ಕಲಬುರಗಿಯಲ್ಲಿ ಗಮನಸೆಳೆದ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’
ದೇಹಭಾವವಳಿದಲ್ಲದೆ ಜೀವಭಾವವಳಿಯದು
ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು
ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು
ಕುರುಹು ನಷ್ಟವಾದಲ್ಲದೆ ಮಾಯೆ ಇಂಗದು
ಇದು ಕಾರಣ;
ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ
ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ
-ಅಲ್ಲಮಪ್ರಭು
(ಆಕರ: ಸಮಗ್ರ ವಚನ ಸಂಪುಟ:2/ವಚನದ ಸಂಖ್ಯೆ:1267)
ಈಚೆಗೆ ಕಲಬುರಗಿಯ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಬೆಂಗಳೂರಿನ ‘ಜಂಗಮ ಕಲೆಕ್ಟಿವ್’ ತಂಡದ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ ಪ್ರದರ್ಶನವಾಗಿ ಗಮನಸೆಳೆಯಿತು. ತುಂಬಿದ ರಂಗಮಂದಿರದಲ್ಲಿ ಜನರು ನಾಟಕಕ್ಕೆ ಉತ್ಸಾಹದ ಪ್ರತಿಕ್ರಿಯೆ ನೀಡಿದರು. ‘ಬಾಬ್ ಮಾರ್ಲಿ..’ಯನ್ನು ಕಲಬುರಗಿಗೆ ತರಬೇಕೆಂಬುದು ಸಮುದಾಯ, ಕಲಬುರಗಿಯ ಅಧ್ಯಕ್ಷ ದತ್ತಾತ್ರೇಯ ಇಕ್ಕಳಕಿ ಅವರ ಬಹಳ ದಿನದ ಕನಸಾಗಿತ್ತು. ಹಾಗಾಗಿ ರಂಗಶಂಕರದಲ್ಲಿ ಪ್ರದರ್ಶನಗೊಂಡ ಈ ನಾಟಕದ ಮೊದಲ ಶೋ ನೋಡಿ ಬೆರಗಾಗಿ ಕಲಬುರಗಿಗೆ ಬರಬೇಕೆಂದು ನಿರ್ದೇಶಕ ಕೆ.ಪಿ. ಲಕ್ಷ್ಮಣ್ ಅವರನ್ನು ಕೇಳಿಕೊಂಡಿದ್ದರು. ತಡವಾಗಿಯಾದರೂ ಕಲಬುರಗಿ ರಂಗಾಯಣ ಮತ್ತು ಸಮುದಾಯ ಕೂಡಿ ಬಾಬ್ ಮಾರ್ಲಿ ನಾಟಕವನ್ನು ಆಯೋಜಿಸಿದ್ದರು. ಆಳಂದದ ಶಾಸಕ ಬಿ.ಆರ್. ಪಾಟೀಲ್ ಚಾಲನೆ ನೀಡಿದರು. ಚಿಂತಕ ಆರ್.ಕೆ. ಹುಡಗಿ, ಮೀನಾಕ್ಷಿಬಾಳಿ, ಶಿವಶರಣಪ್ಪ ಮೂಳೆಗಾಂವ್, ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ವೇದಿಕೆ ಹಂಚಿಕೊಂಡು ನಾಟಕಕ್ಕೆ ಶುಭಕೋರಿದ್ದರು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ದಟ್ಟ ಪ್ರಭಾವ ಇರುವ ಕಲಬುರಗಿಯ ನೆಲದಲ್ಲಿ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ಪ್ರದರ್ಶನವಾದದ್ದು ವಿಶೇಷವಾಗಿತ್ತು.
ಕೆ.ಪಿ. ಲಕ್ಷ್ಮಣ್ ಮತ್ತವರ ಗೆಳೆಯ ಗೆಳತಿಯರು ಕೂಡಿ ಕಟ್ಟಿಕೊಂಡ ‘ಜಂಗಮ ಕಲೆಕ್ಟಿವ್’ ತಂಡ ಕನ್ನಡದ ರಂಗಭೂಮಿಗೆ ಒಂದು ವಿಶಿಷ್ಟ ಆಯಾಮವನ್ನು ಒದಗಿಸುತ್ತಿದೆ. ದಲಿತ ದಮನಿತ ಗ್ರಾಮೀಣ ಕೆಳಜಾತಿಗಳಿಂದ ಬಂದ ಹೊಸ ತಲೆಮಾರು ಕಟ್ಟಿಕೊಂಡ ಕನಸೇ ಈ ‘ಜಂಗಮ ಕಲೆಕ್ಟಿವ್’. ಈ ತಂಡದಿಂದ ಈಗಾಗಲೇ ‘ದಕ್ಲಕಥಾ ದೇವಿಕಾವ್ಯ’, ‘ಪಂಚಮಪದ’ ಎನ್ನುವ ವಿಶಿಷ್ಟ ರಂಗ ಪ್ರಯೋಗಗಳನ್ನು ಮಾಡಿದ್ದಾರೆ. ಜನಚರಿತೆ ಕಾಲಮ್ಮಿನಲ್ಲಿ ಈ ಎರಡೂ ನಾಟಕಗಳನ್ನು ವಿಶ್ಲೇಷಣೆ ಮಾಡಿ ಬರೆದಿದ್ದೆ. ಇದೇ ತಂಡದ ಮತ್ತೊಂದು ಪ್ರಯೋಗ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ. ಈ ನಾಟಕ ಈಗಾಗಲೇ ಬಹಳ ಮೆಚ್ಚುಗೆ ಗಳಿಸಿದೆ. ವಿವಿಧ ಮಗ್ಗಲುಗಳ ವಿಮರ್ಶೆಗೆ ಒಳಗಾಗಿದೆ. ನಾನು ಈ ನಾಟಕವನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಪ್ರದರ್ಶನ ಕಂಡಾಗ ಫೇಸ್‌ಬುಕ್ ಪೇಜಿನ ಲೈವ್‌ನಲ್ಲಿ ಮೊದಲು ನೋಡಿದ್ದೆ. ಆನಂತರ ಚಿತ್ರದುರ್ಗದಲ್ಲಿ ಪ್ರದರ್ಶನಗೊಂಡಾಗ ನೋಡಿದ್ದೆ. ಕಲಬುರಗಿಯಲ್ಲಿ ನಾನು ನೋಡಿದ್ದು ಮೂರನೇ ಪ್ರದರ್ಶನ. ಮೊನ್ನೆಯ ಪ್ರದರ್ಶನದಲ್ಲಿ ಮೊದಲ ಹಂತದ ಪ್ರದರ್ಶನಗಳಿಗಿಂತ ಬಹಳ ಬದಲಾವಣೆಗಳೊಂದಿಗೆ, ಮಾಗಿದ ಅಭಿನಯದಲ್ಲಿ ರಂಗಭೂಮಿಯ ಮೇಲೆ ಇಡೀ ನಾಟಕವೇ ಒಂದು ಕಾವ್ಯದಂತೆ ಅಭಿನಯಗೊಂಡಿತು.
‘‘ಎಲ್ಲಿಗಂಟ ಅವರು ಸುಪೀರಿಯರ್ರೋ, ಇವರು ಇನ್ ಪೀರಿಯರ್ರೋ ಅಂತ ಇರ್ತಾದೋ, ಅಲ್ಲೀಗಂಟ ಶೋಷಣೆ ಇರ್ತದೆ, ಹೋರಾಟ ಇರ್ತದೆ, ಸಂಘರ್ಷ ಇರ್ತದೆ, ಯುದ್ಧ ಇರ್ತದೆ...’’ಎನ್ನುವ ಹಾಡಿನೊಂದಿಗೆ ಮುಗಿಯುವ ನಾಟಕ ಇದನ್ನೇ ನಾಟಕದ ಸಂದೇಶವನ್ನಾಗಿಯೂ ಸಾಂಕೇತಿಕಗೊಳಿಸಿದ್ದಾರೆ. ‘‘ಎನ್.ಕೆ. ಹನುಮಂತಯ್ಯನ ಕಾವ್ಯ, ರೋಹಿತ್ ವೇಮುಲನ ಲೆಟರ್, ಅಂಬೇಡ್ಕರ್ ಅವರ ವೇಯ್ಟಿಂಗ್ ಫಾರ್ ವೀಸಾ ಓದಬೇಕಾದರೆ ಇದರಲ್ಲೆಲ್ಲಾ ಕಾಮನ್ ಆಗಿ ಬರುವ ತಬ್ಬಲಿತನ, ಒಂಟಿತನ ನನ್ನನ್ನು ಬಹಳ ದಿನ ಕಾಡಿದ್ದಿದೆ. ಇದನ್ನು ರಂಗಭೂಮಿಗೆ ಹೇಗೆ ತರಬೇಕು ಅಂತ ಹುಡುಕಾಟದಲ್ಲಿದ್ದಾಗ, ಈ ತರಹದ್ದೇ ಘಟನೆಯ ಚಂದ್ರು ಅವರ ಕಥೆಯೊಂದು ಇದಕ್ಕೆ ಹೊಂದಿಕೆಯಾಯ್ತು. ಅಂತೆಯೇ ಅಲ್ಲಮಪ್ರಭು ಅವರ ‘ದೇಹಭಾವವಳಿದಲ್ಲದೆ ಜೀವಭಾವವಳಿಯದು’ ಎನ್ನುವುದು ಕುರುಹಿನ ಬಗ್ಗೆ ಬಹಳ ಮಾರ್ಮಿಕವಾಗಿ ಎಚ್ಚರಿಸುವ ವಚನವೊಂದು ನನ್ನನ್ನು ಕಾಡುತ್ತಿತ್ತು. ಈ ಎಲ್ಲಾ ಎಳೆಗಳನ್ನು ಪೋಣಿಸಿ ಹೆಣೆದ ಪ್ರಯೋಗವೇ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’’ ಎಂದು ನಿರ್ದೇಶಕ ಕೆ.ಪಿ. ಲಕ್ಷ್ಮಣ್ ಹೇಳುತ್ತಾರೆ. ಬರಹದ ಆರಂಭಕ್ಕೆ ಉಲ್ಲೇಖಿಸಿದ ಅಲ್ಲಮನ ವಚನವನ್ನು ಗಮನಿಸಿ, ಅಲ್ಲಮಪ್ರಭುವಿನ ಈ ವಚನ ‘ಕುರುಹು’ ನಷ್ಟವಾಗುವ ಬಗ್ಗೆ, ಗರುತು ನಾಶವಾಗುವ ಬಗ್ಗೆ ಹೇಳುತ್ತದೆ. ಅಂದರೆ ತಳ ಸಮುದಾಯಗಳಿಗೆ ಅಂಟಿಕೊಂಡ ಗುರುತುಗಳನ್ನು ಕಳಚದೆ, ಈ ನೂರಾರು ಐಡೆಂಟಿಟಿಗಳ ವೃತ್ತಗಳನ್ನು ದಾಟದೆ ಹೊಸ ದಿಗಂತಕ್ಕೆ ಹಾರಲು ಸಾಧ್ಯವಾಗದು ಎನ್ನುವ ಎಳೆ ಕೂಡ ಈ ನಾಟಕದಲ್ಲಿ ಪೋಣಿಸಿಕೊಂಡಿದೆ. ಕೋಡಿಹಳ್ಳಿಯ ದಲಿತ ಯುವಕನೊಬ್ಬ ತನ್ನನ್ನು ಜಮೈಕಾದ ರೆಗ್ಗೀ ಸಂಗೀತಗಾರ ರಸ್ತಾಫರಿಯನಿಜಂನ ಐಕಾನ್ ಆಗಿರುವ ಬಾಬ್ ಮಾರ್ಲಿ ಜತೆ ತನ್ನ ಗುರುತನ್ನು ಬದಲಾಯಿಸಿಕೊಳ್ಳುವುದೇ ಗುರುತನ್ನು ಕಳಚುವುದರ ಸಂಕೇತವಾಗಿದೆ. ಹಾಗಾಗಿ 12ನೇ ಶತಮಾನದ ಅಲ್ಲಮನ ಕನಸಿನ ಚಿತ್ರವನ್ನು ಆಧುನಿಕ ಬಾಬ್ ಮಾರ್ಲಿ ನಾಟಕ ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿದೆ.
ದಲಿತ ಕೆಳಜಾತಿಗಳ ಅಕ್ಷರ ಕಲಿತ ಮೊದಲ ತಲೆಮಾರಿನ ಯುವಕ-ಯುವತಿಯರು ಬದುಕು ಕಟ್ಟಿಕೊಳ್ಳಲು ನಗರಗಳಿಗೆ ಬರುತ್ತಾರೆ. ಹೀಗೆ ಬಂದ ಕೆಳಜಾತಿಗಳ ಹುಡುಗ-ಹುಡುಗಿಯರು ತಮ್ಮ ಜಾತಿ, ಹಳ್ಳಿ, ಕುಲಕಸಬು ಎಲ್ಲವನ್ನು ಮರೆತಂತೆ ನಟಿಸಿ ಮುಚ್ಚಿಟ್ಟು ಹೊಸ ಗುರುತುಗಳನ್ನು ಪಡೆಯಲು ಹಂಬಲಿಸುವಿಕೆಯೇ ಈ ನಾಟಕದ ಮುಖ್ಯ ಎಳೆ. ಇದಷ್ಟೇ ಆಗಿದ್ದರೆ ಈ ನಾಟಕ ಅಷ್ಟೇನು ಗಮನ ಸೆಳೆಯುತ್ತಿರಲಿಲ್ಲ. ಹೀಗೆ ಮುಚ್ಚಿಟ್ಟುಕೊಳ್ಳುವ ಮರೆಯಲು ಪ್ರಯತ್ನಿಸುವ ಗುರುತುಗಳನ್ನು ಒಮ್ಮೆ ಬಿಚ್ಚಿಡಬೇಕಾದ ಕಡೆ ನಾಟಕ ಗಮನ ಸೆಳೆಯುತ್ತದೆ. ಅಥವಾ ಯಾಕೆ ನಮ್ಮ ಗುರುತುಗಳ ಬಗ್ಗೆ ನಾವು ಧೈರ್ಯವಾಗಿ ಮಾತನಾಡುತ್ತಿಲ್ಲ? ಅಥವಾ ಹಾಗೆ ಗುರುತುಗಳ ಬಗ್ಗೆ ಮಾತನಾಡಲು ಮೇಲ್ಜಾತಿಗಳು ಹುಟ್ಟಿಸಿರುವ ಕೀಳಿರಿಮೆಯ ಭಯ ನಮ್ಮನ್ನು ಇನ್ನೂ ಕಾಡುತ್ತಿದೆಯೇ? ಎನ್ನುವ ಮುಖ್ಯ ಪ್ರಶ್ನೆಯ ಕಡೆಗೆ ನಾಟಕ ವಾಲುತ್ತದೆ. ಹಾಗಾಗಿಯೇ ಮೂರು ಹಿನ್ನೆಲೆಯಿಂದ ಬಂದ ಪಾತ್ರಗಳು ಅವರವರ ಹಿನ್ನೆಲೆಗಳನ್ನು ಹೇಳುತ್ತಾ, ನೆನೆಯುತ್ತಾ, ನೋಯುತ್ತಾ, ಖುಷಿಗೊಳ್ಳುತ್ತಾ ನೋಡುಗರ ನೆನಪುಗಳನ್ನೂ ಕೆದಕುತ್ತಾ ಅವರುಗಳನ್ನು ನಾಟಕದ ಭಾಗವಾಗಿಸಿಕೊಳ್ಳುತ್ತಾರೆ. ರಂಗದಲ್ಲಿ ಅಭಿನಯಿಸುತ್ತಿರುವುದು ಮೂರು ಪಾತ್ರಗಳಾದರೆ ಕೆಳಗೆ ಕೂತು ನೋಡುವ ಅಷ್ಟೂ ಪ್ರೇಕ್ಷಕರೂ ತಮ್ಮ ತಮ್ಮ ಗುರುತುಗಳ ನೆನಪಿನೊಂದಿಗೆ ತಾಳೆ ನೋಡುವಂತಾಗುತ್ತದೆ. ಇದುವೇ ನಾಟಕದ ಯಶಸ್ಸು.
ನಟನೆ ಮಾಡಿದವರ ಬಾಲ್ಯದ ಅನುಭವಗಳ ಜತೆ ಎಲ್ಲಾ ದಮನಿತ ಹೊಸ ತಲೆಮಾರಿನ ನೆನಪುಗಳನ್ನು ಹೆಣಿಗೆ ಮಾಡಿ ನಾಟಕ ರೂಪ ಕೊಡಲಾಗಿದೆ. ಹಾಗಾಗಿ ಚಂದ್ರಶೇಖರ್ ತಾನು ಶಾಲೆಗೆ ಹೋದಾಗ ಕುಳುವಾಡಿಕೆ ಚಾಕರಿ ಮಾಡಲು ಒತ್ತಾಯ ಮಾಡುವ ತನ್ನದೇ ನೆನಪನ್ನು ನೋವಿನಲ್ಲಿ ಅದ್ದಿತೆಗೆದಂತೆ ನಟಿಸಿದ್ದಾರೆ. ರಂಗಭೂಮಿಯ ಒಂದು ಪಾತ್ರ, ನಿಜ ಜೀವನದ ಒಂದು ಪಾತ್ರವನ್ನು ಮುಖಾಮುಖಿ ಮಾಡುವ ತಂತ್ರ ಇಲ್ಲಿದೆ. ವೃತ್ತಿಯಲ್ಲಿ ಟೀಚರ್ ಆಗಿದ್ದವಳು ನಾಟಕದೊಳಗೊಂದು ನಾಟಕದಲ್ಲಿ ಟೀಚರ್ ಪಾತ್ರದಲ್ಲಿ ವಿದ್ಯಾರ್ಥಿಯನ್ನು ಹಿಂಸಿಸುವ ಪಾತ್ರವನ್ನು ಮಾಡದೆ ನಿರಾಕರಿಸುವುದು, ಕುಳುವಾಡಿಕೆಯ ವೃತ್ತದಲ್ಲಿ ತಳ್ಳುವ ಪಾತ್ರ ಮಾಡದೆ ಸ್ಟಾಂಡಪ್ ಕಾಮಿಡಿಯನ್ ತಿರಸ್ಕರಿಸುವುದು ಪಾತ್ರ ಮತ್ತು ನೈಜ ಬದುಕಿನ ಸಂಕೀರ್ಣತೆಯನ್ನು ಅರ್ಥಮಾಡಿಸುವ ನೆಲೆಯು ನಾಟಕದ ಬಹಳ ಮುಖ್ಯ ಆಶಯವಾಗಿದೆ. ಸಮುದಾಯದ ಪುರಾಣ ಐತಿಹ್ಯ, ಸಮುದಾಯ ನಿಷ್ಠ ನೆನಪುಗಳು ಮತ್ತು ಸಮುದಾಯ ಕಟ್ಟಿಕೊಟ್ಟ ಅನುಭವ ಈ ಮೂರನ್ನೂ ಒಂದರೊಳಗೊಂದು ಬೆರೆಸಲಾಗಿದೆ. ಸಮುದಾಯದ ಐತಿಹ್ಯಗಳನ್ನು ಮೌಢ್ಯಗಳೆಂದು ನಿರಾಕರಿಸದೆ ಅವುಗಳಲ್ಲಿ ಸಮುದಾಯ ಚೈತನ್ಯ ಪಡೆಯಲು ಬೇಕಾದವನ್ನು ಮರುಕಟ್ಟಿಕೊಳ್ಳುತ್ತಾ, ದಮನಕ್ಕೆ ನೆರವಾಗುವಂತಹ ಮೌಢ್ಯಗಳನ್ನು ನಿರಾಕರಿಸುತ್ತಾ ತಳಸಮುದಾಯದ ಅವಮಾನಗಳನ್ನು ಮರೆಮಾಚಿಸುವ ಬದಲು ಅವನ್ನು ಎದುರುಗೊಳ್ಳಬೇಕಾಗಿದೆ ಎನ್ನುವುದನ್ನು ನಾಟಕ ಬಹಳ ಪರಿಣಾಮಕಾರಿಯಾಗಿ ದಾಟಿಸುತ್ತದೆ.
ನಾಟಕದಲ್ಲಿ ಬಾಬ್ ಮಾರ್ಲಿ ಪಾತ್ರ ಮಾಡಿದ ಚಂದ್ರಶೇಖರ್‌ಕೆ., ಟೀಚರ್ ಪಾತ್ರ ಮಾಡಿದ ಶ್ವೇತಾರಾಣಿ ಎಚ್.ಕೆ., ಸ್ಟಾಂಡಪ್ ಕಾಮಿಡಿಯನ್ ಪಾತ್ರ ಮಾಡಿದ ಭರತ್ ಡಿಂಗ್ರಿ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದಂತೆ ನಟಿಸಿದ್ದಾರೆ. ಅವರೇನು ನಟಿಸುತ್ತಿದ್ದಾರೋ, ನಟನೆ ಮರೆತು ತಮ್ಮದೇ ಬಾಲ್ಯದ ನೆನಪುಗಳನ್ನು ದಾಟಿಸುತ್ತಿದ್ದಾರೋ ಎಂದು ಸಂಶಯ ಬರುವಷ್ಟು ಒಂದರೊಳಗೊಂದು ಬೆರೆತಿದೆ. ಇಲ್ಲಿ ತಮಗಿರುವ ಕಡಿಮೆ ದುಡಿಮೆಯಲ್ಲಿ ಒಬ್ಬೊಬ್ಬರೇ ಬಾಡಿಗೆ ಮನೆ ಹಿಡಿಯುವುದು ಕಷ್ಟ ಎನ್ನುವುದು, ಒಂದೇ ಜಾತಿಯವರು ಮಾತ್ರ ರೂಮ್ ಶೇರ್ ಮಾಡುವ, ನಾನ್‌ವೆಜ್ ಎನ್ನುವುದನ್ನು ಅಡಗಿಸುವ ಬಿಕ್ಕಟ್ಟನ್ನು ನಾಟಕ ತೆರೆದಿಡುತ್ತದೆ. ಮೂರೇ ಮೂರು ಪಾತ್ರಗಳು ಉಳಿದೆಲ್ಲಾ ಪಾತ್ರಗಳನ್ನು ತಾವೇ ಅಭಿನಯಿಸಿ ಜೀವಂತಗೊಳಿಸುವುದು, ಕೆಲವೇ ಕೆಲವು ರಂಗಪರಿಕರಗಳನ್ನು ಸಾಂಕೇತಿಕವಾಗಿ ಬಳಸಿಯೂ ಉಳಿದೆಲ್ಲಾ ಪರಿಕರಗಳನ್ನು ಕಾಲ್ಪನಿಕವಾಗಿ ಕಟ್ಟಿಕೊಡುವುದು ಒಂದರ್ಥದಲ್ಲಿ ಕನಿಷ್ಠ ಪಾತ್ರ ಮತ್ತು ಕನಿಷ್ಠ ರಂಗಪರಿಕರಗಳ ಬಳಕೆಯ ಬಹುಸಾಧ್ಯತೆ ದಲಿತ ರಂಗಭೂಮಿಯ ಹೊಸ ಆಯಾಮವನ್ನು ಶೋಧಿಸಿದಂತೆ ಕಾಣುತ್ತದೆ. ಕಕ್ಕೆ ಹೂ, ತಾಳೆ ಗರಿ ಸಾಂಸ್ಕೃತಿಕ ಬೇರುಗಳ ರಂಗದಲ್ಲಿ ಅಂಟಿಸಿದಂತೆ ಪರಿಣಾಮಕಾರಿಯಾಗಿವೆ. ಮಂಜುನಾರಾಯಣ ಅವರ ಬೆಳಕಿನ ವಿನ್ಯಾಸ ನಾಟಕದ ಆಶಯವನ್ನು ಇನ್ನಷ್ಟು ಆಳವಾಗಿ ತಾಕುವಂತೆ ಸಂಯೋಜಿಸಲಾಗಿದೆ. ಮರಿಯಮ್ಮ ಚೂಡಿ ಅವರ ಕಂಠವಂತೂ ಇಡೀ ಪ್ರದರ್ಶನದ ಶಕ್ತಿಯುತ ಅಂಶಗಳಲ್ಲಿ ಒಂದಾಗಿದೆ. ಈ ನಾಟಕ ಕನ್ನಡ ರಂಗಭೂಮಿಗೆ ‘ಡ್ರಮಟರ್ಗ್’ ಎನ್ನುವ ಪದವನ್ನು ಹೊಸದಾಗಿ ಪರಿಚಯಿಸಿದಂತಾಗಿದೆ. ನಾಟಕಕ್ಕೆ ಸಾಹಿತ್ಯಿಕ ಸೂಕ್ಷ್ಮತೆಗಳನ್ನೂ, ಎಡಿಟಿಂಗ್‌ನ ಸಂಯೋಜನೆಯಲ್ಲಿ ಹೊಸ ಹೊಳಹುಗಳನ್ನು ನೀಡಿದ ಡ್ರಮಟರ್ಗ್ ವಿ.ಎಲ್. ನರಸಿಂಹಮೂರ್ತಿಯ ಪಾತ್ರವೂ ನಾಟಕಕ್ಕಿದೆ.
ಭಾರತದಲ್ಲಿ 1992ರ ನಂತರ ಮುಸ್ಲಿಮರು ಕೂಡ ದಲಿತರಂತೆಯೇ ಧರ್ಮದ ಕಾರಣಕ್ಕೆ ಹಿಂದೂ ಧರ್ಮದ ಮೂಲಭೂತವಾದದ ದಮನಕ್ಕೆ, ಹಿಂಸೆಗೆ ಒಳಗಾಗುತ್ತಿದ್ದಾರೆ. ಮುಸ್ಲಿಮ್ ಸಮುದಾಯ ಕೂಡ ತನ್ನ ಗುರುತುಗಳನ್ನು ಅಡಗಿಸಲು ಮತ್ತೊಂದೆಡೆ ಈ ಗುರುತನ್ನು ಢಾಳಾಗಿ ಬಿಂಬಿಸುವ ವೈರುಧ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿನ ದಲಿತ-ಯುವಕ ಯುವತಿಯರು ಎದುರಿಸುತ್ತಿರುವ ಸಮಸ್ಯೆಯನ್ನೂ ಗ್ರಾಮೀಣ ಮತ್ತು ಮಧ್ಯಮ ವರ್ಗದ ಮುಸ್ಲಿಮ್ ಯುವಕ-ಯುವತಿಯರು ಅನುಭವಿಸುತ್ತಿದ್ದಾರೆ. ನಾಟಕದ ಮೂರು ಪಾತ್ರದಲ್ಲಿಯೋ ಅಥವಾ ಮತ್ತೊಂದು ಹೊಸ ತಲೆಮಾರಿನ ಗಂಡು ಅಥವಾ ಹೆಣ್ಣಿನ ಮುಸ್ಲಿಮ್ ಪಾತ್ರವನ್ನೂ ಸೇರಿಸಿಕೊಂಡಿದ್ದರೆ ಪೆರಿಯಾರ್ ಹೇಳುವ ‘ದಲಿತ-ಮುಸ್ಲಿಮ್ ಏಕತೆ’ಯ ಕನಸಿನ ಆಧುನಿಕ ಎಳೆಯೊಂದು ಹಾದು ಹೋದಂತಾಗುತ್ತಿತ್ತು. ಹಾಗಾಗಿದ್ದಲ್ಲಿ ನಾಟಕ ಎತ್ತುವ ಪ್ರಶ್ನೆಗಳಿಗೆ ಮತ್ತಷ್ಟು ವ್ಯಾಪಕತೆ, ವಿಸ್ತಾರ ದಕ್ಕುತ್ತಿತ್ತು. ಇರಲಿ, ‘ಮನವೆಲ್ಲವೂ ಬಯಲಾಗಿದೆ/ಕಣ್ಣಂಚ ನೋಟವೆ ಎದೆಪದಕೆ ಪೀಠಿಕೆ/ಉಸಿರೊಂದು ಕೊಳಲಾ ಹುಡುಕಿದೆ’ ಎಂಬ ಮಧುರ ಗೀತೆಯೊಂದಿಗೆ ಶುರುವಾಗುವ ಬಾಬ್ ಮಾರ್ಲಿ ನಾಟಕ, ಮುಗಿದ ನಂತರವೂ ನೋಡುಗರ ಎದೆಯಲ್ಲಿ ‘ಪ್ರೀತಿ ಪರಿಷೆ’ ಶುರುಮಾಡುವುದು ಅದರ ಯಶಸ್ಸಿನ ಗುಟ್ಟಾಗಿದೆ. ಜಂಗಮ ಕಲೆಕ್ಟಿವ್ ತಂಡ ಮತ್ತಷ್ಟು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳಲಿ ಎಂದು ಹಾರೈಸೋಣ.