ಪರ್ಯಾಯದ ಹುಡುಕಾಟದಲ್ಲಿ ಬೀಡಿ ಕಾರ್ಮಿಕರು
ಬವಣೆಗೆ ಸರಕಾರ ಕಿವಿಯಾಗುವುದೇ?

ಮಂಗಳೂರು, ಜ.3: ಕರಾವಳಿ ಕರ್ನಾಟಕದಲ್ಲಿ 1970ರಿಂದ ಸುಮಾರು 2010ರವರೆಗೂ ಸಾಮಾನ್ಯ ಜನಜೀವನದ ಆರ್ಥಿಕತೆಯ ಪ್ರಮುಖ ಕೊಂಡಿ, ಬಡವರ ಪಾಲಿನ ಜೀವನಾಧಾರವಾಗಿದ್ದ ಬೀಡಿ ಉದ್ಯಮ ಬಹುತೇಕವಾಗಿ ತೆರೆಮರೆಗೆ ಸಾಗಿದೆ. ಈ ನಡುವೆಯೇ, ಅವನತಿಯ ಅಂಚಿನಲ್ಲಿರುವ ಈ ಉದ್ಯಮಕ್ಕೆ ಪರ್ಯಾಯ ವ್ಯವಸ್ಥೆಯಾಗಲಿ, ಅಳಿದುಳಿದ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಪುನರ್ವಸತಿ ಒದಗಿಸುವ ಪ್ರಸ್ತಾವವೇ ರಾಜ್ಯ ಸರಕಾರದ ಮುಂದಿಲ್ಲ ಎಂಬ ಕಾರ್ಮಿಕ ಸಚಿವಾಲಯದ ಹೇಳಿಕೆ ಬೀಡಿ ಕಾರ್ಮಿಕರನ್ನು ತಲ್ಲಣಗೊಳಿಸುವಂತಿದೆ.
ಬೀಡಿ ಕಾರ್ಮಿಕರಿಗೆ ಪುನರ್ವಸತಿ ಪ್ರಸ್ತಾವ ಸರಕಾರದ ಮುಂದಿಲ್ಲ!
ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಬೀಡಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿರುವ ಬಗ್ಗೆ ಯಾವುದೇ ದೂರುಗಳಾಗಲೀ, ಬೀಡಿ ಕಾರ್ಮಿಕರಿಗೆ ಪುನರ್ವಸತಿ ಒದಗಿಸುವ ಕುರಿತು ಯಾವುದೇ ಪ್ರಸ್ತಾಪವಾಗಲೀ ಸರಕಾರದ ಮುಂದಿಲ್ಲ ಎಂದು ರಾಜ್ಯದ ಕಾರ್ಮಿಕ ಇಲಾಖೆ ತಿಳಿಸಿದೆ.
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನ ಪರಿಷತ್‌ನ ಅಧಿವೇಶನದಲ್ಲಿ ಶಾಸಕ ಐವನ್ ಡಿಸೋಜಾರವರು, ದ.ಕ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೀಡಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿರುವುದು ಸರಕಾರದ ಗಮನಕ್ಕೆ ಬಂದಿದೆಯೇ, ಬೀಡಿ ಕಾರ್ಮಿಕರಿಗೆ ಪುನರ್ವಸತಿ ಒದಗಿಸಲು ಸರಕಾರದ ಮುಂದಿರುವ ಕ್ರಮಗಳೇನು ಹಾಗೂ ಬೀಡಿ ಕಾರ್ಮಿಕರಿಗೆ ಪರ್ಯಾಯವಾಗಿ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪಿಸಲು ಸರಕಾರ ಚಿಂತನೆ ನಡೆಸಿದೆಯೇ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ಕಾರ್ಮಿಕ ಸಚಿವರು, ಬೀಡಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿರುವ ಬಗ್ಗೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ. ಪುನರ್ವಸತಿ ಒದಗಿಸುವ ಕುರಿತು ಕಾರ್ಮಿಕ ಕಾಯ್ದೆಯಡಿ ಯಾವುದೇ ಯೋಜನೆ ಇರುವುದಿಲ್ಲ. ಹಾಗಾಗಿ ಬೀಡಿ ಕಾರ್ಮಿಕರಿಗೆ ಪರ್ಯಾಯವಾಗಿ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪಿಸಿ ಉದ್ಯೋಗ ಒದಗಿಸುವ ಕುರಿತಾದ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದಿದ್ದಾರೆ.
ಹಲವು ರೀತಿಯ ಸಂಕಷ್ಟಗಳ ನಡುವೆಯೇ ಕರಾವಳಿ ಜಿಲ್ಲೆಗಳಲ್ಲಿ ಇಂದಿಗೂ ಲಕ್ಷಾಂತರ ಕುಟುಂಬಗಳು ಬೀಡಿ ಕಟ್ಟುವ ಕಾಯಕವನ್ನೇ ಜೀವನಾಧಾರವಾಗಿಸಿಕೊಂಡಿವೆ. ಹಲವು ಸಮಸ್ಯೆಗಳು ಬೀಡಿ ಉದ್ಯಮಕ್ಕೆ ಈಗಾಗಲೇ ಭಾರೀ ಪೆಟ್ಟು ನೀಡಿರುವಂತೆಯೇ, ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿರುವ ಜಿಎಸ್‌ಟಿ ಎಂಬ ಗುಮ್ಮ ಬೀಡಿಯನ್ನೇ ಬದುಕಾಗಿಸಿದವರ ಬಾಳನ್ನು ಕತ್ತಲಲ್ಲಿ ಮುಳುಗಿಸುವ ಆತಂಕವನ್ನು ತಂದೊಡ್ಡಿದೆ.
ದೇಶದಲ್ಲಿ ಜಿಎಸ್‌ಟಿ ಜಾರಿಯಾದಾಗಿನಿಂದ ಶೇ. 28ರಷ್ಟು ಜಿಎಸ್‌ಟಿಯನ್ನು ಬೀಡಿ ಮೇಲೂ ವಿಧಿಸಲಾಗುತ್ತಿದ್ದು, ಇದೀಗ ಜಿಎಸ್‌ಟಿ ಕೌನ್ಸಿಲ್‌ನ ಉಪ ಸಮಿತಿ ತಂಬಾಕು ಉತ್ಪನ್ನಗಳ ಜಿಎಸ್‌ಟಿಯನ್ನು ಶೇ. 28ರಿಂದ 35ಕ್ಕೆ ಏರಿಕೆ ಮಾಡಲು ಶಿಫಾರಸು ಮಾಡಿರುವುದು ಪರ್ಯಾಯ ಉದ್ಯೋಗವಿಲ್ಲದೆ, ಬೀಡಿಯ ಆದಾಯದಲ್ಲೇ ಬದುಕು ಸಾಗಿಸುತ್ತಿರುವವರ ಬದುಕನ್ನೇ ಕಸಿದುಕೊಳ್ಳುವ ಭೀತಿಯನ್ನುಸೃಷ್ಟಿಸಿದೆ.
ಶತಮಾನಕ್ಕೂ ಮೀರಿದ ಇತಿಹಾಸ ಬೀಡಿ ಕಾಯಕದ್ದು!
ಸುಮಾರು 120 ವರ್ಷಗಳ ಇತಿಹಾಸವನ್ನು ಹೊಂದಿರುವ ಬೀಡಿ ಉದ್ಯಮದಲ್ಲಿ ದೇಶದಲ್ಲಿ 3 ಕೋಟಿಗೂ ಅಧಿಕ ಮಂದಿ ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ 25 ಲಕ್ಷಕ್ಕೂ ಅಧಿಕ ಕಾರ್ಮಿಕರು ಬೀಡಿಯನ್ನು ಅವಲಂಬಿಸಿರುವುದಾಗಿ ಅಂದಾಜಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸುಮಾರು 20 ವರ್ಷಗಳ ಹಿಂದಿನವರೆಗೂ ಮಧ್ಯಮ ಹಾಗೂ ಬಡ ವರ್ಗದ ಪ್ರತೀ ಮನೆಯಲ್ಲೂ ಬೀಡಿ ಕಟ್ಟಲು ಉಪಯೋಗಿಸುತ್ತಿದ್ದ ಸೂಪು, ಬೀಡಿಯ ನೂಲುಗಳನ್ನು ಬಿಡಿಸಿ ಸುತ್ತಲು ಬಳಸುವ ಡಬ್ಬಿಗಳು, ಬೀಡಿಯ ಎಲೆಗಳನ್ನು ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಲು ಬಳಸಲಾಗುತ್ತಿದ್ದ ಎಲೆ ಅಚ್ಚಿ ಗಳು ಮತ್ತು ಕತ್ತರಿಗಳು ಇಂದು ಬಹುತೇಕವಾಗಿ ಕಣ್ಮರೆಯಾಗಿವೆ. ಹಾಗಿದ್ದರೂ ಬದುಕಿಗಾಗಿ ಅನಿವಾರ್ಯವಾಗಿ ಬೀಡಿ ಕಾಯಕವನ್ನು ಅವಲಂಬಿಸಿರುವ ಮನೆಗಳಲ್ಲಿ ಆ ಪರಿಕರಗಳನ್ನು ಅಲ್ಲಲ್ಲಿ ಕಾಣಬಹುದು.
ಬೀಡಿ ಕಟ್ಟುವ ಸೂಪು (ಬಿದಿರಿನ ಅಗಲವಾದ ಪರಿಕರ) ತೊಡೆಯ ಮೇಲೇರಿಸಿಕೊಂಡು, ಕತ್ತರಿಸಿ ನೆನೆ ಹಾಕಿ ಹದಗೊಳಿಸಿದ ಬೀಡಿಯ ಎಲೆಗಳನ್ನು ಎರಡೂ ಕೈಗಳಲ್ಲಿ ಹಿಡಿದು ನಡುವೆ ಹೊಗೆಸೊಪ್ಪು ತುಂಬಿಸಿ ಮೆತ್ತಗೆ ಮಡಚಿ ಬೀಡಿಯ ಆಕಾರಕ್ಕೆ ತಂದು ಅದರ ಎರಡೂ ತುದಿಗಳನ್ನು ಮುಚ್ಚಿ ನೂಲು ಹಾಕಿ ಭದ್ರಗೊಳಿಸುವ ದೃಶ್ಯ ಸಮಾರು ಎರಡು ದಶಕಗಳ ಹಿಂದಿನವರೆಗೂ ದ.ಕ. ಜಿಲ್ಲೆಯ ಪ್ರತೀ ಮನೆಗಳಲ್ಲೂ ಸಾಮಾನ್ಯವಾಗಿತ್ತು. ವಯಸ್ಸಿನ ತಾರತಮ್ಯವಿಲ್ಲದೆ, ಗಂಡು ಹೆಣ್ಣು (ಮಹಿಳೆಯರೇ ಅಧಿಕ ಸಂಖ್ಯೆ) ಜಾತಿ ಮತದ ಭೇದವಿಲ್ಲದೆ ಕುಟುಂಬದ ಆಧಾರವಾಗಿದ್ದ ಬೀಡಿಯ ಮೂಲಕವೇ ವಿದ್ಯಾವಂತರಾಗಿ, ಸಮಾಜದಲ್ಲಿ ಉನ್ನತ ಸ್ಥಾನ, ಸರಕಾರಿ ಉದ್ಯೋಗವನ್ನು ಪಡೆದವರೂ ಸಾವಿರಾರು ಮಂದಿ. ಪ್ರಸಕ್ತ ಅಂದಾಜಿನ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 4 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಇವರಲ್ಲಿ ಶೇ. 90ರಷ್ಟು ಮಂದಿ ಮಹಿಳೆಯರು.
ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮನೆಗಳಿಂದ ಹೊರ ಹೋಗಿ ದಿನಗೂಲಿಯಲ್ಲಿ ದುಡಿಯುವವರ ಆದಾಯ ಮನೆಯ ದಿನ ಖರ್ಚಿಗೇ ಸಾಕಾಗದೆ, ಮನೆಯಲ್ಲಿ ಬೀಡಿ ಕಟ್ಟುವ ಮಹಿಳೆಯರ ಸಂಪಾದನೆಯೇ ಮಕ್ಕಳ ಶಿಕ್ಷಣ, ಇತರ ಖರ್ಚು ವೆಚ್ಚಗಳಿಗೆ ಬಳಕೆಯಾಗುತ್ತಿದೆ. ಪುರುಷರಿಲ್ಲದ, ಮಹಿಳೆಯೇ ಆಧಾರವಾಗಿರುವ ಹಲವು ಕುಟುಂಬಗಳ ಸ್ವಾಭಿಮಾನದ ಬದುಕಿಗೆ ಅವಕಾಶ ನೀಡಿರುವುದು ಈ ಬೀಡಿ ಕಟ್ಟುವ ಕಾಯಕ.
ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ದ.ಕ. ಜಿಲ್ಲೆಯಲ್ಲಿ ದಿನಕ್ಕೆ ಕನಿಷ್ಠ 300ರಿಂದ 1,500 ಬೀಡಿ ಕಟ್ಟುವವರೂ ಇದ್ದಾರೆ. ಆದರೆ ಹಿಂದಿನಂತೆ, ಸಾಕಷ್ಟು ಪ್ರಮಾಣದ ಕಚ್ಚಾ ವಸ್ತುಗಳ ಅಲಭ್ಯತೆಯಿಂದಾಗಿ ಕೆಲವೊಮ್ಮೆ ವಾರದಲ್ಲಿ ಮೂರು ದಿನಗಳ ಕೆಲಸವೂ ಸಿಗುತ್ತಿಲ್ಲ. ಕೆಲಸ ಸಿಕ್ಕರೂ ಎಲೆ, ಹೊಗೆಸೊಪ್ಪಿನ ಗುಣಮಟ್ಟದ ಕೊರತೆಯಿಂದ ನಿಗದಿತ ಪ್ರಮಾಣದ ಕಚ್ಚವಸ್ತುವಿಗೆ ಪೂರಕವಾಗಿ ಬೀಡಿ ತಯಾರು ಆಗದೆ, ಕಚ್ಚಾವಸ್ತುವಿಗಾಗಿಯೇ ಹೆಚ್ಚಿನ ಮೊತ್ತ ತೆರಬೇಕಾದ ಪರಿಸ್ಥಿತಿಯೂ ಬೀಡಿಯಿಂದ ಹಲವು ಕುಟುಂಬಗಳನ್ನು ವಿಮುಖಗೊಳಿಸಿದೆ.
ಬೀಡಿ ಉದ್ಯಮ ನಡೆಸುವ ಗುತ್ತಿಗೆದಾರರ ಮೂಲಕ ಬೀಡಿ ಕಟ್ಟುವ ಕಾರ್ಮಿಕರಿಗೆ ಪಾಸ್‌ಬುಕ್ ವ್ಯವಸ್ಥೆ ಮಾಡಲಾಗುತ್ತದೆ. ಈ ಪಾಸ್‌ಪುಸ್ತಕ ಹೊಂದಿರುವವರಿಗೆ ಪಿಎಫ್ ಕಡಿತವಾಗಿ 1,000 ಬೀಡಿಗೆ 232 ರೂ.ವರೆಗೆ ಮಜೂರಿ ದೊರೆಯುತ್ತದೆ. ಪಾಸ್ ಪುಸ್ತಕ ಇಲ್ಲದವರಿಗೆ ಸಾವಿರ ಬೀಡಿಗೆ 280 ರೂ. ಮಜೂರಿ ನೀಡಲಾಗುತ್ತದೆ. ಮನೆಯಲ್ಲಿದ್ದುಕೊಂಡೇ ಇತರ ಕೆಲಸದ ಜತೆಗೆ ಈ ಕಾಯಕದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರುವುದರಿಂದ ಲಕ್ಷಾಂತರ ಬಡ ಮಹಿಳೆಯರಿಗೆ ಬೀಡಿ ಸುತ್ತುವ ಕಾಯಕ ದಿನದ ತುತ್ತಿನ ಭದ್ರ ಭರವಸೆಯಾಗಿದೆ.
ಮಾಲ್, ಅಂಗಡಿಗಳಲ್ಲಿ ದುಡಿಯಲು ಆಸಕ್ತಿ: ರಾಜ್ಯದಲ್ಲೇ ಅತೀ ಹೆಚ್ಚು ಬೀಡಿ ಕಾರ್ಮಿಕರನ್ನು ಹೊಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಸುಮಾರು 2 ಲಕ್ಷದಷ್ಟು ಬೀಡಿ ಕಾರ್ಮಿಕರಿರುವುದಾಗಿ ಅಂದಾಜಿಸಲಾಗಿದೆ. ವಾರಪೂರ್ತಿ ಸಿಗದ ಬೀಡಿಯ ಕಚ್ಚಾವಸ್ತು, ಆರೋಗ್ಯದ ಸಮಸ್ಯೆಗಳು ಬೀಡಿ ಕಟ್ಟುತ್ತಿದ್ದ ಮಹಿಳೆಯರು ಸೇರಿದಂತೆ ಯುವ ಪೀಳಿಗೆ ಪರ್ಯಾಯ ಖಾಸಗಿ ಉದ್ಯೋಗಗಳತ್ತ ಮುಖ ಮಾಡುವಂತೆ ಮಾಡಿದೆ. ಇದರಿಂದಾಗಿ ಮಾಲ್, ಮೆಡಿಕಲ್ ಶಾಪ್, ಅಂಗಡಿಗಳೆಂದು ಹೊರಗಿನ ಕೆಲಸಗಳಿಗೆ ಆಸಕ್ತಿ ತೋರುತ್ತಿದ್ದಾರೆ.
ಹೆಚ್ಚಳವಾದರೂ ಕೈಗೆ ಸಿಗದ ತುಟ್ಟಿಭತ್ತೆ
2018ರಲ್ಲಿ ಸರಕಾರದ ತ್ರಿಪಕ್ಷೀಯ ಸಮಿತಿಯಲ್ಲಿ ತುಟ್ಟಿಭತ್ತೆಯ ಹೆಚ್ಚಳದ ಕುರಿತಾಗಿ ಮಾತುಕತೆಯಾಗಿತ್ತು. ಈ ಮಾತುಕತೆಯ ಮಾನದಂಡಗಳ ಆಧಾರದಲ್ಲಿ 4 ಪೈಸೆ ತುಟ್ಟಿಭತ್ತೆ ನಿಗದಿಯಾಗಿದ್ದರೂ ಬೀಡಿ ಕಟ್ಟುವವರ ಕೈ ಸೇರುತ್ತಿಲ್ಲ ಎಂಬ ಅಳಲಿದೆ. ಹೆಚ್ಚಳ ಜಾರಿಯಾದರೆ, ಸಾವಿರ ಬೀಡಿಗೆ 290 ರೂ.ಗೂ ಅಧಿಕ ಮಜೂರಿ ಸಿಗಲಿದೆ.ಕರಾವಳಿ ಭಾಗದಲ್ಲಿ ಕಾರ್ಮಿಕ ಸಂಘಟನೆಗಳು ಬಲವಾಗಿರುವುದರಿಂದ ಸಾವಿರ ಬೀಡಿಯ ಮಜೂರಿ 230 ರೂ.ಗಳ ಗಡಿ ದಾಟಿದೆ. ಆದರೆ ಪಶ್ಚಿಮ ಬಂಗಾಳ,ಆಂಧ್ರ ಪ್ರದೇಶ,ಮಧ್ಯ ಪ್ರದೇಶ,ಒಡಿಶಾ ಇನ್ನಿತರ ರಾಜ್ಯಗಳಲ್ಲಿ ಕಡಿಮೆ ಕೂಲಿಗೆ ಬೀಡಿ ಕಟ್ಟಿಸಿಕೊಂಡು ಕಾರ್ಮಿಕರನ್ನು ಶೋಷಿಸಲಾಗುತ್ತಿದೆ.
ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆಯಡಿ ಕಾರ್ಡ್
ಕೇಂದ್ರ ಸರಕಾರವು 1977ರಲ್ಲಿ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ ಅಡಿಯಲ್ಲಿ ಬೀಡಿ ತಯಾರಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಬೀಡಿ ಕಾರ್ಡುಗಳನ್ನು ನೀಡಲು ಪ್ರಾರಂಭಿಸಿತು.ಈ ಕಾಯ್ದೆಯ ಮುಖ್ಯ ಉದ್ದೇಶ ಬೀಡಿ ಕಾರ್ಮಿಕರನ್ನು ಗುರುತಿಸುವುದಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶಾಲಾ ಸಮವಸ್ತ್ರ ,ಅನುದಾನ ಮುಂತಾದ ಹಲವಾರು ಸರಕಾರಿ ಯೋಜನೆಗಳನ್ನು ಪಡೆಯಲು ಈ ಕಾರ್ಡ್ ಪ್ರಯೋಜನಕಾರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರ 10 ಚಿಕಿತ್ಸಾಲಯಗಳಿವೆ. ಹೃದಯ ಕಾಯಿಲೆಯ ರೂ.1.5 ಲಕ್ಷ ಹಾಗೂ ಕ್ಯಾನ್ಸರ್ ಮತ್ತು ಮೂತ್ರಪಿಂಡ ವಿಫಲವಾದರೆ ರೂ.2 ಲಕ್ಷದವರೆಗೆ ಆರ್ಥಿಕ ನೆರವು ಸಿಗುತ್ತದೆ.
ಬೀಡಿ ಮಾರುಕಟ್ಟೆಯಲ್ಲಿ ಭಾರೀ ಕುಸಿತ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಬ್ರ್ಯಾಂಡ್‌ನ ಸಿಗರೆಟುಗಳು ಇಂದು ಮಾರುಕಟ್ಟೆಯಲ್ಲಿ ಅವ್ಯಾಹತವಾಗಿರುವಂತೆಯೇ, ಬೀಡಿಯ ಬೇಡಿಕೆ ಕುಗ್ಗಿದೆ. ಸಿಗರೆಟು ಮಾರುಕಟ್ಟೆಯು ಪ್ರಬಲಗೊಂಡಿರುವಂತೆಯೇ ಬೀಡಿ ಮಾರುಕಟ್ಟೆ ಕುಸಿತವಾಗುತ್ತಾ ಸಾಗಿದೆ. ಇದು ಬೀಡಿ ಕಟ್ಟುವ ಕಾರ್ಮಿಕರು ಮಾತ್ರವಲ್ಲ, ಬೀಡಿ ಗುತ್ತಿಗೆದಾರರು, ಬೀಡಿ ಕಂಪೆನಿಗಳ ಮಾಲಕರನ್ನು ಆತಂಕಕ್ಕೆ ತಳ್ಳಿದೆ.
ಕಾರ್ಮಿಕರನ್ನು ಕಾಡುವ ಆರೋಗ್ಯ ಸಮಸ್ಯೆ
ಬೀಡಿ ಕಟ್ಟುವ ಕೆಲಸ ಗೃಹ ಉದ್ಯೋಗವಾಗಿದ್ದು, ದಿನಕ್ಕೆ ಸಾವಿರ ಬೀಡಿ ಕಟ್ಟಲು ಕನಿಷ್ಠ 6 ರಿಂದ 8 ತಾಸುಗಳಾದರೂ ಬೇಕಾಗುತ್ತದೆ. ಇದಕ್ಕಾಗಿ, ತಾಸುಗಟ್ಟಲೆ ಕುಳಿಕೊಳ್ಳುವ ಮೂಲಕ ಹಲವಾರು ರೀತಿಯ ದೈಹಿಕ ತೊಂದರೆಗಳನ್ನು ಬೀಡಿ ಕಟ್ಟುವವರು ಎದುರಿಸುತ್ತಾರೆ. ಮಾತ್ರವಲ್ಲದೆ, ಹೊಗೆಸೊಪ್ಪಿನ ಘಾಟು ಕೂಡಾ ಆರೋಗ್ಯಕ್ಕೆ ಉತ್ತಮವಲ್ಲ ಎನ್ನಲಾಗುತ್ತದೆ. ಹಾಗಾಗಿ, ಕಾಲಿನ ಸೆಳೆತ, ತಲೆನೋವು, ಬೆನ್ನು ಹಾಗೂ ಸೊಂಟ ನೋವಿನಂತಹ ದೈಹಿಕ ಸಮಸ್ಯೆಗಳು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡವರನ್ನು ಸಾಮಾನ್ಯವಾಗಿ ಕಾಡುತ್ತವೆ.
ತಂದೆಯ ದಿನದ ಕೂಲಿಯಲ್ಲಿ ಮನೆಯ ಖರ್ಚುವೆಚ್ಚಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಬಳಿಕ ವಯಸ್ಸಾದ ತಂದೆ, ತಾಯಿಗೆ ಔಷಧಿ, ದಿನದ ಖರ್ಚುಗಳನ್ನು ನಿಭಾಯಿಸಲು ಬಾಲ್ಯದಲ್ಲೇ ಬೀಡಿ ಕಟ್ಟಲು ಆರಂಭಿಸಿದ್ದೆ. ಈಗ ದಿನಕ್ಕೆ ಸಾವಿರ ಬೀಡಿ ಕಟ್ಟುತ್ತಿದ್ದೇನೆ. ನನ್ನೆರಡು ಮಕ್ಕಳಿಗೆ ಈ ಬೀಡಿಯ ಆದಾಯದಿಂದಲೇ ಶಿಕ್ಷಣ ಕೊಡಿಸಿದ್ದೇನೆ. ಇಂದಿಗೂ ಬೀಡಿ ಕಟ್ಟುವಿಕೆಯನ್ನು ನಿಲ್ಲಿಸಿಲ್ಲ. ಬೀಡಿ ಕಟ್ಟುವಿಕೆ ನನ್ನನ್ನು ಸ್ವಾವಲಂಬಿಯನ್ನಾಗಿ ಮಾಡಿದೆ. ಕಳೆದ 35 ವರ್ಷಗಳಿಂದ ಬೀಡಿ ಕಟ್ಟುತ್ತಿದ್ದರೂ ಇಂದಿಗೂ ಸಾವಿರ ಬೀಡಿಗೆ 200 ರೂ. ಸಿಗುತ್ತಿರುವುದು ಬೇಸರ ತಂದಿದೆ.
-ಮರಿಯಮ್ಮ, ಡಿ.ಜಿ.ಕಟ್ಟೆ ಮಾವಿನಡಿ
ನನ್ನ 10ನೇ ವರ್ಷದಿಂದಲೇ ಬೀಡಿ ಕಟ್ಟುತ್ತಿದ್ದೇನೆ. ಮನೆಯಿಂದ ಹೊರಹೋಗಿ ದುಡಿಯುವಷ್ಟು ಶಕ್ತಿ ಈಗ ಮೈಯಲ್ಲಿಲ್ಲ. ಗಂಡನ ಅಗಲುವಿಕೆಯ ಬಳಿಕ ಕುಟುಂಬದ ಕೈ ಹಿಡಿದದ್ದು ಈ ಬೀಡಿ ಸುತ್ತುವ ಕಾಯಕ. ಸುಮಾರು 40 ವರ್ಷಗಳಿಂದಲೂ ಬೀಡಿ ಕಟ್ಟುತ್ತಲೇ ಜೀವನವನ್ನು ಸಾಗಿಸುತ್ತ್ತಿದ್ದೇನೆ. ಸಾವಿರ ಬೀಡಿಗೆ 200 ರೂ.ಆಸುಪಾಸು ಸಿಗುತ್ತದೆ. ಈ ಬೀಡಿ ಉದ್ಯಮ ನಿಂತು ಹೋದರೆ ನಮ್ಮ ಬದುಕಿಗೆ ಯಾವ ಪರ್ಯಾಯ ಕೆಲಸವಿದೆ? ಸರಕಾರ ನಮ್ಮ ಕುರಿತಾಗಿ ಕರುಣೆ ತೋರಿಸಲಿ. ಬೀಡಿ ನಮ್ಮ ಕಸುಬಲ್ಲ ನಮ್ಮ ಜೀವನ.
-ನಬೀಸ, ಬೀಡಿ ಕಟ್ಟುವ ಮಹಿಳೆ, ಮೋಂಟುಗೋಳಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ಬೀಡಿ ಉದ್ಯಮ ಬಹುದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ. ಪ್ರಸ್ತುತ ಬೀಡಿ ಕಾರ್ಮಿಕರ ಜೀವನ ಚಿಂತಾಜನಕವಾಗಿದ್ದು 4 ವರ್ಷಗಳ ಹಿಂದೆಯೇ ಕಾರ್ಮಿಕರ ಕನಿಷ್ಠ ಕೂಲಿ ಹೆಚ್ಚಳದ ಕುರಿತು ಮಾತುಕತೆಯಾಗಿದೆ. ಆ ವೇತನವನ್ನು ಕೂಡಾ ಸರಿಯಾದ ರೀತಿಯಲ್ಲಿ ಕೊಡುತ್ತಿಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಬೀಡಿಕಾರ್ಮಿಕರ ಪರವಾಗಿ ಸದನದಲ್ಲಿ ಮಾತನಾಡಲು ಸಮಯ ಸಿಗದೇ ಇರುವುದು ಶೋಚನೀಯ.
-ಮುನೀರ್ ಕಾಟಿಪಳ್ಳ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ
ದೇಶದಲ್ಲಿ ಬೀಡಿ ಉದ್ಯಮಕ್ಕೆ 100 ವರ್ಷಗಳಿಗಿಂ ತಲೂ ಹೆಚ್ಚು ಇತಿಹಾಸವಿದೆ. ಆದರೆ ಕಾರ್ಮಿಕರಿಗೆ ಕೇಂದ್ರ ಸರಕಾರದಿಂದ ಕನಿಷ್ಠ ಕೂಲಿ ಇನ್ನೂ ನಿಗದಿಯಾಗಿಲ್ಲ. ಕೇಂದ್ರ ಕೋಟ್ಪಾ ಕಾಯ್ದೆಯನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವೂ ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿರುತ್ಸಾಹಗೊಳಿಸಲು ಜಾಹೀರಾತು ನಿಷೇಧ ಹಾಗೂ ವ್ಯಾಪಾರ ಸರಬರಾಜುಗಳ ಮೇಲೆ ನಿಯಂತ್ರಣ ಹೇರಿದೆ. ಇದು ಬೀಡಿ ಕಾರ್ಮಿಕರಿಗೆ ಕಳವಳಕಾರಿಯಾಗಿ ಪರಿಣಮಿಸಿದೆ. ನಿಗದಿಯಾಗಿರುವ ತುಟ್ಟಿಭತ್ತೆಯೂ ಸಹ ಬೀಡಿ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಬೀಡಿ ಕಟ್ಟುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲೇ ಅತೀ ಹೆಚ್ಚು ಬೀಡಿ ಕಾರ್ಮಿಕರನ್ನು ಹೊಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಬೀಡಿ ಕಾರ್ಮಿಕರ ಸಂಖ್ಯೆ ಕುಸಿತವಾಗುತ್ತಿದೆ.
-ಜೆ.ಬಾಲಕೃಷ್ಣ ಶೆಟ್ಟಿ, ಕರ್ನಾಟಕ ರಾಜ್ಯ ಬೀಡಿ ಫೆಡರೇಷನ್ ಅಧ್ಯಕ್ಷ