ಭಾಗ್ಯಲಕ್ಷ್ಮಿ ಬಾಂಡ್ ನಂಟು; ಕನ್ನಡಿಯೊಳಗಿನ ಗಂಟು
ಆಳುವ ಮತ್ತು ವಿರೋಧ ಪಕ್ಷಗಳು ಹಾಗೂ ಅವುಗಳ ನಾಯಕರುಗಳು ಈಗ ಆರೋಪ, ಪ್ರತ್ಯಾರೋಪಗಳಲ್ಲಿ ನಿರಂತರವಾಗಿ ನಿರತವಾಗಿದ್ದಾರೆ. ಚುನಾವಣಾ ಕೇಂದ್ರಿತ ಅಧಿಕಾರದ ಮೇಲಾಟದಲ್ಲಿ ಪರಸ್ಪರ ಕೆಸರೆರಚಾಟ ಅತಿಯಾಗಿದೆ. ಜನಸಾಮಾನ್ಯರ ಬದುಕಿನ ಬಾಧೆ-ಬವಣೆಗಳ ಬಗ್ಗೆ ಕಿಂಚಿತ್ ಕಾಳಜಿಯೂ ಈ ರಾಜಕೀಯದವರಿಗೆ ಇಲ್ಲವಾಗಿದೆ.
ಒಂದೆರಡಲ್ಲಾ ಏಳು ತಿಂಗಳ ಮೇಲಾಯಿತು. ಈ ಸರಕಾರಿ ಪ್ರಾಯೋಜಿತ ಯೋಜನೆಯ ಬಾಂಡ್‌ಗಳು ಮೆಚೂರ್ಡ್ ಆಗಿ. ಆದರೂ ಫಲಾನುಭವಿಗಳಿಗಿನ್ನೂ ಕನ್ನಡಿಯೊಳಗಿನ ಕಾಂಚಾಣದ ಗಂಟಾಗಿದೆ. ಇಲ್ಲಿವರೆಗೂ ಯಾವುದೇ ನಾಯಕರಿಗೂ, ಯಾವುದೇ ಪಕ್ಷದವರಿಗೂ ಈ ಕುರಿತು ಆಸಕ್ತಿಯೇ ಇಲ್ಲದಾಗಿದೆ. ಈ ಸರಕಾರಿ ಯೋಜನೆಯ ಫಲಾನುಭವಿಯಾಗಲು ಹೆಣ್ಣು ಹೆತ್ತ ಬಡವರು 18 ವರ್ಷಗಳಿಂದ ಕಾಯುತ್ತಿದ್ದಾರೆ. ಸಕಾಲದಲ್ಲಿ ಯೋಜನೆಯ ಹಣ ದೊರಕಿದರೆ ಮಗಳ ವಿದ್ಯಾಭ್ಯಾಸಕ್ಕೋ, ಮದುವೆಗೋ ಉಪಯೋಗವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಕೆಲವರು ಸಂಬಂಧಪಟ್ಟ ಇಲಾಖೆಗೂ ಎಡತಾಕುತ್ತಿದ್ದಾರೆ. ತಾಂತ್ರಿಕ ತೊಂದರೆಯ ಕಾರಣದಿಂದ ಹಣ ಬರುವುದು ತಡವಾಗಿದೆ, ಸಹನೆಯಿಂದ ಕಾಯುತ್ತಾ ಇರಿ ಎನ್ನುವುದೇ ಇಲಾಖೆಯ ಅಧಿಕಾರಿಗಳು ಕೊಡುವ ಉತ್ತರವಾಗಿದೆ. ರಾಜಕಾರಣಿಗಳಂತೆ ಕೆಲವು ಅಧಿಕಾರಿಗಳಿಗೂ ಇಂತಹುದೊಂದು ಯೋಜನೆ ಇತ್ತು ಎನ್ನುವುದೇ ಮರೆತು ಹೋದಂತಿದೆ.
ಇಷ್ಟಕ್ಕೂ ಏನಿದು ಯೋಜನೆ? ಅದರ ಹೆಸರು ಭಾಗ್ಯಲಕ್ಷ್ಮಿ. 2006ರಲ್ಲಿ ಬಿಜೆಪಿ-ಜೆಡಿಎಸ್ ಕೂಡಾವಳಿಯ 20-20 ಸರಕಾರ ಇದ್ದಾಗ ಜಾರಿಯಾದ ಯೋಜನೆ. ಲಿಂಗ ಅನುಪಾತವನ್ನು ಸರಿದೂಗಿಸಲು, ಹೆಣ್ಣು ಭ್ರೂಣ ಹತ್ಯೆಯನ್ನು ನಿಯಂತ್ರಿಸಲು, ಹೆಣ್ಣು ಮಕ್ಕಳ ಜನನ ಪ್ರಮಾಣವನ್ನು ಪ್ರೋತ್ಸಾಹಿಸಲು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು, ಹೆಣ್ಣು ಹೆತ್ತವರಿಗೆ ಆರ್ಥಿಕ ಭರವಸೆ ನೀಡಲು ಭಾಗ್ಯಲಕ್ಷ್ಮಿ ಎನ್ನುವ ಮಹತ್ವಾಂಕಾಕ್ಷಿ ಯೋಜನೆಯನ್ನು 2006 ಮಾರ್ಚ್ 31ರಂದು ಮಾನ್ಯ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಯಿತು.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿತ್ತು. ಹೆಣ್ಣು ಹೆತ್ತವರು ಮಗು ಹುಟ್ಟಿದ ಒಂದು ವರ್ಷದ ಒಳಗೆ ಜನನ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದರೆ ಮಗುವಿನ ಹೆಸರಲ್ಲಿ ಎಲ್‌ಐಸಿ ಬಾಂಡ್ ನೀಡಲಾಗುತ್ತಿತ್ತು. ಆ ವಿಮಾ ಮೊತ್ತವನ್ನು ಸರಕಾರವೇ ವಿಮಾ ಕಂಪೆನಿಗೆ ಜಮೆ ಮಾಡಿತ್ತು. 2006 ರಿಂದ 2008ರ ಒಳಗೆ ಜನಿಸಿದ ಮಗುವಿನ ಹೆಸರಿಗೆ 32 ಸಾವಿರದಿಂದ 45 ಸಾವಿರ ಮೊತ್ತದ ಬಾಂಡ್ ನ್ನು ವಿತರಿಸಲಾಗಿತ್ತು.
2008ರ ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಈ ಬಾಂಡ್ ಮೊತ್ತವನ್ನು ಒಂದು ಲಕ್ಷ ರೂ.ಗೆ ಏರಿಸಲಾಯಿತು. ಅದಕ್ಕಾಗಿ ಮೊದಲ ಹೆಣ್ಣು ಮಗುವಿಗೆ 19,300 ಹಾಗೂ ಎರಡನೆಯ ಹೆಣ್ಣು ಮಗುವಿಗೆ 18,350 ರೂಪಾಯಿಯನ್ನು ಸರಕಾರವೇ ಎಲ್‌ಐಸಿ ವಿಮಾ ಕಂಪೆನಿಯಲ್ಲಿ ಠೇವಣಿ ಇಡುತ್ತಿತ್ತು. ಹೆಣ್ಣು ಮಗುವಿಗೆ ಹದಿನೆಂಟು ವರ್ಷ ತುಂಬಿದಾಗ ಆ ಬಾಂಡ್ ಮೆಚ್ಯೂರ್ಡ್ ಆಗಿ ಫಲಾನುಭವಿಗಳಿಗೆ ನಿಗದಿತ ಮೊತ್ತ ದೊರೆಯುತ್ತದೆ ಎನ್ನುವ ಭರವಸೆಯನ್ನು ಬಾಂಡ್ ಮೂಲಕ ಸರಕಾರ ಕೊಟ್ಟಿತ್ತು.
ಈಗ 2006ರಲ್ಲಿ ವಿತರಿಸಲಾದ ಬಾಂಡ್‌ಗಳ ಮೆಚ್ಯುರಿಟಿ ಅವಧಿ 2024 ಮಾರ್ಚ್ 31ಕ್ಕೆ ಮುಗಿದಿದೆ. ಸರಕಾರ ಭರವಸೆ ಕೊಟ್ಟಂತೆ ಎಲ್‌ಐಸಿ ವಿಮಾ ಕಂಪೆನಿ ಹಣವನ್ನು ಫಲಾನುಭವಿ ಹೆಣ್ಣುಮಕ್ಕಳ ಅಕೌಂಟಿಗೆ ಜಮೆ ಮಾಡಬೇಕಿದೆ. ಮೆಚ್ಯುರಿಟಿ ಅವಧಿ ಮುಗಿದು ಏಳು ತಿಂಗಳುಗಳು ಕಳೆದರೂ ಇಲ್ಲಿವರೆಗೂ ಯಾರೊಬ್ಬರಿಗೂ ಹಣ ಸಂದಾಯವಾಗಿಲ್ಲ. ಹೀಗ್ಯಾಕೆ?
ಎಲ್‌ಐಸಿ ಎನ್ನುವುದು ಭಾರತದ ಅತ್ಯಂತ ವಿಶ್ವಸನೀಯ ವಿಮಾ ಕಂಪೆನಿ. ಬೇರೆಲ್ಲಾ ಪಾಲಿಸಿದಾರರಿಗೆ ಸರಿಯಾದ ಸಮಯಕ್ಕೆ ಮೆಚುರಿಟಿ ಹಣ ಕೊಡುವ ಈ ಕಂಪೆನಿ ಯಾಕೆ ಹೆಣ್ಣು ಮಕ್ಕಳ ಬಾಂಡ್ ಹಣವನ್ನು ಇಲ್ಲಿವರೆಗೂ ಕೊಟ್ಟಿಲ್ಲ? ಸರಕಾರ ಹೆಣ್ಣು ಮಕ್ಕಳ ಹೆಸರಿಗೆ ಒನ್ ಟೈಂ ಪ್ರೀಮಿಯಂ ಪಾವತಿಸಿದ ಮೇಲೆಯೇ ವಿಮಾ ಕಂಪೆನಿ ಬಾಂಡ್ ವಿತರಿಸುತ್ತದೆ ಅಲ್ಲವೇ? ಮೆಚುರಿಟಿ ಅವಧಿ ಮುಗಿದು ಏಳು ತಿಂಗಳು ಕಳೆದರೂ ಹಣ ಪಾವತಿಸಲು ವಿಮಾ ಕಂಪೆನಿಗೆ ಏನು ಸಮಸ್ಯೆ?
ಇದೆ. ಸಮಸ್ಯೆ ಖಂಡಿತಾ ಇದೆ. ಅದು ಇಲಾಖೆಯಲ್ಲಿದೆ. ಅಧಿಕಾರಿಗಳ ನಿರ್ಲಕ್ಷದಲ್ಲಿದೆ. ಹೇಗೆಂದರೆ... ಈ ಬಾಂಡ್ ಮೊತ್ತವನ್ನು ಪಡೆಯಬೇಕಾದರೆ ಕೆಲವೊಂದು ನಿಯಮಗಳನ್ನು ಸರಕಾರ ನಿಗದಿಪಡಿಸಿದೆ. ಹೆಣ್ಣುಮಗುವಿನ ತಾಯಿ ಬಾಲ ಕಾರ್ಮಿಕಳಾಗಿರಬಾರದು. ಹೆಣ್ಣು ಮಗು ಕನಿಷ್ಠ 8ನೇ ತರಗತಿಯವರೆಗಾದರೂ ಶಾಲೆಗೆ ಹೋಗಿರಬೇಕು. 18 ವರ್ಷ ತುಂಬುವುದರ ಒಳಗೆ ಬಾಲ್ಯವಿವಾಹ ಆಗಿರಬಾರದು. ಹೆತ್ತವರಿಗೆ ಮೂರಕ್ಕಿಂತ ಹೆಚ್ಚು ಮಕ್ಕಳಿರಬಾರದು. ಫಲಾನುಭವಿ ಮಗುವಿನ ತಂದೆ ಅಥವಾ ತಾಯಿಯಲ್ಲಿ ಯಾರಾದರೊಬ್ಬರು ಮತ್ತೆ ಮಕ್ಕಳಾಗದಂತೆ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಶನ್ ಮಾಡಿಸಿರಬೇಕು. ಈ ಕಂಡೀಶನ್‌ಗಳನ್ನೆಲ್ಲಾ ಕಡ್ಡಾಯವಾಗಿ ಪಾಲಿಸಿದವರಿಗೆ ಮಾತ್ರ ಬಾಂಡ್ ಹಣ ಸಿಕ್ಕಬೇಕು ಎನ್ನುವ ನಿಬಂಧನೆಯನ್ನು ಸರಕಾರ ವಿಧಿಸಿದೆ. ಆದರೆ ಕಡುಬಡವರಿಗೆ ಇದೆಲ್ಲವನ್ನೂ ಪಾಲಿಸುವುದು ಅಷ್ಟು ಸುಲಭವಲ್ಲ. ಪ್ರತೀ ಮಗು ಹಾಗೂ ಹೆತ್ತವರು ಈ ಎಲ್ಲಾ ನಿಯಮಗಳನ್ನು ಪಾಲಿಸಿದ್ದಾರೋ ಇಲ್ಲವೋ ಎಂದು ವಿಮಾ ಕಂಪೆನಿಗೆ ಗೊತ್ತಾಗುವುದಾದರೂ ಹೇಗೆ?
ಹೇಗೆಂದರೆ, ಅರ್ಹತೆ ಪಡೆದ ಪ್ರತಿಯೊಂದು ಮಗುವಿನ ಟ್ರ್ಯಾಕ್ ಇಡಲು ‘ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ’ ಒಂದನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ನಿರ್ವಹಿಸಬೇಕಾಗುತ್ತದೆ. ಈ ಕುರಿತ ಅಗತ್ಯ ದತ್ತಾಂಶವನ್ನು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಒದಗಿಸಬೇಕಾಗುತ್ತದೆ. ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯ ಮಾಡಬೇಕಾಗುತ್ತದೆ. ಆದರೆ ಈ ಯಾವ ಸಿಸ್ಟಂ ಸಹ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ನಿಖರವಾದ ದತ್ತಾಂಶ ಸಂಗ್ರಹ ಮಾಡಲಾಗಿಲ್ಲ. ನಿಯಮಾವಳಿಗಳನ್ನು ಪಾಲಿಸಿದ ಅರ್ಹ ಫಲಾನುಭವಿಗಳ ದಾಖಲೆಗಳನ್ನು ಸಂಗ್ರಹಿಸಿ ವಿಮಾ ಕಂಪೆನಿಗೆ ಸಲ್ಲಿಸಲಾಗಿಲ್ಲ. ಹೀಗಾಗಿ ಎಲ್‌ಐಸಿ ಕಂಪೆನಿ ಬಾಂಡ್ ಹಣ ಬಿಡುಗಡೆ ಮಾಡಿಲ್ಲ.
ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 2006ರಿಂದ 2020ರ ವರೆಗೆ ಸರಿಸುಮಾರು 29 ಲಕ್ಷ ಬಾಂಡ್‌ಗಳನ್ನು ವಿತರಿಸಲಾಗಿದೆ. 2024 ಎಪ್ರಿಲ್ ತಿಂಗಳಿನಿಂದ ಬಾಂಡ್‌ಗಳ ಮೆಚ್ಯುರಿಟಿ ಆರಂಭವಾಗಿದೆ. ನಿಗದಿತ ಬಾಂಡ್ ಹಣವನ್ನು ವಿಮಾ ಕಂಪೆನಿ ಕಾಲಮಿತಿಯಲ್ಲಿ ಪಾವತಿಸಬೇಕಿದೆ. ಆದರೆ.. ಸಕ್ಷಮ ಇಲಾಖೆಯಿಂದ ಪ್ರಮಾಣ ಪತ್ರ ಸಿಗದೇ ಬಾಂಡ್ ಹಣವನ್ನು ವಿಮಾ ಕಂಪೆನಿ ಬಿಡುಗಡೆ ಮಾಡುವುದಿಲ್ಲ. ಬಾಂಡ್ ಪಡೆದ ಪ್ರತೀ ಮಗುವಿನ ದತ್ತಾಂಶ ಇಲಾಖೆಯಲ್ಲಿ ಅಪ್ಡೇಟ್ ಮಾಡಲಾಗಿಲ್ಲ. ಹೀಗಾಗಿ ಬಾಂಡ್ ಅವಧಿ ಮುಗಿದು ಏಳು ತಿಂಗಳಾದರೂ ಇನ್ನೂ ಅರ್ಹ ಫಲಾನುಭವಿ ಹೆಣ್ಣು ಮಗುವಿಗೆ ನಿಗದಿತ ಹಣ ವಿತರಿಸಲಾಗಿಲ್ಲ. ಅಧಿಕಾರಿಗಳು ತಾಂತ್ರಿಕ ಸಮಸ್ಯೆಯ ನೆಪ ಹೇಳುವುದನ್ನು ನಿಲ್ಲಿಸಿಲ್ಲ.
ಈ ಯೋಜನೆಯ ಪ್ರಕಾರ ಬಾಂಡ್ ಪಡೆದ ಹೆಣ್ಣು ಮಗು ಕಾಯಿಲೆ ಬಿದ್ದರೆ 25 ಸಾವಿರ ರೂ. ಆರೋಗ್ಯ ವಿಮೆ ಸೌಲಭ್ಯ ದೊರಕಲಿದೆ. ಸ್ವಾಭಾವಿಕ ಮೃತ್ಯು ಸಂಭವಿಸಿದರೆ 42,500 ರೂ. ವಿಮೆ ಇದೆ. ಅಪಘಾತದಲ್ಲಿ ಸಾವನ್ನಪ್ಪಿದರೆ 1 ಲಕ್ಷ ರೂ. ವಿಮೆ ಆ ಮಗುವಿನ ಕುಟುಂಬಕ್ಕೆ ದೊರೆಯುತ್ತದೆ. ಆದರೆ ಈ ವಿಮಾ ಸೌಲಭ್ಯಗಳ ಕುರಿತ ಮಾಹಿತಿಯೂ ಎಷ್ಟೋ ಜನ ಬಡ ತಂದೆ ತಾಯಿಗಳಿಗೆ ಗೊತ್ತೇ ಇರುವುದಿಲ್ಲ.
ಈ ಭಾಗ್ಯಲಕ್ಷ್ಮಿ ಯೋಜನೆಯೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕನಸಿನ ಕೂಸು. ಕೊಟ್ಟ ಭರವಸೆಯಂತೆ ಬಾಂಡ್ ಹಣ ಏಳು ತಿಂಗಳಷ್ಟು ವಿಳಂಬವಾದರೂ ಯಾಕೆ ವಿರೋಧ ಪಕ್ಷಗಳು ಈಗಿರುವ ಸರಕಾರದ ವಿರುದ್ಧ ಇನ್ನೂ ಧ್ವನಿ ಎತ್ತಿಲ್ಲ? ಅಧಿವೇಶನದಲ್ಲೂ ಪ್ರಶ್ನಿಸಲಿಲ್ಲ. ಸರಕಾರದ ಮೇಲೆ ಒತ್ತಡ ಹೇರಲಿಲ್ಲ. ಯಾಕೆಂದರೆ ವಿರೋಧ ಪಕ್ಷದವರಿಗೆ ಬಡವರ ಪರವಾದ ಈ ಯೋಜನೆ ಆದ್ಯತೆಯಾಗಿರಲಿಲ್ಲ. ಹೇಗಾದರೂ ಮಾಡಿ ಆಳುವ ಸರಕಾರವನ್ನು ಬೀಳಿಸಿ ಅಧಿಕಾರ ಹಿಡಿಯಬೇಕು ಎನ್ನುವ ಧಾವಂತಕ್ಕೆ ಬಿದ್ದಿರುವ ಪ್ರತಿಪಕ್ಷಗಳು ದಿನಕ್ಕೊಂದು ಹಗರಣಗಳ ಆರೋಪ ಮಾಡುತ್ತಾ ಸರಕಾರ ಜನರ ಪರವಾಗಿ ಕೆಲಸವನ್ನೇ ಮಾಡದಂತೆ ನಿರಂತರವಾಗಿ ಪ್ರಯತ್ನಿಸುತ್ತಿವೆ. ಅಕಾಲಿಕವಾಗಿ ಬಂದ ಉಪಚುನಾವಣೆಯ ತಯಾರಿ ಹಾಗೂ ತಂತ್ರಗಾರಿಕೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಬ್ಯುಝಿಯಾಗಿವೆ. ಹೀಗಾಗಿ ಈ ಹೆಣ್ಣು ಹೆತ್ತ ಬಡವರ ಪರ ಯೋಜನೆಯ ಅನುಷ್ಠಾನಕ್ಕೆ ಯಾರಿಗೂ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ.
ಹೋಗಲಿ, ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ಬಾಂಡ್ ಹಣ ವಿತರಿಸುವಲ್ಲಿ ಸರಕಾರಿ ಯಂತ್ರಾಂಗ ವಿಫಲವಾಗಿದೆ. ಆದರೆ ಈ ನಮ್ಮ ಸುದ್ದಿ ಮಾಧ್ಯಮಗಳಿಗೆ ಏನಾಗಿದೆ? ಮುಡಾ, ವಾಲ್ಮೀಕಿ ನಿಗಮ ಹಗರಣ, ಪ್ರಜ್ವಲ್ ರೇವಣ್ಣ ಕಾಮ ಪುರಾಣ, ಮುನಿರತ್ನ ಹನಿ ಟ್ರ್ಯಾಪ್ ಪ್ರಕರಣ, ನಟ ದರ್ಶನ್ ಮಾಡಿದ ರೇಣುಕಾಸ್ವಾಮಿ ಮರ್ಡರ್ ಸ್ಟೋರಿಗಳ ಪ್ರಸಾರದಲ್ಲಿ 24/7 ನಿರತರಾಗಿರುವ ಸಕಲ ಸುದ್ದಿ ಮಾಧ್ಯಮಗಳಿಗೆ ಈ ಭಾಗ್ಯಲಕ್ಷ್ಮಿ ಬಾಂಡ್ ವಿಷಯ ಆದ್ಯತೆ ಆಗಲೇ ಇಲ್ಲ. ಯಾಕೆಂದರೆ ಇಂತಹ ಸುದ್ದಿಗಳು ಟಿಆರ್‌ಪಿ ಹೆಚ್ಚಿಸುವುದಿಲ್ಲ, ಜಾಹೀರಾತು ಹುಟ್ಟಿಸುವುದಿಲ್ಲ.
ಈಗಲಾದರೂ ವಿರೋಧ ಪಕ್ಷಗಳು ಎಚ್ಚೆತ್ತು ತಾವೇ ರೂಪಿಸಿದ ಯೋಜನೆಯ ಪ್ರತಿಫಲವನ್ನು ಫಲಾನುಭವಿಗಳಿಗೆ ತಲುಪಿಸಬೇಕೆಂದು ಆಡಳಿತ ಪಕ್ಷದ ಮೇಲೆ ಹಾಗೂ ಆ ಮೂಲಕ ಆಡಳಿತಾಂಗದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಿ. ದಪ್ಪ ಚರ್ಮದ ರಾಜಕೀಯ ನಾಯಕರು ನಿರ್ಲಕ್ಷ್ಯ ತೋರಿದರೆ ಸುದ್ದಿ ಮಾಧ್ಯಮಗಳಾದರೂ ಹೆಣ್ಣು ಹೆತ್ತ ಬಡ ತಂದೆ-ತಾಯಿಗಳ ಪರವಾಗಿ ಧ್ವನಿ ಎತ್ತಲಿ. ಬಾಂಡ್ ಹಣವನ್ನು ಶೀಘ್ರವಾಗಿ ಫಲಾನುಭವಿಗಳಿಗೆ ಬಿಡುಗಡೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಲಿ. ಇದು ಒಂದೇ ಸಾರಿ ಮುಗಿಯುವ ಕೆಲಸವಲ್ಲ. ಇನ್ನೂ 18 ವರ್ಷಗಳ ಕಾಲ ಈ ಬಾಂಡ್ ಮೆಚ್ಯುರಿಟಿಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. 29 ಲಕ್ಷ ಫಲಾನುಭವಿಗಳಿಗೆ ಹಣ ವಿತರಿಸಬೇಕಾಗುತ್ತದೆ. ಅದಕ್ಕಾಗಿ ಅಷ್ಟೊಂದು ಮಕ್ಕಳ ದತ್ತಾಂಶವನ್ನು ‘ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ’ ವಿಭಾಗ ನಿರಂತರವಾಗಿ ಅಪ್ಡೇಟ್ ಮಾಡುತ್ತಲೇ ಇರಬೇಕಾಗುತ್ತದೆ. ಬಾಂಡ್ ಹಣ ಬಂದರೆ ಮಗಳ ವಿದ್ಯಾಭ್ಯಾಸಕ್ಕೆ ಆಗುತ್ತದೆ ಇಲ್ಲವೇ, ಮದುವೆಗೆ ಸಹಾಯ ಆಗುತ್ತದೆ ಎಂದು ಭರವಸೆ ಇಟ್ಟು 18 ವರ್ಷಗಳಿಂದ ಕಾಯುತ್ತಿರುವ ಹೆಣ್ಣು ಹೆತ್ತವರ ಕನಸು ನನಸಾಗಬೇಕಿದೆ. ಅತ್ಯಂತ ಉಪಯುಕ್ತವಾದ ಯೋಜನೆಯೊಂದು ಯಶಸ್ವಿಯಾಗಬೇಕಿದೆ.