ಆಡಳಿತ ಮತ್ತು ಸೇವೆ

ಈಚೆಗೆ ಸರ್ವೋಚ್ಚ ನ್ಯಾಯಾಲಯವು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಇತರ ಸೇವೆಗಳನ್ನು ತಮಗಿಂತ ಕೆಳದರ್ಜೆಯದೆಂದು ಗುರುತಿಸುತ್ತಾರೆಂದು ಅಭಿಪ್ರಾಯಪಟ್ಟಿತು ಮತ್ತು ಇದು ಸರಿಯಲ್ಲ, ಎಲ್ಲ ರಾಷ್ಟ್ರೀಯ ಸೇವೆಗಳೂ ಸಮಾನವೆಂಬಂತೆ ನೋಡಿಕೊಳ್ಳಬೇಕೆಂದೂ ಸಲಹೆ ನೀಡಿತು. ಈ ಅಭಿಮತವು ಒಂದು ಪ್ರಕರಣದಲ್ಲಿ ಮೂಡಿದ್ದಾದರೂ ಈ ಆಡಳಿತ ಸೇವೆಗಳ ಹಿಂದೆ ಒಂದು ರುಜಿನದ ಎಲ್ಲ ಲಕ್ಷಣವೂ ಇದೆಯೆಂಬುದು ವ್ಯಕ್ತವಾಗಿದೆ. ಈ ತಾರತಮ್ಯವನ್ನು ಅಧಿಕಾರಿಗಳು ಅನುಭವಿಸುತ್ತಾರೆ; ಮತ್ತು ಅನುಭವಿಸುವ ಅಧಿಕಾರಿಗಳು ತಮ್ಮನ್ನು ಆಳುವವರು ಈ ಬಗ್ಗೆ ಏನು ಹೇಳುತ್ತಾರೋ ಎಂಬ ಸಂಶಯದಿಂದ ಬಹಿರಂಗವಾಗಿ ಸುಮ್ಮನಿರುತ್ತಾರೆ. ಆದರೆ ಜನರು ಇದು ತಮಗೆ ಸಂಬಂಧಿಸಿದ್ದಲ್ಲವೆಂದು ತಿಳಿಯುತ್ತಾರೆ.
ಇದು ಲೋಕಸಮಸ್ಯೆಯೇ ಅಲ್ಲ. ಎಲ್ಲವೂ ಆಡಳಿತಕ್ಕೆ ಸಂಬಂಧಿಸಿದ ಸೇವೆಗಳೇ ಆಗಿದ್ದರೂ ಒಂದು ವಿಭಾಗ ಇಲ್ಲವೇ ಇಲಾಖೆಯ ಆಯ್ದ ಅಧಿಕಾರಗಳು ಮಾತ್ರ ‘ಆಡಳಿತ ಸೇವೆ’ ಎಂಬ ಅಭಿಪ್ರಾಯ ಮತ್ತು ಇದನ್ನು ಪುಷ್ಟೀಕರಿಸುವ ನಾಮಧೇಯ ಈ ಸನ್ನಿವೇಶವನ್ನು ಸೃಷ್ಟಿಸಿದೆ. ಅಂದರೆ ಒಂದು ಸೇವೆ ಮಾತ್ರ ಆಡಳಿತ ಸೇವೆ ಎನಿಸಿಕೊಂಡಿದೆ. ಎಲ್ಲವೂ ಆಡಳಿತ ಸೇವೆ ಏಕಲ್ಲ ಅಥವಾ ಉಳಿದ ಸೇವೆಗಳು ಆಡಳಿತಕ್ಕೆ ಸಂಬಂಧಿಸಿಲ್ಲವೇ ಎಂಬ ಪ್ರಶ್ನೆ ನಿತ್ಯ ಜೀವನಕ್ಕೆ ಮುಖ್ಯವಲ್ಲವಾದರೂ ಸೂಕ್ಷ್ಮವಾಗಿ ಗಮನಿಸಿದಾಗ ಇದೂ ಒಂದು ಸಲ್ಲದ ವರ್ಗೀಕರಣವೆಂದು ಅನ್ನಿಸುತ್ತದೆ. ಇನ್ನೂ ಮುಂದುವರಿದರೆ ಯಾವುದು ಆಡಳಿತ, ಯಾವುದು ಸೇವೆ ಎಂಬುದನ್ನು ಹುಡುಕಬೇಕಾಗುತ್ತದೆ.
ಕೆಲವು ಪದಗಳು ತಮ್ಮ ಪ್ರಯೋಗದಲ್ಲಿ ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ. ನನಗೆ ತಿಳಿದಂತೆ ಆಡಳಿತವೆಂಬ ಪದವಿದೆ; ಸದಾಡಳಿತ ವೆಂಬ ಪದವಿಲ್ಲ. ಆದರೆ ಸರ್ವಾಧಿಕಾರಿಯ ಅಥವಾ ಸ್ವೇಚ್ಛಾಚಾರಿಯ ಆಳ್ವಿಕೆಯ ನಡತೆಯು ದೇಶದ-ರಾಜ್ಯದ ಮತ್ತದರ ಜನರ ಬದುಕನ್ನು ವಿಕಾರಗೊಳಿಸಿ ದುರಾಡಳಿತವೆಂಬ ನಿಶ್ಚಿತ ಮತ್ತು ನಿಶ್ಚಲ ಅರ್ಥವನ್ನು ಕೊಡುತ್ತದೆ. ಅಂಥಲ್ಲಿ ಪ್ರಾಯಃ ಸಹಜತೆ, ಪ್ರಾಮಾಣಿಕತೆ, ದಕ್ಷತೆ ಮರಳಿದರೆ ಅದನ್ನು ಸದಾಡಳಿತವೆಂದು ಕರೆಯಬೇಕಾಗುತ್ತದೆಯೇನೋ? ಕನ್ನಡದಲ್ಲಿ ಇಂತಹ ಕೆಲವು ಪದಗಳಿವೆ: ವಾಸನೆ, ಪರಿಮಳ ಇವೆರಡೂ ಸಹಜ ಗುಣವನ್ನು ಅಭಿವ್ಯಕ್ತಿಸುತ್ತವೆ. ಒಳ್ಳೆಯ ವಾಸನೆಗೆ ಸುವಾಸನೆ ಎಂದು ಯಾಕೆ ಹೇಳಬೇಕೋ? ಕೆಟ್ಟ ವಾಸನೆಗೆ ದುರ್ವಾಸನೆಯೆಂದು ಹೇಳಿದಾಗ ಸುವಾಸನೆಯೆಂಬ ಪದ ಹುಟ್ಟಿತೆಂದು ಕಾಣುತ್ತದೆ. ಪರಿಮಳಕ್ಕೆ ಈ ಬಂಧ-ಬಂಧನವಿಲ್ಲ. ಹೀಗೆ ಕೆಟ್ಟದ್ದರಿಂದ ಒಳ್ಳೆಯದಕ್ಕೆ ಕಿರೀಟವಿಡುವ ಪ್ರವೃತ್ತಿಯನ್ನು ಸಮಾಜ ಬೆಳೆಸಿಕೊಂಡಿದೆ. ಆಡಳಿತವೆಂದರೆ ಆಳ್ವಿಕೆ. ಇದು ಸರಿಯಾದ ಹಾದಿಯಲ್ಲಿ ಹೋದರೆ ಎಲ್ಲರಿಗೂ ಕ್ಷೇಮ. ಏಕಮುಖಹಾದಿಯಾದರೆ ಬಳಲುವವನು ಪ್ರಜೆಯೇ. ಏಕೆಂದರೆ ಆಳುವವನಿಗೆ ಕಷ್ಟವೆನ್ನುವುದು ಇರುವುದಿಲ್ಲ. ಅವನಿಗೆ ಕಷ್ಟ ಬರುವುದು ಇನ್ನೊಬ್ಬ ಅಷ್ಟೇ ಮಹತ್ವಾಕಾಂಕ್ಷಿ ಆಡಳಿತಗಾರನಿಂದ; ಅಥವಾ ವಿರೋಧಿಗಳಿಂದ ಅಥವಾ ಎದುರಾಳಿಗಳಿಂದ.
ಇದೇ ಮಾತನ್ನು ‘ಸೇವೆ’ ಎಂಬ ಪದಕ್ಕೆ ಯಥಾರೀತಿಯಲ್ಲಿ ಅನ್ವಯಿಸಲು ಸಾಧ್ಯವಾಗುವುದಿಲ್ಲ. ಹಾಗೆ ನೋಡಿದರೆ ಸೇವೆಗೆ ಸ್ಪಷ್ಟ ನಿರೂಪಣೆಯಿಲ್ಲ. ಭೂಮಿಗೆ ಭಾರವಾಗದ ಎಲ್ಲವೂ ಸೇವೆಯೇ ಇರಬಹುದೇನೋ? ಆಧುನಿಕ ವ್ಯವಸ್ಥೆಯಲ್ಲಿ ಎಲ್ಲವೂ ಸೇವೆಯೇ ಆಗಿದೆ. ಎಲ್ಲ ಬಗೆಯ ದುಡಿಮೆಯೂ ಸೇವೆಯೇ. ಸಂಬಳ ಪಡೆದು ಉದ್ಯೋಗವನ್ನು ನಿರ್ವಹಿಸಿದವರಿಗೆ ‘ಸೇವೆ ಸಲ್ಲಿಸಿದರು’ ಎನ್ನುತ್ತೇವೆ. ಮಾಡಬೇಕಾದ್ದನ್ನು ಮಾಡುವುದೇ ಸೇವೆಯೆಂದು ಕರೆಸಿಕೊಂಡಿದೆ. ಈಗೀಗ ಎಂಥ ಬಗೆಯಲ್ಲಿ- ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲಂಚ, ಮೋಸ ಇತ್ಯಾದಿಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಕಂಟಕಪ್ರಾಯರಾದವರನ್ನೂ ಅವರ ಸೇವೆಯನ್ನು ಪರಿಗಣಿಸಿ ಕೊಂಡಾಡುವವರ ಸಂಖ್ಯೆ ಮಿತಿಮೀರುತ್ತಿದೆ. ಅನೈತಿಕ ಕಾರ್ಯಗಳಲ್ಲಿ ತೊಡಗಿ ಜೈಲಿಗೆ ಹೋಗಿ ಬಂದವರನ್ನು ಆರತಿ ಬೆಳಗಿ ಸ್ವಾಗತಿಸುವುದನ್ನು ಮಾಧ್ಯಮಗಳಲ್ಲಿ ವೈಭವೀಕರಿಸುವುದರಿಂದ ಅವರೂ ಸಮಾಜಸೇವಕರಿರಬಹುದೆಂಬ ಭ್ರಮೆಗೆ ಜನರನ್ನು ಬಲಿಯಾಗಿಸಬಹುದು. ಹೀಗೆ ಸೇವೆ, ಸೇವಕರು ಇವರೆಲ್ಲ ದೇಶಕ್ಕಾಗಲೀ ಸಮಾಜಕ್ಕಾಗಲೀ ಹೊರೆಯಲ್ಲವೇ ಎಂಬುದನ್ನು ನಾವು ಚಿಂತಿಸಿದಂತಿಲ್ಲ. ನಮ್ಮ ರಾಜಕೀಯ ಜೀವನವನ್ನು ವಿಶ್ಲೇಷಿಸಿದರಂತೂ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜನಸೇವೆಗೆ ಅವಕಾಶ ಹುಡುಕುವವರೇ! ಜನಸೇವೆಗಾಗಿ ಯಾರ್ಯಾರದ್ದೋ ಕಾಲುಕಟ್ಟಿ ಕೋಟಿಗಟ್ಟಲೆ ಹಣ ವೆಚ್ಚಮಾಡಿ ಸ್ಪರ್ಧಿಸುವವರು ಬಹಳ ಮಂದಿ. ಒಮ್ಮೆ ಅವಕಾಶ ಪ್ರಾಪ್ತವಾದರೆ ಆನಂತರ ಅವರ ಸೇವೆ ಹೇಗಿರುತ್ತದೆಯೆಂಬುದು ಸರ್ವ ವಿಧಿತ. ಈಗ ಸೇವೆ ಮಾಡದಿರುವವರೇ ಇಲ್ಲವೆನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ಅವರ ಸೇವೆಯನ್ನು ತಡೆದುಕೊಳ್ಳುವುದೇ ಪ್ರಜೆಗೆ, ಮತದಾರರಿಗೆ, ಒಂದು ಸವಾಲಾಗುತ್ತಿದೆ. ಹೀಗಾಗಿ ‘ಸೇವೆ’ ಎಂಬುದೂ ತನ್ನ ಮೂಲ ಅರ್ಥ ಮತ್ತು ಪ್ರೇರಣೆಯನ್ನು ಕಳೆದುಕೊಳ್ಳುತ್ತಿದೆ.
ಇವೆಲ್ಲದರ ನಡುವೆ ನಮ್ಮಲ್ಲಿ ಸರಕಾರ ಸದಾ ಜನಸೇವೆಯನ್ನು ತನ್ನ ದಿಕ್ಸೂಚಿಯಾಗಿಟ್ಟುಕೊಂಡಿದೆ. ಇದಕ್ಕಾಗಿ ಅದು ತನ್ನೆಲ್ಲ ಕೆಲಸಗಳನ್ನು ಸೇವೆಯೆಂದು ಪರಿಗಣಿಸಿದೆ. ಇದು ಎಷ್ಟು ಸಮಂಜಸವೋ ಗೊತ್ತಿಲ್ಲ. ಅಧಿಕಾರದಲ್ಲಿರುವವರನ್ನು ಕಾಣುವುದೇ ಪ್ರಜೆಗೆ ಒಂದು ಸಾಹಸವಾಗಿರುವಾಗ ಅವರ ಸೇವೆಯನ್ನು ಹೇಗೆ ಪಡೆದುಕೊಳ್ಳಬಹುದು? ಜನರೇ ಪ್ರಭುಗಳಾಗಿರುವ ಪ್ರಜಾಪ್ರಭುತ್ವದಲ್ಲಿ ಪ್ರಜೆಯ ಪಾಡು ಹೇಗಿದೆಯೆಂದು ಎಲ್ಲರಿಗೂ ಗೊತ್ತಿದೆ. ಅಧಿಕಾರದಲ್ಲಿರುವವರು ಪ್ರಜೆಗೆ ‘ನೀನೇ ನನ್ನ ಪ್ರಭು, ಆದ್ದರಿಂದ ನೀನು ನಾನು ಹೇಳಿದಂತೆ ಕೇಳಬೇಕು’ (You are my Master, obey me!) ಎಂಬ ವಿರೋಧಾಭಾಸದ ದೃಶ್ಯವನ್ನು ನಾವು ಎಲ್ಲೆಲ್ಲೂ ಕಾಣಬಹುದು. ಹುಟ್ಟು ಸಿರಿವಂತರು, ವಿದ್ಯಾವಂತರು ಅತೀ ಕೆಳಹಂತದ ಸರಕಾರಿ ಅಧಿಕಾರಿಗೂ ಡೊಗ್ಗುಸಲಾಮು ಹಾಕುವಂತಹ ದಾರುಣ ರಂಗಸ್ಥಳವನ್ನು ಇಂದಿನ ವ್ಯವಸ್ಥೆ ಮಾಡಿಕೊಟ್ಟಿದೆ.
ಇದರ ಕಳಶಪ್ರಾಯವಾಗಿ ದೇಶದಲ್ಲಿ ‘ಆಡಳಿತ ಸೇವೆ’ಯೆಂಬುದೊಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಭಾರತೀಯ ಇರಬಹುದು, ಕರ್ನಾಟಕ (ಅಥವಾ ಸಂಬಂಧಿಸಿದ ರಾಜ್ಯ) ಇರಬಹುದು; ಅಥವಾ ಆಡಳಿತ ಎಂಬ ಪದಕ್ಕೆ ಪರ್ಯಾಯವಾಗಿ ವಿದೇಶಾಂಗ, ಪೊಲೀಸ್, ರಕ್ಷಣಾ, ಅರಣ್ಯ, ಕಂದಾಯ, ಕಾರ್ಮಿಕ ಇತ್ಯಾದಿ ವೈವಿಧ್ಯಗಳಿರಬಹುದು. ಆದರೆ ಎಲ್ಲವೂ ಸೇವೆಗಳೇ. ಈ ಸೇವೆಗಳು ಮೂಲತಃ ವಸಾಹತುಶಾಹಿಯವು. ಬ್ರಿಟಿಷ್ ವ್ಯವಸ್ಥೆಯಲ್ಲಿ ಸಿವಿಲ್ ಸರ್ವಿಸ್ (ನಾಗರಿಕ ಸೇವೆ) ಎಂಬುದೊಂದಿತ್ತು. ಅದೀಗ ಬಹುತಲೆಗಳನ್ನು ಹೊಂದಿದೆ. ಇವೆಲ್ಲವೂ ಒಳ್ಳೆಯ ಸ್ಥಾನ-ಮಾನ, ಪಗಾರ, ಸವಲತ್ತು ಮತ್ತು ಅಧಿಕಾರವನ್ನು ನೀಡುವ, ನೀಡಬಲ್ಲ ಸಿಂಹಾಸನಗಳೇ. ಸ್ವಾತಂತ್ರ್ಯಪೂರ್ವದಲ್ಲಿ ಸಾಕಷ್ಟು ಭಾರತೀಯರೂ ಈ ‘ಐಸಿಎಸ್’ ಪರಿಕ್ಷೆಯನ್ನು ಬರೆದು ಅಧಿಕಾರ ಪಡೆಯುತ್ತಿದ್ದರು. ಆನಂತರ ಬ್ರಿಟಿಷ್ ಅಧಿಕಾರಿಗಳು ಇದ್ದ ಬಗ್ಗೆ ಮಾಹಿತಿಯಿಲ್ಲ. ಆಗ ಭಾರತೀಯ ಅಧಿಕಾರಿಗಳಿಗೆ ಬ್ರಿಟನ್‌ನಲ್ಲಿ ತರಬೇತಿ ನೀಡಲಾಗುತ್ತಿತ್ತು. (ಈ ಕುರಿತು ಒಂದು ಟೀಕೆಯಿತ್ತು: ತರಬೇತಿಗೆಂದು ಹೋದವರು ತರಬೇತಿ ಹೊಂದುತ್ತಾರೋ ಇಲ್ಲವೋ ಗೊತ್ತಿಲ್ಲ; ಆದರೆ ಕುದುರೆ ಸವಾರಿಯನ್ನೂ ಗಾಲ್ಫ್‌ನ್ನೂ ಕಲಿತು ಬರುತ್ತಾರೆ!) ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹಳೆಯ ಅಧಿಕಾರಿಗಳು ಮುಂದುವರಿದರು. ಅನೇಕ ಬ್ರಿಟಿಷ್ ಅಧಿಕಾರಿಗಳು ತಮ್ಮ ತಾಯ್ನಾಡಿಗೆ ಮರಳಿದರು. ಉಳಿದವರು ನಿವೃತ್ತಿಯಾದ ಬಳಿಕ ಮರಳಿದರು.
ಸ್ವಾತಂತ್ರ್ಯಾನಂತರ ಈ ಸೇವೆಗಳು ಪ್ರತ್ಯೇಕವಾದವು. ಇದರಿಂದಾಗಿ ಆಡಳಿತ ಸೇವೆಯೆಂಬ ವರ್ಗ ಇನ್ನಷ್ಟು ಮಾನ್ಯವಾಯಿತು. ಉಳಿದ ಸೇವೆಗಳು ದ್ವಿತೀಯ ದರ್ಜೆಗೆ ತಳ್ಳಲ್ಪಟ್ಟವು. ಅವರಿಗೇನಿದ್ದರೂ ಕಾಡಮೂಲಕವೇ ಪಥ ಆಗಸಕ್ಕೆ. ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇವರೆಲ್ಲರೂ ರಾಜಸತ್ತೆಯಲ್ಲದಿದ್ದರೂ ಪಾಳೇಗಾರಿಕೆ ವ್ಯವಸ್ಥೆಯ ದ್ಯೋತಕಗಳೇ; ಅಥವಾ ಪಳೆಯುಳಿಕೆಗಳೇ. ಈ ಹುದ್ದೆಯ ಪ್ರತಿಷ್ಠೆ ಎಲ್ಲರಿಗೂ ತಿಳಿದದ್ದೇ. ವಿಶೇಷವೆಂದರೆ ಕೇಂದ್ರ ಸರಕಾರದ ಈ ನಾಮಧೇಯವು ಅಧಿಕಾರಿಯು ಆಯ್ಕೆಮಾಡಿಕೊಂಡ ರಾಜ್ಯಗಳ ಚೌಕಟ್ಟಿನಲ್ಲಿ ಸೇವೆಯಲ್ಲಿದ್ದರೂ ಈ ರಾಷ್ಟ್ರೀಯ ಪರಿಕಲ್ಪನೆಯು ಎರವಲು ಸೇವೆಯಂತೆ ಮುಂದುವರಿಯುತ್ತಿದೆ.
ನಮ್ಮ ಭಾಷಾ ವೈವಿಧ್ಯವು ಇಂತಹ ಸೇವೆಗಳ ಗೊಂದಲವನ್ನು ಅನಾವರಣಗೊಳಿಸಿದೆ. ಒಂದೆರಡು ಉದಾಹರಣೆಗಳು ಸಾಕೆನ್ನಿಸುತ್ತದೆ: ಸ್ವಾತಂತ್ರ್ಯಪೂರ್ವದಲ್ಲಿ ‘ಕಲೆಕ್ಟರ್’ (ಸಂಗ್ರಹಕಾರ) ಎಂಬ ಜಿಲ್ಲಾ ಮಟ್ಟದ ಹುದ್ದೆಯಿತ್ತು. ಸರಕಾರವೆಂದರೆ, ಆಡಳಿತವೆಂದರೆ ಸಿರಿವಂತರ, ಇಂಗ್ಲಿಷ್ ಬಲ್ಲವರ ಮತ್ತು ಅಧಿಕಾರಸ್ಥರ ಯೋಗಕ್ಷೇಮದ ಮತ್ತು ತೆರಿಗೆ ಸಂಗ್ರಹದ ಕೆಲಸವೆನಿಸಿತ್ತು. (ಬಡಜನರ ಗೋಳನ್ನು ಆಗಲೂ ಆದ್ಯತೆಯಲ್ಲಿಟ್ಟಿರಲಿಲ್ಲ!) ಈ ಪೈಕಿ ತೆರಿಗೆ ಸಂಗ್ರಹ ಆಡಳಿತದ ಪ್ರಮುಖ ಕಾರ್ಯವಾಗಿತ್ತು. ಇದನ್ನು ಜಿಲ್ಲಾ ಮಟ್ಟದಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದ್ದರಿಂದ ಈ ಸಂಗ್ರಹಕಾರನನ್ನು ಆಡಳಿತದ ಪ್ರಮುಖ ಪ್ರತಿನಿಧಿಯೆನಿಸಿ ಆತನಿಗೆ ‘ಕಲೆಕ್ಟರ್’ ಎಂಬ ಅಭಿದಾನವನ್ನಿತ್ತು ಪೋಷಿಸಲಾಗಿತ್ತು. ಈ ಹೆಸರು ಈಗಲೂ ಭಾರತದ ಅನೇಕ ರಾಜ್ಯಗಳಲ್ಲಿ ಮುಂದುವರಿದಿದೆ. ಇತ್ತೀಚೆಗಿನ ಕೆಲವು ದಶಕಗಳ ಮೊದಲು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಸಿ’ ರಾಜ್ಯಗಳಲ್ಲಿ ಮುಖ್ಯ ಆಯುಕ್ತರು, ಆಯುಕ್ತರು (Chief Commissioner, Commissioner) ಎಂಬ ಹುದ್ದೆಗಳಿದ್ದವು. ಇದರಿಂದಾಗಿ ಜಿಲ್ಲೆಯ ಹೊಣೆ ಹೊತ್ತವರಿಗೆ ಉಪ ಆಯುಕ್ತರು (Deputy Commissioner) ಎಂಬ ಹೆಸರು ಹೊಂದಿಕೆಯಾಗುತ್ತಿತ್ತು. ಆಗ ಇಂಗ್ಲಿಷ್ ಎಲ್ಲ ಕಡೆ ಅಧಿಕಾರಶಾಹಿಯಲ್ಲಿ ಪ್ರಚಲಿತವಿತ್ತು. (ಕೆಳಹಂತದಲ್ಲಿ ಪರ್ಷಿಯನ್ ಮೂಲದ ತಹಶೀಲ್ದಾರ್, ಸುಬೇದಾರ್, ಅಮಲ್ದಾರ್, ಮಾಮಲೇದಾರ್ ಮುಂತಾದ ಹುದ್ದೆಗಳಿದ್ದವು!)
ಇದನ್ನು ಅನುಸರಿಸಿ ಕರ್ನಾಟಕದಂತೆ ಕೆಲವು ರಾಜ್ಯಗಳಲ್ಲಿ ‘ಡೆಪ್ಯುಟಿ ಕಮಿಶನರ್’ ಎಂದು ಈ ಹುದ್ದೆಯನ್ನು ಕರೆಯಲಾಗುತ್ತಿದೆ. ಇದು ಕನ್ನಡದಲ್ಲಿ ‘ಉಪಆಯುಕ್ತ’ ಎಂದಾಗಬೇಕಿತ್ತು. ಆದರೆ ಅನುವಾದದ ಕೆಲಸವೂ ಆಡಳಿತದ ಬೃಹಸ್ಪತಿಗಳಿಂದಲೇ ಆಗುವುದರಿಂದ ಇದನ್ನು ‘ಜಿಲ್ಲ್‌ಧಿಕಾರಿ’ಯೆಂದು ಭಾಷಾಂತರಿಸಲಾಯಿತು. ‘ಉಪವಿಭಾಗಾಧಿಕಾರಿ’ಯೆಂದು ನಾವು ಉಲ್ಲೇಖಿಸುವ ಹುದ್ದೆ ಇಂಗ್ಲಿಷಿನಲ್ಲಿ ‘ಅಸಿಸ್ಟೆಂಟ್ ಕಮಿಷನರ್’ ಎಂಬ ಪದದ ಅಪಭ್ರಂಶ ಅನುವಾದ. ಅದು ‘ಸಹಾಯಕ ಆಯುಕ್ತ’ ಎಂದಾಗಬೇಕು.
ಇರಲಿ, ಈ ಹುದ್ದೆಗಳ ಹೆಸರು ಕಟ್ಟಿಕೊಂಡು ಪ್ರಜೆಗಳಿಗೇನಾಗಬೇಕು? ಸಂಸತ್ತೇ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುವಾಗ ಅವರ ಅಧೀನದ ಅಧಿಕಾರಶಾಹಿ ಹೀಗಿರಬೇಕಲ್ಲವೇ? (ಒಂದು ಉದಾಹರಣೆಯೆಂದರೆ ಈಚೆಗೆ ಮೂರು ಕ್ರಿಮಿನಲ್ ಕಾನೂನುಗಳ ‘ಭಾರತೀಕರಣ’ವಾಯಿತು. ಅನುವಾದ ಸರಿಯೋ ತಪ್ಪೋ, ಈ ಪೈಕಿ ‘ಭಾರತೀಯ ಸಾಕ್ಷ್ಯ ಸಂಹಿತೆ’ಯನ್ನೂ ಕ್ರಿಮಿನಲ್ ಕಾನೂನಾಗಿಸಲಾಯಿತು. ಅದು ಅತ್ಯಂತ ಶಕ್ತವಾದ ಮತ್ತು ಸಿವಿಲ್-ಕ್ರಿಮಿನಲ್ ಎಂಬ ಅಂತರವಿಲ್ಲದೆ ಎಲ್ಲ ಪ್ರಕರಣಗಳಿಗೂ ಅನ್ವಯಿಸುವ ಮತ್ತು ಅನ್ವಯಿಸಬೇಕಾದ ಸಿದ್ಧಾಂತಗಳ ಕಾಯ್ದೆ. ಆದರೆ ಈ ತಪ್ಪನ್ನು ಅಧಿಕಾರದ ಮದದಾನೆಗಳಿಗೆ ಹೇಳುವವರು ಯಾರು?)
ಈ ಅಧಿಕಾರಸ್ಥ ಸೇವಾಕರ್ತರು ರಾಜಕೀಯದ ಸೇವಾಕರ್ತರಿಗೆ ನಿಷ್ಠರಾಗಿದ್ದರೆ ಉದ್ಯೋಗ ಸುರಕ್ಷಿತ ಮಾತ್ರವಲ್ಲ ಅನುಕೂಲ ಕೂಡಾ. ಬಹಳಷ್ಟು ಅಧಿಕಾರಿಗಳು ಅವರೊಡೆಯನ ಎದುರು ನತಮಸ್ತಕರಾಗಿ ದಯನೀಯವಾಗಿ ಕಂಡರೆ ತಮ್ಮ ಅಧೀನದಲ್ಲಿರುವವರ ವಿರುದ್ಧ ತೋಳೆತ್ತುವಷ್ಟು ಶಕ್ತರಾಗಿರುತ್ತಾರೆ. ಯಾವ ವಿಚಾರದ ಬಗೆಗೂ ಶಿಫಾರಸು, ವರದಿ ಸಲ್ಲಿಸಬಲ್ಲ ಅಧಿಕಾರಿಗಳಿಗೆ ರಾಜಕಾರಣಿಗಳು ತಮಗೇನಾಗಬೇಕೋ ಅದನ್ನು ಹೇಳಿದರಾಯಿತು. ವರದಿಗಳೂ, ಶಿಫಾರಸುಗಳೂ ಸಿದ್ಧ! ಅದರಿಂದ ತಮಗೂ ತಮ್ಮ ಆಡಳಿತದ ಇಷ್ಟದೇವತೆಗಳಿಗೂ ಆಗುವ ಲಾಭದ ಬಗ್ಗೆ ಗಮನವಿರಬಹುದು; ಆದರೆ ಜನರಿಗಾಗುವ ನಷ್ಟದ ಬಗ್ಗೆ ನಿರ್ಲಕ್ಷ್ಯ ಅತೀ ಸಹಜ. ಹೀಗಾಗಿಯೇ ನಾವು ಆಡಳಿತದಲ್ಲಿ ಕೈಗೊಳ್ಳುವ ತಪ್ಪು ನಿರ್ಧಾರದ ಬಗ್ಗೆ ಮಂತ್ರಿ ಮಹೋದಯರನ್ನು ಟೀಕಿಸುತ್ತೇವೆಯೇ ಹೊರತು ಈ ಅಧಿಕಾರಶಾಹಿಗಳನ್ನಲ್ಲ. ಅತ್ಯಂತ ಪ್ರತಿಭಾವಂತರೆನಿಸಿಕೊಂಡವರು (ಅಂಕಗಳ ಆದ್ಯತೆಯ ಮೇಲೆ ಪ್ರತಿಭೆಯ ಗುರುತು!) ಊಳಿಗದ ಆಳಾಗುವುದು ಸ್ವತಂತ್ರ ಭಾರತದ ಸೋಜಿಗ. ಅಪರೂಪಕ್ಕೆ ಒಬ್ಬೊಬ್ಬರು ಸ್ವತಂತ್ರರಾಗಿರುತ್ತಾರೆ. ಈಚೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ್ ದಾಸ್ ಅಲ್ಲಿಂದ ನಿವೃತ್ತರಾದ ಬಳಿಕ ಪ್ರಧಾನಿ ಕಚೇರಿಯ ಮುಖ್ಯ ಕಾರ್ಯದರ್ಶಿಗಳಲ್ಲೊಬ್ಬರಾಗಿ ಸೇರಿ ತನ್ನ ಹಿಂದಿನ ಹುದ್ದೆಯ ಮಾನ ಕಳೆದರು. (ನಮ್ಮ ಸರ್ವೋಚ್ಚ ನ್ಯಾಯಮೂರ್ತಿಗಳು ರಾಜ್ಯಪಾಲರಾದಂತೆ!) ಬಹಳಷ್ಟು ಆಡಳಿತ ಸೇವೆಯವರಿಗೆ ‘ರಾಜಸೇವಾನಿರತ’ರೆಂಬ ಹೆಸರು ಉಚಿತ. ಈ ಹುದ್ದೆಯನ್ನು ಸೇರಬಯಸುವವರಿಗೂ ರಾಜಸೇವಾಸಕ್ತರೆನ್ನಬಹುದು.
ಈಚೆಗೆ ಕೇಂದ್ರ ಸರಕಾರವು ಇತರ ಶೈಕ್ಷಣಿಕ ಶಿಸ್ತಿನಿಂದ ಆಯಕಟ್ಟಿನ ಸ್ಥಾನಗಳಿಗೆ ನೇಮಕಾತಿಯನ್ನು ಮಾಡಲು ತೊಡಗಿದೆ. ಯಾವುದೇ ಇತರ ಸೇವೆಯ ಭಾಗದವರೂ ಆಡಳಿತದ ಗಾಲಿಗಳೇ ಅಲ್ಲವೇ? ಅವರಿಗೆ ತಮ್ಮ ಬ್ರೆಡ್ ಆಡಳಿತದ ಬೆಣ್ಣೆಯಲ್ಲಿ ಹೊಂದಿಕೆಯಾದರೆ ಸಾಕು, ಈ ಹೆಸರಿನ, ತಾರತಮ್ಯದ ತೊಡಕುಗಳು ಹಿಂಸೆಯಾಗುವುದಲ್ಲವೇನೋ? ಇದು ಹೊಸ ಬದಲಾವಣೆಯನ್ನು ತರಬಹುದೆಂದು ತಿಳಿದರೆ ತಪ್ಪು. ಯಾವುದೇ ಅರ್ಹತೆಯನ್ನು ಹೊಂದಿದರೂ ಊಳಿಗಮಾನ್ಯ ಪದ್ಧತಿಯನ್ನು ಒಪ್ಪಿಕೊಂಡು ಜೋಳವಾಳಿಗೆಯನ್ನು ಮಾಡುವವರಿಗೆ ತಮ್ಮ ಅರ್ಹತೆ, ಪಾಂಡಿತ್ಯ, ಪ್ರತಿಭೆ ಸ್ವರ್ಗದ ಬಾಗಿಲಿಗೆ ಪ್ರವೇಶಚೀಟಿಯೇ ಹೊರತು ತಮ್ಮನ್ನು ತಿದ್ದಿಕೊಳ್ಳುವುದಕ್ಕಲ್ಲ; ತಾವು ಪ್ರವೇಶಿಸುವ, ಸೇವಿಸುವ ಪ್ರಭುಗಳನ್ನಾಗಲೀ ಅವರು ಪ್ರತಿನಿಧಿಸುವ ವ್ಯವಸ್ಥೆಯನ್ನು ತಿದ್ದುವುದಕ್ಕಂತೂ ಖಂಡಿತಾ ಅಲ್ಲ.
ಇವುಗಳೆಲ್ಲದರ ನಡುವೆಯೂ ಪ್ರಾಮಾಣಿಕ ಅರ್ಹರಿರುತ್ತಾರೆ. ಅವರು ಎಲ್ಲೇ ಹೋದರೂ ಅಲ್ಲಿಂದ ವರ್ಗಾವಣೆ ಅಥವಾ ಅವಮಾನವನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯಗಳು ಎಷ್ಟೆಂದು ಇಂತಹ ಪ್ರಾಮಾಣಿಕರನ್ನು ಕಾಪಾಡಬಹುದು?