‘ಬೇರೆ ರಾಜಕಾರಣಿಗಳ ಹಾಗೆ ಅಲ್ಲದ’ ಹೆಗ್ಡೆಯವರಿಗೆ ಕೆಲವು ಪ್ರಶ್ನೆಗಳು
ಸುಮಾರು 25 ವರ್ಷಗಳ ಹಿಂದೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್‌ನಲ್ಲಿ ಮುಸ್ಲಿಮ್ ಸಂಘಟನೆಯೊಂದು ಆಯೋಜಿಸಿದ್ದ ದೊಡ್ಡ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಆಗ ಬಹುಶಃ ಬ್ರಹ್ಮಾವರ ಶಾಸಕರಾಗಿದ್ದ ಜಯಪ್ರಕಾಶ್ ಹೆಗ್ಡೆ ಭಾಷಣಕ್ಕೆ ನಿಂತರು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು, ಮುಸ್ಲಿಮರೇ ಹೆಚ್ಚಿದ್ದರು. ಆಗ ಭಾಷಣ ಪ್ರಾರಂಭಿಸಿದ ಹೆಗ್ಡೆಯವರು ‘‘ನಾನಿಲ್ಲಿ ನಿಮ್ಮನ್ನು ಖುಷಿಪಡಿಸಿ ನಿಮ್ಮ ಚಪ್ಪಾಳೆ ಗಿಟ್ಟಿಸುವ ರೀತಿಯಲ್ಲಿ ಮಾತಾಡುವುದಿಲ್ಲ’’ ಎಂದೇ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ‘‘ಇದಪ್ಪಾ.. ಒಬ್ಬ ಪ್ರಬುದ್ಧ ಜನಪ್ರತಿನಿಧಿಯ ಮಾತು’’ ಅಂದುಕೊಂಡೆ. ಜಯಪ್ರಕಾಶ್ ಹೆಗ್ಡೆ ಅಂದ್ರೆ ಬೇರೆ ರಾಜಕಾರಣಿಗಳ ಹಾಗೆ ಅಲ್ಲ, ಅವರೊಬ್ಬ ನೇರ ನಿಷ್ಠುರ ನಡೆನುಡಿಯ, ಪ್ರಬುದ್ಧ ಚಿಂತನೆಯ ರಾಜಕಾರಣಿ ಎಂದು ಅವರ ಬಗ್ಗೆ ಅಭಿಮಾನ ಮೂಡಿತು. ಅವರ ಬಗ್ಗೆ ಅದೇ ಅಭಿಪ್ರಾಯ ಆಗಾಗ ಅಲ್ಲಲ್ಲಿ ಕೇಳುತ್ತಲೇ ಇತ್ತು. 2005ರಲ್ಲಿ ಆದಿಉಡುಪಿ ಬೆತ್ತಲೆ ಪ್ರಕರಣ ನಡೆಯಿತು. ಅದರ ಬಗ್ಗೆ ವಿಧಾನ ಸೌಧದಲ್ಲಿ ಧ್ವನಿ ಎತ್ತಿ ಬೆತ್ತಲೆ ಪ್ರಕರಣದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದು ಜಯಪ್ರಕಾಶ್ ಹೆಗ್ಡೆ ಅವರೇ. ಅದಕ್ಕಾಗಿ ಅವರು ರಾಜಕೀಯವಾಗಿಯೂ ಸಾಕಷ್ಟು ಬೆಲೆ ತೆರಬೇಕಾಯಿತು ಎಂದೂ ಹೇಳಲಾಗುತ್ತದೆ.
ಆಮೇಲೆ ಕಳೆದೆರಡು ದಶಕಗಳಲ್ಲಿ ಒಟ್ಟು ಕರಾವಳಿ, ಉಡುಪಿ ಜಿಲ್ಲೆ, ಇಲ್ಲಿನ ರಾಜಕೀಯ ಭಾರೀ ಬದಲಾಗಿದೆ. ಅದೇ ಆದಿಉಡುಪಿ ಬೆತ್ತಲೆ ಪ್ರಕರಣದ ಪ್ರಧಾನ ಆರೋಪಿಯಾಗಿದ್ದ ವ್ಯಕ್ತಿ ಈಗ ಉಡುಪಿ ರಾಜಕೀಯದ ಕೇಂದ್ರ ಬಿಂದು. ಉಡುಪಿ ಬಿಜೆಪಿಯ ಅತ್ಯಂತ ಪ್ರಮುಖ ನಾಯಕ. ಮೂರ್ನಾಲ್ಕು ಬಾರಿ ಶಾಸಕರಾದವರನ್ನೇ ಮನೆಗೆ ಕಳಿಸಿ ಮೆರೆಯುತ್ತಿರುವ ಪ್ರಭಾವೀ ಮುಖಂಡ. ಅದೇ ವ್ಯಕ್ತಿ ಇರುವ ಪಕ್ಷದಲ್ಲಿ ಕಳೆದ ಏಳು ವರ್ಷಗಳಿಂದ ಇದೇ ಜಯಪ್ರಕಾಶ್ ಹೆಗ್ಡೆಯವರೂ ಇದ್ದರು ಅಂದರೆ ಉಡುಪಿಯ ರಾಜಕೀಯ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ಎಂದು ಯಾರೂ ಊಹಿಸಬಹುದು.
ಜಯಪ್ರಕಾಶ್ ಹೆಗ್ಡೆ ಅವರು ಈಗ ಕಾಂಗ್ರೆಸ್ ಸೇರಿದ್ದಾರೆ. ಹಾಗಾಗಿ ಈಗ ಅವರು ಜಾತ್ಯತೀತ ನಾಯಕರಾಗಿದ್ದಾರೆ. ಅವರು ಈಗ 2017ಕ್ಕಿಂತ ಮೊದಲು ತಮ್ಮ ಗಡಸು ಧ್ವನಿಯಲ್ಲಿ ಮಾಡುತ್ತಿದ್ದ ಅದೇ ಗಂಭೀರ ಭಾಷಣ ಮಾಡುತ್ತಾರೆ. ಪ್ರತೀ ವಿಷಯದ ಬಗ್ಗೆ ವಸ್ತುನಿಷ್ಠವಾಗಿ ಮಾತಾಡುತ್ತಾರೆ. ಯಾರನ್ನೂ ತೀರಾ ಹೊಗಳುವುದಿಲ್ಲ, ಯಾರನ್ನೂ ತೀರಾ ತೆಗಳುವುದಿಲ್ಲ. ಯಾಕೆಂದರೆ ಅವರೊಬ್ಬ ಸ್ಥಿತಪ್ರಜ್ಞ. ಇವತ್ತಿನಿಂದ ಅವರು ಬಿಜೆಪಿಯನ್ನು, ಪ್ರಧಾನಿ ಮೋದಿಯನ್ನು ಟೀಕಿಸಬಹುದು. ಆದರೆ ಜಯಪ್ರಕಾಶ್ ಹೆಗ್ಡೆ ಬೇರೆ ರಾಜಕಾರಣಿಗಳ ಹಾಗೆ ಅಲ್ಲ. ಅವರು ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ ಅನ್ನು ಹಿಗ್ಗಾಮುಗ್ಗಾ ಟೀಕಿಸಿಲ್ಲ. ಹಾಗಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದ ಕೂಡಲೇ ಬಿಜೆಪಿಯನ್ನು, ಮೋದಿಯ ಆಡಳಿತವನ್ನು ಅವರು ಬಹಳ ಕಟುವಾಗಿಯೇನೂ ಟೀಕಿಸುವುದಿಲ್ಲ.
ಉಡುಪಿಯಲ್ಲಿ ಕಾಂಗ್ರೆಸ್ ಅನ್ನು ‘ಯಶಸ್ಸಿನ ತುತ್ತ ತುದಿಗೆ’ ತಲುಪಿಸಿ ಅದನ್ನು ಅಲ್ಲಿನ ಜನರಿಗೆ ಕಾಣದ ಹಾಗೆ ಮಾಡಿ ಬಿಟ್ಟಿರುವ ಸ್ಥಳೀಯ ಕಾಂಗ್ರೆಸ್ ನಾಯಕರ ಹಿತವಚನ ಕೇಳಿದರೆ ಅವರು ಬಿಜೆಪಿಯನ್ನು, ಮೋದಿಯ ನೀತಿಗಳನ್ನು ಟೀಕಿಸುವುದಿಲ್ಲ ಮಾತ್ರವಲ್ಲ, ಮೋದಿಯ ಬಗ್ಗೆ ಮಾತಾಡುವುದೇ ಇಲ್ಲ. ಯಾಕೆಂದರೆ ಬಿಜೆಪಿ ಬಿಟ್ಟು ಬಂದ ಕೂಡಲೇ ಆ ಪಕ್ಷವನ್ನು ಟೀಕಿಸುವ ಸಮಯ ಸಾಧಕ ರಾಜಕಾರಣಿ ಎಂಬ ಹಣೆಪಟ್ಟಿ ಪಡೆಯುವುದು ಅವರಿಗೆ ಇಷ್ಟಇಲ್ಲ. ಏಕೆಂದರೆ ಅವರೊಬ್ಬ ಪ್ರಬುದ್ಧ, ಸ್ಥಿತಪ್ರಜ್ಞ ರಾಜಕಾರಣಿ. ಅವರು ಬೇರೆ ರಾಜಕಾರಣಿಗಳ ಹಾಗೆ ಅಲ್ಲ. ಅಷ್ಟಕ್ಕೂ ಲೋಕಸಭಾ ಚುನಾವಣೆ ಬಳಿಕ ರಾಜಕೀಯ ಹೇಗೆಲ್ಲ ಬದಲಾಗಲಿದೆ ಎಂದು ಯಾರಿಗೆ ಗೊತ್ತು?
ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ಸೇರಿದ್ದ ಹಿನ್ನೆಲೆ ಬಹಳ ಕುತೂಹಲಕಾರಿಯಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬ್ರಹ್ಮಾವರ ಕ್ಷೇತ್ರವೇ ಇಲ್ಲವಾದಾಗ 2008ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಗ್ಡೆಯವರಿಗೆ ಕುಂದಾಪುರ ಟಿಕೆಟ್ ಕೊಟ್ಟಿತು. ಅಲ್ಲಿ ಅವರು ಸೋತರು. ಅದಾದ ಮೇಲೆ 2009ರ ಉಡುಪಿ ಲೋಕಸಭಾ ಟಿಕೆಟ್ ಕೊಟ್ಟಿತು. ಅಲ್ಲೂ ಅವರು ಸೋತರು. 2012ರಲ್ಲಿ ನಡೆದ ಲೋಕಸಭಾ ಉಪಚುನಾವಣೆಗೆ ಮತ್ತೆ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತು. ಇಡೀ ರಾಜ್ಯ ಕಾಂಗ್ರೆಸ್ ಉಡುಪಿಗೆ ಬಂದು ಕೂತು ಕೆಲಸ ಮಾಡಿ ಅವರನ್ನು ಗೆಲ್ಲಿಸಿತು. ರಾಜ್ಯದ ಆಗಿನ ಮುಖ್ಯಮಂತ್ರಿಗಳೇ ಬಿಟ್ಟುಹೋಗಿದ್ದ ಸೀಟನ್ನು ಹೆಗ್ಡೆಯವರು ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದರು. ರಾಜ್ಯಾದ್ಯಂತ ಮನೆಮಾತಾದರು. 2014 ರಲ್ಲಿ ಅವರಿಗೆ ಮತ್ತೆ ಲೋಕಸಭಾ ಟಿಕೆಟ್ ಸಿಕ್ಕಿತು. ಆಗ ಅವರು ಸೋತರು. ಅಂದರೆ ಅವರು ಪಕ್ಷಕ್ಕೆ ಬಂದ ಮೇಲೆ ಬೆನ್ನು ಬೆನ್ನಿಗೇ ನಾಲ್ಕು ಬಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೆ ಹೆಗ್ಡೆಯವರಿಗೆ ವಿಧಾನ ಪರಿಷತ್‌ಗೆ ಹೋಗುವ ಮನಸ್ಸಿತ್ತು. ಕಾಂಗ್ರೆಸ್ ಅವರಿಗೆ ಟಿಕೆಟ್ ಕೊಡಲಿಲ್ಲ. ಅಲ್ಲಿಗೆ ಹೆಗ್ಡೆ ಕಾಂಗ್ರೆಸ್ ಜೊತೆ ಮುನಿಸಿಕೊಂಡರು. 2017ರಲ್ಲಿ ಅವರಿಗೆ ಬಿಜೆಪಿ ಒಳ್ಳೆಯ ಪಕ್ಷವಾಗಿ ಕಂಡಿತು. ಹಾಗಾಗಿ ಹೋಗಿ ಆದಿಉಡುಪಿ ಬೆತ್ತಲೆ ಪ್ರಕರಣದ ಮಾಜಿ ಆರೋಪಿ ಯಶ್ಪಾಲ್ ಸುವರ್ಣ ಇದ್ದ ಪಕ್ಷಕ್ಕೆ ಸೇರಿಕೊಂಡರು. ಹಾಗಂತ ಅವರೇನೂ ಕಾಂಗ್ರೆಸ್ ಅನ್ನು ತೀರಾ ಕೆಟ್ಟದಾಗಿ ಬಯ್ಯಲಿಲ್ಲ, ದೇಶದ ಎಲ್ಲ ಸಮಸ್ಯೆಗಳಿಗೆ ನೆಹರೂ ಅವರೇ ಕಾರಣ ಎಂದು ಟೀಕಿಸಲಿಲ್ಲ. ಏಕೆಂದರೆ ಅವರೊಬ್ಬ ಪ್ರಬುದ್ಧ, ಸ್ಥಿತಪ್ರಜ್ಞ ರಾಜಕಾರಣಿ. ಅವರು ಬೇರೆ ರಾಜಕಾರಣಿಗಳ ಹಾಗೆ ಅಲ್ಲ.
ಬಿಜೆಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಿಕ್ಕಿದ ‘ಅಭೂತಪೂರ್ವ ಸ್ವಾಗತವನ್ನು’ ಎಲ್ಲರೂ ನೋಡಿ ಬೆರಗಾದರು. ಮೋದಿಯವರು ಉಡುಪಿಗೆ ಬಂದಾಗ ವೇದಿಕೆಯಲ್ಲಿ ಅವರ ಗಮನ ಸೆಳೆಯಲು ಹೆಗ್ಡೆಯವರು ಪಟ್ಟ ಶ್ರಮ ನೋಡಿ ಉಡುಪಿ ಜಿಲ್ಲೆಯ ಅವರ ಎಲ್ಲ ಹಿತೈಷಿಗಳು, ಬೆಂಬಲಿಗರಿಗೆ ತೀರಾ ಕಸಿವಿಸಿಯಾಯಿತು. ಆಮೇಲೆಯೂ ಬಿಜೆಪಿ ಅವರನ್ನು ಹಾಗೇ ಪಕ್ಷದ ಒಂದು ಮೂಲೆಯಲ್ಲೇ ಇಟ್ಟಿತು. ಎಂದೂ ಅವರು ಆ ಪಕ್ಷದ ವೇದಿಕೆಯ ಕೇಂದ್ರಕ್ಕೆ ಹೋಗಿ ತಲುಪಲೇ ಇಲ್ಲ. ದೇಶಾದ್ಯಂತ ಎಂತೆಂತಹ ಘಟಾನುಘಟಿ ನಾಯಕರನ್ನೆಲ್ಲ ಮೊದಲು ತನ್ನ ತೆಕ್ಕೆಗೆ ತೆಗೆದುಕೊಂಡು ಆಮೇಲೆ ನುಂಗಿ ನೀರು ಕುಡಿದಿರುವ ಬಿಜೆಪಿಗೆ ಉಡುಪಿಯ ಜಯಪ್ರಕಾಶ್ ಹೆಗ್ಡೆಯವರು ಯಾವ ಲೆಕ್ಕ? ಅವರ ಅನುಭವ, ಅವರ ನೇರ ನಡೆ ನುಡಿ, ಅವರ ಸಾಧನೆಗಳು, ಕೊನೆಗೆ ಅವರ ಗಡಸು ಧ್ವನಿ ಯಾವುದಕ್ಕೂ ಬಿಜೆಪಿಯಲ್ಲಿ ಯಾವ ಬೆಲೆಯೂ ಸಿಗಲಿಲ್ಲ.
ಹೇಗೋ ಏನೋ ಕೊನೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷಗಿರಿಯನ್ನು ಪಡೆದುಕೊಂಡರು. ಆ ಹುದ್ದೆಗೆ ಅವರು ಎಲ್ಲ ರೀತಿಯಿಂದಲೂ ಅರ್ಹರೇ ಆಗಿದ್ದರು. ಅದಕ್ಕಿಂತಲೂ ದೊಡ್ಡ ಹುದ್ದೆಗೆ ಅವರು ಅರ್ಹರಾಗಿದ್ದರು. ಆದರೆ ಬಿಜೆಪಿಗೆ ಅವರು ಅದಕ್ಕಿಂತ ದೊಡ್ಡ ಹುದ್ದೆಗೆ ಹೋಗುವುದು ಬೇಕಿರಲಿಲ್ಲ. ಕಾಂಗ್ರೆಸ್‌ನಲ್ಲಿ 7 ವರ್ಷಗಳಲ್ಲಿ ನಾಲ್ಕು ಟಿಕೆಟ್ ಪಡೆದಿದ್ದರೂ ತನ್ನನ್ನು ಕಡೆಗಣಿಸಿದರು ಎಂದು ಬೇಸರಿಸಿಕೊಂಡಿದ್ದ ಹೆಗ್ಡೆಯವರಿಗೆ ಬಿಜೆಪಿಯಲ್ಲಿ ಕಳೆದ 7 ವರ್ಷಗಳಲ್ಲಿ ಸಿಕ್ಕಿದ್ದೇನು ಎಂದು ಹಿಂದಿರುಗಿ ನೋಡಿದರೆ ಕಾಣುವುದೇನು? ಆದರೆ ಹೆಗ್ಡೆಯವರು ಈಗ ಬಿಜೆಪಿ ಬಿಡುವಾಗ ಅದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಂಡು ಬಿಜೆಪಿಯನ್ನು ದೂರುವುದಿಲ್ಲ. ಏಕೆಂದರೆ ಅವರೊಬ್ಬ ಪ್ರಬುದ್ಧ, ಸ್ಥಿತಪ್ರಜ್ಞ ರಾಜಕಾರಣಿ. ಅವರು ಬೇರೆ ರಾಜಕಾರಣಿಗಳ ಹಾಗೆ ಅಲ್ಲ.
ಈಗ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುವುದನ್ನು ಬಹುತೇಕ ಗ್ಯಾರಂಟಿ ಮಾಡಿಕೊಂಡೇ ಕಾಂಗ್ರೆಸ್‌ಗೆ ಬಂದಿದ್ದಾರೆ ಹೆಗ್ಡೆಯವರು. ಅಂದರೆ ಹೆಗ್ಡೆಯವರು ಕಾಂಗ್ರೆಸ್‌ಗೆ ಅದರ ಟಿಕೆಟ್‌ನ ಗ್ಯಾರಂಟಿ ಇದ್ದರೆ ಮಾತ್ರ ಬರುತ್ತಾರೆ. ಬಿಜೆಪಿಗೆ ಹೋಗುವಾಗ ಅವರಿಗೆ ಅಂತಹ ಯಾವುದೇ ಹಠ ಏನಿಲ್ಲ. ಅಲ್ಲಿ ವೇದಿಕೆಯಲ್ಲಿ ಮೋದಿಯವರ ಕೈಕುಲುಕಲು ಕಷ್ಟ ಪಡುವುದಕ್ಕೂ ಅವರು ರೆಡಿ. ಇದು ಹೆಗ್ಡೆಯವರ ಉದಾರತನ, ಧಾರಾಳತನವನ್ನು ಮಾತ್ರ ಸಾಬೀತುಪಡಿಸುತ್ತದೆ. ಅವರೆಷ್ಟು ‘ನಿಸ್ವಾರ್ಥ’ ರಾಜಕಾರಣಿ ಎಂಬುದನ್ನೂ ಇದು ನಮಗೆ ತೋರಿಸಿಕೊಡುತ್ತದೆ. ಅಂದರೆ ಬಿಜೆಪಿಗೆ ಹೋಗಿ ದೇಶ ಕಟ್ಟಲು ಮೋದಿಯವರ ಕೈ ಬಲಪಡಿಸುವುದಕ್ಕಾಗಿ ಮಾತ್ರ ಅವರು ಹೋಗಿದ್ದರು. ಅಲ್ಲಿ ಎಂಪಿ, ಎಂಎಲ್‌ಎ ಟಿಕೆಟು ಕೇಳುವ ರಾಜಕಾರಣದ ಅಗತ್ಯ ಅವರಿಗೆ ಕಂಡು ಬರಲಿಲ್ಲ ಅಥವಾ ಆ ಟಿಕೆಟ್‌ಗೆ ಅವರನ್ನು ಪರಿಗಣಿಸಲೇ ಇಲ್ಲ ಎಂಬುದೂ ಅವರಿಗೆ ಯಾವುದೇ ಸಮಸ್ಯೆಯಾಗಿ ಕಾಣುವುದಿಲ್ಲ. ಅಂದರೆ ಈ ನಾಡಿನ ಜಾತ್ಯತೀತರು, ಪ್ರಜ್ಞಾವಂತರು ಅದರಲ್ಲಿ ನೋಡಬೇಕಾದ್ದು ಹೆಗ್ಡೆಯವರ ದೂರದೃಷ್ಟಿಯನ್ನು. ಈಗ ಅವರು ಕಾಂಗ್ರೆಸ್‌ಗೆ ಬಂದಿರುವುದರಿಂದ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಕಾಂಗ್ರೆಸ್ ಅನ್ನು ಇಷ್ಟಪಡದಿದ್ದರೂ ಅದಕ್ಕೆ ವೋಟು ಹಾಕುವ ಜಾತ್ಯತೀತ ಮನೋಭಾವದವರಿಗೆ ಹೆಗ್ಡೆ ಅವರಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಕಾಣುವ ಹಕ್ಕಿಲ್ಲ. ಏಕೆಂದರೆ ಅವರೊಬ್ಬ ಪ್ರಬುದ್ಧ, ಸ್ಥಿತಪ್ರಜ್ಞ ರಾಜಕಾರಣಿ. ಅವರು ಬೇರೆ ರಾಜಕಾರಣಿಗಳ ಹಾಗೆ ಅಲ್ಲ.
ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿಯಾಗಲು ಅಣಿಯಾಗುತ್ತಿರುವ ಈ ಹೊತ್ತಲ್ಲಿ ಹೆಗ್ಡೆಯವರು 2017 ಕ್ಕಿಂತ ಮೊದಲು ಅವರನ್ನು ಹೊತ್ತು ಮೆರೆದಾಡಿದವರು, ಅವರಿಗೆ ಬ್ರಹ್ಮಾವರದಲ್ಲಿ ಮತ್ತೆ ಮತ್ತೆ ವೋಟು ಹಾಕಿದವರು, ಅವರ ಗೆಲುವಿಗಾಗಿ ಒಂದು ರೂಪಾಯಿ ಪಡೆಯದೆ ದುಡಿದವರು, ಕಾಂಗ್ರೆಸ್ ಜೊತೆ ಯಾವ ಪ್ರೀತಿಯೂ ಇಲ್ಲದಿದ್ದರೂ ಹೆಗ್ಡೆಯವರಿಗಾಗಿ ಆ ಪಕ್ಷಕ್ಕೆ ನಾಲ್ಕು ಬಾರಿ ಮತ ಹಾಕಿದವರು, 2012ರ ಲೋಕಸಭಾ ಉಪಚುನಾವಣೆಯಲ್ಲಿ ಸ್ವತಃ ತಾವೇ ಸ್ಪರ್ಧಿಸಿದ್ದೇವೆ ಎಂಬಂತೆ ಅವರಿಗಾಗಿ ನಿಸ್ವಾರ್ಥವಾಗಿ ದುಡಿದವರು - ಇವರೆಲ್ಲರ ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇಬೇಕಾಗಿದೆ.
2017ರ ಮೊದಲಿನ ವಿಷಯ ಬಿಡಿ. ನೀವು ಬಿಜೆಪಿ ಸೇರಿದ ಮೇಲೆ ಆ ಪಕ್ಷ, ಅದರ ನಾಯಕರು, ಅದರ ಜನಪ್ರತಿನಿಧಿಗಳು ಈ ದೇಶದಲ್ಲಿ, ಈ ರಾಜ್ಯದಲ್ಲಿ, ಕರಾವಳಿಯಲ್ಲಿ ಮತ್ತು ನಿರ್ದಿಷ್ಟವಾಗಿ ಉಡುಪಿಯಲ್ಲಿ ಮಾಡಿರುವ ಅನ್ಯಾಯದ ಬಗ್ಗೆ ನೀವು ಏನು ಹೇಳುತ್ತೀರಿ? ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಇಡೀ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉಡುಪಿಯಲ್ಲಿ ಮಾಡಿರುವ ಕೋಮುವಾದಿ, ಜನವಿರೋಧಿ ರಾಜಕಾರಣದ ಬಗ್ಗೆ ನೀವು ಏನು ಹೇಳುತ್ತೀರಿ? ನೀವಿದ್ದ ಪಕ್ಷದ ಸರಕಾರ, ಅದರ ನಾಯಕರು ಹಿಜಾಬ್ ಹೆಸರಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜುಗಳಿಂದ ಹೊರ ಹಾಕಿ ಬೀದಿಗೆ ತಳ್ಳಿದರಲ್ಲ, ಅದರ ಬಗ್ಗೆ ಏನು ಹೇಳುತ್ತೀರಿ ಹೆಗ್ಡೆಯವರೇ? ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಎಂದು ನೀವಿದ್ದ ಪಕ್ಷದ ನಾಯಕರೇ ಹೇಳಿದರಲ್ಲ... ಅದರ ಬಗ್ಗೆ ಈಗೇನು ಹೇಳುತ್ತೀರಿ? ನಿಮ್ಮದೇ ಜಿಲ್ಲೆಯಲ್ಲಿ ನೀವಿದ್ದ ಪಕ್ಷ ಇಷ್ಟೊಂದು ಜನವಿರೋಧಿ ರಾಜಕೀಯ ಮಾಡುವಾಗ ನೀವು ಏನೂ ಹೇಳದೆ, ಏನೂ ಮಾಡದೇ ಸುಮ್ಮನಿದ್ದುಕೊಂಡು ನೋಡಿದಿರಲ್ಲ...ಅದಕ್ಕೆ ಪರೋಕ್ಷ ಬೆಂಬಲ ಕೊಟ್ಟಿರಲ್ಲ... ಅದರ ಬಗ್ಗೆ ಈಗ ಏನು ಹೇಳುತ್ತೀರಿ? ಜಾತ್ರೆಯಲ್ಲಿ ವ್ಯಾಪಾರ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಬಡಪಾಯಿ ವ್ಯಾಪಾರಿಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಕೋಮುವಾದದ ಬೆಂಕಿ ಹಚ್ಚಿದರಲ್ಲ... ಅದಕ್ಕೆ ನೀವು ಮೂಕ ಪ್ರೇಕ್ಷಕರಾದರಲ್ಲ... ಅದರ ಬಗ್ಗೆ ಈಗ ಏನು ಹೇಳುತ್ತೀರಿ? ಜಿಲ್ಲೆಯ ಮೀನುಗಾರರಿಗೂ ಬಿಜೆಪಿಯವರು ಮೋಸ ಮಾಡಿದರಲ್ಲ .. ಅದಕ್ಕೆ ಏನು ಹೇಳುತ್ತೀರಿ? ನೀವೂ ಆ ಮೋಸ ರಾಜಕಾರಣದ ಭಾಗವಲ್ಲವೇ? ಬೇರೇನೂ ಸಾಧನೆ ತೋರಿಸದೆ ಕೇವಲ ಕೋಮುವಾದದ ಆಧಾರದಲ್ಲೇ ರಾಜಕಾರಣ ಮಾಡಿ ಜನರನ್ನು ಒಡೆದು ಉಡುಪಿಯ ಅಷ್ಟೂ ಸೀಟು ಗೆದ್ದರಲ್ಲ ಬಿಜೆಪಿಯವರು..ಆಗ ನೀವು ಆ ಅಪಾಯಕಾರಿ ರಾಜಕಾರಣವನ್ನು ಸುಮ್ಮನೆ ನೋಡಿ ಅದರ ಬೆನ್ನಿಗೇ ನಿಂತಿರಲ್ಲ...ಆ ಬಗ್ಗೆ ಈಗ ಏನು ಹೇಳುತ್ತೀರಿ? ಗೋರಕ್ಷಣೆಯ ಹೆಸರಲ್ಲಿ, ಧರ್ಮ ರಕ್ಷಣೆಯ ಹೆಸರಲ್ಲಿ ಕಂಡ ಕಂಡಲ್ಲಿ ಗುಂಪು ಹಿಂಸೆಗಳು, ಹಲ್ಲೆಗಳು, ಲೂಟಿಗಳು ನಡೆದು ಹೋದವಲ್ಲ, ಅದಕ್ಕೆ ಬಿಜೆಪಿ ಸರಕಾರದ ಸಿಎಂ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಸಮರ್ಥಿಸಿಕೊಂಡರಲ್ಲ... ಆಗಲೂ ನೀವೇನೂ ಹೇಳಲೇ ಇಲ್ಲವಲ್ಲ...
ಆ ಬಗ್ಗೆ ಈಗ ಏನು ಹೇಳುತ್ತೀರಿ?
ಈ ಎಲ್ಲ ಪ್ರಶ್ನೆಗಳನ್ನು ನಾವು ಜಯಪ್ರಕಾಶ್ ಹೆಗ್ಡೆಯವರಿಗೆ ಏಕೆ ಕೇಳುತ್ತಿದ್ದೇವೆ? ಏಕೆಂದರೆ ಅವರೊಬ್ಬ ‘ಪ್ರಬುದ್ಧ, ಸ್ಥಿತಪ್ರಜ್ಞ ರಾಜಕಾರಣಿ. ಅವರು ಬೇರೆ ರಾಜಕಾರಣಿಗಳ ಹಾಗೆ ಅಲ್ಲ’.
ಪಕ್ಷ ಯಾವುದೇ ಇರಲಿ, ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ ಜಯಪ್ರಕಾಶ್ ಹೆಗ್ಡೆ ಎಂಬ ಮಾತಿದೆ. 2017ರವರೆಗೆ ನಾವೂ ಹಾಗೇ ನಂಬಿದ್ದೆವು. ಆದರೆ ಬಿಜೆಪಿಗೆ ಹೋಗಿ ಅಲ್ಲಿನ ಎಲ್ಲ ಜನವಿರೋಧಿ ರಾಜಕಾರಣವನ್ನು ಸಹಿಸಿಕೊಂಡ, ಆ ರಾಜಕಾರಣದ ವೇದಿಕೆಯಲ್ಲೇ ತನ್ನ ಉಪಸ್ಥಿತಿಯ ಮೂಲಕ ಬೆಂಬಲದ ಮುದ್ರೆಯೊತ್ತಿದ ಜಯಪ್ರಕಾಶ್ ಹೆಗ್ಡೆ ಹೇಗೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದು ನನಗೆ ಅರ್ಥ ಆಗುತ್ತಿಲ್ಲ. ಅವರು ಬಿಜೆಪಿಗೆ ಹೋಗಿದ್ದು, ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಹೇಗೆ ಸಮಯ ಸಾಧಕ, ಅವಕಾಶವಾದಿ ರಾಜಕಾರಣ ಅಲ್ಲ ಎಂದು ಅವರು ಅವರ ಹಿತೈಷಿಗಳು, ಬೆಂಬಲಿಗರು, ಅಭಿಮಾನಿಗಳಿಗೆ ವಿವರಣೆ ನೀಡಬೇಕಾಗಿದೆ. ಮೋದಿ ಹಾಗೆ ಮಾಡುತ್ತಾರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಹೀಗೆ ಮಾಡುತ್ತ್ತಾರೆ ಎಂದು ಹೇಳಿಕೊಂಡು ವೋಟು ಕೇಳಲು ಹೋಗುವ ಮೊದಲು ತಾನು ಯಾಕೆ ಹೀಗೆ ಮಾಡಿದೆ, ತಾನೇಕೆ ದಶಕಗಳಿಂದ ತನ್ನನ್ನು ನಂಬಿದ್ದ ಜನರಿಗೆ ದ್ರೋಹವೆಸಗಿದೆ ಎಂಬುದನ್ನು ಹೆಗ್ಡೆಯವರು ಹೇಳಲೇಬೇಕಾಗಿದೆ. ‘ತಾನು ಚಪ್ಪಾಳೆ ಗಿಟ್ಟಿಸುವ ಭಾಷಣ ಹಾಗೂ ರಾಜಕಾರಣ ಮಾಡುವುದಿಲ್ಲ’ ಎಂದು ಹೇಳುತ್ತಿದ್ದ ಹೆಗ್ಡೆಯವರು ಕೇವಲ ಚಪ್ಪಾಳೆಯ ಅಬ್ಬರ ಹಾಗೂ ವ್ಯವಸ್ಥಿತವಾಗಿ ಹರಡಿದ ಭ್ರಮೆ ಹಾಗೂ ಅಪಪ್ರಚಾರದ ಮೂಲಕವೇ ರಾಜಕಾರಣ ಮಾಡಿದ, ಅಧಿಕಾರ ಅನುಭವಿಸಿದವರ ಪಕ್ಷದಲ್ಲಿ ಏಳು ವರ್ಷ ಕಳೆದಿದ್ದು ಆತ್ಮಘಾತುಕತನದ ರಾಜಕೀಯ ಹೇಗೆ ಅಲ್ಲ ಎಂದು ಉಡುಪಿಯ ಜನರಿಗೆ ತಿಳಿಸಿ ಕೊಡಬೇಕಾಗಿದೆ. ಏಳು ವರ್ಷದಲ್ಲಿ ನಾಲ್ಕು ಟಿಕೆಟ್ ಕೊಟ್ಟ ಪಕ್ಷದಲ್ಲಿ ನಿಲ್ಲಲಾಗದ ನೀವು ಏಳು ವರ್ಷದಲ್ಲಿ ನಿಮ್ಮನ್ನು ಸರಿಯಾಗಿ ಗೌರವದಿಂದಲೂ ನಡೆಸಿಕೊಳ್ಳದ ಪಕ್ಷ ಹಾಗೂ ಅದರ ಜನವಿರೋಧಿ ರಾಜಕಾರಣವನ್ನು ಹೇಗೆ ಸಹಿಸಿಕೊಂಡಿರಿ ಎಂದು ಕಾರಣ ಕೊಡಬೇಕಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆ ಆದ ಬಳಿಕ ನೀವು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂಬ ಗ್ಯಾರಂಟಿಯನ್ನು ನೀವು ನಿಮ್ಮ ಮತದಾರರಿಗೆ ಕೊಡುತ್ತೀರಾ? ಕೊಟ್ಟರೂ ಅದನ್ನು ನಂಬುವ ಸ್ಥಿತಿ ಇದೆಯೇ?
ಈ ಎಲ್ಲ ಪ್ರಶ್ನೆಗಳನ್ನು ನಾವು ಜಯಪ್ರಕಾಶ್ ಹೆಗ್ಡೆಯವರಿಗೆ ಏಕೆ ಕೇಳುತ್ತಿದ್ದೇವೆ?
ಏಕೆಂದರೆ ಅವರೊಬ್ಬ ‘ಪ್ರಬುದ್ಧ, ಸ್ಥಿತಪ್ರಜ್ಞ ರಾಜಕಾರಣಿ. ಅವರು ಬೇರೆ ರಾಜಕಾರಣಿಗಳ ಹಾಗೆ ಅಲ್ಲ’.