ಮಂಡಲ್ ವರದಿಯ ಸುತ್ತಮುತ್ತ
ತುರ್ತು ಪರಿಸ್ಥಿತಿಯ ಕಠೋರ ಚರಿತ್ರ ಕಾಲದ ನಂತರ ಮೊತ್ತ ಮೊದಲ ಕಾಂಗ್ರೆಸೇತರ ಸರಕಾರ 1977 ರಲ್ಲಿ ಅಧಿಕಾರ ಪಡೆಯಿತು. ಜನತಾ ಪಕ್ಷದ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಚನದಂತೆ ಅಂದಿನ ಪ್ರಧಾನಮಂತ್ರಿ ಮುರಾರ್ಜಿ ದೇಸಾಯಿ ಅವರು 1978 ರಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಿದರು. ಅವರು 1980ರಲ್ಲಿ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿದರು. ಜನತಾ ಪಕ್ಷದ ಸರಕಾರ ವರದಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದೇ ಅಧಿಕಾರ ಕಳೆದುಕೊಂಡು ಹೊರಬಿದ್ದಿತು.
ಕಾಂಗ್ರೆಸ್ ಮತ್ತೊಮ್ಮೆ 1980ರಲ್ಲಿ ಅಧಿಕಾರಕ್ಕೆ ಬಂದಿತು. ಮಂಡಲ್ ವರದಿಯ ಶಿಫಾರಸನ್ನು ಜಾರಿಗೊಳಿಸಲು ಅನುವಾಗುವಂತೆ, ಕಾಂಗ್ರೆಸ್ ಸರಕಾರ ಸಂಸತ್ತಿನ ಮುಂದೆ ಮಂಡಿಸಿತು. ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ರೀತಿಯ ಪ್ರತಿಭಟನೆ ವ್ಯಕ್ತವಾಯಿತು. ಸರಕಾರ ತನ್ನ ಪ್ರಯತ್ನವನ್ನು ಬದಿಗಿಟ್ಟು ವರದಿಯನ್ನು ಶೈತ್ಯಾಗಾರಕ್ಕೆ ಸೇರಿಸಿತು. ಕಾಂಗ್ರೆಸ್ ಪಕ್ಷಕ್ಕೆ ಮೂರನೇ ಎರಡರಷ್ಟು ದೈತ್ಯ ಸಂಖ್ಯೆಯ ಸಂಸದರ ಬೆಂಬಲವಿದ್ದರೂ ಶಿಫಾರಸನ್ನು ಅನುಷ್ಠಾನಗೊಳಿಸುವ ಕೆಚ್ಚು ಇರಲಿಲ್ಲ; ಮೊದಲನೆಯದು ಕಾಕಾ ಕಾಲೇಲ್ ಕರ್ ವರದಿ ಮತ್ತು ಎರಡನೆಯದು ಬಿ.ಪಿ.ಮಂಡಲ್ ವರದಿ. ಪರಿಣಾಮವಾಗಿ ಹಿಂದುಳಿದ ಜಾತಿಗಳು ತಮ್ಮ ಹಕ್ಕುಗಳಿಂದ ವಂಚಿತರಾಗಿ ಬಸವಳಿದರು.
ಕಾಂಗ್ರೆಸೇತರ ರಾಷ್ಟ್ರೀಯ ರಂಗದ ಎರಡನೆಯ ಸರಕಾರ ವಿ. ಪಿ. ಸಿಂಗ್ ನೇತೃತ್ವದಲ್ಲಿ 1989 ರಲ್ಲಿ ಅಧಿಕಾರಕ್ಕೆ ಬಂದಿತು. ರಾಷ್ಟ್ರೀಯ ರಂಗವೂ ಕೂಡ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಬಿ. ಪಿ. ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿತ್ತು. ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡರು; ಹಾಗೆಯೇ ಸಂಸತ್ತಿನಲ್ಲಿ 1990ರಲ್ಲಿ ವರದಿಯನ್ನು ಅನುಷ್ಠಾನ ಗೊಳಿಸುವುದಾಗಿ ಘೋಷಿಸಿದರು. ಆ ಸಮಯದ ರಾಜಕೀಯ ಸ್ಥಿತಿ ಸಮ್ಮಿಶ್ರ ಸರಕಾರದ್ದಾಗಿತ್ತು. ವಿ.ಪಿ.ಸಿಂಗ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಸರಿಯೇ? ಯಾವುದಾದರೂ ರಾಜಕೀಯ ಒತ್ತಾಯಗಳಿತ್ತೆ? ಅವರ ವಿರುದ್ಧ ಯಾವುದೇ ರಾಜಕೀಯ ಶಕ್ತಿಗಳು ಕೆಲಸ ಮಾಡುತ್ತಿದ್ದವೇ? ಮಂಡಲ ಆಯೋಗದ ಶಿಫಾರಸುಗಳ ಅನುಷ್ಠಾನದಲ್ಲಿ ಅವರಿಗಿದ್ದ ರಾಜಕೀಯ ಒತ್ತಾಯಗಳೇನು? ಈ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದ್ದವು. ಭಾರತೀಯ ಕಿಸಾನ್ ಯೂನಿಯನ್, ಬಹುಜನ ಸಮಾಜ ಪಕ್ಷ ಮತ್ತು ತೆಲುಗು ದೇಶಂ ಪಕ್ಷಗಳು ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ನಿರ್ಣಾಯಕ ಮತ್ತು ದೃಢವಾದ ಪಾತ್ರವನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದವು. ಭಾರತೀಯ ರಾಜಕೀಯ ರಂಗದಲ್ಲಿ ರಾಜಕೀಯ ಅಸಮತೋಲನದ ಅಂಶವನ್ನು ಎದುರಿಸಲು ಮಾಧ್ಯಮಗಳು ದೇವಿಲಾಲ್ ಅವರ ಕಿಸಾನ್ ರಾಲಿ ಮತ್ತು ಸೋಮನಾಥದಿಂದ ಅಯೋಧ್ಯೆವರೆಗೆ ಎಲ್.ಕೆ. ಅಡ್ವಾಣಿ ಅವರ ರಥ ಯಾತ್ರೆಯನ್ನು ಪ್ರಸಿದ್ಧಗೊಳಿಸಿದವು.
ರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿರುವ ರಾಜಕೀಯ ಶಕ್ತಿಗಳ ಅಡಿಯಲ್ಲಿ, ವಿ.ಪಿ.ಸಿಂಗ್ ಅವರು 7 ಆಗಸ್ಟ್, 1990 ರಂದು ಸರಕಾರಿ ಸೇವೆಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ಘೋಷಿಸಿದರು, ಮತ್ತು ಮಂಡಲ್ ವರದಿಯ ಶಿಫಾರಸುಗಳನ್ನೂ ಜಾರಿಗೊಳಿಸಿದರು. ರಾಷ್ಟ್ರೀಯ ರಂಗದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್(ಐ ) ಮತ್ತು ಸಿಪಿಐ(ಎಂ) ವಿ.ಪಿ .ಸಿಂಗ್ ಅವರು ಈ ನಿರ್ಧಾರವನ್ನು ಪ್ರಕಟಿಸುವ ರಾಜಕೀಯ ತುರ್ತು ಅಗತ್ಯವನ್ನು ಪ್ರಶ್ನಿಸಿದವು. ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರು ಪ್ರತಿಭಟಿಸಿ ವಿ. ಪಿ. ಸಿಂಗ್ ಅವರಿಗೆ ತರಾಟೆ ತೆಗೆದುಕೊಂಡರು. ಸದನದ ಹೊರಗೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದು ಸರಕಾರ ತೀವ್ರ ಮುಜುಗರಕ್ಕೆ ಒಳಗಾಯಿತು.
ಅಧಿಕಾರಿಗಳು, ಕಾನೂನು ತಜ್ಞರು, ಪತ್ರಕರ್ತರು, ರಾಜಕಾರಣಿಗಳು ಮತ್ತು ಸಮಾಜ ವಿಜ್ಞಾನಿಗಳು ಮೀಸಲಾತಿ ಕೋಟಾದ ಪರ ಮತ್ತು ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಂಡಲ್ ವರದಿಯ ಶಿಫಾರಸಿನ ಅನುಷ್ಠಾನದಲ್ಲಿ ಹಲವು ಸಮಸ್ಯೆಗಳಿವೆ. ಅವು ತಾಂತ್ರಿಕ, ರಾಜಕೀಯ ಮತ್ತು ಸಾಮಾಜಿಕ ಸ್ವರೂಪದಲ್ಲಿವೆ. ಬಿ.ಕೆ.ರಾಯ್ ಬರ್ಮನ್ ಅವರು ಪರಿಣಿತ ಸಾಮಾಜಿಕ ವಿಜ್ಞಾನಿಗಳಲ್ಲಿ ಒಬ್ಬರಾಗಿ ಮಂಡಲ್ ಆಯೋಗದೊಂದಿಗೆ ಸಂಬಂಧ ಹೊಂದಿದ್ದರು. ‘ಕಾಣೆಯಾದ ದತ್ತಾಂಶ’ ಇರುವುದನ್ನು ಖಂಡಿಸಿ ವರದಿ ನಿರಾಕರಿಸಿದರು. ಅವರಂತೆ ಮತ್ತಿಬ್ಬರು ತಜ್ಞರಾದ ಎಂ.ಎನ್. ಶ್ರೀನಿವಾಸ್ ಮತ್ತು ಯೋಗೇಂದ್ರ ಸಿಂಗ್ ಕೂಡಾ ತಮ್ಮ ಸಲಹೆ ಪಡೆದಿಲ್ಲ ಎಂಬ ಕಾರಣಕ್ಕೆ ವರದಿಯನ್ನು ನಿರಾಕರಿಸಿದ್ದರು.
ಕೆಲವು ಪತ್ರಕರ್ತರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಹಿಂದುಳಿದ ಜಾತಿ’ಯ ಅರ್ಥ ವಿವರಣೆಯನ್ನು ‘ಕೀಳು ಮಟ್ಟ’ ಎಂದು ಅರುಣ್ ಶೌರಿ ಕರೆದಿದ್ದಾರೆ. ಹಿಂದುಳಿದವರನ್ನು ಗುರುತಿಸಲು ಮಂಡಲ್ ಆಯೋಗ ಬಳಸಿರುವ ಜಾತಿ ಮಾನದಂಡವನ್ನು ಪ್ರಶ್ನಿಸಿರುವರು. ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ಘೋಷಣೆ ಭಾರತವನ್ನು ಮಂಡಲ ಮಯವನ್ನಾಗಿಸಿದೆ ಎಂದಿರುವರು. ಎಲ್ಲಾ ಹಂತಗಳಲ್ಲೂ ಒಮ್ಮತ ಮೂಡುವ ಅಗತ್ಯವಿತ್ತು. ಮೀಸಲಾತಿಯೂ ಅಸಮರ್ಥತೆಯನ್ನು ಹೆಚ್ಚಿಸುತ್ತದೆ ಎಂದು ಅಶೋಕ್ ಗುಹಾ ಹೇಳಿದ್ದಾರೆ. ಪರಿಸ್ಥಿತಿಯು ಮುಖಾ ಮುಖಿಯಾಗಿತ್ತು ಮತ್ತು ಅಂಥಾ ಪರಿಸ್ಥಿತಿಯ ಫಲಿತಾಂಶವು ಘೋರವಾಗಿರುತ್ತದೆ ಎಂದು ನಿಖಿಲ್ ಚಕ್ರವರ್ತಿ ಎಚ್ಚರಿಸಿದ್ದರು.
ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ನೀಡಿರುವುದರ ಕುರಿತು ವಿವಿಧ ಹಂತದ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸಿದರು. ದೇಶಾದ್ಯಂತ ಪ್ರತಿಭಟನೆಗಳು, ಹಿಂಸಾಚಾರ, ಬೆಂಕಿ ಹಚ್ಚುವುದು, ಆತ್ಮಾಹುತಿ ಪ್ರಕರಣಗಳು ಮುಂತಾದ ಅಹಿತಕರ ಘಟನೆಗಳು ಜರುಗಿದವು.
1990ರ ಅವಧಿಯಲ್ಲಿ ಮಂಡಲ್ ವರದಿಯ ಶಿಫಾರಸುಗಳನ್ನು ಅನುಷ್ಠಾನ ಗೊಳಿಸಿದ್ದಕ್ಕಾಗಿ ರಾಷ್ಟ್ರೀಯ ರಂಗ ಸರಕಾರದ ನಿರ್ಧಾರದ ವಿರುದ್ಧ ದೇಶಾದ್ಯಂತ ಮುಷ್ಕರಕ್ಕೆ ಕಾರಣವಾಯಿತು.
ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಮತ್ತೊಂದೆಡೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಶುರುವಾದವು. ಒರಿಸ್ಸಾ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ,ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ದಿಲ್ಲಿ, ಮಧ್ಯ ಪ್ರದೇಶ ಮುಂತಾದೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದು ಬೆಂಕಿ ಹಚ್ಚುವಿಕೆ, ಆತ್ಮಾಹುತಿಯಂತಹ ಅನಾಹುತಗಳು ವರದಿಯಾದವು. ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಂತಹ ಶಾಂತಿಯುತ ರಾಜ್ಯಗಳು ಹೊತ್ತಿ ಉರಿದವು. ಸೋಜಿಗವೆಂದರೆ ದಕ್ಷಿಣದ ಯಾವ ರಾಜ್ಯಗಳಲ್ಲೂ ಇಂತಹ ಅಹಿತಕರ ಘಟನೆಗಳು ಕಾಣಿಸಿಕೊಳ್ಳಲಿಲ್ಲ. ತಮಿಳುನಾಡಿನ ಎಂ.ಕರುಣಾನಿಧಿಯವರು ಬೃಹತ್ ಮೆರವಣಿಗೆ ಮೂಲಕ ಮರಿನಾ ಬೀಚ್ ತಲುಪಿ ಅಲ್ಲಿ ತಿರುವರೂರಿನ ದೇವಾಲಯದ ರಥದ ಮಾದರಿಯಲ್ಲಿ ನಿರ್ಮಿಸಿರುವ ವೇದಿಕೆಯಿಂದ ಸಾರ್ವಜನಿಕ ಭಾಷಣ ಏರ್ಪಡಿಸಿ ಸಂಭ್ರಮ ಆಚರಿಸಿದರು. ವಿ.ಪಿ.ಸಿಂಗ್ ಅವರು ಮಂಡಲ್ ವರದಿಯನ್ನು ಜಾರಿಗೊಳಿಸುವ ದಿಟ್ಟ ನಿರ್ಧಾರ ಕೈ ಗೊಂಡಿದ್ದಕ್ಕೆ ಮತ್ತು ಹಿಂದುಳಿದ ವರ್ಗಗಳ ಸಂರಕ್ಷಕನೆಂದು ಅವರನ್ನು ವೈಭವೀಕರಿಸಲು ಸುಮಾರು 50 ಲಕ್ಷ ರೂ. ವೆಚ್ಚ ವಾದದ್ದು ಕಾರ್ಯಕ್ರಮದ ಅಗಾಧತೆ ಎಷ್ಟಿತ್ತು ಎಂಬುದನ್ನು ತೋರಿಸುತ್ತದೆ.
ಮೀಸಲಾತಿ ಅನುಷ್ಠಾನದಿಂದ ದೊಡ್ಡ ಪ್ರಮಾಣದ ಚಳವಳಿಯನ್ನು ರೂಪಿಸಿದವರು ಅದರಿಂದ ರಾಜಕೀಯ ಬಂಡವಾಳವನ್ನು ಪಡೆಯಲು ಬಯಸಿದ್ದರು ಎಂಬುದು ಸುಳ್ಳಲ್ಲ. ಪ್ರತಿಭಟನೆಯ ಸಂದರ್ಭದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಾಹುತಿಗೆ ಶರಣಾದರು ಎಂಬುದೇ ಖೇದಕರ. ಅವರೆಲ್ಲರೂ 16 ರಿಂದ 25 ವರ್ಷ ವಯಸ್ಸಿನವರು. ಮೇಲಾಗಿ ಹಿಂದುಳಿದವರು ಅಂದರೆ ಯಾರು? ಎಂಬುದನ್ನೇ ಅರಿಯದ ಮುಗ್ಧರವರು. ಅಂತಿಮವಾಗಿ ಈ ನಿರ್ಧಾರವು ಮುಂದುವರಿದ ಮತ್ತು ಹಿಂದುಳಿದ ಜಾತಿಗಳ ನಡುವೆ ಸಾಮಾಜಿಕ ಬಿರುಕುಗಳನ್ನು ಸೃಷ್ಟಿಸಿತು ಎಂಬ ಮಾತನ್ನು ಅಲ್ಲಗಳೆಯಲಾಗುವುದಿಲ್ಲ. ಮಂಡಲ್ ವರದಿಯು ಮೀಸಲಾತಿ ವಿರುದ್ಧದ ಹೋರಾಟಕ್ಕಿಂತ ಹೆಚ್ಚಿನದಾಗಿದೆ ಎಂಬ ಅಂಶವು ಅರಾಜಕತೆಗೆ ಕಾರಣವಾಗಿದೆ ಎಂದು ಕೆ.ಎಂ. ಪಣ್ಣಿಕರ್ ಹೇಳಿದರು. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿನ ಪ್ರತಿಕ್ರಿಯೆಯು ತುಂಬಾ ಪ್ರಬಲವಾಗಿತ್ತು .ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಸಾಕಷ್ಟು ಅನಕ್ಷರಸ್ಥರಿರುವಾಗ ಅವರು ಸರಕಾರಿ ಸೇವೆಯಲ್ಲಿ ಉದ್ಯೋಗದ ಕನಸು ಕಾಣುವುದು ಹೇಗೆ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಬೆಳೆಯಿತು.
ಮಂಡಲ್ ವರದಿ ಅನುಷ್ಠಾನದ ಬಗ್ಗೆ ಖ್ಯಾತ ಪತ್ರಕರ್ತರು, ಸಮಾಜ ವಿಜ್ಞಾನಿಗಳು ಮತ್ತು ನ್ಯಾಯವಾದಿಗಳು ಅವರದೇ ಆದ ವಿಭಿನ್ನ ದೃಷ್ಟಿಕೋನ ಗಳಿಂದ ಟೀಕಿಸಿರುವರು. ಅವರಲ್ಲಿ ಪ್ರಮುಖರು- ಅರುಣ್ ಶೌರಿ, ಬಿ.ಕೆ. ರಾಯ್ , ಎಸ್. ಎಸ್. ಗಿಲ್, ಅನಿಕೇಂದ್ರನಾಥ್ ಸೇನ್, ಕುಲದೀಪ್ ಕುಮಾರ್, ಅಶೋಕ್ ಗುಹಾ, ಕೆ. ವಿ. ರಾಮನಾಥನ್, ಎಂ. ವಿ. ಕಾಮತ್, ನಿಖಿಲ್ ಚಕ್ರವರ್ತಿ, ಪಾಲ್ಕಿ ವಾಲಾ, ಎಚ್. ಎಂ. ಸೀರ್ವೈ, ವಿನೋದ್ ಶರ್ಮ, ದೀಪಂಕರ್ ಗುಪ್ತಾ, ಎಂ. ಎನ್. ಶ್ರೀನಿವಾಸ್, ಧರ್ಮವೀರ ಮುಂತಾದವರು.
ಹಾಗೆಯೇ, ಪ್ರಧಾನ ಮಂತ್ರಿ ಘೋಷಣೆಯ ನಿರ್ಧಾರವನ್ನು ಅಭಿನಂದಿಸಿದ ಪಿ. ಶಿವಶಂಕರ್ ಮತ್ತು ಮಾಧವ ಸಿಂಗ್ ಸೋಲಂಕಿ (ಕಾಂಗ್ರೆಸ್ ಐ), ರಾಮ್ ಅವಧೇಶ್ ಸಿಂಗ್(ಎಲ್.ಡಿ), ಖಲೀಲುರ್ ರಹಮಾನ್ (ಐಡಿಪಿ), ಎಸ್.ಪಿ.ಮಾಳವಿಯ(ಜೆ.ಡಿ), ಈ ಎಲ್ಲಾ ಸದಸ್ಯರು ವಿವಿಧ ಪಕ್ಷಕ್ಕೆ ಸೇರಿದ ಮತ್ತು ಬಹುತೇಕ ಹಿಂದುಳಿದ ವರ್ಗಗಳಿಗೆ ಸೇರಿದವರು.
ಅಕ್ಟೋಬರ್ 30ರಂದು ವಿವಾದಿತ ರಾಮ ಜನ್ಮಭೂಮಿ- ಬಾಬರಿ ಮಸೀದಿ ಸಂಕೀರ್ಣದ ಮೇಲೆ ಕರ ಸೇವೆ ನಡೆಯಲಿದೆ ಎಂದು ಎಲ್.ಕೆ.ಅಡ್ವಾಣಿ ಅವರು ರಥಯಾತ್ರೆ ಹೊರಟಾಗ ವಿ.ಪಿ.ಸಿಂಗ್ ಅವರಿಗೆ ಸಮಯ ಮೀರುತ್ತಿದೆ ಎಂಬುದು ಸ್ಪಷ್ಟವಾಯಿತು.
ಅಡ್ವಾಣಿಯವರನ್ನು ಅಂತಿಮವಾಗಿ ಅಕ್ಟೋಬರ್ 23 ರಂದು ಸಮಷ್ಟಿ ಪುರದಲ್ಲಿ ಲಾಲು ಯಾದವ್ ಬಂಧಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಕೊಲ್ಕತಾದಿಂದ ದಿಲ್ಲಿಗೆ ಹಿಂದಿರುಗಿದರು ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ವಿ.ಪಿ.ಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂದೆೆಗೆದುಕೊಂಡರು.
ಲೋಕಸಭೆಯಲ್ಲಿ ವಿ.ಪಿ.ಸಿಂಗ್ ಅವರು ವಿಶ್ವಾಸಮತವನ್ನು ಕಳೆದುಕೊಳ್ಳುತ್ತಾರೆ ಎಂಬುದು ಮುಂಚಿತವಾಗಿ ತೀರ್ಮಾನವಾಗಿ ಹೋಗಿತ್ತು. ಹಾಗೆಯೇ ಆಯಿತು. ಮುಂದೆ ಚಂದ್ರಶೇಖರ್ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಅಖಿಲ ಭಾರತ ಮೀಸಲಾತಿ ವಿರೋಧಿ ಮೋರ್ಚಾದ ಅಧ್ಯಕ್ಷ ಉಜ್ಜಲ್ ಸಿಂಗ್ ಒಕ್ಕೂಟ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸುವರು. ಅಂಥದ್ದೇ ಮನವಿಯೊಂದನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲೂ ಸಲ್ಲಿಸಲಾಗಿತ್ತು. ಹೀಗೆ ದೇಶದ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ರಿಟ್ ಅರ್ಜಿಗಳು ಸಲ್ಲಿಕೆಯಾದವು.
1991ರ ಮೊದಲಾರ್ಧದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಕೇಂದ್ರದಲ್ಲಿ ಸರಕಾರವು ಬದಲಾಯಿತು. ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠ ಈ ವಿಷಯದ ಬಗ್ಗೆ ಹೊಸ ಸರಕಾರದ ಸ್ಪಷ್ಟ ನಿಲುವನ್ನು ತಿಳಿಯಲು ಪ್ರಯತ್ನಿಸಿತು. ಆಗಸ್ಟ್ 13,1990 ಜ್ಞಾಪಕ ಪತ್ರವನ್ನು ಕೆಲವು ಮಾರ್ಪಾಡು ಗಳೊಂದಿಗೆ ಕಾರ್ಯಗತಗೊಳಿಸಲು ಸರಕಾರವು ತನ್ನ ಉದ್ದೇಶವನ್ನು ತಿಳಿಸಿ, ಸೆಪ್ಟಂಬರ್ 29,1991ರಂದು ಮತ್ತೊಂದು ಜ್ಞಾಪಕವನ್ನು ಹೊರಡಿಸುವ ಮೂಲಕ ಹಿಂದಿನ ಜ್ಞಾಪಕ ಪತ್ರವನ್ನು ಮಾರ್ಪಡಿಸಿತು. ಅದು ’ಕೆನೆ ಪದರ’ದವರನ್ನು ಮೀಸಲಾತಿಯಿಂದ ಹೊರಗಿಡುವ ಅಧಿಕೃತ ಜ್ಞಾಪನವಾಗಿತ್ತು. ಅದೂ ಅಲ್ಲದೆ, ಆರ್ಥಿಕ ದುರ್ಬಲ ವರ್ಗದವರಿಗೂ ಶೇ.10ರಷ್ಟು ಮೀಸಲಾತಿ ನೀಡಿ ಯಾವುದೇ ವಿಧದ ಮೀಸಲಾತಿಗೆ ಒಳಪಡದವರಿಗಾಗಿ ಮತ್ತೊಂದು ಅಧಿಕೃತ ಜ್ಞಾಪನವನ್ನು ಹೊರಡಿಸಿತು.
ರಿಟ್ ಅರ್ಜಿಗಳ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದು, ಹಿಂದಿನ ತೀರ್ಪುಗಳು ಏಕ ರೀತಿಯಲ್ಲಿ ಇಲ್ಲದ್ದನ್ನು ಗಮನಿಸಿ, ವಿಚಾರಣೆಯನ್ನು 9 ಮಂದಿ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಯಿತು. ಅದೇ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಸಲ್ಲಿಸಿದ ಮನವಿ ಮೇರೆಗೆ ಐದು ಮಂದಿ ನ್ಯಾಯಾಧೀಶರ ಪೀಠವು ಅಕ್ಟೋಬರ್ 1, 1990ರಂದು ಕೇಂದ್ರ ಸರಕಾರ ಹೊರಡಿಸಿದ್ದ ಆಗಸ್ಟ್ 13,1990ರ ಅಧಿಕೃತ ಜ್ಞಾಪನಕ್ಕೆ ಅಂತಿಮ ತೀರ್ಪು ಹೊರ ಬರುವವರೆಗೆ ಜಾರಿಯಲ್ಲಿ ಇರುತ್ತದೆ ಎಂದು ತಡೆಯಾಜ್ಞೆ ವಿಧಿಸಿತು.
ಒಂಭತ್ತು ಮಂದಿ ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆದು ಪ್ರಶ್ನಿತ ಆಗಸ್ಟ್ 13, 1990 ಅಧಿಕೃತ ಜ್ಞಾಪನದ ಸಂವಿಧಾನ ಬದ್ಧತೆ, ನ್ಯಾಯ ಸಮ್ಮತತೆ ಮತ್ತು ಜಾರಿಗೊಳಿಸುವಿಕೆ ಕುರಿತು ನ್ಯಾಯಪೀಠ 4: 2:3ರ ಅನುಪಾತದಂತೆ ಅನುಸರಿಸಬೇಕಾದ ಕೆಲವು ನಿರ್ದೇಶನಗಳನ್ನು ನೀಡಿ ಸರಕಾರದ ಜ್ಞಾಪಕ ಪತ್ರವನ್ನು ನವೆಂಬರ್ 16,1992ರ ತೀರ್ಪಿನಲ್ಲಿ ಎತ್ತಿ ಹಿಡಿಯಿತು. ಈ ತೀರ್ಪು ಹಿಂದುಳಿದ ವರ್ಗಗಳ ಪಾಲಿಗೆ ಐತಿಹಾಸಿಕ ವೆನಿಸಿದೆ. ಆದರೆ ಆರ್ಥಿಕ ದುರ್ಬಲರಿಗಾಗಿ ನೀಡಿದ್ದ ಶೇ.10ರ ಮೀಸಲಾತಿಯ ಸೆಪ್ಟಂಬರ್ 25,1991ರ ಅಧಿಕೃತ ಜ್ಞಾಪನವನ್ನು ಸಂವಿಧಾನ ವಿರೋಧಿ ಎಂದು ಘೋಷಿಸಿತು.
ಒಕ್ಕೂಟ ಸರಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ, 1993 ಅನ್ನು ಆಗಸ್ಟ್ 14,1993 ರಂದು ಜಾರಿಗೆ ತಂದು ಶಾಶ್ವತ ಆಯೋಗವನ್ನು ರಚಿಸಿತು( ಈ ಕಾಯ್ದೆ ಸಂವಿಧಾನದ 102ನೇ ತಿದ್ದುಪಡಿಯಲ್ಲಿ ರದ್ದಾಗಿ, ಸಂಬಂಧಿಸಿದ ನೀತಿ ನಿಯಮಗಳನ್ನು ಅನುಚ್ಛೇದ 338 ಬಿ ಯಲ್ಲಿ ಹೇಳಲಾಗಿದೆ). ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಯೋಗ ರಚನೆ ಮಾಡುವುದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುವುದು. ಅವುಗಳೆಲ್ಲವೂ ಆಯೋಗವನ್ನು ರಚಿಸಿವೆ.
ಒಕ್ಕೂಟ ಸರಕಾರ 9ನೇ ಯೋಜನೆ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಕೆಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಅಗತ್ಯ ಕ್ರಮ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅವಕಾಶ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುವಾಗುವಂತೆ ವೈಯಕ್ತಿಕ ತರಬೇತಿ ನೀಡಲು ಅಗತ್ಯ ಕ್ರಮ, ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕ್ರಮ ಕೈಗೊಂಡು ಆ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಮತ್ತು ಹಿಂದುಳಿದ ವರ್ಗಗಳ ನಾಗರಿಕರಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಪೂರಕವಾಗುವಂತೆ ಕೈಗೊಂಡ ಸರಕಾರದ ಕ್ರಮಗಳು ಹಿಂದುಳಿದ ವರ್ಗಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ಪ್ರಗತಿ ಹೊಂದಲು ಸಹಾಯಕವಾಗಿದೆ.
ಮಂಡಲ್ ಆಯೋಗದ ವರದಿ ಅನುಷ್ಠಾನಗೊಳಿಸಿ, ಹಿಂದುಳಿದ ವರ್ಗಗಳ ಬಾಳಿಗೆ ಭಾಗ್ಯದ ಬಾಗಿಲನ್ನು ತೆರೆದ ವಿ.ಪಿ.ಸಿಂಗ್ ಅವರನ್ನು ರಾಜಕೀಯ ಬಲಿ ಪಶುವಾಗುವಂಥ ಪರಿಸ್ಥಿತಿ ನಿರ್ಮಿಸಿದ್ದುದು ರಾಜಕಾರಣಿಗಳ ಕುಟಿಲ ಕಾರಾಸ್ಥಾನಕ್ಕೆ ಸಾಕ್ಷಿಯಾಗಿದೆ.