ಪ್ರಬುದ್ಧ ಮತದಾರ ಮತ್ತು ಪ್ರಜಾತಂತ್ರ
ದೇಶದ ಲೋಕಸಭೆಗೆ ಮತ್ತೊಂದು ಮಹಾಚುನಾವಣೆ ನಡೆದು, ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್‌ಡಿಎ) ಸಮ್ಮಿಶ್ರ ಸರಕಾರ ನರೇಂದ್ರ ಮೋದಿ ಸಾರಥ್ಯದಲ್ಲಿ ಅಧಿಕಾರಗ್ರಹಣ ಮಾಡಿದೆ. ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾದರೂ ಅವರ ವರ್ಚಸ್ಸಿಗೆ ತೀವ್ರ ಹೊಡೆತ ಬಿದ್ದಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಭಾಜಪ)ವು ಸ್ವತಂತ್ರವಾಗಿಯೇ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಮತ್ತು ಮೋದಿ ಅವರು 2014-24ರ ಎರಡು ಅವಧಿಯ ಬಳಿಕ ಮೂರನೇ ಬಾರಿ ತಮ್ಮದೇ ಬಹುಮತದಿಂದ ಅಧಿಕಾರಕ್ಕೆ ಬರಲಿರುವರೆಂಬ ದೃಢನಂಬಿಕೆಯು ನುಚ್ಚುನೂರಾಗಿದೆ. ಭಾಜಪ ಕೃಪಾಪೋಷಿತ ಮಾಧ್ಯಮಗಳ ಭವಿಷ್ಯವಾಣಿಗಳು ಹುಸಿಯಾಗಿವೆ.
ಇದರ ನೇರ ಪರಿಣಾಮವಾಗಿ ತೀವ್ರವಾಗಲಿದ್ದ ಸರ್ವಾಧಿಕಾರದ ಓಟದ ಗತಿಗೆ ಸದ್ಯಕ್ಕೆ ಕಡಿವಾಣ ಬಿದ್ದಿದೆ. ಸರ್ವಾಧಿಕಾರದ ಓಟಕ್ಕೆ ಕಡಿವಾಣ ಹಾಕಿದ ಶ್ರೇಯಸ್ಸು ನಮ್ಮ ದೇಶದ ಸಾಮಾನ್ಯ ಮತ್ತು ಅನಾಮಧೇಯ ಮತದಾರನಿಗೆ ಸಲ್ಲಬೇಕು. ಇದು ಭಾರತದ ಪ್ರಜಾತಂತ್ರದ ವೈಶಿಷ್ಟ್ಯ ಎಂದು ನಾವು ಅಭಿಮಾನದಿಂದ ಹೇಳಿಕೊಳ್ಳಬಹುದು.
ಈ ಅಭಿಪ್ರಾಯಕ್ಕೆ ಪೂರಕವಾಗಿ ಹಿಂದಿನ ಕೆಲವು ಚುನಾವಣೆಗಳ ಸಂದರ್ಭಗಳನ್ನು ಮತ್ತು ಫಲಿತಾಂಶಗಳನ್ನು ನಾವು ಪರಿಶೀಲಿಸಬೇಕು.
1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಆರಂಭವಾಗಿ ಸುಮಾರಾಗಿ 25 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಪ್ರತೀ ಲೋಕಸಭಾ ಚುನಾವಣೆಯಲ್ಲಿಯೂ ಬಹುಮತವನ್ನು ಪಡೆದು ಅಧಿಕಾರದಲ್ಲಿ ಮುಂದುವರಿಯಿತು. ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದುಬಂದ ಕಾಂಗ್ರೆಸ್ ಪಕ್ಷ ಮತ್ತು ಅದರ ಅಂದಿನ ನಾಯಕರ ನಡೆನುಡಿಗಳಿಂದಾಗಿ ಪ್ರಜಾಪ್ರಭುತ್ವದಲ್ಲಿ ಅದಕ್ಕಿರುವ ಬದ್ಧತೆಯ ಬಗ್ಗೆ ಮತದಾರರಿಗೆ ಇರುವ ನಂಬಿಕೆ ದೃಢವಾಗಿತ್ತು.
1977ರ ಚುನಾವಣೆ:
1977ರ ಲೋಕಸಭಾ ಚುನಾವಣೆಯು ದೇಶದ ಚರಿತ್ರೆಯಲ್ಲಿ ಒಂದು ನಿರ್ಣಾಯಕ ಕಾಲಘಟ್ಟ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಅಕಾಲನಿಧನದ ಬಳಿಕ 1966ರಲ್ಲಿ ಪ್ರಧಾನಿಯ ಪಟ್ಟಕ್ಕೇರಿದ ಇಂದಿರಾ ಗಾಂಧಿ ತನ್ನ ವಿಭಿನ್ನ ಆರ್ಥಿಕ ಹಾಗೂ ರಾಜಕೀಯ ನಿರ್ಧಾರಗಳಿಂದ ಜನಪ್ರಿಯತೆಯ ಶಿಖರವನ್ನೇ ಏರಿದರು. ಅದರ ಜೊತೆಗೇ ಭಟ್ಟಂಗಿಗಳು ‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ’ ಎಂದು ವ್ಯಕ್ತಿಪೂಜೆಯನ್ನು ಆರಂಭಿಸಿದರು. ಅಧಿಕಾರದ ಶಕ್ತಿ ಮತ್ತು ಸ್ಥಾನದ ಮದ ಎರಡೂ ಸೇರಿ ಇಂದಿರಾ ದಾರಿ ತಪ್ಪಿದರು; 1975ರಲ್ಲಿ ತನ್ನ ಅಧಿಕಾರವನ್ನು ಕಾಪಾಡಲು ತುರ್ತು ಪರಿಸ್ಥಿತಿಯನ್ನು ಘೋಷಿಸಿ, ನಾಗರಿಕ ಹಕ್ಕುಗಳನ್ನು ದಮನಿಸಲು ಆರಂಭಿಸಿದರು.
ಅದಾಗಲೇ ಲೋಕಸಭೆಯ ಅವಧಿ ಮುಗಿದು ಹೊಸ ಚುನಾವಣೆ ನಡೆಯಬೇಕಿತ್ತು. ತಮ್ಮ ವರ್ಚಸ್ಸಿನ ಬಲದಲ್ಲಿ ಮತ್ತೊಂದು ಚುನಾವಣೆಯಲ್ಲಿ ಜಯಿಸಬಲ್ಲೆ ಎಂಬ ದೃಢ ವಿಶ್ವಾಸದಿಂದ ಮಾರ್ಚ್ 1977ರಲ್ಲಿ ಲೋಕಸಭೆಯ ಚುನಾವಣೆಗೆ ಅವಕಾಶ ಮಾಡಿಕೊಟ್ಟರು. ಬಹುತೇಕ ಎಲ್ಲರೂ ಇಂದಿರಾಗಾಂಧಿ ಅಜೇಯರೆಂದೇ ನಂಬಿದ್ದರು. ಆದರೆ ಫಲಿತಾಂಶವು ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು ಮತದಾರರು ಕಾಂಗ್ರೆಸನ್ನು ಸೋಲಿಸಿದ್ದಲ್ಲದೆ ಇಂದಿರಾ ಅವರನ್ನೇ ರಾಯ್‌ಬರೇಲಿಯಲ್ಲಿ ಸೋಲಿಸಿದರು.
ಇಂದಿರಾ ಗಾಂಧಿಯವರು ಜನಸಾಮಾನ್ಯರಿಗೋಸ್ಕರ ಎಷ್ಟೇ ಒಳ್ಳೆಯ ನೀತಿ ನಿರ್ಧಾರಗಳನ್ನು ಜಾರಿಗೊಳಿಸಿದ್ದರೂ, ಪ್ರಜೆಗಳ ಮೂಲಭೂತ ಹಕ್ಕಿನ ಮೇಲೆ ದಾಳಿ ನಡೆಸಿದ್ದು ಸಹ್ಯವಾಗಿರಲಿಲ್ಲ. ಸದ್ದಿಲ್ಲದೆ, ಶಾಂತವಾಗಿ ತಮ್ಮ ಮತದ ಹಕ್ಕನ್ನು ಉಪಯೋಗಿಸಿ ಸರ್ವಾಧಿಕಾರ ಮುನ್ನಡೆಯದಂತೆ ಮತದಾರರು ತಡೆಹೇರಿದ್ದು ಒಂದು ಚಾರಿತ್ರಿಕ ಘಟನೆ, ಅದು ನಮ್ಮ ಮತದಾರರ ಪ್ರಬುದ್ಧತೆಗೆ ಸಾಕ್ಷಿ. ಮುಂದಿನ ಚುನಾವಣೆಗಳಲ್ಲಿ ಅನೇಕ ಬಾರಿ ಇದೇ ಪ್ರಜ್ಞೆಯನ್ನು ದೇಶದ ಮತದಾರರು ತೋರಿಸಿ ಹಳಿತಪ್ಪಲಿದ್ದ ಪ್ರಜಾತಂತ್ರವನ್ನು ರಕ್ಷಿಸಿದ್ದಾರೆಂಬುದು ಗಮನಾರ್ಹ,
1977ರ ಚುನಾವಣೆಯಲ್ಲಿ ಆಡಳಿತ ಸೂತ್ರವಹಿಸಿದ ಜನತಾ ಪಕ್ಷದ ಸರಕಾರ ಆಂತರಿಕ ಕಚ್ಚಾಟದಿಂದಾಗಿ ಹೆಚ್ಚುಸಮಯ ಬಾಳಲಿಲ್ಲ. ಆ ಬಳಿಕ 1980ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಮತದಾರರು ಆಶ್ಚರ್ಯಕರ ರೀತಿಯಲ್ಲಿ ಇಂದಿರಾ ಗಾಂಧಿಯವರನ್ನು ಕ್ಷಮಿಸಿ ಅವರ ಪಕ್ಷವನ್ನು ಮತ್ತೆ ಸಿಂಹಾಸನದಲ್ಲಿ ಕೂರಿಸಿದರು, ಮತದಾರರು ದೇಶಕ್ಕೆ ಸ್ಥಿರಸರಕಾರದ ಅಗತ್ಯವನ್ನು ಮನಗಂಡಿದ್ದರು.
ಅಕ್ಟೋಬರ್ 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಅದಾಗಲೇ ಸಂಸದರಾಗಿದ್ದ ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾದರು. ಎರಡು ತಿಂಗಳಿನಲ್ಲಿ ಮತ್ತೊಂದು ಚುನಾವಣೆ ನಡೆಯಿತು. ಹುತಾತ್ಮರಾದ ಇಂದಿರಾರ ಮಗನೆಂಬ ಅನುಕಂಪದ ಅಲೆಯಲ್ಲಿ ರಾಜೀವ್ ಗಾಂಧಿ ಲೋಕಸಭೆಯ ಚರಿತ್ರೆಯಲ್ಲಿಯೇ ದಾಖಲೆಯ ಬಹುಮತದಿಂದ ಗೆದ್ದರು. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ತಂತ್ರಜ್ಞಾನದ ಯುಗಕ್ಕೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು; ಜನಾನುರಾಗಕ್ಕೆ ಪಾತ್ರರಾದರು. ಇನ್ನೂ ಸಣ್ಣ ಪ್ರಾಯದ ರಾಜೀವರು ರಾಷ್ಟ್ರವನ್ನು ಅನೇಕ ವರ್ಷ ಮುನ್ನಡೆಸಬಹುದೆಂಬ ಭಾವನೆ ಹುಟ್ಟಿತು.
ಹೀಗಿದ್ದೂ ಜನರ ಮೌಲ್ಯಮಾಪನದ ಮಾನದಂಡ ಗೌಪ್ಯವಾಗಿಯೇ ಇತ್ತು! ರಾಜೀವ್ ಗಾಂಧಿಯವರ ಆಡಳಿತಾವಧಿಯ ಪ್ರಶ್ನಾರ್ಹವಾದ ಕೆಲವು ರಾಜಕೀಯ ನಿರ್ಧಾರಗಳು ಮತ್ತು ಬೋಫೋರ್ಸ್ ಯುದ್ಧತೋಪುಗಳ ಖರೀದಿಯಲ್ಲಿ ನಡೆದ ದೊಡ್ಡಮಟ್ಟಿನ ಅವ್ಯವಹಾರ ಅವರ ವರ್ಚಸ್ಸಿಗೆ ಧಕ್ಕೆಯನ್ನು ಉಂಟುಮಾಡಿದವು. 1989ರ ಚುನಾವಣೆಯಲ್ಲಿ ಎಚ್ಚೆತ್ತ ಮತದಾರರು ರಾಜೀವ್‌ಗಾಂಧಿಯನ್ನು ಸೋಲಿಸಿದರು. ಓರ್ವ ಜನಪ್ರಿಯ ಪ್ರಧಾನಿಯನ್ನು ಪ್ರಜ್ಞಾವಂತರಾದ ಮತದಾರರು ಐದೇ ವರ್ಷದಲ್ಲಿ ಭಾವೋದ್ವೇಗರಹಿತರಾಗಿ ಶಿಕ್ಷಿಸಿದರು.
ಸಮ್ಮಿಶ್ರ ಸರಕಾರಗಳು ಮತ್ತು ಪ್ರಜಾತಂತ್ರದ ಭದ್ರತೆ:
ರಾಜೀವ್ ಗಾಂಧಿಯವರ ಸೋಲಿನ ಬಳಿಕ ಕಾಂಗ್ರೆಸ್‌ಗೆ ಪರ್ಯಾಯವಾಗಿ ಯಾವುದೇ ಪಕ್ಷವೂ ಇಲ್ಲದ ಹಿನ್ನೆಲೆಯಲ್ಲಿ 1989ರಿಂದ 2014ರ ಕಾಲಘಟ್ಟದಲ್ಲಿ ನಡೆದ ಬೇರೆ ಬೇರೆ ಚುನಾವಣೆಗಳಲ್ಲಿ ಸಮ್ಮಿಶ್ರ ಸರಕಾರಗಳು ಅಧಿಕಾರಕ್ಕೆ ಬಂದವು. ಒಂದು ಸರಕಾರದ ಸಾಧನೆಗಳು ಅತೃಪ್ತಿಕರವಾದಾಗ ಶಾಂತರೀತಿಯಲ್ಲಿ ಅದನ್ನು ಪದಚ್ಯುತಗೊಳಿಸಿ ಇನ್ನೊಂದು ಸರಕಾರವು ಆಡಳಿತದ ಸೂತ್ರವನ್ನು ಹಿಡಿಯುವಂತೆ ಮಾಡಿದ ಮತದಾರರು ದೇಶದ ಪ್ರಜಾತಂತ್ರವನ್ನು ಭದ್ರಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಭಾರತದ ನಂತರ ಸ್ವಾತಂತ್ರ್ಯ ಪಡೆದ ಎಷ್ಟೋ ದೇಶಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ಕುಸಿದು ಸರ್ವಾಧಿಕಾರಿ ನಾಯಕರು ಮುಂಚೂಣಿಗೆ ಬಂದರೆ ನಮ್ಮಲ್ಲಿ ಪ್ರಜಾತಂತ್ರ ನಿರಾತಂಕವಾಗಿ ಬೆಳೆಯಿತು.
ಅಸ್ಥಿರತೆ ಮತ್ತು ಪ್ರಜಾತಂತ್ರದ ಮೌಲ್ಯಗಳಿಗೆ ಏಟು ಬೀಳುವ ಸಂದರ್ಭಗಳಲ್ಲಿ ಮತದಾರರು ನಿರ್ಣಾಯಕ ಪಾತ್ರವಹಿಸಿರುವುದು ಭಾರತದ ಅನನ್ಯ ಸಾಧನೆ. 1977-80, 1989-91 ಮತ್ತು 1996-99ರ ಕಾಲಾವಧಿಯ ಅಸ್ಥಿರತೆಯ ಬಳಿಕ ನಡೆದ ಚುನಾವಣೆಗಳು ಭದ್ರ ಸರಕಾರಕ್ಕೆ ಅವಕಾಶ ಮಾಡಿದರೆ, 1977 ಮತ್ತು 2024ರ ಚುನಾವಣೆಗಳು ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಯ ಪರವಾಗಿದ್ದವು. ಇವೂ ಅಲ್ಲದೆ ಸತ್ತೆಯ ನೀತಿಗಳು ದೇಶದ ಒಳಿತಿಗೆ ಪೂರಕವಲ್ಲ ಎಂಬ ಭಾವನೆ ಬಲವಾದಾಗ ಎಷ್ಟೇ ಧನಾತ್ಮಕ ಸಾಧನೆಗಳಿದ್ದರೂ ಆ ಸರಕಾರವನ್ನು ಇಳಿಸಿದ ಕೀರ್ತಿಯನ್ನು ನಮ್ಮ ಮತದಾರರಿಗೆ ಕೊಡಬೇಕು. ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಸರಕಾರಗಳು ತಮ್ಮ ಅಸಾಮಾನ್ಯ ಸಾಧನೆಗಳ ಹೊರತಾಗಿಯೂ ಚುನಾವಣೆಗಳಲ್ಲಿ ಸೋಲು ಕಂಡುದುದು ಇದಕ್ಕೆ ನಿದರ್ಶನಗಳು.
ಮನಮೋಹನ್ ಸಿಂಗರು ತಮ್ಮ ಹತ್ತು ವರ್ಷದ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಮತ್ತು ಜನಪರ ಯೋಜನೆಗಳಿಗೆ ಮಹತ್ವವಾದ ಕೊಡುಗೆಯನ್ನು ನೀಡಿದರೂ, ಅವರ ಎರಡನೆಯ ಅವಧಿಯ ಆಡಳಿತದಲ್ಲಿನ ತೀವ್ರವಾದ ಲೋಪಗಳು, ಭ್ರಷ್ಟಾಚಾರದ ಕಳಂಕಗಳು ಅವರ ಸರಕಾರದ ಪತನಕ್ಕೆ ಕಾರಣವಾದವು. ಮತದಾರರು 2014ರ ಚುನಾವಣೆಯಲ್ಲಿ ಹೊಸ ಆಶ್ವಾಸನೆಗಳನ್ನು ಮತ್ತು ನರೇಂದ್ರ ಮೋದಿಯವರ ನಾಯಕತ್ವವನ್ನು ಮುಂದಿಟ್ಟು ಬಂದ ಬಿಜೆಪಿಯ ಸಾರಥ್ಯಕ್ಕೆ ಒಲವು ನೀಡಿದರು. ಮಾತ್ರವಲ್ಲ, 2014-19ರ ತನ್ನ ಸಾಧನೆಯ ಆಧಾರದಲ್ಲಿ ನರೇಂದ್ರ ಮೋದಿಯವರು 2019ರಲ್ಲಿ ಇನ್ನೂ ಹೆಚ್ಚಿನ ಬಹುಮತದಿಂದ ಮರು ಆಯ್ಕೆಯಾದರು. ಮೊದಲಿನ ಅವಧಿಯಲ್ಲಿ ನೋಟುರದ್ದತಿ ಮತ್ತು ಅಸಮರ್ಪಕವಾಗಿ ಕಾರ್ಯರೂಪಕ್ಕೆ ತಂದ ಸರಕು ಮತ್ತು ಸೇವಾ ತೆರಿಗೆಯ ಹೊಡೆತ ಹಾಗೂ ಚುನಾವಣೆಯ ಮೊದಲಿನ ಆಶ್ವಾಸನೆಗಳು ಹುಸಿಯಾಗಿದ್ದರೂ ಮತದಾರರು ಇನ್ನೂ ಆಶಾವಾದಿಗಳಾಗಿದ್ದರು.
ಪ್ರಜಾತಂತ್ರದ ರಕ್ಷಣೆಗಾಗಿ ಮತ:
ಆದರೆ ಮುಂದಿನ ಐದು ವರ್ಷದ ಅವಧಿಯ ಮೋದಿಯ ಆಳ್ವಿಕೆ ಸಾಮಾನ್ಯ ಮತದಾರನ ದೃಷ್ಟಿಯಿಂದ ಅಸಹನೀಯವಾಗಿದ್ದಿರಬೇಕು. 2020ರ ಕೋವಿಡ್ ಸಂದರ್ಭದಲ್ಲಿ ಹೇರಿದ ಲಾಕ್‌ಡೌನ್‌ನಿಂದಾದ ತೀವ್ರ ಸಂಕಷ್ಟಗಳು, ಹುಸಿಯಾದ ಉದ್ಯೋಗ ಸೃಷ್ಟಿಯ ಭರವಸೆಗಳು, ಪರಿಹಾರ ಕಾಣದ ಬೆಲೆ ಏರಿಕೆ, ಕಣ್ಣಿಗೆ ರಾಚುವ ಸಂಪತ್ತಿನ ಅಸಮಾನತೆಗಳು ಒಂದೆಡೆ ಕಾಡುತ್ತಿದ್ದರೆ, ಇನ್ನೊಂದೆಡೆ ಸಹಿಷ್ಣುತೆ ಮತ್ತು ಸಹನಶೀಲತೆಗೆ ಹೆಸರಾದ ಸಮಾಜವನ್ನು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಒಡೆಯುವ ಪ್ರಕ್ರಿಯೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆ, ಪ್ರಜಾತಂತ್ರದ ಮೂಲಧರ್ಮಕ್ಕೆ ವಿರುದ್ಧವಾದ ಅಧಿಕಾರಿಶಾಹಿ ಮನೋಭಾವ ಮತ್ತು 75 ವರ್ಷಗಳ ತನಕ ದೇಶದ ಪ್ರಗತಿಗೆ ಆಧಾರಸ್ತಂಭವಾಗಿದ್ದ ಸಂವಿಧಾನವನ್ನು ಬದಲಿಸುವ ಹುನ್ನಾರ-ಮುಂತಾದ ಬೆಳವಣಿಗೆಗಳು ಜನಸಾಮಾನ್ಯರ ಪ್ರಜ್ಞೆಯನ್ನು ಉತ್ತೇಜಿಸಿರಬೇಕು. ಇವುಗಳೂ ಅಲ್ಲದೆ, ಸಂವಿಧಾನವೇ ಸೃಷ್ಟಿಸಿ, ಜನಹಿತ ರಕ್ಷಣೆಗೆ ಬದ್ಧರಾಗಿರಬೇಕಾದ್ದ ರಾಜ್ಯಪಾಲರು, ನ್ಯಾಯಾಂಗ, ಚುನಾವಣಾ ಆಯೋಗ, ಮಹಾಲೇಖಪಾಲ (ಸಿಎಜಿ) ಮುಂತಾದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಅಧಿಕಾರಶಾಹಿಯ ಅಡಿಯಾಳಾಗಿಸಲು ನಡೆದ ಪ್ರಯತ್ನಗಳನ್ನು ಜನರು ಗಮನಿಸದಿರಲು ಸಾಧ್ಯವಿರಲಿಲ್ಲ ಇವುಗಳೆಲ್ಲದರ ಒಟ್ಟು ಪರಿಣಾಮ ಜೂನ್ 4ನೇ ತಾರೀಕಿಗೆ ಹೊರಬಂತು. 1977ರಲ್ಲಿ ಆಶ್ಚರ್ಯಕರ ರೀತಿಯಲ್ಲಿ ಅಧಿಕಾರಿಶಾಹಿಯನ್ನು ತಿರಸ್ಕರಿಸಿದ್ದ ಮತದಾರರು ಮತ್ತೊಮ್ಮೆ 2024ರಲ್ಲಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಗೆ ಬಹುಮತ ನೀಡದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆಡಳಿತಪಕ್ಷ ಮತ್ತು ಪ್ರಧಾನಿಯವರ ನೀತಿ ಮತ್ತು ಧೋರಣೆಗಳು ಪ್ರಜಾಹಿತವನ್ನು ಕಾಪಾಡುವಲ್ಲಿ ವಿಫಲವಾಗಿವೆ ಎಂಬ ಸ್ಪಷ್ಟ ಸಂದೇಶವನ್ನು ಮತದಾರರು ನಿರ್ಭಯವಾಗಿ ನೀಡಿದರು.
ಇತರ ಪಕ್ಷಗಳ ಬೆಂಬಲದಿಂದ ನರೇಂದ್ರ ಮೋದಿಯವರು ಹೊಸ ಸರಕಾರವನ್ನೇನೋ ರಚಿಸಿದರು. ಆದರೆ ಚುನಾವಣೆಯಲ್ಲಿ ಮತದಾರರು ನೀಡಿದ ಸಂದೇಶದ ಹಿನ್ನೆಲೆಯಲ್ಲಿ ತಮ್ಮ 2014-24ರ ನೀತಿಗಳನ್ನು ಪುನರ್ವಿಮರ್ಶಿಸಿ ಜನರ ಆಶೋತ್ತರಗಳಿಗೆ ಸಂವಿಧಾನದ ಚೌಕಟ್ಟಿನೊಳಗೆ ಸ್ಪಂದಿಸುವ ಸಂವೇದನಾಶೀಲತೆ ಯನ್ನು ಹೊಸ ಸರಕಾರ ತೋರಿಸಬೇಕಾಗಿದೆ. ತಮ್ಮ ವರ್ಚಸ್ಸಿಗೆ ದೇಶದ ಪ್ರಬುದ್ಧ ಮತದಾರರು ನೀಡಿರುವ ಹೊಡೆತವನ್ನು ವಿನೀತರಾಗಿ ಸ್ವೀಕರಿಸಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ತಮ್ಮ ಘೋಷಣೆಯನ್ನು ವಸ್ತುನಿಷ್ಠವಾಗಿ ಕಾರ್ಯರೂಪಕ್ಕಿಳಿಸುವ ಪ್ರಬುದ್ಧತೆಯನ್ನು ನರೇಂದ್ರ ಮೋದಿಯವರು ತೋರಿಸಿಯಾರೇ? ಕಾಲವೇ ಇದಕ್ಕೆ ಉತ್ತರ ನೀಡಬೇಕು. ಆ ಪ್ರಬುದ್ಧತೆಯನ್ನು ತೋರಿಸದಿದ್ದರೆ, ಭಾರತದ ಮತದಾರರು ಪುನಃ ತಮ್ಮ ವಿವೇಚನಾ ಶಕ್ತಿಯನ್ನು ಬಳಸಲು ಹಿಂಜರಿಯಲಾರರು ಎಂಬುದು ಈ ಚುನಾವಣೆಯ ಪ್ರಮುಖ ಪಾಠ.
ನಮ್ಮ ರಾಜಕೀಯ ಮುಂದಾಳುಗಳಿಗಿಂತ ಹೆಚ್ಚಿನ ಪ್ರಬುದ್ಧತೆ ಜನಸಾಮಾನ್ಯರಿಗಿದೆ ಎಂಬುದನ್ನು ದೇಶದ ಮತದಾರರು ಮತ್ತೊಮ್ಮೆ ತೋರಿಸಿದ್ದು ದೇಶಕ್ಕೆ ಬಹುದೊಡ್ಡ ಗೌರವ. ರಾಜಕಾರಣಿಗಳು ದೇಶದ ಸಂಸ್ಕೃತಿಯ ಆಧಾರಸ್ತಂಭಗಳಾದ ಸಮಾನತೆ, ವ್ಯಕ್ತಿಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸರ್ವಧರ್ಮ ಸಮಭಾವಗಳನ್ನು ಕತ್ತರಿಸುವ ದಿಶೆಯಲ್ಲಿ ಮುನ್ನುಗ್ಗಿದರೆ ಸಂವಿಧಾನದ ಚೌಕಟ್ಟಿನಲ್ಲಿಯೇ ಅವರ ಅಹಂಕಾರವನ್ನು ಮೆಟ್ಟಿಹಾಕುವ ಈ ಗುಣವು ವಿಶ್ವದ ಪ್ರಜಾಸತ್ತೆಗಳಿಗೆ ಒಂದು ಮಾದರಿ ಎಂದರೆ ತಪ್ಪಾಗಲಾರದು.