ಜಗನ್ಮೋಹನ ಎಂಬ ಹುಡುಗನೂ, ಅವನದೊಂದು ಹಳೆಯ ಬೈಕೂ...

ಆತನ ಹೆಸರು ಜಗನ್ಮೋಹನ. ನಾವು ಪ್ರೀತಿಯಿಂದ ಮನು ಎಂದು ಕರೆಯುತ್ತೇವೆ. ಆ ಪ್ರೀತಿಗೆ ವಿಶೇಷ ಕಾರಣವೂ ಇದೆ. ಮೊನ್ನೆ ಇಂಡಿಯಾ -ಪಾಕಿಸ್ತಾನ ಕ್ರಿಕೆಟ್ ಮ್ಯಾಚ್‌ನ ದಿನವೇ ನಮ್ಮನೆಯ ಟಿ.ವಿ. ಹಾಳಾಗಿತ್ತು. ಮನುವಿಗೆ ಎಂಟು ಸಲ ಕಾಲ್ ಮಾಡಿದ ನಂತರ ರಾತ್ರಿ ಆತ ರಿಪೇರಿಗೆ ಬಂದಾಗ ಅರ್ಧ ಮ್ಯಾಚ್ ಮುಗಿದಿತ್ತು.
ಸರ್ ಕ್ಷಮಿಸಿ ಎಂದು ಟಿ.ವಿ ಬಿಚ್ಚುತ್ತಲೇ ತಡವಾದುದದಕ್ಕೆ ಕಾರಣ ಹೇಳುತ್ತಿದ್ದ. ಅದೇನೋ ಒಂದನ್ನು ಕಳಚಿ ಇನ್ನೊಂದನ್ನು ಸೇರಿಸಿ, ಯಾವುದನ್ನೋ ಟೈಟ್ ಮಾಡಿ ಕ್ರಿಕೆಟ್ ಕಾಣಿಸುವ ಹಾಗೆ ಮಾಡಿ ರೂ. 900ರ ಬಿಲ್ಲು ಕೊಟ್ಟು, ‘‘ಸರಿ ಸರ್, ನಾನೀಗ ಹೊರಡುವೆ, ಇನ್ನು ಎರಡು ಕಡೆಗೆ ಹೋಗಲಿಕ್ಕಿದೆ’’ ಎಂದು ಬೈಕ್ ಸ್ಟಾರ್ಟ್ ಮಾಡಿ ಆ ಕತ್ತಲೆಗೆ ಗುಡ್ಡ ಏರಿ ಮಾಯವಾದ.
ಮನುವಿನಂಥ ಯುವಕರು ನಿಮ್ಮ ಊರಲ್ಲೂ ಇರಬಹುದು. ಪಂಪು ರಿಪೇರಿ, ಟಿವಿ ರಿಪೇರಿ, ಸಣ್ಣಪುಟ್ಟ ತೊಟ್ಟಿ, ನೀರಿನ ಪೈಪು, ಸಂಪು ಇತ್ಯಾದಿಗಳ ಅಡಚಣೆಗಳನ್ನು ಸರಿಪಡಿಸಿ ಸೂಕ್ತ ಸಂಭಾವನೆಗಿಟ್ಟಿಸಿ ಬೈಕ್ ಹತ್ತಿ, ಗುಡ್ಡ ಏರಿ ಇನ್ಯಾವುದೋ ಮನೆಯ ಅಂಗಳಕ್ಕೆ ಇಳಿದು ಅಲ್ಲೂ ಅದೇ ಕೆಲಸ ಮಾಡಿ ಸೈ ಎನಿಸುವ ಹುಡುಗರಿವರು. ಇವರ ಸ್ವಯಂ ಸೊತ್ತುಗಳ ಪಟ್ಟಿ ಹೀಗಿದೆ. ಒಂದು ಹಳೆಯ ಬೈಕು, ಅಷ್ಟೇ ಹಳೆಯ ಹೆಲ್ಮೆಟ್, ಒಂದು ಟಿ-ಶರ್ಟ್, ಬೆನ್ನಿಗೆ ಅಂಟಿದ ಬಟ್ಟೆ ಚೀಲ, ಬೈಕಿನ ಎಡಬಲದಲ್ಲಿ ಮತ್ತೊಂದಷ್ಟು ಸುತ್ತಿಗೆ, ವಯರ್, ಸ್ಕ್ರೂ ಡ್ರೈವರ್, ಸ್ಪಾನರ್ ಇತ್ಯಾದಿಗಳ ಲಗೇಜ್ ಬಾಕ್ಸ್. ಸುಮ್ಮಗೆ ಇವರ ವಿದ್ಯಾಭ್ಯಾಸ ಕೇಳಿ ನೋಡಿ... ಎಸೆಸೆಲ್ಸಿ ಅಥವಾ ಪಿಯುಸಿ. ನಾಲ್ಕೈದು ಬಾರಿ ಫೇಲಾದವರೂ ಇರುತ್ತಾರೆ. ಸಂಕೋಚ ಇಲ್ಲದೆ ವಿದ್ಯಾರ್ಹತೆಯನ್ನು ಬಹಿರಂಗಪಡಿಸುವವರು ಇದ್ದಾರೆ.
ಈಗ ನೀವೇ ಲೆಕ್ಕ ಹಾಕಿ, ಮನು ನನ್ನ ಮನೆಗೆ ಬರುವ ಮುಂಚೆ ಆ ದಿನ 12 ಕಡೆಗೆ ಹೋಗಿದ್ದಾನೆ. ಮತ್ತೆ ಎರಡು ಮೂರು ಕಡೆ ಹೋಗಿ ರಾತ್ರಿ ಹನ್ನೆರಡು ಗಂಟೆಗೆ ಮನೆಗೆ ತಲುಪುತ್ತಾನೆ. ಬೆಳ್ಳಂಬೆಳಗ್ಗೆ ಏಳುವರೆಗೆ ಅವನ ದುಡಿಮೆ ಸ್ಟಾರ್ಟ್. ಅವನ ಆ ದಿನದ ದುಡಿಮೆ ಸುಮಾರು ಹದಿನೈದು ಸಾವಿರ ರೂಪಾಯಿ! ಕನಿಷ್ಠ ಅಂದರೆ ಅದು ರೂ. 8,000ಕ್ಕೂ ಇಳಿಯಬಹುದು. ಸರಾಸರಿ ಹತ್ತಕ್ಕೆ ಅಡ್ಡಿ ಇಲ್ಲ! ಅದಕ್ಕಿಂತ ಕಡಿಮೆ ಇಲ್ಲವೇ ಇಲ್ಲ. ಮನೆಯೇ ಅವನ ಗ್ಯಾರೇಜ್. ಊರ ನಡುವೆ ಬೇರೆ ಬಾಡಿಗೆ ಕೋಣೆಗಳಿಲ್ಲ. ಕೆಲವೊಂದು ಹಾಳಾದ ಟಿ.ವಿ. ರಿಪೇರಿಯ ಇನ್ನಿತರ ವಸ್ತುಗಳನ್ನು ಇನ್ನೆಲ್ಲೋ ಕೊಟ್ಟು ಸರಿಪಡಿಸಿಕೊಂಡು ತರುತ್ತಾನೆ. ಜೋಡಿಸುತ್ತಾನೆ.
ಇದೇ ವಯಸ್ಸಿನ ನನ್ನೂರಿನ ಇನ್ನೊಂದಷ್ಟು ಮುಖಗಳನ್ನು ನೋಡಿ. ಮನುವಿನಷ್ಟೇ 28-35ರ ವಯಸ್ಸಿನ ಯುವಕರವರು. ಪ್ರತೀ ಊರುಗಳಿಂದ ಇಂತಹವರು ಹತ್ತಿಪ್ಪತ್ತು ಮಂದಿಯಾದರೂ ಬೆಳಗ್ಗಿನ ಕೆಂಪು ಬಸ್ಸು ಹತ್ತಿ ಪೇಟೆ ಕಡೆಗೆ ಹೋಗುತ್ತಾರೆ. ಕೆಲವರದು ಸ್ವಂತ ಬೈಕ್. ಕೆಲವರು ಊರು ಬಿಟ್ಟು ಮಹಾನಗರಗಳಲ್ಲಿ ಖಾಯಂ ರೂಮ್ ಮಾಡಿ ಬದುಕುತ್ತಿರಬಹುದು. ಅವರಲ್ಲಿ ಇಂಜಿನಿಯರ್ ಓದಿದವರಿದ್ದಾರೆ ಮತ್ತು ಅದಕ್ಕೆ ಸಮಾನಾಂತರ ಪದವಿಯನ್ನು ಪೂರೈಸಿದವರೂ ಇದ್ದಾರೆ. ಸರಾಸರಿ ವೇತನ ದಿನಕ್ಕೆ ರೂ. 600 ರಿಂದ 1,000ದವರೆಗೆ. ಬಹಳಷ್ಟು ಮಂದಿ ತಿಂಗಳಿಗೆ 12ರಿಂದ 18 ಸಾವಿರದವರೆಗೆ ದುಡಿಯುವವರು. ನಿಮಗೆ ಗೊತ್ತಿರಬೇಕು, ನಮ್ಮ ದೇಶದ ಶೇ. 65ಕ್ಕಿಂತ ಹೆಚ್ಚು ಇಂಜಿನಿಯರ್ ಪದವೀಧರರು ಕೇವಲ ರೂ. 12,000ಕ್ಕಿಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರಂತೆ!
ಹಳ್ಳಿಯ ಮತ್ತೊಂದು ಸಮಸ್ಯೆ ಕೇಳಿ. ಅದನ್ನೂ ನಮ್ಮನೆ- ನಮ್ಮಹಳ್ಳಿಯಿಂದಲೇ ಆರಂಭಿಸುವೆ. ನಮ್ಮನೆಯ ಕೊನೆಯ ಕೃಷಿಕ ನಾನೇ ಇರಬಹುದೇ-ಈ ಪ್ರಶ್ನೆ ನನಗೆ ಬಹಳ ದಿನಗಳಿಂದ ಕಾಡುತ್ತಿದೆ. ಕೇವಲ ನಾನೊಬ್ಬನೇ ಅಲ್ಲ, ನನ್ನೂರಿನ ನಮ್ಮ ಒಂದು ಗ್ರಾಮದ ಲೆಕ್ಕ ತೆಗೆದುಕೊಂಡರೆ ಈ ಸಂಖ್ಯೆ ಬಹಳ ದೊಡ್ಡದಿದೆ. ಮದುವೆ ಆಗಿ ಮನೆ, ಊರು ಬಿಟ್ಟ ಹೆಣ್ಣು ಮಕ್ಕಳ ತಂದೆಯಾಗಿರುವವರಷ್ಟೇ ಅಲ್ಲ ಗಂಡು ಮಕ್ಕಳಿರುವ ಮನೆಯಲ್ಲೂ ತಂದೆ, ಅಜ್ಜ, ಅವರ ಅಜ್ಜ ಆಚರಿಸಿಕೊಂಡು ಈವರೆಗೆ ತಂದ ಕೃಷಿಯನ್ನು ಮುಂದುವರಿಸುವವರು ಇದ್ದಾರೆ ಎಂಬ ನಂಬಿಕೆ ಈಗ ನನಗಿಲ್ಲ. ನನ್ನ ಕುಟುಂಬದಲ್ಲೇ ಲೆಕ್ಕ ತೆಗೆದುಕೊಂಡರೆ ಹತ್ತಾರು ಮನೆಗಳಲ್ಲಿ ಇರುವ ಏಕಾಂಗಿ ಹೆಣ್ಮಕ್ಕಳಿಗೆ ಮದುವೆಯಾಗಿ ಉದ್ಯೋಗಸ್ಥರಾಗಿ ಅವರು ಈಗಾಗಲೇ ನಗರಮುಖಿಗಳಾಗಿದ್ದಾರೆ. ಏಕಾಂಗಿಯಾಗಿ ಉಳಿದ ನನ್ನಂತಹ ಪೋಷಕರು ಅನೇಕ ಕಾರಣಗಳಿಂದ ಕೃಷಿಯೊಂದಿಗೆ ಏಗುವಂತಾಗಿದೆ. ಇದನ್ನೆಲ್ಲಾ ನಾನು ಈ ಮುಂಚೆ ಬರೆದೂ ಆಗಿದೆ.
‘‘ಕಳೆದ ಸಲ 80 ಚೀಲ ಅಡಿಕೆ ಆಗಿತ್ತು. ಈ ಸಲದ್ದು 18 ಗೋಣಿ. ಬರೀ ಔಷಧಿ ಸಿಂಪಡಣೆಗೆ ರೂ. 40 ಸಾವಿರ ಬೇಕು, ಗೊಬ್ಬರ, ನೀರು. ಲೇಬರ್ ಎಲ್ಲ ಸೇರಿ ಬೇರೆ ಎರಡು ಲಕ್ಷ ಬೇಕೇ ಬೇಕು. ಈ ವರ್ಷದ ಆದಾಯ ಬರೀ ಕೆಲಸಗಾರರ ಕೂಲಿಗೆ ಸಾಕಾಗಲಿಕ್ಕಿಲ್ಲ. ಸಾಲದ ಕಂತು ಬೇರೆ ಇದೆ, ಮಕ್ಕಳ ಓದು, ಮದುವೆ ಮುಂಜಿ, ಓಡಾಟದ ಖರ್ಚು ಎಲ್ಲ ಸೇರಿದರೆ ಈ ಬಾರಿ ಬಚಾವಾಗ ಬೇಕಾದರೆ ಮತ್ತೊಂದು ಕಡೆ ನಾನು ಸಾಲ ಮಾಡಬೇಕಷ್ಟೇ, ಇದರೊಟ್ಟಿಗೆ ಕುಟುಂಬ ತರವಾಡಿನ ದೈವ-ದೇವಸ್ಥಾನಗಳ ಜೀರ್ಣೋದ್ಧಾರದ ವಂತಿಗೆ ಬೇರೆ. ಬದುಕು ನಿಭಾಯಿಸುವುದಾದರೂ ಹೇಗೆ?’’ ಎನ್ನುವ ಮೇರುಮಜಲು ರಾಮಣ್ಣಗೌಡರು ಪಡುವ ವೇದನೆಯಲ್ಲಿ ಅಂತಹ ಸಾವಿರಾರು ಕೃಷಿಕರ ಸಂಕಷ್ಟಗಳ ಧ್ವನಿಯಿದೆ. ಅವರಿಗೊಬ್ಬರಿಗಲ್ಲ ಅಡಿಕೆಯನ್ನು ನಂಬಿದವರಿಗೆ ಈ ಬಾರಿ ಸಾಮೂಹಿಕವಾಗಿ ಪ್ರಕೃತಿ ಬರೆ ಎಳೆದಿದೆ. ಶೇ. 10, 20 ಖೋತ ಆದದ್ದು ಇದ್ದೇ ಇದೆ. ಆದರೆ ಇಷ್ಟೊಂದು ವ್ಯತ್ಯಾಸ ಕಳೆದ ಎರಡು ಮೂರು ದಶಕಗಳಲ್ಲಿ ಇದೇ ಮೊದಲಿರಬೇಕು. ಒಂದು ವ್ಯವಸ್ಥೆಗೆ ಸೆಟ್ ಆದ ರೈತ ಈ ಆಳದಿಂದ ಮೇಲೆ ಬರುವುದಕ್ಕೆ ಭಾರೀ ಕಷ್ಟ ಪಡಬೇಕಾದ ಸಂದರ್ಭ ಎದುರಾಗಿದೆ.
ನಮ್ಮ ಜನವೂ ಹಾಗೆಯೇ. ಆದಾಯದ ಏರಿಳಿತವನ್ನು ಗಮನಿಸಿ ಮನೆಯ ಆರ್ಥಿಕತೆಯನ್ನು ಸರಿದೂಗಿಸುವುದಿಲ್ಲ, ಮೊದಲೆಲ್ಲ ಮದುವೆ ಒಂದೆರಡು ಕೂಡುಕಟ್ಟಿನಲ್ಲಿ ಮುಗಿಯುತಿತ್ತು. ಮದುವೆ, ಸಮ್ಮನ ಬರೀ ಅಷ್ಟೇ. ಈಗ ಐದಾರು ಕಾರ್ಯಕ್ರಮಗಳಿಗೆ ಸಮ್ಮೇಳಿತಗೊಂಡಿದೆ. ನಿಶ್ಚಿತಾರ್ಥ, ಹಳದಿ-ಮೆಹಂದಿ, ಸಂಗೀತ, ಮದುವೆ, ಡಿನ್ನರ್-ಬೀಗರೂಟ ಆ ಮನೆಗೆ ಈ ಮನೆಗೆ ಓಡಾಟ. ಎಲ್ಲ ಸೇರಿದರೆ ಸಂಬಂಧಿಕನೊಬ್ಬ ಐದಾರು ಬಾರಿಯಾದರೂ ಮದುವೆ ಮನೆಗೆ ಓಡಾಡಬೇಕಾಗುತ್ತದೆ. ಅದು ಬರಿಗಾಲಿನ ಓಡಾಟವಲ್ಲ. ಕಾರಿಗೆ ಪೆಟ್ರೋಲ್ ಸುರಿಯಬೇಕು, ಹೊಸ ವಸ್ತ್ರ ಕೊಳ್ಳಬೇಕು, ಚಿನ್ನದ ಅಲಂಕಾರ ಇರಬೇಕು, ಮೇಕಪ್‌ಗಾಗಿ ಮನೆ ಮಕ್ಕಳು ಪಾರ್ಲರಿಗೆ ಹೋಗಬೇಕು. ಅಯ್ಯೋ ಕೆಲವು ಮನೆಯ ಹೆಣ್ಣು ಮಕ್ಕಳು ಎದುರುಗಡೆ ಇದ್ದವರ ಚಪ್ಪಲಿಯಿಂದ ಅಳತೆ ಮಾಡಲು ಶುರು ಮಾಡುತ್ತಾರೆ. ಅದನ್ನು ಇನ್ನೊಬ್ಬರಿಗೆ ಬಿತ್ತಿ ಪಿತ್ತ ನೆತ್ತಿಗೇರುವಂತೆ ಮಾಡುತ್ತಾರೆ. ಇಂತಹ ತಲೆ ಹರಟೆ ಪ್ರತಿಷ್ಠೆಗಳು ಮೊದಲೆಲ್ಲ ಕೃಷಿಕರನ್ನು ಹೆಚ್ಚು ಬಾಧಿಸುತ್ತಿರಲಿಲ್ಲ. ಈಗ ಅಕ್ಷರವಂತ ಮನೆಮಕ್ಕಳು ಮನುಷ್ಯ ಘನತೆಯನ್ನು ಆತ ಧರಿಸಿಕೊಂಡ ವಸ್ತ್ರಾಭರಣಗಳಿಂದ, ಓಡಾಡುವ ಕಾರುಗಳಿಂದ ಮೌಲ್ಯಮಾಪನ ಮಾಡುವ ಕ್ರಮ ಸರಳವಾಗಿ ಬದುಕಬೇಕೆನ್ನುವ ಆ ಕುಟುಂಬದ ಯಜಮಾನನಿಗೆ ಸಂಕಷ್ಟ ತಂದೊಡ್ಡಿದೆ. ಪ್ರತೀ ಮನೆಯಲ್ಲೂ ಇಂತಹ ಮನಸ್ಥಿತಿ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಈ ಜಗತ್ತಿನ ಪ್ರತಿಯೊಬ್ಬನಿಗೂ ಬದುಕಲು ಬೇಕಾಗಿರುವುದು ಒಂದು ಹಿಡಿ ಅನ್ನ, ನಂಜಿಕೊಳ್ಳಲು ಸರಳ ವ್ಯಂಜನ, ಶುದ್ಧ 3-4 ಜೊತೆ ಬಟ್ಟೆ, ಒಂದು ಜತೆ ಚಪ್ಪಲಿ.
ಯಾವಾಗ ನಮ್ಮ ಮನೆಗೆ ಗಾಡಿ ಬಂತೋ ಅದು ಕುಡಿಯುವ ಇಂಧನ ದುಬಾರಿಯಾಗುತ್ತಾ ಹೋಯಿತು. ಬದುಕು ಏರು ಗತಿಯಲ್ಲಿ ಸಾಗಿತು. ಆ ಗಾಡಿಗೆ, ಕಟ್ಟುವ ಹೊಸ ಮನೆಗೆ, ತೋಟದ ಕೃಷಿಗೆ ಸಾಲ ಕೊಡುವ ಬ್ಯಾಂಕುಗಳು, ಕೊಟ್ಟ ಸಾಲವನ್ನು ಮನ್ನಾ ಮಾಡುವ ಸರಕಾರ ಇವೆಲ್ಲವೂ ಬದುಕಿನ ಬಣ್ಣವನ್ನು ಅನಗತ್ಯವಾಗಿ ವಿಸ್ತರಿಸುತ್ತಾ ಹೋಯಿತು.
ಉದ್ಯೋಗಸ್ಥ ಮಕ್ಕಳೇ ಇರಬೇಕಾಗಿಲ್ಲ, ಮಾರುಕಟ್ಟೆಗೆ ಬೆಸೆದುಕೊಂಡ ಮನೆಯಲ್ಲಿರುವ ಮಕ್ಕಳೇ ಸಾಕು, ಕೃಷಿಯಿಂದ ವಿಮುಖವಾಗುವ ಮನಸ್ಥಿತಿಯನ್ನು ಭಾಗಶಃ ನಮ್ಮ ಮಕ್ಕಳು ಅವರು ಓದಿರುವ ಅಕ್ಷರದೊಂದಿಗೆ ಆರಗಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರು ಓದಿರುವ ಯಾವ ಪಠ್ಯದಲ್ಲೂ ಸ್ವಾವಲಂಬನೆ, ನೆಮ್ಮದಿ, ಹಂಗಿಲ್ಲದೆ ಬದುಕುವುದು ಹೇಗೆ ಎನ್ನುವ ಯಾವ ಪಾಠವೂ ಇಲ್ಲದಿರುವುದು. ಪದವಿ ಪೂರೈಸಿ ಕಾಲೇಜು ಕಳಚಿದ ಯಾವುದಾದರೂ ವಿದ್ಯಾರ್ಥಿಯೊಬ್ಬ ಪದವಿ ಪತ್ರವನ್ನು ಮರೆತು ತೋಟಕ್ಕೆ ಇಳಿದುದ್ದನ್ನು ಅಥವಾ ನಮ್ಮೂರ ಜಗನ್ಮೋಹನನ ಹಾಗೆ ಬೆನ್ನಿಗೊಂದು ಚೀಲ ನೇತುಹಾಕಿ ಸ್ವಾವಲಂಬನೆಯ ಕಾಯಕವನ್ನು ಸ್ವಯಂ ಉದ್ಯೋಗವನ್ನಾಗಿಸಿದ್ದನ್ನು ನಾನು ನೋಡಿಲ್ಲ.