ಕಾರ್ಪೊರೇಟ್ ಕಂಪೆನಿಗಳಿಂದ ದೇಣಿಗೆ ಪಡೆಯುವ ಪಕ್ಷಗಳು ಜನಸಾಮಾನ್ಯರ ಹಿತ ಕಾಯಲು ಸಾಧ್ಯವೇ?
2024ರಲ್ಲಿ ಚುನಾವಣಾ ಬಾಂಡ್‌ಗಳ ಹೊರತಾಗಿ ಬಿಜೆಪಿಗೆ ಬಂದ ದೇಣಿಗೆಗಳ ಮೊತ್ತ ಎಷ್ಟು ಗೊತ್ತೆ?
ಚುನಾವಣಾ ಆಯೋಗದ ವರದಿ ಪ್ರಕಾರ, ಈಗ ರದ್ದಾಗಿರುವ ಚುನಾವಣಾ ಬಾಂಡ್ ದೇಣಿಗೆಗಳ ಹೊರತಾಗಿ 2024ರ ಮಾರ್ಚ್ 31ರವರೆಗೆ ಬಿಜೆಪಿ 2,243.9 ಕೋಟಿ ರೂ. ದೇಣಿಗೆ ಪಡೆದಿದೆ.
ಈ ನಡುವೆ ಕೆಲವು ವರದಿಗಳು 2,224 ಕೋಟಿ ರೂ. ಎಂತಲೂ ಹೇಳುತ್ತಿವೆ.
ಉಳಿದ ಪಕ್ಷಗಳು ಪಡೆದ ದೇಣಿಗೆ ಎಷ್ಟು ಎನ್ನುವುದನ್ನು ಗಮನಿಸುವುದಾದರೆ,
ಬಿಆರ್‌ಎಸ್ 580 ಕೋಟಿ ರೂ., ಕಾಂಗ್ರೆಸ್ 289 ಕೋಟಿ ರೂ., ವೈಎಸ್‌ಆರ್‌ಸಿಪಿ 184 ಕೋಟಿ ರೂ., ಟಿಡಿಪಿ 100 ಕೋಟಿ ರೂ., ಡಿಎಂಕೆ 60 ಕೋಟಿ ರೂ., ಎಎಪಿ 11 ಕೋಟಿ ರೂ. ಮತ್ತು ಟಿಎಂಸಿ 6 ಕೋಟಿ ರೂ.
ಕೆಲವು ವರದಿಗಳು ಹೇಳುತ್ತಿರುವ ಇನ್ನೊಂದು ಅಂಶವನ್ನೂ ಇಲ್ಲಿ ಗಮನಿಸಬೇಕು.
ಕೋವ್ಯಾಕ್ಸಿನ್ ತಯಾರಿಸಿದ್ದ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ 2023-24ರ ಹಣಕಾಸು ವರ್ಷದಲ್ಲಿ ಬಿಜೆಪಿಗೆ 50 ಕೋಟಿ ರೂ. ದೇಣಿಗೆ ನೀಡಿದೆ.
ಕಾರ್ಪೊರೇಟ್‌ಗಳು ಯಾಕೆ ಇಷ್ಟೊಂದು ಕೋಟಿ ರೂಪಾಯಿ ಪಕ್ಷಗಳಿಗೆ ದೇಣಿಗೆ ನೀಡುತ್ತವೆ? ದೇಶದ ಜನರನ್ನು ಉದ್ಧಾರ ಮಾಡಿ ಅಂತ ಕಾರ್ಪೊರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದುಡ್ಡು ಕೊಡುತ್ತವೆಯೇ? ಅಥವಾ ಸರಕಾರದೊಂದಿಗೆ ಮತ್ತು ರಾಜಕೀಯ ಪಕ್ಷಗಳೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವುದು ಅವುಗಳ ಉದ್ದೇಶವೆ.
ಆದರೆ, ಇಷ್ಟೊಂದು ಪ್ರಮಾಣದ ಹಣದ ಹೊಳೆ ರಾಜಕೀಯ ಪಕ್ಷಕ್ಕೆ ಹರಿದು ಬಂದರೆ ದೇಶದ ಮೇಲೆ ಅದರ ಪರಿಣಾಮ ಏನಾಗುತ್ತದೆ?
ತೆಲಂಗಾಣದಲ್ಲಿ ಈಗ ಹೆಚ್ಚುಕಡಿಮೆ ಇಲ್ಲವೇ ಇಲ್ಲ ಎನ್ನುವಂತಾಗಿರುವ ಬಿಆರ್‌ಎಸ್ ದೇಣಿಗೆಯಾಗಿ 580 ಕೋಟಿ ರೂ. ಪಡೆದಿದೆ.
ಇದು ಚುನಾವಣಾ ಬಾಂಡ್‌ಗಳಿಂದ ಬಂದ ದೇಣಿಗೆಯನ್ನು ಲೆಕ್ಕ ಹಾಕದೆ ಇರುವ ಅಂಕಿ ಅಂಶವಾಗಿದೆ ಎಂಬುದನ್ನೂ ಗಮನಿಸಬೇಕು.
ಹೀಗೆ ರಾಜಕೀಯ ಪಕ್ಷಗಳು ನೂರಾರು, ಸಾವಿರಾರು ಕೋಟಿ ರೂ. ಪಡೆಯುವಾಗ ಹೇಗೆ ಅವು ಪ್ರಭಾವ ಬೀರಬಲ್ಲವು ಮತ್ತು ಮಾಧ್ಯಮಗಳ ಮುಕ್ತತೆಯನ್ನು ಇಲ್ಲವಾಗಿಸಬಲ್ಲವು ಎಂಬುದು ಕಳವಳಕಾರಿ ಸಂಗತಿ.
ಹೀಗೆ ಮಾಧ್ಯಮಗಳು ಇನ್ನಾರದೋ ಪ್ರಭಾವಕ್ಕೆ ಒಳಗಾದಾಗ, ಅವು ಜನರಿಗೆ ತಲುಪಿಸುವ ನೆರೆಟಿವ್‌ಗಳು ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ಪರವಾಗಿ ಜನರ ಮನಸ್ಸನ್ನು ಪ್ರಭಾವಿಸುವಂಥವಾಗಿರುತ್ತವೆ. ಜನರನ್ನು ನಂಬಿಸುವ ಹಾಗೆ ಎಲ್ಲ ಸುಳ್ಳುಗಳನ್ನು ಸೇರಿಸಿದ ನೆರೆಟಿವ್ ಅನ್ನು ಸೃಷ್ಟಿಸಲಾಗುತ್ತದೆ. ಅಂಥ ನೆರೆಟಿವ್‌ಗಳ ಕಾರಣದಿಂದಾಗಿ ಜನರು ಪೂರ್ತಿಯಾಗಿ ಆ ನಿರ್ದಿಷ್ಟ ಪಕ್ಷವನ್ನು, ಅದರ ಸಿದ್ಧಾಂತವನ್ನು ನಂಬಲು ಶುರು ಮಾಡುತ್ತಾರೆ ಮತ್ತು ಅದಕ್ಕೆ ಮತ ಹಾಕುತ್ತಾರೆ.
ಇಂತಹ ಎಲ್ಲದರ ಹಿಂದೆ ಇರುವುದು ಆ ದೊಡ್ಡ ಪ್ರಮಾಣದ ಹಣದ ಹರಿವು. ಜನರು ಪೂರ್ತಿಯಾಗಿ ಆ ನೆರೆಟಿವ್‌ಗಳನ್ನು ಅನುಸರಿಸುವುದು ನಡೆಯುತ್ತದೆ. ಆ ನೆರೆಟಿವ್‌ಗಳನ್ನು ನಂಬಿ ಮತ ಹಾಕುವ ಜನರು, ಹಣದಲ್ಲಿ ಪ್ರಬಲವಾಗಿರುವ ಪಕ್ಷವನ್ನು ಗೆಲ್ಲಿಸುತ್ತಾರೆ.
ಒಂದು ಉದಾಹರಣೆಯಾಗಿ, ಕೋಕ್ ಅನ್ನು ತೆಗೆದುಕೊಳ್ಳುವುದಾದರೆ, ಕೊಕಾಕೋಲಾ ದೊಡ್ಡ ಬ್ರ್ಯಾಂಡ್. ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡುತ್ತದೆ. ಅವುಗಳ ಜಾಹೀರಾತು ಎಲ್ಲೆಡೆಯೂ ಕಣ್ಸೆಳೆಯುತ್ತದೆ. ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವುದಕ್ಕೆ ಅದು ಸಾಕಾಗುತ್ತದೆ.
ಅದಕ್ಕೆ ಪೆಪ್ಸಿ ಸರಿಸಮಾನವಾಗಿ ಪೈಪೋಟಿ ನೀಡುತ್ತಿದ್ದರೂ, ಅಂತಿಮವಾಗಿ ಯಾರು ಹಣದಲ್ಲಿ ಬಲ ಹೊಂದಿದ್ದಾರೊ ಅವರೇ ತಮ್ಮ ಉತ್ಪನ್ನವನ್ನು ಮಾರುವುದು ಸಾಧ್ಯವಾಗುತ್ತದೆ. ಹಣವಿಲ್ಲದೆ ಇರುವವರು ಮಾರುಕಟ್ಟೆಯಲ್ಲಿ ಗೆಲ್ಲುವುದು ಸಾಧ್ಯವೇ ಇಲ್ಲ. ಇದೇ ಥಿಯರಿಯೇ ರಾಜಕೀಯ ಪಕ್ಷಗಳ ವಿಚಾರದಲ್ಲಿಯೂ ನಡೆಯುತ್ತದೆ.
ರಾಜಕೀಯ ಪಕ್ಷಗಳ ಗೆಲುವಿನಲ್ಲೂ ಹೀಗೆ ಹಣದ ಪ್ರಭಾವವೇ ಕೆಲಸ ಮಾಡುವಾಗ, ಅದರ ನೇರ ಪರಿಣಾಮವಾಗುವುದು ದೇಶದ ಜನರ ಬದುಕಿನ ಮೇಲೆ.
ಒಂದು ರಾಜಕೀಯ ಪಕ್ಷ ಅಗಾಧ ಪ್ರಮಾಣದಲ್ಲಿ ಹಣವುಳ್ಳದ್ದಾಗಿದ್ದರೆ, ಅದು ತನ್ನದೇ ಆದ ನೆರೆಟಿವ್‌ಗಳನ್ನು ಹುಟ್ಟುಹಾಕುತ್ತದೆ, ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತದೆ, ಕಾರ್ಯಕರ್ತರ ಪಡೆಯೇ ಅದರ ಪರವಾಗಿ ನಿಲ್ಲುತ್ತದೆ.
ಬೇರೆ ಪಕ್ಷಗಳು ಊಹಿಸಲೂ ಸಾಧ್ಯವಿಲ್ಲದಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸುತ್ತದೆ, ಇಡೀ ವಾತಾವರಣ ಅದರ ಪರವಾದ ಅಲೆಯನ್ನೇ ಸೃಷ್ಟಿಸುವ ಹಾಗೆ ನಿರ್ಮಾಣವಾಗುತ್ತದೆ. ಹಾಗಿರುವಾಗ ಅಲ್ಲಿ ಸ್ಪರ್ಧೆ ಎನ್ನುವುದಕ್ಕೆ ಏನು ಅರ್ಥವಿರಲು ಸಾಧ್ಯ? ಚುನಾವಣೆ ಎದುರಿಸಿ ಗೆಲ್ಲಲು ಮತ್ತು ದೇಶದ ಸೇವೆಗೆ ನಿಲ್ಲಲು ಬಯಸುವ ಪ್ರಾಮಾಣಿಕ ರಾಜಕಾರಣಿ ಇಂತಹ ವಾತಾವರಣದಲ್ಲಿ ಏನು ಮಾಡಲು ಸಾಧ್ಯ?
60,000 ಸಭೆಗಳು, 70,000 ಸಭೆಗಳು ಒಂದು ರಾಜಕೀಯ ಪಕ್ಷವನ್ನು ಪ್ರಮೋಟ್ ಮಾಡುವುದಕ್ಕಾಗಿ ನಡೆಯುತ್ತವೆ. ಯಾಕೆಂದರೆ ಅದರ ಬಳಿ ಅಷ್ಟೊಂದು ಕೋಟಿಕೋಟಿ ಹಣ ಇದೆ. ಆದರೆ ನಿಜವಾಗಿಯೂ ಪ್ರಾಮಾಣಿಕವಾಗಿರುವವರು, ಜನರ ಸೇವೆ ಮಾಡಬಯಸುವವರು, ಬಡ ರಾಜಕೀಯ ಪಕ್ಷಗಳು 6 ಸಭೆಗಳನ್ನು ನಡೆಸುವುದಕ್ಕೂ ಬಲವಿಲ್ಲದ ಸ್ಥಿತಿಯಲ್ಲಿರುತ್ತವೆ.
ಒಂದು ಪ್ರಚಾರ ಸಭೆಯನ್ನು ಆಯೋಜಿಸಲು ಅನುಮತಿ ಪಡೆಯುವಲ್ಲಿಂದ ಹಿಡಿದು, ವೇದಿಕೆ ನಿರ್ಮಾಣದವರೆಗೆ ಎಲ್ಲದಕ್ಕೂ ಹಣ ಬೇಕು. ಬಲವಿಲ್ಲದ ಪಕ್ಷಗಳಿಗೆ ಯಾರು ಹಣ ಕೊಡುತ್ತಾರೆ? ಅಗ ಅದಕ್ಕೆ ಜನರನ್ನು ತಲುಪುವುದೇ ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಜನಸೇವೆ ಮಾಡಬಯಸುವವರು ಜನರ ಕಣ್ಣಿಗೇ ಬೀಳಲಾರದೆ ಕಣ್ಮರೆಯಾಗಿ ಹೋಗುತ್ತಾರೆ.
ಹಣವಿರುವ ರಾಜಕೀಯ ಪಕ್ಷದ ಅಬ್ಬರ, ಹಾರಾಟ, ಆರ್ಭಟ ಮಾತ್ರವೆ ಜನರ ಕಣ್ಣಿಗೆ ಕಾಣುತ್ತಿರುತ್ತದೆ. ಅದು ಒಮ್ಮೆ ಅಲ್ಲ, ಮತ್ತೆ ಮತ್ತೆ ಬೇರೆ ಬೇರೆ ಮಾಧ್ಯಮಗಳ ಮೂಲಕ, ವೇದಿಕೆಗಳ ಮೂಲಕ ಕಾಣುತ್ತಲೇ ಇರುತ್ತದೆ.
ಟಿವಿಯಲ್ಲಿ, ಮೊಬೈಲ್‌ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ವಾಟ್ಸ್ ಆ್ಯಪ್‌ನಲ್ಲಿ ಎಲ್ಲಿ ನೋಡಿದರೂ ಅದೇ ಪಕ್ಷ, ಅದೇ ನಾಯಕ, ಅವರದೇ ಭಾಷಣ. ಅದೇ ಒಂದು ದೊಡ್ಡ ನೆರೆಟಿವ್ ಆಗಿ ರೂಪುಗೊಳ್ಳುತ್ತದೆ.
ಇದು ಬಹಳ ದೊಡ್ಡ ಸಮಸ್ಯೆ.
ಇಂದಿನ ಕಾಲದಲ್ಲಿ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅಂದರೆ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಎಂಬುದೇ ಇಲ್ಲದಾಗಿದೆ.
ಇಂದು ಸ್ವತಃ ಮಹಾತ್ಮಾ ಗಾಂಧಿ ಎಲ್ಲಾದರೂ ಚುನಾವಣೆಗೆ ಸ್ಪರ್ಧಿಸಿದರೆ ಅವರೂ ಸೋಲಬಹುದು ಎಂದು ಖ್ಯಾತ ಪತ್ರಕರ್ತ, 2024ರ ಚುನಾವಣೆ ಬಗ್ಗೆ ಬಹುಚರ್ಚಿತ ಪುಸ್ತಕ ಬರೆದಿರುವ ರಾಜದೀಪ್ ಸರ್ದೇಸಾಯಿ ಹೇಳುತ್ತಾರೆ.
ಇಂದು ಲೆವೆಲ್ ಪ್ಲೇಯಿಂಗ್ ಫೀಲ್ಡ್ ಯಾವ ಮಟ್ಟಕ್ಕೆ ಇಲ್ಲದೇ ಆಗಿದೆ ಎಂದರೆ 100 ಮೀಟರ್ ರೇಸ್‌ನಲ್ಲಿ ಒಬ್ಬ ಓಟಗಾರ ಮಾತ್ರ 80 ಮೀಟರ್ ನಿಂದ ಓಟ ಸ್ಟಾರ್ಟ್ ಮಾಡುತ್ತಿದ್ದಾನೆ ಎಂದೂ ರಾಜ್‌ದೀಪ್ ಹೇಳುತ್ತಾರೆ.
ಎರಡನೆಯದಾಗಿ, ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುವ ಜನ ಯಾರು?
ಒಂದು ಕಂಪೆನಿ ಒಂದು ರಾಜಕೀಯ ಪಕ್ಷಕ್ಕೆ ಹಣ ನೀಡುತ್ತದೆ ಎಂದರೆ, ಅದು ಆ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ತನಗೆ ಬೇಕಾದುದನ್ನು ಪಡೆಯುವುದು ನಿಜವಲ್ಲವೇ? ದೇಶದ ಮೇಲಿನ ಪ್ರೀತಿಯಿಂದೇನಾದರೂ ಅವು ದೇಣಿಗೆ ನೀಡುತ್ತವೆಯೇ? ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಅವುಗಳ ಉದ್ದೇಶವಾಗಿದೆಯಲ್ಲವೇ?
ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭವನ್ನು ಬಿಟ್ಟು ಬೇರೇನಾದರೂ ದೃಷ್ಟಿಯಿಂದ ಏನಾದರೂ ಕೆಲಸ ಮಾಡಿದ್ದುಂಟೇ?
ಹೀಗೆ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಪಕ್ಷಕ್ಕೆ ಹಣ ನೀಡುವಾಗ ಅವು ಕೂಡ ಏಕಸ್ವಾಮ್ಯ ಸಾಧಿಸುವುದಕ್ಕಾಗಿಯೇ ತಂತ್ರ ಹೆಣೆಯುತ್ತವೆ ಎಂಬುದು ನಿಜವಲ್ಲವೆ?
ಅವು ತಮಗೆ ಬೇಕಾದ ಪಾಲಿಸಿ ರೂಪುಗೊಳ್ಳುವಂತಾಗುವುದಕ್ಕೆ, ಗ್ರಾಹಕರಿಗೆ ತಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲದ ಸನ್ನಿವೇಶ ನಿರ್ಮಾಣ ಮಾಡುವುದಕ್ಕೆ ಈ ಮೂಲಕ ಯತ್ನ ಮಾಡುತ್ತವೆ.
ದೊಡ್ಡ ಪ್ರಮಾಣದ ಹಣಬಲವುಳ್ಳ ರಾಜಕೀಯ ಪಕ್ಷ ಮೊದಲು ತನ್ನ ಏಕಸ್ವಾಮ್ಯ ಸಾಧಿಸುತ್ತದೆ. ಬಳಿಕ ತನ್ನ ಸುತ್ತ ಇತರ ಏಕಸ್ವಾಮ್ಯಗಳನ್ನು ಬೆಳೆಸುತ್ತದೆ. ಇದು ನಿಜವಾದ ಸಾಧ್ಯತೆ.
ಒಂದೇ ಕಂಪೆನಿ ಅನಿವಾರ್ಯ, ಇರುವುದೇ ಒಬ್ಬ ಸರ್ವಿಸ್ ಪ್ರೊವೈಡರ್ ಎನ್ನುವಂಥ ವಾತಾವರಣ ಸೃಷ್ಟಿಯಾದಾಗ ಗ್ರಾಹಕರ ಎದುರು ಬೇರೆ ಆಯ್ಕೆಗಳೇ ಇರುವುದಿಲ್ಲ. ಜನರು ಇಂದು ಅಂಥ ಸನ್ನಿವೇಶದ ಮಧ್ಯೆ ಬಂದು ನಿಂತಿದ್ದಾರೆ.
ದೇಶದ ಟೆಲಿಕಾಂ ಕ್ಷೇತ್ರವನ್ನು ನೋಡಿ, ಟೆಲಿಕಾಂನಲ್ಲಿ ಜಿಯೋ, ಏರ್ ಟೆಲ್ ಬಿಟ್ಟು ಬೇರೆಯವರಿಲ್ಲ ಎಂಬಂತಹ ಪರಿಸ್ಥಿತಿ. ಏರ್‌ಟೆಲ್‌ಗೇ ಅಂಬಾನಿಯ ಜಿಯೋ ಎದುರು ಏದುಸಿರು ಬಿಡುವ ಪರಿಸ್ಥಿತಿ.
ಅಂತಹ ಕಂಪೆನಿ ಮೊದಲು ಗ್ರಾಹಕರಿಗೆ ಉಚಿತ ಕೊಡುತ್ತೆ, ಮತ್ತೆ ಸಣ್ಣ ಶುಲ್ಕದಲ್ಲಿ ಕೊಡುತ್ತೆ, ಆಮೇಲೆ ತನಗೆ ಬೇಕಾದ ಶುಲ್ಕ ವಸೂಲಿ ಮಾಡುತ್ತೆ. ಅಷ್ಟೊತ್ತಿಗೆ ಉಳಿದ ಕಂಪೆನಿಗಳು ಬಾಗಿಲು ಮುಚ್ಚಿರುತ್ತವೆ. ಗ್ರಾಹಕರಿಗೆ ಬೇರೆ ಆಯ್ಕೆಯೇ ಉಳಿದಿರುವುದಿಲ್ಲ.
ನಾಗರಿಕ ವಿಮಾನ ಯಾನ ಕ್ಷೇತ್ರವನ್ನು ನೋಡಿ...ಈಗ ದೇಶಿಯ ವಿಮಾನ ಯಾನಕ್ಕೆ ಇಂಡಿಗೋ ಬಿಟ್ಟರೆ ಗತಿಯಿಲ್ಲ ಎಂಬಂತಾಗಿದೆ. ಅವರು ಕೇಳಿದಷ್ಟು ದುಡ್ಡು ಕೊಟ್ಟು, ಅವರ ಅತಿ ಕೆಟ್ಟ ಸೇವೆಯನ್ನು ಸಹಿಸಿಕೊಂಡು ಪ್ರಯಾಣಿಸಬೇಕು. ಬೇರೆ ಗತಿ ಇಲ್ಲ. ಅಷ್ಟೇ.
ಹೀಗೆ ರಾಜಕೀಯ ಪಕ್ಷವೊಂದು ಏಕಸ್ವಾಮ್ಯ ಸಾಧಿಸಿದಾಗ, ಯಾವುದೋ ಒಂದು ಕಾರ್ಪೊರೇಟ್ ವ್ಯವಸ್ಥೆ ಪ್ರಬಲವಾದಾಗ, ನಿಜವಾಗಿಯೂ ಶಕ್ತಿಯುತವಾದ ಈ.ಡಿ.ಯಂಥ ಸಾಂವಿಧಾನಿಕ ಸಂಸ್ಥೆಗಳು ಜನರಿಗಾಗಿ ಕೆಲಸ ಮಾಡದೆ, ನಿರ್ದಿಷ್ಟ ರಾಜಕೀಯ ಪಕ್ಷದ ಸೇವೆಗೆ ನಿಂತುಬಿಡುವ ಹಾಗಾಗುತ್ತದೆ. ರಾಜಕೀಯ ಪಕ್ಷಗಳು ಅವನ್ನು ತಮ್ಮ ಕೈಯಲ್ಲಿನ ಅಸ್ತ್ರದ ಹಾಗೆ ಬಳಸುತ್ತವೆ. ಯಾಕೆಂದರೆ, ಕೇಳುವವರೇ ಇಲ್ಲದ, ಪ್ರಶ್ನಿಸುವವರೇ ಇಲ್ಲದ ಸ್ಥಿತಿ ಅದಾಗಿರುತ್ತದೆ.
ವಿಪಕ್ಷ ದುರ್ಬಲವಾಗಿರುತ್ತದೆ. ಹಣವಿಲ್ಲದ ಅದು ರಾಜಕೀಯವಾಗಿಯೂ ಬಲ ಕಳೆದುಕೊಂಡಿರುತ್ತದೆ. ಅಸೆಂಬ್ಲಿಯಲ್ಲಿ, ಸಂಸತ್ತಿನಲ್ಲಿ ಅದಕ್ಕೆ ಸ್ಥಾನಬಲವೇ ಇರುವುದಿಲ್ಲ. ಜನರು ಕೂಡ ವಿಪಕ್ಷದ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹೋಗುತ್ತಾರೆ. ಯಾಕೆಂದರೆ ಮಡಿಲ ಮೀಡಿಯಾ ವಿಪಕ್ಷಕ್ಕೆ ವಿರುದ್ಧವಾದ ನೆರೆಟಿವ್ ಅನ್ನು ಸೃಷ್ಟಿಸಿರುತ್ತದೆ. ಪ್ರಬಲ ರಾಜಕೀಯ ಪಕ್ಷ ತನ್ನ ಲಾಭಕ್ಕೆ ಅನುಗುಣವಾಗಿ ಈ.ಡಿ., ಸಿಬಿಐ, ಐಟಿಯಂಥ ಸಂಸ್ಥೆಗಳನ್ನು ಬಳಸಿಕೊಳ್ಳುತ್ತದೆ.
ಹೀಗೆ ರಾಜಕೀಯ ಪಕ್ಷಗಳ ಕೈಯಲ್ಲಿನ ಅಸ್ತ್ರವಾಗಿ ಸಾಂವಿಧಾನಿಕ ಸಂಸ್ಥೆಗಳು ಬದಲಾದಾಗ, ಅವು ದುರ್ಬಳಕೆಗೆ ಒಳಗಾಗುತ್ತವೆ ಮತ್ತು ಅವು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ. ರಾಜಕೀಯ ಪಕ್ಷವೇ ಅವನ್ನು ತಪ್ಪು ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವಾಗ ಅವು ಕೂಡ ತಪ್ಪು ಮಾಡಲು ಇಳಿದುಬಿಡುತ್ತವೆ. ಅವುಗಳ ತಪ್ಪನ್ನು ಪ್ರಶ್ನಿಸುವ ಯಾವ ನೈತಿಕತೆಯಾದರೂ ಅವನ್ನು ತನಗಾಗಿ ದುರ್ಬಳಕೆ ಮಾಡಿಕೊಂಡವರಿಗೆ ಇರುವುದು ಸಾಧ್ಯವೆ?
ಹಣ ಸಿಕ್ಕಾಪಟ್ಟೆ ಪ್ರಮಾಣದಲ್ಲಿ ರಾಜಕೀಯದಲ್ಲಿ ಮತ್ತು ಚುನಾವಣೆಗೆ ಬಳಕೆಯಾಗುವುದು ಈಗ ಬಹಳ ಸಾಮಾನ್ಯ ಸಂಗತಿ ಎನ್ನುವಂತಾಗಿ ಬಿಟ್ಟಿದೆ.ಚುನಾವಣೆಗೆ ಯಾರು ಎಷ್ಟು ಖರ್ಚು ಮಾಡಬೇಕು ಎನ್ನುವ ಆಯೋಗದ ನಿಯಮಗಳ ಪಾಲನೆ ನಿಜವಾಗಿಯೂ ಆಗುತ್ತದೆಯೆ?
ಜನರು ಅದರ ಬಗ್ಗೆ ಕೇಳುವುದಿಲ್ಲ. ಅಷ್ಟು ದೊಡ್ಡ ಮೊತ್ತದ ಹಣ ರಾಜಕೀಯ ಪಕ್ಷಕ್ಕೆ ಯಾಕೆ ಬೇಕಿದೆ ಎಂಬ ಪ್ರಶ್ನೆಯನ್ನು ಯಾರೂ ಎತ್ತುವುದಿಲ್ಲ. ರಾಜಕೀಯ ಪಕ್ಷಗಳು ಎಷ್ಟನ್ನು ಯಾಕೆ ಖರ್ಚು ಮಾಡಿದವು ಎಂಬ ವಿವರಣೆಯನ್ನು ಜನರೆದುರು ಇಡುವ ವ್ಯವಸ್ಥೆಯೇ ಇಲ್ಲ.
ಈ.ಡಿ., ಸಿಬಿಐ ಪ್ರಬಲ ರಾಜಕೀಯ ಪಕ್ಷದ ಮೇಲೆ ರೇಡ್ ಮಾಡುವುದಿಲ್ಲ. ಅವೇನಿದ್ದರೂ ದುರ್ಬಲರನ್ನು, ಪ್ರಬಲ ರಾಜಕೀಯ ಪಕ್ಷದ ವಿರೋಧಿಗಳನ್ನು ಗುರಿ ಮಾಡುತ್ತವೆ.
ಹಣವೆಲ್ಲ ಎಲ್ಲಿಗೆ ಹೋಗುತ್ತದೆ, ಮತ್ತದು ಹೇಗೆ ಖರ್ಚಾಗುತ್ತದೆ ಎಂಬ ಲೆಕ್ಕವೇ ಯಾರಿಗೂ ಸಿಗುವುದಿಲ್ಲ. ಆ ಹಣವೆಲ್ಲವೂ ಒಂದು ರಾಜಕೀಯ ಪಕ್ಷ ತನ್ನ ಏಕಸ್ವಾಮ್ಯವನ್ನು ಸಾಧಿಸುವುದಕ್ಕೆ ಬಳಕೆಯಾಗುತ್ತದೆ ಅಥವಾ ದುರ್ಬಳಕೆಯಾಗುತ್ತದೆ.
ಚುನಾವಣೆ ಎನ್ನುವುದು ಕೇವಲ ಹಣಬಲದಿಂದಲೇ ನಡೆಯುವುದನ್ನು ತಪ್ಪಿಸುವುದು ಇಂಥ ಸನ್ನಿವೇಶದಲ್ಲಿ ಹೇಗೆ ಸಾಧ್ಯ?
ಸ್ಪಷ್ಟವಾಗಿ, ಚುನಾವಣೆಗಳಲ್ಲಿ ಹಣ ಮೇಲುಗೈ ಪಡೆಯುತ್ತದೆ ಇಂದಿನ ದಿನಗಳಲ್ಲಿನ ವಾಸ್ತವವಾಗಿದೆ.
ಒಂದು ಎಂಎಲ್‌ಎ ಚುನಾವಣೆಗೆ ಐವತ್ತು ಕೋಟಿ ರೂ. ಖರ್ಚು, ಒಂದು ಎಂಎಲ್‌ಎ ಬೈ ಎಲೆಕ್ಷನ್‌ಗೆ ನೂರಿನ್ನೂರು ಕೋಟಿ ರೂ. ಖರ್ಚು, ಒಂದೊಂದು ಮತಕ್ಕೆ ಹದಿನೈದರಿಂದ ಇಪ್ಪತ್ತು ಸಾವಿರ ರೂಪಾಯಿ ಖರ್ಚು. ಇದೆಲ್ಲ ಎಲ್ಲಿಗೆ ಹೋಗಿ ತಲುಪಲಿದೆ? ಹೀಗೆ ದುಡ್ಡುಕೊಟ್ಟು ಮತ ಖರೀದಿಸಿದವರು ನಾಳೆ ಜನರ ಕೆಲಸ ಮಾಡುತ್ತಾರೆಯೇ?
ಇಂಥ ಸಮಯದಲ್ಲಿ ನಿಜವಾಗಿಯೂ ಪ್ರಾಮಾಣಿಕರು ಯಾರು ಎಂಬುದನ್ನು ಗುರುತಿಸಿ, ಅವರನ್ನು ಅಧಿಕಾರಕ್ಕೆ ತರುವ ದಿಕ್ಕಿನಲ್ಲಿ ಜನರು ಚಿಂತಿಸಬೇಕಿದೆ.
ಹೊರತು ಥಳುಕು ಬಳುಕಿನ ರಾಜಕೀಯ ಪಕ್ಷದ ಹಿಂದೆ ಹೋದರೆ, ಅಬ್ಬರದ ಪ್ರಚಾರ, ಅದರ ಗ್ಲಾಮರ್‌ಗೆ ಮರುಳಾದರೆ, ಪ್ರಜಾಪ್ರಭುತ್ವಕ್ಕೆ ಮುಂದೆ ದಾರಿಯೇ ಇಲ್ಲದ ಒಂದು ಹಂತವನ್ನು ಮುಟ್ಟುತ್ತೇವೆ.