ಮಂಡ್ಯದಲ್ಲಿ ಸೌತೆ ಬೆಳೆದು ಯಶಸ್ವಿಯಾದ ಆಂಧ್ರದ ರೈತ
ಮಂಡ್ಯ: ನೆರೆರಾಜ್ಯ ಆಂಧ್ರಪ್ರದೇಶದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಮಂಡ್ಯದಲ್ಲಿ ಜಮೀನು ಗುತ್ತಿಗೆ ಪಡೆದು ಇಂಗ್ಲಿಷ್ ತಳಿ ಸೌತೆಕಾಯಿ ಬೆಳೆದು ಆರ್ಥಿಕ ಅಭಿವೃದ್ಧಿ ಕಂಡಿದ್ದಾರೆ. ಮೈಸೂರಿನಲ್ಲಿ ನೆಲೆಸಿರುವ ಹೈದರಾಬಾದ್ ಮೂಲದ ರಾಜಕುಮಾರ್ ಚವ್ಹಾಣ್, ಮೈಸೂರು ಸಮೀಪದ ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರ ಬಳಿ ಕಾವೇರಿನದಿ ದಂಡೆಯಲ್ಲಿ ಎರಡು ಎಕರೆ ಜಮೀನು ಗುತ್ತಿಗೆ ಪಡೆದು ಹನಿ ನೀರಾವರಿ ಅಳವಡಿಸಿಕೊಂಡು ಬೆಳೆದಿರುವ ಇಂಗ್ಲಿಷ್ ಸೌತೆ ಕಟಾವು ಆಗುತ್ತಿದೆ.
ನಾಲ್ಕು ದಿನಗಳಿಗೆ ಒಮ್ಮೆ ಕಟಾವು ಮಾಡುತ್ತಿದ್ದು, ಈಗಾಗಲೇ ಆರು ಬಾರಿ ಕೊಯ್ಲು ಮಾಡಿದ್ದಾರೆ. ಸೌತೆಕಾಯಿಯನ್ನು ಮೈಸೂರಿನ ದೇವರಾಜ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಕಿಲೋ ಸೌತೆಗೆ 225 ರೂ. ಬೆಲೆ ಸಿಗುತ್ತಿದೆ ಎಂದು ರಾಜಕುಮಾರ್ ಚವ್ಹಾಣ್ ಹೇಳುತ್ತಾರೆ.
ಸುಮಾರು 100ರಿಂದ 120 ಗ್ರಾಂ ತೂಕ ಇರುವ ಸಣ್ಣದಾದ ಇಂಗ್ಲಿಷ್ ತಳಿಯ ಸೌತೆಕಾಯಿ ತುಂಬಾ ರುಚಿಯಾಗಿದೆ. ಜತೆಗೆ, ಔಷಧಿ ಗುಣ ಹೊಂದಿದೆ. ಹಾಗಾಗಿ ಈ ಸೌತೆಕಾಯಿಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಈ ತಳಿಯ ಸೌತೆಕಾಯಿಯನ್ನು ಇತ್ತೀಚೆಗೆ ಜಿಲ್ಲೆಯ ಹಲವು ರೈತರು ಈ ಬೆಳೆಯ ಕಡೆಗೆ ಒಲವು ತೋರುತ್ತಿರುವುದು ಕಂಡುಬಂದಿದೆ.
ಪರದ ಪದ್ಧತಿಯಲ್ಲಿ ಸೌತೆ ಬೆಳೆದಿರುವುದರಿಂದ ಕೀಟಗಳ ಹಾವಳಿ ತೀರಾ ಕಡಿಮೆ. ಬಿಸಿ ಗಾಳಿ ಮತ್ತು ರಭಸದ ಮಳೆಯಿಂದ ಬೆಳೆಗೆ ರಕ್ಷಣೆ ಸಿಗುತ್ತದೆ. ತೇವಾಂಶ ಬೇಗ ನಶಿಸುವುದಿಲ್ಲ. ಪಾಲಿಹೌಸ್ (ಗ್ರೀನ್ ಹೌಸ್) ಪದ್ಧತಿಗಿಂತ ನೆಟ್‌ಹೌಸ್(ಪರದೆ ಮನೆ) ಪದ್ಧತಿಯಲ್ಲಿ ಖರ್ಚೂ ಕಡಿಮೆ. ಪಾಲಿಹೌಸ್‌ಗೆ ವಾಡುವ ಖರ್ಚಿನ ಅರ್ಧ ಹಣದಲ್ಲಿ ನೆಟ್‌ಹೌಸ್ ಸಿದ್ಧಮಾಡಬಹುದು. ಪಾಲಿಹೌಸ್ ಒಳಗೆ ಹೆಚ್ಚು ಶಾಖವಿದ್ದು, ಅದು ಯೂರೋಪಿನ ಹವಾಗುಣಕ್ಕೆ ಸೂಕ್ತ. ಆದರೆ, ಇಲ್ಲಿನ ವಾತಾವರಣಕ್ಕೆ ಅದು ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಪರದೆ ಪದ್ಧತಿಯಲ್ಲಿ ಒಂದು ಬಾರಿ ಬಲೆ ಅಳವಡಿಸಿದರೆ 5 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎನ್ನುವುದು ತಳಿ ವಿಜ್ಞಾನಿ ಡಾ.ಕೆ.ಕೆ.ಸುಬ್ರಮಣಿ ಮಾಹಿತಿ ನೀಡಿದರು.
ತಳಿ ವಿಜ್ಞಾನಿ ಡಾ.ಸುಬ್ರಮಣಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಕನ್ನಾ ಗುರುಕುಲ ನಡೆಸುತ್ತಿದ್ದಾರೆ. ಈ ಗುರುಕುಲದಲ್ಲಿ ವೇದಾಂತ ಕಲಿಯಲು ರಾಜಕುಮಾರ್ ಚವ್ಹಾಣ್ ಹೈದರಾಬಾದ್‌ನಿಂದ ಕುಟುಂಬ ಸಮೇತ ಬಂದಿದ್ದು, ಮೈಸೂರಿನಲ್ಲಿ ವಾಸ್ತವ್ಯವಿದ್ದಾರೆ. ಸುಬ್ರಮಣಿ ಅವರ ಸಲಹೆಯಂತೆ ಸೌತೆಕಾಯಿ ಬೇಸಾಯ ಮಾಡುತ್ತಿದ್ದಾರೆ.
ಮೊದಲನೇ ಕೊಯ್ಲಿನಲ್ಲಿ 200 ಕೆಜಿ ಸೌತೆ ಸಿಕ್ಕಿತ್ತು. 6ನೇ ಕೊಯ್ಲಿಗೆ 800 ಕೆಜಿ ಸಿಕ್ಕಿದೆ. ಈ ತಳಿಯ ಗಿಡ ಫಲಕ್ಕೆ ಬಂದ ನಂತರ ಮೂರು ತಿಂಗಳವರೆಗೂ ಬಾಳಿಕೆ ಬರುತ್ತದೆ. ಎರಡು ಎಕರೆಯಲ್ಲಿ ಸೌತೆ ಬೆಳೆಯಲು 12 ಲಕ್ಷ ರೂ.ವರೆಗೆ ಖರ್ಚಾಗಿದೆ. ಸದ್ಯ ಇರುವ ಬೆಲೆ ಸಿಕ್ಕಿದರೆ, ಖರ್ಚು ಕಳೆದು 5ರಿಂದ 28 ಲಕ್ಷ ರೂ.ವರೆಗೂ ಲಾಭ ಸಿಗುವ ನಿರೀಕ್ಷೇ ಇದೆ.
-ರಾಜಕುಮಾರ್ ಚವ್ಹಾಣ್, ಪ್ರಗತಿಪರ ಕೃಷಿಕ