ಸವಾಲುಗಳ ಸುಳಿಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು
ಸವಾಲುಗಳು ಈಗ ಬರೀ ಬಿಜೆಪಿಯ ಎದುರು ಮಾತ್ರ ಇಲ್ಲ. ಎನ್‌ಡಿಎ ಮತ್ತು ಎನ್‌ಡಿಎ ಭಾಗವಾಗಿರುವ ರಾಜಕೀಯ ಪಕ್ಷಗಳ ಮುಂದೆಯೂ ಇದೆ. ಮುಖ್ಯವಾಗಿ ಮೋದಿ ವಿಷಯವಾಗಿ ಅವೆಲ್ಲವುಗಳ ಮುಂದೆ ಸವಾಲುಗಳಿವೆ. ಮುಂಬರುವ ದಿನಗಳಲ್ಲಿ ಇದೇ ಸವಾಲುಗಳು ಇನ್ನೂ ದೊಡ್ಡದಾಗಿ ಬೆಳೆಯುವಂತೆ ಕಾಣಿಸುತ್ತಿದೆ.
ನಾಲ್ಕು ರಾಜ್ಯಗಳಲ್ಲಿನ ಚುನಾವಣೆ ಬಳಿಕ ಪ್ರಧಾನಿಯನ್ನೇ ಬದಲಿಸಲು ಅವೆಲ್ಲ ಪಕ್ಷಗಳು ತಯಾರಾಗುತ್ತಿವೆ ಎನ್ನುತ್ತಿದೆ ರಾಜಕೀಯ ವಲಯ.
ಚುನಾವಣೆ ನಡೆಯಲಿರುವ ನಾಲ್ಕೂ ರಾಜ್ಯಗಳಲ್ಲಿನ ಸಮೀಕ್ಷೆಗಳ ಫಲಿತಾಂಶಗಳು ಬಿಜೆಪಿಗೂ, ಬರಲಿರುವ ದಿನಗಳಲ್ಲಿ ಎನ್‌ಡಿಎಗೂ ಆತಂಕ ತರುವಂತಿವೆ. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿರುವಂತೆಯೇ, ಬಿಜೆಪಿ ಜೊತೆಗಿನ ಇತರ ಪಕ್ಷಗಳ ಸ್ಥಿತಿಯೇನಾದೀತು ಎಂಬ ಪ್ರಶ್ನೆಯೂ ಎದ್ದಿದೆ.
ಆರೆಸ್ಸೆಸ್ ಅಂತೂ ಮೋದಿ ಮುಖ ತೋರಿಸುವುದರಿಂದ ಚುನಾವಣೆ ಗೆಲ್ಲಲಾಗದು ಎಂಬುದನ್ನು ಖಚಿತವಾಗಿ ಗ್ರಹಿಸಿದೆ. 10 ವರ್ಷಗಳ ಅಧಿಕಾರದ ಬಳಿಕ ಇದು ಮೋದಿ ಬದಲಾಗಬೇಕಾದ ಸಮಯ ಬಂದಿದೆ ಎಂಬ ನಿಲುವೊಂದು ರೂಪುಗೊಳ್ಳುತ್ತಿದೆ.
ಬಿಜೆಪಿ ಸುಮ್ಮನಿದ್ದರೂ, ಅದರ ಮಿತ್ರಪಕ್ಷಗಳೊಳಗಿನ ತಳಮಳಗಳು ಗುಟ್ಟಾಗಿಲ್ಲ. ಇದಕ್ಕೆ ನಿತೀಶ್ ಕುಮಾರ್ ಆಪ್ತ, ಜೆಡಿಯು ವಕ್ತಾರ ಸ್ಥಾನಕ್ಕೆ ಕೆ.ಸಿ. ತ್ಯಾಗಿ ರಾಜೀನಾಮೆ ನೀಡಿರುವುದು ಒಂದು ನಿದರ್ಶನ. ವೈಯಕ್ತಿಕ ಕಾರಣಗಳಿಗಾಗಿ ತ್ಯಾಗಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆಯಾದರೂ, ಬಿಜೆಪಿ ನಾಯಕತ್ವಕ್ಕೆ ಒಪ್ಪಿಗೆಯಾಗದ ರೀತಿಯಲ್ಲಿನ ತ್ಯಾಗಿ ಹೇಳಿಕೆಗಳೇ ಅವರು ರಾಜೀನಾಮೆ ನೀಡುವಂತಾಗಲು ಕಾರಣವಾಗಿವೆ ಎಂಬುದು ಸ್ಪಷ್ಟ. ಫೆಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯನ್ನು ತ್ಯಾಗಿ ಖಂಡಿಸಿದ್ದರು ಮತ್ತು ಅದು ಬಿಜೆಪಿಗೆ ಸಹಿಸಲಾರದ ಸಂಗತಿಯಾಗಿತ್ತು. ಹಾಗಾಗಿ ತ್ಯಾಗಿ ಹೇಳಿಕೆ ಜೆಡಿಯುಗೆ ಇರಿಸುಮುರಿಸು ತಂದಿತ್ತು ಎಂಬುದು ಖಚಿತ.
ಈಗಿರುವ ಪ್ರಶ್ನೆ, ಮೋದಿ ಚಹರೆ ಚುನಾವಣೆಯಲ್ಲಿ ಗೆಲುವನ್ನು ತಂದುಕೊಡಲಾರದು ಎನ್ನುವುದಾದರೆ ಅವರ ಮುಂದಾಳತ್ವ ಏಕೆ ಬೇಕು ಎನ್ನುವುದು. ಆರೆಸ್ಸೆಸ್ ಈ ಪ್ರಶ್ನೆಯನ್ನು ಮುಖ್ಯವಾಗಿ ಮತ್ತು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ.
ಬಿಜೆಪಿಯ ಮೀಸಲಾತಿ ವಿರೋಧಿ ಧೋರಣೆ ಕೂಡ ದೊಡ್ಡ ಸಮಸ್ಯೆಯಾಗಿದೆ. ಸಂವಿಧಾನದ ಪ್ರಶ್ನೆ ಎದುರಾಗುವಾಗಲೂ ಬಿಜೆಪಿ ಧೋರಣೆ ಏನೆಂಬುದು ಬಯಲಾಗಿ ಹೋಗಿದೆ.
ಸಂಸತ್ತಿನ ಒಳಗೂ ಹೊರಗೂ ಈ ಸರಕಾರ ಅಲ್ಪಮತದ್ದಾಗಿದ್ದು, ಮಿತ್ರಪಕ್ಷಗಳ ನೆರವಿನಿಂದ ನಡೆಯುವಂತಾಗಿದೆ. ‘ಇಂಡಿಯಾ’ ಮೈತ್ರಿಕೂಟ ಉತ್ತರಪ್ರದೇಶದಲ್ಲಿ ಬಲ ಹೆಚ್ಚಿಸಿಕೊಂಡಿರುವಂಥ ಸಂಗತಿಯೂ ಸೇರಿ, ಬಿಜೆಪಿಗೆ ನಡುಕ ಹುಟ್ಟಿಸಿರುವ ಹಲವು ಸತ್ಯಗಳಿವೆ.
ಮೋದಿಗೆ ಹೊರತಾದ ನಾಯಕ ಯಾರು ಎಂಬ ಹುಡುಕಾಟ ಬಿಜೆಪಿಯಲ್ಲಿ ಶುರುವಾಗಿದೆ. ಈ ಹಂತದಲ್ಲಿ ಆದಿತ್ಯನಾಥ್ ಹೆಸರು ಆರೆಸ್ಸೆಸ್ ಪಾಳಯದಲ್ಲಿ ಹೆಚ್ಚು ಸ್ಪಷ್ಟವಾದ ಆಯ್ಕೆಯಾಗಬಹುದು ಎಂಬ ಚಿಂತನೆಯೂ ನಡೆದಿದೆ.
ಹೀಗಾಗಿ ಒಂದೆಡೆ ಮೋದಿ, ಇನ್ನೊಂದೆಡೆ ಆದಿತ್ಯನಾಥ್, ಮತ್ತೊಂದೆಡೆ ಮೋದಿ ಪರವಾಗಿರುವ ಅಮಿತ್ ಶಾ.
ಎನ್‌ಡಿಎ ಬಲ ಹೆಚ್ಚಿಸುವ, ಅದರ ಮನೋಬಲವನ್ನು ವೃದ್ಧಿಸಬಲ್ಲ, ಅದರ ಸಂಸದರನ್ನೆಲ್ಲ ಜೊತೆಯಲ್ಲಿ ಕರೆದುಕೊಂಡು ಹೋಗಬಲ್ಲ ಇತರರೂ ಮಿತ್ರ ಪಕ್ಷಗಳಲ್ಲಿ ಇದ್ದಾರೆ. ಅಂಥವರಲ್ಲಿ ನಿತೀಶ್ ಕುಮಾರ್ ಮುಖ್ಯರಾಗಿದ್ದಾರೆ.ತಮ್ಮ ಪಕ್ಷದ ನೆಲೆಯನ್ನು ಉಳಿಸಲು ಅವರು ಯತ್ನಿಸುತ್ತಿರುವುದು ಬಿಜೆಪಿಗೆ ಇಷ್ಟವಾಗುತ್ತಿಲ್ಲ. ಹಾಗಾಗಿಯೇ ಮೋದಿ ಮತ್ತು ಶಾ ಗೆಲುವು ತಮ್ಮದೇ ಎಂದು ಬಿಂಬಿಸುತ್ತಿರುವುದು.
ಜಗತ್ತಿನಲ್ಲೆಲ್ಲ ಸರಕಾರಗಳು ಬದಲಾಗಬಹುದು.
ಆದರೆ ಭಾರತದಲ್ಲಿ ಜನರು ಮೋದಿಯನ್ನೇ ಬಯಸುತ್ತಾರೆ ಎಂಬ ಅವರ ಮಾತುಗಳು ಹಾಗೆ ಬಿಂಬಿಸುವ ಯತ್ನ. ಆದರೆ ವಾಸ್ತವ ಹಾಗಿದೆಯೇ?
ಅಂತರ್‌ರಾಷ್ಟ್ರೀಯ ಲೇಬರ್ ಅಸೋಸಿಯೇಷನ್ (ಐಎಲ್‌ಒ) ವರದಿಯ ಪ್ರಕಾರ, ದೇಶದ ಉತ್ಪಾದನಾ ವಲಯದ ಸ್ಥಿತಿ ಉತ್ತಮವಾಗಿಲ್ಲ. ತಾಂತ್ರಿಕತೆಯೇ ಕಾರ್ಮಿಕರ ಜಾಗವನ್ನು ತುಂಬುತ್ತಿರುವಾಗ ಸ್ಥಿತಿ ಅಯೋಮಯವಾಗುತ್ತಿದೆ.ಬಡವರು ಮತ್ತು ಹಸಿದವರ ಲೆಕ್ಕದಲ್ಲಿ ಭಾರತ ಇಡೀ ದಕ್ಷಿಣ ಏಶ್ಯದಲ್ಲಿಯೇ ಬಹುಶಃ ಮುಂದಿದೆ. ದೇಶದ ನಿರುದ್ಯೋಗಿ ಯುವಜನತೆಯ ಹತಾಶೆಯಂತೂ ಆಕ್ರೋಶದ ರೂಪ ತಾಳಿ ಹೊರಹೊಮ್ಮುತ್ತಿದೆ.
ಯುವ ನಾಯಕ ಚಿರಾಗ್ ಪಾಸ್ವಾನ್ ಎನ್‌ಡಿಎ ನಲ್ಲಿದ್ದರೂ ಈಗ ಬಿಜೆಪಿ ನಿಲುವಿಗೆ ವಿರುದ್ಧವಾಗಿ ಕಾಣುತ್ತಿದ್ದಾರೆ. ಮೀಸಲಾತಿ ವಿಚಾರವಾಗಿ ಅವರ ಖಡಕ್ ನಿಲುವು ಬಿಜೆಪಿಗೆ ಮುಜುಗರ ತಂದಿದೆ.
ನಿತೀಶ್ ಯುವ ನಾಯಕನಲ್ಲದಿದ್ದರೂ ಮೋದಿಯನ್ನು ಪ್ರಧಾನಿಯಾಗಿಯೇ ಇರಿಸುವ ಸ್ಥಿತಿಗೆ ಅವರು ನೆರವಾಗಬಲ್ಲರೆಂದು ಹೇಳಲಾಗದು. ಯಾಕೆಂದರೆ, ನಿತೀಶ್ ಚಹರೆ ಮೂಲಕ ಬಿಹಾರದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ.
ಮುಂದಿನ ವರ್ಷವೇ ಬಿಹಾರ ಚುನಾವಣೆಯಿದೆ.
ಈಗ ನಾಲ್ಕು ರಾಜ್ಯಗಳ ಚುನಾವಣೆ, ಅದರ ನಂತರ ದಿಲ್ಲಿ ಚುನಾವಣೆ ನಡೆಯುವುದಿದೆ.
ಭಾರತದಲ್ಲಿನ ವಿದ್ಯಾವಂತ ಯುವಕರಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಒಂದೆಡೆ ಮೀಸಲಾತಿ ವಿಚಾರ ಆತಂಕ ಮೂಡಿಸಿರುವಾಗ ಉದ್ಯೋಗಗಳೇ ಇಲ್ಲವಾಗಿರುವ ಸ್ಥಿತಿ ಹೆಚ್ಚು ಗಂಭೀರವಾದುದಾಗಿದೆ. ಇದು ರಾಜಕೀಯವಾಗಿ ತರಬಹುದಾದ ಪರಿಣಾಮಗಳನ್ನು ಗ್ರಹಿಸಬಹುದು. ಯುವಕರು ಯಾರ ಪರವಾಗಿ ನಿಲ್ಲಬಹುದು ಎಂಬುದು ನಿರ್ಣಾಯಕ ಸಂಗತಿಯಾಗುತ್ತದೆ.
ಮಹಾರಾಷ್ಟ್ರದಲ್ಲಿನ ರಾಜಕೀಯ ಸನ್ನಿವೇಶವನ್ನು ಈ ಹಂತದಲ್ಲಿ ಗಮನಿಸಿದರೆ ಎನ್‌ಡಿಎ ಒಳಗೇ ಏನು ನಡೆಯುತ್ತಿದೆ ಎಂಬುದರ ಸೂಕ್ಷ್ಮ ಗೊತ್ತಾಗುತ್ತದೆ.
ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿ ನೀಡುವುದನ್ನು ಅಜಿತ್ ಪವಾರ್ ತಪ್ಪಿಸಿಕೊಂಡಿರುವುದರ ಹಿಂದಿನ ರಾಜಕೀಯವನ್ನು ಗಮನಿಸಬೇಕು.
ಏಕನಾಥ್ ಶಿಂದೆ ಮತ್ತು ದೇವೇಂದ್ರ ಫಡ್ನವೀಸ್ ಅವರಿಬ್ಬರೂ ಹೆಡ್ಗೆವಾರ್ ಸ್ಮಾರಕ ಭವನಕ್ಕೆ ತೆರಳಿ ಪುಷ್ಪಾಂಜಲಿ ಸಲ್ಲಿಸಿದ್ದರೆ, ಅಜಿತ್ ಪವಾರ್ ನಾಗ್ಪುರದಲ್ಲಿದ್ದೂ ಆ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದಾರೆ.
ಹೀಗೆ ತಮ್ಮ ತಮ್ಮ ಅಧಿಕಾರ ಮತ್ತು ಅಸ್ತಿತ್ವಕ್ಕಾಗಿ ಎನ್‌ಡಿಎ ಒಳಗೇ ನಡೆದಿರುವ ಸಂಘರ್ಷ ಪ್ರಧಾನಿ ಕುರ್ಚಿಯವರೆಗೂ ಮುಟ್ಟಿದ ಹಾಗೆ ಕಾಣಿಸುತ್ತಿದೆ.
ಶಿವಾಜಿ ಪ್ರತಿಮೆ ವಿಚಾರವಾಗಿ ಶಿವಸೇನಾ ಉದ್ಧವ್ ಠಾಕ್ರೆ ಬಣ, ಎನ್‌ಸಿಪಿ ಶರದ್ ಪವಾರ್ ಬಣ ಮತ್ತು ಕಾಂಗ್ರೆಸ್ ರಸ್ತೆಗಿಳಿದಿರುವುದರ ಗುರಿ ಬಿಜೆಪಿ ಮತ್ತು ಮೋದಿ ಎಂಬುದು ಕೂಡ ಅಷ್ಟೇ ಸ್ಪಷ್ಟ. ಹಾಗಾಗಿ ಈಗ ಎನ್‌ಡಿಎಯನ್ನೇ ಒಡೆದು ಬಿಜೆಪಿ ಬಹುಮತದ ಗೆರೆ ದಾಟುವ ಬಗ್ಗೆಯೂ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಮಿತ್ರಪಕ್ಷಗಳಲ್ಲೇ ಯಾವ್ಯಾವುದನ್ನು ಒಡೆಯಬಹುದು, ಯಾರನ್ನು ನಮ್ಮ ಕಡೆ ಸೆಳೆಯಬಹುದು ಎಂಬ ಲೆಕ್ಕಾಚಾರವೂ ಬಿಜೆಪಿ ಕಡೆಯಿಂದ ಶುರುವಾಗಿದೆ ಎಂಬ ಸುದ್ದಿಯಿದೆ.
ಆದರೆ ಅದು ಈ ಹಿಂದಿನಷ್ಟು ಸುಲಭವಲ್ಲ. ಕಾರಣ ಈಗಿರುವುದು ಪಕ್ಕಾ ಮೈತ್ರಿ ಸರಕಾರ. ಏನೇ ದೊಡ್ಡ ಆಟ ಆಡಲು ಹೋದರೂ ಸರಕಾರವೇ ಉರುಳುವ ಸ್ಥಿತಿ.
ಮೀಸಲಾತಿ ವಿಚಾರ ಈಗ ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ, ಕಾರ್ಪೊರೇಟ್ ವಲಯದವರೆಗೂ ಮುಟ್ಟಿದೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಒಂದು ವೇಳೆ ಬಿಜೆಪಿ ಅಧಿಕಾರ ಕಳೆದುಕೊಂಡರೆ ಏನೆಲ್ಲ ಆಗಬಹುದು ಎಂಬ ಆತಂಕ ಕಾರ್ಪೊರೇಟ್ ಅನ್ನು ಕಾಡತೊಡಗಿದೆ.
ಉತ್ತರ ಪ್ರದೇಶದಲ್ಲಿನ ದೊಡ್ಡ ಮಟ್ಟದ ಹೂಡಿಕೆ ದಿಲ್ಲಿ ನಾಯಕರ ಬೆಂಬಲವಿಲ್ಲದೆ ಆಗಿದ್ದೇನೂ ಅಲ್ಲ.
ಗೌತಮ್ ಅದಾನಿ ಸಂಪತ್ತು ಸುಮಾರು 11 ಲಕ್ಷ ಕೋಟಿ ರೂ., ಅಂಬಾನಿ ಸಂಪತ್ತು ಸುಮಾರು 10 ಲಕ್ಷ ಕೋಟಿ ರೂ., ಶಿವ ನಾಡಾರ್ ಸಂಪತ್ತು ಸುಮಾರು 3 ಲಕ್ಷ ಕೋಟಿ ರೂ., ಸೈರಸ್ ಪೂನಾವಾಲಾ, ದಿಲೀಪ್ ಸಿಂಗ್, ಕುಮಾರ ಮಂಗಲಂ ಸಂಪತ್ತು ತಲಾ ಸುಮಾರು 2 ಲಕ್ಷ ಕೋಟಿ ರೂ.
ಕಾರ್ಪೊರೇಟ್ ವಲಯಕ್ಕೆ ಈಗ ಕಾಡುತ್ತಿರುವುದೇನೆಂದರೆ, ಮೋದಿ ಬದಲಾದರೆ ತನ್ನ ಹಿತಾಸಕ್ತಿಗೆ ಕಷ್ಟವಾದೀತೇ ಎಂಬುದು. ಈ ಹೊತ್ತಲ್ಲಿ ಮೋದಿಗೆ ಪರ್ಯಾಯ ಯಾರೆಂಬ ಪ್ರಶ್ನೆಯನ್ನು ಅವು ಮೋದಿಯನ್ನೇ ಕೇಳಲಿವೆಯೇ?
ಎನ್‌ಡಿಎಯಲ್ಲಿ ಚಂದ್ರಬಾಬು ನಾಯ್ಡು, ನಿತಿನ್ ಗಡ್ಕರಿ ಇಂಥವರೆಲ್ಲ ಕಾರ್ಪೊರೇಟ್ ವಲಯದ ಜೊತೆ ಬಲವಾದ ಸಂಬಂಧವನ್ನೇ ಹೊಂದಿರುವವರಾಗಿದ್ದಾರೆ.
ಬರುವ ಚುನಾವಣೆಗಳು ಬಿಜೆಪಿಯ ಲೆಕ್ಕಾಚಾರವನ್ನೆಲ್ಲ ತಲೆಕೆಳಗು ಮಾಡಲಿವೆ ಎಂಬ ಸೂಚನೆಗಳಿರುವಾಗ ರಾಷ್ಟ್ರೀಯತೆ ವಿಚಾರವನ್ನು ಪ್ರಬಲವಾಗಿ ಮಂಡಿಸುತ್ತ ಆದಿತ್ಯನಾಥ್ ನೆಲೆ ಕಂಡುಕೊಳ್ಳುವ ಮತ್ತೊಂದು ಸನ್ನಿವೇಶ ಕಾಣಿಸುತ್ತಿದೆ.
ಮೊದಲು ದೇಶ, ನಂತರ ನಾವು ಎಂದು ಆದಿತ್ಯನಾಥ್ ಹೇಳುತ್ತಿರುವುದರ ಹಿಂದಿನ ಉದ್ದೇಶವೇನು?
ಈಗ ಮೀಸಲಾತಿ ವಿರೋಧದಂಥ ವಿಷಯ ಎತ್ತಿದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ತನ್ನ ಮುಖ್ಯಮಂತ್ರಿ ಪದವಿಯೂ ಹೋಗುತ್ತದೆ ಎಂಬುದು ಆದಿತ್ಯನಾಥ್‌ಗೆ ಗೊತ್ತು.
ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೇ ಅಜಿತ್ ಪವಾರ್ ಉಳಿಯುತ್ತಾರೆಯೇ ಅಥವಾ ಬಿಟ್ಟು ತೆರಳುತ್ತಾರೆಯೇ ಎಂಬ ಪ್ರಶ್ನೆಯಿದೆ.
ಬಿಹಾರದಲ್ಲಿ ನಿತೀಶ್ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಿರುವಾಗ, ತ್ಯಾಗಿ ರಾಜೀನಾಮೆ ಉಂಟುಮಾಡಿರುವ ಹೊಸ ರಾಜಕೀಯ ಬೆಳವಣಿಗೆ ಮತ್ತು ಮುಂದಿನ ದಿನಗಳಲ್ಲಿ ಅದು ಪಡೆಯಬಹುದಾದ ತಿರುವು ಕುತೂಹಲ ಕೆರಳಿಸಿದೆ.
ಚಿರಾಗ್ ಪಾಸ್ವಾನ್ ಮೀಸಲಾತಿ ಮತ್ತು ಸಂವಿಧಾನದ ಪ್ರಶ್ನೆಯೆತ್ತುತ್ತಿರುವಾಗ, ಮೀಸಲಾತಿ ಮತ್ತು ಮುಸ್ಲಿಮ್ ಮತಬ್ಯಾಂಕ್ ರಾಜಕಾರಣ ಮುಖ್ಯವಾಗಿರುವಾಗ, ಭವಿಷ್ಯದಲ್ಲಿ ಬಿಜೆಪಿ ಪಾಲಿಗೆ ಬಿಹಾರದಲ್ಲಿ ದಾರಿಯೇ ಮುಚ್ಚಬಹುದು ಎಂಬ ಸುಳಿವು ಕಾಣಿಸುತ್ತಿರುವಾಗ ಅಸ್ಸಾಂ ಮುಖ್ಯಮಂತ್ರಿಯ ನಡೆ ಬಿಜೆಪಿಯನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಹಾಗಾದರೆ ಮುಂದಿನ ದಿನಗಳು ಬಿಜೆಪಿಗೆ ಅಷ್ಟೊಂದು ಸುಲಭವಿಲ್ಲವೇ?