ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ರೈತ ದಂಪತಿ
ಮಂಡ್ಯ: ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಮಾಚಳ್ಳಿ ಗ್ರಾಮವು ಮದ್ದೂರು-ತುಮಕೂರು ಹೆದ್ದಾರಿಯ ಕೆಸ್ತೂರು ಬಳಿಯಿಂದ ಬಲಗಡೆಗೆ ಕೆಲವೇ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಹಿರಿಯ ದಂಪತಿ ರಾಧಾ-ವೆಂಕಟೇಶ್ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರಬಂದು ಇತ್ತೀಚೆಗೆ ಲಾಭದಾಯಕವಾಗಿರುವ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಮಾದರಿಯಾಗಿದ್ದಾರೆ.
ಆರು ವರ್ಷಗಳ ಹಿಂದೆ ಇವರಿಗೆ ಸೇರಿದ ಜಮೀನು ನೀಲಗಿರಿ ಮರಗಳ ತೋಪಾಗಿತ್ತು. ಆ ಜಮೀನಿನ ಕೆಲವು ಭಾಗದಲ್ಲಿ ಮಳೆಗಾಲದಲ್ಲಿ ರಾಗಿ, ನೆಲಗಡಲೆಯಂತಹ ಬೆಳೆಗಳನ್ನು ಬೆಳೆದುಕೊಂಡು ಜೀವನ ಸಾಗಿಸುತ್ತಿದ್ದರು. ನೀಲಗಿರಿ ತೋಪನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲು ತೀರ್ಮಾನಿಸಿದ ದಂಪತಿ, ಮರಗಳನ್ನು ಮಾರಾಟ ಮಾಡಿ ಭೂಮಿಯನ್ನು ಕೃಷಿಗಾಗಿ ಹದಗೊಳಿಸಿದರು. ರೇಷ್ಮೆ ಬೇಸಾಯ ಕೈಗೊಂಡರು. ನಂತರ ಕೃಷಿ ಇಲಾಖೆಯ ನೆರವು ಪಡೆದು ಭೂಮಿಯಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದಿದ್ದಾರೆ. ಈ ಸಮಗ್ರ ಕೃಷಿಯು ದಂಪತಿಗೆ ಲಾಭ ತಂದುಕೊಡುತ್ತಿದೆ.
ಸುಮಾರು 8 ಎಕರೆ ಪೈಕಿ ಮೂರೂವರೆ ಎಕರೆಯಲ್ಲಿ ರೇಷ್ಮೆ, ಎರಡು ಎಕರೆಯಲ್ಲಿ ರಾಗಿ ಬೆಳೆಯುತ್ತಾರೆ. ಉಳಿದ ಭೂಮಿಯಲ್ಲಿ ಮೆಣಸು, ಹಲಸು, ಬಾಳೆ, ಒಂದೊಂದು ಡ್ರ್ಯಾಗನ್, ಸೇಬು, ಚಕ್ಕೋತ, ಎರಡು ಮೂಸಂಬಿ, 12 ಸಪೋಟ, 10 ಸೀಬೆ, ಶ್ರೀಗಂಧದ ಮರ, 5 ಪರಂಗಿ ಮರಗಳನ್ನು ಬೆಳೆಸಿದ್ದಾರೆ. ಜಮೀನಿನ ಸುತ್ತ, ಬದುಗಳ ಮೇಲೆ ಮತ್ತು ಬೆಳೆಗಳ ಮಧ್ಯೆ 600 ತೆಂಗಿನ ಮರಗಳು ಕೈತುಂಬಾ ಫಲ ಕೊಡುತ್ತಿವೆ. ಇದಲ್ಲದೆ ಮನೆಗೆ ಬೇಕಾದ ಸೊಪ್ಪು, ತರಕಾರಿ ಬೆಳೆದುಕೊಳ್ಳುತ್ತಿದ್ದಾರೆ. ನಾಟಿ ಕೋಳಿ, ಬಾತುಕೋಳಿ, ಎಮ್ಮೆ, ಒಂದು ಜೊತೆ ಹಳ್ಳಿಕಾರ್ ಎತ್ತುಗಳನ್ನು ಸಾಕಿದ್ದಾರೆ. ಈ ಎತ್ತುಗಳಿಂದ ಜಮೀನಿನ ಉಳುಮೆ ಮಾಡುತ್ತಾರೆ. ಹೆಚ್ಚಾಗಿ ಕೃಷಿಗೆ ಕೊಟ್ಟಿಗೆ ಗೊಬ್ಬರ ಬಳಸುತ್ತಿರುವುದರಿಂದ ಉತ್ತಮ ಫಸಲು ಬರುತ್ತಿದೆ. ಐದು ಕೊಳವೆ ಬಾವಿಗಳನ್ನು ಕೊರೆಸಿದ್ದು, ಕೃಷಿಗೆ ನೀರಿನ ಸಮಸ್ಯೆ ಇಲ್ಲ.
ಪುತ್ರ, ಪುತ್ರಿ, ಅಳಿಯ ಸಾಥ್
ಈ ದಂಪತಿಯ ಕೃಷಿಗೆ ಪುತ್ರ ಎಂ.ವಿ. ಭರತ್‌ಗೌಡ, ಪುತ್ರಿ ಶ್ವೇತಾ, ಅಳಿಯ ಶಿಕ್ಷಕ ನಾಗರಾಜು ಕೂಡ ಸಾಥ್ ನೀಡುತ್ತಿದ್ದಾರೆ. ಅಪ್ಪ ಅಮ್ಮನ ಕೃಷಿಗೆ ನೆರವಾಗುವುದರೊಂದಿಗೆ ಸಮೀಪದ ಕೆಸ್ತೂರು ಗ್ರಾಮದಲ್ಲಿ ಆಟೊ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡು ಭರತ್‌ಗೌಡ ಸ್ವಂತ ಉದ್ಯೋಗ ಕಂಡುಕೊಂಡಿದ್ದಾರೆ. ‘ನನ್ನ ಅಪ್ಪ ಅಮ್ಮ ಸಂಪ್ರದಾಯದಂತೆ ಕೃಷಿಯನ್ನೇ ಕಾಯಕ ಮಾಡಿಕೊಂಡು ಬರುತ್ತಿದ್ದು, ಅವರಿಗೆ ನೆರವಾಗುತ್ತಿದ್ದೇನೆ. ಮತ್ತಷ್ಟು ವಿಭಿನ್ನ ಬೆಳೆಗಳನ್ನು ಬೆಳೆಯುವ ಚಿಂತನೆ ಇದೆ’ ಎನ್ನುತ್ತಾರೆ ಭರತ್‌ಗೌಡ.
ನಮಗೆ ಕೃಷಿಯೇ ಬದುಕು. ಚಿಕ್ಕಂದಿನಿಂದಲೂ ಬೇಸಾಯ ಮಾಡಿಕೊಂಡು ಬರುತ್ತಿದ್ದೇನೆ. ಶ್ರಮಪಟ್ಟು ದುಡಿದರೆ ಕೃಷಿ ಕೈಬಿಡುವುದಿಲ್ಲ. ಈಗ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಲಾಭ ಬರುತ್ತಿದೆ. ಕೃಷಿ ಯಿಂದ ನೆಮ್ಮದಿ ಮತ್ತು ಆರೋಗ್ಯ ಭಾಗ್ಯ ಸಿಕ್ಕಿದೆ.
-ವೆಂಕಟೇಶ್, ಸಮಗ್ರ ಕೃಷಿಕ
ಪ್ರತೀದಿನ ಜಮೀನಿಗೆ ಬಂದು ಕೆಲಸ ಮಾಡುವುದರಿಂದ ಒಂದು ರೀತಿಯ ಆತ್ಮತೃಪ್ತಿ ಜತೆಗೆ ನೆಮ್ಮದಿ ಸಿಗುತ್ತದೆ. ಕೂಲಿ ಆಳುಗಳನ್ನು ಅವಲಂಬಿಸದೆ ನಾನು ಹಾಗೂ ನನ್ನ ಪತಿ ಸೇರಿ ಬೇಸಾಯ ಮಾಡುತ್ತಿದ್ದು, ನಮಗೆ ಇದರಲ್ಲಿ ಖುಷಿ ಇದೆ.
-ರಾಧಾ, ವೆಂಕಟೇಶ್ ಪತ್ನಿ