ಪ್ರಾದೇಶಿಕ ಪಕ್ಷಗಳಿಂದಾಗಿ ಮೋದಿ ಅಬ್ಬರಕ್ಕೆ ಕಡಿವಾಣ ಬೀಳಲಿದೆಯೇ?
ಮೊದ ಮೊದಲು ಅಂದುಕೊಂಡಂತೆ ಈ ಸಲದ ಚುನಾವಣೆ ಈಗ ಒಂದೇ ಕುದುರೆಯ ರೇಸ್ ಆಗಿ ಉಳಿದಿಲ್ಲ. ಮೋದಿಯವರ ಎನ್ಡಿಎಗೆ ಇಂಡಿಯಾ ವಿಪಕ್ಷ ಒಕ್ಕೂಟ ದೊಡ್ಡ ಸವಾಲಾಗಿ ನಿಂತಿದೆ. ಎಲ್ಲೆಡೆ ಸ್ಥಳೀಯ ವಿಷಯಗಳೇ ಚುನಾವಣೆಯಲ್ಲಿ ಹೆಚ್ಚು ಮುನ್ನೆಲೆಯಲ್ಲಿರುವುದರಿಂದ ಮೋದಿ ವಿರೋಧಿಗಳ ಪಾಲಿಗೆ ಗಟ್ಟಿ ನೆಲೆ ಸಿಕ್ಕಿಬಿಟ್ಟಿದೆ.
2024ರ ಚುನಾವಣೆಯಲ್ಲಿ ರಾಜ್ಯ, ಸ್ಥಳೀಯ ಇಶ್ಯುಗಳೇ ಫಲಿತಾಂಶದ ಮೇಲೆ ಪ್ರಭಾವ ಬೀರುವ ಅಂಶಗಳಾಗಿ ಮೂಡಿ ಬಂದಿವೆ. ಇದರಿಂದಾಗಿ ಹೇಗೆ ಪ್ರಾದೇಶಿಕ ಪಕ್ಷಗಳು ಒಂದೊಂದೇ ರಾಜ್ಯದಲ್ಲಿ ಬಿಜೆಪಿ ಹಾಗೂ ಮೋದಿಗೆ ಠಕ್ಕರ್ ಕೊಡುತ್ತಿವೆ. ಬಿಜೆಪಿಗೆ ಅವು ದೊಡ್ಡ ಸವಾಲಾಗುತ್ತಿವೆ.
ನಿಜ. 2024ರ ಚುನಾವಣೆ ಹೆಚ್ಚು ಸ್ಥಳೀಯವಾಗಿಬಿಟ್ಟಿರುವುದು, ರಾಷ್ಟ್ರೀಯ ವಿಷಯಗಳು ಮುನ್ನೆಲೆಯಲ್ಲಿ ಇಲ್ಲದಿರುವುದು ವಿಪಕ್ಷಗಳ ಪಾಲಿಗೆ ದೊಡ್ಡ ಬಲವಾಗುವಂತಾಗಿದೆ.
ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಖಚಿತವಾಗಿದೆ. ಮೋದಿ ಅಬ್ಬರಕ್ಕೆ ಕಡಿವಾಣ ಬಿದ್ದು, ಪ್ರಾದೇಶಿಕ ಪಕ್ಷಗಳು ಗೆಲುವಿನ ನಗೆ ಬೀರುವ ಸಾಧ್ಯತೆ ಕಾಣಿಸತೊಡಗಿದೆ.
ಐದು ಬಗೆಯಲ್ಲಿ ಮೋದಿ ಎದುರಿಸಬೇಕಾದ ಹೊಡೆತಗಳ ಬಗ್ಗೆ ವಿವರಿಸುವುದಾದರೆ,
1. ಪ್ರಾದೇಶಿಕ ಪಕ್ಷಗಳು ಮತ್ತೊಮ್ಮೆ ಕಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ.
ಒಂದು ದಶಕದ ಬಳಿಕ ಪ್ರಾದೇಶಿಕ ಪಕ್ಷಗಳು ಮತ್ತೊಮ್ಮೆ ಚೇತರಿಸಿಕೊಂಡಿವೆ ಮತ್ತು ಬಲವಾದ ಪೈಪೋಟಿಯನ್ನೇ ಒಡ್ಡಿವೆ.
2014 ಮತ್ತು 2019ರ ಚುನಾವಣೆಗಳಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಯಲು ಪ್ರಾದೇಶಿಕ ಪಕ್ಷಗಳು ಸಂಪೂರ್ಣ ವಿಫಲವಾಗಿದ್ದವು. ಆದರೆ ಈ ಬಾರಿ ಅವು ತಮ್ಮ ಪೂರ್ಣ ಬಲವನ್ನು ಮರಳಿ ತಂದುಕೊಂಡಿವೆ.
ನಮ್ಮಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಬೇರೆ ಬೇರೆ ಹಿನ್ನೆಲೆಯಿದೆ.
1950 ಮತ್ತು 1960ರ ದಶಕದ ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಹಿಡಿದು, ರಾಜಕೀಯ ಕಾರಣಗಳಿಂದಾಗಿ ಪಕ್ಷವೊಂದರಿಂದ ಸಿಡಿದು ಬೇರೆಯಾಗಿ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳವರೆಗೂ ಇಂತಹ ವೈವಿಧ್ಯತೆ ಕಾಣಬಹುದು.
ಹೋರಾಟದ ಹಿನ್ನೆಲೆಯಲ್ಲಿ ರೂಪ ತಳೆದ ಪ್ರಾದೇಶಿಕ ಪಕ್ಷಗಳಿಗೆ ಹೊಸ ಬಲ ಬಂದದ್ದು ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದ ನಂತರ.
ಅವಲ್ಲದೆ, ಜ್ಯೋತಿಬಾ ಫುಲೆ, ಅಂಬೇಡ್ಕರ್ ಮೊದಲಾದವರ ರಾಜಕೀಯ ಸಿದ್ಧಾಂತಗಳೊಂದಿಗೆ ಸಂಬಂಧವುಳ್ಳ ದಲಿತ ರಾಜಕೀಯ ಪಕ್ಷಗಳೂ ಇವೆ.
ವೈಯಕ್ತಿಕ ಹಾಗೂ ಸ್ಥಳೀಯ ವಿಚಾರಗಳಿಂದ ಕಾಂಗ್ರೆಸ್ ನಿಂದ ಬೇರ್ಪಟ್ಟ ಗುಂಪುಗಳೂ ಇವೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಇಂಥವನ್ನು ಕಾಣಬಹುದು.
ಮಹಾರಾಷ್ಟ್ರ, ತಮಿಳುನಾಡು, ಕಾಶ್ಮೀರ, ಸಿಕ್ಕಿಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಪ್ರಮುಖವಾಗಿರುವ ಜನಾಂಗೀಯ ಪ್ರಾದೇಶಿಕ ಪಕ್ಷಗಳೂ ಇವೆ.
ಅಂದರೆ, ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಚಳವಳಿಗಳಿಂದ ಹುಟ್ಟಿದವೆಂಬುದು ಒಂದು ಅಂಶವಾದರೆ,
ಅವು ಪ್ರಾದೇಶಿಕತೆ, ಭಾಷೆ ಮಾತ್ರವಲ್ಲದೆ ಸಾಂಸ್ಕೃತಿಕ ಮತ್ತು ಜನಾಂಗೀಯ ಗುರುತಿನೊಂದಿಗೆ ಜನರನ್ನು ತಲುಪುತ್ತಿವೆ ಎಂಬುದು ಮತ್ತೊಂದು ಅಂಶ.
ದಿಲ್ಲಿ ಮತ್ತು ಪಂಜಾಬ್ಗಳಲ್ಲಿ ಅಧಿಕಾರದಲ್ಲಿರುವ ಎಎಪಿ ಕೂಡ ಹೋರಾಟದ ಮೂಲಕವೇ ಉದಯವಾದದ್ದು. ಈಗ ಅದರ ವ್ಯಾಪ್ತಿ ಹಿರಿದಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಪೈಪೋಟಿ ನೀಡಬಲ್ಲಷ್ಟು ಬೆಳೆದಿದೆ.
2. ಚಾರ್ ಸೌ ಪಾರ್ ಎಂಬ ಮೋದಿ ಸ್ಲೋಗನ್ ಅವರಿಗೇ ತಿರುಗು ಬಾಣವಾಗಿದೆ.
ಸಂವಿಧಾನ ಬದಲಾಯಿಸಲು ಮೋದಿ ನೇತೃತ್ವದ ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆಲ್ಲಬಯಸಿದೆ ಎಂಬ ಆತಂಕ ಸೃಷ್ಟಿಯಾಗಿದ್ದು, ಅದು ಬಿಜೆಪಿಗೆ ಉಲ್ಟಾ ಹೊಡೆದಿದೆ.
ಇದರಿಂದಾಗಿ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಇತರ ಅಲ್ಪಸಂಖ್ಯಾತರಂತಹ ಸಮಾಜದ ಅಂಚಿನಲ್ಲಿರುವ ವರ್ಗಗಳು ತಮ್ಮ ವಿಶೇಷ ಹಕ್ಕುಗಳು, ಸವಲತ್ತುಗಳು ಮತ್ತು ಸಾಂವಿಧಾನಿಕ ರಕ್ಷಣೆಯ ಖಾತರಿಗಳನ್ನು ಬಿಜೆಪಿ ಕಸಿಯಲಿದೆ ಎಂಬ ಭಯದಲ್ಲಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡುತ್ತಿರುವ ಜಾತಿ ಆಧಾರಿತ ಪ್ರಾದೇಶಿಕ ಪಕ್ಷಗಳು ಇದನ್ನು ತಮ್ಮ ಪ್ರಚಾರದ ವಿಷಯವನ್ನಾಗಿ ಬಳಸುತ್ತಿವೆ.
ಕಾಂಗ್ರೆಸ್ ಪಕ್ಷ ದೇಶಾದ್ಯಂತ ಜಾತಿ ಜನಗಣತಿಯನ್ನು ನಡೆಸುವುದಾಗಿ ಘೋಷಿಸಿದೆ.
ಮೋದಿ ಮೂರನೇ ಅವಧಿಗೆ ಹೋದರೆ ಭಾರತದಲ್ಲಿ ಪ್ರಜಾಪ್ರಭುತ್ವದ ಅಂತ್ಯವಾಗಲಿದೆ ಮತ್ತು ಮೀಸಲಾತಿಗಳನ್ನು ಬಿಜೆಪಿ ರದ್ದುಗೊಳಿಸಲಿದೆ ಎಂದು ಕಾಂಗ್ರೆಸ್ ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ.
ಇವೆಲ್ಲವೂ ಮೋದಿಗೆ ದೊಡ್ಡ ಹಿನ್ನಡೆಯಾಗುವುದಕ್ಕೆ ಕಾರಣವಾಗಿವೆ.
3. ಪ್ರತಿಪಕ್ಷಗಳ ಒಗ್ಗೂಡುವಿಕೆ ಹೆಚ್ಚಿನ ರಾಜ್ಯಗಳಲ್ಲಿ ಮತ ವಿಭಜನೆ ಆಗದಂತೆ ತಡೆಯಲಿದೆ.
ಹಿಂದಿನ ಚುನಾವಣೆಗಳಲ್ಲಿ ವಿಪಕ್ಷಗಳ ಮತಗಳು ವಿಭಜನೆಯಾಗುತ್ತಿದ್ದ ಪರಿಣಾಮ ಅವು ಮೋದಿ ವಿರುದ್ಧ ಸಮರ್ಥ ಹೋರಾಟ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.
ಆದರೆ ಈ ಬಾರಿ ‘ಇಂಡಿಯಾ’ ಒಕ್ಕೂಟದಡಿ ಹೆಚ್ಚಿನ ವಿಪಕ್ಷಗಳು ಒಗ್ಗೂಡಿರುವುದರಿಂದ ಬಿಜೆಪಿಗೆ ಅವು ದೊಡ್ಡ ಸವಾಲೊಡ್ಡಲಿವೆ.
ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಿಎಸ್ಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮಾತ್ರ ‘ಇಂಡಿಯಾ’ ಮೈತ್ರಿಕೂಟದಡಿ ಸೇರಿಲ್ಲ.
4. ಹಿಂದುಳಿದ ಜಾತಿಯ ಪಕ್ಷಗಳಿಂದ ಅತ್ಯಂತ ಹಿಂದುಳಿದ ಜಾತಿಯ ಅಭ್ಯರ್ಥಿಗಳ ಸ್ಪರ್ಧೆ.
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿನ ಮೀಸಲಾತಿ ಪರ ಪ್ರಾದೇಶಿಕ ಪಕ್ಷಗಳು ತಮ್ಮಲ್ಲಿನ ಪ್ರಬಲವಲ್ಲದ ಜಾತಿಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ಅನುಸರಿಸಿರುವುದು ಒಂದು ಮಹತ್ವದ ಸಂಗತಿಯಾಗಿದೆ.
ಹಿಂದಿನ ವೈಫಲ್ಯಗಳಿಂದ ಪಾಠ ಕಲಿತ ಉತ್ತರ ಭಾರತದ ಜಾತಿ ಆಧಾರಿತ ಪಕ್ಷಗಳು ಈ ಬಾರಿ ಕ್ಷೇತ್ರ ಮಟ್ಟದಲ್ಲಿ ಅತ್ಯಂತ ಹಿಂದುಳಿದ ಜಾತಿಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಆ ಮೂಲಕ, ಹಿಂದುಳಿದ ಜಾತಿಗಳಲ್ಲಿರುವ ಪ್ರಬಲ ವರ್ಗಗಳಿಗೆ ಮಾತ್ರ ಮಣೆ ಹಾಕುತ್ತವೆಂದು ಬಿಜೆಪಿ ಆರೋಪಿಸಿ ಲಾಭ ಪಡೆಯುವುದಕ್ಕೂ ಅವಕಾಶ ಇಲ್ಲದಂತೆ ಮಾಡಿವೆ.
ಬಿಜೆಪಿ ಹಿಂದೆ ಇಂಥದೇ ತಂತ್ರವನ್ನು ಅನುಸರಿಸಿತ್ತು. ಆದರೆ ಈಗ ಈ ವಿಚಾರದಲ್ಲಿ ಅದಕ್ಕೆ ಪ್ರಾದೇಶಿಕ ಪಕ್ಷಗಳೇ ಪೈಪೋಟಿಯೊಡ್ಡಿವೆ.
ಇದರ ವಿರುದ್ಧವಾಗಿ ಎತ್ತಲು ರಾಷ್ಟ್ರೀಯ ವಿಚಾರವೂ ಬಿಜೆಪಿ ಬಳಿ ಇಲ್ಲವಾಗಿದೆ ಮತ್ತು ಮೋದಿ ಅಲೆಯೂ ಕಾಣುತ್ತಿಲ್ಲ.
5. ವಿವಿಧ ರಾಜ್ಯಗಳಲ್ಲಿ ಎನ್ಡಿಎ ಮಿತ್ರಪಕ್ಷಗಳ ವಿರುದ್ಧ ಆಡಳಿತ ವಿರೋಧಿ ಅಲೆ ಕಾಣಿಸಿದೆ.
ಬಿಹಾರದಂಥ ಕೆಲವು ರಾಜ್ಯಗಳಲ್ಲಿ ಬಿಜೆಪಿ ತನ್ನ ಮೈತ್ರಿಕೂಟದ ಪಾಲುದಾರರ ಪಕ್ಷಗಳ ವಿರುದ್ಧದ ಆಡಳಿತ ವಿರೋಧಿ ಅಲೆಯ ಹೊಡೆತವನ್ನು ಎದುರಿಸಬೇಕಾಗಿದೆ.
ಚುನಾವಣೆಯ ಮೊದಲ ಹಂತಗಳಲ್ಲಿ ಮತದಾರರು ತೋರಿಸಿದ ನಿರಾಸಕ್ತಿ ಕೂಡ ಮೋದಿಯ 10 ವರ್ಷಗಳ ಆಡಳಿತದ ವಿರುದ್ಧದ ಪ್ರತಿಕ್ರಿಯೆ ಆಗಿರುವ ಸಾಧ್ಯತೆಯೂ ಇದೆ.
ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಕುತಂತ್ರಗಳ ಬಗ್ಗೆಯೂ ಮತದಾರರು ಅಸಮಾಧಾನಗೊಂಡಿದ್ದಾರೆ.
ಶಾಸಕರ ಖರೀದಿ, ಚುನಾಯಿತ ಸರಕಾರಗಳನ್ನು ಬೀಳಿಸಿ ತಾವು ಅಧಿಕಾರ ಹಿಡಿಯುವುದು, ಅಧಿಕಾರ ಮತ್ತು ಬಲಪ್ರಯೋಗದ ಮೂಲಕ ವಿಪಕ್ಷಗಳನ್ನು ಒಡೆಯುವುದು ಇಂತಹ ನಡೆಗಳ ಕಾರಣದಿಂದಾಗಿ ಬಿಜೆಪಿ ಬಗ್ಗೆ ಜನರು ರೋಸಿಹೋಗಿರುವುದೂ ಕಾಣಿಸುತ್ತಿದೆ.
ಇದೆಲ್ಲದರ ಪರಿಣಾಮವಾಗಿ, 400ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ವಿಚಾರ ಹಾಗಿರಲಿ, ಕಳೆದ ಬಾರಿ ಗೆದ್ದಷ್ಟನ್ನಾದರೂ ಉಳಿಸಿಕೊಳ್ಳಲು ಈಗ ಬಿಜೆಪಿ ಹೆಣಗಾಡುವ ಸ್ಥಿತಿ ಎದುರಾಗಿದೆ.
ಇನ್ನೊಂದೆಡೆ, ತಮಿಳುನಾಡಿನಂಥ ರಾಜ್ಯಗಳಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷಗಳೊಡನೆ ಮೈತ್ರಿ ಮಾಡಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ.
ಅಲ್ಲದೆ, ಕರ್ನಾಟಕ, ಬಿಹಾರದಂತಹ ರಾಜ್ಯಗಳಲ್ಲಿ ಅದು ಮೈತ್ರಿ ಮಾಡಿಕೊಂಡಿರುವುದು ಈಗಾಗಲೇ ತೀರಾ ದುರ್ದೆಸೆಯಲ್ಲಿರುವ ಪಕ್ಷಗಳ ಜೊತೆಗೆ.
ಅಂತೂ ಹಲವು ವರ್ಷಗಳ ಬಳಿಕ ಈ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ದೊಡ್ಡ ಪಾತ್ರ ವಹಿಸಿದ್ದು, ಫಲಿತಾಂಶದ ಕೀಲಿಕೈ ಅವುಗಳ ಬಳಿ ಹೋಗಿದೆ.
ಈಗಾಗಲೇ ಹೆಸರಿಗಷ್ಟೇ ಎಂಬಂತಾಗಿರುವ ಮೋದಿ ಮ್ಯಾಜಿಕ್ ಅನ್ನು ಪೂರ್ತಿಯಾಗಿ ಅಳಿಸಿಹಾಕಲು ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗುತ್ತವೆಯೇ ಎಂಬುದು ಈಗಿನ ಕುತೂಹಲ.
(ಕೃಪೆ: thewire.in)