ಜೀವವಿಮೆ ಮತ್ತು ಆರೋಗ್ಯವಿಮೆಯ ಮೇಲಿನ ಜಿಎಸ್ಟಿಯನ್ನು ರದ್ದುಗೊಳಿಸಿ
ಮಾನ್ಯರೇ,
ದೇಶದ ಸರ್ವ ಜನತೆ ಜೀವನದ ಕೊನೆಯ ವರೆಗೂ ಸುರಕ್ಷಿತವಾಗಿರಬೇಕು ಹಾಗೂ ಆರೋಗವಂತವಾಗಿರಬೇಕೆಂದು ಇಚ್ಛಿಸುತ್ತಾರೆ. ಕೆಲವೊಮ್ಮೆ ಅನಿರೀಕ್ಷಿತ ಸಾವು ಕುಟುಂಬದ ಸದಸ್ಯರನ್ನು ಧೃತಿಗೆಡಿಸಬಹುದು. ಅದಕ್ಕಾಗಿ ಜೀವವಿಮೆ ಮಾಡಿಕೊಳ್ಳುತ್ತಾರೆ. ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಎದುರಿಸಲು ಆರೋಗ್ಯವಿಮೆ ಮಾಡಿಕೊಳ್ಳುತ್ತಾರೆ. ಇವೆಲ್ಲವೂ ಸಾಮಾಜಿಕ ಭದ್ರತೆಗಾಗಿ ಹೊರತು ವ್ಯಾಪಾರ ಅಥವಾ ಲಾಭಗಳಿಕೆಗಲ್ಲ.
ಹಾಗಿರುವಾಗ ಈ ವಿಮೆಗಳ ಮೇಲೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವುದು ಸರಿಯಲ್ಲ. ಈ ಜಿಎಸ್ಟಿಯನ್ನು ರದ್ದುಗೊಳಿಸಬೇಕೆಂದು ಜನಸಾಮಾನ್ಯರು, ವಿಮಾ ಏಜೆಂಟರ ಸಂಘಟನೆಗಳು, ವಿರೋಧ ಪಕ್ಷಗಳು, ವಿಮಾ ಗ್ರಾಹಕರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಕೇಂದ್ರ ಸರಕಾರವನ್ನು ಹಾಗೂ ಹಣಕಾಸು ಮಂತ್ರಿಯವರನ್ನು ಆಗ್ರಹಿಸುತ್ತಲೇ ಬಂದಿವೆ. ಆದರೆ ಸರಕಾರ ಈ ಬಗ್ಗೆ ಸ್ಪಂದಿಸುತ್ತಿಲ್ಲ.
ಆರೋಗ್ಯ ವಿಮಾ ಕಂತುಗಳು ದಿನದಿಂದ ದಿನಕ್ಕೆ ಹೆಚ್ಚುತ್ತವೆ. ಅದರಲ್ಲೂ ಹಿರಿಯ ನಾಗರಿಕರ ಆರೋಗ್ಯ ವಿಮಾ ಕಂತುಗಳಂತೂ ಬಹಳ ದುಬಾರಿ. ಅದರ ಮೇಲೆ ಶೇ. 18 ಜಿಎಸ್ಟಿ ಸೇರಿದರೆ ಜನಸಾಮಾನ್ಯರಿಗೆ ಆರೋಗ್ಯವಿಮೆ ಮಾಡಲು ಮತ್ತು ನವೀಕರಿಸಲು ಸಾಧ್ಯವಾಗುತ್ತಿಲ್ಲ. ಜಿಎಸ್ಟಿಯನ್ನು ಕಡಿತಗೊಳಿಸಿದರೆ ಸ್ವಲ್ಪವಾದರೂ ಸಾಂತ್ವನ ಸಿಗಬಹುದು.
ಈ ಬಗ್ಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದು ವಿಮೆಗಳ ಮೇಲಿನ ಜಿಎಸ್ಟಿ ರದ್ದುಗೊಳಿಸಿ ಹೆಚ್ಚಿನ ನಾಗರಿಕರು ವಿಮೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುವಂತಾಗಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರವರು ಈ ಬಗ್ಗೆ ಗಮನ ಹರಿಸುವಂತೆ ನಮ್ಮ ರಾಜ್ಯದ ಎಲ್ಲಾ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಆಗ್ರಹಿಸಬೇಕು. ಅವರು ನಿತಿನ್ ಗಡ್ಕರಿಯವರ ಸೂಚನೆಗೆ ಬೆಂಬಲವಿತ್ತು ವಿಮೆಗಳ ಮೇಲಿನ ಜಿಎಸ್ಟಿ ತೊಡೆದುಹಾಕಲು ಸಹಕರಿಸಬೇಕೆಂದು ಆಗ್ರಹಿಸುತ್ತೇವೆ.
-ವಿ. ಕುಕ್ಯಾನ್,
ಮಂಗಳೂರು