ಸಾಮಾಜಿಕ ಸಮಾನತೆಗೆ ಪರ್ಯಾಯ ಮೀಸಲಾತಿ
ಮೀಸಲಾತಿಯೊಂದಿಗೆ ಸದಾ ಜೊತೆಗೂಡಿರುವ ಒಂದು ವಿಚಾರವೆಂದರೆ, ಅದು ಸಮಾಜದಲ್ಲಿ ಮುಖ್ಯವಾಗಿ ಎರಡು ವಿಶಾಲವಾದ ಲಂಬ ರೂಪದಲ್ಲಿರುವ ಗೋಡೆಯನ್ನು ವಿಭಜಿಸಿರುವುದು. ಅಂದರೆ ಮೀಸಲಾತಿಯ ಪರ ಮತ್ತು ಮೀಸಲಾತಿಯ ವಿರೋಧ. ಕೆಲವರು ಮೀಸಲಾತಿಗೆ ಅಂಟಿಕೊಂಡಿರುವ ಹಿತಾಸಕ್ತಿಗಳ ಆಧಾರದ ಮೇಲೆ ಸಮಾಜವನ್ನು ಇನ್ನೂ ಅನೇಕ ಸಣ್ಣ ಜಾತಿ ವಿಭಾಗಗಳಾಗಿ ವಿಭಜಿಸುವ ಮಟ್ಟಕ್ಕೂ ಹೋಗುತ್ತಾರೆ.
ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ - ಮೀಸಲಾತಿಯನ್ನು ಜಾರಿಗೆ ಕೊಡುವ ಮೊದಲು ಸಮಾಜವು ಅವಿಭಜಿತ ಮತ್ತು ಏಕೀಕೃತವಾಗಿತ್ತೇ?
ಉತ್ತರ- ‘ಖಂಡಿತವಾಗಿಯೂ ಇಲ್ಲ’
ಭಾರತೀಯ ಸಮಾಜವು ಈಗಾಗಲೇ ಅನೇಕ ಜಾತಿಗಳು ಮತ್ತು ಉಪಜಾತಿಗಳ ವಿಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಜಾತಿಯು ಸಮಕಾಲೀನ ಭಾರತೀಯ ಬದುಕಿನ ಕಟುಸತ್ಯ. ಜಾತಿ ಸಂಸ್ಕೃತಿಯು ಎಷ್ಟು ಆಳವಾಗಿ ಬೇರೂರಿದೆ ಎಂದರೆ ಕೆಲವೇ ವ್ಯಕ್ತಿಗಳು ಮಾತ್ರ ತಮ್ಮ ಕಲ್ಪನೆ ಮತ್ತು ಕೃತಿಗಳಿಂದ ದೂರವಿರುತ್ತಾರೆ. ಇದು ಅಲ್ಲಗಳೆಯಲಾಗದ ತೋರಿಕೆಯ ಹಿಂದೆ ಅಡಗಿರುವ ನಿಜ ಸ್ಥಿತಿ. ಏಕೆಂದರೆ ಜಾತಿ ಪರಿಜ್ಞಾನ ಇಂದಿಗೂ ಸಮಾಜದಲ್ಲಿ ಹಾಸು ಹೊಕ್ಕಾಗಿದೆ. ಒಂದೇ ಜಾತಿಗೆ ಸೇರಿದ ವಿವಿಧ ಆರ್ಥಿಕ ಸ್ಥಿತಿಯ ಮತ್ತು ವೃತ್ತಿನಿರತ ಗುಂಪುಗಳ ವ್ಯಕ್ತಿಗಳು ಪರಸ್ಪರ ಹತ್ತಿರವಾಗುತ್ತಾರೆ. ಆದರೆ ಇತರ ಜಾತಿಗಳ ಜನರೊಂದಿಗೆ ಹತ್ತಿರವಾಗಲು ಸತತ ಪ್ರಯತ್ನಗಳನ್ನು ಮಾಡಬೇಕಾಗಿರುವುದು ಸಾಮಾನ್ಯ ಅನುಭವವಾಗಿದೆ. ಆದರೂ, ಭಾರತೀಯ ಸಮಾಜದಲ್ಲಿ ಬಂಧುತ್ವದ ಬಂಧ ಪೂರ್ಣ ಭಗ್ನಗೊಂಡಿಲ್ಲ ಎಂಬುದೇ ಆಶಾವಾದ.
ಆದಾಗ್ಯೂ, ಸ್ವಾತಂತ್ರ್ಯಾನಂತರದ ವರ್ಷಗಳ ಅನುಭವವು ಭಾರತೀಯರ ಮನದಾಳದಲ್ಲಿ ಜಾತಿ ವ್ಯವಸ್ಥೆಯು ಗಾಢವಾಗಿ ಪ್ರಭಾವ ಬೀರಿರುವುದನ್ನು ದೃಢಪಡಿಸಿದೆ. ವಾಸ್ತವವಾಗಿ ಹಳೆಯ ವ್ಯವಸ್ಥೆಯಲ್ಲಿ ಹೊಸದಾಗಿ ಗೋಚರಿಸುವ ಮಹತ್ವಾಕಾಂಕ್ಷೆಯ ಅಂಶಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಮೊದಲಿನ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಜಾತಿ ವ್ಯವಸ್ಥೆಯ ಕಾರ್ಯವಾಗಿದೆ.
ವಿದ್ಯಾವಂತ ಭಾರತೀಯರಲ್ಲಿ ಜಾತಿಯು ಕೊನೆಯ ಹಂತದಲ್ಲಿದೆ ಮತ್ತು ಮೇಲ್ಜಾತಿಗಳ ವಿದ್ಯಾವಂತ, ನಗರೀಕೃತ ಮತ್ತು ಪಾಶ್ಚಿಮಾತ್ಯೀಕರಿಸಿದ ಜನ ಸಮುದಾಯ ಈಗಾಗಲೇ ಜಾತಿಯಿಂದ ಬಂಧ ಮುಕ್ತವಾಗಿದೆ ಎಂದು ವ್ಯಾಪಕವಾದ ಅನಿಸಿಕೆ ಇದೆ. ಆದರೆ ಈ ಅನಿಸಿಕೆಗಳು ದೋಷಮುಕ್ತವಾಗಿಲ್ಲ, ಭಾರತೀಯ ಸಾಮಾಜಿಕ ವ್ಯವಸ್ಥೆಯು ತನ್ನ ಅಂತರ್ಗತ ಗುಣಲಕ್ಷಣಗಳನ್ನು ಬದಲಾಯಿಸಿಲ್ಲ. ಜನರ ವರ್ತನೆಯಲ್ಲಿ ಕಂಡು ಬರುವ ಕೆಲವು ಸ್ಪಷ್ಟ ಬದಲಾವಣೆಗಳನ್ನು ಗ್ರಹಿಸಿ ಸಮಾಜದಿಂದ ಜಾತಿ ಕಣ್ಮರೆಯಾಗಿದೆ ಎಂದು ಪರಿಗಣಿಸಬಾರದು. ಜನ ಸಮುದಾಯದಲ್ಲಿ ಅಂತರಂಗದಲ್ಲಿರುವ ಜಾತೀಯತೆಯನ್ನು ದುರ್ಬಲಗೊಳಿಸಲು ಸಾಧ್ಯವಾಗಿಲ್ಲ.
ಸಾಮಾಜಿಕ ಸಮಾನತೆಯ ಗುರಿಯನ್ನು ಹೇಗೆ ಸಾಧಿಸಬಹುದು?
ಸಾಮಾಜಿಕ ಸಮಾನತೆಗೆ ಪರಿಣಾಮಕಾರಿ ಅರ್ಥವನ್ನು ಸಾಧಿಸಲು ಮೂರು ತಾರ್ಕಿಕ ಆಧಾರಗಳಿವೆ. ಅವೆಂದರೆ- (1) ಸಮಾನವಾಗಿ ಮುಕ್ತ ವ್ಯವಸ್ಥೆಯ ಅಸ್ತಿತ್ವ (2) ಅವಕಾಶದ ಸಮಾನತೆ ಮತ್ತು (3) ಪರಿಣಾಮಗಳ ಸಮಾನತೆ.
ಸಾಮಾಜಿಕ ಸಮಾನತೆಗೆ ಬೇಕಾಗಿರುವುದು ಪರಿಣಾಮಕಾರಿ ಸಮಾನತೆಯ ನೆಲೆಯನ್ನು ನಿರ್ಮಿಸುವುದು. ಇದಕ್ಕಾಗಿ ಸಮಾಜದಲ್ಲಿ ಸಾಮಾಜಿಕ ಸಮಾನತೆಯನ್ನು ಸ್ಥಾಪಿಸಲು ಬಯಸಿದರೆ ನಾವು ವಿಭಿನ್ನ ತತ್ವವನ್ನು ಹೊಂದಿದ್ದೇವೆ ಎಂದರ್ಥ. ಅಂತಹ ನೀತಿಯು ಮೂರು ಪರಿಗಣನೆಗಳನ್ನು ಒಳಗೊಂಡಿರುತ್ತದೆ- ಮೊದಲಿಗೆ, ಪರಿಣಾಮಕಾರಿ ಸಮಾನತೆಗೆ ಆರಂಭಿಕ ಪ್ರತಿಕೂಲ ಸ್ಥಿತಿಯಲ್ಲಿರುವವರಿಗೆ ಅಸಮಾನ ಉಪಚಾರದ ಅಗತ್ಯವಿರುತ್ತದೆ, ಇದರಿಂದಾಗಿ ಅವು ಸಂಪನ್ಮೂಲಗಳು ಮತ್ತು ಹಕ್ಕುಗಳಲ್ಲಿ ಸಮಾನವಾಗಿರುತ್ತವೆ. ಎರಡನೆಯದಾಗಿ, ಸಾಮಾಜಿಕ ಸಮಾನತೆಯ ತತ್ವವನ್ನು ಕೋಟಾ ಪ್ರಾತಿನಿಧ್ಯದ ತತ್ವದೊಂದಿಗೆ ಸಂಯೋಜನೆ ಮಾಡಬೇಕು ಮತ್ತು ಮೂರನೆಯದಾಗಿ, ಅನುಕೂಲವಿಲ್ಲದವರನ್ನು ಅನಿವಾರ್ಯವಾಗಿ ಗುಂಪುಗಳ ಸ್ಥಾನಮಾನದಲ್ಲಿ ಗುರುತಿಸಲಾಗುತ್ತದೆ. ಇದು ಸಾಮಾಜಿಕ ಸಮಾನತೆಯ ಸಂದರ್ಭದಲ್ಲಿ ಜಾತಿ ಗುಂಪುಗಳಲ್ಲದೆ ಬೇರೇನೂ ಅಲ್ಲ. ಭಾರತೀಯ ಸಮಾಜ ಜಾತಿಯ ಕಟುವಾಸ್ತವಗಳಿಂದ ಆವರಿಸಿಕೊಂಡಿದೆ. ಸಮಾನತೆಯನ್ನು ಕಾರ್ಯಗತಗೊಳಿಸುವ ಪ್ರಮಾಣವು ವ್ಯಕ್ತಿಗತವಾಗಿರಲು ಸಾಧ್ಯವಿಲ್ಲ. ಐತಿಹಾಸಿಕ ಸಾಮಾಜಿಕ ವಿರೂಪ ಮತ್ತು ಅಸ್ತಿತ್ವದಲ್ಲಿರುವ ಸಮಾಜವು ಜಾತಿ ಪಕ್ಷಪಾತದಿಂದ ಕೂಡಿದೆ. ಯಾವುದೇ ವ್ಯತ್ಯಾಸವು ವ್ಯಕ್ತಿಗಳಿಗೆ ಬದಲಾಗಿ ಸಮುದಾಯಗಳಿಗೆ ಅನ್ವಯಿಸುತ್ತದೆ. ಆದ್ದರಿಂದ ಸಾಮಾಜಿಕ ಪರಿಸ್ಥಿತಿಯನ್ನು ಸಮನಾಗಿಸಿದರೂ, ತಾತ್ಕಾಲಿಕ ವ್ಯವಸ್ಥೆಯಲ್ಲಿ ಮೀಸಲಾತಿ ನೀತಿಗೆ ಸಹಾಯಕವಾಗಬಹುದು. ಜಾತಿಯಿಂದ ಕೂಡಿದ ಸಮಾಜದಲ್ಲಿ, ಸಾಮಾಜಿಕ ಸಮಾನತೆಯ ಸಾಧನೆಗೆ ಸಮಾನ ಅವಕಾಶದ ನೀತಿಯನ್ನು ಸಾಮಾಜಿಕ ಮೇಲ್ಮೈಯಲ್ಲಿ ಸಂಭವಿಸುವ ಸಮಾನತೆಯ ಮೇಲೆ ಕೇಂದ್ರೀಕರಿಸಬೇಕು. ಇಲ್ಲದಿದ್ದರೆ ಒಟ್ಟಾರೆ ಅಭಿವೃದ್ಧಿಯ ಮೂಲಕ ರಚಿಸಲಾದ ಹೆಚ್ಚುವರಿ ಅವಕಾಶಗಳ ಲಾಭ ಮೇಲ್ಜಾತಿಗಳಿಗೆ ಮಾತ್ರ ಹೋಗುತ್ತದೆ, ಸಾಮಾಜಿಕ ಬದಲಾವಣೆಯನ್ನು ಇನ್ನೂ ಹೆಚ್ಚು ವಿಷಮಗೊಳಿಸುತ್ತದೆ. ಆದ್ದರಿಂದ ಸಾಮಾಜಿಕ ಸಮಾನತೆಯ ಗುರಿಯು ಸಾಮಾಜಿಕತೆಯ ಆಧಾರದ ಮೇಲೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀತಿಯನ್ನು ಡಿಮ್ಯಾಂಡ್ ಮಾಡುತ್ತದೆ.
ಅಧಿಕಾರದ ಪ್ರಜಾಪ್ರಭುತ್ವೀಕರಣ
ಮೀಸಲಾತಿಯ ಯುಕ್ತತೆಯನ್ನು ಪರಿಶೀಲಿಸುವಾಗ ಭಾರತದಲ್ಲಿ ಅಧಿಕಾರ ಸೃಷ್ಟಿಸುವ ವ್ಯವಸ್ಥೆಯನ್ನು ಸಾಮಾಜಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ರಾಜಕೀಯ ಅಧಿಕಾರದ ಜೊತೆಗೆ ಸರಕಾರದ ಸ್ಥಾನಗಳು ಸಮಾಜದ ಸಮಗ್ರ ಜೀವನವನ್ನು ಪ್ರಭಾವಿಸುತ್ತವೆ. ಆಧುನಿಕ ವಲಯದಲ್ಲಿ ಮತ್ತು ಸರಕಾರದಲ್ಲಿನ ಕನಿಷ್ಠ ಉದ್ಯೋಗಗಳು ಆಧುನಿಕ ಶಿಕ್ಷಣದ ಮೂಲಕ ಸ್ವಾಧೀನ ಪಡಿಸಿಕೊಂಡಿರುವುದರಿಂದ ಇದು ಅಧಿಕಾರ ರೂಪಿಸುವ ವ್ಯವಸ್ಥೆಯಲ್ಲಿ ಸೇರಿಸಬೇಕಾದ ಅತ್ಯಗತ್ಯ ಅಂಶವಾಗಿದೆ. ಆದ್ದರಿಂದ ಶೈಕ್ಷಣಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮಾಜಿಕ ಸಂಯೋಜನೆಯೂ ಅಷ್ಟೇ ಮಹತ್ವದ್ದಾಗಿದೆ. ಭಾರತದಲ್ಲಿ ಸಮಗ್ರ ಅಧಿಕಾರ ಮತ್ತು ಉತ್ಪಾದನಾ ಸ್ಥಿತಿಯು ಮೇಲ್ಜಾತಿಗಳ ಪ್ರಾಬಲ್ಯವನ್ನು ಹೊಂದಿದೆ. ಇದು ಅಕಸ್ಮಾತ್ತಾಗಿ ಸಂಭವಿಸುವ ವಿದ್ಯಮಾನವಲ್ಲ, ಆದರೆ ಅದೊಂದು ಮಾದರಿಯಾಗುಳಿದಿದೆ. ಈ ಏಕಸ್ವಾಮ್ಯವು ಸಾಂವಿಧಾನಿಕವಾಗಿ ಸಮಾನತೆಯ ತತ್ವದ ಸಮಾಜಕ್ಕೆ ಒಂದು ಪ್ರಮುಖ ಅಂಶವಾಗಿದೆ.
ಭಾರತೀಯ ಅಧಿಕಾರಶಾಹಿಯು ದೋಷಾರೋಪಿತ ವ್ಯಕ್ತಿತ್ವವನ್ನು ತೊಡೆದು ಹಾಕಿಕೊಳ್ಳಲಾಗಿಲ್ಲ ಮತ್ತು ಆ ಮೂಲಕ ರಾಜ್ಯದ ತಟಸ್ಥ ಸಂಸ್ಥೆಯಾಗಿ ಕಾರ್ಯನಿರ್ವಹಿಸಲೂ ವಿಫಲವಾಗಿದೆ ಎಂಬುದು ಸಾಮಾನ್ಯ ಅನುಭವವಾಗಿದೆ.
ಮೀಸಲಾತಿ ಕೋಮು ಬೇಡಿಕೆಯಲ್ಲ, ಆದರೆ ಜಾತ್ಯತೀತ ಪ್ರಸ್ತಾಪ
ತಳವರ್ಗದವರ ಮೇಲೆ ದೌರ್ಜನ್ಯ ಸ್ವರೂಪದ ಮೇಲ್ಜಾತಿಯವರ ಪ್ರಭುತ್ವವನ್ನು ತೊಲಗಿಸುವುದು ಜಾತ್ಯತೀತ ಕ್ರಮ. ಮೀಸಲಾತಿ ನೀತಿಯು, ಸಮಾಜದ ವ್ಯವಹಾರಗಳ ಮೇಲೆ ಒಂದು ಸಣ್ಣ ವಲಯದ ಬಲಿಷ್ಠ ಜನರ ಏಕಸ್ವಾಮ್ಯವನ್ನು ನಿರ್ಮೂಲನೆಗೊಳಿಸಲು ಪರಿಣಾಮಕಾರಿ ಸಾಧನವಾಗಿದೆ. ತಳಜಾತಿಗಳು ಪ್ರಾಬಲ್ಯ ಮತ್ತು ಏಕಸ್ವಾಮ್ಯದ ಅಧಿಕಾರ ಮದದ ಮೂಲಕ ನಡೆಸುವ ಕಣ್ಣಿಗೆ ಕಾಣುವ ಅನ್ಯಾಯ ಮತ್ತು ಶೋಷಣೆಯಿಂದ ಬಿಡುಗಡೆ ಹೊಂದಿದರೆ, ಅದು ಜಾತ್ಯತೀತ ತತ್ವಕ್ಕೆ ಸಂದ ಜಯ. ಸಾಮಾಜಿಕ ನ್ಯಾಯವನ್ನಲ್ಲದೆ ಸಾಮರ್ಥ್ಯದ ಹೊಸ ಯುಗವನ್ನೂ ತೆರೆಯುತ್ತದೆ. ಆದ್ದರಿಂದ ಮೀಸಲಾತಿ ನೀತಿಯು ಕೋಮು ಬೇಡಿಕೆಯಲ್ಲ; ಆದರೆ ಅದೊಂದು ಜಾತ್ಯತೀತ ವಿಧಾನವಾಗಿ ಅತ್ಯಗತ್ಯವಾಗಿದೆ.
ಕಳೆದ ಹಲವು ದಶಕಗಳ ನಂತರದ ಮೀಸಲಾತಿಯ ಅನುಷ್ಠಾನದ ಪರಿಣಾಮಗಳು ಸಹ ಜಾತಿಗಳ ವಿಭಜನೆಯನ್ನು ಬಲಪಡಿಸುತ್ತವೆ ಎಂಬ ನಂಬಿಕೆಯನ್ನು ಬೆಂಬಲಿಸುತ್ತದೆ, ಮೇಲ್ಮುಖ ಚಲನೆ ಮೂಲಕ ಸಾಮಾಜಿಕ ಏಕೀಕರಣ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಇದನ್ನು ಯಾವುದೇ ಸಂದೇಹವಿಲ್ಲದೆ ಕ್ರಮೇಣ ರಾಜಕೀಯ ಕಾರ್ಯಸೂಚಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಕೆಲವು ಜಾತಿಗಳನ್ನು ವಿಶೇಷವಾಗಿ ಇತರ ಹಿಂದುಳಿದ ವರ್ಗಗಳಿಗೆ ಸಿಗುವ ಮೀಸಲಾತಿ ಪ್ರಯೋಜನಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ಅವರ ಸೇರ್ಪಡೆಗಾಗಿ ಪ್ರೇರೇಪಿಸುತ್ತದೆ. ಆದರೆ ಮೀಸಲಾತಿಯ ಮೂಲ ಪರಿಕಲ್ಪನೆ, ಅದು ಕೋಮುವಾದ ಎಂದು ಸಾಬೀತು ಪಡಿಸುವುದಿಲ್ಲ. ಜಾತಿವಾದದ ಕೆಡುಕುಗಳು ರಾಜಕೀಯ ಪ್ರಾಬಲ್ಯ, ಪ್ರಾದೇಶಿಕ ಅಭಿವೃದ್ಧಿ ಮತ್ತು ಕೆಲವೊಮ್ಮೆ ಜಾತಿ ಆಧಾರಿತ ಪ್ರದೇಶಗಳಂತಹ ಇತರ ಕ್ಷೇತ್ರಗಳನ್ನೂ ಪ್ರವೇಶಿಸಿವೆ. ಇವೆಲ್ಲವೂ ಭಾರತೀಯ ಸಮಾಜದ ಹೃದಯಾಂತರಂಗದಲ್ಲಿ ಇರುವ ವರ್ಷಾಂತರಗಳ ಹಳೆಯ ಜಾತಿ ಪ್ರಜ್ಞೆಯ ಗುಣ ಲಕ್ಷಣಗಳಾಗಿವೆ. ಇವು ಕೆಲವೊಮ್ಮೆ ಮೀಸಲಾತಿಯನ್ನು ಭಂಗಗೊಳಿಸುತ್ತವೆ. ಅಷ್ಟೇ ಅಲ್ಲ ಮೀಸಲಾತಿಗೆ ಒಳಪಡುವ ಅರ್ಹ ವರ್ಗ ಅಥವಾ ಜಾತಿಗಳಿಗೆ ತುಂಬಲಾರದ ಕೆಡುಕು ಉಂಟು ಮಾಡುತ್ತವೆ.