ಹೆಸರುಗಳ ಮೂಲಕ ತಾರತಮ್ಯವೆಸಗುತ್ತಿರುವ ಕೋಮುವಾದಿಗಳ ವಿರುದ್ಧ ದೇಶದ ಸಂವಿಧಾನಕ್ಕೆ ಸಂದ ದೊಡ್ಡ ಜಯ
ಮುಝಪ್ಫರ್ ನಗರ ಜಿಲ್ಲಾಡಳಿತದ ಆಹಾರ ಮಳಿಗೆಗಳ ಮೇಲೆ ಮಾಲಕರ ಹೆಸರುಗಳನ್ನು ಬರೆಯುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ದೇಶದ ಸಂವಿಧಾನಕ್ಕೆ ಸಂದ ದೊಡ್ಡ ಜಯ.
ಆದಿತ್ಯನಾಥ್ ಸರಕಾರ ಬಳಿಕ ಈ ಆದೇಶವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿತ್ತು. ಅದನ್ನು ನೋಡಿ ಪಕ್ಕದ ಉತ್ತರಾಖಂಡ್ ಬಿಜೆಪಿ ಸರಕಾರವೂ ಅದೇ ರೀತಿಯ ಆದೇಶ ಹೊರಡಿಸಿತ್ತು. ಈಗ ಆದಿತ್ಯನಾಥ್ ಹಾಗೂ ಪುಷ್ಕರ್ ಧಾಮಿ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ನಲ್ಲೇ ಮುಖಭಂಗವಾಗಿದೆ.
ಆದರೆ ಸರಕಾರದ ಈ ಆದೇಶದ ನಂತರ ಈ ಪ್ರದೇಶಗಳಲ್ಲಿ ಕೆಲಸ ಮಾಡುವ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅವರ ಗುರುತನ್ನು ಈಗಾಗಲೇ ಸಾರ್ವಜನಿಕಗೊಳಿಸಲಾಗಿದೆ.
ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಅಂಗಡಿ ಮಾಲಕರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರಕಾರ ನೀಡಿದ್ದ ಆದೇಶವು ಸಾಂವಿಧಾನಿಕ ಮತ್ತು ಕಾನೂನು ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಎಸ್.ವಿ.ಎನ್. ಭಟ್ಟಿ ಅವರನ್ನು ಒಳಗೊಂಡ ಪೀಠ ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಭಟ್ಟಿ ಅವರು ತಮ್ಮ ಒಂದು ಕುತೂಹಲಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಕೇರಳದಲ್ಲಿ ಹಿಂದೂ ಮಾಲಕರೊಬ್ಬರು ನಡೆಸುವ ಸಸ್ಯಾಹಾರಿ ಢಾಬಾ ಇದೆ ಮತ್ತು ಇನ್ನೊಂದು ಮುಸಲ್ಮಾನರು ನಡೆಸುತ್ತಿರುವ ಸಸ್ಯಾಹಾರಿ ಢಾಬಾ ಇದೆ. ಆದರೆ ಮುಸ್ಲಿಮರ ಸಸ್ಯಾಹಾರಿ ಢಾಬಾ ನೈರ್ಮಲ್ಯ ವಿಚಾರದಲ್ಲಿ ಅಂತರ್‌ರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ತಾನು ಅಲ್ಲಿಗೇ ಹೋಗುತ್ತಿದ್ದುದಾಗಿ ನ್ಯಾ. ಭಟ್ಟಿ ಹೇಳಿದರು.
ಹೆಸರುಗಳ ಮೂಲಕ ಪೂರ್ವಾಗ್ರಹಪೀಡಿತರಾಗುವವರಿಗೆ, ಮುಸ್ಲಿಮ್ ವಿರೋಧಿ ಭಾವನೆಗಳನ್ನು ಹರಡುವವರಿಗೆ ಇದೊಂದು ಒಳ್ಳೆಯ ಪಾಠ.
ಈಗ ತಮ್ಮ ಹೆಸರು ಪ್ರದರ್ಶಿಸುವ ಅಗತ್ಯ ಇಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿರುವುದು ಅಲ್ಲಿನ ವ್ಯಾಪಾರಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಹೊಸ ಧೈರ್ಯವನ್ನು ಅವರಲ್ಲಿ ತುಂಬಿದೆ. ಸಂವಿಧಾನ ತಮ್ಮನ್ನು ರಕ್ಷಿಸುತ್ತದೆ ಎಂಬ ವಿಶ್ವಾಸ ಅವರಲ್ಲಿ ಬಂದಂತಾಗಿದೆ.
ಬಡ ಮತ್ತು ಸಣ್ಣ ವ್ಯಾಪಾರಿಗಳು ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಬದುಕುತ್ತಿದ್ದರೆ ಕೋಮುವಾದಿ ಆದೇಶದ ಮೂಲಕ ಸಂತೆಯೊಳಗೂ ತಾರತಮ್ಯ ಅವರ ಬೆನ್ನು ಬಿಡದ ಹಾಗೆ ಮಾಡಿತ್ತು ಸರಕಾರ. ಆದರೀಗ ಸುಪ್ರೀಂ ಕೋರ್ಟ್ ಅವರೆಲ್ಲರ ರಕ್ಷಣೆಗೆ ನಿಂತಂತಾಗಿದೆ. ಅವರ ವೈಯಕ್ತಿಕ ಹಕ್ಕಿನ ಸಂರಕ್ಷಣೆಯಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಮುಝಪ್ಫರ್ ನಗರದ ಎಲ್ಲ ಅಂಗಡಿಕಾರರೂ ತಮ್ಮ ಅಂಗಡಿಗಳ ಮುಂದೆ ಪ್ರದರ್ಶಿಸಿದ್ದ ಹೆಸರುಗಳನ್ನು ತೆಗೆದುಹಾಕಿದ್ದಾರೆ. ಎಂಥದೋ ಬಿಡುಗಡೆ ಸಿಕ್ಕವರ ರೀತಿಯಲ್ಲಿ ಅವರೆಲ್ಲರೂ ನಿರಾಳರಾಗಿದ್ದಾರೆ.
೧೯೫೦ರಲ್ಲಿ ಇದೇ ಮುಝಪ್ಫರ್ ನಗರದ ಜಲಾಲಾಬಾದ್‌ನಲ್ಲಿ ಮುಹಮ್ಮದ್ ಯಾಸೀನ್ ಎಂಬವರ ತರಕಾರಿ ಅಂಗಡಿ ಬಂದ್ ಮಾಡಲಾಗಿತ್ತು. ಒಬ್ಬರು ಮಾತ್ರ ವ್ಯಾಪಾರ ಮಾಡಬೇಕೆಂಬ ನಗರ ಪಾಲಿಕೆಯ ಕಟ್ಟಳೆ ವಿರುದ್ಧ ಯಾಸೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿತ್ತು ಮತ್ತು ಅವರು ಆ ಪ್ರಕರಣವನ್ನು ಗೆದ್ದಿದ್ದರು. ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ತೀರ್ಪನ್ನು ಅವತ್ತು ಕೂಡ ಸುಪ್ರೀಂ ಕೋರ್ಟ್ ನೀಡಿತ್ತು. ಆ ಪ್ರಕರಣ ಗೆದ್ದ ಬಳಿಕ ಯಾಸೀನ್ ಡೋಲು ಬಾರಿಸುವ ತನ್ನ ದಲಿತ ಗೆಳೆಯನ ಮೂಲಕ ಆ ವಿಚಾರವನ್ನು ಎಲ್ಲರಿಗೂ ಮುಟ್ಟಿಸಿದ್ದರು. ಜನರು ಮತ್ತು ನಗರ ಪಾಲಿಕೆ ನಡುವೆ ನಡೆದ ಮೊಕದ್ದಮೆಯಲ್ಲಿ ಜನತೆ ಗೆದ್ದಿದೆ, ನಗರಪಾಲಿಕೆ ಸೋತಿದೆ ಎಂಬ ವಿಚಾರ ಹಾಗೆ ಹಬ್ಬಿತ್ತು.
ಈಗ ಮುಝಪ್ಫರ್ ನಗರದ ಸಣ್ಣ ವ್ಯಾಪಾರಿಗಳ ಪಾಲಿಗೆ ಎಪಿಸಿಆರ್ ಎಂಬ ಸಂಸ್ಥೆ, ಸಂಸದೆ ಮಹುವಾ ಮೊಯಿತ್ರಾ, ಅಂಕಣಕಾರ ಆಕಾರ್ ಪಟೇಲ್ ಹಾಗೂ ಪ್ರಾಧ್ಯಾಪಕ ಅಪೂರ್ವಾನಂದ್ ಅವರು ಆಪದ್ಬಾಂಧವರಾಗಿದ್ದಾರೆ.
ನಿಮ್ಮ ಪರವಾಗಿ ನಾವು ದಿಲ್ಲಿಯಲ್ಲಿ ಹೋರಾಡುತ್ತೇವೆ ಎಂದು ಅವರು ಅಭಯ ನೀಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮೊನ್ನೆ ಜುಲೈ ೧೮ರಂದು, ಮುಝಪ್ಫರ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವರು ಕನ್ವರ್ ಮಾರ್ಗದಲ್ಲಿರುವ ಎಲ್ಲಾ ತಿನಿಸುಗಳ ಅಂಗಡಿ ಮಾಲಕರ ಹೆಸರನ್ನು ಪ್ರದರ್ಶಿಸಲು ನಿರ್ದೇಶನವನ್ನು ನೀಡಿದ್ದರು.
ಈ ನಿರ್ದೇಶನವನ್ನು ಜುಲೈ ೧೯ರಂದು ರಾಜ್ಯಾದ್ಯಂತ ವಿಸ್ತರಿಸಲಾಗಿತ್ತು. ವರದಿಗಳ ಪ್ರಕಾರ, ಈ ನಿರ್ದೇಶನವನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿತ್ತು.
ಈ ನಿರ್ದೇಶನದ ವಿರುದ್ಧ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಎಂಬ ಎನ್‌ಜಿಒ, ತೃಣಮೂಲ ಸಂಸದೆ ಮಹುವಾ ಮೊಯಿತ್ರಾ, ಲೇಖಕ ಸಾಮಾಜಿಕ ಕಾರ್ಯಕರ್ತ ಆಕಾರ್ ಪಟೇಲ್, ಸಾಮಾಜಿಕ ಕಾರ್ಯಕರ್ತ, ದಿಲ್ಲಿ ವಿವಿ ಪ್ರಾಧ್ಯಾಪಕ ಅಪೂರ್ವಾನಂದ್ ಅವರು ಅರ್ಜಿ ಸಲ್ಲಿಸಿದ್ದರು. ನೂರಾರು ಮಂದಿ ಕೆಲಸ ಕಳೆದುಕೊಳ್ಳುತ್ತಿರುವ ಬಗ್ಗೆ ಈ ಅರ್ಜಿಗಳಲ್ಲಿ ಕೋರ್ಟ್‌ನ ಗಮನಕ್ಕೆ ತರಲಾಗಿತ್ತು.
ಈಗ ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆ, ಸಂತೆಯಲ್ಲೂ ಮುಸ್ಲಿಮರ ವಿರುದ್ಧ ತಾರತಮ್ಯ ತಂದಿಡುವ ಯುಪಿ ಸರಕಾರದ ಕಟುಕತನಕ್ಕೆ ಒಂದು ಪಾಠವಾಗಿದೆ.
ಯುಪಿ ಸರಕಾರದ ಆದೇಶವನ್ನು ವಿಪಕ್ಷಗಳು ಮಾತ್ರವಲ್ಲ, ಎನ್‌ಡಿಎ ಒಕ್ಕೂಟದಲ್ಲಿನ ಬಿಜೆಪಿಯ ಮಿತ್ರಪಕ್ಷಗಳೂ ವಿರೋಧಿಸಿದ್ದವು. ಆದರೆ ಯುಪಿ ಸರಕಾರದ ದಪ್ಪ ಚರ್ಮಕ್ಕೆ ಆ ವಿರೋಧ ನಾಟಿಯೇ ಇರಲಿಲ್ಲ.
ಬದಲಾಗಿ, ಮುಝಪ್ಫರ್ ನಗರ ಮಾತ್ರವಲ್ಲ, ರಾಜ್ಯಾದ್ಯಂತ ಅದನ್ನು ಜಾರಿಗೊಳಿಸಲು ಸೂಚಿಸಿ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ದರ್ಪ ತೋರಿಸಿದ್ದರು.
ಇಲ್ಲಿ ಗಮನಾರ್ಹವಾದುದು ಎಂದರೆ, ಮುಝಪ್ಫರ್ ನಗರ ಜಿಲ್ಲಾಡಳಿತದ ಆದೇಶಕ್ಕೆ ಆಕ್ರೋಶ ವ್ಯಕ್ತವಾದ ನಂತರ ಆದಿತ್ಯನಾಥ್ ಇಡೀ ರಾಜ್ಯಕ್ಕೆ ವಿಸ್ತರಿಸಿ ಆದೇಶ ನೀಡಿದ್ದರು. ಅಂದರೆ ಯಾರದ್ದೇ ವಿರೋಧ, ಅಸಮಾಧಾನವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತಾನು ಅದಕ್ಕಿಂತಲೂ ಹೆಚ್ಚು ಕಟುವಾಗಿ ವರ್ತಿಸುತ್ತೇನೆ ಎಂದು ಹೊರಟಿದ್ದರು.
ಇಲ್ಲಿ ಬಿಜೆಪಿ ಮಿತ್ರಪಕ್ಷಗಳು ಯುಪಿ ಆದೇಶವನ್ನು ವಿರೋಧಿಸಿದ್ದಾದರೂ ಅದು ಹೇಗಿತ್ತು ಎಂದರೆ, ವಿರೋಧಿಸಿರುವುದಾಗಿ ಒಂದು ದಾಖಲೆ ಇರಬೇಕು, ಹೇಳಿಕೆ ಪ್ರಕಟವಾಗಬೇಕು ಎಂಬ ಧೋರಣೆ ಮಾತ್ರವಿತ್ತು.
ಯಾವ ಒತ್ತಡವನ್ನೂ ಅವು ಸರಕಾರದ ಮೇಲೆ ಹಾಕಲಿಲ್ಲ.
ಹಾಗೆ ನೋಡಿದರೆ ಅಂಥದೊಂದು ಸೂಚನೆಯನ್ನು ಯುಪಿ ಸರಕಾರ ಹೊರಡಿಸುತ್ತಿದ್ದ ಹಾಗೆಯೇ ಬಿಜೆಪಿ ಮಿತ್ರಪಕ್ಷಗಳು ಅದರ ವಿರುದ್ಧ ಪ್ರಧಾನಿಯ ಎದುರು ತಕರಾರೆತ್ತಬಹುದಿತ್ತು. ಬಡ ವ್ಯಾಪಾರಿಗಳ ಪರವಾಗಿ ಮಾತನಾಡಬಹುದಿತ್ತು. ಹೆಸರು ಪ್ರದರ್ಶಿಸಲು ಹೇಳಿ, ಅಲ್ಲಿನ ವಾತಾವರಣ ಹದಗೆಡಲು ಅವಕಾಶ ಮಾಡಿಕೊಡಬಾರದು ಎಂದು ಸ್ಪಷ್ಟ ದನಿಯಲ್ಲಿ ಆಗ್ರಹಿಸಿ, ಅದನ್ನು ಹಿಂದೆಗೆದುಕೊಳ್ಳುವಷ್ಟು ಬಲ ತೋರಿಸಲು ಬಹುಶಃ ಸಾಧ್ಯವಿತ್ತು.
ಆದರೆ ಅವು ಹಾಗೆ ಮಾಡಲೇ ಇಲ್ಲ. ಅವುಗಳಿಗೆ ಅಧಿಕಾರ, ಮಂತ್ರಿ ಸ್ಥಾನವೇ ಮುಖ್ಯವಾಗಿಬಿಟ್ಟಿತು. ಆ ಬಡ ವ್ಯಾಪಾರಿಗಳ ಪಾಲಿನ ಭರವಸೆಯಾಗಿ ನಿಲ್ಲುವುದು ಅವಕ್ಕೆ ಸಾಧ್ಯವಾಗಲೇ ಇಲ್ಲ.
ಅಂತಹ ಹೊತ್ತಲ್ಲಿ ಮಹುವಾರಂತಹ ದಿಟ್ಟ ಸಂಸದರು, ಆಕಾರ್ ಪಟೇಲ್, ಅಪೂರ್ವಾನಂದ್‌ರಂತಹ ಅಪ್ಪಟ ಜಾತ್ಯತೀತ ನಿಲುವಿನ ಸಾಮಾಜಿಕ ಕಾರ್ಯಕರ್ತರು ಸಣ್ಣ ಹಿಂದೂ ಮುಸ್ಲಿಮ್ ವ್ಯಾಪಾರಿಗಳಿಗೆ ಆಸರೆಯಾಗಿದ್ದಾರೆ.
ಇದು ಮುಸ್ಲಿಮರನ್ನು ಗುರಿ ಮಾಡಿಕೊಂಡು ಹೊರಡಿಸಿದ್ದ ಆದೇಶವಾಗಿತ್ತಾದರೂ, ಹಿಂದೂಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು. ಮುಸ್ಲಿಮ್ ಅಂಗಡಿಕಾರರ ಪೂರೈಕೆದಾರರಲ್ಲಿ ಕೆಲವರು ಹಿಂದೂ ಸಮುದಾಯಕ್ಕೇ ಸೇರಿದ್ದ ಸಣ್ಣ ವ್ಯಾಪಾರಿಗಳಾಗಿರುವ ಸಂದರ್ಭವನ್ನು ವರದಿಯೊಂದು ಉಲ್ಲೇಖಿಸಿದೆ.
ಮುಸ್ಲಿಮರ ಅಂಗಡಿ ಬಂದ್ ಆದರೆ ಆ ಹಿಂದೂ ಪೂರೈಕೆದಾರರ ಗಳಿಕೆಗೂ ಕಲ್ಲು ಬೀಳುತ್ತಿತ್ತು. ಹೀಗಾಗಿ ಈ ಆರ್ಥಿಕ ಬಹಿಷ್ಕಾರ ಮುಸ್ಲಿಮರ ಮೇಲೆ ಮಾತ್ರವಾಗಿರದೆ, ಬಡ ಹಿಂದೂಗಳ ಮೇಲೆಯೂ ಆಗಿತ್ತು.
ಇಡೀ ಅರ್ಥವ್ಯವಸ್ಥೆಯನ್ನು ಈ ಸರಕಾರ ಹೇಗೆ ಹಾಳುಗೆಡವಿದೆ ಎಂದರೆ, ಅಂತಿಮವಾಗಿ ಅದರ ಬಲಿಪಶುಗಳಾಗುವವರು ಬಡವರು. ಅವರು ಮುಸ್ಲಿಮರಾಗಿರಬಹುದು ಇಲ್ಲವೇ ಹಿಂದೂಗಳಾಗಿರಬಹುದು.
ಮುಸ್ಲಿಮರ ಅಂಗಡಿಗಳಲ್ಲಿ ಹಿಂದೂವೊಬ್ಬ ಕೆಲಸ ಮಾಡುತ್ತಿದ್ದರೆ, ಮುಸ್ಲಿಮರ ಮೇಲೆ ಹೇರುವ ಯಾವುದೇ ಆದೇಶದ ಪರಿಣಾಮವನ್ನು ಆ ಹಿಂದುವೂ ಅನುಭವಿಸಬೇಕಾಗುತ್ತದೆ. ಆತನ ಕುಟುಂಬವೂ ಎದುರಿಸಬೇಕಾಗುತ್ತದೆ.
ಇನ್ನೊಂದೆಡೆ ಕಾವಾಡಿ ತಯಾರಿಕೆಯಲ್ಲಿ ತಲೆಮಾರುಗಳಿಂದ ತೊಡಗಿರುವ ಮುಸ್ಲಿಮ್ ಕುಟುಂಬಗಳೂ ಇವೆ. ಅವರ ಈ ದುಡಿಮೆಗೆ ಪ್ರತಿಫಲ ಸಿಗುವುದು ಶ್ರಾವಣ ಮಾಸದಲ್ಲಿ. ನಾಲ್ಕು ತಿಂಗಳು ಮೊದಲಿಂದಲೇ ಕಾವಾಡಿ ತಯಾರಿಕೆ ಆರಂಭಿಸುವ ಅವರು ಈ ಶ್ರಾವಣ ಮಾಸಕ್ಕಾಗಿಯೇ ಕಾದಿರುತ್ತಾರೆ. ಈ ಬಾರಿ ಯುಪಿ ಸರಕಾರದ ಇಂಥದೊಂದು ಆದೇಶ ಇವರೆಲ್ಲರ ಅನ್ನಕ್ಕೂ ಕಲ್ಲು ಹಾಕುವ ಹಾಗಿತ್ತು. ಆದರೆ ಈ ದ್ವೇಷದ ರಾಜಕೀಯ ನಡೆಯಲಿಲ್ಲ.
ಎರಡೂ ಸಮುದಾಯದವರು ಪರಸ್ಪರ ಅವಲಂಬಿಸಿ ನಡೆಯುವ ಸಾಮಾಜಿಕ ವಾತಾವರಣದಲ್ಲಿ ಒಡೆಯುವ ನೀತಿಗಳನ್ನು ತರುವ ಸರಕಾರಗಳು ಸಾಧಿಸುವುದೇನು?
ಕಡೆಗೆ ಈ ದ್ವೇಷದ ಸೂಚನೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು.
ಕನ್ವರ್ ಯಾತ್ರೆ ದಶಕಗಳಿಂದ ದೇಶದಲ್ಲಿ ನಡೆಯುತ್ತಿದ್ದು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಹೀಗೆ ಎಲ್ಲಾ ಧರ್ಮದ ಜನರು ಕನ್ವಾರಿಯಾಗಳಿಗೆ ಸಹಾಯ ಮಾಡುತ್ತಾರೆ ಎಂದು ಡಾ. ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ಹೇಳಿದರು.
ಕಡೆಗೂ ಮುಸ್ಲಿಮ್ ವಿರೋಧಿ ನೀತಿಗೆ ಸುಪ್ರೀಂ ಕೋರ್ಟ್ ತಡೆಯೊಡ್ಡಿದೆ.
ದೇಶವನ್ನು ಹಾಳು ಮಾಡುತ್ತಿರುವುದೇ ಈ ಮುಸ್ಲಿಮ್ ವಿರೋಧಿ ನೀತಿಯಾಗಿದೆ. ಪ್ರತೀ ಹಂತದಲ್ಲಿಯೂ ಇದು ನಡೆಯುತ್ತಿದೆ. ಮತ್ತಿದನ್ನು ಗಮನಿಸಿ ಇದರ ವಿರುದ್ಧ ನಿಲ್ಲಬೇಕಾದ ಜರೂರು ಇದೆ.
ಮುಸ್ಲಿಮ್ ವಿರೋಧಿ ನೀತಿಯನ್ನು ಸಾಧಿಸಲು ಹೊಸ ಹೊಸ ನೆಪಗಳನ್ನು ಹುಡುಕಲಾಗುತ್ತದೆ ಎನ್ನುವುದೇ ಅಪಾಯಕಾರಿ.
ಈ ಸರಕಾರಕ್ಕೆ ಜನಗಣತಿ ನಡೆಸುವುದು ಬೇಕಿಲ್ಲ. ಯಾಕೆಂದರೆ, ಆಗ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಸುಳ್ಳು ಪ್ರಚಾರ ಮಾಡುವ ಅವಕಾಶ ತಪ್ಪಿಹೋಗುತ್ತದೆ ಎಂಬ ಭಯ. ಆದರೆ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಅಪಪ್ರಚಾರ ಮಾತ್ರ ಯಾವ ಆಧಾರವೂ ಇಲ್ಲದೆ ನಿರಂತರವಾಗಿ ನಡೆಯುತ್ತಿರಬೇಕು.
ಇಂಥ ಹೀನ ಸಂಚುಗಳ ಮೂಲಕವೇ ಬಿಜೆಪಿ ಸರಕಾರಗಳು ಬದುಕಿಕೊಂಡು ಬಂದಿವೆ. ಅದರ ಹೊರತಾಗಿ ನೀತಿಯುತ ದಾರಿಯಲ್ಲಿ ನಡೆದು ಉಳಿಯಲಾರದ ಸ್ಥಿತಿ ಅದರದ್ದು.
ಉದ್ಯೋಗವನ್ನೂ ಕೊಡುವುದಿಲ್ಲ, ಬೆಲೆಯೇರಿಕೆಯನ್ನೂ ಬಗೆಹರಿಸುವುದಿಲ್ಲ. ಅಗ್ನಿವೀರ್‌ನಂತಹ ಯೋಜನೆ ಮೂಲಕ ಜನರ ದಾರಿ ತಪ್ಪಿಸುವ ಮತ್ತೊಂದು ಸಂಚು ಹೂಡುತ್ತದೆ. ರೈತರ ಸಮಸ್ಯೆಯನ್ನು ಅದು ಪರಿಹರಿಸಲಾರದು, ಬದಲಾಗಿ ಅವರ ವಿರುದ್ಧವೂ ದ್ವೇಷ ಕಾರಲಾಗುತ್ತದೆ. ಅವರನ್ನು ತಮ್ಮ ಕಾರ್ಪೊರೇಟ್ ಮಿತ್ರರ ಅಡಿಯಾಳಾಗಿಸುವ ತಂತ್ರ ಫಲಿಸಲಿಲ್ಲವೆಂಬ ಸಿಟ್ಟು ಬಿಜೆಪಿಯ ಮಂದಿಗಿದೆ.
ವಲಸೆ ಕಾರ್ಮಿಕರ ನೂರೆಂಟು ಸಮಸ್ಯೆಗಳಿಗೆ ಸರಕಾರದ ಬಳಿ ಉತ್ತರವಿಲ್ಲ. ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಅದು ತಡೆಯಲಾರದು. ಬದಲಾಗಿ ಅವರು ಯಾರ ಬಲಿಪಶುಗಳಾಗುತ್ತಾರೋ ಆ ಮೇಲ್ವರ್ಗದವರ ರಕ್ಷಣೆಗೆ ನಿಲ್ಲಲಾಗುತ್ತದೆ.
ಕಾಲೇಜು ಓದು ಮುಗಿಸಿ ಹೊರಬೀಳುವ ಅರ್ಧದಷ್ಟು ಯುವಕರು ಉದ್ಯೋಗ ಪಡೆಯುವ ಅರ್ಹತೆಯನ್ನೇ ಗಳಿಸದ ಸ್ಥಿತಿಯಿದೆ ಎಂಬುದನ್ನು ಇವರದೇ ಆರ್ಥಿಕ ಸಮೀಕ್ಷೆ ಹೇಳುತ್ತದೆ. ಇದು ಈ ಸರಕಾರದ ಶಿಕ್ಷಣ ವ್ಯವಸ್ಥೆಯ ದುರವಸ್ಥೆ. ಇವತ್ತಿಗೆ ಎಂತಹ ಕೌಶಲ್ಯ ಬೇಕೋ ಅದನ್ನು ಯುವಜನತೆಗೆ ನೀಡಲಾರದ ಶಿಕ್ಷಣ ವ್ಯವಸ್ಥೆ ಇದು.
ಇವರದೇ ಮಿತ್ರರುಗಳು ಅಲ್ಲೆಲ್ಲ ಉನ್ನತ ಹುದ್ದೆಗಳನ್ನು ವರ್ಷಗಟ್ಟಲೆ ಆಕ್ರಮಿಸಿಕೊಂಡು ಕೂತಿದ್ದಾರೆ. ಆದರೆ ನಿಜವಾಗಿಯೂ ಗಮನ ಹರಿಸಬೇಕಿರುವ ಇಂಥ ವಿಚಾರಗಳನ್ನು ಬಿಟ್ಟು, ಸಸ್ಯಾಹಾರ, ಮಾಂಸಾಹಾರದ ವಿಚಾರ ಇಟ್ಟುಕೊಂಡು, ಹಿಂದೂ-ಮುಸ್ಲಿಮ್ ಎಂದುಕೊಂಡು ಬಡ ಮುಸ್ಲಿಮ್ ವ್ಯಾಪಾರಿಗಳನ್ನೂ ಬಿಡದೆ ದ್ವೇಷ ಹಬ್ಬಿಸುವುದರಲ್ಲಿ ಬಿಜೆಪಿ ಸರಕಾರಗಳು ತೊಡಗಿವೆ.
ನಿರುದ್ಯೋಗ ಬಗೆಹರಿಸುವ, ಶ್ರೀಮಂತರು-ಬಡವರ ನಡುವಿನ ಅಂತರ ಕಡಿಮೆ ಮಾಡುವ, ಮಹಿಳೆಯರ ಸುರಕ್ಷತೆಯತ್ತ ಗಮನ ಹರಿಸುವ ಯಾವ ಇರಾದೆಯೂ ಇರದ ಈ ಸರಕಾರಗಳು, ಮುಸ್ಲಿಮ್ ವಿರೋಧಿ ಭಾವನೆಗಳನ್ನು ಹಬ್ಬಿಸುವಲ್ಲಿ ಮಾತ್ರ ವಿಶ್ವಗುರುವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ ಮತ್ತು ತೀವ್ರ ಕಳವಳಕಾರಿ.