ಕನ್ನಡಕ್ಕೊಂದು ಪರಿಸರ ಆತ್ಮಕಥೆ ‘ಏರುಘಟ್ಟದ ನಡಿಗೆ’

ಬುದ್ಧ ಜ್ಞಾನೋದಯವಾದ ಮೇಲೆ ಭೂಮಿ ಕಡೆಗೆ ಬೆರಳು ತೋರಿಸಿ ತನಗೆ ಇಂಥ ಅನುಭವವಾಗಲು ಈ ಭೂಮಿತಾಯಿ ತನ್ನೊಳಗೆ ಮೂಡಿಸಿದ ಬೆಳಕೇ ಹೊರತು ಬೇರೆ ಯಾವುದೇ ಮಾಯೆಯಲ್ಲ ಎನ್ನುತ್ತಾನೆ. ಬುದ್ಧನಿಗೆ ಜ್ಞಾನೋದಯವಾದ ಅದೇ ಭೂಮಿಯಲ್ಲಿಶತಶತಮಾನಗಳಿಂದ ನಾವೆಲ್ಲ ಬದುಕುತ್ತಿದ್ದೇವೆ. ಜ್ಞಾನೋದಯ ಬೇಡ, ಕನಿಷ್ಠ ಭೂಮಿ ಉಳಿಸುವ ಪ್ರಬುದ್ಧತೆಯಾದರೂ ನಮಗೆ ಬೇಕಲ್ಲವೇ?
ಬುದ್ಧನನ್ನು ಜಗತ್ತಿಗೆ ಹಿಗ್ಗಿಸಿ ಈವರೆಗೆ ನಡೆಸಿಕೊಂಡು ಬಂದ ಈ ನೆಲಪಾಯದ ಮಣ್ಣು ಪರಿಸರ, ನದಿ, ಕಡಲು, ಕಾಡು, ಗಾಳಿ ಜಲಚರ, ಬಾನಾಡಿ, ಕಾಡಾಡಿ, ಕೀಟ, ಪತಂಗಗಳ ಬಗ್ಗೆ ಸೃಜನಶೀಲ, ಸೃಜನೇತರ ದಾರಿಯಲ್ಲಿ ಬರೆದ ನೂರಾರು ಲೇಖಕರು ಇದ್ದಾರೆ. ಭಾಗಶಃ ಅವರೆಲ್ಲರೂ ಮನುಷ್ಯ ಮತ್ತು ಪರಿಸರದ ನಡುವೆ ಭವಿಷ್ಯದಲ್ಲಿ ಆಗಬಹುದಾದ ಅಪಾಯವನ್ನು ಊಹಿಸಿದರು. ಅದು ಕಾವ್ಯ ಇರಬಹುದು, ಕಥೆ, ಕಾದಂಬರಿ, ನಾಟಕ, ಪ್ರಬಂಧ ಯಾವುದೇ ಇರಲಿ, ಜಾಗತಿಕ ಚಿಂತನೆಯ ಇತ್ತೀಚಿನ ಎಚ್ಚರ ಪರಿಸರ ಎಂಬುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಭೂಮಿ ಮೇಲಿನ ದುರಾಸೆಗೆ ಮುಗಿಬಿದ್ದ ಮನಸ್ಸನ್ನು ಬದಲಾಯಿಸಿ, ಎಚ್ಚರಿಸುವ ಕೆಲಸವನ್ನು ಪರಿಸರವಾದಿಗಳು, ಸಾಹಿತಿಗಳು ಮಾಡುತ್ತಲೇ ಬಂದಿದ್ದಾರೆ. ಪರಿಣಾಮವೋ ಪ್ರಾಯಶ್ಚಿತ್ತವೋ ಈಗ ನಿಧಾನವಾಗಿ ಪರಿಸರ ನಮ್ಮ ಪಠ್ಯವಾಗಿ ಮಕ್ಕಳ ಕಲಿಕೆಯ ಭಾಗವಾಗಿ ಸೇರುತ್ತಿದೆ ಎಂಬುವುದು ನೆಮ್ಮದಿಯ ಸಂಗತಿ.
ನಮ್ಮ ದೇಶದ ಪರಿಸರ ಶಿಕ್ಷಣದ ಬಹಳ ದೊಡ್ಡ ಸಮಸ್ಯೆ ಅವುಗಳನ್ನು ನಾವು ಹೊರಗಡೆ ನಿಂತು ಅಭ್ಯಸಿಸುವುದು. ನೀರು ಹಾಳಾಗಿದೆ, ಮಣ್ಣು ಮಲಿನಗೊಂಡಿದೆ, ಅನ್ನ ವಿಷವಾಗಿದೆ ಎಂಬ ಶಿಕ್ಷಣವನ್ನು ಕೊಠಡಿ ಒಳಗಡೆ ಕುಳಿತು ಎಲ್ಲಿಯವರೆಗೆ ಕಲಿಯುತ್ತೇವೆಯೋ ಅಲ್ಲಿಯವರೆಗೆ ನಾವು ಪ್ರಕೃತಿಯ ಭಾಗ ಆಗುವುದಿಲ್ಲ. ಕುವೆಂಪು, ಕಾರಂತ, ಬಿ.ಜಿ.ಎಲ್. ಸ್ವಾಮಿ, ತೇಜಸ್ವಿ ಮುಂತಾದ ಲೇಖಕರು ನಮಗೆ ಮುಖ್ಯವಾಗುವುದು ಪರಿಸರದ ಒಳಗಡೆಯೇ ನಿಂತು ಬರೆದ ಕಾರಣಗಳಿಗಾಗಿ.
ಒಳಗಡೆ ನಿಂತು ಪರಿಸರವನ್ನು ಅನುಭವಿಸಿ ಬರೆಯುವುದು ಬೇರೆ, ಪರಿಸರದ ಒಳಗಡೆಗಮನಿಸಿ ಬರೆಯುವುದು ಬೇರೆ. ಇದೀಗ ಕನ್ನಡದಲ್ಲಿ ಅಂಥ ಒಂದು ಪರಿಸರ ಕೃತಿ ಬೆಳಕಿಗೆ ಬರುತ್ತಿದೆ. ಅದು ಪ್ರಪಂಚದ ಶ್ರೇಷ್ಠ ಪರಿಸರವಾದಿ ಬರಹಗಾರ ಮಾಧವ ಗಾಡ್ಗೀಳ್ ಅವರ ಪರಿಸರ ಆತ್ಮಕಥೆ ‘ಏರುಘಟ್ಟದ ನಡಿಗೆ’.
ಮೊದಲು ಈ ಕೃತಿ ಪ್ರಕಟವಾದದ್ದು ಮಾಧವ ಗಾಡ್ಗೀಳ್ ಅವರ ತಾಯಿ ಭಾಷೆ ಮರಾಠಿಯಲ್ಲಿ. ಆನಂತರ ಅದು ಇಂಗ್ಲಿಷ್, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡಿದೆ. ಇದೀಗ ಕನ್ನಡಕ್ಕೆ ಅನುವಾದ ಮಾಡಿದವರು ಹೆಸರಾಂತ ಹಿರಿಯ ಪತ್ರಕರ್ತ, ಪರಿಸರವಾದಿ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಮತ್ತು ಅವರ ಸಹೋದರಿ ಶಾರದಾ ಗೋಪಾಲ್. ಮರಾಠಿ ಗಾಡ್ಗೀಳ್ ಅವರ ಹುಟ್ಟು ನೆಲವಾದರೂ ಅವರು ಹೆಚ್ಚು ಓಡಾಡಿದ್ದು ಕನ್ನಡದ ಪರಿಸರದಲ್ಲಿ. ಅದರಲ್ಲೂ ನಾಗೇಶ್ ಹೆಗಡೆ ಹುಟ್ಟಿದ ಉತ್ತರ ಕನ್ನಡದ ಮಣ್ಣಿನಲ್ಲಿ. ಈ ಋಣ ಸಂದಾಯವೋ ಏನೋ ಅನುವಾದ ಮೂಲ ಕನ್ನಡದ್ದೇ ಎನ್ನುವಂತೆ ಮೂಡಿ ಬಂದಿದೆ.
ಈ ಭೂಮಿ ಮೇಲೆ ಯಾರು ಸಹಜವಾಗಿ ಬದುಕಿ ಪ್ರಕೃತಿಯನ್ನು ಹೆಚ್ಚು ಅನುಭವಿಸುತ್ತಾರೋ ಅವರಿಗೆ ಅದು ವಿಸ್ಮಯದ ದಾರಿಯಾಗಿ ಕಾಣುವುದೇ ಇಲ್ಲ. ಈ ದೇಶದ ಕಾಡುಮೂಲ ಬುಡಕಟ್ಟು ಆದಿವಾಸಿ ನೆಲವಾಸಿ ಕೃಷಿಕರ ಎಷ್ಟೋ ಪರಿಸರ ಚಿಂತನೆಗಳು ಇವತ್ತಿಗೂ ಅಜ್ಞಾತವಾಗಿ ಉಳಿದಿರುವುದೇ ಈ ಕಾರಣಗಳಿಗಾಗಿ. ಅವರಿಗೆಲ್ಲ ಪರಿಸರ ಒಂದು ಸಹಜ ಬದುಕೇ ಹೊರತು ತೋರ್ಪಡಿಕೆಯ ಅಭಿವ್ಯಕ್ತಿಯಲ್ಲ. ತಾವು ನಿಂತ ನೆಲದ ನಿಗೂಢ ನಡೆ, ಭಾಷೆ, ಸಾವಯವ ಸಂಬಂಧ, ಜೀವಜಗತ್ತಿನೊಂದಿನ ಒಡನಾಟ, ನೆಲದರಿವು ಇವೆಲ್ಲವನ್ನು ಅವರು ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ್ದು ಕೇವಲ ಜೀವದಾರಿಯ ಸಹಜ ಬಗೆಯಾಗಿಯೇ ಹೊರತು ಅಭಿವ್ಯಕ್ತಿಯ ರೂಪಕಗಳಾಗಿ ಅಲ್ಲ.
ಗಾಡ್ಗೀಳ್ ಅವರ ಮಾನಸಿಕ ಪಠ್ಯದೊಳಗಡೆ ಈ ದೇಶದ ಪಶ್ಚಿಮ ಘಟ್ಟದ ನಿಗೂಢ ನಕ್ಷೆ ಸ್ಥಿರವಾಗಿದೆ. ಯಾವ್ಯಾವ ಮೂಲೆಗಳಲ್ಲಿ ಯಾವ್ಯಾವ ನದಿ, ಹೊಳೆ, ಜಲಪಾತಗಳ ಸರಹದ್ದಿನಲ್ಲಿ ಯಾವ್ಯಾವ ಮರ, ಗಿಡಮೂಲಿಕೆಗಳಿವೆ, ಖನಿಜಗಳಿವೆ ಎಂಬ ಲೆಕ್ಕ ಅವರಲ್ಲಿದೆ. ಆ ನೆಲಜ್ಞಾನವನ್ನು ಗುಟ್ಟಾಗಿ ಖರೀದಿಸಲು ಮುಂದೆ ಬಂದ ವಿದೇಶಿ ಔಷಧಿ ಕಂಪೆನಿಗಳ ಕುತಂತ್ರಿಗಳ ವ್ಯೆಹವು ಈ ಜೀವನ ಚರಿತ್ರೆಯಲ್ಲಿದೆ. ಆದರೆ ಗಾಡ್ಗೀಳ್ ಇಂತಹ ಯಾವುದೇ ಆಮಿಷಕ್ಕೆ ಎಂದೂ ಒಳಗಾದವರಲ್ಲ. ಅವರು ಹೇಳುತ್ತಾರೆ. ‘‘ರಹಸ್ಯ ಒಪ್ಪಂದಕ್ಕೆ ನಾನು ಬಲಿಯಾಗಬಹುದಿತ್ತು. ಆದರೆ ಕೇವಲ ಗೊತ್ತಿದೆ ಎನ್ನುವ ಕಾರಣಕ್ಕಾಗಿ ಆ ವನ ಸೊತ್ತುಗಳ ವಾರಸುದಾರ ನಾನಲ್ಲ. ಈ ದೇಶದ ವನ ಸಂಪತ್ತು ಸಂಶೋಧಕನದ್ದೂ ಅಲ್ಲ, ಅವುಗಳನ್ನು ಕಂಡುಹಿಡಿದು ದಾಖಲಾತಿ ಮಾಡಿದ ಅಧ್ಯಯನಿಗಳದ್ದೂ ಅಲ್ಲ, ಅದು ಆಯಾಯ ಪ್ರದೇಶದ ಬುಡಕಟ್ಟು ಜನಾಂಗದ್ದು. ಅದು ಆ ಪ್ರದೇಶದ ಖಾಸಗಿ ಜ್ಞಾನ. ಈ ಕಾರಣಕ್ಕಾಗಿ ಆ ಜ್ಞಾನದ ಅಧಿಕಾರ ಪ್ರಭುತ್ವದಲ್ಲಾಗಲೀ, ತಜ್ಞರಲ್ಲಾಗಲೀ, ಇಲಾಖೆಯವರಲ್ಲಾಗಲೀ ಇರದೆ ಆಯಾಯ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಮಹಾನಗರ ಪಾಲಿಕೆಗಳ ಕೈಯಲ್ಲಿ ಇರಬೇಕು. ಭಾರತದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಾಮಾಜಿಕ ಅರಣ್ಯದ ಪರಿಕಲ್ಪನೆ, ಸಮುದಾಯದತ್ತ ಪಾಲುಗಾರಿಕೆಯಿದು. ಪರಿಸರದ ಅಭಿವೃದ್ಧಿ ಎಂದರೆ ಸಮತೆಯ ಸಮಾಜದತ್ತ ಚಲಿಸುತ್ತಾ ಆ ಸಮಾಜವು ಪರಿಸರಕ್ಕೆ ಒಳ್ಳೆಯದಾಗುವ ಚಟುವಟಿಕೆಯನ್ನು ಅಪೇಕ್ಷಿಸುವುದು’’ ಎನ್ನುತ್ತಾರೆ ಮಾಧವ ಗಾಡ್ಗೀಳ್. ಸಹಭಾಗಿತ್ವ ಮಾತ್ರವಲ್ಲ, ನೆಲ ಕಾಡುಜ್ಞಾನದ ಬೊಮ್ಮ, ಮಾರ, ಹೀರಾಕಣಿ, ಗುಂಡಪ್ಪ ಮೇಷ್ಟ್ರು, ಕುಂಜಿರ ಮೂಲ್ಯ ಮೊದಲಾದ ಸಾಮಾನ್ಯ ಜನಪದರ ಉಲ್ಲೇಖವೂ ಇಲ್ಲಿದೆ.
ಮಾಧವ ಗಾಡ್ಗೀಳ್ ಅವರ ಆತ್ಮಕಥೆ ‘ಏರುಘಟ್ಟದ ನಡಿಗೆ’ಯಲ್ಲಿ ಬೇರೆ ಆತ್ಮಕಥೆಗಳ ಹಾಗೆ ಬರೀ ಮನುಷ್ಯ ಸಂಬಂಧಗಳ ಜೀವನವಾರು ವಿವರಗಳಿಲ್ಲ. ಮನುಷ್ಯ ಮತ್ತು ಪ್ರಕೃತಿ ಸಂಬಂಧದ ಕಾಳಜಿಯಿದೆ. ಇಲ್ಲಿ ಲೇಖಕರು ಕ್ಯಾಲೆಂಡರ್ ಭೂಪಟ ಗಡಿಯಾರ ದಾಟಿ ಬರಿಮಣ್ಣಿನ ಮೇಲೆ ನಡೆದಿದ್ದಾರೆ. ಆ ಕಾರಣಕ್ಕಾಗಿ ಯಾವತ್ತೂ ಈ ಪುಸ್ತಕ ಮನುಷ್ಯ ವಿಭಜಿಸಿಕೊಂಡ ಕೇವಲ ಮನುಷ್ಯ ಮಾತ್ರ ಬದುಕುವ ತುಂಡು ತುಂಡು ಭೂಮಿಯ ಕಥೆಯಲ್ಲ, ಸಕಲ ಜೀವರಾಶಿಯು ಅಖಂಡ ವಿಶ್ವದ ಅಪಾಯದ ಭವಿಷ್ಯವನ್ನು ಊಹಿಸಿ ಎಚ್ಚರಿಸುವ ವಿಶ್ವ ಪರಿಸರದ ಕಥೆ.
ಈ ಸಾಧ್ಯತೆಗಾಗಿ ಈ ಕೃತಿ ಕನ್ನಡದಲ್ಲಿ ಇದ್ದರೂ ಇದು ಬರೀ ಕರ್ನಾಟಕದ ಆತ್ಮಚರಿತ್ರೆಯಲ್ಲ, ಮೂಲ ಮರಾಠಿಯಲ್ಲಿದ್ದರೂ ಮಹಾರಾಷ್ಟ್ರದ ಆತ್ಮಕಥೆ ಅಲ್ಲ. ಹಿಂದಿ, ಇಂಗ್ಲಿಷ್‌ನಲ್ಲಿ ಇದ್ದರೂ ಇದು ಬರೀ ಭಾರತದ ಆತ್ಮಕಥೆ ಅಲ್ಲ, ಇದು ಜಗತ್ತಿನ ಜೀವ ಪರಿಸರದ ಆತ್ಮಕಥೆ. ಜಗತ್ತಿನ ಪರಿಸರಕ್ಕೆ ಭವಿಷ್ಯದಲ್ಲಿ ಒದಗಬಹುದಾದ ಅಪಾಯದ ಎಚ್ಚರದ ಅರಿವಿನ ಆತ್ಮಕಥೆ. ನಮ್ಮ ಮಕ್ಕಳ ಭವಿಷ್ಯದ ಆತ್ಮಕಥೆ.
ತಾನು ಅನುಭವಿಸುವ ಅವಲಂಬಿಸಿರುವ ಪರಿಸರ ದ್ರವ್ಯಗಳನ್ನು ನಾಶ ಮಾಡುವಲ್ಲಿ ಮನುಷ್ಯನಂಥ ಅಪಾಯಕಾರಿ ಜೀವಿ ಈ ಭೂಮಿಯ ಮೇಲಿಲ್ಲ ಎಂದು ಎಚ್ಚರಿಸುತ್ತಲೇ ಕಳೆದ ಒಂದು ಶತಮಾನದಲ್ಲಿ ಭೂಮಿಯ ಮೇಲೆ ಮನುಷ್ಯ ನಡೆದುಹೋದ ಕ್ರೂರ ಹೆಜ್ಜೆಗಳನ್ನು ದಾಖಲಿಸುತ್ತದೆ. ಕಾಲ ಮಿಂಚಿಲ್ಲ, ಮನುಷ್ಯ ಪ್ರಯತ್ನಿಸಿದರೆ ಪ್ರಕೃತಿ ಉಳಿಸುವ ಅನುಸಂಧಾನ ಸಾಧ್ಯವಿದೆ ಎನ್ನುತ್ತಲೇ ನಿಸರ್ಗ ಉಳಿಕೆಯ ಅನೇಕ ದಾರಿಗಳನ್ನು ಕೃತಿಕಾರರು ತೋರಿಸುತ್ತಾರೆ. ದ್ರವ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸುವ, ವಿಜ್ಞಾನವನ್ನು ತಂತ್ರಜ್ಞಾನವನ್ನಾಗಿಸುವ ಅಧ್ಯಯನ ಮಾದರಿಗಳನ್ನೇ ನಮ್ಮ ವಿಶ್ವವಿದ್ಯಾನಿಲಯಗಳ ತಜ್ಞರು ಇಂದು ನಮ್ಮ ಮುಂದೆ ರಾಶಿ ಸುರಿಯುತ್ತಿರುವ ಕಾಲದಲ್ಲಿ ಇಲ್ಲಿಯ ಹೊಸ ಮಾದರಿಗಳು, ಬೇರೆ ಬೇರೆ ಪರಿಸರ ಸಮಿತಿಗಳಲ್ಲಿ ಸಂಚಾಲಕರಾಗಿ ಸದಸ್ಯರಾಗಿ ಗಾಡ್ಗೀಳ್ ಬರೆದಿಟ್ಟ ಸೂಚನೆಗಳು ಆಪದ್ಬಾಂಧವ ಅರಿವಾಗಿ ಗೋಚರಿಸುತ್ತದೆ.
ಪರಿಸರ ಜ್ಞಾನದ ಆಸಕ್ತಿ ಕಳಕಳಿಯಷ್ಟೇ ಅಲ್ಲ ಅದನ್ನು ತಂತ್ರಜ್ಞಾನವನ್ನಾಗಿ ಪರಿವರ್ತಿಸುವ ಮನುಷ್ಯ ಬದುಕಿಗೆ ಸಮ್ಮಿಳಿತ ಗೊಳಿಸುವ ಅಧ್ಯಯನ ಮಾದರಿ ಗಾಡ್ಗೀಳ್ ಅವರದ್ದು. ಈ ಕೃತಿ ಕೀಟನಾಶಕಗಳ ಬಗ್ಗೆ ಮಾತನಾಡುತ್ತದೆ, ವನ್ಯಜೀವಿ ಕಾಯ್ದೆಯ ಬಗ್ಗೆ ಮಾತನಾಡುತ್ತದೆ, ಬೇಟೆ ಮಾಂಸದ ಪೌಷ್ಟಿಕಾಂಶದ ಬಗ್ಗೆಯೂ ಮಾತನಾಡುತ್ತದೆ. ಅವರ ಪತ್ನಿ ಸುಲೋಚನಾ ಅವರ ಬೌದ್ಧಿಕ ಹಿರಿಮೆಯ ಬಗ್ಗೆ ಹೆಮ್ಮೆ ಪಡುತ್ತದೆ. ಸೈಲೆಂಟ್ ಸ್ಪ್ರಿಂಗ್ (ಮೌನ ವಸಂತ)ದ ಎಚ್ಚರದ ಬಗ್ಗೆ ಮಾತನಾಡುತ್ತದೆ. ಬಿದಿರಕ್ಕಿಯ ದೋಸೆಯ ಬಗ್ಗೆಯೂ ಮಾತನಾಡುತ್ತದೆ.
ಭಾರತವಷ್ಟೇ ಅಲ್ಲ ಜಗತ್ತಿನ ಬೇರೆ ದೇಶಗಳು ಸೇರಿ ಗಾಡ್ಗೀಳ್ ಪರಿಸರಪರ ಪ್ರಭುತ್ವದ ಸಮಿತಿಗಳಲ್ಲಿ ಸದಸ್ಯರಾಗಿ, ಸಂಚಾಲಕರಾಗಿ ಕಾಲ ಕಾಲಕ್ಕೆ ಸಲಹೆ ನೀಡಿದವರು. ದಾರಿ ತಪ್ಪಿದ ಪ್ರಭುಗಳ, ಅಧಿಕಾರಿಗಳ ಕಿವಿ ಹಿಂಡಿದವರು. ಕಾಡೊಳಗಡೆ ಅಲೆದಾಡುತ್ತ ನಿಜಜನರ ಅನುಭವಗಳನ್ನು ಬಗೆಯುತ್ತಾ, ದಾಖಲಿಸುತ್ತಾ ಪರಿಸರ ಶಕ್ತಿ ಗುಟ್ಟುಗಳನ್ನು ನಿರಂತರ ಮಾಧ್ಯಮಗಳಲ್ಲಿ ಅಂಕಣವಾಗಿ ಬರೆದವರು. ಆರು ರಾಜ್ಯಗಳಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಕಿಲೋ ಮೀಟರ್ ಹಬ್ಬಿದ ಜಗತ್ತಿನಲ್ಲಿ ಉತ್ಕೃಷ್ಟ ನಿಸರ್ಗ ವೈವಿಧ್ಯವಿರುವ ಪಶ್ಚಿಮ ಘಟ್ಟದ ಉದ್ದ ಅಗಲವನ್ನು ಮೆಟ್ಟಿದವರು. ಆತ್ಮಕಥೆಯಲ್ಲಿ ತನ್ನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಗಾಡ್ಗೀಳ್ ಉಲ್ಲೇಖಿಸಿದ ಸಂಶೋಧಕರು, ಲೇಖಕರು, ವಿಜ್ಞಾನಿಗಳು ಪ್ರಾಧ್ಯಾಪಕರು ಇವರೆಲ್ಲ ಸಾಮಾನ್ಯರಲ್ಲ. ಜಗತ್ತಿನ ಶ್ರೇಷ್ಠ ಮೇಧಾವಿಗಳು. ಇಂಥವರ ಸಂಶೋಧನೆಗಳ ಫಲವನ್ನು ಯಾವತ್ತೂ ಒಂದು ಮಿತಿಯಲ್ಲಿ ನೋಡಲಾಗುವುದಿಲ್ಲ. ಆ ಲಾಭವನ್ನು ಇಡೀ ಜಗತ್ತೇ ಅನುಭವಿಸಿದೆ. ವಿಜ್ಞಾನ ವಿಕಾಸವಾದ ಪರಿಸರವಾದದ ಉತ್ಕೃಷ್ಟ ಮಾದರಿಗಳು ಇಲ್ಲಿವೆ. ಇಂಥವರ ನಡುವೆ ನಮ್ಮ ಮಾಧವ ಗಾಡ್ಗೀಳ್ ಇದ್ದರು ಅನ್ನುವುದೇ ನಮ್ಮ ಭಾಗ್ಯ.
ಮೊದಲೇ ಹೇಳಿದಂತೆ ಜಗತ್ತಿನ ಶ್ರೇಷ್ಠ ಶೈಕ್ಷಣಿಕ ಸಂಶೋಧನಾ ಕೇಂದ್ರ ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಪ್ರಪಂಚದ ವೈವಿಧ್ಯಮಯ ಸಸ್ಯ ಸಮೃದ್ಧಿ ಇರುವ ಪಶ್ಚಿಮ ಘಟ್ಟ ಮಾಧವ ಗಾಡ್ಗೀಳ್ ಅವರ ಎರಡು ಶಕ್ತಿ ಕೇಂದ್ರಗಳು. ಆಯ್ಕೆಯ ಬದುಕು ಮತ್ತು ಅನುಭವದ ಬದುಕು ಎರಡು ದಾರಿಯಲ್ಲೂ ಗೆಲ್ಲುವುದಕ್ಕೆ ಈ ಎರಡು ಧ್ರುವಗಳು ಅವರಿಗೆ ನೆರವಾದವು. ಭಾರತವೂ ಸೇರಿ ಜಗತ್ತಿನ ಅನೇಕ ದೇಶಗಳ ಪರಿಸರ, ವಿಜ್ಞಾನ, ತಂತ್ರಜ್ಞಾನ ಸಂಬಂಧಿಸಿದ ಸಮಿತಿಗಳಲ್ಲೂ ಅವರು ಪಾಲುಗಾರರಾಗುತ್ತಾರೆ. ಅಂತರ್‌ರಾಷ್ಟ್ರೀಯ ಮಟ್ಟದ ಅನೇಕ ಸಂಘ ಸಂಸ್ಥೆಗಳಲ್ಲಿ ಅಧಿಕಾರಸ್ಥರಾಗುತ್ತಾರೆ. ಹಾಗೆಯೇ ಅವರ ಆಯ್ಕೆಯ ಸ್ವಚ್ಛಂದ ಅನುಭವದ ಬದುಕು ಕೂಡ ಸಮೃದ್ಧವಾದುದೇ. ಬೇಕಾದಾಗ ಬೇಕಾದಂತೆ ಕಾಡು ನುಗ್ಗಿ ಬೊಮ್ಮ, ಮಾರ, ಕುಂಜಿರ ಮೂಲ್ಯ ಮೊದಲಾದವರ ಜೊತೆಗೆ ಬರಿಗಾಲಲ್ಲಿ ನಡೆದು, ಸೈಕಲ್ ತುಳಿದು ಬೆಟ್ಟ ಹತ್ತಿ ಕಣಿವೆ ಇಳಿದು ಬೆಸ್ತರ ಜೊತೆಗೆ, ರೈತರ ಜೊತೆಗೆ, ಆದಿವಾಸಿಗಳ ಜೊತೆಗೆ ಬೆರೆಯುವ ಸುಖ ಇದೆಯಲ್ಲ ಈ ನೆಲೆಯಲ್ಲೂ ಗಾಡ್ಗೀಳ್ ಗಾಢವಾದ ಅನುಭವವನ್ನು ಪಡೆದವರೇ. ಹೀಗೆ ಗಾಡ್ಗೀಳ್ ಅವರದ್ದು ಒಂದು ರೀತಿ ಶಿಷ್ಟ ಮತ್ತು ಜನಪದ ಬದುಕು. ಸತೀಶ್ ಧವನ್, ಸಲೀಂ ಅಲಿ, ಇರಾವತಿ ಕರ್ವೆ ಮುಂತಾದ ಸಾಧಕರ, ಮೇಧಾವಿಗಳ ಒಡನಾಟ ಅವರದ್ದು.
ಮನುಷ್ಯನ ಸುಸ್ಥಿರ ಬದುಕಿಗೆ ಏನೆಲ್ಲ ಬೇಕೋ ಅವೆಲ್ಲವನ್ನು ಕೊಡುವ ಈ ಘಟ್ಟ ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆ ಅಲ್ಲಿಯವರೆಗೆ ಜೀವ ಸಂಕುಲವು ಸೇರಿ ಮನುಷ್ಯ ನೆಮ್ಮದಿಯಲ್ಲಿರುತ್ತಾನೆ ಎಂದು ಕಂತು ಕಂತುಗಳಲ್ಲಿ ಬರೆದವರು. ಮಾಧವ ಗಾಡ್ಗೀಳ್ ಕೇವಲ ಸಂಶೋಧಕರಷ್ಟೇ ಅಲ್ಲ ಅವರದ್ದು ಕವಿಯ ಭಾಷೆ. ಸ್ವಂತ ಕವಿಯೂ ಹೌದು, ಮರಾಠಿ ಕವಿ ಕೇಶವಸುತ ಇವರ ಮೇಲೆ ದಟ್ಟ ಪ್ರಭಾವವನ್ನು ಬೀರಿದ್ದಾರೆ. ಹಾಗಂತ ಪ್ರಕೃತಿ ಪ್ರಿಯರಾಗಿ ಇವರೆಂದೂ ನಮ್ಮ ಪಶ್ಚಿಮ ಘಟ್ಟದ ನದಿ, ಕಡಲು, ಸೂರ್ಯೋದಯ, ಸೂರ್ಯಾಸ್ತವನ್ನು ಪಂಪ, ಕುಮಾರವ್ಯಾಸ ಬೇಂದ್ರೆಯವರಂತೆ ಕೇವಲ ಭಾವುಕರಾಗಿ ನೋಡಿದವರಲ್ಲ.
ಅನುವಾದದಲ್ಲಿ ಭಾಷೆ ಭಾವನೆಯ ಅನುವಾದ ಒಂದು ಬಗೆಯಾದರೆ ವಿಚಾರದ ಅನುವಾದ ಮತ್ತೊಂದು ಬಗೆ. ಒಬ್ಬ ಅನುವಾದಕನಿಗೆ ಅತ್ಯುತ್ತಮ ಭಾಷೆ ಮತ್ತು ಅತ್ಯುತ್ತಮ ವಿಚಾರಾನುಭವ ಎರಡೂ ಒದಗಿದಾಗ ಇಂಥದೊಂದು ಪುಸ್ತಕ ಕನ್ನಡಕ್ಕೆ ಸಿಗಲು ಸಾಧ್ಯ. ನಾಗೇಶ್ ಹೆಗಡೆ ಈ ಕೃತಿಯುದ್ದಕ್ಕೂ ಈ ಮೇಲಿನ ಕಾರಣಗಳಿಗೆ ಮೂಲದೊಂದಿಗೆ ಸಮಾನಾಂತರವಾಗಿ ಕಾಣಿಸಿಕೊಂಡಿದ್ದಾರೆ. ‘ಏರುಘಟ್ಟದ ನಡಿಗೆ’ ಈ ಕೃತಿಯನ್ನು ಪ್ರಕಟಿಸುತ್ತಿರುವವರು ಮಂಗಳೂರಿನ ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್. ಸದಭಿರುಚಿ ಮತ್ತು ಪುಸ್ತಕಗಳ ಸುಂದರ ಮುದ್ರಣಕ್ಕೆ ಈಗಾಗಲೇ ಹೆಸರಾದ ಕರಾವಳಿಯ ಆಕೃತಿ ಆಶಯ ಪ್ರಕಾಶನ ಮತ್ತು ಮುದ್ರಣ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸು ವುದರ ಮೂಲಕ ಮಹತ್ವದ ಹೆಜ್ಜೆಯನ್ನು ದಾಖಲಿಸಿದೆ.