ಮೂರು ಭಾಷೆಯಲ್ಲಿ ಹೇಳುವುದು, 20 ವಾಹನಗಳನ್ನು ಗುರುತಿಸಲಿದ್ದು, 269 ಚಿತ್ರಗಳನ್ನು ಗುರುತು ಮಾಡಲಿದ್ದು, 10 ನ್ಯಾಷನಲ್ ಸಿಂಬಲ್ಸ್ ಹೇಳುತ್ತಾಳೆ.
ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ 8 ಕವಿಗಳು, 12 ಭಾರತೀಯ ಐತಿಹಾಸಿಕ ಸ್ಥಳಗಳು, ದೇಹದ 25 ಭಾಗಗಳು, 12 ರಾಷ್ಟ್ರೀಯ ಚಿಹ್ನೆಗಳನ್ನು ತಿಳಿಸಲಿದ್ದು, ವಾರಗಳು, ತಿಂಗಳುಗಳನ್ನು ಹೇಳುತ್ತಾಳೆ. ಇಂಗ್ಲಿಷ್ ನರ್ಸರಿ 7ರೈಮ್ಸ್ , 9 ಶ್ಲೋಕ, 10 ಪ್ರಾಣಿಗಳ ಶಬ್ಧ ಅನುಸರಣೆ ಮಾಡುವುದರ ಜೊತೆಗೆ ರಾಷ್ಟ್ರಗೀತೆ ಹೇಳುತ್ತಾರೆ ಎಂದು ಹಂಸಿನಿಗೌಡ ತಂದೆ ಮೋಹನ್ ತಿಳಿಸಿದ್ದಾರೆ.
ಬಾಲಕಿಯ ತಾಯಿ ನಂದಿನಿ(ಸುಮಾ)ಅವರು, ಪುತ್ರಿಗೆ ಮನೆಯಲ್ಲೇ ಈ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಿದ್ದು, ಈ ಸಣ್ಣ ವಯಸ್ಸಿನಲ್ಲಿ ಹಾಸನ ಜಿಲ್ಲೆಯಿಂದ ಮೊದಲಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ.