ಮರೆಯಲಾಗದ ರಾಜನೀತಿಜ್ಞ ಬಿ. ಸುಬ್ಬಯ್ಯ ಶೆಟ್ಟಿ

ಹುಬ್ಬಳ್ಳಿಯ ವರಕವಿ ಡಾ. ದ.ರಾ. ಬೇಂದ್ರೆ ಪ್ರತಿಷ್ಠಾನದ ಸದಸ್ಯರು 2025ರ ಫೆ.20ರಂದು ಬಿ. ಸುಬ್ಬಯ್ಯ ಶೆಟ್ಟಿ ಅವರ ಬೆಂಗಳೂರಿನ ನಿವಾಸಕ್ಕೆ ಬಂದು ಮಹಾನ್ ಮಾನವ ಶ್ರೇಷ್ಠ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಕ್ರಬೈಲು ಗ್ರಾಮದ ಬಿ. ಸುಬ್ಬಯ್ಯಶೆಟ್ಟಿ (4.2.1934- 10.3.2025) ಅವರನ್ನು ನಾನು 1975ರಿಂದ ಬಲ್ಲೆ. 1975ರಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ವಿದ್ಯಾರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿ ಹುಬ್ಬಳ್ಳಿಯ ರೈಲು ನಿಲ್ದಾಣ ಬಳಿಯ ಎ.ಕೆ. ಇಂಡಸ್ಟ್ರೀಸ್ ಆವರಣದಲ್ಲಿ ಫ್ಯಾಸಿಸ್ಟ್ ವಿರೋಧಿ ಸಮಾವೇಶವನ್ನು ಏರ್ಪಡಿಸಿದ್ದವು. ಅದಾಗಲೇ ಚಿಲಿಯ ರಾಷ್ಟ್ರಪತಿ ಅಲೆಂಡೆ ಮತ್ತು ಬಾಂಗ್ಲಾ ದೇಶದ ಅಧ್ಯಕ್ಷ ಮುಜೀಬುರ್ರಹ್ಮಾನ್ ಮುಂತಾದ ಫ್ಯಾಸಿಸ್ಟ್ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ನಾಯಕರ ಕೊಲೆಯಾಗಿತ್ತು. ಚಿಲಿಯ ನೊಬೆಲ್ ಪ್ರಶಸ್ತಿ ವಿಜೇತ ಸಮಾಜವಾದಿ ಕವಿ ಪಾಬ್ಲೊ ನೆರುದಾ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು. ಜಾಗತಿಕ ವಾತಾವರಣದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಬೆಳೆಯತೊಡಗಿದ್ದವು. ಈ ಹಿನ್ನೆಲೆಯಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಸರಕಾರ, ಸಿಪಿಐ ಹಾಗೂ ಇತರ ಫ್ಯಾಸಿಸ್ಟ್ ವಿರೋಧಿ ಸಂಘಟನೆಗಳು ಸೇರಿ ಸಮಾವೇಶವನ್ನು ಭಾರೀ ವ್ಯವಸ್ಥೆಯೊಂದಿಗೆ ಏರ್ಪಡಿಸಿದ್ದವು.
ಈ ಸಮಾವೇಶಕ್ಕೆ ಸಂಬಂಧಿಸಿದ ಸಿದ್ಧತಾ ಸಮಿತಿ ಸಭೆಗೆ ಬೆಂಗಳೂರಿನಿಂದ ಸಚಿವರಾದ ಕೆ.ಎಚ್.ರಂಗನಾಥ್ ಮತ್ತು ಸುಬ್ಬಯ್ಯಶೆಟ್ಟರು ಬರುತ್ತಿದ್ದರು. ಸಿದ್ಧತಾ ಸಮಿತಿ ಸಭೆಯ ಸದಸ್ಯನಾಗಿ ನಾನೂ ಇದ್ದ ಕಾರಣ ನಮ್ಮ ಭೇಟಿ ಪದೇ ಪದೇ ಆಗುತ್ತಿತ್ತು. ಹೀಗೆ ಸುಬ್ಬಯ್ಯ ಶೆಟ್ಟರ ಪರಿಚಯವಾಯಿತು. ಅವರ ಚಾಕಚಕ್ಯತೆ, ಫ್ಯಾಸಿಸ್ಟ್ ಕ್ರೌರ್ಯದ ಬಗ್ಗೆ ಇದ್ದ ಅವರ ಆಳವಾದ ಜ್ಞಾನ ಮತ್ತು ಸಂಘಟನಾ ಶಕ್ತಿ ನನ್ನ ಮೇಲೆ ಪರಿಣಾಮ ಬೀರಿದವು. ನಂತರ 1976ರಲ್ಲಿ ನಾನು ಬೆಂಗಳೂರು ಸೇರಿದ ನಂತರ ಕೆ.ಎಚ್. ರಂಗನಾಥ ಸಾಹೇಬರ ಸರ್ಕಾರಿ ಗೃಹದಲ್ಲಿ ಉಳಿದುಕೊಂಡೆ. ಈ ಇಬ್ಬರೂ ಸಚಿವರು ಬಹಳ ಆತ್ಮೀಯರಾಗಿದ್ದರಿಂದ ನಮ್ಮ ಭೇಟಿ ಪದೇ ಪದೇ ಆಗುತ್ತಿತ್ತು. ನಾವು ವೈಚಾರಿಕವಾಗಿಯೂ ಹೆಚ್ಚು ಹತ್ತಿರದವರಾದೆವು.
ಹಿನ್ನೆಲೆ: ಬಿ. ಸುಬ್ಬಯ್ಯ ಶೆಟ್ಟರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದ ನಂತರ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕಾನೂನು ಪದವೀಧರರಾದರು. ನಂತರ ಸಿಬಿಐ ಅಧಿಕಾರಿಯಾಗಿ ಕಾಶ್ಮೀರ ಮತ್ತು ಲಡಾಖ್ನಲ್ಲಿ ಸೇವೆ ಸಲ್ಲಿಸಿದರು. 1963ರಲ್ಲಿ ಶಾಲಿನಿ ಶೆಟ್ಟಿ ಅವರ ಜೊತೆ ವಿವಾಹವಾಯಿತು. ಮೊದಲ ಮಗಳು ಉಮಾ ಜನಿಸಿದ ನಂತರ ಆ ಹುದ್ದೆ ತ್ಯಜಿಸಿ ಮಂಗಳೂರಿಗೆ ಬಂದು ವಕೀಲ ವೃತ್ತಿ ಪ್ರಾರಂಭಿಸಿದರು. ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸತೊಡಗಿದರು.
1969ರಲ್ಲಿ ಕಾಂಗ್ರಸ್ ಇಬ್ಭಾಗವಾಗಿ ನಿಜಲಿಂಗಪ್ಪನೇತೃತ್ವದ ಹಳೇ ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಆದವು. ದೇವರಾಜ ಅರಸು ಅವರು ಇಂದಿರಾ ಕಾಂಗ್ರೆಸ್ನ ರಾಜ್ಯಾಧ್ಯಕ್ಷರಾದರು. 1969ನೇ ಡಿಸೆಂಬರ್ 6ರಂದು ದೇವರಾಜ ಅರಸು ಅವರು ಇಂದಿರಾ ಕಾಂಗ್ರೆಸ್ ನಾಯಕರ ಸಭೆ ಕರೆದರು. ಆಗ ದಕ್ಷಿಣ ಕನ್ನಡದಿಂದ ಆ ಸಭೆಗೆ ಹೋದವರೆಂದರೆ ಸುಬ್ಬಯ್ಯ ಶೆಟ್ಟಿ ಅವರು ಮಾತ್ರ. ಸುಬ್ಬಯ್ಯ ಶೆಟ್ಟರಿಗೆ ದೇವರಾಜ ಅರಸರ ಸಾಮಾಜಿಕ ನ್ಯಾಯ ಪ್ರಜ್ಞೆ ಬಗ್ಗೆ ಅಪಾರ ಗೌರವ ಮೂಡಿತು. ರೈತರ, ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಮತ್ತು ಒಟ್ಟಾರೆ ಶೋಷಣೆಗೆ ಒಳಗಾದ ಜನ ಸಮುದಾಯಗಳ ಬಗ್ಗೆ ಅರಸು ಅವರಿಗೆ ಇದ್ದ ಕಳಕಳಿಯ ಬಗ್ಗೆ ಅವರು ಆಕರ್ಷಿತರಾದರು. ಅರಸುಗಿಂತ 20 ವರ್ಷ ಚಿಕ್ಕವರಾಗಿದ್ದ ಸುಬ್ಬಯ್ಯ ಶೆಟ್ಟರು ಅವರನ್ನೇ ತಮ್ಮ ನಾಯಕ ಎಂದು ಸ್ವೀಕರಿಸಿದರು. ನಂತರದ ದಿನಗಳಲ್ಲಿ ಅರಸು ಅವರಿಗೆ ಕೂಡ ಸುಬ್ಬಯ್ಯ ಶೆಟ್ಟರ ಬಗ್ಗೆ ಅಪಾರವಾದ ಆತ್ಮೀಯತೆ ಮೂಡಿತು. 1972ರ ಚುನಾವಣೆಯಲ್ಲಿ ಸುಬ್ಬಯ್ಯ ಶೆಟ್ಟರನ್ನು ಸುರತ್ಕಲ್ ವಿಧಾನ ಸಭಾ ಕ್ಷೇತ್ರದ ಅ್ಯರ್ಥಿಯಾಗಿ ಮಾಡಿದರು. ಸುಬ್ಬಯ್ಯ ಶೆಟ್ಟರು ಆಯ್ಕೆಯಾದರು. ಮತ್ತೆ ಅರಸು ಆಡಳಿತ ಶುರುವಾಯಿತು.
ಸುಬ್ಬಯ್ಯ ಶೆಟ್ಟರ ಜ್ಞಾನ ಮತ್ತು ಕ್ರಿಯಾಶಕ್ತಿಯ ಬಗ್ಗೆ ಅರಸು ಅವರಿಗೆ ಬಹಳ ಹೆಮ್ಮೆ ಇತ್ತು. 1973ರಲ್ಲಿ ಅವರನ್ನು ಕರೆದು ಭೂ ಸುಧಾರಣಾ ಸಚಿರನ್ನಾಗಿ ಮಾಡಿದರು. ಕ್ಯಾಬಿನೆಟ್ ದರ್ಜೆಯ ಈ ಹುದ್ದೆಗೆ ಸುಬ್ಬಯ್ಯ ಶೆಟ್ಟರೇ ಯೋಗ್ಯವೆಂದು ಅವರಿಗೆ ದೃಢವಾಗಿತ್ತು. ಸುಬ್ಬಯ್ಯ ಶೆಟ್ಟರು ಸ್ವತಃ ಜಮೀನುದಾರಿ ಮನೆತನದವರು. ಆ ಮನೆತನದ ಬಗ್ಗೆ ಹೇಳಬೇಕೆಂದರೆ ಅವರ ಅಜ್ಜ ಆ ಕಾಲದಲ್ಲಿ ಇಂಗ್ಲಂಡ್ಗೆ ಹೋಗಿ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದವರಾಗಿದ್ದರು. ಜಮೀನುದಾರಿ ಮನೆತನದ ಸುಬ್ಬಯ್ಯ ಶೆಟ್ಟರಿಗೆ ಗೇಣಿದಾರರ ಬಗ್ಗೆ ಇರುವ ಅಪಾರ ಕಾಳಜಿಯನ್ನು ಅರಸು ಅವರು ಬಲ್ಲವರಾಗಿದ್ದರು. ವಜ್ರಗಳನ್ನು ತುಂಡರಿಸಲು ನನಗೆ ವಜ್ರ ಬೇಕಿತ್ತು. ಅದಕ್ಕೆಂದೇ ಈ ವಜ್ರವನ್ನು ಆಯ್ಕೆ ಮಾಡಿದೆ ಎಂದು ಅರಸು ಅವರು ಹೇಳಿದ್ದುಂಟು.
ಸುಬ್ಬಯ್ಯ ಶೆಟ್ಟರು ತಮ್ಮ ಮತ್ತು ತಮ್ಮ ಸಂಬಂಧಿಕರ ಜಮೀನುಗಳ ಮೇಲೆ ಮೊದಲಿಗೆ ಭೂ ಸುಧಾರಣಾ ಕಾಯ್ದೆಯನ್ನು ಪ್ರಯೋಗಿಸಿದರು. ಅವರ ಸಮಾಜದವರ ಮೇಲೂ ಪ್ರಯೋಗಿಸಿದರು. ರಾಜ್ಯದ ಭೂ ಮಾಲಕರು ದೇವರಾಜ ಅರಸು ಮತ್ತು ಸುಬ್ಬಯ್ಯ ಶೆಟ್ಟರ ಮೇಲೆ ಕೆಂಡಾಮಂಡಲವಾಗಿದ್ದರು. ದಕ್ಷಿಣ ಕನ್ನಡದ ಭೂ ಮಾಲಕರು ಕೊನೆಗೆ ಪೇಜಾವರ ಶ್ರೀಗಳ ಬಳಿ ಹೋಗಿ, ತಮ್ಮ ಮನೆತನಗಳು ಹಾಳಾಗುತ್ತವೆ ಎಂದು ಅವಲತ್ತುಕೊಂಡರು. ಪೇಜಾವರರು ಸುಬ್ಬಯ್ಯ ಶೆಟ್ಟಿ ಅವರನ್ನು ಕರೆಸಿ ಭೂಮಾಲಕರ ವಿಚಾರ ತಿಳಿಸಿದರು. ದೃಢ ನಿರ್ಧಾರದ ಸುಬ್ಬಯ್ಯ ಶೆಟ್ಟರು, ಶತಮಾನಗಳಿಂದ ತುಳಿತಕ್ಕೊಳಗಾದ ಗೇಣಿದಾರರ ಬಗ್ಗೆ ವಿವರಿಸಿದರು. ತಮ್ಮ ಸಾಮಾಜಿಕ ನ್ಯಾಯದ ಕಾರ್ಯವನ್ನು ಮುಂದುವರಿಸಿದರು. ಈ ವಿಚಾರದಲ್ಲಿ ಸುಬ್ಬಯ್ಯ ಶೆಟ್ಟರು ಹೇಳಿದ್ದನ್ನು ಅರಸು ಅವರು ಕೇಳುತ್ತಿದ್ದರು. ಗೇಣಿದಾರರು ತಾವು ಉಳುಮೆ ಮಾಡುವ ಭೂಮಿಯ ಒಡೆಯರಾಗಬೇಕು ಎಂಬುದು ಸುಬ್ಬಯ್ಯ ಶೆಟ್ಟರ ಕನಸಾಗಿತ್ತು. ಅವರು ಅದೇ ರೀತಿಯಲ್ಲಿ ಭೂ ಸುಧಾರಣಾ ಕಾಯ್ದೆಯ ರೂಪುರೇಷೆಗಳನ್ನು ಸಿದ್ಧಪಡಿಸಿದರು. ಅದಕ್ಕೆ ಮುಖ್ಯಮಂತ್ರಿ ಜೊತೆ ವೀರಪ್ಪಮೊಯ್ಲಿ, ಬಿ.ಬಸವಲಿಂಗಪ್ಪ, ಕೆ.ಎಚ್. ರಂಗನಾಥ ಅವರಂಥ ಸಚಿವರ ಸಂಪೂರ್ಣ ಬೆಂಬಲವಿತ್ತು. ಕೆಲ ಸಚಿವರು ಗೊಣಗಿದರೂ ಧ್ವನಿ ಎತ್ತಲಿಲ್ಲ. ಏಕೆಂದರೆ ಇಂದಿರಾ ಗಾಂಧಿಯವರೂ ಈ ಭೂ ಸುಧಾರಣಾ ಕ್ರಾಂತಿಯ ಪರವಾಗಿದ್ದರು. ಸುಬ್ಬಯ್ಯ ಶೆಟ್ಟರು ಎಂಥ ಮಹತ್ವದ್ದನ್ನು ಸಾಧಿಸಿದರೆಂದರೆ, ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಕಾಮ್ರೇಡ್ ಜ್ಯೋತಿ ಬಸು ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದ ಯಾವ ರಾಜ್ಯದಲ್ಲೂ ಭೂ ಸುಧಾರಣಾ ಸಚಿವ ಹುದ್ದೆಯ ಸೃಷ್ಟಿಯಾಗಿರಲಿಲ್ಲ. ಈ ಹುದ್ದೆ ಡಿ. ದೇವರಾಜ ಅರಸು ಅವರ ಕನಸಿನ ಕೂಸಾಗಿತ್ತು. ಹೀಗಾಗಿ ಸುಬ್ಬಯ್ಯ ಶೆಟ್ಟರು ದೇಶದ ಮೊದಲ ಭೂ ಸುಧಾರಣಾ ಸಚಿವರಾದರು. ಭೂ ಸುಧಾರಣಾ ಕಾಯ್ದೆ ಸಿದ್ಧಪಡಿಸಿ ಸ್ವತಃ ಅದನ್ನು ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸುಬ್ಬಯ್ಯ ಶೆಟ್ಟರು ಇತಿಹಾಸ ಸೃಷ್ಟಿಸಿದರು.
ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ ಅವರು 1972-1977 ಮತ್ತು 1978-1983 ಈ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿದ್ದರು. ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಭೂಸುಧಾರಣಾ ಸಚಿವರಾದ ನಂತರ ವಾರ್ತಾ, ಇಂಧನ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದರು. ಶಿಕ್ಷಣದಲ್ಲಿಯೂ ಸುಧಾರಣೆ ತಂದರು. ರಾಜ್ಯದಲ್ಲಿ ಇಷ್ಟೊಂದು ಇಂಜಿನಿಯರಿಂಗ್ ಕಾಲೇಜುಗಳಾಗಲಿಕ್ಕೂ ಅವರೇ ಕಾರಣರು. ಕರ್ನಾಟಕದ ಎಲ್ಲ ಹೈಸ್ಕೂಲ್ಗಳಲ್ಲಿ ಮಹಿಳಾ ಕರಾಟೆ ಪಟುಗಳ ಮೂಲಕ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವ ಕನಸನ್ನು ಹೊಂದಿದ್ದ ಅವರು ಆ ಕುರಿತು ಯೋಜನೆ ರೂಪಿಸಿದ್ದರು. ಆದರೆ ಅರಸು ಅವರ ರಾಜೀನಾಮೆಯಿಂದ ಅದು ಅಲ್ಲಿಗೇ ನಿಂತಿತು.
ಸುಬ್ಬಯ್ಯ ಶೆಟ್ಟರು 18 ವರ್ಷಗಳವರೆಗೆ ಬೆಂಗಳೂರಿನ ಮಲ್ಲೇಶ್ವರಂ 18ನೇ ಕ್ರಾಸ್, 6ನೇ ಮೇನ್ನಲ್ಲಿರುವ ಮಂಗಳಾ ಎಂಬ ಹೆಸರಿನ ಬಾಡಿಗೆ ಮನೆಯಲ್ಲಿ ಕಳೆದರು. ಮಂತ್ರಿ ಪದವಿ ಹೋದ ನಂತರ ಅವರ ಬಳಿ ಇದ್ದದ್ದು ಕೇವಲ 3,500 ರೂಪಾಯಿ. 500 ರೂಪಾಯಿಯ ಬಾಡಿಗೆ ಮನೆ ಹಿಡಿದರು. ಅವರ ಮಕ್ಕಳಾದ ಡಾ. ಉಮಾ ಮತ್ತು ಡಾ.ರೇಷ್ಮಾ ಅವರು ಬೆಳೆದ ನಂತರ ಸ್ವಂತ ಫ್ಲ್ಯಾಟ್ಗೆ ಹೋದರು. ಪತ್ನಿಯ ನಿಧನದ ನಂತರ ಬಹಳ ಮೆತ್ತಗಾದರು.
ರಾಜಕೀಯ ವೈಪರೀತ್ಯಗಳಿಂದಾಗಿ ಅವರು ಬಹಳ ನೊಂದುಕೊಂಡಿದ್ದರು. ಅವರು ಮಾಡಿದ ಮಹಾಕಾರ್ಯವನ್ನು ಅರ್ಥ ಮಾಡಿಕೊಳ್ಳುವಷ್ಟು ಫಲಾನುಭವಿಗಳು ಪ್ರಬುದ್ಧರಾಗಿರಲಿಲ್ಲ. ಭೂಮಿಯನ್ನು ಕಳೆದುಕೊಂಡವರು ಅವರನ್ನು ಬೆಂಬಲಿಸಲು ಸಾಧ್ಯವಿರಲಿಲ್ಲ. ಕೊನೆಗೆ ಸುಬ್ರಮಣ್ಯಸ್ವಾಮಿಯ ಜನತಾ ಪಕ್ಷ ಸೇರಿದರು. ಅದೂ ಬೇಡವೆನಿಸಿ ರಾಜಕೀಯ ಜೀವನದಿಂದ ನಿವೃತ್ತರಾದರು. ಅವರು ರಾಷ್ಟ್ರೀಯ ಬಾವೈಕ್ಯ ವೇದಿಕೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಸುಬ್ಬಯ್ಯ ಶೆಟ್ಟಿ ಅವರಿಗೆ 2014ರಲ್ಲಿ ರಾಜ್ಯ ಸರಕಾರ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿತ್ತು. ಶಾಂತವೇರಿ ಗೋಪಾಲಗೌಡ ಹಾಗೂ ದ.ರಾ. ಬೇಂದ್ರೆ ಪ್ರಶಸ್ತಿಗೂ ಅವರು ಭಾಜನರಾದರು. ಹುಬ್ಬಳ್ಳಿಯ ವರಕವಿ ಡಾ. ದ.ರಾ. ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅವರ ಬಯಕೆಯಂತೆ, ಪ್ರತಿಷ್ಠಾನದ ಸದಸ್ಯರು ಬಿ.ಸುಬ್ಬಯ್ಯ ಶೆಟ್ಟಿ ಅವರ ಬೆಂಗಳೂರಿನ ನಿವಾಸಕ್ಕೆ ಬಂದು 20.2.2025ರಂದು ಮಹಾನ್ ಮಾನವ ಶ್ರೇಷ್ಠ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿದರು. ಬೆಂಗಳೂರಿನ ಸ್ವಗೃಹದಲ್ಲಿ ಸುಬ್ಬಯ್ಯ ಶೆಟ್ಟಿ ಅವರು 10.03.2025ರಂದು ನಿಧನರಾದರು.
ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಸುಬ್ಬಯ್ಯ ಶೆಟ್ಟರು ಕೊನೆಗೆ ಹೀಗೆ ಹೇಳಿದರು: ದೇವರಾಜ ಅರಸರು ಸಾಮಾನ್ಯ ಜನರ ಬಗ್ಗೆ ಕಳಕಳಿಯುಳ್ಳ, ಯಾರಿಗೂ ನೋವನ್ನು ಬಯಸದ ಒಬ್ಬ ಪ್ರಾಮಾಣಿಕ ವ್ಯಕ್ತಿ. ರಾಜಕಾರಣಿಗಳಲ್ಲಿ ಯಾರು ಒಳ್ಳೆಯವರಿದ್ದಾರೆ. ಯಾರು ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬ ಬಯಕೆಯೊಂದಿಗೆ ಜನರ ಮಧ್ಯೆ ಇದ್ದಾರೆಯೊ ಅಂಥ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕು. ಜನರಿಗೆ ತೊಂದರೆಯಾಗುತ್ತದೆ ಎನ್ನುವಾಗ ದೇವರಾಜ ಅರಸರ ಹಾಗೆ ಕಂಬನಿ ಸುರಿಸುವಂಥ ರಾಜಕಾರಣಿಗಳು ಬೇಕು. ಅಂಥವರು ಆಡಳಿತ ಮಾಡಬೇಕು. ಅವರಿಗೆ ಒಳ್ಳೆಯ ಆಲೋಚನಾ ಶಕ್ತಿ ಇರಬೇಕು. ಅದನ್ನು ಕಾರ್ಯರೂಪಕ್ಕೆ ಇಳಿಸುವ ಧೈರ್ಯ ಹಾಗೂ ಚಾಕಚಕ್ಯತೆ ಬೇಕು. ರಾಜಕಾರಣಕ್ಕೆ ಯುವಕರು ಮುಂದೆ ಬರಬೇಕು.