ತಂತ್ರಜ್ಞಾನ ಯುಗದಲ್ಲಿ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿ
ಹೊಸಕೋಟೆ: ‘ಗುಬ್ಬಚ್ಚಿಗಳ ದೊಡ್ಡ ಹಿಂಡಿನ ನಡುವೆ ನಾನು ಗುಬ್ಬಚ್ಚಿ ಮಾತ್ರ’ ಎಂದು ಎವಿಟಾ ಪೆರಾನ್ ಹೇಳಿದಂತೆ ನಾವು ಗುಬ್ಬಿಗಳನ್ನು ನೋಡುತ್ತಿದ್ದಂತೆ ನಮ್ಮಲ್ಲಿ ಮೃದು ಧೋರಣೆ ಮೂಡುತ್ತದೆ. ಚಿವ್ ಚಿವ್ ಎಂದು ಮುಂಜಾನೆಯಿಂದ ಸಂಜೆಯವರೆಗೆ ಮನೆಯ ಅಟ್ಟದಲ್ಲಿ ಮನೆಮಾಡಿಕೊಂಡಿದ್ದ ಈ ಪುಟ್ಟ ಹಕ್ಕಿ ಇಂದು ಕಣ್ಮರೆಯಾಗುತ್ತಿದೆ.
ಈ ಪುಟ್ಟ ಹಕ್ಕಿಯನ್ನು ಮುಂದಿನ ಪೀಳಿಗೆಗೆ ಚಿತ್ರದಲ್ಲಿ ತೋರಿಸುವ ಬದಲು ಸಂರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಹಂಚು ಅಥವಾ ತಗಡಿನ ಶೆಡ್‌ನ ಮನೆಯಲ್ಲಿ ಕಟ್ಟುತ್ತಿದ್ದ ಗೂಡು, ಅಂಗಳದಲ್ಲಿ ಸದಾ ನಮ್ಮೊಡನೆ ಸುಳಿದಾಡುತ್ತಿದ್ದುದು ಒಂದು ಅವಿಸ್ಮರಣೀಯ ಅನುಭವ.
‘ದಿ ನೇಚರ್ ಫಾರೆವರ್ ಸೊಸೈಟಿ ಆಫ್ ಇಂಡಿಯಾ’ ಸಂಸ್ಥಾಪಕ ಮುಹಮ್ಮದ್ ದಿಲಾವರ್ ಅವರು ಗುಬ್ಬಚ್ಚಿಗಳನ್ನು ಸಂರಕ್ಷಿಸಲು ಈ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ನಾಸಿಕ್‌ನಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಅವರ ಪ್ರಯತ್ನಗಳಿಗಾಗಿ ಟೈಮ್ ನಿಯತಕಾಲಿಕ ‘ಪರಿಸರದ ಹೀರೋಸ್ 2008’ ಎಂದು ಗುರುತಿಸಿ ಗೌರವಿಸಿತು.
ಬೆಟ್ಟ, ಗುಡ್ಡ, ತೋಟ ಮತ್ತು ಕಾಡು ಮುಂತಾದ ಹಸಿರಾಗಿರುವ ಪ್ರಕೃತಿಯ ಮಡಿಲನ್ನೇ ಹೆಚ್ಚಿನ ಪಕ್ಷಿ ಸಂಕುಲ ಆಯ್ದುಕೊಳ್ಳುತ್ತವೆ. ಆದರೆ ಗುಬ್ಬಚ್ಚಿ ಮಾತ್ರ ಸರ್ವವ್ಯಾಪಿ, ಅವು ಹಳ್ಳಿ, ಪಟ್ಟಣ ಎಂಬ ಗಡಿಗಳಿಲ್ಲದೇ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಆದರೆ ಇಂದು ಗುಬ್ಬಚ್ಚಿ ಸಂತತಿ ವಿನಾಶದಂಚಿಗೆ ಸರಿಯುತ್ತಿವೆ.
ಹಂಚಿನ ಮನೆ-ಕಟ್ಟಡಗಳು ಕಡಿಮೆಯಾಗಿ ಇತ್ತೀಚೆಗೆ ಆರ್.ಸಿ.ಸಿ. ಕಟ್ಟಡಗಳು ಹೆಚ್ಚಿದ್ದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನನುಕೂಲವುಂಟಾಗಿದೆ. ಆರ್.ಸಿ.ಸಿ. ಮನೆಗಳಲ್ಲಿ ಕಟ್ಟಿಗೆ, ರೀಪುಗಳು ಇಲ್ಲದ್ದರಿಂದ ಅವುಗಳಲ್ಲಿ ಗೂಡು ಕಟ್ಟಲು ಆಧಾರಗಳಿಲ್ಲದಂತಾಗಿದೆ. ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಬೇಕಾಗುವ ಅನುಕೂಲತೆಗಳು ಕ್ಷೀಣಿಸಿದುದರ ಪರಿಣಾಮ ಅವುಗಳ ಮೊಟ್ಟೆಗಳು ನಾಶವಾಗಿ ಗುಬ್ಬಚ್ಚಿ ಸಂತಾನ ಕ್ಷೀಣಿಸಲಾರಂಭವಾಯಿತು.ಮೊಬೈಲ್ ಫೋನ್ ಬಳಕೆ ವ್ಯಾಪಕವಾದುದರ ಪರಿಣಾಮ ನೆಟ್ವರ್ಕ್ ಕವರೇಜ್‌ಗಾಗಿ ಹಳ್ಳಿ ಹಳ್ಳಿಗಳಲ್ಲೂ, ಅರಣ್ಯ ಪ್ರದೇಶಗಳ ಮಧ್ಯೆಯೂ ಮೊಬೈಲ್ ಟವರ್‌ಗಳು ಹೆಚ್ಚಾಗುತ್ತಾ ಅದರ ಪರಿಣಾಮ ಗುಬ್ಬಚ್ಚಿ ಸಂತತಿಗಳ ಮೇಲೆ ಬೀರುತ್ತಿದೆ ಎನ್ನಲಾಗುತ್ತಿದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಪ್ರಜ್ಞಾವಂತ ನಾಗರಿಕರು ಹಾಗೂ ಜನ ಸಾಮಾನ್ಯರಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ. ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವುಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಬೇಕಾಗಿದೆ.