'ಕೈ ಮುಗಿ' ಮತ್ತು 'ಪ್ರಶ್ನಿಸು'ವುದರ ನಡುವೆ...
Photo: twitter.com/BYVijayendra
‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಅಳಿಸಿ ಅಲ್ಲಿ ‘ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸುವ ನಿರ್ಧಾರ ಆಗಿದೆ-ಆಗಿಲ್ಲ ಎನ್ನುವ ವಿವಾದ ಹುಟ್ಟಿದ ಬೆನ್ನಿಗೆ ನಡೆದ/ ನಡೆಯುತ್ತಿರುವ ಚರ್ಚೆ ಬಹಳ ಕುತೂಹಲಕಾರಿಯಾಗಿದೆ. ಯಾಕೆಂದರೆ, ಪರ ವಿರೋಧ ವಾದಿಸುತ್ತಿರುವ ಇತ್ತಂಡಗಳು, ಆಳದಲ್ಲಿ ಕುವೆಂಪು ಅವರದ್ದು ಎನ್ನಲಾಗಿರುವ ಆ ಸಾಲನ್ನು ಅರ್ಥೈಸಿಕೊಂಡ ರೀತಿ ಒಂದೇ ಆಗಿದೆ ಎಂಬಂತಿದೆ.
ಕುವೆಂಪು ಎತ್ತಿಹಿಡಿಯುವ ಮೌಲ್ಯಗಳಾದ ವೈಜ್ಞಾನಿಕ ಮನೋವಾದ, ಜಾತ್ಯತೀತತೆ, ವಿಶ್ವಮಾನವ ತತ್ವ, ನಿರಂಕುಶಮತಿ- ಇವಗಳನ್ನೆಲ್ಲ ಎಳ್ಳಷ್ಟೂ ಒಪ್ಪದ ಜನ ‘‘ಇದು ಕುವೆಂಪುರವರಿಗೆ ಮಾಡಿದ ಅವಮಾನ’’ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಹಾಗೆಂದ ಮಾತ್ರಕ್ಕೆ ಕೇವಲ ಆಡಳಿತ ಪಕ್ಷವನ್ನು ವಿರೋಧಿಸುವ ಸಲುವಾಗಿ ಕುವೆಂಪು ಅವರ ಹೆಸರನ್ನು ಮುಂದಿಟ್ಟುಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಹೇಳಲಾಗುವುದಿಲ್ಲ. ಕುವೆಂಪು ಅವರದ್ದು ಎನ್ನಲಾಗಿರುವ ಆ ಸಾಲಿನಲ್ಲಿ ಶಾಲೆಯನ್ನು ‘ದೇಗುಲ’ ಎಂದದ್ದು ಮತ್ತು ‘ಕೈ ಮುಗಿ’ ಎಂದು ಹೇಳಿರುವುದು ಸಂಪ್ರದಾಯಸ್ಥರಿಗೆ ಭಾವನಾತ್ಮಕವಾಗಿ ಹತ್ತಿರವಾಗುವುದು ಯಾಕೆ ಎಂಬುದನ್ನು ವಿವರಿಸಬೇಕಾಗಿಲ್ಲ. ಹಾಗಾಗಿ ಈ ಸಾಲಿನ ಬಗ್ಗೆ ಜನರಿಗಿರುವ ಒಪ್ಪಿಗೆ/ ಸಮ್ಮತಿ ಸುಳ್ಳು ಅಥವಾ ತೋರಿಕೆ ಎಂದು ಹೇಳಲಾಗುವುದಿಲ್ಲ. ಈ ಸಾಲಿನ ಮಟ್ಟಿಗಾದರೂ ಅವರು ಕುವೆಂಪು ಅವರನ್ನು- ಅದು ಕುವೆಂಪು ಅವರೇ ಬರೆದದ್ದು ಅಂತಾದರೆ- ಒಪ್ಪುತ್ತಾರೆ!
ಆದರೆ, ಅಷ್ಟಕ್ಕೇ ನಿಂತರೆ ಬಹುಶಃ ವಿಷಯದ ಆಳಕ್ಕೆ ಇಳಿದಂತಾಗುವುದಿಲ್ಲ. ಸಂಪ್ರದಾಯಸ್ಥರಿಗೆ ‘ಕೈ ಮುಗಿ’ಯುವುದು ಕೇವಲ ಗೌರವದ ಸಂಕೇತ ಅಲ್ಲ. ಅದು ‘ಶ್ರೇಣಿ’ಯನ್ನು ಮತ್ತು ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಸಂಕೇತವೂ ಹೌದು. ಹಾಗಾಗಿಯೇ ಕೈ ಮುಗಿಯುವುದನ್ನು ‘ಪ್ರಶ್ನಿಸು’ ಎಂದು ಬದಲಾಯಿಸುವ ಸಾಧ್ಯತೆ ಇದೆ ಎಂದಾಗ ಸಂಪ್ರದಾಯಸ್ಥರಿಗೆ ಹೆಚ್ಚು ಕಿರಿಕಿರಿಯಾದದ್ದು. ‘ಕೈ ಮುಗಿ’ ಎಂಬುದನ್ನು ‘ತಲೆ ಬಾಗಿ’ ಎಂದು ಬದಲಾಯಿಸುವುದಾದರೆ ‘ದೇಗುಲ’ವನ್ನು ‘ಮಂದಿರ’ ಎಂದು ಬದಲಾಯಿಸುವುದಾದರೆ, ಅದರ ಬಗ್ಗೆ ಯಾವ ತಕರಾರು ಏಳುತ್ತಿರಲಿಲ್ಲ. ಆಗ ಅದು ಕುವೆಂಪು ಸಾಲನ್ನು ತಿರುಚುವುದು, ಅವಮಾನಿಸುವುದು - ಅದು ಇದು ಎಂದು ಯಾವ ವಿವಾದವೂ ಏಳುತ್ತಿರಲಿಲ್ಲ.
ಈಗ ‘ಪ್ರಶ್ನಿಸು’ವ ಗುಣವನ್ನು ಎತ್ತಿಹಿಡಿಯುತ್ತಿರುವವರ ವಾದವನ್ನು ಗಮನಿಸೋಣ. ಕುವೆಂಪುರವರ ‘ವಿಚಾರಕ್ರಾಂತಿಗೆ ಆಹ್ವಾನ’ವನ್ನು ಸ್ವೀಕರಿಸಿ ‘ನಿರಂಕುಶಮತಿ’ಗಳಾಗುವತ್ತ ಹೆಜ್ಜೆ ಇಟ್ಟವರು, ಇಡುತ್ತಿರುವವರೇ ಇವರೆಲ್ಲ ಎಂದು ಒಪ್ಪಿಕೊಳ್ಳೋಣ. ಹಾಗಿರುವಾಗ ‘ಕೈಮುಗಿದು ಒಳಗೆ ಬಾ’ ಅನ್ನು ‘ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸುವ ಸಾಧ್ಯತೆ ಇದೆ ಎಂದಾಗ ಸಹಜವಾಗಿಯೇ ಆ ಬದಲಾವಣೆ ಕುವೆಂಪು ಅವರ ಲೋಕದೃಷ್ಟಿಗೆ ಪೂರಕವಾಗಿಯೇ ಇದೆ ಎಂಬ ಕಾರಣಕ್ಕೆ ತಪ್ಪಲ್ಲ ಎಂದು ಅನಿಸಿದೆ. ಆದರೆ, ‘ಕೈ ಮುಗಿದು ಒಳಗೆ ಬಾ’ ಎಂಬುದು ಮತ್ತು ‘ಧೈರ್ಯವಾಗಿ ಪ್ರಶ್ನಿಸು’ ಎಂಬುದು ಬೇರೆ ಬೇರೆ ವಿಷಯವನ್ನೇ ಹೇಳುತ್ತಿದೆ, ಎಂಬುದಕ್ಕೆ ಈ ವಾದ ಗಮನ ಕೊಟ್ಟಿಲ್ಲ. ಇದಕ್ಕೆ ಕಾರಣ ಬಹುಶಃ ‘ಪ್ರಶ್ನಿಸು’ ಎಂಬುದು ‘ಕೈ ಮುಗಿ’ಯುವುದಕ್ಕಿಂತ ಹೆಚ್ಚು ಮುಖ್ಯ ಎಂದು ಈ ಪಂಗಡದವರಿಗೆ ಒಳಗೊಳಗೇ ಅನ್ನಿಸಿರುವುದು. ಹಾಗಿರಲು ಕಾರಣ ಏನಿರಬಹುದು? ನನಗನ್ನಿಸುವ ಪ್ರಕಾರ, ಈ ಪಂಗಡದವರಿಗೂ, ಅಥವಾ ಅವರ ಸುಪ್ತಮನಸ್ಸಿಗೆ, ‘ಕೈ ಮುಗಿ’ಯುವುದು ದಾಸ್ಯದ, ಶರಣಾಗತಿಯ ಸಂಕೇತವಾಗಿ ಕಂಡಿರುವುದು.
ಇಲ್ಲಿ ಈಗ ಮುಖ್ಯವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ: ವೈಜ್ಞಾನಿಕ ಮಾವೋವಾದ, ಸಮಾನತೆ, ಆತ್ಮಘನತೆ ಇವುಗಳನ್ನು ಎತ್ತಿಹಿಡಿದ ಕುವೆಂಪು ‘ಕೈ ಮುಗಿದು ಒಳಗೆ ಬಾ’ ಎನ್ನುವುದನ್ನು ಹೇಳಿದ್ದೇ ಆದರೆ ಹಾಗೆ ಹೇಳಿದಾಗ ಅವರು ಸೂಚಿಸಿದ್ದಾದರೂ ಏನನ್ನು? ಕುವೆಂಪು ‘ಶ್ರೇಣಿ’ಯನ್ನು ಒಪ್ಪಿಕೊಳ್ಳುವ ಆದೇಶ ಹೊರಡಿಸಿರುವ ಸಾಧ್ಯತೆಯೇ ಇಲ್ಲ. ದಾಸ್ಯವನ್ನು ಪ್ರೋತ್ಸಾಹಿಸಿರುವ ಸಾಧ್ಯತೆಯೂ ಇಲ್ಲ. ಕುವೆಂಪು ಹೇಳುತ್ತಿರುವುದು- ಅಥವಾ ಆ ಸಾಲು ಹೇಳುತ್ತಿರುವುದು- ಕಲಿಕೆಯ ಪ್ರಕ್ರಿಯೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಬೇಕು ಎಂದು. ಶಾಲೆ ಎಂಬ ಸಂಸ್ಥೆಗೆ ಶರಣಾಗತರಾಗಬೇಕು ಎಂದೋ ಅಥವಾ ಕಲಿಸುತ್ತಿರುವ ಪಾಠವನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಬೇಕು ಎಂದೇನೂ ಅಲ್ಲ. ಆ ಸಾಲು ಸೂಚಿಸುತ್ತಿರುವುದು ಕಲಿಕಾ ಗುಣವನ್ನು ಮತ್ತು ವಿನಯವನ್ನು ಬೆಳೆಸಿಕೊಳ್ಳಬೇಕು ಎಂದು. ಪ್ರಶ್ನಿಸುವ ಗುಣ ಇರಬೇಕು ಎಂದು ಕುವೆಂಪು ಸಹ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ ‘ಕೈ ಮುಗಿದು ಒಳಗೆ ಬಾ’ ಎಂದು ಹೇಳಿದ್ದೇ ಆದರೆ, ಹಾಗೆ ಹೇಳಲು ಕಾರಣ, ಬಹುಶಃ, ಅವರು ಕಲಿಕೆಗೆ ಸಮರ್ಪಿಸಿಕೊಂಡಾಗಲೇ ಲೋಕವನ್ನು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ನಂಬಿರುವುದು. ಆದರೆ ಈ ಸಮರ್ಪಣೆಯ ಭಾವ ಶ್ರೇಣಿಯನ್ನು ಒಪ್ಪಿಕೊಳ್ಳುವ ದಾಸ್ಯದಂತೆ ಅಲ್ಲ. ಇವೆರಡರ ನಡುವೆ ಒಂದು ಸೂಕ್ಷ್ಮ ವ್ಯತ್ಯಾಸ ಇದೆ.
‘ಪ್ರಶ್ನೆ ಮಾಡಬೇಕು’ ಎಂದು ವಾದಿಸುತ್ತಿರುವವರಿಗೆ ಮತ್ತು ‘ಕುವೆಂಪು ಅವರಿಗೆ ಅವಮಾನ ಮಾಡಲಾಗುತ್ತಿದೆ’ ಎನ್ನುವವರಿಗೆ ಇಬ್ಬರಿಗೂ ಆ ಸಾಲಿನಲ್ಲಿರುವ ‘ಕೈ ಮುಗಿ’ಯುವ ಸಂಕೇತ ‘ಶರಣಾಗತಿ’ ಆಗಿ ಕಂಡಂತಿದೆ. ಅದು ಸಮರ್ಪಣೆ - ಸಂಸ್ಥೆಗೋ ಇಲ್ಲ, ಜ್ಞಾನಕ್ಕೋ ಅಲ್ಲ, ಬದಲಾಗಿ ಕಲಿಕಾ ಪ್ರಕ್ರಿಯೆಗೆ- ಆಗಿ ಕಂಡಿಲ್ಲ ಮತ್ತು ಅದರ ಮಹತ್ವ ತಿಳಿದುಬಂದಂತಿಲ್ಲ. ಆ ಸಾಲನ್ನು ಹಾಗೆ ಇರಿಸಿಕೊಳ್ಳಬಯಸುವವರಿಗೆ ಶರಣಾಗತಿ ಬೇಕಾಗಿದೆ, ಯಾಕೆಂದರೆ ಅದು ಲೋಕದ ಯಥಾಸ್ಥಿತಿ ಕಾಪಾಡಲು ಅಗತ್ಯ. ಮತ್ತು, ಆ ಸಾಲನ್ನು ಬದಲಾಯಿಸುವ - ಏನೇನೋ ಆಗಿ ಅಲ್ಲ, ಬದಲಾಗಿ ‘ಪ್ರಶ್ನಿಸು’ ಎಂದು- ಕುರಿತಾಗಿ ಸಮ್ಮತಿ ಇರುವವರಿಗೆ ಸಹ ‘ಕೈ ಮುಗಿ’ಯುವ ಸಂಕೇತ ‘ದಾಸ್ಯ’ವಾಗಿ ಕಂಡಿದೆ. ಇವೆರಡರ ನಡುವೆ ‘ಕಲಿಕಾ ಪ್ರಕ್ರಿಯೆಗೆ ಸಮರ್ಪಿಸಿಕೊಳ್ಳುವ’ ಅಗತ್ಯವನ್ನು ಕಾಣಿಸುತ್ತಿರುವ ಆ ಒಂದು ಸಾಲಿನ ದರ್ಶನ ಇತ್ತಂಡಗಳಿಗೂ ಬೇಡವಾದಂತಿದೆ.
ಹೇಗೆ ಸಂಪೂರ್ಣ ಸಮರ್ಪಣೆ ಗುಲಾಮಗಿರಿಯಾಗುತ್ತದೋ, ಹಾಗೇ ವಿನಯ ಇಲ್ಲದ ಜ್ಞಾನ ಅಹಂಕಾರವಾಗುತ್ತದೆ. ಈ ಕುರಿತು ಎಚ್ಚರ ವಹಿಸ ಬೇಕಾದದ್ದು ಅಗತ್ಯ ಎನ್ನುವ ಕಾರಣಕ್ಕೆ ವಿವಾದಾತ್ಮಕ ಅಂತನ್ನಿಸಬಹುದಾದ ಈ ಟಿಪ್ಪಣಿ ಬರೆಯುತ್ತಿದ್ದೇನೆ. ನನ್ನ ಗ್ರಹಿಕೆಯಲ್ಲಿ ತಪ್ಪಿದ್ದರೆ, ‘ಕೈ ಮುಗಿದು’ ಮತ್ತು ‘ತಲೆ ಬಾಗಿ’ ಕ್ಷಮೆ ಕೇಳುತ್ತೇನೆ.