ಭದ್ರಾ ನದಿ ದಾಟಲು ಸುಸಜ್ಜಿತ ಸೇತುವೆ ಮರೀಚಿಕೆ
ಕಗ್ಗನಳ್ಳ-ಹೊಳಲು ಗ್ರಾಮಸ್ಥರ 2 ದಶಕಗಳ ಸಮಸ್ಯೆಗೆ ಸಿಗದ ಪರಿಹಾರ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದೊಂದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯಲಾರಂಭಿಸಿವೆ.
ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನೀರಿನ ಬರ ನೀಗಿದ ಸಂತಸ ಸಾರ್ವಜನಿಕರು, ರೈತರದ್ದಾಗಿದ್ದರೆ, ನದಿ ನೀರಿನ ಹೆಚ್ಚಳ ಮಲೆನಾಡಿನ ಹಲವಾರು ಗ್ರಾಮಗಳ ನಿವಾಸಿಗಳಲ್ಲಿ ಆತಂಕಕ್ಕೂ ಕಾರಣವಾಗುತ್ತಿದೆ. ಜಿಲ್ಲೆಯ ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಗ್ಗನಳ್ಳ-ಹೊಳಲು ಗ್ರಾಮಗಳ ಮಧ್ಯೆ ಹರಿಯುವ ಭದ್ರಾ ನದಿ ಸದ್ಯ ತುಂಬಿ ಹರಿಯಲಾರಂಭಿಸಿದ್ದು, ಈ ಗ್ರಾಮಗಳ ಸಂಪರ್ಕಕ್ಕೆ ಸುಸಜ್ಜಿತ ಸೇತುವೆ ಇಂದಿಗೂ ಮರೀಚಿಕೆಯಾದ ಪರಿಣಾಮ ನದಿ ದಡದಲ್ಲಿರುವ ಗ್ರಾಮಗಳ ಜನರು ಸದ್ಯ ಪ್ರಾಣ ಭೀತಿಯಲ್ಲಿ ನದಿ ದಾಟಬೇಕಾದ ಪರಿಸ್ಥಿತಿ ಎದುರಿಸುವಂತಾಗಿದೆ.
ಭದ್ರಾ, ತುಂಗಾ ಹಾಗೂ ಹೇಮಾವತಿ ಮಲೆನಾಡಿನ ಪ್ರಮುಖ ನದಿಗಳಾಗಿವೆ. ಈ ನದಿಗಳು ಹರಿಯುವ ಕುಗ್ರಾಮಗಳ ಪೈಕಿ ನೂರಾರು ಗ್ರಾಮಗಳಿಗೆ ನದಿ ದಾಟಲು ಸುಸಜ್ಜಿತ ಸೇತುವೆ ಸೌಲಭ್ಯ ಇಂದಿಗೂ ಮರೀಚಿಕೆಯಾಗಿದೆ. ಕಗ್ಗನಳ್ಳ ಹಾಗೂ ಹೊಳಲು ಗ್ರಾಮಗಳ ಸಂಪರ್ಕಕ್ಕೆ ಸುಸಜ್ಜಿತ ಸೇತುವೆಗಾಗಿ ನಿವಾಸಿಗಳು ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ರಾಜ್ಯ ಸರಕಾರಕ್ಕೆ ಕಳೆದ 20 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಇದುವರೆಗೂ ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಹೊಳಲು ಗ್ರಾಮ ಸೇರಿದಂತೆ ಕೆಳಭಾಗ, ಬಿರುಗೂರು, ಹೆಮ್ಮಕ್ಕಿ, ಇಡಕಣಿ ಗ್ರಾಮಗಳ ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಸುಮಾರು 15 ಸಾವಿರ ಜನರು ಕಗ್ಗನಳ್ಳ ಗ್ರಾಮದಲ್ಲಿ ಹರಿಯುತ್ತಿರುವ ಭದ್ರಾ ನದಿ ದಾಟಲು ಇಂದಿಗೂ ಕಾಲು ಸಂಕ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ಭದ್ರಾ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಹೊಳಲು ಹಾಗೂ ಕಗ್ಗನಳ್ಳ ಗ್ರಾಮಗಳ ನಡುವೆ ಸ್ಥಳೀಯರೇ ನಿರ್ಮಿಸಿಕೊಂಡಿರುವ ಕಾಲು ಸಂಕದ ಮೂಲಕ ನದಿ ದಾಟುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ
ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವುದರಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ತುಂಬಿ ಹರಿಯುವುದರಿಂದ ಈ ಗ್ರಾಮಗಳ ಜನರು ಮಳೆಗಾಲದ 5 ತಿಂಗಳುಗಳ ಕಾಲ ಸುಮಾರು 15ರಿಂದ 20ಕಿಮೀ ಕಾಲ್ನಡಿಗೆ ಮೂಲಕ ಇಲ್ಲವೇ ತೆಪ್ಪದ ಮೂಲಕ ನದಿ ದಾಟಿ ಹೊರ ಜಗತ್ತಿನ ಸಂಪರ್ಕ ಪಡೆಯಬೇಕಾಗಿದೆ.
ಈ ಗ್ರಾಮಗಳ ಜನರು ಶಾಲೆ, ಕಾಲೇಜು, ಆಸ್ಪತ್ರೆ, ಸರಕಾರಿ ಕಚೇರಿ ಮತ್ತು ದೈನಂದಿನ ವಸ್ತುಗಳಿಗಾಗಿ ಬಾಳೆಹೊಳೆ, ಕಗ್ಗನಳ್ಳ, ಕಳಸ, ಮಾಗುಂಡಿ, ಬಾಳೆಹೊನ್ನೂರು, ಮೂಡಿಗೆರೆ ಪಟ್ಟಣಗಳನ್ನು ಅವಲಂಬಿಸಿದ್ದು, ಮಳೆಗಾಲದಲ್ಲಿ ಭದ್ರಾ ನದಿ ತುಂಬಿ ಹರಿಯುವುದರಿಂದ ನದಿ ದಾಟಲು ಸಾಧ್ಯವಾಗದೇ ಮಳೆಗಾಲದಲ್ಲಿ ಈ ಗ್ರಾಮಗಳ ನಿವಾಸಿಗಳು ಹೊರ ಜಗತ್ತಿನ ಸಂಪರ್ಕ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಳಲು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು, ಶಾಲಾ ಕಾಲೇಜು ಮಕ್ಕಳು ಬೇಸಿಗೆಯಲ್ಲಿ ಭದ್ರಾ ನದಿಯಲ್ಲಿ ನೀರು ಕಡಿಮೆಯಾಗುವುದರಿಂದ ಕಾಲು ಸಂಕ ಬಳಸಿ ಕಗ್ಗನಳ್ಳ ಗ್ರಾಮಕ್ಕೆ ಬಂದು ಅಲ್ಲಿಂದ ಬಾಳೆಹೊಳೆ, ಕಳಸ, ಮಾಗುಂಡಿ, ಬಾಳೆಹೊನ್ನೂರಿಗೆ ಹೋಗಲು ಸಾಧ್ಯವಾಗುತ್ತಿದೆ. ಆದರೆ ಮಳೆಗಾಲದಲ್ಲಿ ಮಾತ್ರ ನದಿ ದಾಟಲು ನರಕಯಾತನೆ ಅನುಭವಿಸುತ್ತಿದ್ದಾರೆ.
ಭದ್ರಾ ನದಿಗೆ ಅಡ್ಡಲಾಗಿ ಸುಸಜ್ಜಿತ ತೂಗುಸೇತುವೆ, ಇಲ್ಲವೆ ಕಾಂಕ್ರಿಟ್ ಸೇತುವೆ ನಿರ್ಮಿಸಬೇಕೆಂದು ಈ ಗ್ರಾಮಗಳ ನಿವಾಸಿಗಳು ಕಳೆದ 20 ವರ್ಷಗಳಿಂದ ರಾಜ್ಯ ಸರಕಾರ ಸೇರಿದಂತೆ ಕ್ಷೇತ್ರದ ಶಾಸಕರು, ಅಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಇದ್ದಾರಾದರೂ ನಿವಾಸಿಗಳ ಬೇಡಿಕೆಗೆ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಇದುವರೆಗೂ ಸ್ಪಂದಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವವರು ಸೇತುವೆ ನಿರ್ಮಾಣದ ಭರವಸೆ ನೀಡುತ್ತಾರಾದರೂ ಚುನಾವಣೆಯಲ್ಲಿ ಗೆದ್ದ ಬಳಿಕ ಗ್ರಾಮದತ್ತ ತಿರುಗಿಯೂ ನೋಡುವುದಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.
ಸುಸಜ್ಜಿತ ಸೇತುವೆ ನಿರ್ಮಿಸಲು ಮನವಿ
ಹೊಳಲು ಹಾಗೂ ಕಗ್ಗನಳ್ಳ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಭದ್ರಾ ನದಿಗೆ ಸೇತುವೆ ನಿರ್ಮಿಸಿಕೊಡಿ ಎಂದು ನಿವಾಸಿಗಳು ಹಲವಾರು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಹೊಳಲು ಹಾಗೂ ಗ್ರಾಮದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ಕಗ್ಗನಳ್ಳಕ್ಕೆ ಬರಲು ಭದ್ರಾ ನದಿ ದಾಟಲು ಸಾಧ್ಯವಾಗದೇ 15-20ಕಿಮೀ ನಡೆದು, ಇಲ್ಲವೆ ಆಟೊ, ಜೀಪ್‌ಗಳ ಮೂಲಕ ಕಳಸ, ಬಾಳೆಹೊಳೆ, ಮಾಗುಂಡಿ, ಬಾಳೆಹೊನ್ನೂರಿಗೆ ಬರಬೇಕಿದೆ. ಈ ಹಿಂದೆ ನದಿ ದಾಟಲು ತೆಪ್ಪ ಇತ್ತು. ತೆಪ್ಪ ನಡೆಸುತ್ತಿದ್ದವರು ನಿಧನರಾದ ಬಳಿಕ ಮರಳಿನ ಚೀಲದ ಸಹಾಯದಿಂದ ಕಾಲು ಸಂಕ ನಿರ್ಮಿಸಿಕೊಂಡು ಬೇಸಿಗೆಯಲ್ಲಿ ನದಿ ದಾಟುತ್ತಿದ್ದೇವೆ. ಮಳೆಗಾಲದಲ್ಲಿ ನದಿ ನೀರಿನ ರಭಸಕ್ಕೆ ಸಂಕವೇ ಕೊಚ್ಚಿ ಹೋಗುತ್ತಿದ್ದು, ಗ್ರಾಮಸ್ಥರು ಭಾರೀ ತೊಂದರೆ ಅನುಭವಿಸಬೇಕಾಗಿದೆ. ಆದ್ದರಿಂದ ರಾಜ್ಯ ಸರಕಾರ ಈ ಬಾರಿಯಾದರೂ ಈ ಗ್ರಾಮಗಳ ಸಂಪರ್ಕಕ್ಕೆ ಸುಸಜ್ಜಿತ ಸೇತುವೆ ನಿರ್ಮಿಸಲು ಮುಂದಾಗಬೇಕು ಎಂದು ಕಗ್ಗನಳ್ಳ ಗ್ರಾಮದ ನಿವಾಸಿ ಸದಾನಂದ ವಾರ್ತಾಭಾರತಿ ಮೂಲಕ ಮನವಿ ಮಾಡಿದ್ದಾರೆ.