ವರ್ಷ ಕಳೆದಂತೆ ಕಾವೇರಿ ಮಡಿಲು ವಿಷಕಾರಿ!
►ಉಪನದಿಗಳ ಕಲುಷಿತಕ್ಕೆ ಆಹುತಿಯಾದ ಕಾವೇರಿ! ►ವೃಷಭಾವತಿ ಕಲುಷಿತ; ಮಲಿನಕಾರಕಗಳ ಹಬ್ ಆಯ್ತು ರಾಜಧಾನಿ

ಬೆಂಗಳೂರು: ಹೇಮಾವತಿ, ಕಬಿನಿ, ಅರ್ಕಾವತಿ ನದಿಗಳಿಂದ ಅಪಾಯಕಾರಿ ಮಟ್ಟದ ರಾಸಾಯನಿಕಗಳು, ಕೈಗಾರಿಕಾ ಮಾಲಿನ್ಯಕಾರಕಗಳು ಕಾವೇರಿ ನದಿಯನ್ನು ಸೇರುತ್ತಿದ್ದು, ಮುಂಬರುವ ದಿನಗಳಲ್ಲಿ ಕಾವೇರಿ ನದಿಯ ಸ್ಥಿತಿಯಿಂದ ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಹಾನಿಯುಂಟಾಗುವ ಭೀತಿ ಎದುರಾಗಿದೆ ಎಂದು ಪರಿಸರ ವಿಜ್ಞಾನಿ ಡಾ.ಶರಚ್ಚಂದ್ರ ಲೇಲೆ ‘ವಾರ್ತಾ ಭಾರತಿ’ ಜೊತೆಗೆ ಕಳವಳ ಹಂಚಿಕೊಂಡಿದ್ದಾರೆ.
ಅರ್ಕಾವತಿ ನದಿಯು ಮಲಿನಯುಕ್ತವಾಗಿದ್ದು, ರಾಸಾಯನಿಕಗಳು, ಕೀಟನಾಶಕಗಳು ಮತ್ತು ಭಾರ ಲೋಹಗಳು ನದಿಯಲ್ಲಿ ಅಪಾಯಕಾರಿ ಮಟ್ಟವನ್ನು ಮೀರಿದ್ದು, ಕೀಟನಾಶಕಗಳಿಗೆ ಸಂಬಂಧಿಸಿದಂತೆ ಹೆಪ್ಟಾಕ್ಲೋರ್ ಮತ್ತು ಡಿಡಿಟಿಯಂತಹ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾನಿಕಾರಕ ವಸ್ತುಗಳು ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ ಮಾರ್ಗಸೂಚಿಗಳಿಗಿಂತ 25,022 ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿವೆ ಎಂದು ವರದಿ ಪತ್ತೆ ಹಚ್ಚಿದೆ.
ಇದರ ಉಪನದಿಯಾದ ವೃಷಭಾವತಿಯ ಉದ್ದಕ್ಕೂ 7 ಸ್ಥಳಗಳಿಂದ ಮಾಲಿನ್ಯ ಮಾದರಿಗಳನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಿದ ಬಳಿಕ 65 ನೀರಿನ ಮಾದರಿ ಮತ್ತು 20 ಕೆಸರು ಮಾಲಿನ್ಯಯುಕ್ತ ಮಾದರಿಗಳನ್ನು 2024ರ ಅವಧಿಯಲ್ಲಿ ಶುದ್ಧ ನೀರಿಗಾಗಿ ಅಂತರ್‌ರಾಷ್ಟ್ರೀಯ ಕೇಂದ್ರದ ಸಹಯೋಗದೊಂದಿಗೆ ಈ ಅಧ್ಯಯನವನ್ನು Paani.Earth ಸಂಸ್ಥೆ ನಡೆಸಿದೆ.
ರಾಜಧಾನಿ ಈಗ ‘ಮಲಿನಕಾರಕಗಳ ಹಬ್’!?:
ಮಲ್ಲೇಶ್ವರಂ ಮತ್ತು ಬುಲ್ ಟೆಂಪಲ್ ಭಾಗದಿಂದ ವೃಷಭಾವತಿ ನದಿಯ ಉಗಮವಾಗಿದೆ. ಅಲ್ಲಿಂದ ಹರಿಯುತ್ತಾ ಕೆಂಗೇರಿ ಸೇರಿ ಮುಂದೆ ಭೈರಮಂಗಲ ಕೆರೆ ಸೇರಿ ಅಲ್ಲಿಂದ ಅರ್ಕಾವತಿ ನದಿಯನ್ನು ಸೇರುತ್ತದೆ. ಅಲ್ಲಿಂದ ಈ ಎರಡು ನದಿಗಳ ನೀರು 40 ಕಿ.ಮೀ. ಹರಿದು ಕಾವೇರಿ ನದಿಯನ್ನು ಸೇರುತ್ತದೆ. ಬೆಂಗಳೂರಿನಲ್ಲಿ ಜನ ಸಂಖ್ಯಾ ಪ್ರಮಾಣ ಹೆಚ್ಚಾದಂತೆ ವೃಷಭಾವತಿ ನದಿಯಲ್ಲಿ ಬೇಸಿಗೆ ಕಾಲದಲ್ಲಿ ಮಲಿನ ಪ್ರಮಾಣ ಹೆಚ್ಚಾಗುತ್ತಿದೆ.
ಅಲ್ಲದೆ, ಬೆಂಗಳೂರಿನ ಮನೆಗಳ ತಾಜ್ಯ ವಸ್ತುಗಳೆಲ್ಲವೂ ಕೂಡ ಇದೇ ನದಿಯಿಂದ ಹಾದುಹೋಗುತ್ತಿದೆ. ದಿನದಿಂದ ದಿನಕ್ಕೆ ಪೀಣ್ಯ ಕೈಗಾರಿಕಾ ವಲಯದಿಂದ ಬರುತ್ತಿರುವ ಕೈಗಾರಿಕಾ ಮಾಲಿನ್ಯಕಾರಕಗಳು ವೃಷಭಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದರಿಂದ ದಿನಕ್ಕೆ 600ರಷ್ಟು ದಶಲಕ್ಷ ಲೀ. ಬರೀ ಕೊಳೆ ನೀರು ಹರಿಯುವಿಕೆಯಾಗುತ್ತಿದೆ. ಕೆನಡಾದ ಕೆಸರಿನ ಗುಣಮಟ್ಟದ ಮಾರ್ಗಸೂಚಿಗಳಿಗಿಂತ 26 ಪಟ್ಟು ಹೆಚ್ಚಿನ ಮಟ್ಟದಲ್ಲಿ ಅರ್ಕಾವತಿಯಲ್ಲಿನ ಕೆಸರಿನಲ್ಲಿ ಕಂಡುಬಂದಿದೆ. ಡೈಬೆನ್ಜ್, ಆಂಥ್ರಾಸೀನ್‌ನಂತಹ ಕೈಗಾರಿಕಾ ದಹನದಿಂದ ಉಂಟಾಗುವ ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ ಮಾರ್ಗಸೂಚಿಗಳಿಗಿಂತ 3,076 ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ. ಒಟ್ಟಾರೆ ನೋಡುವುದಾದರೆ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಗೆ ಮುಂದಾಗಿರುವ ಸರಕಾರ ಮೊದಲು ‘ಮಲಿನಕಾರಕಗಳ ಹಬ್’ನಂತಾಗುತ್ತಿರುವ ನಗರವನ್ನು ನಿರ್ಮಲಗೊಳಿಸುವ ಅನಿವಾರ್ಯತೆಯಿದೆ.
ಸರಿಯಾದ ಸಂಸ್ಕರಣಾ ಘಟಕಗಳು ಇಲ್ಲ!
ಅಧ್ಯಯನದ ಪ್ರಕಾರ, 1984ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಮೊದಲ ಸಂಸ್ಕರಣಾ ಘಟಕ ದೊಡ್ಡದಿದ್ದರೂ ಮನೆಗಳಿಂದ ಬರುವ ತ್ಯಾಜ್ಯ ನೀರುಗಳು ಸೇರಲು ಸರಿಯಾದ ವ್ಯವಸ್ಥೆಯನ್ನು ಹೊಂದಿಲ್ಲ. ಅಲ್ಲದೆ, ಸಂಸ್ಕರಣಾ ಘಟಕಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕೆಂಗೇರಿ ಉಪನಗರ ಆಗಿ 50 ವರ್ಷವಾದರೂ 2 ವರ್ಷಗಳ ಹಿಂದೆಯಷ್ಟೇ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿವೆ. ಮಲಿನಗೊಂಡಿರುವ ವೃಷಭಾವತಿ ನದಿಯ ನೀರನ್ನೇ ಮತ್ತೆ ಸಂಸ್ಕರಣೆ ಮಾಡಿ ಪುನಃ ನದಿಗೆ ಬಿಡುತ್ತಿದ್ದಾರೆ. ಇದರಿಂದ ನೀರು ಶುದ್ಧೀಕರಣಗೊಳ್ಳುವುದಿಲ್ಲ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎನ್ನುತ್ತಾರೆ ಡಾ.ಶರಚ್ಚಂದ್ರ ಲೇಲೆ.
ಹಾಲು, ಜೋಳದಲ್ಲಿ ವಿಷ!
ವೃಷಭಾವತಿ ನದಿಯಲ್ಲಿ ಸಾಗುವಳಿಗಾಗಿ ಕಟ್ಟಿರುವ ಭೈರಮಂಗಲ ಕೆರೆಯ ನೀರಿನಿಂದ ಅಲ್ಲಿನ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದರು. ಆದರೆ, ಈಗಿನ ಕೊಳಚೆ ನೀರಿನಿಂದಾಗಿ ಈ ಬೆಳೆಯನ್ನು ಕೈಬಿಟ್ಟು ಜೋಳ, ತೆಂಗಿನ ತೋಟ, ಜಾನುವಾರುಗಳಿಗೆ ಮೇವುಗಳನ್ನು ಬೆಳೆಸುತ್ತಿದ್ದಾರೆ. ಅಪಾಯಕಾರಿ ರಾಸಾಯಕ ನೀರಿನಿಂದ ರೈತರು ಬೆಳೆಯುವ ಮೇವು ಹೈನುಗಾರಿಕೆ ನಡೆಸುವವರು ತಮ್ಮ ಹಸುಗಳಿಗೆ ಹಾಕಿದಾಗ ಅದನ್ನು ತಿನ್ನುವ ದನಗಳ ಹಾಲಿನಲ್ಲಿ ಕೂಡ ವಿಷ ಅಂಶ ಒಳಗೊಂಡಿದೆ ಮಾತ್ರವಲ್ಲದೆ, ಈ ಹಾಲು ಅಲ್ಲಿನ ಪರಿಸರ ಡೈರಿಯನ್ನು ಸೇರುತ್ತಿದೆ. ಇದರಿಂದ ಜನರ ಆರೋಗ್ಯ ಹದಗೆಡುವ ಸಾಧ್ಯತೆ ಇರಲಿದೆ. ಅಲ್ಲದೇ, ಅಲ್ಲಿನ ರೈತರು ಬೆಳೆಯುವ ಜೋಳವನ್ನು ಪರೀಕ್ಷಿಸಿದಾಗಲೂ ಮಲಿನ ರಾಸಾಯನಿಕ ಅಂಶ ಕಂಡು ಬಂದಿದೆ ಎನ್ನುತ್ತಾರೆ ಪರಿಸರ ವಿಜ್ಞಾನಿ ಡಾ.ಶರಚ್ಚಂದ್ರ ಲೇಲೆ.
ಅಂತರ್ಜಾಲ ಸೇರುತ್ತಿರುವ ಮಲಿನ ನೀರು!
ನದಿಗೆ ಸೇರುತ್ತಿರುವ ಈ ಅಪಾಯಕಾರಿ ಮಲಿನ ನೀರು ಕೆಲವು ಪ್ರಮಾಣದಲ್ಲಿ ಅಂತರ್ಜಾಲವನ್ನು ಸೇರುವ ಸಾಧ್ಯತೆ ಇರಲಿದೆ. ಇದು ಯಾವ ಪ್ರದೇಶವನ್ನು ಕ್ರಮಿಸಲಿದೆ ಎಂದು ಹೇಳಲು ಕಷ್ಟ ಎನಿಸಬಹುದು. ಬೊರ್‌ವೇಲ್‌ಗಳಲ್ಲೂ ಈ ವಿಷಕಾರಿ ರಾಸಾಯನಿಕ ಅಂಶ ಕಂಡುಬರುವ ಲಕ್ಷಣವಿದೆ ಎಂದು ಪರಿಸರ ವಿಜ್ಞಾನಿ ಡಾ.ಶರಚ್ಚಂದ್ರ ಲೇಲೆ ಹೇಳುತ್ತಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ವೈಫಲ್ಯ
ಕೈಗಾರಿಕಾ ವಲಯಗಳಿಂದ ಹೊರಹೊಮ್ಮುವ ಮಾಲಿನ್ಯಕಾರಕಗಳ ಮಟ್ಟವನ್ನು ಇದುವರೆಗೂ ನದಿಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿಲ್ಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನೀರಿನ ಗುಣಮಟ್ಟದ ಮೇಲ್ವಿಚಾರಣಾ ಮಾರ್ಗಸೂಚಿಗಳ ಉಲ್ಲಂಘನೆ, ಮಾಲಿನ್ಯಕಾರಕ ಮೂಲಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸುತ್ತಾರೆ ಪರಿಸರ ವಿಜ್ಞಾನಿ ಡಾ.ಶರಚ್ಚಂದ್ರ ಲೇಲೆ.
3 ಜಿಲ್ಲೆಗಳಲ್ಲಿ ರಾಸಾಯನಿಕ ನೀರು ಹರಿವು!
ವೃಷಭಾವತಿ ನದಿ ಬೆಂಗಳೂರು ನಗರದಿಂದ ಬೆಂಗಳೂರು ಗ್ರಾಮಾಂತರವನ್ನು ಹಾದುಕೊಂಡು ರಾಮನಗರ ಸೇರಿ ಬಳಿಕ ಕಾವೇರಿಯನ್ನು ಸೇರುತ್ತಿದೆ. ಈ ನಡುವೆ ಮಲಿನಯುಕ್ತವಾಗಿರುವ ನದಿ ಸಮೀಪವಿರುವ ಮನೆಗಳಿಗೆ ವಿಪರೀತ ದುರ್ವಾಸನೆ ತಗುಲಿ, ಕ್ಯಾನ್ಸರ್, ಡೆಂಗ್ಯೂ, ಮಲೆರಿಯಾದಂತಹ ಸಾಂಕ್ರಾಮಿಕಗಳು ಬರುವ ಸಾಧ್ಯತೆ ಇರಲಿದೆ. ಈ ನಿಟ್ಟಿನಲ್ಲಿ ಜನರ ಹಿತದೃಷ್ಟಿಯಿಂದ ಸರಕಾರ ಮಹತ್ವದ ಹೆಜ್ಜೆಯನ್ನಿಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಡಾ.ಶರಚ್ಚಂದ್ರ ಲೇಲೆ.