ಆರೆಸ್ಸೆಸ್-ಬಿಜೆಪಿ ಸುಳ್ಳುಗಳ ಸರಮಾಲೆ!
ಆರೆಸ್ಸೆಸ್ ಮತ್ತು ಬಿಜೆಪಿ ರಾಜಕೀಯ ಅಧಿಕಾರ ಪಡೆಯಲು ಪ್ರಚಾರ, ಸುಳ್ಳು ಮಾಹಿತಿ ಮತ್ತು ಸತ್ಯದ ವಿರೂಪಗಳನ್ನೇ ಹೆಚ್ಚಾಗಿ ಬಳಸಿಕೊಂಡಿವೆ.
ಬಿಜೆಪಿ ಮತ್ತು ಆರೆಸ್ಸೆಸ್‌ನ ಸುಳ್ಳು, ಅವು ಪ್ರತಿಪಾದಿಸುವ ಅಖಂಡ ಭಾರತ ಎಂಬ ಕಟ್ಟುಕಥೆಯೊಂದಿಗೇ ಶುರುವಾಗುತ್ತವೆ ಎನ್ನುತ್ತಾರೆ ಆನಂದ್ ತೇಲ್ತುಂಬ್ಡೆ.
ಐತಿಹಾಸಿಕವಾಗಿ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗೆ ಮೊದಲು ಇಡೀ ಉಪಖಂಡವನ್ನು ಒಳಗೊಂಡ ಒಂದೇ ಆಡಳಿತ ಅಥವಾ ರಾಜಕೀಯ ಅಸ್ತಿತ್ವವಿರಲಿಲ್ಲ. ಸಾವಿರಾರು ವರ್ಷಗಳ ಹಿಂದೆ ಭಾರತ ಒಂದು ರಾಷ್ಟ್ರವಾಗಿತ್ತು ಎಂಬ ಸುಳ್ಳನ್ನು ಸುಲಭವಾಗಿ ತಳ್ಳಿಹಾಕಬಹುದು. ಯಾಕೆಂದರೆ ಭಾರತ ಎಂಬುದೇ ಇರಲಿಲ್ಲ. ಭಾರತ ವಸಾಹತುಶಾಹಿ ಕಾಲದಲ್ಲಿ ಅಸ್ತಿತ್ವಕ್ಕೆ ಬಂತು ಮತ್ತು ಅದು 1947ರಲ್ಲಿ ಸ್ವತಂತ್ರ ರಾಷ್ಟ್ರವಾಯಿತು. ಬ್ರಿಟಿಷ್ ಭಾರತದ ವಿಭಜನೆಯಾಗುವುದರೊಂದಿಗೆ ಪಾಕಿಸ್ತಾನದ ಸೃಷ್ಟಿಗೆ ಕಾರಣವಾಯಿತು.
ಬಿಜೆಪಿ, ಆರೆಸ್ಸೆಸ್‌ನ ವಿ.ಡಿ. ಸಾವರ್ಕರ್, ಬಿ.ಎಸ್. ಮೂಂಜೆ, ಕೆ.ಬಿ. ಹೆಡ್ಗೆವಾರ್ ಮತ್ತು ಎಂ.ಎಸ್. ಗೋಳ್ವಾಲ್ಕರ್ ಇವರೆಲ್ಲ ಮುಸ್ಸೋಲಿನಿ ಮತ್ತು ಹಿಟ್ಲರ್ ಅಂಥ ಸರ್ವಾಧಿಕಾರಿಗಳ ನಡೆಯನ್ನು ಬಹಳ ಹಿಂದಿನಿಂದಲೂ ಮೆಚ್ಚಿದ್ದವರು. ಈಗಲೂ ಅದೇ ಪರಂಪರೆಯೇ ಮುಂದುವರಿದಿದೆ. ಪ್ರಜಾಪ್ರಭುತ್ವ ಎನ್ನುವುದಕ್ಕೆ ಅವರು ಯಾರೂ ಗೌರವ ಕೊಟ್ಟವರಲ್ಲ.
ಬಿಜೆಪಿ-ಆರೆಸ್ಸೆಸ್‌ನ ಪ್ರಮುಖ ಸುಳ್ಳುಗಳು ಮತ್ತು ವಿರೂಪಗಳ ಬಗ್ಗೆ ನೋಡುವುದಾದರೆ,
► ಇತಿಹಾಸದ ತಪ್ಪು ನಿರೂಪಣೆ
ಮುಸ್ಲಿಮ್ ಆಡಳಿತಗಾರರನ್ನು, ವಿಶೇಷವಾಗಿ ಮೊಗಲರನ್ನು ಸಾರ್ವತ್ರಿಕವಾಗಿ ದಬ್ಬಾಳಿಕೆಯ ಆಕ್ರಮಣಕಾರರೆಂದು ಬಿಂಬಿಸಲಾಯಿತು.
ಆ ಮೂಲಕ ನಾವು v/s ಅವರು ಎಂಬ ನಿರೂಪಣೆಯನ್ನು ಸೃಷ್ಟಿಸುವುದು ನಡೆಯಿತು.
ಸಾಂಸ್ಕೃತಿಕ ಸಮನ್ವಯತೆ, ಪ್ರಗತಿಪರ ನೀತಿಗಳು ಮತ್ತು ಹಿಂದೂ ಆಡಳಿತಗಾರರೊಂದಿಗಿನ ಮೈತ್ರಿಗಳ ಉದಾಹರಣೆಗಳನ್ನೆಲ್ಲ ಬೇಕೆಂದೇ ಮರೆಮಾಚುವುದು ನಡೆಯಿತು. ಸಾವರ್ಕರ್‌ರಂತಹ ವ್ಯಕ್ತಿಗಳನ್ನು ಕಟ್ಟಾ ರಾಷ್ಟ್ರೀಯವಾದಿಗಳೆಂಬಂತೆ ಬಿಂಬಿಸಲಾಯಿತು. ಬ್ರಿಟಿಷರಿಗೆ ಅವರು ನೀಡಿದ್ದ ಸಹಕಾರದ ಕುರಿತು ಹೇಳದೆ ಅದನ್ನು ಪೂರ್ತಿ ಅಳಿಸಿಹಾಕುವುದು ನಡೆಯಿತು. ಧಾರ್ಮಿಕ ಆಧಾರದ ಮೇಲೆ ಜನರ ಏಕತೆಯನ್ನು ಮುರಿಯಲು ಪ್ರಯತ್ನಿಸಲಾಯಿತು.
► ಬುಡಕಟ್ಟು ಜನಾಂಗದವರ ಕುರಿತ ನಿರೂಪಣೆ
ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳು ಭಾರತದ ಬುಡಕಟ್ಟು ಸಮುದಾಯಗಳು ಅಥವಾ ಆದಿವಾಸಿಗಳನ್ನು ಹಿಂದೂ ಸಮಾಜದ ಭಾಗ ಎಂದೇ ಪ್ರಚಾರ ಮಾಡಿವೆ. ಅವರನ್ನು ಆದಿವಾಸಿಗಳು ಅಥವಾ ಮೂಲ ನಿವಾಸಿಗಳು ಎನ್ನುವುದಕ್ಕಿಂತ ವನವಾಸಿಗಳು ಅಥವಾ ಅರಣ್ಯವಾಸಿಗಳು ಎಂದು ಅವು ಉಲ್ಲೇಖಿಸುವುದೇ ಹೆಚ್ಚು. ಇದು, ಅವರ ವಿಶಿಷ್ಟ ಗುರುತು ಮತ್ತು ಸ್ವಾಯತ್ತತೆಯನ್ನು ನಿರಾಕರಿಸುವ ರೀತಿಯಾಗಿದೆ.
ಬುಡಕಟ್ಟು ಜನಾಂಗದವರನ್ನು, ಅದರಲ್ಲೂ ಕ್ರಿಶ್ಚಿಯನ್ ಧರ್ಮ ಅಥವಾ ಆನಿಮಿಸ್ಟಿಕ್ ನಂಬಿಕೆಗಳನ್ನು ಪಾಲಿಸುವವರನ್ನು ಹಿಂದೂ ಧರ್ಮಕ್ಕೆ ಮತಾಂತರಿಸುವ ಕೆಲಸದಲ್ಲಿ ವನವಾಸಿ ಕಲ್ಯಾಣ ಆಶ್ರಮಗಳು ಕೆಲಸ ಮಾಡುತ್ತಿವೆ. ಕ್ರಿಶ್ಚಿಯನ್ ಧರ್ಮದೆಡೆಗೆ ಒಲವು ತೋರಿಸುವ ಬುಡಕಟ್ಟು ಸಮುದಾಯಗಳನ್ನು ಟಾರ್ಗೆಟ್ ಮಾಡಲೆಂದೇ ಮತಾಂತರ ವಿರೋಧಿ ಕಾನೂನುಗಳನ್ನು ತರಲಾಗಿದೆ. ಅಂತಹ ಮತಾಂತರಗಳ ಹಿಂದಿನ ಸಹಜತೆಯನ್ನು ನಿರ್ಲಕ್ಷಿಸಿ, ಅದು ಹಿಂದೂ ಸಂಸ್ಕೃತಿಗೆ ಅಪಾಯಕಾರಿ ಎಂಬಂತೆ ಬಿಂಬಿಸುವುದು, ಬ್ರಾಂಡ್ ಮಾಡುವುದು ನಡೆದಿದೆ.
ಹಿಂದೂ ಮಹಾಕಾವ್ಯಗಳಲ್ಲಿನ ಶಬರಿ ಅಥವಾ ಹನುಮಾನ್ ರಂತಹ ವ್ಯಕ್ತಿಗಳೊಂದಿಗೆ ಬುಡಕಟ್ಟು ಮೂಲವನ್ನು ಸಂಪರ್ಕಿಸುವ ಪೌರಾಣಿಕ ನಿರೂಪಣೆಗಳನ್ನು ತರಲಾಗುತ್ತಿದೆ. ಅವರ ಮೂಲವನ್ನು ಹಿಂದೂ ಪುರಾಣಗಳೊಡನೆ ಜೋಡಿಸುವ ಪ್ರತಿಪಾದನೆಗಳನ್ನು ಮುನ್ನೆಲೆಗೆ ತರಲಾಗುತ್ತಿದೆ.
‘ವನವಾಸಿ’ ಎಂಬ ಪದ ಬುಡಕಟ್ಟು ಜನಾಂಗದವರು ಭೂಮಿಯ ಹಕ್ಕುದಾರರಲ್ಲ, ಬದಲಾಗಿ ಕೇವಲ ಅರಣ್ಯ ನಿವಾಸಿಗಳು ಎಂದು ಸೂಚಿಸುತ್ತದೆ.
ಹೀಗೆ, 5ನೇ ಷೆಡ್ಯೂಲ್ ಮತ್ತು ಅರಣ್ಯ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಭೂ ಮಾಲಕತ್ವದ ಅವರ ರಾಜಕೀಯ ಮತ್ತು ಕಾನೂನಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸುವುದು ವ್ಯವಸ್ಥಿತವಾಗಿ ನಡೆದಿದೆ.
► ಧಾರ್ಮಿಕ ಧ್ರುವೀಕರಣದ ಕುರಿತು ಪ್ರಚಾರ:
ಮುಸ್ಲಿಮರು ಬಹು ಪತ್ನಿಯರನ್ನು ಹೊಂದಿದ್ದಾರೆ ಮತ್ತು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂಬ ಸುಳ್ಳುಗಳನ್ನು ಹರಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಲವ್ ಜಿಹಾದ್‌ನಂಥ ಸುಳ್ಳು ಪದ ರಚಿಸಿ ಅಪಪ್ರಚಾರ ನಡೆಸಲಾಗುತ್ತಿದೆ.
ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಕೇವಲ ಧಾರ್ಮಿಕ ವಿಷಯವೆಂದೇ ಬಿಂಬಿಸಿದ್ದೂ ಆಯಿತು. ಆದರೆ ಈ ಚಳವಳಿಯ ಹಿಂದಿನ ರಾಜಕೀಯ ಉದ್ದೇಶಗಳನ್ನು ಮರೆಮಾಚಲಾಗಿತ್ತು. ಈಗಲೂ ಅದೇ ಮುಂದುವರಿದಿದೆ.
► ಸುಳ್ಳು ಆರ್ಥಿಕ ಹೇಳಿಕೆಗಳು:
ತನ್ನನ್ನು ತಾನು ಶುದ್ಧ ಮತ್ತು ತತ್ವಬದ್ಧ ಪಕ್ಷವೆಂದು ಬಿಂಬಿಸಿಕೊಳ್ಳುವ ಬಿಜೆಪಿಯ ಸುಳ್ಳುಗಳು ಒಂದೆರಡಲ್ಲ.
ವಿದೇಶಗಳಲ್ಲಿ ಸಂಗ್ರಹವಾಗಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಮೋದಿ ಹೇಳಿದ್ದೇ ಹೇಳಿದ್ದು. ನಂತರ ಆ ಹೇಳಿಕೆಯನ್ನು ಚುನಾವಣಾ ಜುಮ್ಲಾ ಎಂದು ತಳ್ಳಿಹಾಕಲಾಯಿತು. ಹಾಗೆಯೇ, ಕೋಟಿಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮೋದಿ ಭರವಸೆ ನೀಡಿದರು. ಆದರೆ ಈಗ ಆಗಿರುವುದು ನಿರುದ್ಯೋಗದಲ್ಲಿ ಏರಿಕೆ, ಉದ್ಯೋಗಗಳೇ ಇಲ್ಲದ ಸ್ಥಿತಿ.
► ಅಸಮಾನ ಧೋರಣೆ
ಭಿನ್ನಾಭಿಪ್ರಾಯವನ್ನು ರಾಷ್ಟ್ರವಿರೋಧಿ ಎನ್ನುವಂತೆ ಸಮೀಕರಿಸುವುದು, ಸರಕಾರವನ್ನು ಪ್ರಶ್ನಿಸಿದರೆ ದೇಶ ದ್ರೋಹವೆಂದು ನೋಡುವ ವಾತಾವರಣವನ್ನು ಸೃಷ್ಟಿಸುವುದು ನಡೆದಿದೆ. ಬಿಜೆಪಿ ತನ್ನ ಹಿಂದೂ ರಾಷ್ಟ್ರದ ಗುರಿಯನ್ನು ಸಾಧಿಸಲು ಅಧಿಕಾರವನ್ನು ಬಳಸಿಕೊಳ್ಳುತ್ತಿದೆ ಮತ್ತು ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ನಾಶಮಾಡುವ ಗುರಿಯನ್ನೇ ಹೊಂದಿದೆ. ಆಡಳಿತದಲ್ಲಿನ ತನ್ನ ವೈಫಲ್ಯಕ್ಕೆಲ್ಲ ಮತ್ತೆ ಮತ್ತೆ ಅದು ಕಾಂಗ್ರೆಸ್ ಕಡೆಗೆ ಬೊಟ್ಟು ಮಾಡುತ್ತದೆ.
► ವಿರೋಧಿಗಳ ಬಗ್ಗೆ ನಕಲಿ ನಿರೂಪಣೆಗಳು
ಕಾಂಗ್ರೆಸ್ ಅನ್ನು ರಾಜವಂಶದ ಪಕ್ಷವೆಂದು ಬ್ರಾಂಡ್ ಮಾಡುತ್ತಾ ಬರಲಾಗಿದೆ. ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದಾಗಿ ಬಿಜೆಪಿ ಸತತವಾಗಿ ಆರೋಪಿಸುತ್ತ ಬಂದಿದೆ.
ಭಾರತದ ಜಾತ್ಯತೀತ ನೀತಿಗಳಿಂದ ಹಿಂದೂ ಬಹುಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ನಿರೂಪಣೆಯನ್ನು ಮುನ್ನೆಲೆಗೆ ತರುತ್ತಿದೆ.
► ತಾಂತ್ರಿಕ ಪ್ರಚಾರ:
ಮಾಧ್ಯಮಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ಮೂಲಕ ಸುಳ್ಳು ಸುದ್ದಿಗಳನ್ನು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ.
ರಾಜಕೀಯ ವಿರೋಧಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಕಲಿ ವೀಡಿಯೊಗಳು, ಸುಳ್ಳು ಆರೋಪಗಳು ಮತ್ತು ತಪ್ಪು ಮಾಹಿತಿಯನ್ನು ಹರಡುವುದಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಐಟಿ ಸೆಲ್‌ಗಳನ್ನು ಬಳಸುತ್ತಿದೆ.
ಇವಿಎಂ ಬಗ್ಗೆ ತಜ್ಞರು ಮತ್ತು ವೀಕ್ಷಕರು ಎತ್ತಿರುವ ನಿಜವಾದ ಕಳವಳಗಳನ್ನು ತಳ್ಳಿಹಾಕುತ್ತಿದೆ. ಇವಿಎಂ ಟ್ಯಾಂಪರಿಂಗ್ ಮತ್ತು ಚುನಾವಣಾ ದುಷ್ಕೃತ್ಯಗಳ ಆರೋಪಗಳಿದ್ದರೂ, ಅದನ್ನೆಲ್ಲ ಸಲೀಸಾಗಿ ತಳ್ಳಿಹಾಕುತ್ತಿದೆ.
► ಸಾಂಸ್ಕೃತಿಕ ಕಟ್ಟುಕಥೆಗಳು
ಪ್ರಾಚೀನ ಭಾರತೀಯರು ವಾಯುಯಾನ, ಪ್ಲಾಸ್ಟಿಕ್ ಸರ್ಜರಿ ಅಥವಾ ಕಾಂಡಕಸಿ ತಂತ್ರಜ್ಞಾನವನ್ನು ಕಂಡುಹಿಡಿದರು ಎಂದೆಲ್ಲ ಹೇಳಿಕೊಂಡು ಬರಲಾಗಿದೆ.
ನಿರಂತರವಾಗಿ ಸುಳ್ಳು ವೈಜ್ಞಾನಿಕ ಮತ್ತು ಆಧಾರರಹಿತ ವಾದಗಳನ್ನೇ ಬಿಜೆಪಿ ಪ್ರಚಾರ ಮಾಡಿದೆ.
ಹಿಂದಿ ಭಾಷೆ ಮತ್ತು ಹಿಂದೂ ಧರ್ಮವನ್ನು ಭಾರತೀಯ ಸಂಸ್ಕೃತಿ ಎಂಬಂತೆ ಬಿಂಬಿಸಲಾಗಿದೆ.
ಭಾರತದ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಸಹನೆಯಿಂದಲೇ ನೋಡಲಾಗುತ್ತಿದೆ.
ಇನ್ನು ಸುಳ್ಳಿನ ಮೂಲಕವೇ ಆಡಳಿತದಲ್ಲೂ ಬಚಾವಾಗುತ್ತಿದೆ ಎಂದು ಆನಂದ್ ತೇಲ್ತುಂಬ್ಡೆ ವಾದಿಸುತ್ತಾರೆ.
2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ಮಾಡಿದ್ದ ಪ್ರಚಾರಗಳೆಲ್ಲವೂ ಸುಳ್ಳನ್ನೇ ಆಧರಿಸಿತ್ತು. ಅವರು ತಮ್ಮನ್ನು ಅಭಿವೃದ್ಧಿ ಸಾಧಕ ಎಂದು ಬಿಂಬಿಸಿಕೊಂಡರು. ‘ಗುಜರಾತ್ ಮಾಡೆಲ್’ ಎಂಬ ಮತ್ತೊಂದು ಹಸೀ ಸುಳ್ಳನ್ನು ಕೂಡ ಪ್ರಚಾರ ಮಾಡಿದರು.
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆ ಮೂಲಕ ತಮ್ಮ ವಿಷಪೂರಿತ ಕೋಮುವಾದವನ್ನು ಮುಚ್ಚಿಹಾಕಿದರು.
ಸಂಸತ್ತನ್ನು ಪ್ರವೇಶಿಸುವಾಗ ತಲೆ ಬಾಗಿ ನಮಸ್ಕರಿಸಿದ ವ್ಯಕ್ತಿಯೇ ಕಡೆಗೆ ಎಲ್ಲ ಸಂಸದೀಯ ರೂಢಿಯನ್ನು ಮುರಿಯಲು ಪ್ರಾರಂಭಿಸಿದಾಗ ಅವರ ಕಾಪಟ್ಯ ಬಯಲಾಗಿತ್ತು. ಸಂವಿಧಾನದ ಮೇಲೆಯಾಗಲಿ, ಅದನ್ನು ಬರೆದ ಅಂಬೇಡ್ಕರ್ ಅವರ ಮೇಲೆಯಾಗಲಿ ಅವರಿಗೆ ಯಾವ ಗೌರವವೂ ಇಲ್ಲ. ಎಲ್ಲವೂ ತೋರಿಕೆ ಮಾತ್ರ.
ಏಕೆಂದರೆ ಅವರು ಸಾಂವಿಧಾನಿಕ ನೈತಿಕತೆಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಅದರ ಅಕ್ಷರಗಳನ್ನು ಸಹ ಧಿಕ್ಕರಿಸುತ್ತಾರೆ.
ಮೋದಿ ಸರಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ಏನೆಲ್ಲಾ ಸುಳ್ಳುಗಳನ್ನು ಹೇಳಿದೆ ಮತ್ತು ಹೇಗೆಲ್ಲಾ ಜನರ ದಾರಿ ತಪ್ಪಿಸುವ ಮಾತುಗಳನ್ನಾಡಿದೆ ಎಂದು ನೋಡೋಣ.
ಮೋದಿ ಸರಕಾರದ ಕೆಲವು ಪ್ರಮುಖ ಸುಳ್ಳುಗಳನ್ನು ಆನಂದ್ ತೇಲ್ತುಂಬ್ಡೆ ಪಟ್ಟಿ ಮಾಡುತ್ತಾರೆ.
1. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎನ್ನಲಾಯಿತು
ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಸಾಧಿಸಿದೆ ಎಂದೇ ಮೋದಿ ಸರಕಾರ ಹೇಳಿಕೊಂಡಿದೆ. ಆದರೆ ವಾಸ್ತವ ಬೇರೆಯೇ ಇದೆ.
ನೋಟ್ ಬ್ಯಾನ್ ನಂತರ ಮತ್ತು ಕೋವಿಡ್ ಬಳಿಕ ಹದಗೆಟ್ಟ ಆರ್ಥಿಕ ವ್ಯವಸ್ಥೆ ಇನ್ನೂ ಹಳಿಗೆ ಬಂದಿಲ್ಲ.
2. ನೋಟ್ ಬ್ಯಾನ್
ನೋಟ್ ಬ್ಯಾನ್ ಮೂಲಕ ಯಶಸ್ಸು ಸಾಧಿಸಿರುವುದಾಗಿ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ವಿದೇಶಗಳಲ್ಲಿನ ಕಪ್ಪುಹಣ ವಾಪಸ್ ಬರಲಿಲ್ಲ. ಭಯೋತ್ಪಾದನೆಯೂ ನಿಗ್ರಹವಾಗಲಿಲ್ಲ, ಬದಲಾಗಿ ದೇಶದ ಲಕ್ಷಾಂತರ ಜನರ ಪಾಡು ನರಕಮಯವಾಯಿತು, ಪ್ರಾಣಗಳೂ ಹೋದವು.
3. ಜಿಎಸ್‌ಟಿ
ಸರಳೀಕೃತ ತೆರಿಗೆ ಮಾದರಿ ಎಂದು ತಪ್ಪಾಗಿ ನಿರೂಪಿಸುತ್ತಲೇ ಜಿಎಸ್‌ಟಿಯನ್ನು ತರಲಾಯಿತು.
ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನ ಭಾರೀ ಆರ್ಥಿಕ ಹಿನ್ನಡೆಗೆ ಕಾರಣವಾಯಿತು ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
ಆದರೆ ಬಿಜೆಪಿ ಮಾತ್ರ ತನ್ನ ಬಲದಿಂದ ಈ ಎಲ್ಲಾ ಕಟು ವಾಸ್ತವವನ್ನು ಮುಚ್ಚಿಹಾಕಿತು.
4. ಅಭಿವೃದ್ಧಿ ಯಶಸ್ಸು:
ಪಿಎಂ-ಕಿಸಾನ್, ಸ್ವಚ್ಛ ಭಾರತ ಮತ್ತು ಉಜ್ವಲ ಅಂಥ ಯೋಜನೆಗಳ ಬಗ್ಗೆ ಉತ್ಪ್ರೇಕ್ಷಿಸಿ ಹೇಳಲಾಯಿತು. ಅವುಗಳ ಅನುಷ್ಠಾನದಲ್ಲಿನ ವೈಫಲ್ಯಗಳನ್ನು ನಿರ್ಲಕ್ಷಿಸಲಾಯಿತು.
5. ಭ್ರಷ್ಟಾಚಾರದ ಬಗ್ಗೆ ಸುಳ್ಳು ಭರವಸೆಗಳು
ಹಗರಣಗಳು, ಕ್ರೋನಿ ಕ್ಯಾಪಿಟಲಿಸಂ ಮತ್ತು ಅಪಾರದರ್ಶಕ ಚುನಾವಣಾ ಹಣಕಾಸು ವ್ಯವಸ್ಥೆಗಳೇ ಮೋದಿ ಸರಕಾರದ ಸಾಧನೆಗಳು ಎನ್ನುವಂಥ ಸ್ಥಿತಿಯಿದೆ.ಆದರೆ ಬಿಜೆಪಿ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿರುವುದಾಗಿ ಬೊಗಳೆಯಾಡುತ್ತಿದೆ.
ರಫೇಲ್ ಒಪ್ಪಂದ, ಚುನಾವಣಾ ಬಾಂಡ್‌ಗಳು ಮತ್ತು ಖಾಸಗಿ ವಲಯದಲ್ಲಿನ ಪಕ್ಷಪಾತ ಇಂಥ ಹಗರಣಗಳು ಪಾರದರ್ಶಕತೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
6. ಉತ್ಪಾದನಾ ವಲಯ ಮತ್ತು ಉದ್ಯೋಗ
ಸರಕಾರ ತನ್ನ ಮೇಕ್ ಇನ್ ಇಂಡಿಯಾದಿಂದ ಉತ್ಪಾದನೆ ಹೆಚ್ಚಿದೆ, ಉದ್ಯೋಗಗಳ ಸೃಷ್ಟಿಯಾಗಿದೆ ಎಂದೆಲ್ಲ ಹೇಳಿಕೊಂಡಿದೆ.ವಾಸ್ತವವೆಂದರೆ ಉತ್ಪಾದನಾ ಬೆಳವಣಿಗೆ ಕುಂಠಿತವಾಗಿದೆ. ಉದ್ಯೋಗ ಸೃಷ್ಟಿ ಎಂಬುದು ಶುದ್ಧ ಬೊಗಳೆಯಾಗಿಯೇ ಉಳಿದಿದೆ. ವಾರ್ಷಿಕ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎನ್ನುತ್ತ ಅಧಿಕಾರಕ್ಕೆ ಬಂದವರು ಆಮೇಲೆ ಮಾಡಿದ್ದೆಲ್ಲ ತದ್ವಿರುದ್ಧ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಮತ್ತು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ವರದಿಗಳು, 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ದರದ ಬಗ್ಗೆ ಬಹಿರಂಗಪಡಿಸಿವೆ.
7. ರೈತರ ಆದಾಯ ಡಬಲ್ ಆಗಲೇ ಇಲ್ಲ
2022ರ ವೇಳೆಗೆ ರೈತರ ಆದಾಯ ಡಬಲ್ ಮಾಡಲಾಗುವುದು ಎಂದು ಸರಕಾರ ಹೇಳಿಕೊಂಡಿತ್ತು. ಆದರೆ ವಾಸ್ತವದಲ್ಲಿ ರೈತರ ಆದಾಯವೇ ಸ್ಥಗಿತಗೊಂಡಿದೆ ಮತ್ತು ಕೃಷಿ ಸಂಕಷ್ಟದಲ್ಲಿದೆ.
ರೈತರ ದೀರ್ಘ ಪ್ರತಿಭಟನೆಗಳು ನಿಜವಾದ ಸ್ಥಿತಿ ಏನಿದೆ ಎಂಬುದನ್ನು ತೋರಿಸುತ್ತಿವೆ.
8. ಕೋವಿಡ್ ಕಾಲ
ಕೋವಿಡ್ ಸಮಯವನ್ನು ಉತ್ತಮವಾಗಿ ನಿಭಾಯಿಸಿರುವುದಾಗಿ ಸರಕಾರ ಹೇಳಿಕೊಂಡಿದೆ. ವಾಸ್ತವವೆಂದರೆ ಎರಡನೇ ಅಲೆ ಹೊತ್ತಲ್ಲಿ ಆಮ್ಲಜನಕದ ಕೊರತೆ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆ ಸೇರಿದಂತೆ ಹಲವಾರು ವೈಫಲ್ಯಗಳು ಬಯಲಾಗಿದ್ದವು.
ಅಧಿಕೃತ ಸಾವಿನ ಸಂಖ್ಯೆಯನ್ನು ಕೂಡ ಸರಕಾರ ಮರೆಮಾಚಿದ್ದ ಬಗ್ಗೆ ಆರೋಪಗಳಿದ್ದವು.
9. ಪೌರತ್ವ ತಿದ್ದುಪಡಿ ಕಾಯ್ದೆ:
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ತಾರತಮ್ಯದಿಂದ ಕೂಡಿಲ್ಲ ಮತ್ತು ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸರಕಾರ ಹೇಳಿಕೊಂಡಿತು. ಕಾನೂನು ತಜ್ಞರು ಸೇರಿದಂತೆ ವಿಮರ್ಶಕರು, ಇದು ಮುಸ್ಲಿಮರ ವಿರುದ್ಧ ತಾರತಮ್ಯದಿಂದ ಕೂಡಿದೆ ಎಂದು ವಾದಿಸಿದರು.
10. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ
370ನೇ ವಿಧಿ ರದ್ದು
370ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಾಂತಿ, ಅಭಿವೃದ್ಧಿ ಮತ್ತು ಏಕೀಕರಣ ತಂದಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದುಪಡಿಸುವ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಮೂಲಕ ಮೋದಿ ಸರಕಾರ ಮತ್ತೊಂದು ದುರುದ್ದೇಶಪೂರಿತ ಆಟವನ್ನೇ ಆಡಿತ್ತು.
11. ಹಿಂದುತ್ವದ ವೈಭವ
ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮುಸ್ಲಿಮ್ ಆಡಳಿತದ ಅವಧಿಯನ್ನು ಅಳಿಸಿಹಾಕಲು ಇತಿಹಾಸವನ್ನೇ ತಿರುಚುವುದಕ್ಕೂ ನಿಂತರು.
ಪ್ರಾಚೀನ ಭಾರತದಲ್ಲಿಯೇ ಅಂತರ್ ಗ್ರಹ ಪ್ರಯಾಣ ಮತ್ತು ಪ್ಲಾಸ್ಟಿಕ್ ಸರ್ಜರಿಯಂತಹ ಸಾಧನೆಗಳನ್ನೆಲ್ಲ ಮಾಡಲಾಗಿತ್ತು ಎಂಬ ಹಸಿ ಹಸಿ ಸುಳ್ಳುಗಳನ್ನು ಹೇಳಲಾಯಿತು.
12. ರಾಮ ಮಂದಿರ:
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಬಂದ ದೇಣಿಗೆ ವಿಚಾರವಾಗಿ ಸಂಪೂರ್ಣವಾಗಿ ಪಾರದರ್ಶಕತೆ ಇದೆ ಎಂದು ಹೇಳಲಾಗಿತ್ತು. ಆದರೆ, ಹಣಕಾಸಿನ ದುರುಪಯೋಗ ಮತ್ತು ದೇವಾಲಯ ನಿಧಿಗಳಿಗೆ ಸಂಬಂಧಿಸಿದ ಭೂ ವ್ಯವಹಾರಗಳ ಬಗ್ಗೆ ಆರೋಪಗಳು ಬಂದವು.
13. ಸುಳ್ಳು ಸುದ್ದಿ
ಬಿಜೆಪಿ ಮತ್ತು ಆರೆಸ್ಸೆಸ್ ಐಟಿ ಸೆಲ್ ಸುಳ್ಳುಗಳನ್ನು ಹರಡುವುದರಲ್ಲಿಯೇ ನಿರಂತರವಾಗಿ ತೊಡಗಿವೆ.
‘ಆಲ್ಟ್‌ನ್ಯೂಸ್’ ಸೇರಿದಂತೆ ಹಲವಾರು ಫ್ಯಾಕ್ಟ್ ಚೆಕಿಂಗ್ ಪೋರ್ಟಲ್‌ಗಳು ಬಿಜೆಪಿಯ ಸುಳ್ಳಿನ ಅಭಿಯಾನವನ್ನು ಬಯಲು ಮಾಡಿವೆ. ರಾಜಕೀಯ ವಿರೋಧಿಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸಂಘಟಿತ ತಪ್ಪು ಮಾಹಿತಿ ಹರಡುವುದನ್ನು ಬಹಿರಂಗಪಡಿಸಿವೆ.
14. ಧಾರ್ಮಿಕ ಸ್ವಾತಂತ್ರ್ಯ
ಬಿಜೆಪಿ ಆಳ್ವಿಕೆಯಲ್ಲಿ ನಿರಂತರವಾಗಿ ಕಾಣಿಸುತ್ತಿರುವುದು ದ್ವೇಷಾಪರಾಧಗಳು, ಕೋಮು ಹಿಂಸಾಚಾರ ಮತ್ತು ಪ್ರಚೋದನಕಾರಿ ಭಾಷಣಗಳು.
ಈ ಉದಾಹರಣೆಗಳು ಬಿಜೆಪಿ ಆಡಳಿತದ ಸಮಯದಲ್ಲಿ ಪ್ರಚಾರ ಮಾಡಲಾದ ದಾರಿ ತಪ್ಪಿಸುವ ಹೇಳಿಕೆಗಳು ಮತ್ತು ನಿರೂಪಣೆಗಳ ಬಗ್ಗೆ ಕಳವಳ ಮೂಡಿಸುತ್ತವೆ. ಭಾರತದ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ರಚನೆಯ ಮೇಲೆ ಅವುಗಳ ಪ್ರಭಾವದ ಕುರಿತು ಚರ್ಚೆಯನ್ನು ಹುಟ್ಟುಹಾಕುತ್ತವೆ.
ಅವರ ಸುಳ್ಳಿನ ಕಾರ್ಖಾನೆ ಗೋಬೆಲ್ಸ್‌ನನ್ನೂ ಮೀರಿಸುವ ಹಾಗೆ ಇಲ್ಲಿಯವರೆಗೂ ಸುಳ್ಳುಗಳನ್ನು ಹರಡುತ್ತಲೇ ಬಂದಿದೆ. ಆದರೆ ಅಂಥ ವಂಚನೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಇತಿಹಾಸ ತೋರಿಸುತ್ತದೆ.
ಸತ್ಯ ಮಾತ್ರ ಗೆಲ್ಲುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಆದರೆ ಹಿಂದುತ್ವದ ಈ ಅಬ್ಬರದ ಪ್ರತಿಪಾದಕರು ಮಾತ್ರ ಸುಳ್ಳನ್ನೇ ನೆಚ್ಚಿಕೊಂಡು ರಾಜಕೀಯ ಅಸ್ತಿತ್ವ ಉಳಿಸಿಕೊಂಡಿರುವುದು ದೊಡ್ಡ ವ್ಯಂಗ್ಯ.