2047ರ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯವೇ?

ಇದೇ ಜನವರಿಯಲ್ಲಿ ಭಾರತ ಸರಕಾರ ಜಿಡಿಪಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. ಆ ಅಂಕಿಅಂಶಗಳಲ್ಲಿ ಜಿಡಿಪಿ ಏನೇನೂ ಇಲ್ಲವಾಗಿ, ಬರೀ ಹಣದುಬ್ಬರವೇ ಗೋಚರಿಸುತ್ತಿತ್ತು.
ಭಾರತದ ಆರ್ಥಿಕತೆಯಲ್ಲಿ ಬೆಲೆಯೇರಿಕೆ ಮತ್ತು ಆರ್ಥಿಕ ಅಸಮಾನತೆ ಬಿಟ್ಟರೆ ಮತ್ತೇನಾದರೂ ಕಾಣಿಸುತ್ತಿದೆಯೇ ಎಂದು ಕೇಳಿಕೊಳ್ಳಬೇಕಾದ ಸ್ಥಿತಿಯಿದೆ. ಗುಲಾಮಿ ಸ್ಥಿತಿಯಲ್ಲಿದ್ದ ಭಾರತಕ್ಕಿಂತ ಇವತ್ತಿನ ಭಾರತದ ಸ್ಥಿತಿ ಕೆಟ್ಟದ್ದಾಗಿರುವುದರ ಬಗ್ಗೆ ಈಗಾಗಲೇ ಚರ್ಚೆಗಳಾಗಿವೆ.
ದೇಶದ ಇಡೀ ಆರ್ಥಿಕ ವ್ಯವಸ್ಥೆಯಲ್ಲಿ ಬೆಲೆಯೇರಿಕೆಯೊಂದೇ ಗೋಚರಿಸುತ್ತಿದೆ. ಭಾರತದ ಜಿಡಿಪಿಯ ಬಹುಭಾಗ ಬೆಲೆಯೇರಿಕೆಯೇ ಇದೆ.
ಮೋದಿ ಸರಕಾರ ದೇಶದ ಆರ್ಥಿಕತೆ ಬಗ್ಗೆ ಕೊಡುವ ಚಿತ್ರಣಕ್ಕಿಂತ ವಾಸ್ತವ ಪೂರ್ತಿ ಬೇರೆಯೇ ಇದೆ. ಆರ್ಥಿಕ ಅಸಮಾನತೆ, ಬೆಲೆಯೇರಿಕೆಯೇ ಇರುವ ಈ ಸ್ಥಿತಿ ಮೋದಿ ಅವಧಿಯಲ್ಲಿ ಭಾರತದ ಆರ್ಥಿಕತೆ ಕೆಟ್ಟ ಸ್ಥಿತಿಯಲ್ಲಿದೆ ಎನ್ನುವುದನ್ನೇ ಸೂಚಿಸುತ್ತದೆ.
ಅರ್ಥ ವ್ಯವಸ್ಥೆಯ ನಿಜವಾದ ಸ್ಥಿತಿ ಪ್ರತಿ ವ್ಯಕ್ತಿಯ ಆದಾಯದ ಮೂಲಕ ತಿಳಿಯುತ್ತದೆ.
ಈಗಿನ ಸ್ಥಿತಿಯಲ್ಲಿ ಭಾರತದ ಪ್ರತೀ ವ್ಯಕ್ತಿಯ ವಾರ್ಷಿಕ ಆದಾಯ 98 ಸಾವಿರ ರೂ. ಮಾತ್ರ. ಅಂದರೆ ಪ್ರತೀ ವ್ಯಕ್ತಿಯ ಮಾಸಿಕ ಆದಾಯ 8 ಅಥವಾ 9 ಸಾವಿರ ರೂ. ಆಚೀಚೆ ಇದೆ. ಆದರೆ ಈ ಕಟು ವಾಸ್ತವದ ಬಗ್ಗೆ ಮೋದಿ ಯಾವತ್ತೂ ಎಲ್ಲಿಯೂ ಬಾಯ್ಬಿಟ್ಟೇ ಇಲ್ಲ.
ಹಗಲು ರಾತ್ರಿ ಮೋದಿ ಭಟ್ಟಂಗಿತನ ಮಾಡುವ ಮಡಿಲ ಮೀಡಿಯಾಗಳಂತೂ ಈ ಬಗ್ಗೆ ಮಾತಾಡುತ್ತವೆಯೇ?
ದೇಶದ ಜಿಡಿಪಿ ಬೆಳವಣಿಗೆ ದರ ಮಂದಗತಿಯಲ್ಲಿದೆ. ಇಷ್ಟು ಮಂದಗತಿ ಇರುವಾಗ ಇನ್ನು 2047ರ ವಿಕಸಿತ ಭಾರತದ ಕನಸು ಪೂರ್ಣವಾಗುವುದು ಹೇಗೆ?
ಈಗ ವಿಶ್ವಬ್ಯಾಂಕ್ ಕೂಡ ಆರ್ಥಿಕ ಬೆಳವಣಿಗೆಯ ವೇಗ ತೀವ್ರಗೊಳ್ಳಬೇಕಿರುವುದನ್ನು ಪ್ರತಿಪಾದಿಸಿದೆ.
ಇತ್ತೀಚೆಗೆ ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ‘ಇಂಡಿಯಾ ಕಂಟ್ರಿ ಇಕನಾಮಿಕ್ ಮೆಮೊರಂಡಮ್’ ಈ ಬಗ್ಗೆ ಹೇಳಿದೆ.
2047ರ ವೇಳೆಗೆ ಭಾರತ ಹೆಚ್ಚಿನ ಆದಾಯದ ಮಟ್ಟವನ್ನು ಮುಟ್ಟಲು ತೀವ್ರ ವೇಗದ ಸುಧಾರಣೆಗಳ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ತೆರಿಗೆಗಳನ್ನು ಕಡಿಮೆ ಮಾಡುವುದು, ವ್ಯಾಪಾರ ಮತ್ತು ವಿದೇಶಿ ನೇರ ಹೂಡಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವುದು ಇಂತಹ ಕ್ರಮಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವುದು ಸಾಧ್ಯ ಎಂದು ವರದಿ ಹೇಳಿದೆ.
2047ರ ವೇಳೆಗೆ ಭಾರತ ಹೆಚ್ಚಿನ ಆದಾಯದ ದೇಶವಾಗಬೇಕಾದರೆ, ಸರಾಸರಿ ವಾರ್ಷಿಕ ಶೇ.7.8ರ ಬೆಳವಣಿಗೆ ದರ ಅಗತ್ಯವಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ಪಾದಕತೆ ಹೆಚ್ಚಿಸುವುದರ ಕಡೆಗೆ ಗಮನ ಕೊಡಬೇಕಿರುವುದರ ಅಗತ್ಯವನ್ನು ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಜೊತೆಗೆ ಹೂಡಿಕೆ ಹೆಚ್ಚುವಂತೆ ಮಾಡುವುದು, ಅಂತಹ ಸನ್ನಿವೇಶವನ್ನು ಕಾಪಾಡಿಕೊಳ್ಳುವುದು, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಕಡಿಮೆ ಆದಾಯದ ರಾಜ್ಯಗಳಲ್ಲಿ ಬೆಳವಣಿಗೆಯ ಮೂಲಭೂತ ಅಂಶಗಳನ್ನು ಬಲಪಡಿಸುವುದು ಅಗತ್ಯ ಎಂದಿದೆ.
ಕೆಲವೇ ದೇಶಗಳು ಮಾತ್ರವೇ 20 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಧ್ಯಮ ಆದಾಯದ ಸ್ಥಿತಿಯಿಂದ ಹೆಚ್ಚಿನ ಆದಾಯದ ಆರ್ಥಿಕತೆಗೆ ಬದಲಾಗಿವೆ. ಆದರೆ ಬ್ರೆಝಿಲ್, ಮೆಕ್ಸಿಕೊ ಮತ್ತು ಟರ್ಕಿ ಸೇರಿದಂತೆ ಹಲವು ದೇಶಗಳು ಮೇಲೇರದೆ, ಮೇಲ್ಮಧ್ಯಮದ ಆದಾಯ ಸ್ಥಿತಿಯಲ್ಲೇ ಉಳಿದಿವೆ ಎಂದು ವರದಿ ಪ್ರಸ್ತಾವಿಸಿದೆ.
ಕಳೆದ ಮೂರು ದಶಕಗಳಲ್ಲಿ ಮೇಲ್ಮಧ್ಯಮ ಆದಾಯದ ದೇಶಗಳಾಗಿ ಮಾರ್ಪಟ್ಟ ದೇಶಗಳನ್ನು ಗಮನಿಸಿದರೆ, ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಹೆಚ್ಚಿನ ಆದಾಯದ ಸ್ಥಿತಿ ಮುಟ್ಟಿವೆ. ಅಂಥವುಗಳಲ್ಲಿ ಚಿಲಿ, ರೊಮೇನಿಯಾ, ಪೋಲ್ಯಾಂಡ್, ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾ ಸೇರಿವೆ.
ಅತ್ಯಂತ ಮಹತ್ವಾಕಾಂಕ್ಷೆಯ ಗುರಿಗಳನ್ನು ತಲುಪಲು ಅಷ್ಟೇ ಮಹತ್ವಾಕಾಂಕ್ಷೆಯ ಸುಧಾರಣೆಗಳು ಮತ್ತು ಅವನ್ನು ನಿರಂತರ ಅನುಷ್ಠಾನಗೊಳಿಸುವ ಸಾಮರ್ಥ್ಯ ಕೂಡ ಅಗತ್ಯ ಎಂದು ವಿಶ್ವ ಬ್ಯಾಂಕಿನ ಪ್ರಮುಖ ಅರ್ಥಶಾಸ್ತ್ರಜ್ಞ ಆರೆಲಿಯನ್ ಕ್ರೂಸ್ ಹೇಳಿದ್ಧಾರೆ.
2047ರ ವೇಳೆಗೆ ಭಾರತ ಹೆಚ್ಚಿನ ಆದಾಯದ ಆರ್ಥಿಕತೆಯಾಗಲು, ತಲಾ ಒಟ್ಟು ರಾಷ್ಟ್ರೀಯ ಆದಾಯ (ಜಿಎನ್‌ಐ) ಹೆಚ್ಚಬೇಕಾಗುತ್ತದೆ.
2023ರಲ್ಲಿ ಈ ಪ್ರಮಾಣ 2,540 ಡಾಲರ್ ಇತ್ತು. ಈಗ ಅದು ಸುಮಾರು ಎಂಟು ಪಟ್ಟು ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ವರದಿ ಅಂದಾಜಿಸಿದೆ.
2023ರಲ್ಲಿ 14,005 ಡಾಲರ್‌ಗಿಂತ ಹೆಚ್ಚಿನ ತಲಾ ಜಿಎನ್‌ಐ ಹೊಂದಿರುವ ದೇಶಗಳು ಹೆಚ್ಚಿನ ಆದಾಯದ ದೇಶಗಳಾಗಿ ಬದಲಾಗಿವೆ ಮತ್ತು 4,516 ಡಾಲರ್‌ನಿಂದ 14,005ರ ಒಳಗಿನ ಜಿಎನ್‌ಐ ಹೊಂದಿದ್ದ ದೇಶಗಳು ಮೇಲ್ಮಧ್ಯಮ ಆದಾಯದ ದೇಶಗಳಾಗಿವೆ ಎಂಬುದನ್ನು ವಿಶ್ವ ಬ್ಯಾಂಕ್ ವರದಿ ಉಲ್ಲೇಖಿಸಿದೆ. ಈ ಗುರಿಯನ್ನು ತಲುಪಲು, ಈಗಿನ ಎಲ್ಲ ಕ್ರಮಗಳ ಜೊತೆಗೇ, ವಾಸ್ತವವಾಗಿ ಸುಧಾರಣೆಗಳನ್ನು ವಿಸ್ತರಿಸಬೇಕು ಮತ್ತು ವೇಗ ತೀವ್ರಗೊಳಿಸಬೇಕು ಎಂದು ವರದಿ ಪ್ರತಿಪಾದಿಸಿದೆ.
ಸಾಧಾರಣ ಸನ್ನಿವೇಶದಲ್ಲಿ ಹೂಡಿಕೆ 2035ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 37ಕ್ಕೆ ಏರುತ್ತದೆ ಮತ್ತು ಬೆಳವಣಿಗೆ ಪ್ರತೀ ವರ್ಷ ಸರಾಸರಿ ಶೇ. 6.6ರಷ್ಟಿರುತ್ತದೆ.
ಆದರೆ ತೀವ್ರ ವೇಗದ ಸುಧಾರಣೆಯಲ್ಲಿ 2035ರ ವೇಳೆಗೆ ಜಿಡಿಪಿಯಲ್ಲಿ ಹೂಡಿಕೆಯ ಪಾಲು ಶೇ. 40ಕ್ಕೆ ತಲುಪುತ್ತದೆ ಮತ್ತು ಆರ್ಥಿಕತೆ ಶೇ. 7.8ಕ್ಕೆ ಬೆಳೆಯುತ್ತದೆ ಎಂದು ವರದಿ ತಿಳಿಸಿದೆ.
2023-24ರಲ್ಲಿ ಪ್ರಸ್ತುತ ಬೆಲೆಗಳಲ್ಲಿ ಒಟ್ಟು ಬಂಡವಾಳ ದರ ಜಿಡಿಪಿಗೆ ಶೇ. 31.4ರಷ್ಟಿತ್ತು.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಇತ್ತೀಚೆಗೆ 2023-24ರ ನೈಜ ಜಿಡಿಪಿ ಬೆಳವಣಿಗೆಯ ದರವನ್ನು ಶೇ. 9.2ಕ್ಕೆ ಪರಿಷ್ಕರಿಸಿದೆ ಮತ್ತು 2024-25ರಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇ. 6.5ಕ್ಕೆ ಅಂದಾಜಿಸಿದೆ. ಪರಿಣಾಮಕಾರಿ ಸಾಲ ಹಂಚಿಕೆ ಖಚಿತಪಡಿಸಿಕೊಳ್ಳಲು ಮತ್ತು ರಿಸ್ಕ್ ಕಡಿಮೆ ಮಾಡಲು ಮತ್ತಷ್ಟು ಹಣಕಾಸು ಸುಧಾರಣೆಗಳು ಬೇಕಿರುವ ಬಗ್ಗೆಯೂ ವರದಿ ಹೇಳಿದೆ.
ಅಂಥ ಕ್ರಮವಾಗಿ, ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯನ್ನು ಉತ್ತಮಗೊಳಿಸುವ ಬಗ್ಗೆ ಹೇಳಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಸಾಲ ಹೆಚ್ಚು ಸಿಗುವಂತಾಗುವುದು ಕೂಡ ಅಗತ್ಯ ಎಂದಿದೆ.
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ನಗರಾಭಿವೃದ್ಧಿ ಮತ್ತು ಸಾರಿಗೆಯಂತಹ ಖಾಸಗಿ ಹೂಡಿಕೆಗಳ ವಲಯಗಳಲ್ಲಿ ಹೆಚ್ಚಿನ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವತ್ತ ಗಮನ ಹರಿಸುವ ಅಗತ್ಯದ ಬಗ್ಗೆಯೂ ವರದಿ ಒತ್ತಿಹೇಳಿದೆ.
ಖಾಸಗಿ ಹೂಡಿಕೆ ಹೆಚ್ಚಿಸಲು ಹೆಚ್ಚಿನ ಸುಧಾರಣೆಗಳ ಅಗತ್ಯವಿದೆ ಎಂದು ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ ಆಗಸ್ಟೆ ಟನೋ ಕೌಮಾ ಹೇಳಿದ್ಧಾರೆ.
ತೆರಿಗೆಗಳನ್ನು ಕಡಿಮೆ ಮಾಡುವುದು, ವ್ಯಾಪಾರ ಮತ್ತು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಇರುವ ಅಡೆತಡೆಗಳನ್ನು ನಿವಾರಿಸುವುದರಿಂದ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಸಾಧ್ಯ ಎಂದು ವರದಿ ಹೇಳಿದೆ.
ಜಾಗತಿಕ ಮೌಲ್ಯ ಸರಪಳಿಗಳಲ್ಲಿ (ಜಿವಿಸಿ) ಸಂಯೋಜಿಸಲು ಆಮದುಗಳಿಗೆ ಆರ್ಥಿಕತೆಯನ್ನು ತೆರೆಯುವುದು ಉತ್ಪಾದಕತೆಯ ಲಾಭ ಮತ್ತು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅದು ಹೇಳಿದೆ.
ಪೆಟ್ರೋಲಿಯಂ, ಕಂಪ್ಯೂಟರ್ ಮತ್ತು ಸಂವಹನ ಉಪಕರಣಗಳು ಮತ್ತು ಸಿಮೆಂಟ್‌ನಂತಹ ವಲಯಗಳನ್ನು ಉಲ್ಲೇಖಿಸಿರುವ ವರದಿ, ಅವು ದೊಡ್ಡ ರಾಜ್ಯಗಳಿಗಷ್ಟೇ ಸೀಮಿತವಾಗಿರುವುದು ಮತ್ತು ಆ ವಲಯಗಳ ಮಾರುಕಟ್ಟೆ ಕೇಂದ್ರೀಕರಣದ ಅಪಾಯಗಳ ಬಗ್ಗೆ ಸೂಚಿಸಿದೆ.
ಉತ್ತಮ ಗುಣಮಟ್ಟದ ಉದ್ಯೋಗಗಳಿಗಾಗಿ, ಕಾರ್ಮಿಕ ವಲಯಗಳಲ್ಲಿ ಬೆಳವಣಿಗೆ ಹೆಚ್ಚಬೇಕಿದೆ ಮತ್ತು ಇದಕ್ಕಾಗಿ ಎಂಎಸ್‌ಎಂಇಗಳನ್ನು ಹೆಚ್ಚಿಸುವುದು ಅಗತ್ಯ ಎಂದು ವರದಿ ಶಿಫಾರಸು ಮಾಡಿದೆ.ಆದಾಯದ ಅಸಮಾನತೆಗಳನ್ನು ನಿವಾರಿಸಲು ಮತ್ತು ಅಂತರ್ಗತ ಬೆಳವಣಿಗೆ ಹೆಚ್ಚಿಸಲು ರಾಜ್ಯಗಳಿಗೆ ಸಂಬಂಧಿಸಿದ ನೀತಿಗಳ ಅಗತ್ಯದ ಬಗ್ಗೆಯೂ ವರದಿ ಹೇಳಿದೆ.
ದೊಡ್ಡ ಪ್ರಮಾಣದ ಅಂತರರಾಜ್ಯ ವಲಸೆಯ ಅನುಪಸ್ಥಿತಿಯಲ್ಲಿ, ಅಂತರ್ಗತ ಬೆಳವಣಿಗೆಗೆ ರಾಜ್ಯಗಳಾದ್ಯಂತ ಹೆಚ್ಚಿನ ಆದಾಯದ ಒಮ್ಮುಖದ ಅಗತ್ಯವಿರುತ್ತದೆ. ತಲಾ ಆದಾಯದ ವಿಷಯದಲ್ಲಿ ರಾಜ್ಯಗಳು ಒಮ್ಮುಖವಾಗುತ್ತಿಲ್ಲ. ಎಲ್ಲರಿಗೂ ಒಂದೇ ಅಳತೆ ಸೂಕ್ತ ಎಂಬುದಕ್ಕಿಂತ ವಿಭಿನ್ನ ನೀತಿಯ ಅಗತ್ಯವಿದೆ ಎಂದು ವರದಿ ಪ್ರತಿಪಾದಿಸಿದೆ.
ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳು ಬೆಳವಣಿಗೆಯ ಮೂಲಭೂತ ಅಂಶಗಳನ್ನು ಬಲಪಡಿಸುವತ್ತ ಗಮನಹರಿಸಬೇಕು. ಆದರೆ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳು ಭವಿಷ್ಯದಲ್ಲಿನ ಸುಧಾರಣೆಗಳಿಗೆ ಆದ್ಯತೆ ನೀಡಬಹುದು ಎಂಬ ಸಲಹೆಯನ್ನೂ ವರದಿ ನೀಡಿದೆ.
ಆದರೆ, 2047ರ ವಿಕಸಿತ ಭಾರತದ ಬಗ್ಗೆ ಮಾತಾಡುವ ಮಂದಿ ಇದನ್ನೆಲ್ಲ ಗ್ರಹಿಸಿದ್ದಾರೆಯೇ ಎಂಬ ಪ್ರಶ್ನೆ ಏಳುತ್ತದೆ.
ಇಲ್ಲಿ ಮತ್ತೂ ಒಂದು ವಿಚಾರವನ್ನು ಗಮನಿಸಬೇಕಿದೆ.
ಅದೇನೆಂದರೆ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಹೇಳಿರುವ ಮಾತು.
2047ರ ವೇಳೆಗೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಮುಟ್ಟಲು ಭಾರತೀಯರು ಕಷ್ಟಪಟ್ಟು ದುಡಿಯಬೇಕಿದೆ ಎಂದು ಅವರು ಹೇಳಿದ್ದಾರೆ.
‘ಬಿಸಿನೆಸ್ ಸ್ಟಾಂಡರ್ಡ್’ನ ಮಂಥನ್ ಶೃಂಗಸಭೆಯಲ್ಲಿ ಮಾತನಾಡುತ್ತ ಅವರು, ಜಪಾನ್, ದಕ್ಷಿಣ ಕೊರಿಯ, ಚೀನಾ ದೇಶಗಳು ಬಲವಾದ ಕೆಲಸದ ನೀತಿಯ ಮೂಲಕವೇ ಆರ್ಥಿಕ ಯಶಸ್ಸು ಸಾಧಿಸಿವೆ ಎಂಬುದನ್ನು ಉಲ್ಲೇಖಿಸಿದ್ಧಾರೆ.
ಭಾರತೀಯರು ವಾರಕ್ಕೆ 80ರಿಂದ 90 ಗಂಟೆಗಳ ಕಾಲ ಶ್ರಮಪಟ್ಟು ಕೆಲಸ ಮಾಡಬೇಕು. ಆಗಲೇ ಆರ್ಥಿಕತೆ ಈಗಿನ 4 ಟ್ರಿಲಿಯನ್ ಡಾಲರ್‌ನಿಂದ 30 ಟ್ರಿಲಿಯನ್ ಡಾಲರ್‌ನತ್ತ ಹೋಗಬಹುದು ಎಂದಿದ್ಧಾರೆ.
ಒಂದು ಕಡೆ ತಾನು ಮಾಡುತ್ತೇನೆ ಎಂದು ಬಿಜೆಪಿ ಸರಕಾರ ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ, ನಾರಾಯಣ ಮೂರ್ತಿ ಥರದವರು, ಈ ಅಮಿತಾಭ್ ಕಾಂತ್ ಥರದವರೆಲ್ಲ ಜನರು ಕುಟುಂಬ ಬಿಟ್ಟು ಇದ್ದಬಿದ್ದ ಸಮಯವನ್ನೆಲ್ಲ ಕೆಲಸ ಮಾಡಲು ಹಾಕಿ ಎನ್ನುವಂತೆ ಮಾತಾಡುತ್ತಿರುವುದು ವಿಚಿತ್ರವಾಗಿದೆ.
ಜನರೇ ಶ್ರಮಪಟ್ಟು ದುಡಿದು ಭಾರತದ ಆರ್ಥಿಕತೆಯನ್ನು 30 ಟ್ರಿಲಿಯನ್ ಡಾಲರ್‌ಗೆ ಮುಟ್ಟಿಸಬೇಕಾಗಿದೆ ಎಂದಾದರೆ ಸರಕಾರ ಏಕೆ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ.
ನಿಜವಾಗಿಯೂ ಈ ದೇಶದ ಜನರ ಬಗ್ಗೆ ಯೋಚಿಸಬೇಕಿದ್ದ ಸರಕಾರ, ಅವರ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ, ಅವರ ಜೇಬಿನಲ್ಲಿ ಹಣವಿರುವಂತೆ ಮಾಡಬೇಕಿದ್ದ ಸರಕಾರ ಅವರನ್ನು ಬೆಲೆಯೇರಿಕೆಯ ಬಾಣಲೆಯಲ್ಲಿ ಹಾಕಿ ಬೇಯಿಸುತ್ತಿದೆ. ಅಷ್ಟಾದ ಮೇಲೆಯೂ ಕರುಣೆಯಿಲ್ಲದಂತೆ ಅವರಿಂದಲೇ ದೊಡ್ಡ ಪ್ರಮಾಣದ ತೆರಿಗೆ ವಸೂಲಿ ಮಾಡುತ್ತಿದೆ.
ಒಂದಷ್ಟು ಗಂಟೆ ಕೆಲಸ ಎಂದು ಸರಕಾರದ ತುತ್ತೂರಿಗಳಂತೆ ಮಾತಾಡುವ ಕಾರ್ಪೊರೇಟ್‌ಗಳು ಕೋಟಿಗಟ್ಟಲೆ ಹಣ ತೆರಿಗೆ ವಿನಾಯಿತಿ ಪಡೆಯುತ್ತಲೇ ಇವೆ. ಜೊತೆಗೆ ಬೇಕಾದಷ್ಟು ಭೂಮಿ ಇತ್ಯಾದಿ ಇತರ ಲಾಭಗಳನ್ನೂ ಪಡೆದುಕೊಳ್ಳುತ್ತವೆ.
ಆದರೆ ಸಮಸ್ಯೆಗಳಿಂದ ಜನರನ್ನು ಮೇಲೆತ್ತದ ಸರಕಾರ, ಅವರನ್ನು 2047ರ ವಿಕಸಿತ ಭಾರತದ ಭ್ರಮೆಯಲ್ಲಿ ಮುಳುಗಿಸಲು ನೋಡುತ್ತಿದೆ. ಅದಕ್ಕಿಂತಲೂ, ಅವರಲ್ಲಿ ಧರ್ಮದ ಅಮಲನ್ನು ತುಂಬಿ,
ಅವರು ಯಾವುದನ್ನೂ ಪ್ರಶ್ನಿಸದಷ್ಟು ಮೈಮರೆಯುವಂತೆ ಮಾಡಲಾಗುತ್ತಿದೆ.