ಶರಣಾಗತರಾದ ನಕ್ಸಲರ ಕುರಿತ ಬಿಜೆಪಿ ಶಾಸಕರ ಮಾತುಗಳು ದಲಿತ ಸಮುದಾಯಗಳಿಗೆ ಮಾಡಿದ ಅವಮಾನ
ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಬುಧವಾರ ಆರು ಮಂದಿ ನಕ್ಸಲರು ರಾಜ್ಯ ಸರಕಾರದ ಮುಂದೆ ಶರಣಾದರು.
ಶರಣಾಗತರಾದ ನಕ್ಸಲರಲ್ಲಿ ಯಾರೂ ಸಾಮಾಜಿಕವಾಗಿ ಬಲಾಢ್ಯ ಹಿನ್ನಲೆಯವರಿಲ್ಲ. ಬಹುತೇಕರು ನಮ್ಮದೇ ಕರಾವಳಿ ಮಲೆನಾಡಿನ ಜಿಲ್ಲೆಯವರು, ಆದಿವಾಸಿಗಳು. ಇವರ ಶರಣಾಗತಿ, ರಾಜ್ಯ ಸರಕಾರದ ಸಹಾನುಭೂತಿಯ ಮಾತುಗಳ ಕುರಿತು ಬಿಜೆಪಿ ಶಾಸಕರು ಅಸಹನೆಯ ಮಾತುಗಳನ್ನು ಆಡುತ್ತಿರುವುದು ತಳ ಸಮುದಾಯಗಳು, ಬಡವರ ಕುರಿತು ಅವರಿಗಿರುವ ಅಸಹನೆಯನ್ನು ತೋರುತ್ತದೆ. ಅದರಲ್ಲೂ ನಕ್ಸಲ್ ಪ್ರಭಾವಿತ ಕ್ಷೇತ್ರದ ಶಾಸಕಗಳಾದ ಕಾರ್ಕಳದ ಸುನೀಲ್ ಕುಮಾರ್, ಬೆಳ್ತಂಗಡಿಯ ಹರೀಶ್ ಪೂಂಜಾ ಶರಣಾಗತರಾದವರ ಕುರಿತು ಆಡಿರುವ ಮಾತುಗಳು ಅವರ ಕ್ಷೇತ್ರದ ಮಲೆಕುಡಿಯ, ಆದಿವಾಸಿ ಮುಂತಾದ ದಲಿತ ಸಮುದಾಯಗಳಿಗೆ ಮಾಡಿದ ಅವಮಾನ, ಆ ಜನಗಳ ಕುರಿತು ಈ ಶಾಸಕದ್ವಯರಿಗೆ ಇರುವ ಮನೋಭಾವದ ಅಭಿವ್ಯಕ್ತಿ.
ಬೆಳ್ತಂಗಡಿಯ ಕುತ್ಲೂರು ಮಲೆಕುಡಿಯರ ವಾಸಸ್ಥಾನಕ್ಕೆ ತೆರಳುವ ದಾರಿಯ ಮುರಿದು ಬಿದ್ದ ಸೇತುವೆಯನ್ನು ವರ್ಷಗಳಿಂದ ದುರಸ್ತಿ ಮಾಡದೆ ಸತಾಯಿಸುತ್ತಿರುವ ಹರೀಶ್ ಪೂಂಜಾ, ಇಲ್ಲಿ ಕಳೆದ ಎರಡು ದಶಕಗಳಿಂದ ಅಮಾಯಕ ಮಲೆಕುಡಿಯರ ಮೇಲೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯಿಂದ ನಡೆದ ದೌರ್ಜನ್ಯಗಳ ಸಂದರ್ಭ ಸಣ್ಣ ದನಿಯೂ ಎತ್ತಿದವರಲ್ಲ. ವಿಠಲ ಮಲೆಕುಡಿಯರನ್ನು ಯೂನಿವರ್ಸಿಟಿಯ ಹಾಸ್ಟೆಲ್ ನಿಂದ ಎಳೆದೊಯ್ದು ಕುಟುಂಬದ ಎಲ್ಲರ ಮೇಲೂ ಯುಎಪಿಎ ಅಡಿ ಪ್ರಕರಣ ದಾಖಲಿಸಿದಾಗ ವಿರೋಧಿಸುವುದು ಬಿಡಿ, ಬದಲಿಗೆ ಸಂಭ್ರಮ ಪಟ್ಟವರು.
ಇನ್ನು ಅರಿಭಯಂಕರ 'ಧರ್ಮ' ರಕ್ಷಕ ಶಾಸಕ ಸುನೀಲ್ ಕುಮಾರ್ ಕಾರ್ಕಳ ಕ್ಷೇತ್ರದ ಮಲೆಕುಡಿಯರಿಗೆ, ಆದಿವಾಸಿಗಳಿಗೆ, ದಲಿತರಿಗೆ ಕೇಸರಿ ಶಾಲು ಹಾಕಿ ತನ್ನ ಕಾಲಾಳು ಮಾಡಿಕೊಳ್ಳಲು ಯತ್ನಿಸಿದರೆ ಹೊರತು, ಅವರ ಸಮಸ್ಯೆಗಳಿಗೆ ಒಂದು ದಿನವೂ ಕಿವಿಯಾಗಲಿಲ್ಲ. ಕಾರ್ಕಳ ಕ್ಷೇತ್ರದ ಹೆಬ್ರಿಯ ಮಲೆಕುಡಿಯ ಹುಡುಗ ವಿಕ್ರಂ ಗೌಡನನ್ನು ಪೊಲೀಸರು ಗುಂಡು ಹೊಡೆದು ಕೊಂದು ಹಾಕಿದಾಗ ವಿರೋಧ ಪಕ್ಷದ ಸದಸ್ಯನಾಗಿ ಕನಿಷ್ಠ ತನಿಖೆಗೆ ಆಗ್ರಹಿಸದೆ, ಬದಲಿಗೆ ಆಡಳಿತ ಪಕ್ಷಕ್ಕಿಂತಲೂ ಉತ್ಸಾಹದಿಂದ ಹತ್ಯೆಯನ್ನು ಸಮರ್ಥಿಸಿದ್ದರು.
ವಿಕ್ರಂ ಗೌಡ ಹತ್ಯೆ ನಡೆದ ಪೀತ್ ಬೈಲಿನಲ್ಲಿ ಅಮಾಯಕ ಮಲೆಕುಡಿಯರನ್ನು ಅವರ ಮನೆಗಳಿಂದ ಬಲವಂತವಾಗಿ ಹೊರದಬ್ಬಿ ಪೊಲೀಸ್ ದಳ ಬಿಡಾರ ಹೂಡಿದ್ದನ್ನು ಶಾಸಕ ಸುನೀಲ್ ಕುಮಾರ್ ಪ್ರಶ್ನಿಸುವ ಗೋಜಿಗೂ ಹೋಗಿರಲಿಲ್ಲ. ಅವರ ಪರವಾಗಿ ಮಾತಾಡಲು ದೂರದ ಮಂಗಳೂರಿನಿಂದ ನಾವೇ ಹೋಗಬೇಕಾಯಿತು. ವಿಕ್ರಂ ಗೌಡ ಮೃತದೇಹ ಪೋಸ್ಟ್ ಮಾರ್ಟಂಗೆ ಸಾಗಿಸಿದ ವೆಚ್ಚವನ್ನು ವಿಕ್ರಂ ಗೌಡರ ತೀರಾ ಬಡಪಾಯಿ ಸೋದರಿಯಿಂದ ಕೊಡಿಸಿದ್ದನ್ನು ಪ್ರಶ್ನಿಸಲೂ ನಾವೇ ಹೋಗಬೇಕಾಯಿತು. ಶಾಸಕ ಸುನೀಲ್ ಕುಮಾರೂ ಇಲ್ಲ, ಅವರ ಪಕ್ಷ, ಪರಿವಾರದವರೂ ಪ್ರಶ್ನಿಸಲು ಬರಲಿಲ್ಲ. ಇನ್ನು ಕಾರ್ಕಳದ ಅರಣ್ಯದಂಚಿನ ಗ್ರಾಮಸ್ಥರ ಬದುಕಿನ ದುಸ್ಥಿತಿ ವರ್ಣಿಸಲು ಸಾಧ್ಯವಿಲ್ಲ. ಪೀತ ಬೈಲ್ ಗೆ ತಲುಪಲು 8 ಕಿ.ಮೀ. ದೂರ ಕಠಿಣ ದಾರಿಯಲ್ಲಿ ನಡೆಯಬೇಕು ಅಂದರೆ ಊಹಿಸಿ. ಇದು ಶಾಸಕ ಸುನೀಲ್ ಕುಮಾರ್ ತನ್ನ ಕ್ಷೇತ್ರದ ಆದಿವಾಸಿಗಳು, ದಲಿತರನ್ನು ಕಾಣುವ ರೀತಿ. ಆದರೆ, ಇಲ್ಲೆಲ್ಲಾ ತನ್ನ ಪರಿವಾರದ ರಾಕ್ಷಸ ಶಕ್ತಿ ಬಳಸಿ ವಿರೋಧ ಪಕ್ಷಗಳನ್ನು ಪೂರ್ತಿ ಸವರಿ ಹಾಕಿ ಅರಣ್ಯವಾಸಿಗಳ ಮತ ಪೂರ್ತಿ ತನಗೇ ಬೀಳುವಂತೆ ಮಾಡಿದ್ದಾರೆ.
ಈ ರೀತಿ ಮತ ಹಾಕುತ್ತಿರುವ ಕಾರಣಕ್ಕಾದರೂ ಇವರು ಈ ಬಡಪಾಯಿ ಸಮುದಾಯಗಳ ಪರ ಕನಿಷ್ಠ ಮೊಸಳೆ ಕಣ್ಣೀರು ಸುರಿಸಲೂ ಸಿದ್ಧರಿಲ್ಲ, ಬದಲಿಗೆ ಹತ್ಯೆಗೀಡಾದ ವಿಕ್ರಂ ಗೌಡ, ಈಗ ಶರಣಾದ ಮಲೆಯ ಮಕ್ಕಳಾದ ಸುಂದರಿ, ಲತಾ ಮುಂತಾದವರ ಕುರಿತು ನಿಷ್ಕರುಣೆಯ ಮಾತುಗಳನ್ನು ಆಡುತ್ತಿದ್ದಾರೆ ಅಂದರೆ ಇವರ ರಾಜಕಾರಣ ಯಾರ ಪರ ಎಂಬುದನ್ನು ಊಹಿಸಿ. ಸುನೀಲ್ ಕುಮಾರ್, ಹರೀಶ್ ಪೂಂಜಾ ಮುಂತಾದ ಬಿಜೆಪಿ ಶಾಸಕರ, ನಾಯಕರ ಮಾತುಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕರಾವಳಿ, ಮಲೆನಾಡಿನ ದಲಿತರು, ದಮನಿತರು, ಬಡವರು, ತಳ ಸಮುದಾಯಗಳ ಜನರು, ಪ್ರಜ್ಞಾವಂತರು ಬಿಜೆಪಿ ನಾಯಕರ ಈ ನಡೆಯ ವಿರುದ್ದ ಧ್ವನಿ ಎತ್ತಬೇಕು, ಸರಿಯಾದ ಪಾಠ ಕಲಿಸಬೇಕು.
-ಮುನೀರ್ ಕಾಟಿಪಳ್ಳ
ಕಾರ್ಯದರ್ಶಿ, ಸಿಪಿಎಂ ದ.ಕ. ಜಿಲ್ಲಾ ಸಮಿತಿ