ಕೊಯ್ಯೂರಿನಲ್ಲಿ ‘ಹಳ್ಳಿಮನೆ’ ಎಂಬ ಮಿನಿ ಮ್ಯೂಸಿಯಂ!
ಕೆ.ಎ.ಹೈದರಲಿಯ ಸಂಗ್ರಹದಲ್ಲಿ ಅಪಾರ ಅಪೂರ್ವ ವಸ್ತುಗಳು
ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮದಲ್ಲಿ ‘ಹಳ್ಳಿಮನೆ’ ಎಂಬ ಮಿನಿ ಮ್ಯೂಸಿಯಂ ಇದೆ. ಇದೇನು ಸಂಘಸಂಸ್ಥೆಗಳಿಂದ ನಡೆಯುತ್ತಿರುವ ವಸ್ತು ಸಂಗ್ರಹಾಲಯವಲ್ಲ. ಬಡ ಕಾರ್ಮಿಕ ಕೆ.ಎ.ಹೈದರಲಿ ಎಂಬವರು ತನ್ನ ದುಡಿಮೆಯ ನಡುವೆಯೇ ಶೇಖರಿಸಿರುವ ಅಪೂರ್ವ ವಸ್ತುಗಳ ಕಣಜ ಎಂದರೂ ತಪ್ಪಾಗದು.
ಹೈದರಲಿ ತನ್ನ ಪುಟ್ಟ ಮನೆಯನ್ನೇ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿದ್ದಾರೆ. ಇಲ್ಲಿ ಹಳೆ ಕಾಲದ ನಾಣ್ಯಗಳಿಂದ ಆರಂಭಿಸಿ ಜಗತ್ತಿನ ವಿವಿಧ ದೇಶಗಳ ಈಗಿನ ನಾಣ್ಯಗಳ ಸಂಗ್ರಹವಿದೆ. ವಿವಿಧ ದೇಶಗಳ ಹಲವಾರು ಅಂಚೆ ಚೀಟಿಗಳು, ನೂರಾರು ವರ್ಷ ಹಳೆಯ ಅಳತೆ ಪಾತ್ರೆಗಳು, ರೇಡಿಯೊಗಳು, ವಿವಿಧ ಗಾತ್ರಗಳ ಟೇಪ್ ರೆಕಾರ್ಡರ್‌ಗಳು, ವೈವಿಧ್ಯಮಯ ಸಣ್ಣ, ದೊಡ್ಡ ಗಾತ್ರದ ಗಡಿಯಾರಗಳು, ವಾಚ್‌ಗಳು, ವಿವಿಧ ರೀತಿಯ ಕನ್ನಡಕಗಳು, ವಿವಿಧ ಆಯುಧಗಳು, ತೂಕದ ಸಾಧನಗಳು, ಮುಟ್ಟಾಗಳು, ಕೃಷಿ ಬಳಕೆಯ ಉಪಕರಣಗಳು, ಹಳೆಯ ಕಾಲದ ದೀಪಗಳು, ಪಾತ್ರೆಗಳು, ವಿವಿಧ ರೀತಿಯ ಕಲ್ಲುಗಳು, ಅಲಂಕಾರಿಕ ವಸ್ತುಗಳು, ಒನಕೆಗಳು, ಪೆನ್ನುಗಳು, ಹಿಂದಿನ ಕಾಲದಲ್ಲಿ ಮನೆಗಳಲ್ಲಿ ದಿನನಿತ್ಯ ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳು, ಎತ್ತಿನಗಾಡಿ, ಬೀಸುಕಲ್ಲುಗಳು ಹೀಗೆ ಸಾವಿರಾರು ವಸ್ತುಗಳ ಸಂಗ್ರಹವೇ ಈ ‘ಹಳ್ಳಿಮನೆ’ಯಲ್ಲಿದೆ.
► ಓದಿದ್ದು ಎರಡನೇ ತರಗತಿ: ಹೈದರಲಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರು. ಕೊಪ್ಪದ ಲೋಕನಾಥಪುರದ ಕಟ್ಟೆಮನೆಯಲ್ಲಿ ಅಬ್ದುಲ್ ರಹಿಮಾನ್ ಮತ್ತು ಐಸಾಬಿ ದಂಪತಿಯ ಮಗನಾಗಿ ೧೯೫೭ರಲ್ಲಿ ಜನಿಸಿದ ಹೈದರಲಿ ಓದಿದ್ದು ಎರಡನೇ ತರಗತಿಯಷ್ಟೇ. ತಮ್ಮ ೧೩ನೇ ವಯಸ್ಸಿನಲ್ಲಿ ಹಳೆಯ ವಸ್ತುಗಳ ಸಂಗ್ರಹ ಹವ್ಯಾಸ ಆರಂಭಿಸಿದ್ದು, ನಿರಂತರವಾಗಿ ಇಂದಿನವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ. ವೃತ್ತಿಯಾಗಿ ಮೇಸ್ತ್ರಿ ಕೆಲಸ ಮಾಡುತ್ತಿರುವ ಇವರು ಕೊಪ್ಪದಿಂದ ಕೊಯ್ಯೂರಿಗೆ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ದುಡಿಮೆಯ ಶೇ.೨೦ನ್ನು ಈ ಪ್ರಾಚ್ಯವಸ್ತುಗಳ ಸಂಗ್ರಹಕ್ಕಾಗಿಯೇ ವಿನಯೋಗಿಸಿದ್ದಾರೆ.
ಪ್ರಾಚ್ಯ ವಸ್ತುಗಳ ಸಂಗ್ರಹ ಸುಲಭದ ಮಾತಲ್ಲ. ಅದಕ್ಕಾಗಿ ಅವರು ರಾಜ್ಯಾದ್ಯಂತ ಸಾಕಷ್ಟು ಅಲೆದಾಡಿದ್ದಾರೆ, ಸಂಗ್ರಹಯೋಗ್ಯ ಹಳೆಯ ಸಾಮಗ್ರಿಗಳನ್ನು ಹಲವರಿಂದ ಕೇಳಿ ದಾನವಾಗಿ ಪಡೆದಿದ್ದರೆ, ಇನ್ನು ಕೆಲವರಿಂದ ಹಣ ನೀಡಿ ಖರೀದಿಸಿದ್ದಾರೆ. ಅವುಗಳ ಸಂಗ್ರಹಿಸುವುದಕ್ಕಿಂತಲೂ ಸಂರಕ್ಷಣೆಯೇ ಕಷ್ಟಕರ ಎನ್ನುತ್ತಾರೆ ಹೈದರಲಿ.
ಹೈದರಲಿಯವರ ಈ ವಸ್ತು ಸಂಗ್ರಹ ಹವ್ಯಾಸವನ್ನು ಸ್ಥಳೀಯರು ಗುರುತಿಸಿ ಅವರನ್ನು ಗೌರವಿಸಿದ್ದಾರೆ. ಸ್ಥಳೀಯವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಇವರ ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುತ್ತಾರೆ. ಈಗಾಗಲೇ ದ.ಕ. ಹಾಗೂ ನೆರೆಯ ಜಿಲ್ಲೆಗಳಲ್ಲಿ ಸುಮಾರು ೫೦ಕ್ಕೂ ಅಧಿಕ ಕಡೆ ಹೈದರಲಿ ತಮ್ಮ ಬಳಿಯಿರುವ ಅಪರೂಪದ ಸಾಮಗ್ರಿಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಹಲವು ಸಂಘಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿವೆ. ಆದರೆ ಸರಕಾರ ಮಾತ್ರ ಇವರ ನೆರವಿಗೆ ಬಂದಿಲ್ಲ ಎಂದು ಹೈದರಲಿ ಬೇಸರದಿಂದ ಹೇಳುತ್ತಾರೆ.
ಈಡೇರದ ಸುಸಜ್ಜಿತ ವಸ್ತು ಸಂಗ್ರಹಾಲಯದ ಕನಸು
ಹೈದರಲಿ ಬಾಲ್ಯದಲ್ಲಿ ಆರಂಭಿಸಿದ ಈ ವಸ್ತು ಸಂಗ್ರಹ ಹವ್ಯಾಸವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಸಾವಿರಾರು ವೈವಿಧ್ಯಮಯ ವಸ್ತುಗಳ ಸಂಗ್ರಹ ಇವರ ಬಳಿಯಿದೆ. ಅದನ್ನು ಎಲ್ಲರಿಗೂ ಪ್ರದರ್ಶಿಸಬೇಕು. ವಿದ್ಯಾರ್ಥಿಗಳು ಅವುಗಳನ್ನು ನೋಡುವಂತಾಗಬೇಕು ಎಂಬುದು ಅವರ ಆಸೆ. ಆದರೆ ಅದಕ್ಕೊಂದು ಸೂಕ್ತ ವ್ಯವಸ್ಥೆ ಕಲ್ಪಿಸಲು ಹೈದರಲಿಗೆ ಸಾಧ್ಯವಾಗಿಲ್ಲ. ಅವರ ಜೀವನದ ಗಳಿಕೆಯೆಂದರೆ ಈ ಪುರಾತನ ವಸ್ತುಗಳು ಹಾಗೂ ಒಂದು ಪುಟ್ಟ ಮನೆ ಮಾತ್ರ. ಅವರ ಸಂಗ್ರಹದಲ್ಲಿರುವ ಸಾವಿರಾರು ಅಪರೂಪದ ಸಾಮಗ್ರಿಗಳೆಲ್ಲವೂ ಅವರ ಮನೆಯ ಒಂದು ಕೊಠಡಿಯಲ್ಲಿ ಬ್ಯಾಗ್‌ಗಳಲ್ಲಿ ತುಂಬಿಸಿ ಇಟ್ಟಿದ್ದಾರೆ. ಹಲವನ್ನು ಅಟ್ಟದ ಮೇಲೆ ಏರಿಸಿದ್ದಾರೆ. ಆದ್ದರಿಂದ ಯಾರಾದರೂ ಇವರ ಹಳ್ಳಿಮನೆಗೆ ಬಂದು ಈ ಅಪರೂಪದ ವಸ್ತುಗಳನ್ನು ನೋಡಬೇಕು ಎಂದು ಬಯಸಿದರೆ ಅದು ಅಸಾಧ್ಯ. ಈ ವಸ್ತುಗಳು ಹಾನಿಯಾಗದಂತೆ ಸಂರಕ್ಷಿಸುವುದೇ ಒಂದು ದೊಡ್ಡ ಸವಾಲಾಗಿದೆ. ಈ ಅಪ ರೂಪದ ವಸ್ತುಗಳನ್ನು ಸಮರ್ಪಕವಾಗಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು, ಮಕ್ಕಳು ಸೇರಿದಂತೆ ಎಲ್ಲರೂ ಇದನ್ನು ನೋಡುವಂತಾಗಬೇಕು ಎಂಬುದು ಹೈದರಲಿಯವರ ಆಸೆ. ಆದರೆ ಅದು ಮಾತ್ರ ಇನ್ನೂ ಈಡೇರಿಲ್ಲ. ಇವರು ಜೀವಮಾನವಿಡೀ ಕಷ್ಟಪಟ್ಟು ಸಂಗ್ರಹಿಸಿದ ವಸ್ತುಗಳ ಪ್ರದರ್ಶನಕ್ಕೆ ಒಂದು ವ್ಯವಸ್ಥೆ ಮಾಡಿಕೊಡಿ ಎಂದು ಅವರು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಮಾತ್ರ ಇನ್ನೂ ಯಾವುದೇ ಸ್ಪಂದನ ಸಿಕ್ಕಿಲ್ಲ. ಸುಸಜ್ಜಿತವಾದ ವಸ್ತು ಸಂಗ್ರಹಾಲಯ ನಿರ್ಮಿಸಲು ಸಾಧ್ಯವಾದರೆ ಈ ವಸ್ತುಗಳನ್ನು ಸಂರಕ್ಷಿಸುವುದೂ ಸುಲಭವಾಗಲಿದೆ. ಇದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂಬುದು ಅವರ ಒಂದೇ ಬೇಡಿಕೆಯಾಗಿದೆ.
ಒಂದು ಕೋಟಿ ರೂ.ಗೂ ಅಧಿಕ ಮೌಲ್ಯವಿರುವ ಅತ್ಯಂತ ಅಪರೂಪದ ಬೆಲೆ ಕಟ್ಟಲಾಗದ ಸಾಮಗ್ರಿಗಳು ನನ್ನ ಸಂಗ್ರಹದಲ್ಲಿದೆ. ಆದರೆ ಇಲ್ಲಿಗೆ ಬರುವವರಿಗೆ ಇದನ್ನು ವೀಕ್ಷಿಸಲು ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂಬುದು ದುಃಖದ ವಿಚಾರ. ಅದಕ್ಕಾಗಿ ಒಂದು ವಸ್ತು ಸಂಗ್ರಹಾಲಯ ರೂಪಿಸಬೇಕು ಎಂಬುದು ನನ್ನ ಕನಸು. ► ಹೈದರಲಿ ಕೆ.ಎ. ಕೊಯ್ಯೂರು, ಹಳ್ಳಿಮನೆ
ತಂದೆ ಆರಂಭಿಸಿದ ಈ ಅಪರೂಪದ ವಸ್ತುಗಳನ್ನು ನಿರಂತರವಾಗಿ ಸಂರಕ್ಷಿಸುತ್ತಾ ಮುಂದುವರಿಸಲು ಇಚ್ಛಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ತಂದೆಯಿಂದ ಕಲಿತುಕೊಂಡಿದ್ದೇನೆ. ಈ ವಸ್ತು ಸಂಗ್ರಹವನ್ನು ಇನ್ನಷ್ಟು ಬೆಳೆಸಬೇಕು ಎಂಬ ಉದ್ದೇಶ ಹೊಂದಿದ್ದೇನೆ.
► ಫಾತಿಮತ್ ರಝಿಯಾ ಆಲಿಯಾ
ಮಗಳಿಗೆ ಹಸ್ತಾಂತರ
ತಾನು ಸಂಗ್ರಹಿಸಿರುವ ಎಲ್ಲ ವಸ್ತುಗಳ ಜವಾಬ್ದಾರಿಯನ್ನೂ ಹೈದರಲಿ ತನ್ನ ಸಂಗ್ರಹದ ಎಲ್ಲ ಪುರಾತನ ವಸ್ತುಗಳೊಂದಿಗೆ ಪುತ್ರಿಗೆ ಹಸ್ತಾಂತರಿಸಿದ್ದಾರೆ. ಕಿರಿಯ ಪುತ್ರಿ ಫಾತಿಮತ್ ರಝಿಯಾ ಆಲಿಯಾ ಇದೀಗ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ. ಈಗಾಗಲೇ ಪುರಾತನ ವಸ್ತುಗಳ ಸಂರಕ್ಷಣೆಯ ಬಗ್ಗೆ ತಂದೆಯಿಂದ ಸಾಕಷ್ಟು ತಿಳಿದುಕೊಂಡಿದ್ದಾರೆ. ತನ್ನ ಕಲಿಕೆಯೊಂದಿಗೆ ತಂದೆಯೊಂದಿಗೆ ಸೇರಿ ಪುರಾತನ ವಸ್ತುಗಳ ಸಂಗ್ರಹ ಕಾರ್ಯಕ್ಕೂ ಮುಂದಾಗುತ್ತಿದ್ದಾರೆ.