ದಾಖಲೆಗಳಿಲ್ಲದೆಯೂ ಕೊರಗರಿಗೆ ಪಿಎಂ-ಜನ್‌ಮನ್ ಯೋಜನೆಯಡಿ ಆಧಾರ್ ಭಾಗ್ಯ!
ಕುಂದಾಪುರ: ಕರಾವಳಿಯ ಮೂಲನಿವಾಸಿಗಳಾದ ಕೊರಗರ ಬದುಕು ಹಸನಾಗಬೇಕು, ಅವರು ಮುಖ್ಯವಾಹಿನಿಗೆ ಬರಬೇಕೆಂಬುದು ಸರಕಾರಗಳ ಆಶಯವಾಗಿದ್ದು, ಇದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನರ ಬಳಿಗೆ ಆಡಳಿತ ತೆರಳಿ ಸರಕಾರದ ಮೂಲ ದಾಖಲೆಗಳ ನೋಂದಣಿ ಮಾಡುವ ಕಾರ್ಯಕ್ರಮ ಉಡುಪಿ ಜಿಲ್ಲೆಯ ಮಟ್ಟಿಗೆ ಫಲಪ್ರದಗೊಂಡಿದೆ.
ದೇಶದಲ್ಲಿ 500ಕ್ಕೂ ಅಧಿಕ ಆದಿವಾಸಿ ಸಮುದಾಯಗಳಿದ್ದರೂ, ಇದರಲ್ಲಿ 75 ಸಮುದಾಯಗಳನ್ನು ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳಾಗಿ ಗುರುತಿಸಲಾಗಿದೆ. ಕರ್ನಾಟಕದಲ್ಲಿ ಜೇನು ಕುರುಬ ಮತ್ತು ಕೊರಗ ಸಮುದಾಯಗಳು ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳಿಗೆ (ಪಿವಿಟಿಜಿ) ಸೇರುತ್ತವೆ.
ಕೊರಗ ಸಮುದಾಯ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಳ್ಳಿಗಾಡು, ದೂರದ ಹಾಡಿಗಳಲ್ಲಿ ಗುಂಪುಗುಂಪಾಗಿ ನೆಲೆಸಿದೆ. ಹಲವು ಸಮಸ್ಯೆಗಳ ಕಾರಣದಿಂದ ಸಮುದಾಯದ ಒಂದಷ್ಟು ಮಂದಿಗೆ ಇಂದಿನ ಅತ್ಯಂತ ಅಗತ್ಯತೆಗಳಲ್ಲಿ ಒಂದಾದ ಆಧಾರ್ ಕಾರ್ಡ್ ಮಾಡಿಸಲು ಅಸಾಧ್ಯವಾಗಿತ್ತು. ಇತ್ತೀಚೆಗೆ ಸರಕಾರದ ಯಾವುದೇ ಯೋಜನೆ ಪಡೆಯಲು ದಾಖಲಾತಿಗಳು ಅತೀ ಮುಖ್ಯವಾಗಿದ್ದು ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್‌ನ್ನು ಲಿಂಕ್ ಮಾಡುವುದು ಕಡ್ಡಾಯವೆನಿಸಿದೆ. ಹೀಗಾಗಿ ಆಧಾರ್ ಕಾರ್ಡ್ ಇಲ್ಲದೆ ಸಮುದಾಯದ ಬಹಳಷ್ಟು ಮಂದಿ ಹಲವಾರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು.
ಇದನ್ನೆಲ್ಲಾ ಮನಗಂಡು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಪ್ರಧಾನ ಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನ್‌ಮನ್) ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ ಆಧಾರ್ ನೋಂದಣಿ ಅಭಿಯಾನ ನಡೆಸಲಾಗಿತ್ತು.
ಆಧಾರ್ ಇದುವರೆಗೂ ಮಾಡಿಸದ ಕೊರಗರಿಗೆ ಹೊಸದಾಗಿ ನೋಂದಣಿ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬೆಂಗಳೂರು ಇವರ ಸಹಯೋಗದಲ್ಲಿ ವಿಶೇಷ ಆಧಾರ್ ನೋಂದಣಿ ಅಭಿಯಾನ ಆಯೋಜಿಸಲಾಗಿತ್ತು. ಜಿಲ್ಲೆಯ ಕೊರಗ ಕಾಲನಿಗಳಲ್ಲಿರುವ ಆಧಾರ್‌ರಹಿತ ಸಮುದಾಯದವರಿಗೆ ಅದರ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿ, ಇದಕ್ಕಾಗಿ ವಿಶೇಷವಾಗಿ ತೆರೆದ ಆಧಾರ್ ನೋಂದಣಿ ಶಿಬಿರ ಕೇಂದ್ರಕ್ಕೆ ಕರೆತಂದು ನೋಂದಣಿ ಮಾಡಿಸುವ ಕಾರ್ಯ ನಡೆದಿದೆ. ಇದರ ಜೊತೆಗೆ ಇರುವ ಆಧಾರ್ ಕಾರ್ಡಿಗೆ ಅಗತ್ಯವಿರುವ ತಿದ್ದುಪಡಿಯನ್ನು ಸಹ ಮಾಡಿಸಲಾಗಿತ್ತು. ಕೊರಗರು ಯಾವುದೇ ದಾಖಲಾತಿ ಇಲ್ಲದೆಯೂ ಕೇವಲ ಗ್ರಾಮಕರಣಿಕರು, ಅಧಿಕಾರಿಗಳ ದೃಢೀಕರಣದೊಂದಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾಡಳಿತ ಹಾಗೂ ಐಟಿಡಿಪಿ ನೇತೃತ್ವದಲ್ಲಿ ಈ ಅಭಿಯಾನ ನಡೆಯಿತು.
► ಆಧಾರ್ ನೋಂದಣಿ, ತಿದ್ದುಪಡಿ ಅಭಿಯಾನಕ್ಕೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ
► ಹೊಸದಾಗಿ 134 ಆಧಾರ್ ನೋಂದಣಿ, 271 ತಿದ್ದುಪಡಿ
6 ದಿನಗಳ ಅಭಿಯಾನದಲ್ಲಿ ಜಿಲ್ಲೆಯ ಪ್ರಗತಿ
2024ರ ಜ.19ರಿಂದ ಕೊರಗರಿಗೆ ಆಧಾರ್ ಕಾರ್ಡ್ ಮಾಡುವ ಅಭಿಯಾನ ಆರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 38 ಕೇಂದ್ರಗಳನ್ನು ತೆರೆಯಲಾಗಿತ್ತು. 6 ದಿನಗಳ ಅಂಕಿಅಂಶ ಹೀಗಿದೆ:
► 1ನೇ ದಿನ ಹೊಸ ನೋಂದಣಿ- 22, ತಿದ್ದುಪಡಿ-23
► 2ನೇ ದಿನ ಹೊಸ ನೊಂದಣಿ- 34, ತಿದ್ದುಪಡಿ-77
► 3ನೇ ದಿನ ಹೊಸ ನೋಂದಣಿ 13, ತಿದ್ದುಪಡಿ-32
► 4ನೇ ದಿನ ಹೊಸ ನೋಂದಣಿ 38, ತಿದ್ದುಪಡಿ-46
► 5ನೇ ದಿನ ಹೊಸ ನೋಂದಣಿ 22, ತಿದ್ದುಪಡಿ-66
► 6ನೇ ದಿನ ಹೊಸ ನೋಂದಣಿ 5, ತಿದ್ದುಪಡಿ-27
ಹೀಗೆ ಅಭಿಯಾನ ನಡೆದ ಒಟ್ಟು ಆರು ದಿನಗಳಲ್ಲಿ 134 ಹೊಸ ಆಧಾರ್ ನೋಂದಣಿ ಹಾಗೂ 271 ತಿದ್ದುಪಡಿ ಸೇರಿದಂತೆ 405 ಮಂದಿ ಅಭಿಯಾನದ ಪ್ರಯೋಜನ ಪಡೆದಿದ್ದಾರೆ. ಹೊಸ ಆಧಾರ್ ಕಾರ್ಡ್ ನೋಂದಣಿಯಲ್ಲಿ 1ರಿಂದ 5 ವರ್ಷದೊಳಗಿನ 35 ಮಕ್ಕಳ ನೋಂದಣಿ ಮಾಡಿಸಲಾಗಿದೆ. ಉಡುಪಿ-ಕಾಪು- ಬ್ರಹ್ಮಾವರ ತಾಲೂಕು ವ್ಯಾಪ್ತಿಯ 150ಕ್ಕೂ ಅಧಿಕ, ಕುಂದಾಪುರ-ಬೈಂದೂರು ವ್ಯಾಪ್ತಿಯಲ್ಲಿ 130ಕ್ಕೂ ಅಧಿಕ ಹಾಗೂ ಕಾರ್ಕಳ-ಹೆಬ್ರಿ ವ್ಯಾಪ್ತಿಯಲ್ಲಿ 70ಕ್ಕೂ ಅಧಿಕ ನೋಂದಣಿಗಳು ನಡೆದಿವೆ.
ಕೊರಗ ಸಮುದಾಯಗಳು ಕನಿಷ್ಠ ಮೂಲಭೂತ ದಾಖಲೆಗಳನ್ನು ಮಾಡಿಕೊಳ್ಳಲು ಸಹ ಅಸಹಾಯಕವಾಗಿವೆ. ಸರಕಾರವೇ ಅವರ ಬಳಿ ತೆರಳಿ ಮೂಲಭೂತ ದಾಖಲೆಗಳನ್ನು ಮಾಡಿಸುವ ಮೂಲಕ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಲು ಅತ್ಯಂತ ಮಹತ್ವ ಹಾಗೂ ಪರಿಣಾಮಕಾರಿಯಾಗಿದೆ. ಜಿಲ್ಲಾದ್ಯಂತ ಯೋಜನೆಯ ಮೊದಲ ಭಾಗವಾಗಿ ನಡೆದಿರುವ ಆಧಾರ್ ನೋಂದಣಿ ಅಭಿಯಾನದಲ್ಲಿ ಕೊರಗ ಸಮುದಾಯದ 400ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ. ಹೀಗೇ ಬ್ಯಾಂಕ್ ಖಾತೆ, ಆಯುಷ್ಮಾನ್ ಆರೋಗ್ಯ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಕಿಸಾನ್ ಸಮ್ಮಾನ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿಗಳನ್ನು ಸಹ ಶೀಘ್ರವಾಗಿ ಪ್ರತಿ ಗ್ರಾಮಗಳಲ್ಲಿ ಅದಾಲತ್, ಶಿಬಿರಗಳ ಮೂಲಕ ಮಾಡಿಸುವ ಕೆಲಸವಾಗಬೇಕಾಗಿದೆ. ಆಧಾರ್ ನೋಂದಣಿ ಶಿಬಿರವು ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಮುಂದೆ ಸಮುದಾಯದ ಸಹಭಾಗಿತ್ವದಲ್ಲಿ ಇನ್ನಷ್ಟು ಕಾರ್ಯಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೆ ತರುವ ಅಗತ್ಯವಿದೆ.
-ಶ್ರೀಧರ ನಾಡ, ಜಿಲ್ಲಾ ಸಂಚಾಲಕರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲೆ
ಆಧಾರ್ ಕಾರ್ಡ್ ಇಲ್ಲದ ಕಾರಣ ಕೊರಗ ಸಮುದಾಯದ ಮಂದಿಗೆ ಪಡಿತರ, ಸಂಧ್ಯಾ ಸುರಕ್ಷಾ, ಆಯುಷ್ಮಾನ್, ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಲು ಈ ಅಭಿಯಾನ ಸಹಕಾರಿ. ಜಿಲ್ಲಾಡಳಿತ ಹಾಗೂ ಐಟಿಡಿಪಿ ನೇತೃತ್ವದಲ್ಲಿ ನಡೆದ ವಿಶೇಷ ಅಭಿಯಾನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ಸಿಕ್ಕಿದೆ.
? -ಪಿ.ದೂದ್‌ಪೀರ್, ಉಡುಪಿ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ.
ಹಲವು ಸಮಸ್ಯೆಗಳು, ದಾಖಲಾತಿ ಇಲ್ಲದಿರುವುದರಿಂದ ಕೊರಗ ಸಮುದಾಯದ ಬಹಳಷ್ಟು ಮಂದಿ ಆಧಾರ್ ಕಾರ್ಡ್ ಮಾಡಿಸಿರಲಿಲ್ಲ. ವಿಶೇಷ ಅಭಿಯಾನದ ಮೂಲಕ ಆಧಾರ್ ಕೇಂದ್ರದಲ್ಲಿ ಗ್ರಾಮಕರಣಿಕರ ದೃಢೀಕರಣದೊಂದಿಗೆ ಹೊಸದಾಗಿ 134 ಕಾರ್ಡ್, 271 ತಿದ್ದುಪಡಿ ಮಾಡಲಾಗಿದ್ದು ಸಮುದಾಯದವರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಕಾಯಿಲೆ ಮೊದಲಾದ ಸಮಸ್ಯೆ ಎದುರಾದಾಗ ಆಸ್ಪತ್ರೆಯಲ್ಲಿ ಕೊರಗರು ಚಿಕಿತ್ಸೆ ಪಡೆಯಲು ಜಾತಿ ಪ್ರಮಾಣಪತ್ರ ಅತ್ಯಗತ್ಯ. ಪ್ರಮಾಣಪತ್ರವಿಲ್ಲದೆ ಸೂಕ್ತ ಚಿಕಿತ್ಸೆ ದೊರಕದೆ ಸಮಸ್ಯೆಗಳಾಗಿವೆ. ಆದ್ದರಿಂದ ಸರಕಾರ ಕೊರಗ ಸಂಘಟನೆಯ ಮುಖಂಡರ ದೃಢೀಕರಣದ ಮೇಲೆ ಜಾತಿ ಪ್ರಮಾಣ ಪತ್ರ ನೀಡಲು ವಿಶೇಷ ಮುತುವರ್ಜಿ ವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯ ಗಮನ ಸೆಳೆಯಲಾಗಿದೆ’.
► ಗಣೇಶ್ ಕುಂದಾಪುರ, ಕುಂದಾಪುರ ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘ.