ಕಪಾಳ ಮೋಕ್ಷವೆಂಬ ‘ಹಿಂಸೆ’ಯ ಸ್ವರೂಪ
ಕಂಗನಾಗೆ ಕಪಾಳ ಮೋಕ್ಷ ಮಾಡಿದ ಹೆಣ್ಣು ಮಗಳ ಬಗ್ಗೆ ಸ್ಪಷ್ಟವಾದ ಎರಡು ನಿಲುವುಗಳು ಕಾಣಿಸುತ್ತಿವೆ.
1. ಆಕೆ ಕಾನೂನು ಕೈಗೆತ್ತಿಕೊಳ್ಳುವ ರೀತಿಯಲ್ಲಿ ಹಿಂಸಾತ್ಮಕವಾಗಿ ಹಲ್ಲೆ ಮಾಡಿದ್ದು ತಪ್ಪು ಅದು ಸಮರ್ಥನೀಯವಲ್ಲ.
2. ಆಕೆ ಪ್ರತಿಕ್ರಿಯಿಸಿದ್ದು ಸರಿ, ಅದೊಂದು ಆಳದ ದಮನ/ ಅವಮಾನಕ್ಕೆ ಪ್ರತಿಕ್ರಿಯೆ.
ಮೊದಲನೆಯದು ಸರಳವಾದ ನೆಲದ ಕಾನೂನಿನ ಸುಪ್ರಮಸಿಗೆ ತಲೆಬಾಗುವ ನಾಗರಿಕ ಪ್ರಜ್ಞೆಯ ಪ್ರತಿಕ್ರಿಯೆ. ಎರಡನೆಯದು ಸಮೂಹದ ನೈತಿಕ ಆಕ್ರೋಶದ ಪ್ರತಿಕ್ರಿಯೆ.
ಇವೆರಡನ್ನೇ ಇಟ್ಟುಕೊಂಡರೆ ಈ ಘಟನೆ ತೋರುವ ವೈವಿಧ್ಯಮಯ ನೈತಿಕ/ ಕ್ರಿಯಾತ್ಮಕ ಸಂಗತಿಗಳ ವಿಶ್ಲೇಷಣೆ ಮಾಯವಾಗಿ ಬಿಡುತ್ತದೆ.
ಹಿಂಸೆ ಯಾವ ಪ್ರಮಾಣದಲ್ಲಿ, ಯಾವ ಸ್ವರೂಪದಲ್ಲಿದ್ದರೆ ಒಪ್ಪಿತ? ಅದಕ್ಕಿರುವ ಲಕ್ಷ್ಮಣ ರೇಖೆಯೇನು? ಈ ಹಿಂಸೆಗೆ ತಾತ್ವಿಕ ಬೇರುಗಳಿವೆಯೇ? ಪ್ರಭುತ್ವದ ಹಿಂಸೆಯನ್ನು ಹೇಗೆ ನೋಡುತ್ತೇವೆ? ಹೀಗೆ ಹಲವು ಪ್ರಶ್ನೆಗಳನ್ನು ನಾವು ಚರ್ಚಿಸದಿದ್ದರೆ ಏನು ಬಂತು?
ಕೆಲವು ವರ್ಷಗಳ ಹಿಂದೆ ಹೆಗ್ಗೋಡಿನ ಶಿಬಿರದಲ್ಲಿ ಹಿಂಸೆಯ ಎಡ-ಬಲ ಎಂಬ ಘನ ವಿಷಯ ಮೈನ್ ಥೀಮ್‌ಆಗಿತ್ತು. ಅದು ಎಷ್ಟು ಅಸಂಬದ್ಧ ಎಂದು ಅರಿವಿಗೆ ಬರಲು ದೊಡ್ಡ ಪಾಂಡಿತ್ಯದ ನೆರವು ಬೇಕಾಗಿಲ್ಲ.
ಬಲಪಂಥೀಯ ಹಿಂಸೆಯ ನೆಲೆಗಟ್ಟೇನು, ಎಡಪಂಥೀಯ ಹಿಂಸೆಯ ನೆಲೆಗಟ್ಟೇನು ಎಂಬ ಪ್ರಾಥಮಿಕ ಅರಿವಿದ್ದರೂ ಈ ತಕ್ಕಡಿ ಜಾಣ್ಮೆಯ ಅಸಂಬದ್ಧತೆ ಗೊತ್ತಾಗುತ್ತದೆ.
ಕೌರ್‌ರ ಪ್ರತಿಕ್ರಿಯೆ ಒಂದು ಸಾಮೂಹಿಕ ಅವಮಾನ/ ದಮನದ ವ್ಯಕ್ತಿಗತ ಪ್ರತಿಕ್ರಿಯೆಯೇ ಹೊರತು, ಸಂಘಟಿತವಾಗಿ ನಿರ್ದೇಶಿತವಾದ ಪ್ರತಿಕ್ರಿಯೆ ಅಲ್ಲ. ಈ ಪ್ರತಿಕ್ರಿಯೆಗೆ ತೆರಬೇಕಾದ ಬೆಲೆ ಏನೆಂಬುದು ಆಕೆಗೆ ಗೊತ್ತಿತ್ತು. ಅರ್ಥಾತ್, ನೆಲದ ಕಾನೂನು ಬಗ್ಗೆ ಆಕೆಗೆ ಗೊತ್ತು. ಅಷ್ಟಿದ್ದರೂ ಆಕೆ ಯಾಕೆ ಈ ಕ್ರಿಯೆಗೆ ಮುಂದಾದರು? (ಈಗಾಗಲೇ ಆಕೆಯ ಅಮಾನತು/ ವಜಾ ಇತ್ಯಾದಿ ಪ್ರಕ್ರಿಯೆ ಆರಂಭವಾಗಿದೆ).
ಶತಮಾನದ ಹಿಂದೆ ಭಗತ್ ಸಿಂಗ್ ‘ಕಿವುಡರಿಗೆ ಕೇಳುವ ಹಾಗೆ’ ಹೇಳಿಕೆಯನ್ನು ನಿರಪಾಯಕಾರಿ ಬಾಂಬ್ ಹಾಕುವುದರೊಂದಿಗೆ ನೀಡಿದಾಗ ಆತನಿಗೂ ನೆಲದ ಕಾನೂನು ಗೊತ್ತಿತ್ತು. (ಆತ ಎಷ್ಟು ಗಮನಿಸಿದ್ದ ಅಂದರೆ ಭಗತ್, ಆಝಾದ್ ಬಗ್ಗೆ ಅಪಾರ ಪ್ರೀತಿ, ಕಾಳಜಿ ಇದ್ದ ಪಂಡಿತ್ ಮೋತಿಲಾಲ್ ನೆಹರೂ ಅಸೆಂಬ್ಲಿಯಲ್ಲಿದ್ದುದನ್ನು ಗಮನಿಸಿ, ಯಾರಿಗೂ ಘಾಸಿಯಾಗದ ಭಾಗಕ್ಕೆ ಬಾಂಬು ಎಸೆದಿದ್ದ)
ಅಷ್ಟೇಕೆ ಸ್ವತಃ ಗಾಂಧಿ ಸಹಿತ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರೂ ನೆಲದ ಕಾನೂನು ಒಪ್ಪಿ ಶಿಕ್ಷೆ ಅನುಭವಿಸಿದ್ದರು. ಪ್ರತಿರೋಧ ನೆಲದ ಕಾನೂನನ್ನು ಒಪ್ಪದೆಯೂ ಮಾಡುವ ಕೆಲಸವಾದರೆ ಆಗ ಅದರ ವಿಶ್ಲೇಷಣೆಯೇ ಬೇರೆಯಾಗುತ್ತದೆ!! ಅಂದೂ ಕಾನೂನು ಕೈಗೆ ತೆಗೆದುಕೊಂಡು ಹಿಂಸೆಯ ಉಗ್ರ ವಿಧಾನ ಬಳಸಿದ್ದಕ್ಕೆ ಭಗತ್‌ಸಿಂಗ್‌ಮತ್ತು ಆತನ ಸಹಚರರನ್ನು ‘ಟೆರರಿಸ್ಟ್’ಎಂದು ಉಲ್ಲೇಖಿಸಲಾಗಿತ್ತು. ಆದರೆ ಬದಲಾದ ಕಾಲಸಂದರ್ಭದಲ್ಲಿ ಆತನ ಬಗ್ಗೆ ದೇಶ ತಳೆದ ನಿಲುವು ಹೇಗೆ ಮತ್ತು ಏಕೆ ಬದಲಾಯಿತು?
ಅದೊಂದು ವಿದೇಶೀ ಪ್ರಭುತ್ವ, ಅದಕ್ಕೆ ಅಸಲಿ ನೆಲದ ಮೊಹರು ಇರಲಿಲ್ಲ ಎಂಬುದು ಒಂದು ವಾದ.
ಕ್ಯೂಬಾದಲ್ಲಿ ಇದ್ದದ್ದು ವಿದೇಶೀ ಶಕ್ತಿ ಅಲ್ಲ, ಅದೇ ನೆಲದ ಸರ್ವಾಧಿಕಾರಿ. ಆತ ಆ ನೆಲದ ಕಾನೂನು ಬಳಸಿಯೇ ದಮನ ಶುರು ಮಾಡಿದ್ದು. ಅಮೆರಿಕೆಯ ಕೈಗೊಂಬೆ ಆಗಿದ್ದು. ಆತನ ವಿರುದ್ಧದ ಸಶಸ್ತ್ರ ಕ್ರಾಂತಿಯನ್ನು ಹೇಗೆ ನೋಡುವುದು? ಚೆಗುವೇರಾನ ಟಿ ಶರ್ಟ್ ಹಾಕಿಕೊಳ್ಳುವುದು ಹೇಗೆ?
ಪ್ರಭುತ್ವ ನೆಲದ ಕಾನೂನನ್ನೇ ಬಳಸಿ ಪ್ರತಿರೋಧವನ್ನು ಹತ್ತಿಕ್ಕುವಾಗ, ಆ ಪ್ರಭುತ್ವಕ್ಕೆ ಬೆಂಬಲ ನೀಡುವ ಎಲ್ಲರೂ ಪ್ರಭುತ್ವದ ಭಾಗವೇ ಆಗುತ್ತಾರೆ. ಆಗ ಪ್ರತಿರೋಧವೆಂಬುದು ಕೇವಲ ಸರಕಾರ, ಅದರ ಯಂತ್ರಗಳ ವಿರುದ್ಧದ ಹೋರಾಟವಾಗುವುದಿಲ್ಲ.
ಕಂಗನಾ ಅಂತಹ ಒಂದು ಪ್ರಭುತ್ವದ ಶಕ್ತಿವರ್ಧಕ ಇಂಧನ. (ಆಕೆಯನ್ನು ಗೆಲ್ಲಿಸಿದವರೂ!!)
ಅರ್ಥಾತ್ ಭಗತ್ ಬಳಸಿದ ಸಾಂಕೇತಿಕ ಹಿಂಸೆಯ ತೋರು ಬೆರಳು ಮತ್ತೆ ಕೌರ್‌ರ ಬೆರಳುಗಳಲ್ಲೂ ವ್ಯಕ್ತವಾಗಿದೆ..
ಕೌರ್‌ರದ್ದು ಸಂಘಟಿತ, ಯೋಜಿತ ಪ್ರತಿಕ್ರಿಯೆ ಅಲ್ಲ, ಅಸಹಾಯಕ ರೊಚ್ಚಿನ ಅಭಿವ್ಯಕ್ತಿ. ಇದಕ್ಕೂ parallel ಇದೆಯಾ ಅಂತ ನೋಡಿದರೆ ಶಹೀದ್ ಉಧಮ್ ಸಿಂಗ್ ಡ್ವೆಯರ್‌ನನ್ನು ಕೊಂದಿದ್ದು ಇದೇ ವ್ಯಕ್ತಿಗತ ನೆಲೆಯಲ್ಲಿ. ಅದು ಅತಿಯಾಯಿತು ಎಂದು ಹೇಳಬಹುದು. ಆಗ ಡ್ವೆಯರ್ ಪಾತಕವನ್ನೂ ಉಧಮ್ ಸಿಂಗ್‌ನ ಕೃತ್ಯವನ್ನೂ ಕಾನೂನಿನ ತಕ್ಕಡಿಯಲ್ಲಿ ಸಮಾನವಾಗಿ ಇಟ್ಟು ಕೈತೊಳೆದುಕೊಳ್ಳಬೇಕಾಗುತ್ತದೆ.
***
ಈಗ ಈ ಕೃತ್ಯಗಳ ನೈತಿಕ ಕಾಣ್ಕೆಯ ಪದರಗಳನ್ನು ನೋಡೋಣ.
ಒಂದು ಹಿಂಸಾತ್ಮಕ ಪ್ರತಿಕ್ರಿಯೆಯ ಹಿಂದೆ ತಾತ್ವಿಕ ಭೂಮಿಕೆ ಇದ್ದಾಗಲೂ ಸಮರ್ಥನೀಯವೇ ಎಂಬ ಪ್ರಶ್ನೆ ಅದು. ಇದು ಸಮುದಾಯದ ಅನಿಸಿಕೆಯ ಆಳ ಜ್ವಾಲಾಮುಖಿಯಲ್ಲಿ ಕುದಿಯುತ್ತಿದ್ದ ಅಂಶವೇ?
ದಾಸ್ತೋವಸ್ಕಿ ಮತ್ತು ಕಮೂ ಇಂತಹ ಹಿಂಸೆಯ ಅತಿರೇಕಗಳನ್ನು ವಿಶ್ಲೇಷಿಸುತ್ತಾರೆ. Collateral damage ಎಂದು ಕರೆಯುವ ಪರಿಣಾಮಗಳನ್ನು ತಿರಸ್ಕರಿಸುವ ತಾತ್ವಿಕ ನೆಲೆ ಅದು.
ಕೌರ್‌ರ ಸಾಂಕೇತಿಕ ಪ್ರತಿಕ್ರಿಯೆಯನ್ನು ಬಲಪಂಥೀಯ ಪೂರ್ವಾಗ್ರಹ ಪೀಡಿತ ಸಾಮೂಹಿಕ ಹಿಂಸೆಯ ಜೊತೆ ಇಟ್ಟು ನೋಡಿದಾಗ ಹೇಗೆ ಕಾಣುತ್ತದೆ.? ಪ್ರಭುತ್ವ ರೈತ ಹೋರಾಟಗಾರರ ಮೇಲೆ ನಡೆಸಿದ ಹಿಂಸೆಯೊಂದಿಗೆ ಹೋಲಿಸಿದರೆ?
ಎಮರ್ಜೆನ್ಸಿಯ ಅವಧಿಯಲ್ಲಿ ವಾರ್ಧಾದ ಆಶ್ರಮದಲ್ಲಿದ್ದ ಪ್ರಭಾಕರ್ ಎಂಬ ವೃದ್ಧ ಗಾಂಧಿವಾದಿ ಎಮರ್ಜೆನ್ಸಿಯ ದಮನ ಕಂಡು ಅಸಹಾಯಕ ತುಮುಲದಲ್ಲಿ ಬೆಂಕಿ ಹಚ್ಚಿಕೊಂಡು ಹುತಾತ್ಮರಾಗಿದ್ದರು.
ಇಂತಹ ಸಂದರ್ಭದಲ್ಲಿ ನಾಗರಿಕ ಸಮಾಜ ಏನು ಭರವಸೆ ಕೊಡಬಹುದು. ಹಿಂಸಾಚಾರ ಬೇಡ, ಈ ನೆಲದ ಕಾನೂನಿನ ಮೇಲೆ ನಂಬಿಕೆ ಇಡು, ನೀನು ತೋರು ಬೆರಳಲ್ಲಿ ತೋರಿದ ಇಶ್ಯೂ ಬಗ್ಗೆ ನ್ಯಾಯ ಕೊಡಿಸಲು ನಾವು ಹೋರಾಡುತ್ತೇವೆ ಎಂಬ ಭರವಸೆ ನೀಡಬಹುದು. ಆದರೆ ಅಂತಹ ಭರವಸೆ ಎಲ್ಲಾದರೂ ನಿಜವಾಗಿ ಗುರಿ ಮುಟ್ಟಿದೆಯಾ?
ಈ ಸಾಮೂಹಿಕ ಅಸಹಾಯಕತೆಯೇ ನಮ್ಮ ಸಿನೆಮಾ ಹೀರೋಗಳ ಅತಿ ಮಾನವ ಸ್ಟಂಟುಗಳಿಗೆ ಸಿಳ್ಳೆ ಹಾಕುವಂತೆ ಪ್ರೇರೇಪಿಸುವುದು.. ಕೌರ್‌ರ ಕ್ರಿಯೆಗೆ ಸಿಕ್ಕಿರುವ ಸಾಮೂಹಿಕ ಅಂಗೀಕಾರ ಮತ್ತು ಅನುಕಂಪ ಈ ನಿತ್ಯದಲ್ಲಿ ಕಂಡ ಸತ್ಯದ ಮೂಲದಿಂದ ಹುಟ್ಟಿದೆ.
ಅರ್ಥಾತ್ ಇಂತಹ ಕ್ರಿಯೆಗಳು ಸಾದಾ ಕಪ್ಪು- ಬಿಳುಪು ನಿರ್ಣಯದ ಸರಳೀಕರಣದ ತೆಕ್ಕೆಗೆ ದಕ್ಕದು. ಇಂತಹದ್ದು ನಡೆದಾಗ ಪಶ್ಚಿಮದ ದೇಶಗಳಲ್ಲಿ ವ್ಯಾಪಕ ಚರ್ಚೆಯಾಗುವುದು ಕೃತ್ಯದ ಕಾನೂನಾತ್ಮಕ ವಿಚಾರಗಳ ಮೇಲಲ್ಲ. ಅದು ತನ್ನ ಪಾಡಿಗೆ ನಡೆಯುತ್ತದೆ.
ಇದು ಯಾಕೆ ಜರುಗಿತು? ಇದು ಜರುಗಲು ಕಾರಣವಾದ ಕಾಲ-ಸಂದರ್ಭ ಏನು? ಯಾರ ಕ್ರಿಯೆ ಈ ಪ್ರತಿಕ್ರಿಯೆಯನ್ನು ಪ್ರಚೋದಿಸಿತು ಎಂಬಿತ್ಯಾದಿ ಚರ್ಚೆ ವ್ಯಾಪಕವಾಗಿ ನಡೆಯುತ್ತದೆ.
ತೀರಾ ಸಾಮಾನ್ಯ ಸ್ತರದಲ್ಲಿ ಸರ್ವ ತಂತ್ರ ಸ್ವತಂತ್ರ ದೇಶವೊಂದರ ನಾಗರಿಕ ಸಮಾಜ ತನ್ನ ಪ್ರಭುತ್ವ ತನ್ನದೇ ಸಂವಿಧಾನ, ಕಾನೂನಿನ ಮೂಲಕ ದಮನಿಸುವ ವೈರುಧ್ಯವನ್ನು ಗಮನಿಸಿ ಕಾಲಕಾಲಕ್ಕೆ ಅದನ್ನು ತಿದ್ದಬೇಕಾದ ಒತ್ತಡವನ್ನು ಸೃಷ್ಟಿಸಿ ಮುಂದೊತ್ತುತ್ತಾರೆ. ಯಾವ ಕಾನೂನೂ ಶಿಲೆಯಲ್ಲಿ ಕೆತ್ತಿದ ಘನೀಭೂತ ಸಂಗತಿ ಅಲ್ಲ. ಅದು ಮಾರ್ಪಾಡಾಗಬೇಕಾದ ಒತ್ತಡವನ್ನು ಇಂತಹ ಘಟನೆಗಳು ಪದೇ ಪದೇ ಸೃಷ್ಟಿಸುತ್ತವೆ. ಕಾನೂನುಗಳೂ ಸ್ಪಂದನಶೀಲತೆಯಲ್ಲಿ ನವೀಕರಣಗೊಳ್ಳುವುದು ಹೀಗೆ.
ಈಗ ಕೊಂಚ ನಿಶ್ಯಕ್ತ ಸ್ವರೂಪದಲ್ಲಿರುವ ಮೋದಿ ಸರಕಾರದ ಕಳೆದ ದಶಕದ ದಮನ ನೀತಿಯನ್ನೂ ಇದೇ ಚೌಕಟ್ಟಿನಲ್ಲಿ ನೋಡಬೇಕು. ದೊಡ್ಡ ಮಟ್ಟದ ರಾಜಕೀಯ ಚರ್ಚೆ ಸೃಷ್ಟಿಯಾಗಬೇಕು.