ಬಾಕು ಹವಾಮಾನ ಶೃಂಗ: ಕೈತಪ್ಪಿದ ಇನ್ನೊಂದು ಅವಕಾಶ
ತಮಿಳುನಾಡಿನಲ್ಲಿ ಜೀವ-ಆಸ್ತಿ ನಷ್ಟಕ್ಕೆ ಕಾರಣವಾದ ಫೆಂಗಲ್, ರಚ್ಚೆ ಹಿಡಿದ ಮಗುವಿನಂತೆ ಬೆಂಗಳೂರನ್ನೂ ಬಿಟ್ಟೂ ಬಿಡದೆ ಕಾಡಿತು. ಇದೇ ಹೊತ್ತಿನಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೊಂಜು ಒಂದು ವಾರ್ಷಿಕ ಕಾರ್ಯಕ್ರಮದಂತೆ ಜನರ ಜೀವ ಹಿಂಡುತ್ತಿದೆ. ಹವಾಮಾನ ಬದಲಾವಣೆಯಿಂದ ಚಂಡಮಾರುತ, ಭೂಕುಸಿತದಂಥ ಪ್ರಾಕೃತಿಕ ಅವಘಡಗಳ ತೀವ್ರತೆ ಮತ್ತು ಸಂಭವನೀಯತೆ ಎರಡೂ ಹೆಚ್ಚುತ್ತಿದೆ. ಈ ಸಂಬಂಧ ಚರ್ಚಿಸಲು ಅಝರ್‌ಬೈಜಾನಿನ ಬಾಕುವಿನಲ್ಲಿ ನಡೆದ 29ನೇ ಹವಾಮಾನ ಶೃಂಗಸಭೆ ಒಂದರ್ಥದಲ್ಲಿ ಟುಸ್ ಎಂದಿದೆ. ರಿಯೋ ಡಿಜನೈರೋನ ಮೊದಲ ಶೃಂಗದಿಂದ ಹಿಡಿದು ಬಾಕು ಶೃಂಗದವರೆಗಿನ ಅವಧಿಯಲ್ಲಿ ಜಗತ್ತಿನ ಎಲ್ಲ ನದಿಗಳಲ್ಲೂ ಸಾಕಷ್ಟು ನೀರು ಹರಿದಿದೆ. ಆದರೆ, ಹವಾಮಾನ ಬದಲಾವಣೆಯ ವಿಪರಿಣಾಮ ಎದುರಿಸುತ್ತಿರುವ ಬಡ ದೇಶಗಳ ಸಮಸ್ಯೆ ಬಗೆಹರಿದಿಲ್ಲ; ಬಗೆಹರಿಯುವಂತೆ ಕಾಣುವುದೂ ಇಲ್ಲ.
ಬಾಕುವಿನಲ್ಲಿ ನವೆಂಬರ್ 11ರಿಂದ 22ರವರೆಗೆ ನಡೆದ ಸಭೆಯಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಅಭಿವೃದ್ಧಿಶೀಲ ದೇಶಗಳಿಗೆ ಹಣಕಾಸು ನೆರವು, ಇಂಗಾಲ ಮಾರುಕಟ್ಟೆ ಮತ್ತು ಪಳೆಯುಳಿಕೆ ಇಂಧನದಿಂದ ಪುನರ್ ಬಳಕೆ ಇಂಧನಕ್ಕೆ ಸ್ಥಿತ್ಯಂತರ ಕುರಿತು ಚರ್ಚೆ ನಡೆಯಿತು. ಒಂದೆಡೆ ಚೀನಾ, ಭಾರತ ಮತ್ತು 77 ದೇಶಗಳ ಗುಂಪು, ಸಮಾನ ಮನಸ್ಕ ಅಭಿವೃದ್ಧಿಶೀಲ ದೇಶಗಳು(ಎಲ್‌ಎಂಡಿಸಿ), ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳು(ಎಲ್‌ಡಿಸಿ) ಹಾಗೂ ಅಭಿವೃದ್ಧಿಶೀಲ ಸಣ್ಣ ದ್ವೀಪ ರಾಷ್ಟ್ರಗಳು(ಎಸ್‌ಐಡಿಎಸ್) ಇದ್ದರೆ, ಇನ್ನೊಂದೆಡೆ ಯುರೋಪಿಯನ್ ಯೂನಿಯನ್, ಜಿ20 ದೇಶಗಳು ಹಾಗೂ ಒಇಸಿಡಿ(ಆರ್ಗನೈಸೇಷನ್ ಫಾರ್ ಇಕನಾಮಿಕ್ ಡೆವಲಪ್‌ಮೆಂಟ್) ದೇಶಗಳು ಇದ್ದವು. ಹಗ್ಗಜಗ್ಗಾಟ ನಡೆಯಿತು. ಸಾಮಾನ್ಯವಾಗಿ ಅಂತರ್‌ರಾಷ್ಟ್ರೀಯ ಶೃಂಗಸಭೆಗಳಲ್ಲಿ ಗರಿಷ್ಠ ಬೇಡಿಕೆ ಇರಿಸಿ, ಕೊಡುಕೊಳ್ಳು ಬಳಿಕ ಮಧ್ಯಮ ಮಾರ್ಗವನ್ನು ಕಂಡುಕೊಳ್ಳುವುದು ರೂಢಿ. ಆದರೆ, ಇಲ್ಲಿ ಬೇಡಿಕೆ ಮತ್ತು ನೀಡಿಕೆ ನಡುವೆ ಅಪಾರ ಕಂದರವಿದ್ದಿತ್ತು. ಬಡ ರಾಷ್ಟ್ರಗಳು ಬೇಡಿಕೆಯಿರಿಸಿದ ಮೊತ್ತ ವಾರ್ಷಿಕ 1.3 ಟ್ರಿಲಿಯನ್ ಡಾಲರ್; ಶ್ರೀಮಂತ ದೇಶಗಳು ನೀಡಲು ಒಪ್ಪಿದ್ದು ಶೇ.20 ಮಾತ್ರ; ಅಂದರೆ, 2035ರೊಳಗೆ ವಾರ್ಷಿಕ 300 ಬಿಲಿಯನ್ ಡಾಲರ್. ಹಣಕಾಸು ನೆರವಿಗೆ ಸಂಬಂಧಿಸಿದಂತೆ ಹೊಸ ಗುರಿ(ಎನ್‌ಸಿಕ್ಯುಜಿ, ನ್ಯೂ ಕಲೆಕ್ಟಿವ್ ಕ್ವಾಂಟಿಫೈಡ್ ಗೋಲ್ ಅಂದರೆ, ಪಳೆಯುಳಿಕೆ ಇಂಧನಗಳಿಂದ ಪರ್ಯಾಯ ಇಂಧನ-ಶಕ್ತಿ ಮೂಲಗಳಿಗೆ ಸ್ಥಿತ್ಯಂತರ ಮತ್ತು ಹಸಿರುಮನೆ ಅನಿಲಗಳ ತಡೆಗೆ ಆರ್ಥಿಕ ನೆರವು ನೀಡುವಿಕೆ) ಹಾಕಿಕೊಳ್ಳಲಾಯಿತು. ಕೋಪನ್‌ಹೇಗನ್‌ನಲ್ಲಿ 2009ರಲ್ಲಿ ನಡೆದ 15ನೇ ಶೃಂಗಸಭೆಯಲ್ಲಿ 2020ರೊಳಗೆ ವಾರ್ಷಿಕ 100 ಬಿಲಿಯನ್ ಡಾಲರ್ ನೆರವು ಹಾಗೂ 2020ರಲ್ಲಿ ಈ ಮೊತ್ತವನ್ನು ಪರಿಷ್ಕರಿಸುವುದಾಗಿ ಶ್ರೀಮಂತ ದೇಶಗಳು ಆಶ್ವಾಸನೆ ನೀಡಿದ್ದವು. ಶ್ರೀಮಂತ ದೇಶಗಳ ಕ್ಲಬ್ ಎನ್ನಿಸಿಕೊಂಡಿರುವ ಒಇಸಿಡಿ ಅಂದಾಜಿನ ಪ್ರಕಾರ, 2020ರ ಗುರಿಯನ್ನು 2022ರಲ್ಲಿ ತಲುಪಲಾಗಿದೆ. ಇದರಿಂದ ಬಾಕು ಶೃಂಗದಲ್ಲಿ ಯೋಜಿಸಿದ ಎನ್‌ಸಿಕ್ಯುಜಿ ಸಾಧ್ಯವಾಗುವುದೇ ಎಂಬ ಸಂದೇಹ ವ್ಯಕ್ತವಾಗಿದೆ.
ಈ ಆರ್ಥಿಕ ನೆರವಿನಲ್ಲಿ 2/3 ಭಾಗವನ್ನು ಬಡದೇಶಗಳಿಗೆ ನೀಡಬೇಕಾಗುತ್ತದೆ. ‘ಶ್ರೀಮಂತ ದೇಶಗಳು ತಮ್ಮ ಅಭಿವೃದ್ಧಿ ಪಥದಲ್ಲಿ ವಾತಾವರಣಕ್ಕೆ ಅಧಿಕ ಕೊಳೆಗಾಳಿಯನ್ನು ಸೇರ್ಪಡೆಗೊಳಿಸಿವೆ; ಈ ಮಾಲಿನ್ಯದ ಚಾರಿತ್ರಿಕ ಹೊಣೆಗಾರಿಕೆಯನ್ನು ಅವು ಹೊರಬೇಕು. ಅವುಗಳ ಇಂಗಾಲದ ಕೋಟಾ ಮುಗಿದಿರುವುದರಿಂದ, ಕೊಳೆಗಾಳಿ ತುಂಬುವಿಕೆಯನ್ನು ನಿಲ್ಲಿಸಿ, ಶೂನ್ಯ ಇಂಗಾಲ ಸ್ಥಿತಿ ತಲುಪಬೇಕು. ಪ್ರಗತಿಯ ದಾರಿಯಲ್ಲಿರುವ ಇತರ ದೇಶಗಳಿಗೆ ಹಣಕಾಸು-ತಂತ್ರಜ್ಞಾನ ಪೂರೈಸಬೇಕು’ ಎಂದು ಬಹಳ ಹಿಂದಿನಿಂದಲೂ ಬಡ ದೇಶಗಳು ಆಗ್ರಹಿಸುತ್ತಿವೆ. ಇದನ್ನು ಮುಂದುವರಿದ ದೇಶಗಳು ಒಪ್ಪುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ಮತ್ತು ಆರ್ಥಿಕ ಮಿತವ್ಯಯ ನೀತಿ ಅನುಸರಿಸುತ್ತಿರುವ ಬಡ ದೇಶಗಳು, ಇಂಧನ ಸ್ಥಿತ್ಯಂತರಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಆರ್ಥಿಕ ಬಲ ಹೊಂದಿಲ್ಲ. ಶ್ರೀಮಂತ ದೇಶಗಳು ಹಣ ಬಿಚ್ಚುತ್ತಿಲ್ಲ. ಇದನ್ನು ಸರಿದೂಗಿಸಲು ಪ್ಯಾರಿಸ್ ಒಪ್ಪಂದದಲ್ಲಿ ‘ಸಾಮಾನ್ಯವಾದ ಆದರೆ ಭೇದಾತ್ಮಕವಾದ ಜವಾಬ್ದಾರಿಗಳು ಹಾಗೂ ಸಂಬಂಧಿತ ಸಾಮರ್ಥ್ಯಗಳು’ ಎಂಬ ಪರಿಕಲ್ಪನೆಯನ್ನು ಸೇರ್ಪಡೆಗೊಳಿಸಲಾಗಿತ್ತು.
ಕಳೆದ ನಾಲ್ಕು ವರ್ಷಗಳಿಂದ ಎನ್‌ಸಿಕ್ಯುಜಿ ಬಗ್ಗೆ ಮಾತುಕತೆ ನಡೆಯುತ್ತಿದೆ. ಹವಾಮಾನ ಪರಿಣತರ ಪ್ರಕಾರ, ಉತ್ತರದಿಂದ ದಕ್ಷಿಣಕ್ಕೆ ಹರಿಯಬೇಕಿರುವ ಹವಾಮಾನ ನೆರವು 1 ಟ್ರಿಲಿಯನ್‌ನಿಂದ 3-4 ಟ್ರಿಲಿಯನ್. ಈ ಹಿನ್ನೆಲೆಯಲ್ಲಿ ಬಡ ದೇಶಗಳು ವಾರ್ಷಿಕ 1.3 ಟ್ರಿಲಿಯನ್ ಡಾಲರ್ ನೆರವು ಕೇಳಿದ್ದವು. ಕೊಡಲೊಪ್ಪಿದ 300 ಬಿಲಿಯನ್ ಡಾಲರ್ ನೆರವನ್ನು ‘ನಗೆಚಾಟಿಕೆ’ ಎಂದು ತಳ್ಳಿಹಾಕಿದವು. ಹಣದುಬ್ಬರ ಪ್ರಮಾಣ ವಾರ್ಷಿಕ ಶೇ.5 ಎಂದು ಪರಿಗಣಿಸಿದರೆ, ನೆರವು 235 ಬಿಲಿಯನ್ ಡಾಲರ್ ಆಗಲಿದೆ; ಇದು ಏನೇನೂ ಸಾಲದು ಎನ್ನುವುದು ಬಡ ದೇಶಗಳ ದೂರು. ಜೊತೆಗೆ, ಶ್ರೀಮಂತ ದೇಶಗಳು ಈ ಹಿಂದೆ ನೀಡಿದ್ದ ವಾಗ್ದಾನವನ್ನು ಉಳಿಸಿಕೊಂಡಿಲ್ಲ. ಇದರಿಂದಾಗಿ ನೆರವು ಸಿಗುತ್ತದೆ ಎನ್ನುವ ಖಾತ್ರಿಯಿಲ್ಲ. ಜೊತೆಗೆ, ಈ ಮೊತ್ತ ನಗದು ರೂಪದಲ್ಲಿ ಇರುವುದಿಲ್ಲ; ಅನುದಾನ, ವಿನಾಯಿತಿಗಳು, ಬಡ್ಡಿರಹಿತ ಸಾಲ ಹಾಗೂ ಕಡಿಮೆ ಬಡ್ಡಿಯ ಸಾಲದ ರೂಪದಲ್ಲಿ ಇರಲಿದೆ.
ಶ್ರೀಮಂತ ರಾಷ್ಟ್ರಗಳ ನಿಲುವು ನಿರೀಕ್ಷಿತ. ಅವು 1970ರಲ್ಲಿ ತಮ್ಮ ಒಟ್ಟು ರಾಷ್ಟ್ರೀಯ ಆದಾಯದ ಶೇ.0.7ರಷ್ಟನ್ನು ಅಭಿವೃದ್ಧಿ ನೆರವಿನ ರೂಪದಲ್ಲಿ ಬಡ ದೇಶಗಳಿಗೆ ನೀಡುವುದಾಗಿ ಹೇಳಿದ್ದವು. 50 ವರ್ಷಗಳ ಬಳಿಕ ನೋಡಿದರೆ, ಲಕ್ಸೆಂಬರ್ಗ್, ನಾರ್ವೆ, ಇಂಗ್ಲೆಂಡ್, ಸ್ವೀಡನ್, ಡೆನ್ಮಾರ್ಕ್ ಹಾಗೂ ಜರ್ಮನಿ ಮಾತ್ರ ಶೇ.0.7ರಷ್ಟು ಅಭಿವೃದ್ಧಿ ನೆರವು ನೀಡುತ್ತಿವೆ. ಉಳಿದ 16 ದೇಶಗಳು ನೀಡುತ್ತಿರುವ ನೆರವು ಕಡಿಮೆ ಇದೆ. ಅಮೆರಿಕ ನೀಡುತ್ತಿರುವುದು ಕೇವಲ ಶೇ.0.2ರಷ್ಟು ಮಾತ್ರ. ಆದರೆ, ಈ ಅವಧಿಯಲ್ಲಿ ದೇಶಗಳ ಒಟ್ಟು ರಾಷ್ಟ್ರೀಯ ಆದಾಯ ಶೇ.8ರಷ್ಟು ಹೆಚ್ಚಳಗೊಂಡಿದೆ.
ಜವಾಬ್ದಾರಿ ಹೊರಲು ಒಪ್ಪದ ದೇಶಗಳು
ಅಮೆರಿಕ ಜಗತ್ತಿನ ಅತ್ಯಂತ ದೊಡ್ಡ ಮಲಿನಕರ ದೇಶಗಳಲ್ಲಿ ಒಂದು. ಆದರೆ, ತಾವು ಹವಾಮಾನ ಬದಲಾವಣೆ ಪ್ರಯತ್ನಗಳಿಗೆ ನೆರವು ನೀಡುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದಾರೆ. ‘ಅಮೆರಿಕ ಮೊದಲು’ ಕಾರ್ಯ ನೀತಿ ಅನ್ವಯ ಆಮದಿನ ಮೇಲೆ ಶುಲ್ಕ ಹೆಚ್ಚಳ ಹಾಗೂ ವಲಸೆ ಬಂದವರನ್ನು ಸ್ವದೇಶಕ್ಕೆ ವಾಪಸ್ ಕಳಿಸುವುದಾಗಿ ಘೋಷಿಸಿದ್ದಾರೆ. ಟ್ರಂಪ್ ಹೇಳುವ ‘ಡ್ರಿಲ್ ಬೇಬಿ ಡ್ರಿಲ್’ ನೀತಿಯಿಂದ ಪಳೆಯುಳಿಕೆ ಇಂಧನಗಳ ಎತ್ತುವಿಕೆ ಹೆಚ್ಚಲಿದೆ. ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರ ‘3-3-3’ ಕಾರ್ಯನೀತಿ(ಶೇ.3 ಆರ್ಥಿಕ ಬೆಳವಣಿಗೆ, ಜಿಡಿಪಿಯ ಶೇ.3ರಷ್ಟು ಆಯವ್ಯಯ ಕೊರತೆ ಹಾಗೂ ದಿನವೊಂದಕ್ಕೆ 3 ದಶಲಕ್ಷ ಬ್ಯಾರಲ್ ತೈಲ-ಅನಿಲ ಉತ್ಪಾದನೆ)ಯಿಂದ ಪರಿಸರಕ್ಕೆ ತೀವ್ರ ಹಾನಿ ಆಗಲಿದೆ. ಚೀನಾ ಕೂಡ ತೈಲ-ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸಿದೆ. ಇದರಿಂದ ಹವಾಮಾನ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ.
ವಿಶ್ವ ಸಂಸ್ಥೆಯ ಹವಾಮಾನ ಮುಖ್ಯಸ್ಥ ಸೈಮನ್ ಸ್ಟೀಲ್ ಅವರ ‘ಜಿ-20 ದೇಶಗಳು ಹವಾಮಾನ ಬದಲಾವಣೆಯಿಂದ ಹಾನಿಗೀಡಾಗುವ ದೇಶಗಳಿಗೆ ನೆರವು ಹೆಚ್ಚಿಸಬೇಕು’ ಎಂಬ ಕೋರಿಕೆಗೆ ಆ ದೇಶಗಳು ಪ್ರತಿಕ್ರಿಯಿಸಲಿಲ್ಲ. ಸಭೆಯಲ್ಲಿ ಜಿ-20 ಗುಂಪಿನ ಹಲವು ದೇಶಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಈ ದೇಶಗಳು ಜಾಗತಿಕ ಜಿಡಿಪಿಯಲ್ಲಿ ಶೇ. 85ರಷ್ಟು ಪಾಲು ಹೊಂದಿದ್ದು, ಶೇ.80ರಷ್ಟು ಕೊಳೆಗಾಳಿ ತುಂಬುತ್ತವೆ. ಬಡತನ-ಹಸಿವಿನ ವಿರುದ್ಧ ಹೋರಾಟ ಹಾಗೂ ಅತಿ ಶ್ರೀಮಂತರಿಗೆ ತೆರಿಗೆ ಹೆಚ್ಚಿಸುವ ಬಗ್ಗೆ ಮಾತನ್ನಾಡಿದರೂ, ಪಳೆಯುಳಿಕೆ ಇಂಧನದಿಂದ ಸ್ಥಿತ್ಯಂತರದ ವೇಗವರ್ಧನೆ ಬಗ್ಗೆ ಉಸಿರೆತ್ತಲಿಲ್ಲ; ಬಡ ದೇಶಗಳಿಗೆ ನೆರವಾಗುವ ಬಗ್ಗೆಯೂ ಪ್ರತಿಕ್ರಿಯಿಸಲಿಲ್ಲ. ಇದಕ್ಕೆ ಟ್ರಿಲಿಯನ್‌ಗಟ್ಟಲೆ ಹಣ ಬೇಕಾಗುತ್ತದೆ ಎಂದು ಗೊತ್ತಿರುವುದರಿಂದ, ಎಲ್ಲ ದೇಶಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿವೆ.
ಒಪ್ಪಂದದ ಕಳವಳಕರ ಅಂಶ:
ಬಾಕು ಒಪ್ಪಂದದ ಕಳವಳಕರ ಅಂಶವೆಂದರೆ, ವಿಶ್ವ ಬ್ಯಾಂಕ್ ಮತ್ತು ಇನ್ನಿತರ ಬಹು ಆಯಾಮದ ಅಭಿವೃದ್ಧಿ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಆರ್ಥಿಕ ನೆರವಿಗೆ ಸೇರ್ಪಡೆಗೊಳಿಸಿರುವುದು. ಇದೊಂದು ಗಂಭೀರ ಲೋಪ. ಜಾಗತಿಕ ಹಣಕಾಸು ವ್ಯವಸ್ಥೆ ಎಷ್ಟು ಅಸಮಾನವಾಗಿದೆ ಎಂದರೆ, ಆಫ್ರಿಕಾದ ದೇಶಗಳು ಸಾಲಕ್ಕೆ ಅಮೆರಿಕಕ್ಕಿಂತ ನಾಲ್ಕು ಪಟ್ಟು ಹಾಗೂ ಯುರೋಪಿನ ದೇಶಗಳಿಂತ 8 ಪಟ್ಟು ಹೆಚ್ಚು ಬಡ್ಡಿ ತೆರುತ್ತವೆ. ಇಡೀ ವ್ಯವಸ್ಥೆ ಬಡ ದೇಶಗಳಿಗೆ ವಿರುದ್ಧವಾಗಿದೆ. ಜೊತೆಗೆ, ಶೃಂಗಸಭೆಯಲ್ಲಿ ಪಳೆಯುಳಿಕೆ ಇಂಧನ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಭಾರೀ ಕೃಷಿ-ಆಹಾರ ಉದ್ಯಮಗಳು ಪಾಲ್ಗೊಂಡಿದ್ದವು; ರೈತರು, ಮೂಲವಾಸಿಗಳು ಮತ್ತು ಸ್ಥಳೀಯ ಆಹಾರ ಉತ್ಪಾದಕರಿಗೆ ಪ್ರವೇಶ ಇರಲಿಲ್ಲ. ಇದು ಹಿತಾಸಕ್ತಿ ಸಂಘರ್ಷ. ಪಳೆಯುಳಿಕೆ ಇಂಧನಗಳಿಂದ ಉತ್ಪಾದಿಸುವ ಕೀಟನಾಶಕ ಮತ್ತು ರಸಾಯನಿಕ ಗೊಬ್ಬರಗಳು ಜೈವಿಕ ವೈವಿಧ್ಯ, ಮಣ್ಣು ಹಾಗೂ ಆರೋಗ್ಯದ ಮೇಲೆ ವಿಪರಿಣಾಮ ಬೀರುತ್ತವೆ.
ಇಂಗಾಲ ಉದ್ರಿ ಒಪ್ಪಂದ
ವಾತಾವರಣಕ್ಕೆ ಅತಿ ಹೆಚ್ಚು ಕೊಳೆಗಾಳಿ ತುಂಬುವ ದೇಶಗಳು ಕಡಿಮೆ ಇಂಗಾಲ ತುಂಬುವ ರಾಷ್ಟ್ರಗಳಿಂದ ಉದ್ರಿ ಪಡೆಯಲು, ಇಂಗಾಲ ಮಾರುಕಟ್ಟೆ ನೆರವಾಗಲಿದೆ. ತನ್ನ ಕೊಳೆಗಾಳಿ ಕೋಟಾ ಮೀರಿರುವ ದೇಶವೊಂದು ಕಡಿಮೆ ಕೊಳೆಗಾಳಿ ತುಂಬುವ ದೇಶದಿಂದ ಇಂತಹ ಸಾಲ ಪಡೆದುಕೊಳ್ಳಬಹುದು. 2005ರ ಬಳಿಕ ಇಂಗಾಲ ಉದ್ರಿ ವಹಿವಾಟು ತೀವ್ರವಾಗಿ ಬೆಳೆದಿದೆ. ಬಾಕುವಿನಲ್ಲಿ ಜಾಗತಿಕ ಇಂಗಾಲ ಮಾರುಕಟ್ಟೆಗೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಬರಲಾಗಿದ್ದು, ವಿಶ್ವ ಸಂಸ್ಥೆ ಅದರ ಮೇಲುಸ್ತುವಾರಿ ನಡೆಸಲಿದೆ. ವಿಶ್ವ ಸಂಸ್ಥೆಯ ವಿಭಾಗವೊಂದು ಇಂಗಾಲ ಮಾರುಕಟ್ಟೆಯ ಮಧ್ಯಸ್ಥಿಕೆ ವಹಿಸಲಿದ್ದು, ಉಸ್ತುವಾರಿ ಹಾಗೂ ಯೋಜನೆಗಳ ಮೌಲ್ಯಮಾಪನ ಮಾಡಲಿದೆ. ಅರಣ್ಯೀಕರಣದಿಂದ ಇಂಗಾಲ ಹೀರಿಕೊಳ್ಳುವಿಕೆ ಆದರೂ, ಅದಷ್ಟೇ ಸಾಕಾಗುವುದಿಲ್ಲ. ಇಂಗಾಲ ಮಾರುಕಟ್ಟೆ ಮೂಲಕ ಹವಾಮಾನ ಬದಲಾವಣೆ ತಡೆಗೆ ಬೇಕಾದ ಹಣ ಹೊಂದಿಸಬಹುದು ಮತ್ತು ಪ್ಯಾರಿಸ್ ಒಪ್ಪಂದದ ಕಟ್ಟುಪಾಡುಗಳನ್ನು ತಲುಪಲು ಪ್ರಯತ್ನಿಸಬಹುದು. ಇದರಿಂದ ಭಾರತದಂಥ ದೇಶಗಳಿಗೆ ಉಪಯೋಗ ಆಗಲಿದೆ. ಆದರೆ, ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಪ್ಪಂದ ಆಗಬೇಕಿದೆ.
ಮಾರ್ಗ ಕಠಿಣ
2021-22ರಲ್ಲಿ ಶ್ರೀಮಂತ ದೇಶಗಳು ಬಡ ದೇಶಗಳಿಗೆ 115 ಬಿಲಿಯನ್ ಡಾಲರ್ ನೆರವು ನೀಡಿವೆ. ಚೀನಾ, ಭಾರತ ಮತ್ತು 77 ದೇಶಗಳು, ಎಲ್‌ಎಂಡಿಸಿ, ಎಲ್‌ಡಿಸಿ ಮತ್ತು ಎಸ್‌ಐಡಿಎಸ್ ಗುಂಪಿನ ಪ್ರಕಾರ, ಶ್ರೀಮಂತ ದೇಶಗಳು ಹೆಚ್ಚು ಹವಾಮಾನ ಅನುದಾನ ನೀಡಬೇಕು; ದೇಣಿಗೆಯು ಆ ದೇಶಗಳು ಈ ಹಿಂದೆ ವಾತಾವರಣಕ್ಕೆ ತುಂಬಿದ ಕೊಳೆ ಗಾಳಿ ಹಾಗೂ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ಕ್ಕೆ ಅನುಗುಣವಾಗಿರಬೇಕು. ಆದರೆ, ಯುರೋಪಿಯನ್ ಯೂನಿಯನ್ ನೇತೃತ್ವದ ಶ್ರೀಮಂತ ದೇಶಗಳ ಪ್ರಕಾರ, ಬಡ ದೇಶಗಳು ಕೇಳಿರುವ ವಾರ್ಷಿಕ 1.3 ಟ್ರಿಲಿಯನ್ ಮೊತ್ತ ಬಹಳ ಹೆಚ್ಚು. ಈ ದೇಶಗಳು ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ವರ್ಗಾವಣೆ ಇಲ್ಲವೇ ಮೂಲಸೌಲಭ್ಯದಲ್ಲಿ ಹೂಡಿಕೆ ಮೂಲಕ ದಕ್ಷಿಣ ದೇಶಗಳ ದುರ್ಬಲ ಸಮುದಾಯಗಳು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ನೆರವಾಗಬಹುದಿತ್ತು. ಇಂಗಾಲ ಹೊರಸೂಸುವಿಕೆಯ ವಿಪರಿಣಾಮ ಜಗಜ್ಜಾಹೀರಾಗಿದ್ದರೂ, ಬಡ ದೇಶಗಳಿಗೆ ಅಗತ್ಯ ನೆರವು ಸಿಗುತ್ತಿಲ್ಲ. ಜೊತೆಗೆ, ಕೆಲವು ಶ್ರೀಮಂತ ದೇಶಗಳು ಹಣದಾಸೆಯಿಂದ ಪಳೆಯುಳಿಕೆ ಇಂಧನ ಆಧರಿತ ಅಭಿವೃದ್ಧಿ ಪಥವನ್ನು ಆಯ್ಕೆ ಮಾಡಿಕೊಳ್ಳಲು ಬಡ ದೇಶಗಳಿಗೆ ಉತ್ತೇಜನ ನೀಡುತ್ತಿವೆ.
ಹವಾಮಾನ ಬದಲಾವಣೆ ನೆರವು ಸಾರ್ವಜನಿಕ-ಖಾಸಗಿ, ದ್ವಿಪಕ್ಷೀಯ-ಬಹುಪಕ್ಷೀಯ ಹಾಗೂ ಪರ್ಯಾಯ ಮೂಲಗಳಿಂದ ಬರಲಿದೆ. ಆದರೆ, ಅದು ಅನುದಾನ ಇಲ್ಲವೇ ಕಡಿಮೆ ಬಡ್ಡಿಯ ಸಾಲದ ರೂಪದಲ್ಲಿ ಇರಬೇಕು ಎನ್ನುವುದು ಬಡ ರಾಷ್ಟ್ರಗಳ ಪ್ರಮುಖ ಬೇಡಿಕೆ. ಜೊತೆಗೆ, ಯುರೋಪಿಯನ್ ಯೂನಿಯನ್‌ನ ದೇಶಗಳು ತಮ್ಮ ದೇಶಗಳ ಇಂಗಾಲ ತುಂಬುವಿಕೆ ನಿಯಮಗಳಿಗೆ ಅನುಗುಣವಾಗಿಲ್ಲದ ಉತ್ಪನ್ನಗಳಿಗೆ ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಂ (ಸಿಬಿಎಂ)ಅಡಿ ತೆರಿಗೆ ಹೇರಲು ಉದ್ದೇಶಿಸಿವೆ. ಈ ತೆರಿಗೆ ಜನವರಿ 1, 2026ರಿಂದ ಜಾರಿಗೆ ಬರಲಿದೆ. ಈ ಸಂಬಂಧ ಚರ್ಚೆ ನಡೆಯಬೇಕೆಂದು ಬೇಸಿಕ್ ದೇಶಗಳು(ಬ್ರೆಝಿಲ್, ದಕ್ಷಿಣ ಆಫ್ರಿಕಾ, ಭಾರತ, ಚೀನಾ) ಮನವಿ ಸಲ್ಲಿಸಿದ್ದವು. ಅದು ಬದಿಗೆ ಸರಿಸಲ್ಪಟ್ಟಿತು.
ತಜ್ಞರ ಪ್ರಕಾರ, ಜಗತ್ತಿನ ಎಲ್ಲ ದೇಶಗಳು ಕೊಳೆಗಾಳಿ ತುಂಬುವಿಕೆ ಕಡಿತಗೊಳಿಸಿದರೂ, 2023ಕ್ಕೆ ಹೋಲಿಸಿದರೆ 2024ರಲ್ಲಿ ಇಂಗಾಲ ಮಾಲಿನ್ಯ ಶೇ.0.8ರಷ್ಟು ಹೆಚ್ಚಲಿದೆ. 2023ರಲ್ಲಿ ವಾತಾವರಣಕ್ಕೆ 41.6 ಗಿಗಾ ಟನ್(ಗಿಗಾ ಟನ್ ಅಂದರೆ ಒಂದು ಶತಕೋಟಿ ಮೆಟ್ರಿಕ್ ಟನ್) ಇಂಗಾಲದ ಡೈಆಕ್ಸೈಡ್ ಸೇರ್ಪಡೆಯಾಗಿದೆ. ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ಪ್ರಕಾರ, 2023ರಲ್ಲಿ ಈವರೆಗಿನ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಜನವರಿ-ಸೆಪ್ಟಂಬರ್ 2024ರಲ್ಲಿ ಜಾಗತಿಕ ಸರಾಸರಿ ಮೇಲ್ಮೈ ಉಷ್ಣಾಂಶವು ಪ್ಯಾರಿಸ್ ಒಪ್ಪಂದ ವಿಧಿಸಿದ ಮಿತಿ 1.5 ಡಿಗ್ರಿ ಸೆ. ದಾಟಿದೆ.
1992ರಲ್ಲಿ ರಿಯೋದಲ್ಲಿ ಮೊದಲ ಭೂಶೃಂಗ ಸಭೆ ನಡೆಯಿತು. 2025ರ ಶೃಂಗಸಭೆ ಮತ್ತೊಮ್ಮೆ ಬ್ರೆಝಿಲ್‌ನಲ್ಲಿ ನಡೆಯಲಿದ್ದು, ಅಲ್ಲಿಗೆ ಒಂದು ವೃತ್ತ ಪೂರ್ಣಗೊಳ್ಳಲಿದೆ. ಹಿಂದಿರುಗಿ ನೋಡಿದರೆ, ಕ್ರಿಯೆಗಿಂತ ಮಾತು ಮುಂದೆ ಇದೆ. ಆದರೆ, ಹವಾಮಾನ ಬದಲಾವಣೆಯ ವಿಪರಿಣಾಮಗಳು ತೀವ್ರಗೊಳ್ಳುತ್ತಿವೆ. ಶುಷ್ಕ ಮಾತುಗಳ ಬದಲು ಸ್ಥಿತ್ಯಂತರಗೊಳಿಸಬಲ್ಲ ಕ್ರಿಯೆ ಅಗತ್ಯವಿತ್ತು. ಆದರೆ, ಅದು ಕಂಡುಬರುತ್ತಿಲ್ಲ. ಬಾಕುವಿನಲ್ಲಿ ಶೃಂಗಸಭೆಗೆ ಮುನ್ನವೇ ನಿರ್ಧಾರಗಳನ್ನು ತೆಗೆದುಕೊಂಡು, ಬಳಿಕ ಪ್ರಕಟಿಸಲಾಯಿತು ಎಂಬ ದೂರು ಇದೆ. ಶ್ರೀಮಂತ-ಬಡ ದೇಶಗಳ ನಡುವಿನ ಕಂದರ ದಿನೇದಿನೇ ಹೆಚ್ಚುತ್ತಿದೆ. ಬಡದೇಶಗಳು ಹೈರಾಣಾಗುತ್ತಿವೆ; ಭೂಮಿ ಚಡಪಡಿಸುತ್ತಿದೆ. ಶ್ರೀಮಂತ ದೇಶಗಳು ಚಾರಿತ್ರಿಕ ಮಾಲಿನ್ಯದ ಜವಾಬ್ದಾರಿ ಹೊರಲು ನಿರಾಕರಿಸುತ್ತಿವೆ. ಅಂತರ್‌ರಾಷ್ಟ್ರೀಯ ಒಪ್ಪಂದವೊಂದಕ್ಕೆ ನಂಬಿಕೆ ಮತ್ತು ಸಹಯೋಗ ಅಗತ್ಯ; ಬಾಕುವಿನಲ್ಲಿ ಇದು ಗೈರುಹಾಜರಾಗಿತ್ತು. ಇದರಿಂದ ಇನ್ನೊಂದು ಅವಕಾಶ ಕೈ ಚೆಲ್ಲಿತು.