ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಹಿಂದಿ ಹೇರಿಕೆ ಯತ್ನ
ಬಹುಶಃ ಮನುಷ್ಯರನ್ನು ಇತರ ರೀತಿಯ ಜೀವನದಿಂದ ಪ್ರತ್ಯೇಕಿಸುವ ಪ್ರಮುಖ ಅಂಶವೆಂದರೆ ಭಾಷೆ. ಸಮಾಜಗಳ ಆಂತರಿಕ ಮತ್ತು ಪರಸ್ಪರ ಸಂವಹನಗಳಿಗೆ ಮತ್ತು ವಿಶೇಷವಾಗಿ ಆಡಳಿತಕ್ಕೆ ಭಾಷೆಯು ಕೇಂದ್ರವಾಗಿದೆ. ಭಾಷೆಯು ಮನುಷ್ಯನ ಅಭಿವ್ಯಕ್ತಿಗೆ ಪ್ರಬಲ ಸಾಧನ ಮತ್ತು ಸಮಾಜಗಳನ್ನು ಒಂದುಗೂಡಿಸುವ ಪ್ರಮುಖ ಅಂಶ.
1948ರ ಮಾರ್ಚ್ 21ರಂದು ಹೊಸದಾಗಿ ಸ್ವತಂತ್ರವಾದ ಪಾಕಿಸ್ತಾನವು ಉರ್ದುವನ್ನು ಏಕೈಕ ಒಕ್ಕೂಟ ಭಾಷೆಯಾಗಿ ಘೋಷಿಸಿದಾಗ ಉದ್ವಿಗ್ನತೆ ಮತ್ತು ಭಾವೋದ್ರೇಕದ ವಾತಾವರಣ ತಲೆದೋರಿದ್ದಂತೆ, ಭಾಷೆಯು ಕೆಲವೊಮ್ಮೆ ಧರ್ಮಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಬಹುದು. ಅದು ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷಾ ಚಳವಳಿಗೆ ಕಾರಣವಾಯಿತು. 1952ರ ಫೆಬ್ರವರಿಯಲ್ಲಿ ಆ ಪ್ರತಿಭಟನೆಯನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಯಿತು. ಅಂತಿಮವಾಗಿ, ಭಾಷೆಯೇ ಪಾಕಿಸ್ತಾನವನ್ನು ಒಡೆದು 1971ರಲ್ಲಿ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಬಂಗಾಳಿ ಅದರ ರಾಷ್ಟ್ರೀಯ ಭಾಷೆಯಾಗಿದೆ.
ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳು
ವೈದಿಕ ಗ್ರಂಥಗಳ ಭಾಷೆಯಾದ ಸಂಸ್ಕೃತವು ಭಾರತೀಯ ಉಪಖಂಡದಲ್ಲಿ ವಾಸಿಸುವ ಬಹುಪಾಲು ಹಿಂದೂಗಳಲ್ಲಿ ಧರ್ಮದ ಭಾಷೆಯಾಗಿತ್ತು. ವೇದಕಾಲದಲ್ಲಿ ಗಣಿತ, ಖಗೋಳಶಾಸ್ತ್ರ ಮತ್ತು ಲೋಹಶಾಸ್ತ್ರದಲ್ಲಿನ ಅದ್ಭುತ ಬೆಳವಣಿಗೆಗಳ ವಿವರಗಳೆಲ್ಲವೂ ಕಾವ್ಯ, ಗದ್ಯ ಮತ್ತು ನಾಟಕಗಳಂತೆ ಸಂಸ್ಕೃತದಲ್ಲಿವೆ. ಆದರೆ ಸಂಸ್ಕೃತವು ಕೆಲವರ ಪಾಲಿಗೆ ಮಾತ್ರವೇ ಸೀಮಿತವಾಗಿತ್ತು. ಏಕೆಂದರೆ ಬ್ರಾಹ್ಮಣರು ಅದನ್ನು ಕೆಳವರ್ಗದವರಿಗಲ್ಲ ಎಂದು ನಿರ್ಣಯಿಸಿಬಿಟ್ಟಿದ್ದರು. ಮಹಿಳೆಯರು ಮತ್ತು ಶೂದ್ರರು, ಒಟ್ಟಾರೆಯಾಗಿ ಅರ್ಧಕ್ಕಿಂತಲೂ ಹೆಚ್ಚಿನ ಹಿಂದೂಗಳನ್ನು ಸಂಸ್ಕೃತದಿಂದ ವಂಚಿತರನ್ನಾಗಿಸಲಾಯಿತು.
ಜನರು ಬಳಸುವ ಭಾಷೆಗಳು ಪ್ರಾಚೀನವಾಗಿವೆ. ಅವು ಕಳೆದ ಶತಮಾನಗಳಲ್ಲಿ ವ್ಯಾಪಾರ, ವಾಣಿಜ್ಯದಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಆಡಳಿತಕ್ಕಾಗಿ ಬಳಕೆಯಲ್ಲಿದ್ದವು. ಇಂದಿಗೂ ಬಳಕೆಯಲ್ಲಿರುವ ಪ್ರಾದೇಶಿಕ ಭಾಷೆಗಳಲ್ಲಿನ ಸಾಹಿತ್ಯ ಮತ್ತು ಕಲೆಗಳು ಕೂಡ ಹಾಗೆಯೇ ಉಳಿದುಬಂದಿವೆ.
ಪ್ರಾದೇಶಿಕ ಭಾಷೆಗಳಲ್ಲಿ ಸಾಹಿತ್ಯದ ಬೆಳವಣಿಗೆ ಮತ್ತು ವಿಸ್ತರಣೆಯು ಸಂಸ್ಕೃತದ ಬದಲಿಗೆ ಜನರ ಸ್ವಂತ ಭಾಷೆಗಳಲ್ಲಿ ಸಾಮಾನ್ಯ ಜನರಿಗೆ ಮುಟ್ಟುವಂತೆ ತರುವುದರೊಂದಿಗೆ ಪ್ರಾರಂಭವಾಯಿತು. ಇದು ಸಾಧ್ಯವಾದದ್ದು ಭಕ್ತಿಪಂಥದಿಂದಾಗಿ.
ಭಕ್ತಿಪಂಥ
ಇಂದಿನ ಕೇರಳ ಮತ್ತು ತಮಿಳುನಾಡಿನಲ್ಲಿ ಭಕ್ತಿಪಂಥದ ಇತಿಹಾಸವನ್ನು 7 ಅಥವಾ 8ನೇ ಶತಮಾನದ್ದೆಂದು ಗುರುತಿಸಲಾಗಿದೆ. ಅದು ಇಂದಿನ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೂ ವ್ಯಾಪಿಸಿತು ಮತ್ತು ನಂತರ ಉತ್ತರದ ಕಡೆಗೆ ಹರಡಿತು. ಭಾರತದ ವಿವಿಧೆಡೆಗಳಲ್ಲಿ 15ರಿಂದ 17ನೇ ಶತಮಾನಗಳವರೆಗೂ ಭಕ್ತಿಪಂಥ ಮುಂದುವರಿದಿತ್ತು. ಶೈವಭಕ್ತಿ ಧಾರೆಯು ಹೆಚ್ಚಾಗಿ ದಕ್ಷಿಣದಲ್ಲಿ ಉಳಿದುಕೊಂಡರೆ, ವೈಷ್ಣವ ಧಾರೆಯು ಉತ್ತರದ ಕಡೆಗೆ ಹರಡಿತು.
ಭಕ್ತಿಪಂಥದ ಕವಿ, ಸಂತರು ಮತ್ತು ತತ್ವಜ್ಞಾನಿಗಳು ಸುಧಾರಕರಾಗಿದ್ದರು. ಅವರು ಧರ್ಮದ ಬಗ್ಗೆ ಅವುಗಳ ಅಗತ್ಯದ ಬಗ್ಗೆ ತಿಳಿಸಲು ಮತ್ತು ಶಿಕ್ಷಣ ನೀಡಲು ಜನಸಾಮಾನ್ಯರನ್ನು ತಲುಪಲು ಪ್ರಾದೇಶಿಕ ಭಾಷೆಗಳನ್ನು ಬಳಸಿದರು. ವಿಶಿಷ್ಟವಾಗಿ, ಪ್ರತಿಯೊಬ್ಬ ಸುಧಾರಕನು ದೇವಾಲಯದ ಆರಾಧನೆ ಮತ್ತು ಸಂಸ್ಕೃತ ಆಚರಣೆಯನ್ನು ವಿರೋಧಿಸಿದ್ದರಿಂದಾಗಿ ಬ್ರಾಹ್ಮಣ ಪುರೋಹಿತಶಾಹಿಯ ಮೇಲೆ ಜನರ ಅವಲಂಬನೆ ಕಡಿಮೆಯಾಗುವಂತಾಯಿತು.
ವರ್ತಮಾನದಲ್ಲಿ ಪ್ರಾಯಶಃ ಸಾಮಾಜಿಕ ಸ್ಥಿರತೆಗೆ ಪ್ರಮುಖ ಅಂಶವೆಂದರೆ ಪ್ರಾದೇಶಿಕ ಭಾಷೆಗಳ ಸಾಂಸ್ಕೃತಿಕ ಶಕ್ತಿ.
ರಾಷ್ಟ್ರೀಯ ಭಾಷೆ ಮತ್ತು ಭಾಷಾವಾರು ರಾಜ್ಯಗಳು
1949ರ ಸೆಪ್ಟಂಬರ್ 13ರಂದು ಸಂವಿಧಾನ ಸಭೆ ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಚರ್ಚಿಸಿತು. ಆರ್.ವಿ.ಧುಲೇಕರ್ ಅವರು ಹಿಂದಿ ರಾಷ್ಟ್ರೀಯ ಭಾಷೆಯಾಗಬೇಕೆಂದು ದೀರ್ಘವಾಗಿ ವಾದಿಸಿದರು. ಪಂ. ಲಕ್ಷ್ಮೀಕಾಂತ ಮೈತ್ರಾ ಅವರು ಸಂಸ್ಕೃತವು ರಾಷ್ಟ್ರೀಯ ಭಾಷೆಯಾಗಬೇಕೆಂದು ವಾದಿಸಿದರು ಮತ್ತು ಹಿಂದಿಯನ್ನು ವಿರೋಧಿಸಿದರು. ಅದರ ಸ್ಥಾನವೇನಿದ್ದರೂ ಎಲ್ಲಾ ಪ್ರಾಂತೀಯ ಭಾಷೆಗಳ ನಂತರ ಎಂದು ಹೇಳಿದರು. ವಿಶ್ವದ ಎಲ್ಲಾ ಭಾಷೆಗಳಲ್ಲಿ ಸಂಸ್ಕೃತವು ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ವಂಶಾವಳಿಯನ್ನು ಹೊಂದಿದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು. ವಿಶ್ವದ ಅತ್ಯಂತ ಹಳೆಯ ಮತ್ತು ಶ್ರೀಮಂತ ಭಾಷೆ, ಜಗತ್ತಿನ ಎಲ್ಲಾ ಭಾಷೆಗಳ ತಾಯಿ ಎಂಬುದು ಅವರ ವಾದವಾಗಿತ್ತು. ಫ್ರಾಂಕ್ ಆಂಥೋನಿ ಅವರು ತಮ ಮಾತೃಭಾಷೆ ಇಂಗ್ಲಿಷ್ ಆಗಿದ್ದರೂ, ದೇವನಾಗರಿ ಲಿಪಿಯನ್ನು ಬಳಸಬಲ್ಲವರಾಗಿದ್ದರು ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಹಿಂದಿಯನ್ನು ರೋಮನ್ ಲಿಪಿಯೊಂದಿಗೆ ರಾಷ್ಟ್ರೀಯ ಭಾಷೆಯಾಗಿಸುವ ಬಗ್ಗೆ ಅವರು ಒಲವು ವ್ಯಕ್ತಪಡಿಸಿದ್ದರು. ಸಂಸ್ಕೃತವಲ್ಲದ ಅಥವಾ ಹಿಂದಿಯೇತರ ಮೂಲವನ್ನು ಹೊಂದಿರುವ ಭಾಷೆಗಳ ವಿರುದ್ಧ ಒಂದು ರೀತಿಯ ಸೇಡು ತೀರಿಸಿಕೊಳ್ಳುತ್ತಿರುವಂತೆ ತೋರುತ್ತಿದೆ ಎಂಬ ಮಾತನ್ನೂ ಅವರು ಹೇಳಿದ್ದರು. ಅಷ್ಟರ ಮಟ್ಟಿಗೆ ಅವರು ದೂರದ ಸಾಧ್ಯತೆಯೊಂದನ್ನು ಅಂದೇ ಗ್ರಹಿಸಿದಂತಿತ್ತು.
ಸಂವಿಧಾನ ಸಭೆಯ ಚರ್ಚೆಗಳ ಫಲಿತಾಂಶವಾಗಿ, ಒಕ್ಕೂಟದ ಅಧಿಕೃತ ಭಾಷೆಯು ದೇವನಾಗರಿ ಲಿಪಿಯುಳ್ಳ ಹಿಂದಿ ಎಂದಾಯಿತು. ಸಂವಿಧಾನವು ರಾಷ್ಟ್ರೀಯ ಭಾಷೆಯ ವಿಷಯದಲ್ಲಿ ಮೌನವಾಗಿದೆ. ಆದರೆ ಎಂಟನೇ ಶೆಡ್ಯೂಲ್ ಮೂಲತಃ 14 ಪ್ರಾದೇಶಿಕ ಭಾಷೆಗಳನ್ನು ಪಟ್ಟಿಮಾಡಿದೆ. ಈಗ ಹಿಂದಿ, ನೇಪಾಳಿ ಮತ್ತು ಸಂಸ್ಕೃತ ಸೇರಿದಂತೆ 22 ಭಾಷೆಗಳನ್ನು ಅದು ಒಳಗೊಂಡಿದೆ.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ಅನ್ವಯ ಭಾರತದ ವಿವಿಧ ಪ್ರದೇಶಗಳ ಭಾಷೆಗಳ ಆಧಾರದ ಮೇಲೆ ಅಂತರ್‌ರಾಜ್ಯ ಗಡಿಗಳನ್ನು ಪುನಃ ರಚಿಸಲಾಯಿತು. ರಾಜ್ಯಗಳ ಭಾಷಾವಾರು ಮರುಸಂಘಟನೆಯು ಪ್ರಾದೇಶಿಕ ಭಾಷೆಗಳು ಬೆಳೆಯಲು ಮತ್ತು ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಟ್ಟಿತು.
ಭಾಷಾ ರಾಜಕೀಯ
ಇಂದಿನ ರಾಜಕೀಯದಲ್ಲಿ ಬಹುಸಂಖ್ಯಾತ ರಾಷ್ಟ್ರೀಯತೆಯು ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇದು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಹೊಂದಿರುವ ಹಿಂದೂ ರಾಷ್ಟ್ರವನ್ನು ಹೆಚ್ಚು ಬೆಂಬಲಿಸುತ್ತದೆ.
ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಸೂಚಿಸುವುದು ಭಾರತದ ಸ್ವಾತಂತ್ರ್ಯ ಚಳವಳಿಯೊಂದಿಗೆ ಪ್ರಾರಂಭವಾಯಿತು. ಆದರೆ ವಿಶೇಷವಾಗಿ ಭಾರತದ ದಕ್ಷಿಣದಲ್ಲಿ ಹಿಂದಿಯೇತರ ಜನರಲ್ಲಿ ಆತಂಕವಿತ್ತು. 1937ರಲ್ಲಿ ಕಾಂಗ್ರೆಸ್ ಸರಕಾರವು ಮದ್ರಾಸ್ ಪ್ರೆಸಿಡೆನ್ಸಿಯ ಶಾಲೆಗಳಿಗೆ ಹಿಂದಿ ಕಡ್ಡಾಯವೆಂದು ಆದೇಶಿಸಿದಾಗ, ಆವರೆಗಿನ ಗೊಂದಲವು ಆಂದೋಲನದ ಸ್ವರೂಪ ಪಡೆಯಿತು. ಸರಕಾರ ಆದೇಶವನ್ನು ಹಿಂಪಡೆಯಿತು. ಆಂದೋಲನಗಳು ಕೊನೆಗೊಂಡವು.
1965ರಲ್ಲಿ ಕೇಂದ್ರ ಸರಕಾರದ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಮಾತ್ರ ಉಳಿಸಿಕೊಳ್ಳಲಾಯಿತು. ಹಿಂದಿ ಹೇರಿಕೆಗೆ ಹೆದರಿದ ತಮಿಳರು ಮತ್ತೊಮ್ಮೆ ಮದ್ರಾಸ್ ರಾಜ್ಯದಾದ್ಯಂತ ತೀವ್ರವಾಗಿ ಆಂದೋಲನ ನಡೆಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರಕಾರವು ಅಧಿಕೃತ ಭಾಷೆಗಳ ಕಾಯ್ದೆ, 1967ನ್ನು ಜಾರಿಗೆ ತಂದಿತು. ಅದು ಹೇಳುವಂತೆ, ಸಂವಿಧಾನದ ಪ್ರಾರಂಭದಿಂದ ಹದಿನೈದು ವರ್ಷಗಳ ಅವಧಿಯ ಮುಕ್ತಾಯದ ಹೊರತಾಗಿಯೂ, ಇಂಗ್ಲಿಷ್ ಭಾಷೆಯನ್ನು ಹಿಂದಿಯ ಜೊತೆಗೆ ಬಳಸುವುದನ್ನು ಮುಂದುವರಿಸಬಹುದು.
2010ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಆಲಿಸಿದ ಗುಜರಾತ್ ಹೈಕೋರ್ಟ್ ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ ಎಂದು ತೀರ್ಪು ನೀಡಿತು. ಆದ್ದರಿಂದ, ಹಿಂದಿ ಕೇಂದ್ರ ಸರಕಾರಕ್ಕೆ ಅಧಿಕೃತ ಭಾಷೆಯಾಗಿ ಉಳಿದಿದೆ ಮತ್ತು ಪ್ರಾದೇಶಿಕ ಭಾಷೆಗಳು ರಾಜ್ಯಗಳಿಗೆ ಅಧಿಕೃತ ಭಾಷೆಯಾಗಿ ಉಳಿದಿವೆ.
ನಮ್ಮದು ಅನೇಕ ವೈವಿಧ್ಯಗಳ ಮತ್ತು ವಿಶೇಷವಾಗಿ ಭಾಷೆ ಮತ್ತು ಸಂಸ್ಕೃತಿಗಳ ರಾಷ್ಟ್ರವಾಗಿದೆ. ನಮ್ಮ ರಾಷ್ಟ್ರವು ಈ ವೈವಿಧ್ಯತೆಗಳೊಂದಿಗೆ ಏಕತೆಯನ್ನು ಉಳಿಸಿಕೊಂಡಿದೆ. ಪ್ರಾದೇಶಿಕ ಭಾಷೆಗಳ ಬಗೆಗಿನ ನಿಜವಾದ ಗೌರವವು ನಮ್ಮ ಗಣರಾಜ್ಯದ ಒಕ್ಕೂಟ ಸ್ವರೂಪವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಬಲಪಡಿಸುತ್ತದೆ. ಒಂದು ಭಾಷೆಯನ್ನು ಇನ್ನೊಂದು ಭಾಷಿಕರ ಮೇಲೆ ಹೇರುವುದು ಕೇವಲ ಭಾವೋದ್ರೇಕಗಳನ್ನು ಹುಟ್ಟುಹಾಕುತ್ತದೆ, ಸಾಮಾಜಿಕ ಅಸಮಾಧಾನವನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುತ್ತದೆ.
ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂಬಂತೆ ಹೇರಲು ಪ್ರಯತ್ನಿಸುವುದು ಅತ್ಯಂತ ಅವಿವೇಕದ ಕೆಲಸ. ಅದು ಭಾಷೆಯ ಆಧಾರದ ಮೇಲೆ ಸಮಾಜವನ್ನು ಛಿದ್ರಗೊಳಿಸಬಹುದು ಮತ್ತು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆಯ ಕೊನೆಯಾಗುವುದಕ್ಕೂ ಕಾರಣವಾಗಬಹುದು.
(ಕೃಪೆ:countercurrents.org)