ಬನ್ನಂಜೆಯ ‘ಭೂತ’ ಬಾಬು ಅಮೀನ್
ಸತ್ಯ, ನ್ಯಾಯ, ಧರ್ಮಕ್ಕಾಗಿ ನಡೆಸುವ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ತುಳುನಾಡಿನ ಭೂತಗಳು ಹೆಜ್ಜೆಹೆಜ್ಜೆಗೂ ಅನ್ಯಾಯ, ಅವಮಾನ, ಅವಗಣನೆ, ಮೋಸ, ಮಾತ್ಸರ್ಯಗಳ ಕೂರಂಬುಗಳಿಗೆ ಹೇಗೆ ಎದೆಯೊಡ್ಡುತ್ತಾ ಬಂದಿವೆ ಮತ್ತು ಪಟ್ಟಭದ್ರ ವ್ಯವಸ್ಥೆಗೆ ಬಲಿಯಾಗಿವೆ ಎನ್ನುವುದನ್ನು ಪಾಡ್ದನದ ಸಾಲು ಸಾಲುಗಳು ಸಾರಿ ಹೇಳುತ್ತವೆ.
ಪ್ರಸ್ತುತ ಲಕ್ಷಾಂತರ ಭಕ್ತರಿಂದ ಕೊಂಡಾಡಿಸಿಕೊಂಡು ಆರಾಧಿಸಲ್ಪಡುವ ಈ ಭೂತಗಳ ವರ್ತಮಾನ ಬಹಳ ಕ್ರೂರ ಮತ್ತು ಯಾತನಾಮಯವಾಗಿತ್ತು. ಪ್ರತಿಯೊಂದು ಭೂತಗಳನ್ನು ಆವರಿಸಿಕೊಂಡಿರುವ ‘ಮಾಯಕದ ಕತೆ’ಗಳ ಪರದೆಯನ್ನು ತುಸು ಪಕ್ಕಕ್ಕೆ ಸರಿಸಿ ಒಳಗೆ ಇಣುಕಿದರೆ ಅವುಗಳ ಆಂತರ್ಯದಲ್ಲಿ ಆ ಕಾಲದ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಬಂಡುಕೋರ, ಸ್ವಾಭಿಮಾನಿ, ತತ್ವನಿಷ್ಠ ಸಾಮಾಜಿಕ ಹೋರಾಟಗಾರನನ್ನು ಕಾಣಲು ಸಾಧ್ಯವಿದೆ. ಬದುಕು, ಸಾಧನೆಗಳು ಭಿನ್ನವಾಗಿದ್ದರೂ ತಳಸಮುದಾಯದಿಂದ ಉದಿಸಿ ಬಂದಿರುವ ಈ ಭೂತ-ದೈವಗಳೆಲ್ಲ ಸಾಮಾನ್ಯರ ರೀತಿಯಲ್ಲಿ ಹುಟ್ಟು ಪಡೆದು ಕಣ್ಣಮುಂದಿನ ಅನ್ಯಾಯದ ವಿರುದ್ಧ ಹೋರಾಡುತ್ತಾ ಜನಪರ ಕಾಳಜಿ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯಿಂದ ಜನಾನುರಾಗಿಯಾಗಿ ಸಾಧನೆಯ ಬಲದಿಂದ ಅಮರರಾಗಿದ್ದನ್ನು ಕಾಣಬಹುದು.
ಹೆಚ್ಚು ಕಡಿಮೆ ಕಳೆದ 40-50 ವರ್ಷಗಳಿಂದ ಈ ಭೂತ-ನಾಗ-ದೈವಗಳ ಒಡನಾಟದಲ್ಲಿರುವ ಎಂಬತ್ತರ ಹರೆಯದ ಬನ್ನಂಜೆಯ ‘ಭೂತ’ ಬಾಬು ಅಮೀನ್ ಅವರ ಬದುಕು ಕೂಡಾ ಆ ಭೂತಗಳ ಬದುಕಿಗೆ ಸಮೀಪವಾಗಿದೆ. ಹುಟ್ಟು ಬಂಡುಕೋರರಾದ ಬನ್ನಂಜೆಯವರು ತಮ್ಮ ಜೀವನದುದ್ದಕ್ಕೂ ಸತ್ಯದ ಹಾದಿಯಲ್ಲಿ ನಡೆದವರು, ನ್ಯಾಯಕ್ಕಾಗಿ ಧ್ವನಿ ಎತ್ತಿದವರು ಮತ್ತು ನಿಜವಾದ ಧರ್ಮಕ್ಕೆ ನಿಷ್ಠರಾದವರು. ಹೊಂದಾಣಿಕೆಯ ಮಾರ್ಗವನ್ನು ಹಿಡಿದು ನಾಲ್ಕು ಗೋಡೆಯ ನಡುವಿನ ಸಾಂಸಾರಿಕ ಬದುಕನ್ನಷ್ಟೇ ಆವರು ಆರಿಸಿಕೊಂಡಿದ್ದರೆ ಅವರು ಸುಖವಾಗಿ ಇರುತ್ತಿದ್ದರೇನೋ? ಆದರೆ ನಮಗೆ ಬನ್ನಂಜೆಯ ‘ಭೂತ’ ಸಿಗುತ್ತಿರಲಿಲ್ಲ.
ತುಳುನಾಡಿನ ಸಾನ, ಗರೋಡಿಗಳನ್ನು ಹುಡುಕಾಡುತ್ತಾ ದೈವ-ಭೂತಗಳ ಮೂಲವನ್ನು ಶೋಧಿಸುತ್ತಾ ಊರೂರು ಅಲೆದಾಡಿ, ಜನರ ಜೊತೆ ಒಡನಾಡಿಕೊಂಡು ತುಳು ಜಾನಪದ ಕ್ಷೇತ್ರದ ಗಣಿಯನ್ನು ಅಗೆದು ಅಮೂಲ್ಯವಾದ ಸಿರಿಸಂಪತ್ತನ್ನು ಬನ್ನಂಜೆಯವರು ಕಲೆಹಾಕಿ ದಾಖಲಿಸಿದ್ದಾರೆ. ಬನ್ನಂಜೆ ಯವರು ತನ್ನ ಸಂಶೋಧನೆಗಳನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನ ಕುರ್ಚಿಯಲ್ಲಿ ಕೂತು ಮಾಡಿದ್ದರೆ ಅವರು ಡಾಕ್ಟರ್ ಎಂದು ಕರೆಸಿಕೊಳ್ಳಲು ನಾಲ್ಕಾರು ಪಿಎಚ್ಡಿ ಪ್ರಬಂಧಗಳು ಅವರ ಮೇಜಿನ ಮೇಲಿರುತ್ತಿತ್ತು. ಬನ್ನಂಜೆಯವರ ಕಾಯಕನಿಷ್ಠೆಯನ್ನು ನೋಡಿದರೆ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಗಳನ್ನು ಕಾಪಿಟ್ಟುಕೊಂಡಿ ರುವ ನೂರಾರು ಪಾಡ್ದನಗಳ ನಿಸ್ವಾರ್ಥಿ ಅನಾಮಿಕ ರಚನೆಕಾರರೇ ಅವರಿಗೆ ಸ್ಫೂರ್ತಿ ನೀಡಿದ ಹಾಗಿದೆ..
ಶಂಖದಿಂದ ಹೊರಬಂದರೆ ಮಾತ್ರ ತೀರ್ಥ, ಸಾಹಿತ್ಯದ ರಚನೆ ಇರಲಿ, ಸಂಸ್ಕೃತಿಯ ಸಂಶೋಧನೆಗಳೇ ಇರಲಿ, ಅದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮೂಲಕ ಹೊರಬಂದರೆ ಮಾತ್ರ ಮಾನ್ಯತೆ ಎಂಬ ಅಲಿಖಿತ ನಿಯಮ ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿದೆ. ಇದರಿಂದಾಗಿ ಬನ್ನಂಜೆಯವರಂತಹ ‘ಪದವಿ ರಹಿತ ಮೇಧಾವಿ’ಗಳು ಕೇವಲ ಸಂಸ್ಕೃತಿಯ ಮೇಲಿನ ಪ್ರೀತಿ-ಅಭಿಮಾನ ಮತ್ತು ಕಾಳಜಿಯಿಂದ ಮಾಡುವ ಸಂಶೋಧನೆಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಇರುವುದಿಲ್ಲ, ವಿದ್ವಾಂಸರಿಂದ ಮಾನ್ಯತೆಯೂ ಸಿಗುವುದಿಲ್ಲ ಎನ್ನುವುದು ವಿಷಾದಕರ ಬೆಳವಣಿಗೆ.
ರಾಷ್ಟ್ರ-ಅಂತರ್ರಾಷ್ಟ್ರೀಯ ಸೆಮಿನಾರ್ ಗಳಲ್ಲಿ ಅನಾಮಿಕ ಸಂಶೋಧಕರ ಹೆಸರುಗಳನ್ನು ಯಾರೂ ಚರ್ಚೆಗೆ ಎತ್ತಿಕೊಳ್ಳುವುದಿಲ್ಲ. ಆದರೆ ಸುಲಭದಲ್ಲಿ ಲಭ್ಯ ಇರುವ ಇಂತಹ ಅನಾಮಿಕ ವಿದ್ವಾಂಸರು ಕಲೆಹಾಕಿದ ಮಾಹಿತಿಯನ್ನು ಅಕಾಡಮಿಕ್ ಚೌಕಟ್ಟಿನಲ್ಲಿ ಕೂರಿಸಿ ಪ್ರಬಂಧಗಳನ್ನು ಮಂಡಿಸಿ ಹೆಸರು-ಮಾನ್ಯತೆಯನ್ನು ಗಳಿಸಿದವರೂ ಇದ್ದಾರೆ. ಪೋರ್ಡ್ ಫೌಂಡೇಶನ್ ಗಳಿಗೆ ಈ ಮಾಹಿತಿಯನ್ನು ಮಾರಿಕೊಂಡು ದುಡ್ಡು ಮಾಡಿಕೊಂಡವರೂ ಇದ್ದಾರೆ.
ವಿಪರ್ಯಾಸವೆಂದರೆ ವಿಶ್ವವಿದ್ಯಾನಿಲಯಗಳಿಂದ ಪ್ರಕಟವಾಗುವ ಮಣತೂಕದ ದಪ್ಪದಪ್ಪ ಬೈಂಡಿನ ಸಂಶೋಧನಾ ಪ್ರಬಂಧಗಳನ್ನು ಈ ವಿಷಯದ ಬಗ್ಗೆ ಪ್ರಾಮಾಣಿಕ ಆಸಕ್ತಿವುಳ್ಳ ಸಾಮಾನ್ಯ ಜನರು ಕಣೆತ್ತಿ ನೋಡುವುದಿಲ್ಲ. ಅವರ ನೋಟಕ್ಕೆ ನಿಲುಕದಷ್ಟು ದೂರದಲ್ಲಿ ಕಪಾಟಿನೊಳಗೆ ಅವು ಭದ್ರವಾಗಿರುತ್ತವೆ. ಅವುಗಳನ್ನು ಹೊರಗೆ ತಂದು ಸಾರ್ವಜನಿಕ ಚರ್ಚೆಗೆ ಒಡ್ಡಿದರೆ ಆ ಸಂಶೋಧನೆಯ ಬಂಡವಾಳವೂ ಬಯಲಾಗಬಹುದೆಂಬ ಕಾರಣವೂ ಅವುಗಳನ್ನು ರಹಸ್ಯವಾಗಿಡಲು ಕಾರಣವಾಗಿದ್ದಿರಬಹುದು.
ಸಾಹಿತ್ಯದ ಭಾಗವಾಗಿದ್ದ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಸಭೆಗಳಲ್ಲಿ ಹೆಚ್ಚು ಚರ್ಚೆಗೊಳಗಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇತಿಹಾಸದುದ್ದಕ್ಕೂ ವಿಕೃತಿಗೆ ಬಲಿಯಾಗುತ್ತಾ ಬಂದ ನಮ್ಮ ಧರ್ಮ, ಸಂಸ್ಕೃತಿ, ಆಚರಣೆ-ಸಂಪ್ರದಾಯಗಳೆಲ್ಲವೂ ಮೇಲ್ನೋಟಕ್ಕೆ ಕಾಣುವಷ್ಟು ಸತ್ಯ, ಸರಳ, ಸುಂದರವಾಗಿಲ್ಲ. ಅಧ್ಯಯನ ಮತ್ತು ಸ್ಪಷ್ಟ ತಾತ್ವಿಕ ಜ್ಞಾನ ಇಲ್ಲದ ಯಾರಿಗೂ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ಕಾರಣದಿಂದಾಗಿಯೇ ಸಂಸ್ಕೃತಿಗೆ ಇಂದು ಜಾತಿ, ಧರ್ಮ, ಸಿದ್ಧಾಂತಗಳ ಬಣ್ಣಬಳಿಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಎಂಬ ಹೊಸ ಪದ ಸೃಷ್ಟಿಯಾಗಿದೆ.
ತುಳುನಾಡಿನ ಮೂಲ ಸಂಸ್ಕೃತಿಯ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು ಕೇವಲ ಕಾಲದ ಮಹಿಮೆ ಎಂದು ನಿರ್ಲಕ್ಷಿಸಲಾಗದು. ಇಂತಹ ತಿರುಚುವಿಕೆ ಮತ್ತು ಅಪವ್ಯಾಖ್ಯಾನಗಳನ್ನು ಎದುರಿಸಬೇಕಾದರೆ ಮುಕ್ತ ಮನಸ್ಸಿನ ನಮ್ಮ ಮೂಲ ಸಂಸ್ಕೃತಿಯ ಅಧ್ಯಯನ-ಸಂಶೋಧನೆಗಳ ಅಗತ್ಯ ಇದೆ. ಆ ಕೆಲಸವನ್ನು ಬನ್ನಂಜೆಯವರು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬನ್ನಂಜೆಯವರ ‘ತುಳು ಜಾನಪದದ ಆಚರಣೆಗಳು’ ಪುಸ್ತಕ ಬಹುಮುಖ್ಯ ಆಕರ ಗ್ರಂಥ. ವೈದಿಕ ಪರಂಪರೆಯ ಆಚರಣೆಗಳಿಗಿಂತ
ಮೂಲದಲ್ಲಿದ್ದ ಅವೈದಿಕ ಪರಂಪರೆಯಲ್ಲಿನ ಸಂಸ್ಕೃತಿ, ಸಂಸ್ಕಾರ, ಆಚಾರ, ಸಂಪ್ರದಾಯಗಳನ್ನು ಈ ಗ್ರಂಥದಲ್ಲಿ ದಾಖಲಿಸುವ ಮೂಲಕ ಬನ್ನಂಜೆಯವರು ಮುಂದಿನ ತಲೆಮಾರಿಗೆ ಅನುಪಮವಾದ ಕೊಡಗೆಯನ್ನು ನೀಡಿದ್ದಾರೆ. ಈ ಗ್ರಂಥ ಅವರ ಬರವಣಿಗೆ ಮತ್ತು ಬದುಕಿನ ಉದ್ದೇಶವನ್ನೂ ಕೂಡಾ ಸ್ಪಷ್ಟವಾಗಿ ಹೇಳುತ್ತದೆ.
ತುಳುನಾಡು ಮೂಲತ: ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಮತ್ತು ವೈವಿಧ್ಯಮಯ ಆಹಾರ, ಉಡುಗೆ ತೊಡುಗೆ, ಆಚಾರ-ವಿಚಾರ ಸಂಪ್ರದಾಯಗಳ ತೊಟ್ಟಿಲು. ರಾಮ, ಕೃಷ್ಣ, ಶಿವ, ಹನುಮಂತನಂತೆ ಕೋರ್ದಬ್ಬು, ತನ್ನಿಮಾನಿಗ, ಜುಮಾದಿ, ಪಂಜುರ್ಲಿ, ಬಬ್ಬರ್ಯಗಳು ಕೂಡಾ ಇಲ್ಲಿ ಬಹುಪೂಜಿತ ದೈವಗಳು. ಇಲ್ಲಿನ ಏಕತ್ವ, ಏಕ ಸಂಸ್ಕೃತಿ ತುಳು ನೆಲದ ಗುಣವೇ ಅಲ್ಲ. ಇಲ್ಲಿನ ಕೋಲ,ನೇಮ, ತೇರು, ಅಂಕ-ಆಯನಗಳಲ್ಲಿಯೂ ಸಮಾಜದ ಪ್ರತಿಯೊಂದು ಜಾತಿ,ಧರ್ಮಗಳ ಪಾಲುದಾರಿಕೆ ಇರುವಂತೆ ಇವುಗಳಿಗೆ ಬಹುತ್ವದ ರೂಪವನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ.
ಬಹುತ್ವ ಒಂದು ಪ್ರಕೃತಿ ನಿಯಮ, ಬಹುರೂಪವೇ ಪ್ರಕೃತಿ ಮತ್ತು ಬದುಕು, ಅದೇ ಪ್ರಜಾಪ್ರಭುತ್ವ. ಏಕತ್ವ ಎನ್ನುವುದೇ ಪ್ರಕೃತಿವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರ. ಎಲ್ಲಿ ಆರಾಧನೆ ಮತ್ತು ನಂಬಿಕೆಗಳು ಮನುಷ್ಯನೊಂದಿಗೆ ಸಂಬಂಧವಿರಿಸಿಕೊಳ್ಳುವುದೋ, ಅಲ್ಲಿ ಬಹು ಸಂಸ್ಕೃತಿ ಸ್ಥಾಪನೆಯಾಗುತ್ತದೆ. ಆದರೆ ಬಹುಸಂಸ್ಕೃತಿಯನ್ನು ಕಾಣಲಾಗದ ಕುಹಕಿಗಳು ಏಕಸಂಸ್ಕೃತಿಯನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾರೆ.
ತುಳುವರು ಸಾಹಸಿಗಳು ಮತ್ತು ಉದ್ಯಮಶೀಲರು ಮಾತ್ರವಲ್ಲ ತಮ್ಮ ಭಾಷೆ-ಸಂಸ್ಕೃತಿ ಬಗ್ಗೆ ಅಪಾರವಾದ ಪ್ರೀತಿ-ಅಭಿಮಾನವನ್ನು ಇಟ್ಟುಕೊಂಡವರು. ಬನ್ನಂಜೆಯವರ ಬರವಣಿಗೆ ಮತ್ತು ಅಧ್ಯಯನಕ್ಕೆ ನೆರವಾಗುತ್ತಾ ಬಂದ ಉಳ್ಳವರ ಔದಾರ್ಯವೂ ಇದಕ್ಕೆ ಸಾಕ್ಷಿ. ಆದರೆ ಇತ್ತೀಚೆಗೆ ನಮ್ಮ ನೆಲದ ಕಲೆ ಮತ್ತು ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಅವಸರದಲ್ಲಿ ಅವುಗಳನ್ನು ವಾಣಿಜ್ಯೀಕರಣಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಂಬಿಕೆ ಮತ್ತು ಮೂಢನಂಬಿಕೆ ನಡುವಿನ ತೆಳ್ಳನೆಯ ಗೆರೆಯ ಜೊತೆ, ಮೂಲ ಸಂಸ್ಕೃತಿಯ ದೇಹದೊಳಗಿನ ಆತ್ಮವನ್ನು ಗಮನಿಸದೆ ಹೋದರೆ ಉದ್ದೇಶ ಪ್ರಾಮಾಣಿಕವಾಗಿದ್ದರೂ ಪರಿಣಾಮ ವ್ಯತಿರಿಕ್ತವಾಗಬಹುದು. ತುಳು ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಎನ್ನುವುದು ಕಾಡ ಮಲ್ಲಿಗೆ, ಅದನ್ನು ಎಲ್ಲೆಂದರಲ್ಲಿ ಎತ್ತಿಕೊಂಡು ಹೋಗಿ ಪ್ರದರ್ಶಿಸಿದರೆ ಅದು ಕುಂಡದಲ್ಲಿ ಬೆಳೆಯುವ ಹೂವಾಗಬಹುದೇ ಹೊರತು ಅದು ತನ್ನ ಮೂಲ ಸೊಗಡನ್ನು ಪಸರಿಸಲಾರದು ಎಂಬ ವಿವೇಕದ ಎಚ್ಚರವೂ ನಮ್ಮಲ್ಲಿರಬೇಕು.
ಮೌಖಿಕ ಪರಂಪರೆಯ ನೆಲಮೂಲದ ಕಲೆ-ಸಂಸ್ಕೃತಿಯನ್ನು ಪಕ್ಕಕ್ಕೆ ಸರಿಸಿ ಲಿಖಿತ ಪರಂಪರೆಯ ಕಲೆ-ಸಂಸ್ಕೃತಿ ಆಧಿಪತ್ಯ ಸಾಧಿಸಲು ನಡೆಸಿದ ಪ್ರಯತ್ನಗಳು ಇತಿಹಾಸದ ಭಾಗವಾಗಿ ಉಳಿದಿದೆ. ಬಹುಸಂಸ್ಕೃತಿಯ ಮೇಲಿನ ದಾಳಿಗಳು ಇಂದಿಗೂ ನಿಂತಿಲ್ಲ. ಕಲೆ, ಸಂಸ್ಕೃತಿ, ಆಚಾರ, ಸಂಪ್ರದಾಯಗಳ ಚರ್ಚೆಯಲ್ಲಿ ನಮ್ಮ ನೆಲದ ಸಂಸ್ಕೃತಿಯೊಂದನ್ನು ಎತ್ತಿತೋರಿಸುವ ಅವಸರದಲ್ಲಿ ಈ ದೇಶದ ಸನಾತನ ಭವ್ಯ ಪರಂಪರೆಯಲ್ಲಿ ನಮ್ಮ ಸಂಸ್ಕೃತಿಯನ್ನು ಕಂಡುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ.
ಸನಾತನ ಪರಂಪರೆಯ ಯಜಮಾನಿಕೆಯನ್ನು ವಿರೋಧಿಸುತ್ತಾ ಬಂದ ಜನಪದವೇ ನಮ್ಮ ಮೂಲ ಸಂಸ್ಕೃತಿ ಎನ್ನುವುದನ್ನು ತುಳು ಜಾನಪದದ ಸುದೀರ್ಘ ಸಂಶೋಧನೆ, ಅಧ್ಯಯನ ಮತ್ತು ಬರವಣಿಗೆಯಲ್ಲಿ ಬನ್ನಂಜೆಯವರು ಸಾಬೀತು ಪಡಿಸಿಕೊಂಡು ಬಂದಿದ್ದಾರೆ. ಈ ಪ್ರಯತ್ನಕ್ಕೆ ಸಲ್ಲುವ ಗೌರವವೇ ಬನ್ನಂಜೆಯವರಿಗೂ ಸಲ್ಲುವ ಗೌರವವಾಗುತ್ತದೆ. ಎಂಬತ್ತರ ಇಳಿ ವಯಸ್ಸಿನಲ್ಲಿ ಇದಕ್ಕಿಂತ ಹೆಚ್ಚಿನದನ್ನು ಅವರೂ ಸಮಾಜದಿಂದ ನಿರೀಕ್ಷಿಸಲಾರರು.
ಸಾಹಿತ್ಯ, ಸಂಸ್ಕೃತಿ, ಕಲೆ ಎಲ್ಲವನ್ನೂ ಮೀರಿದ್ದು ಮನುಷ್ಯತ್ವ. ಅಂತಿಮವಾಗಿ ಸಾಹಿತ್ಯ, ಕಲೆ, ಸಂಸ್ಕೃತಿ ಎಲ್ಲವೂ ಮೂಲಭೂತವಾಗಿ ಮನುಷ್ಯನ ಆಶಯಗಳ ಅಭಿವ್ಯಕ್ತಿಯೇ ಆಗಿದೆ. ಕಾಲ ಕೆಟ್ಟುಹೋಗಿದೆ, ಸಂಸ್ಕೃತಿ ನಾಶವಾಗುತ್ತಿದೆ ಎಂಬ ಆರೋಪ ನಿಜವಾಗಿದ್ದರೆ ಆರೋಪಿಯ ಸ್ಥಾನದಲ್ಲಿ ವರ್ತಮಾನದಲ್ಲಿ ಬದುಕುತ್ತಿರುವ ಮನುಷ್ಯರಾದ ನಾವೇ ನಿಲ್ಲಬೇಕಾಗಿದೆ. ಜನ ಒಳ್ಳೆಯವರಾಗಿದ್ದರೆ ಜನಪದವೂ ಒಳ್ಳೆಯದಾಗಿರುತ್ತದೆ.
ಬನ್ನಂಜೆ ಬಾಬು ಅಮೀನ್ ಅವರು ಹಳೆಯ ತಲೆಮಾರಿನ ಒಳ್ಳೆಯ ಮನುಷ್ಯರು. ಆಧುನಿಕತೆಯ ಗಾಳಿಯಲ್ಲಿ ತೇಲಿಹೋದ ಹೊಸ ತಲೆಮಾರು ಭ್ರಮನಿರಸನಗೊಂಡು ತಮ್ಮ ಮೂಲವನ್ನು ಹುಡುಕಾಡುತ್ತಾ ಮೂಲ ಸಂಸ್ಕೃತಿಯ ಬೇರುಗಳಿಗಾಗಿ ತಡಕಾಡುತ್ತಿದ್ದಾರೆ. ಈ ಹೊಸ ತಲೆಮಾರಿನ ಕೈಗಳಿಗೆ ಹಳೆಯ ತಲೆಮಾರಿನ ಬನ್ನಂಜೆ ಬಾಬು ಅಮೀನ್ ಎಂಬ ಹಳೆಬೇರು ಸಿಕ್ಕಿದಾಗ ಹೊಸ ಚಿಗುರು ನಳನಳಿಸಬಹುದು. ಇದು ಪ್ರಕೃತಿ ನಿಯಮ. ಇದೇ ಬನ್ನಂಜೆಯ ‘ಭೂತ’ದ ಬದುಕಿನ ಸಾರ್ಥಕತೆ.