ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆಯೇ ?
ಚಿಕ್ಕಮಗಳೂರು ಜಿಲ್ಲೆಯನ್ನು ಸಮಗ್ರವಾಗಿ ಪ್ರತಿನಿಧಿಸುತ್ತಿರುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಚುನಾಯಿತರಾಗಿರುವ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಇಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ಪಕ್ಷದಲ್ಲಿ ಮತ್ತು ವಿರೋಧ ಪಕ್ಷದಲ್ಲಿ ಪ್ರಾತಿನಿಧಿಕ ಜವಾಬ್ದಾರಿ ಸ್ಥಾನವನ್ನು ಹೊಂದಿದ್ದಾರೆ.
ರಾಜ್ಯದಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ಪಕ್ಷದ ಟಿ.ಡಿ.ರಾಜೇಗೌಡ ಶೃಂಗೇರಿ, ಜಿ.ಎಚ್.ಶ್ರೀನಿವಾಸ ತರೀಕೆರೆ, ಆನಂದ ಕೆ.ಎಸ್.ಕಡೂರು, ಎಚ್.ಡಿ.ತಮ್ಮಯ್ಯ ಚಿಕ್ಕಮಗಳೂರು ಮತ್ತು ನಯನಾ ಮೋಟಮ್ಮ ಮೂಡಿಗೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸದಸ್ಯರು. ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಪ್ರಾಣೇಶ್ ಎಂ.ಕೆ., ಸಿ.ಟಿ.ರವಿ, ಧನಂಜಯ ಸರ್ಜಿ ರಾಜ್ಯ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ಸದಸ್ಯರು. ಎಸ್.ಎಲ್.ಭೋಜೇಗೌಡ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಸದಸ್ಯರಾಗಿ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾಗಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರದಲ್ಲಿ ಆಡಳಿತ ಪಕ್ಷದ ಸದಸ್ಯರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಜೈರಾಮ್ ರಮೇಶ್ ರಾಜ್ಯ ಸಭೆಯಲ್ಲಿ ನಮ್ಮ ರಾಜ್ಯದ ಪ್ರತಿನಿಧಿ. ವಿರೋಧ ಪಕ್ಷ ಕಾಂಗ್ರೆಸ್ ಪಕ್ಷವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಸಿ.ಟಿ.ರವಿ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಸಚಿವರಾಗಿ, ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಯ, ಅನುಭವಿ ರಾಜಕೀಯ ಮುಖಂಡ. ಎಂ.ಕೆ. ಪ್ರಾಣೇಶ್ ಎರಡನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸದನದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಎಲ್.ಭೋಜೇಗೌಡರು ಎರಡನೇ ಬಾರಿ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಿ.ಡಿ.ರಾಜೇಗೌಡ, ಜಿ.ಎಚ್. ಶ್ರೀನಿವಾಸ್ ಎರಡನೇ ಬಾರಿ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯ ಸಂಪುಟದಲ್ಲಿ ಸಚಿವರಾಗಿ, ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಸಭಾ ನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ ಅನುಭವ ಹೊಂದಿದ ಅತ್ಯಂತ ಹಿರಿಯ, ಅನುಭವಿ ರಾಜಕಾರಣಿ ಮತ್ತು ಈಗ ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ಜಿಲ್ಲೆಯ ಕಡೂರು ತಾಲೂಕು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುತ್ತದೆ. ಹಾಲಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಶ್ರೇಯಸ್ ಶ್ರೇಯಸ್ ಪ್ರತಿನಿಧಿಸುತ್ತಿದ್ದಾರೆ.
ನಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಈ ಎಲ್ಲಾ ಸದಸ್ಯರು ಅತ್ಯಂತ ಕ್ರಿಯಾಶೀಲರು. ಆದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಭೂ ಮಂಜೂರಾತಿ ಸಮಸ್ಯೆ, ನೀರಾವರಿ ಸಮಸ್ಯೆ, ಅತಿವೃಷ್ಟಿ, ಅನಾವೃಷ್ಟಿಯಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಗೊಳಗಾಗುವ ಜಿಲ್ಲೆಯ ಆರ್ಥಿಕ ಜೀವನಾಡಿಯಾದ ಕಾಫಿ, ಅಡಿಕೆ ಬೆಳೆ ನಷ್ಟಕ್ಕೆ ವೈಜ್ಞಾನಿಕ ಮತ್ತು ಆರ್ಥಿಕ ಚೈತನ್ಯ ನೀಡಿಲ್ಲ.
ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕಾಫಿ ಬೆಳೆಗಾರರ ಮೇಲಿನ ತೂಗು ಕತ್ತಿ ಸರ್ಫೇಸಿ ಕಾನೂನು ರದ್ದುಪಡಿಸುವ ಬಗ್ಗೆಯಾಗಲಿ, ಬೇಸಿಗೆ ಮಳೆಗಾಲ ಎಂಬ ವ್ಯತ್ಯಾಸ ಇಲ್ಲದೆ ಮಲೆನಾಡನ್ನು ಕಾಡುವ ವಿದ್ಯುತ್ ಕಡಿತ, ಮಂಗನ ಕಾಯಿಲೆಗೆ ನಿರ್ಣಾಯಕ ಔಷಧಿ, ರೈತ, ಕಾರ್ಮಿಕ ಮತ್ತು ಕಾಡು ಪ್ರಾಣಿಗಳ ಸಂಘರ್ಷ, ಮಲೆನಾಡಿನ ಹಳ್ಳಿಗಳಲ್ಲಿ ವಿರಳ ಸಾರಿಗೆ ಸಂಪರ್ಕ, ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಇಲ್ಲದ ಬಸ್ ವ್ಯವಸ್ಥೆ, ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿದ್ದರೂ ಬಡವರಿಗೆ ಸಿಗದ ನಿವೇಶನ ಭಾಗ್ಯ, ಬಗೆಹರಿಯದ ಫಾರಂ 50, 53 ಮತ್ತು 57. ಮುಕ್ತಿ ಕಾಣದ 94 ಸಿ ಸಮಸ್ಯೆ, ನಿಷ್ಕ್ರಿಯವಾಗಿರುವ ಕಾಫಿ ಮಂಡಳಿ, ಘೋಷಣೆಯಾದರೂ ಅಸ್ತ್ವಿತ್ವಕ್ಕೆ ಬಾರದ ಸ್ಪೈಸ್ ಪಾರ್ಕ್, ಪ್ರವಾಸೋದ್ಯಮಕ್ಕೆ ಅತ್ಯಂತ ಸೂಕ್ತ ಪ್ರದೇಶವಾದರೂ ಟೂರಿಸಂ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ದೊಡ್ಡ ಮಟ್ಟದ ಯೋಜನೆ ಜಾರಿ ಇಲ್ಲದಿರುವುದು. ಪ್ರಗತಿ ಕಾಣದ ರೈಲ್ವೆ ಸಂಪರ್ಕ, ದೇಶದ ಜಿಡಿಪಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿರುವ ಕಾಫಿ, ಅಡಿಕೆ ಬೆಳೆಗಾರರ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಯಾವುದೇ ಯೋಜನೆ ಇಲ್ಲದಿರುವುದು, ಜಿಲ್ಲೆಯಲ್ಲಿ ತುಂಗಾ, ಭದ್ರ, ಹೇಮಾವತಿ, ಯಗಚಿ, ನೇತ್ರಾವತಿ ನದಿ ನಿತ್ಯ ಹರಿದರೂ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ನೀರಿನ ಸಂಕಷ್ಟ, ವಿದ್ಯಾವಂತ ಯುವಕರಿಗೆ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ. ಹೀಗೆ ಹತ್ತು ಹಲವಾರು ಸಮಸ್ಯೆಗಳು ಇದ್ದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಜನಪ್ರತಿನಿಧಿಗಳು ಜಿಲ್ಲೆಯ ಜನತೆಯನ್ನು ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿನಿಧಿಸಿದ್ದರೂ ಸಮಸ್ಯೆ ಬಗೆಹರಿಯದಿರಲು ಕಾರಣವೇನು?.
ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ತಾತ್ಸಾರವೇ ಅಥವಾ ಬದ್ಧತೆ ಇಲ್ಲವೇ?. ನಮ್ಮ ಜನಪ್ರತಿನಿಧಿಗಳಿಗೆ ಆಡಳಿತ ಪಕ್ಷವಾಗಿರುವ ತಮ್ಮದೇ ಪಕ್ಷದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಮಂತ್ರಿಗಳನ್ನು ಗಟ್ಟಿಯಾಗಿ ಕೇಳುವ ರಾಜಕೀಯ ಇಚ್ಛಾಶಕ್ತಿ ಇಲ್ಲವೇ?. ಈ ಮೂರು ಪಕ್ಷದ ಜನಪ್ರತಿನಿಧಿಗಳು ಒಗ್ಗಟ್ಟಿನಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸುತ್ತಿಲ್ಲ ಯಾಕೆ?.
ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ಜ್ವಲಂತ ಬಗೆಹರಿಸಲು ಒಮ್ಮತದಿಂದ ಪ್ರಯತ್ನಿಸಿದರೆ ಜಿಲ್ಲೆಯ ಸಾಕಷ್ಟು ಸಮಸ್ಯೆಗಳು ಬಗೆಹರಿಯಲಿದೆ. ಬಹುತೇಕ ನಮ್ಮ ಜನಪ್ರತಿನಿಧಿಗಳು ಯುವಕರು. ಬಹಳ ದೂರದ ರಾಜಕೀಯ ಭವಿಷ್ಯ ಅವರ ಮುಂದಿದೆ. ಇನ್ನು ಮುಂದಾದರು ರಾಜಕೀಯ ಭಿನ್ನಾಭಿಪ್ರಾಯ ಹೊರತುಪಡಿಸಿ ಜಿಲ್ಲೆಯ ಸಮಸ್ಯೆ ಬಗೆಹರಿಸಿ. ನೀವು ಒಗ್ಗಟ್ಟಾದರೆ ಜಿಲ್ಲೆಯನ್ನು ಕಟ್ಟಲುಬಹುದು. JCB (JDS, CONGRESS, BJP) ಕೈಯಲ್ಲಿ ಜಿಲ್ಲೆಯ Construction ಮತ್ತು Destruction ಇದೆ. ಜಿಲ್ಲೆಯ ಭವಿಷ್ಯದೊಂದಿಗೆ ನಿಮ್ಮ ಭವಿಷ್ಯ ಕೂಡ ಅಡಗಿದೆ.
-ಎಂ.ಯೂಸುಫ್ ಪಟೇಲ್