ಬೆಳಗಾವಿ ಅಧಿವೇಶನ: ಸರಕಾರದ ಪಾಲಿಗೆ ದಾಖಲೆಯ ಕಲಾಪ!
ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 9ರಿಂದ ಆರಂಭವಾಗಿದ್ದ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಿತು. ಈ ಬಾರಿಯ ಅಧಿವೇಶನ ಕೆಲವು ಕಾರಣಗಳಿಗಾಗಿ ಕಾಂಗ್ರೆಸ್ ಸರಕಾರಕ್ಕೆ ಮುಖ್ಯವಾಗಿತ್ತು. 1924ರಲ್ಲಿ ಮಹಾತ್ಮಾಗಾಂಧೀಜಿಯ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಸಂದರ್ಭ ಇದಾಗಿರುವುದರಿಂದ, ಈ ಬಾರಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಯಶಸ್ವಿಯಾಗುವುದು ಕಾಂಗ್ರೆಸ್‌ಗೆ
ಅತ್ಯಗತ್ಯವಾಗಿತ್ತು. ಒಟ್ಟು ಎಂಟು ದಿನಗಳ ಅಧಿವೇಶನ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಸರಕಾರದ ಪಾಲಿಗೆ ಯಶಸ್ವೀ ಅಧಿವೇಶನ ಎನ್ನಿಸಿತು. ಡಿಸೆಂಬರ್ 16ರಂದು ಪ್ರಥಮ ಬಾರಿಗೆ ತಡರಾತ್ರಿಯವರೆಗೂ ಅಂದರೆ ಸುಮಾರು 15 ಗಂಟೆಗಳ ಕಾಲ ಕಲಾಪ ನಡೆದು ದಾಖಲೆಯ ಅಧಿವೇಶನವಾಗಿ ಗುರುತಿಸಿಕೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಮುಗಿಬಿದ್ದು ಮೆರೆದಾಡುತ್ತಿದ್ದ, ಅಬ್ಬರಿಸುತಿದ್ಧ ಬಿಜೆಪಿ, ಉಪ ಚುನಾವಣೆ ಸೋಲಿನ ಬಳಿಕ ಕುಗ್ಗಿಹೋದದ್ದು ಮತ್ತೆ ಸುಧಾರಿಸಿಕೊಂಡಂತೆ ಕಾಣಿಸಲಿಲ್ಲ. ಸರಕಾರದ ವಿರುದ್ಧ್ದ ಹರಿಹಾಯಲು ಹಲವು ಅಸ್ತ್ರಗಳನ್ನು ಇಟ್ಟಿಕೊಂಡಿರುವುದಾಗಿ ಹೇಳಿತ್ತಾದರೂ, ತನ್ನೊಳಗಿನ ಭಿನ್ನಮತ, ಸಮನ್ವಯದ ಕೊರತೆಯ ಪರಿಣಾಮವಾಗಿ ಬಿಜೆಪಿಯು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಬಹುತೇಕ ವಿಫಲವಾಯಿತು. ಮುಖ್ಯವಾಗಿ, ವಕ್ಫ್ ಆಸ್ತಿ ವಿಚಾರವನ್ನು ಉಪ ಚುನಾವಣೆ ಹೊತ್ತಲ್ಲಿ ಅಸ್ತ್ರವಾಗಿಸಿಕೊಂಡಿದ್ದ ಬಿಜೆಪಿ ಅಧಿವೇಶನದಲ್ಲಿಯೂ ಅದನ್ನೇ ಇಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದುಕೊಂಡಿತ್ತು. ಆದರೆ ಬಿಜೆಪಿಯ ಸುಳ್ಳು ಆರೋಪಗಳಿಗೆ, ಒಂದೊಂದು ಅಂಶವನ್ನೂ ವಿವರವಾಗಿ ದಾಖಲೆಗಳೊಂದಿಗೆ ಇಟ್ಟು ಉತ್ತರಿಸುವ ಮೂಲಕ ಸರಕಾರ, ಬಿಜೆಪಿಯೇ ಕಕ್ಕಾಬಿಕ್ಕಿಯಾಗುವ ಹಾಗೆ ಮಾಡಿತು.
ವಕ್ಫ್ ಆಸ್ತಿ ಎಷ್ಟು, ಬಿಜೆಪಿ ಮಾಡುತ್ತಿರುವ ಸುಳ್ಳು ಆರೋಪಗಳೇನು,ಆದರೆ ವಾಸ್ತವ ಏನು ಎಂಬುದನ್ನು ಸರಕಾರ ಹೇಳಿತು. ವಕ್ಫ್ ಬೋರ್ಡ್‌ನಿಂದ ನೋಟಿಸ್ ಜಾರಿಯಾದವರಲ್ಲಿ ಶೇ.95ರಷ್ಟು ಮುಸ್ಲಿಮರೇ ಇದ್ದಾರೆ ಎಂಬ ಅಂಶದ ಬಗ್ಗೆ ಸಚಿವ ಝಮೀರ್ ಅಹ್ಮದ್ ಗಮನ ಸೆಳೆದರು. ಈ ಹಿಂದೆ ಬಿಜೆಪಿ ಸರಕಾರದ ಕಾಲದಲ್ಲಿ 4,500 ಆಸ್ತಿಗಳನ್ನು ವಕ್ಫ್‌ಗೆ ಖಾತೆ ಬದಲಾವಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೇವಲ 600 ಆಸ್ತಿಗಳನ್ನು ಮಾತ್ರ ವಕ್ಫ್ ಗೆ ಖಾತೆ ಬದಲಾವಣೆ ಮಾಡಲಾಗಿದೆ ಎಂಬ ಮಹತ್ವದ ಮಾಹಿತಿಯೊಂದನ್ನು ಸದನದಲ್ಲಿ ಕೃಷ್ಣ ಬೈರೇಗೌಡ ಮುಂದಿಟ್ಟರು. ವಕ್ಫ್ ಗೆ ಸಂಬಂಧಿಸಿದಂತೆ 2018-19ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಖಾತೆ ಬದಲಾವಣೆ ಆಗಿಲ್ಲ. 2019-20ರಲ್ಲಿ ಬಿಜೆಪಿ ಅವಧಿಯಲ್ಲಿ 578 ಖಾತೆ ಬದಲಾವಣೆಯಾಗಿದೆ ಎಂದರು. ಇದು ತಪ್ಪಲ್ಲ. ಆದರೆ ಕಾಂಗ್ರೆಸ್ ಸರಕಾರ ಬಂದಾಗ ಆಗಿದೆ ಎಂದು ಆರೋಪ ಮಾಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದಾಗ ಬಿಜೆಪಿ ಮೌನವಾಗಬೇಕಾಯಿತು.
ಇದೇ ವೇಳೆ, ಬಿಜೆಪಿ ತಪ್ಪಾಗಿ ಬಿಂಬಿಸಿದ್ದ ಹಲವಾರು ಅಂಶಗಳ ಕುರಿತಂತೆ ವಾಸ್ತವವೇನು ಎಂಬುದನ್ನು ಕೃಷ್ಣಬೈರೇಗೌಡರು ಸದನದಲ್ಲಿ ಮುಂದಿಟ್ಟರು. ನಮ್ಮ ಸರಕಾರ ಕೇವಲ ವಕ್ಫ್ ಆಸ್ತಿ ಸಂರಕ್ಷಣೆಗೆ ಮಾತ್ರ ಕ್ರಮ ಕೈಗೊಂಡಿಲ್ಲ, ಮುಜರಾಯಿ ಇಲಾಖೆಗೆ ಸಂಬಂಧಿಸಿದ ಆಸ್ತಿಗಳ ಸಂರಕ್ಷಣೆಗೆ ಕೂಡ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು. 2023ರಲ್ಲಿ ನಮ್ಮ ಸರಕಾರ 5,402 ಎಕರೆ ಭೂಮಿಯನ್ನು ಮುಜರಾಯಿ ದೇವಸ್ಥಾನಗಳಿಗೆ ಖಾತೆ ಮಾಡಿಕೊಟ್ಟಿದೆ. ಈ ವರ್ಷ 5,287 ಎಕರೆ ಹಿಂದೂ ದೇವಸ್ಥಾನಗಳಿಗೆ ಖಾತೆ ಮಾಡಿ, ದೇವಸ್ಥಾನಗಳ ಜಾಗವನ್ನು ಸಂರಕ್ಷಣೆ ಮಾಡಿದ್ದೇವೆ ಎಂದರು. ಇದರೊಂದಿಗೆ, ಮುಜರಾಯಿ ದೇವಸ್ಥಾನಗಳ 10,700 ಎಕರೆ ಜಮೀನನ್ನು ನಮ್ಮ ಸರಕಾರ ಸಂರಕ್ಷಣೆ ಮಾಡಿದಂತಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದಲ್ಲಿ ವಕ್ಫ್ ಗೆ ಸಂಬಂಧಿಸಿದ ಕೇವಲ 600 ಎಕರೆ ಜಮೀನಿನ ಖಾತೆ ಬದಲಾವಣೆ ಮಾಡಿದ್ದೇವೆ. ಆದರೆ ಮುಜರಾಯಿ ದೇವಸ್ಥಾನಗಳ 10,700 ಎಕರೆ ಜಮೀನು ಸಂರಕ್ಷಣೆ ಮಾಡಲಾಗಿದೆ ಎಂದು ಅವರು ವಿವರ ನೀಡಿದಾಗ, ಧರ್ಮದ ಆಧಾರದ ನೆಪ ಮುಂದಿಟ್ಟು ಗದ್ದಲ ಮಾಡುವ ಬಿಜೆಪಿಯ ಆಟ ಸಾಗದಂತಾಯಿತು.
ಅಧಿವೇಶನವನ್ನು ಬಿಜೆಪಿಯ ಗದ್ದಲದ ನಡುವೆಯೂ ಯಶಸ್ವಿಯಾಗಿ, ಹೆಚ್ಚಿನ ಅವಧಿಯ ಕಲಾಪಗಳ ಮೂಲಕ ಮುನ್ನಡೆಸಿದ್ದು ಸರಕಾರದ ಮತ್ತೊಂದು ಯಶಸ್ಸು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮೊದಲೇ ಸ್ಪೀಕರ್ ಯು.ಟಿ.
ಖಾದರ್ ಹೇಳಿದ್ದರು. ಅಧಿವೇಶನ ಆರಂಭಿಸುವಾಗಲೂ ಅವರು, ಚುನಾವಣೆಯ ಚರ್ಚೆಗಳು ಮುಗಿದಿವೆ, ಇನ್ನು ಟಿವಿ ಚಾನೆಲ್ ಬದಲಾವಣೆ ಮಾಡಿದ ಹಾಗೆ ಚುನಾವಣೆ ಚರ್ಚೆಯನ್ನು ಬಿಟ್ಟು ಅಭಿವೃದ್ಧಿ ಚರ್ಚೆಯತ್ತ ಮುಖ ಮಾಡೋಣ ಎಂದು ಸದಸ್ಯರಿಗೆ ಮಾರ್ಮಿಕವಾಗಿ ಸಲಹೆ ನೀಡಿದರು.
ಅಂತೆಯೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಶಾಸಕರು ಮಾತನಾಡಿದರು. ಸ್ಪೀಕರ್ ಅವರೇ ಮಾಹಿತಿ ನೀಡಿರುವಂತೆ, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 49 ಸದಸ್ಯರು ಭಾಗವಹಿಸಿದ್ದು, ಸುಮಾರು 13 ಗಂಟೆ 11 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ. ನೀರಾವರಿ ಯೋಜನೆ, ಅಭಿವೃದ್ಧಿಯಲ್ಲಿ ಹಿನ್ನಡೆ, ಅನುದಾನ ಕೊರತೆ ವಿಚಾರವಾಗಿ ಚರ್ಚೆಗಳು ನಡೆದವು. ಕೊನೆಯ ದಿನವಾದ ಗುರುವಾರ ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಿದರು.
ಉತ್ತರ ಕರ್ನಾಟಕದ ಜನರ ಬಗ್ಗೆ ನಮ್ಮ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಈ ಭಾಗದ ಜನರ ಬಗ್ಗೆ ನನಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿದೆ. ಉತ್ತರ ಕರ್ನಾಟಕದ ಜನರೂ ಕರ್ನಾಟಕವನ್ನು ಕಟ್ಟುವುದರಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ನಂಜುಂಡಪ್ಪ ವರದಿಯ ಪ್ರಕಾರ 2007-08 ರಿಂದ 2023-24 ರವರೆಗೆ ರೂ.35 ಸಾವಿರ ಕೋಟಿಗೂ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಅದರಲ್ಲಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ 17,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಆದರೆ, ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲವೆಂದು ಬಹುಪಾಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದರಿಂದ ಕಳೆದ ಬಾರಿ ಇದೇ ಸದನದಲ್ಲಿ ಘೋಷಣೆ ಮಾಡಿದಂತೆ 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಡಾ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಆ ಸಮಿತಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸಮಿತಿ ವರದಿ ಕೊಟ್ಟ ಕೂಡಲೇ ಅದರ ಅನುಷ್ಠಾನಕ್ಕೆ ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು.
ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿತು. ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಮಂಕಾಗಲು ಸರಕಾರಕ್ಕೆ ಸಿಕ್ಕ ಈ ಅಸ್ತ್ರವೂ ಕಾರಣವಾಯಿತು. ಅಮಿತ್ ಶಾ ಹೇಳಿಕೆ ಖಂಡಿಸಿ ವಿಧಾನಸಭೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಪ್ರದರ್ಶನದ ಮೂಲಕ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಪೋಸ್ಟರ್ ಪ್ರದರ್ಶನ ಮಾಡಿದರು. ತೀವ್ರ ಕೋಲಾಹಲ ಉಂಟಾಗಿತ್ತು. ಉಭಯ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಸದನವನ್ನು ಎರಡು ಬಾರಿ ಮುಂದೂಡಲಾಯಿತು.
ಅಂಬೇಡ್ಕರ್ ಕುರಿತ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿಧಾನ ಪರಿಷತ್ತಿನಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪ್ರತಿಭಟನೆಯ ವೇಳೆ ಘಟಿಸಿದ ಮತ್ತೊಂದು ವಿದ್ಯಮಾನ ಬಿಜೆಪಿಯನ್ನು ನಿಜವಾಗಿಯೂ ಇಕ್ಕಟ್ಟಿಗೆ ಸಿಲುಕಿಸಿತು. ಅದಕ್ಕೆ ಕಾರಣವಾದದ್ದು ಸಿ.ಟಿ. ರವಿ ಮಾಡಿದ್ದ ಯಡವಟ್ಟು. ‘
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು. ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿ ಬಳಿಕ ಶೂನ್ಯ ವೇಳೆಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಧರಣಿಗೆ ಮುಂದಾಗಿದ್ದಾಗ ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಭಾವಚಿತ್ರ ಹಿಡಿದು ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಎಂದು ತಾವೂ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿ.ಟಿ. ರವಿ ಆರೋಪಿಸಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ, ನೀವು ರಸ್ತೆ ಅಪಘಾತದಲ್ಲಿ ಇಬ್ಬರನ್ನು ಕೊಲೆ ಮಾಡಿದ್ದೀರಿ, ಹಾಗಾಗಿ, ನೀವು ಕೊಲೆಗಾರರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು. ಆಗ ಸಿ.ಟಿ. ರವಿ ಹತ್ತಕ್ಕೂ ಹೆಚ್ಚು ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದಾರೆ ಎನ್ನಲಾಗಿದೆ.. ಲಕ್ಷ್ಮೀ ಹೆಬ್ಬಾಳ್ಕರ್ ತಮಗಾದ ಅವಮಾನ ತಡೆದುಕೊಳ್ಳಲಾಗದೇ ಕಣ್ಣೀರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋದರು. ಕಾಂಗ್ರೆಸ್ ಸದಸ್ಯರು ಸಿ.ಟಿ. ರವಿ ವಿರುದ್ಧ ಮುಗಿಬಿದ್ದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಭಾಪತಿಗೆ ಮನವಿ ಮಾಡಿದರು. ಇದರ ನಡುವೆಯೇ ಹೆಬ್ಬಾಳ್ಕರ್ ದೂರಿನ ಮೇರೆಗೆ ಸಿ.ಟಿ. ರವಿಯನ್ನು ಬಂಧಿಸಿದ ಪೊಲೀಸರು ಬಳಿಕ ಶುಕ್ರವಾರ ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಈ ಘಟನೆಯಿಂದ ನೈತಿಕವಾಗಿ ಧೃತಿಗೆಟ್ಟಿತು.
ಒಟ್ಟು 8 ದಿನಗಳಕಾಲ ನಡೆದ ವಿಧಾನಸಭೆ ಚಳಿಗಾಲದ ಅಧಿವೇಶನದ ಕಾರ್ಯಕಲಾಪಗಳು ಒಟ್ಟು 64 ಗಂಟೆಗಳ ಕಾಲ ಜರುಗಿದ್ದು ಸಣ್ಣ ಸಂಗತಿಯೇನಲ್ಲ. ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟು 16 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ. 2024ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ ಮತ್ತು 2024ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕಗಳನ್ನು ಹಿಂಪಡೆಯಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಮಾಹಿತಿ ನೀಡಿದರು. ಮಹಾಲೇಖಪಾಲರ 8 ವರದಿಗಳು ಮತ್ತು ಕರ್ನಾಟಕ ವಿಧಾನಮಂಡಲ ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳ 7 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 3,004 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 137 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2,237 ಪ್ರಶ್ನೆಗಳ ಪೈಕಿ 1,794 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 444 ಸೂಚನೆಗಳ ಪೈಕಿ 294 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ. ನಿಯಮ 351ರಡಿ 160 ಸೂಚನೆಗಳನ್ನು ಅಂಗೀಕರಿಸಿದ್ದು, 80 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 5 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೆನೆಟ್‌ಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಸದನ ಸಭಾಧ್ಯಕ್ಷರಿಗೆ ಡಿ.18ರಂದು ಅಧಿಕಾರ ನೀಡಿದೆ. ಸದನದಲ್ಲಿ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ವಿಧಾನಮಂಡಲ ಅಧಿವೇಶನದಲ್ಲಿನ ಮತ್ತೊಂದು ವಿಶೇಷವೆಂದರೆ, ಎರಡು ಬಾರಿ ಮಧ್ಯರಾತ್ರಿಯವರೆಗೆ ಕಲಾಪ ನಡೆಸಿರುವುದು. ಸ್ಪೀಕರ್ ಯು.ಟಿ. ಖಾದರ್ ಒಮ್ಮೆ ಮಧ್ಯರಾತ್ರಿವರೆಗೆ 14 ಗಂಟೆ ಕಾಲ ಕಲಾಪ ನಡೆಸಿದ್ದರು. ಅಧಿವೇಶನ ಮುಗಿಯುವ ಮುಂಚಿನ ದಿನವೂ ಎರಡನೇ ಬಾರಿಗೆ ಬೆಳಗ್ಗೆ 9:40 ರಿಂದ ಆರಂಭಗೊಂಡ ಸದನದಲ್ಲಿ ಸತತ 15 ತಾಸು ಕಾಲ ಮಧ್ಯರಾತ್ರಿ 12:40 ರವರೆಗೆ ಕಲಾಪ ನಡೆಸಿದ್ದಾರೆ. ಮಧ್ಯಾಹ್ನದ ಭೋಜನಕ್ಕೂ ಬಿಡುವು ಕೊಡದೆ ಮಧ್ಯರಾತ್ರಿ 12:40 ವರೆಗೆ ನಿರಂತರವಾಗಿ ಕಲಾಪವನ್ನು ನಡೆಸಿದರು.
ಕಡೆಯದಾಗಿ, ಒಂದು ಸಂದರ್ಭದ ಬಗ್ಗೆ ಇಲ್ಲಿ ಪ್ರಸ್ತಾವಿಸಬೇಕು. ಅಧಿವೇಶನದ ಮೊದಲ ದಿನ ಸುವರ್ಣಸೌಧದ ಮುಂಭಾಗದಲ್ಲಿ ಅನುಭವ ಮಂಟಪದ ತೈಲ ಚಿತ್ರ ಉದ್ಘಾಟನೆ ನಡೆಯಿತು. ಅದರ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಆಡಿದ್ದ ಮಾತು ಬಿಜೆಪಿ ನಾಯಕರೂ ಒಪ್ಪುವ ಹಾಗಿತ್ತು.
‘‘ಪರಮೇಶ್ವರ್,ಮುನಿಯಪ್ಪ,ನಾನು ಎಲ್ಲರನ್ನೂ ಜಾತಿಯ ಮೇಲೆ ಅಳೆಯುತ್ತಿದ್ದರು. ನಾವೆಲ್ಲರೂ ಶೂದ್ರರೇ. ಅಶೋಕ್ ನೀನು, ಅಶ್ವಥ್ ನಾರಾಯಣ್ ಕೂಡ ಶೂದ್ರರೇ. ಯತ್ನಾಳ್ ನೀನು ಕೂಡ ಶೂದ್ರನೇ ತಿಳಿದುಕೋ’’ ಎಂದರು ಸಿದ್ದರಾಮಯ್ಯ.
ಬಸವಣ್ಣನ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಡುವ ಕೆಲಸವಾಯಿತು. ಮಹಿಳೆಯರು ಕೂಡ ಶೂದ್ರರಂತೆ ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರೇ ಆಗಿದ್ದಾರೆ. ಒಂದು ಕಾಲದಲ್ಲಿ ಸಂಸ್ಕೃತ ಕಲಿತರೆ, ಕೇಳಿದರೆ ಕಿವಿಯಲ್ಲಿ ಕಾದ ಸೀಸ ಸುರಿಯಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಬಸವಣ್ಣ ಧರ್ಮವನ್ನು, ಬದುಕನ್ನು ಜನರಿಗೆ ತಿಳಿಸುವಂತಹ ಕೆಲಸ ಮಾಡಿದರು ಎಂದು ಸಿದ್ದರಾಮಯ್ಯ ವಿವರಿಸಿದರು.
ಮಾತೆತ್ತಿದರೆ ಧರ್ಮ ಎನ್ನುವ ಬಿಜೆಪಿಯ ಎದುರು ಸರಕಾರ ಬಹುಶಃ ಅಲ್ಲಿಂದಲೇ ಮೇಲುಗೈ ಸಾಧಿಸಿಬಿಟ್ಟಿತ್ತು.