ಪದವಿ ಶಿಕ್ಷಣದ ಪ್ರಾಂಶುಪಾಲರ ನೇಮಕಾತಿ ನೀತಿಯುಕ್ತವಲ್ಲ
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರಾಂಶುಪಾಲರನ್ನು ನೇರ ನೇಮಕಾತಿ ಮಾಡುವ ಪದ್ಧತಿಯ ಪರಿಣಾಮ ಈಗ ಹೊರಗಿನವರಿಗೂ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿದ್ದು, ಅವರೂ ಪ್ರಾಂಶುಪಾಲರಾಗುವ ಅವಕಾಶ ಸಿಗುತ್ತಿರುವುದರಿಂದ ಇಲಾಖೆಯಲ್ಲಿ ಜೀವಮಾನವಿಡೀ ದುಡಿದವರಿಗೆ ಅನ್ಯಾಯವಾಗುತ್ತಿದೆ. ಎಲ್ಲೂ, ಯಾವ ಇಲಾಖೆಯಲ್ಲೂ ಇಲ್ಲದ ಪದ್ಧತಿಯನ್ನು ಇಲ್ಲಿ ಸರಕಾರಿ ಕಾಲೇಜುಗಳಿಗೆ ಯಾಕೆ ಅನ್ವಯಿಸಲಾಗುತ್ತಿದೆ? ಹಾಗಾಗಿ ಸರಕಾರ ಈ ನೇರ ನೇಮಕಾತಿ ನೀತಿಯನ್ನೇ ರದ್ದು ಮಾಡಿ, ಹಿರಿತನದ ಆಧಾರದ ಮೇಲೆ ಭಡ್ತಿ ನೀಡಿ ಶೀಘ್ರ ಪದವಿ ಪ್ರಾಂಶುಪಾಲರ ನೇಮಕಾತಿ ಮಾಡಲಿ ಎಂದು ಉನ್ನತ ಶಿಕ್ಷಣ ಚಿಂತನಾ ವೇದಿಕೆ, ಬೆಂಗಳೂರು ಆಗ್ರಹಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ವಿಶೇಷ ನಿಯಮಗಳನ್ನು ರಚಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರಾಂಶುಪಾಲರನ್ನು ನೇರ ನೇಮಕಾತಿ ಮಾಡಲಾಗುತ್ತಿದೆ. ಹೀಗೆ ಮಾಡುವಾಗ ಹೊರಗಿನವರಿಗೂ ಪರೀಕ್ಷೆ ಬರೆದು ಪಾಸಾಗಿ ಪ್ರಾಂಶುಪಾಲರಾಗಲು ಅವಕಾಶ ನೀಡಲಾಗಿದೆ. ಒಟ್ಟು 310 ಕಾಲೇಜುಗಳಿಗೆ ಮಾತ್ರ ಪ್ರಾಂಶುಪಾಲರ ಹುದ್ದೆಗಳನ್ನು ತುಂಬಲು ಸರಕಾರದಿಂದ ಅನುಮತಿ ಪಡೆಯಲಾಗಿದ್ದು; ಕೆಇಎ ಮೂಲಕ ಈಗಾಗಲೇ 954 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಪರೀಕ್ಷೆ ಮುಗಿದಿದ್ದು ಸದ್ಯ ಪ್ರಕಟವಾಗಿರುವ ರಿಸಲ್ಟ್ ಲಿಸ್ಟಲ್ಲಿ 332 ಮಂದಿ ಹೊರಗಿನವರೇ ಇದ್ದಾರೆ. ಹೊರಗಿನಿಂದ ಯಾರನ್ನೊ ತಂದು ಸರಕಾರಿ ಕಾಲೇಜಿನ ಪ್ರಾಂಶುಪಾಲರನ್ನಾಗಿ ಮಾಡುವುದು ಜೀವಮಾನವಿಡೀ ಇಲಾಖೆಯಲ್ಲಿ ದುಡಿದವರನ್ನು ಅವಮಾನಿಸಿದಂತೆಯೇ ಸರಿ.
ಹಾಲಿ ನೇರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದಲ್ಲಿ ಸದ್ಯಕ್ಕೆ ಕರ್ನಾಟಕದಲ್ಲಿ ಇರುವ ಒಟ್ಟು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 265 ಹುದ್ದೆಗಳನ್ನು ಮಾತ್ರವೇ ತುಂಬಲು ಸಾಧ್ಯ. ಮಿಕ್ಕ 165 ಕಾಲೇಜುಗಳಲ್ಲಿ ಇನ್ಚಾರ್ಜ್ ಪ್ರಾಂಶುಪಾಲರೇ ಇರಬೇಕಾಗುತ್ತದೆ. ಹೀಗಾದಲ್ಲಿ ಕೆಲವು ಹುದ್ದೆಗಳಿಗೆ ಇಲಾಖೆಯ ಒಳಗಿನವರೂ ಕೆಲವು ಹುದ್ದೆಗಳಿಗೆ ಹೊರಗಿನವರೂ 5 ವರ್ಷಗಳ ಅವಧಿಗೆ ಖಾಯಂ ಪ್ರಾಂಶುಪಾಲರಾಗುತ್ತಾರೆ. ಇನ್ನೂ ಹಲವು ಹುದ್ದೆಗಳಿಗೆ ಆಯಾ ಕಾಲೇಜಿನ ಹಿರಿಯ ಅಧ್ಯಾಪಕರು ಇನ್ಚಾರ್ಜ್ ಪ್ರಾಂಶುಪಾಲರಾಗುತ್ತಾರೆ. ಇದರಿಂದ ಶಿಕ್ಷಣಾಡಳಿತದಲ್ಲಿ ಪ್ರಾಂಶುಪಾಲರ ಮೂರು ಸ್ತರಗಳು ಸೃಷ್ಟಿಯಾಗಿ ಇಡೀ ಶಿಕ್ಷಣಾಡಳಿತ ವ್ಯವಸ್ಥೆಯು ಅಸಮಾನತೆಯಿಂದ ಸೊರಗಲಿದೆ.
ಹೀಗೆ ಹೊರಗಿನವರಿಗೆ ಆಡಳಿತಕ್ಕೆ ಲ್ಯಾಟರಲ್ ಎಂಟ್ರಿ ಕೊಡುವ ಪದ್ಧತಿ ಕರ್ನಾಟಕದಲ್ಲಿ ಬೇರಾವ ಇಲಾಖೆಗಳಲ್ಲೂ ಇಲ್ಲ. ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಪ್ಯಾರಾ ಮೆಡಿಕಲ್ ಶಿಕ್ಷಣ, ಪಶುವೈದ್ಯಕೀಯ ಶಿಕ್ಷಣ, ಕೃಷಿ ಶಿಕ್ಷಣ, ಬಿ.ಎಡ್. ಶಿಕ್ಷಣ, ಕಾನೂನು ಶಿಕ್ಷಣ, ವಿಶ್ವವಿದ್ಯಾಲಯ ಶಿಕ್ಷಣ ಈ ಎಲ್ಲೂ ಇಲ್ಲದ ಪದ್ಧತಿಯನ್ನು ಸರಕಾರಿ ಕಾಲೇಜುಗಳಿಗೆ ಯಾಕೆ ಅನ್ವಯಿಸಲಾಗುತ್ತಿದೆ? ಇದರಿಂದ ಏನು ಸಾಧಿಸಿದಂತೆ ಆಗುತ್ತದೆ? ಬೇರೆಲ್ಲ ಕಡೆಯವರು ಸರಕಾರಿ ವ್ಯವಸ್ಥೆಯಲ್ಲಿ ಬಂದು ಪ್ರಾಂಶುಪಾಲರಾಗಲು ಅವಕಾಶ ಇರುವುದಾದರೆ ಇಲ್ಲಿನವರು ಅಲ್ಲಿ ಹೋಗಿ ಪ್ರಾಂಶುಪಾಲರಾಗಲು ಅವಕಾಶವನ್ನು ಸರಕಾರ ನೀಡಲು ಸಾಧ್ಯವೇ?
ಹಾಲಿ ಪ್ರಾಂಶುಪಾಲರ ನೇರ ನೇಮಕಾತಿ ನೀತಿಯ ಅನುಸಾರ ಹುದ್ದೆಯು ಐದು ವರ್ಷಗಳ ಟರ್ಮ್ ಹುದ್ದೆ ಆಗಿದ್ದು; ಇದರಿಂದ ಜಂಟಿ ನಿರ್ದೇಶಕರ, ಅಪರ ನಿರ್ದೇಶಕರ ಮತ್ತು ನಿರ್ದೇಶಕರ ಹುದ್ದೆಗಳು ಖಾಯಮ್ಮಾಗಿ ಇನ್ಚಾರ್ಜ್ ಆಗುತ್ತವೆ. ಇದರಿಂದ ಇಲಾಖೆಯ ಆಂತರಿಕ ಭಡ್ತಿಯ ಸಹಜ ವಿಕಾಸದ ಹಂತಗಳನ್ನೆಲ್ಲ ಒಡೆದು ಹಾಕಿದಂತೆ ಆಗುತ್ತದೆ. ಇದರಿಂದ ಶಿಕ್ಷಣಾಡಳಿತದಲ್ಲಿ ಪ್ರಾಧ್ಯಾಪಕರಿಗೆ ನಿರ್ಣಯಾತ್ಮಕ ಅಧಿಕಾರ ಇಲ್ಲದೆ ಹೋಗುತ್ತದೆ.
ಹೊರಗಿನವರು ಪ್ರಾಂಶುಪಾಲರಾಗಿ ನೇಮಕವಾದಲ್ಲಿ ಅವರು ಆರು ಗಂಟೆ ಪಾಠ ಮಾಡದೆ ಒಳಗಿನವರು ಆರು ಗಂಟೆ ಪಾಠ ಮಾಡಬೇಕಾಗುತ್ತದೆ. ಇಂತಹ ಇಬ್ಬಗೆ ನೀತಿಯಿಂದ ಮುಂದೆ ಈ ಹುದ್ದೆಯು ಶಿಕ್ಷಣಾಡಳಿತ ಹುದ್ದೆಯಾಗದೆ ಹೋಗುವ ಅಪಾಯವಿದೆ. ಒಳಹೊರಗಿನ ಶೀತಲ ಸಮರಕ್ಕೂ ಇದು ಕಾರಣ ಆಗಬಹುದು.
ಎಲ್ಲ ಕಡೆಯೂ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ತೀವ್ರ ಸ್ಪರ್ಧೆ ಇದೆ. ಹೀಗಿರುವಾಗ ಖಾಸಗಿಯವರನ್ನು ಸರಕಾರಿ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಿಸಿದರೆ ನಮ್ಮ ಸರಕಾರಿ ಪದವಿ ಕಾಲೇಜುಗಳ ಗತಿ ಏನು? ಮುಂದೆ ಇದರಿಂದ ಪ್ರವೇಶಾತಿಯ ಮೇಲೆ ದುಷ್ಪರಿಣಾಮ ಆಗುವ ಸಾಧ್ಯತೆಗಳೂ ಇವೆ. ಇದರಿಂದ ಸರಕಾರಿ ಕಾಲೇಜುಗಳಲ್ಲಿ ಗ್ರಾಸ್ ಎನ್ರೋಲ್ಮೆಂಟ್ ರೇಶಿಯೊ ಗಣನೀಯ ಪ್ರಮಾಣದಲ್ಲಿ ಕುಸಿಯಬಹುದು.
ಅಲ್ಲದೆ; ಸರಕಾರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಸರಕಾರದ ಸ್ವಾಯತ್ತ ಸಂಸ್ಥೆಗಳು ಮತ್ತು ಪರೀಕ್ಷಾ ಪ್ರಾಧಿಕಾರಗಳ ಮೂಲಕ ನಡೆಯುತ್ತದೆ. ಆದರೆ ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರ ನೇಮಕಾತಿ ಆಡಳಿತ ಮಂಡಳಿಯ ಮರ್ಜಿಗೆ ಒಳಪಟ್ಟಿರುತ್ತದೆ. ಹೀಗೆ ನೇಮಕಾತಿಯಲ್ಲಿ ವ್ಯತ್ಯಾಸವಿರುವವರನ್ನು ಸಮಾನರನ್ನಾಗಿ ಪರಿಗಣಿಸಬಹುದೇ? ಎಪಿಐ (ಅಕಾಡಮಿಕ್ ಪರ್ಫಾರ್ಮೆನ್ಸ್ ಇಂಡೆಕ್ಸ್) ಅನುಸಾರ ಸರಕಾರಿ ಪ್ರಾಧ್ಯಾಪಕರು ಸ್ಥಾನೀಕರಣ ಪಡೆದಿರುತ್ತಾರೆ. ಸಿ.ಎ.ಎಸ್. ಅನ್ನು ಖಾಸಗಿಯವರು ಕಟ್ಟುನಿಟ್ಟಾಗಿ ಅನುಸರಿಸಿರುವುದಿಲ್ಲ. ಹಾಗಾಗಿ ಅವರಿಗೆ ಕಟ್ಟುನಿಟ್ಟಾದ ಎಪಿಐ ಅನ್ವಯ ಆಗಿರುವುದಿಲ್ಲ. ಹೀಗಿರುವಾಗ ಎಲ್ಲರನ್ನೂ ಸಮಾನ ಅರ್ಹತೆ ಉಳ್ಳವರಾಗಿ ಪರಿಗಣಿಸಲು ಸಾಧ್ಯವೇ? ಮತ್ತೂ ವಿಶೇಷವೆಂದರೆ ನೇಮಕಾತಿ ಕರಡು ನಿಯಮಗಳಲ್ಲಿ ಇದ್ದ ಪೇಸ್ಕೇಲ್ ಅರ್ಹತೆಯನ್ನು ಅಂತಿಮ ಅಧಿಸೂಚನೆಯಲ್ಲಿ ತೆಗೆದು ಹಾಕಿ ಪ್ರಕಟಿಸಲಾಗಿದೆ. ಇದರ ಹಿಂದಿನ ಹುನ್ನಾರವೇನು?
ಅಲ್ಲದೆ; ಯಾವುದೇ ನೇಮಕಾತಿ ನಿಯಮಾವಳಿಗಳು ಮುಂದಿನ ಕಾಲಕ್ಕೆ ಅನ್ವಯವಾಗುವಂತೆ ಸಿದ್ಧಗೊಳ್ಳಬೇಕು. ಅದರೆ ಈ ನೇಮಕಾತಿ ನಿಯಮಾವಳಿಗಳು ಒನ್ ಟೈಂ ಮೆಶರ್ ಆಗಿ ರೂಪತಾಳಿವೆ. ಇಂತಹ ನಿಯಮದಿಂದ ಮುಂದೆ ಮತ್ತೆ ಮತ್ತೆ ಐದು ವರ್ಷಕ್ಕೊಮ್ಮೆ ನೇಮಕಾತಿ ನಿಯಮ ಮಾಡುವ ಒತ್ತಡ ಇಲಾಖೆಯ ಮೇಲೆ ಬೀಳಲಿದೆ. ಅದೂ ಅಲ್ಲದೆ ನೇಮಕಾತಿಗೆ ವಯಸ್ಸಿನ ಮಿತಿ ಇಲ್ಲದಿರುವುದರಿಂದ ಒಂದೇ ತಿಂಗಳಲ್ಲಿ ನಿವೃತ್ತಿ ಆಗುವವರೂ ಪ್ರಾಂಶುಪಾಲರಾಗಬಹುದು. ಆಗ ಮತ್ತೆ ಇನ್ಚಾರ್ಜ್ ಪ್ರಾಂಶುಪಾಲರೇ ನೇಮಕ ಆಗುತ್ತಾರೆ. ಹಾಗಾದಾಗ ಆಡಳಿತದಲ್ಲಿ ಸಮತೆ ಇರುವುದಿಲ್ಲ. ಇದನ್ನೆಲ್ಲ ತಪ್ಪಿಸಬೇಕೆಂದರೆ; ಹಾಲಿ ಪ್ರಾಂಶುಪಾಲರ ನೇರ ನೇಮಕಾತಿಯನ್ನು ರದ್ದುಗೊಳಿಸುವುದು ಅನಿವಾರ್ಯ.
ಅದೂ ಅಲ್ಲದೆ; ವಯಸ್ಸಿನ ಮಿತಿಯಿಲ್ಲದ ನಿಯಮದಲ್ಲಿ ಒಂದೋ ಎರಡೋ ತಿಂಗಳು ಅಥವಾ ವರ್ಷಗಳಲ್ಲಿ ನಿವೃತ್ತಿ ಆಗುವ ಖಾಸಗಿ ವ್ಯಕ್ತಿ ಇಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿ, ಲಕ್ಷಾಂತರ, ಕೋಟ್ಯಂತರ ಹಣಕಾಸು ವಹಿವಾಟು ನಡೆಸಿ ನಿವೃತ್ತಿ ಆದಲ್ಲಿ; ಆನಂತರ ಅವರನ್ನು ಉತ್ತರದಾಯಿ ಆಗಿಸುವುದು ಹೇಗೆ? ಅವರಿಗೆ ಪೆನ್ಶನ್ ಕೂಡ ಇರುವುದಿಲ್ಲ; ಅವರನ್ನು ಅವರ ಮಾತೃಸಂಸ್ಥೆಯವರೂ ಮತ್ತೆ ಮರುನೇಮಕಾತಿ ಮಾಡಿಕೊಳ್ಳುವುದಿಲ್ಲ. ಇದೂ ಕೂಡ ಸಮಸ್ಯಾತ್ಮಕ ಅಲ್ಲವೇ?
ಎಲ್ಲಕ್ಕೂ ವಿಶೇಷವಾಗಿ ಯುಜಿಸಿ ನಿಯಮಗಳಲ್ಲಿ ನೇರ ನೇಮಕಾತಿ ಬಗ್ಗೆ ಹೇಳಿದ್ದರೂ ಎಲ್ಲೂ ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕೆಂದು ಹೇಳಿಲ್ಲ. ಹೊರಗಿನವರಿಗೆ ಅವಕಾಶ ನೀಡಬೇಕೆಂದೂ ಹೇಳಿಲ್ಲ. ಇಲಾಖೆಯ ಒಳಗೇ ಆಯ್ಕೆ ವಿಧಾನಕ್ಕೆ ನಿಯಮಗಳನ್ನು ರೂಪಿಸಲಾಗಿದ್ದರೂ ಅದನ್ನು ಮಿಸ್ರೀಡಿಂಗ್ ಮಾಡಿಕೊಂಡು ನಮ್ಮಲ್ಲಿ ನಿಯಮಗಳನ್ನು ಆರ್ಬಿಟ್ರರಿಯಾಗಿ ಮಾಡಿಕೊಳ್ಳಲಾಗಿದೆ. ಒಮ್ಮೆ ಐದು ವರ್ಷಕ್ಕೆ ನೇಮಕ ಆದವರು ಮುಂದೆ ನಿಯಮಾನುಸಾರ ಇನ್ನೈದು ವರ್ಷ ಮುಂದುವರಿಕೆಗೆ ಲಾಬಿ ಮಾಡುವುದಿಲ್ಲ ಎಂದು ಏನು ಖಾತ್ರಿ?
ನಿಯಮಾನುಸಾರ ಪರೀಕ್ಷೆ ಬರೆದು ಆಯ್ಕೆಯ ಸಂಭವನೀಯತೆ ಉಳ್ಳ ಕಾಲೇಜು ಶಿಕ್ಷಣ ಇಲಾಖೆಯ ಕೆಲ ಅಧ್ಯಾಪಕರಿಗೆ ಈ ನೀತಿಯನ್ನು ರದ್ದುಪಡಿಸುವುದರಿಂದ ಬೇಸರವೂ, ಭ್ರಮನಿರಸನವೂ ಆಗಬಹುದು. ಆದರೆ ಇಲಾಖೆಯ ಮುಂದಿನ ಭವಿಷ್ಯದ ದೃಷ್ಟಿಯಿಂದ ಇಲಾಖೆಯ ಒಳಗಿನವರನ್ನು ಮಾತ್ರವೇ ನೇಮಿಸುವ ಕ್ರಮಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಒತ್ತಾಯಿಸಲೇಬೇಕಿದೆ. ಹೊರಗಿನವರು ಒಳಬರುವುದನ್ನು ತಡೆಯಬೇಕಾಗಿದೆ.
ಸರಕಾರದ ನಿರ್ದೇಶನದಂತೆ ಸ್ಥಾಪಿತವಾಗಿದ್ದ ತಜ್ಞರ ಸಮಿತಿಯು ಈಗಾಗಲೇ ಭಾರತದ ಹಲವು ರಾಜ್ಯಗಳ ಪ್ರವಾಸ ಮಾಡಿ ಪ್ರಾಂಶುಪಾಲರ ನೇಮಕಾತಿ ಸ್ವರೂಪದ ಬಗ್ಗೆ ವರದಿ ನೀಡಿದೆ. ಅದರ ಪ್ರಕಾರ ಬೇರೆ ಎಲ್ಲೂ ನೇರ ನೇಮಕಾತಿ ಮಾಡಿಲ್ಲ; ಜ್ಯೇಷ್ಠತೆಯನ್ನೆ ಆಧರಿಸಿ ಭಡ್ತಿ ನೀಡಿದ್ದಾರೆ; ತಕ್ಷಣ, ತಡಮಾಡದೆ ಇದೇ ವರದಿ ಆಧರಿಸಿ ಪ್ರಾಧ್ಯಾಪಕರನ್ನು ಹಿರಿತನದ ಆಧಾರದಲ್ಲಿ ಭಡ್ತಿ ನೀಡಿ ಪ್ರಾಂಶುಪಾಲರಾಗಿ ನೇಮಿಸುವುದು ಸೂಕ್ತ. ಇದರಿಂದ ಎಲ್ಲ ಕಾಲೇಜುಗಳಲ್ಲೂ ಖಾಯಂ ಪ್ರಾಂಶುಪಾಲರನ್ನು ನೇಮಿಸುವುದು ಸಾಧ್ಯವಾಗಲಿದೆ.
ಕೇಂದ್ರವನ್ನು ಮೆಚ್ಚಿಸಲು ದೇಶದಲ್ಲಿ ಎಲ್ಲೂ ಜಾರಿಯಾಗದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮಲ್ಲಿ ತರಾತುರಿಯಲ್ಲಿ ಜಾರಿ ಮಾಡಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ ಬದಲಿಸಿ, ತನ್ನದೇ ರಾಜ್ಯ ಶಿಕ್ಷಣ ನೀತಿಯನ್ನು ಮಾಡಲು ಹೊರಟಿರುವ ಸರಕಾರ ಈ ನೇರ ನೇಮಕಾತಿಯ ತಪ್ಪು ನೀತಿಯನ್ನು ರದ್ದುಮಾಡುವುದು ಸಾಧ್ಯವಿಲ್ಲವೆ? ಖಂಡಿತಾ ಸಾಧ್ಯವಿದೆ. ಅದಕ್ಕೆ ಇಚ್ಛಾಶಕ್ತಿ ಬೇಕಿದೆಯಷ್ಟೆ.
ಈಗಾಗಲೆ ನಾಡಿನ ಹಲವು ಚಿಂತಕರು ಮತ್ತು ಶಿಕ್ಷಣ ತಜ್ಞರು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ ಕೂಡ. ಹೀಗಾಗಿ ಹಿರಿತನದ ಆಧಾರದ ಮೇಲೆ ಭಡ್ತಿ ನೀಡಿ ಶೀಘ್ರ ಪದವಿ ಪ್ರಾಂಶುಪಾಲರ ನೇಮಕಾತಿ ಮಾಡಲಿ ಎಂದು ನಾವೆಲ್ಲ ಒಕ್ಕೊರಲಿನಿಂದ ಸರಕಾರವನ್ನು ಆಗ್ರಹಿಸುತ್ತೇವೆ. ಒಂದೊಮ್ಮೆ ನೇರ ನೇಮಕಾತಿ ಮೂಲಕವೇ ಪ್ರಾಂಶುಪಾಲರ ಹುದ್ದೆಗಳನ್ನು ತುಂಬಬೇಕಿದ್ದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಒಳಗಿನವರಿಗೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಿ ಎಂದು ನಾವೆಲ್ಲ ವಿನಂತಿಸುತ್ತೇವೆ.
-ಉನ್ನತ ಶಿಕ್ಷಣ ಚಿಂತನಾ ವೇದಿಕೆ, ಬೆಂಗಳೂರು