ಯಹ್ಯಾ ಸಿನ್ವರ್ ಹತ್ಯೆಯಿಂದ ಫೆಲೆಸ್ತೀನಿಯರ ಪ್ರತಿರೋಧ ಹತ್ತಿಕ್ಕಲು ಸಾಧ್ಯವೇ?
ಹಮಾಸ್ ಅತ್ಯುನ್ನತ ನಾಯಕ ಯಹ್ಯಾ ಸಿನ್ವರ್‌ರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ.
ಇನ್ನಾದರೂ ಗಾಝಾ ಮೇಲಿನ ದಾಳಿ ನಿಲ್ಲಬೇಕಿದೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಆದರೆ ಅಮೆರಿಕ ಇಂತಹ ಮಾತನ್ನು ವರ್ಷದಿಂದಲೂ ಹೇಳುತ್ತ ಬಂದಿದೆ. ಇತ್ತ ಇಸ್ರೇಲ್ ದಾಳಿಯೂ ನಡೆಯುತ್ತಲೇ ಇದೆ.
ಯಹ್ಯಾ ಸಿನ್ವರ್‌ರನ್ನು ಹೊಡೆದುಹಾಕಿದ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಆದರೆ ಅದೇನೂ ಯಹ್ಯಾರನ್ನಾ ಗಲೀ, ಅವರ ಹತ್ಯೆಯಾದುದನ್ನಾಗಲಿ ಸ್ಪಷ್ಟವಾಗಿ ತೋರಿಸುವುದಿಲ್ಲ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಕ್ಯಾಮರಾ ಮುಂದೆ ಬಂದು ಹೇಳಿಕೆ ಕೊಟ್ಟಿದ್ದಾರೆ. ಅತಿ ಭಯಂಕರ ನರಮೇಧಕ್ಕೆ ಕಾರಣನಾದ ವನನ್ನು ಕೊಂದುಹಾಕಿರುವುದಾಗಿ ನೆತನ್ಯಾಹು ಹೇಳಿದ್ದಾರೆ.
ಯಹ್ಯಾ ಸಿನ್ವರ್ ಹತ್ಯೆಯ ಬಳಿಕ ನೆತನ್ಯಾಹು ನಾಲ್ಕು ನಿಮಿಷ ಮಾತಾಡಿದ್ದಾರೆ. ಈ ಹಿಂದೆ ಲೆಬನಾನ್‌ನಲ್ಲಿ ಪೇಜರ್ ಸ್ಫೋಟ ನಡೆಸಿದ ಬಳಿಕ ಯಾವುದೇ ಹೇಳಿಕೆಯನ್ನು ಇಸ್ರೇಲ್ ನೀಡಿರಲಿಲ್ಲ. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾರನ್ನು ಹತ್ಯೆ ಮಾಡಿದ ಬಳಿಕವೂ ಯಾವುದೇ ವೀಡಿಯೊ ಬಿಡುಗಡೆ ಮಾಡಿರಲಿಲ್ಲ. ಆದರೆ ಈ ಸಲ ಇಸ್ರೇಲ್ ಯಾಕೆ ಭಿನ್ನ ದಾರಿ ತುಳಿದಿದೆ?
1,200 ಜನರನ್ನು ಕೊಂದವನನ್ನು ತಾನೀಗ ಕೊಂದಿರುವುದಾಗಿ ಇಸ್ರೇಲ್ ಹೇಳಿದೆ.
ಯಹ್ಯಾ ಸಿನ್ವರ್ ಹತ್ಯೆಯಾಗಿರುವುದು ಗಾಝಾದಲ್ಲಿ. ಲೆಬನಾನ್ ಅಥವಾ ಇರಾನ್‌ನಂತಹ ಬೇರೆ ದೇಶಗಳಲ್ಲಿ ಅಲ್ಲ. ಅವೆರಡೂ ಇಸ್ರೇಲ್ ಪಾಲಿಗೆ ವೈರಿ ದೇಶಗಳು.
ಕಳೆದೊಂದು ವರ್ಷದಿಂದ ಯಹ್ಯಾ ಸಿನ್ವರ್ ಗಾಝಾದಲ್ಲಿಯೇ ಇದ್ದುದಾಗಿ ವರದಿಗಳಿವೆ. ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಮಿಲಿಟರಿ ಹಾಗೂ ಅತ್ಯಂತ ದಕ್ಷ ಬೇಹು ವ್ಯವಸ್ಥೆ ಇದೆ ಎಂದು ಹೇಳಿಕೊಳ್ಳುವ ಇಸ್ರೇಲ್‌ಗೆ ಅವರಿರುವಲ್ಲಿ ಮುಟ್ಟಲು ಇಡೀ ಒಂದು ವರ್ಷ ಬೇಕಾಯಿತು.
ಇನ್ನೊಂದೆಡೆ ಯಹ್ಯಾ ಸಿನ್ವರ್ ಹತ್ಯೆಯ ಶ್ರೇಯಸ್ಸಿನಲ್ಲಿ ತನಗೂ ಪಾಲಿದೆ ಎಂದು ಅಮೆರಿಕ ಹೇಳಿದೆ. ಗಾಝಾ ಮೇಲಿನ ಯುದ್ಧ ಆರಂಭವಾದಾಗಿನಿಂದಲೂ ಸಿನ್ವರ್ ಥರದವರನ್ನು ಪತ್ತೆ ಮಾಡಲು ತಮ್ಮ ಪಡೆಗೆ ಹೇಳಿದ್ದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಇವೆಲ್ಲವೂ ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಯ ಭಾಗವಾಗಿಯೂ ನಡೆದಿರುವ ಹಾಗೆ ತೋರುತ್ತಿದೆ.
ತಮಾಷೆಯೆಂದರೆ, ಸಿನ್ವರ್ ಹತ್ಯೆ ಕಾರ್ಯಾಚರಣೆಯಲ್ಲಿ ನೇರವಾಗಿ ತನ್ನದೇನೂ ಪಾತ್ರವಿಲ್ಲ ಎಂದು ಪೆಂಟಗನ್ ಹೇಳಿದೆ.
2011ರಿಂದಲೂ ಅಮೆರಿಕ ಮತ್ತು ಇಸ್ರೇಲ್‌ಗೆ ಸಿನ್ವರ್ ಮೋಸ್ಟ್ ವಾಂಟೆಡ್ ಆಗಿದ್ದರು. ಅಮೆರಿಕ ಮತ್ತು ಇಸ್ರೇಲ್‌ಗಳಂತಹ ದೈತ್ಯ ಶಕ್ತಿಗಳಿಗೆ ಒಬ್ಬ ವ್ಯಕ್ತಿಯ ಹತ್ತಿರ ತಲುಪಲು 13 ವರ್ಷಗಳು ಬೇಕಾದವು.
ಅಮೆರಿಕ ಮತ್ತು ಬ್ರಿಟನ್ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎನ್ನುತ್ತವೆ. ಯಹ್ಯಾ ಸಿನ್ವರ್‌ರನ್ನು ಭಯೋತ್ಪಾದಕ ಎನ್ನುತ್ತವೆ. ಆದರೆ ಭಾರತ ಸರಕಾರ ಉಗ್ರರೆಂದು ಗುರುತಿಸಿರುವವರ ಪಟ್ಟಿಯಲ್ಲಿ ಹಮಾಸ್ ಸಂಘಟನೆ ಹೆಸರು ಇಲ್ಲ. ಮಡಿಲ ಮೀಡಿಯಾಗಳು ಮಾತ್ರ ಅದನ್ನು ಉಗ್ರ ಸಂಘಟನೆ ಎಂದು ಗುರುತಿಸಲಾಗಿದೆ ಎನ್ನುವಂತೆ ಉಲ್ಲೇಖಿಸುತ್ತವೆ.
‘ನ್ಯೂಯಾರ್ಕ್ ಟೈಮ್ಸ್’ ಸಶಸ್ತ್ರ ಫೆಲೆಸ್ತೀನಿಯನ್ ಗ್ರೂಪ್ ಎಂದು ಹಮಾಸ್ ಅನ್ನು ಗುರುತಿಸುತ್ತದೆ. ಆದರೆ ಭಯೋತ್ಪಾದಕ ಸಂಘಟನೆ ಎಂದು ಹೇಳುವುದಿಲ್ಲ. ಯಹ್ಯಾ ಸಿನ್ವರ್‌ರನ್ನು ಹಮಾಸ್ ನಾಯಕ ಎಂದು ಅದು ಬರೆದಿದೆ. ಸಿಎನ್‌ಎನ್, ಬಿಬಿಸಿ ಉಗ್ರವಾದಿ ಸಂಘಟನೆ ಎಂದು ಹಮಾಸ್ ಬಗ್ಗೆ ಹೇಳಿವೆ. ಇವೆಲ್ಲವೂ ಹಮಾಸ್ ನಾಯಕ ಎಂದು ಯಹ್ಯಾ ಸಿನ್ವರ್‌ರನ್ನು ಕರೆದಿವೆಯೇ ಹೊರತು, ಸ್ಪಷ್ಟವಾಗಿ ಎಲ್ಲಿಯೂ ಉಗ್ರ ಎಂದು ಹೇಳಿಲ್ಲ. ಅಲ್ ಜಝೀರಾ, ಫೈನಾನ್ಷಿಯಲ್ ಟೈಮ್ಸ್ ಇವಾವುವೂ ಹಾಗೆ ಕರೆದಿಲ್ಲ.
ಅಕ್ಟೋಬರ್ 7ರ ಇಸ್ರೇಲ್ ಮೇಲಿನ ದಾಳಿಯ ರೂವಾರಿ ಯಹ್ಯಾ ಸಿನ್ವರ್ ಎಂಬುದನ್ನು ಹೇಳಲಾಗಿದೆ. 2023ರ ಅಕ್ಟೋಬರ್ 7ರಿಂದ ಅಲ್ಲ, 2011ರಿಂದಲೂ ಅಮೆರಿಕ ಮತ್ತು ಇಸ್ರೇಲ್ ಅವರ ಮುಖ್ಯ ಟಾರ್ಗೆಟ್ ಆಗಿದ್ದವು. ಆತನ ಮೇಲೆ ನದರಿಟ್ಟಾಗಿದೆ, ಯಾವಾಗ ಆತ ಸಾಯಬೇಕೆಂದು ತಾವು ನಿರ್ಧರಿಸುತ್ತೇವೆ ಎಂದು ನೆತನ್ಯಾಹು ಈ ಹಿಂದೆ ಹೇಳಿದ್ದರು.
23 ವರ್ಷ ಯಹ್ಯಾ ಸಿನ್ವರ್ ಜೈಲಿನಲ್ಲಿದ್ದರು. ಪೂರ್ತಿ ಯೌವನವೇ ಜೈಲಿನಲ್ಲಿ ಮುಗಿದುಹೋಗಿತ್ತು. ಜೈಲಿನಲ್ಲೇ ಬಹಳಷ್ಟು ಪುಸ್ತಕಗಳನ್ನು ಓದಿದ್ದರು. ಇಸ್ರೇಲ್ ಅನ್ನು ತಿಳಿಯುವಲ್ಲಿ ಪುಸ್ತಕಗಳೇ ಅವರ ನೆರವಿಗೆ ಬಂದಿದ್ದವು. ಇಸ್ರೇಲಿ ಸಮಾಜ ಮತ್ತು ರಾಜಕೀಯವನ್ನು ಅಧ್ಯಯನ ಮಾಡಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಸಾವಿರಾರು ಯುವಕರನ್ನು ಹಮಾಸ್ ಸಂಘಟನೆಯತ್ತ ಆಕರ್ಷಿಸಲು ಮುಂದಾಗಿದ್ದರು.
ಸಿನ್ವರ್ ನರಮೇಧ ನಡೆಸಿದ್ದಾರೆಂದು ಹೇಳುವ ಇಸ್ರೇಲ್, ತಾನೇ ಖುದ್ಧಾಗಿ ಗಾಝಾಪಟ್ಟಿಯ ಅಮಾಯಕರನ್ನು, ಮಕ್ಕಳು, ಮಹಿಳೆಯರನ್ನು ಅತಿ ಕ್ರೂರವಾಗಿ ಕೊಂದುಹಾಕಿರುವುದನ್ನು ನೆನಪಿಸಿಕೊಳುತ್ತಿಲ್ಲ.
ಸಿನ್ವರ್ ವಿರುದ್ಧ ದೊಡ್ಡ ಕಾರ್ಯಾಚರಣೆಯನ್ನೇ ನಡೆಸಿ, ಈಗ ಗೆದ್ದಿರುವ ಭಾವನೆಯಿಂದ ಬೀಗುತ್ತಿದೆ. ಆದರೆ ಈ ಗೆಲುವು ತಾತ್ಕಾಲಿಕ. ಸಿನ್ವರ್ ಫೆಲೆಸ್ತೀನ್ ಯುವಕರ ಹೀರೋ ಆಗಿದ್ದು, ಅದರ ಪರಿಣಾಮ ಅವರ ಸಾವಿನ ನಂತರವೂ ಕಾಣಬಹುದು. ಯಾಕೆಂದರೆ, ಹಮಾಸ್ ಸಂಘಟನೆ ಕಚೇರಿಯ ಮೂಲಕ ನಡೆಯುವುದಲ್ಲ.
ನ್ಯೂಯಾರ್ಕರ್‌ನಲ್ಲಿ ಸಿನ್ವರ್ ಬಗ್ಗೆ 11 ಸಾವಿರ ಪದಗಳ ಬರಹವೊಂದು ಪ್ರಕಟವಾಗಿದೆ.
ಇಸ್ರೇಲ್‌ನ ಜೈಲಿನಲ್ಲಿ ಸಿನ್ವರ್ ಬಹು ಸಮಯವನ್ನು ಬ್ಯಾರಕ್ ಹಿಂದೆಯೇ ಇರುವಂತೆ ಮಾಡಲಾಗಿತ್ತು. ಯಹ್ಯಾ ಸಿನ್ವರ್ ನಾಯಕನಾದದ್ದೇ ಇಸ್ರೇಲ್ ಜೈಲಿನಲ್ಲಿ. ಅದು ಅವರ ಪಾಲಿಗೆ ಕಲಿಕೆಯ ತಾಣವಾಗಿತ್ತು. ದೇಹ ಗಟ್ಟಿಗೊಳಿಸಿಕೊಂಡದ್ದು ಕೂಡ ಜೈಲಿನಲ್ಲಿಯೇ. ಜೈಲಿನಲ್ಲಿ ತಾನು ಓದಿದ್ದನ್ನು ಟಿಪ್ಪಣಿ ಕೂಡ ಮಾಡಿಕೊಳ್ಳುತ್ತಿದ್ದರು. ಟಿಪ್ಪಣಿಗಳಿಂದಲೇ ಡೈರಿಯ ಸಾವಿರಾರು ಪುಟಗಳು ತುಂಬಿಹೋಗಿರುತ್ತಿದ್ದವು. ಜೈಲು ನಮ್ಮನ್ನು ತಯಾರು ಮಾಡುತ್ತದೆ ಎಂದು ಆನಂತರ ಸಂದರ್ಶನವೊಂದರಲ್ಲಿ ಯಹ್ಯಾ ಸಿನ್ವರ್ ಹೇಳಿದ್ದರು. ಜೈಲಿನಲ್ಲೂ ಯಹ್ಯಾ ಸಿನ್ವರ್ ಹೀಬ್ರೂ ಕಲಿಕೆ ಮುಂದುವರಿಸಿ ತನ್ನನ್ನು ಸಂದರ್ಶಿಸಲು ಬರುವವರನ್ನು ಹೀಬ್ರೂವಿನಲ್ಲಿಯೇ ಮಾತಾಡಲು ಹೇಳುತ್ತಿದ್ದರು.
ಗಾಝಾದಲ್ಲಿ ಅರ್ಧಂಬರ್ಧ ನೆಲಕ್ಕುರುಳಿದ ಮನೆಯೊಳಗೆ ಯಹ್ಯಾ ಸಿನ್ವರ್ ಕುರ್ಚಿಯ ಮೇಲೆ ಹೀರೋನಂತೆ ಮುಗುಳ್ನಗುತ್ತ ಕೂತಿರುವ ಚಿತ್ರವೊಂದನ್ನು ನ್ಯೂಯಾರ್ಕರ್ ಪ್ರಕಟಿಸಿದೆ.
ಗಾಝಾದಲ್ಲಿ ತೀರಾ ಸಂಕಷ್ಟದ ಸ್ಥಿತಿಯಲ್ಲೂ, ಮುರಿದು ಬಿದ್ದ ಮನೆಯ ಮಧ್ಯದಲ್ಲೂ ಜನ ಹೀಗೆ ಫೋಟೊಗೆ ಮುಗುಳ್ನಗುತ್ತಾ ಪೋಸು ನೀಡಬಲ್ಲರು ಎಂಬಂತಿದೆ ಆ ಚಿತ್ರ.
ಈಗ ಯಹ್ಯಾ ಸಿನ್ವರ್‌ರನ್ನು ಕೊಲ್ಲಲಾಗಿದೆ ಎಂದು ವೈಭವೀಕರಿಸಿ ಹೇಳುತ್ತಿರುವ ಪತ್ರಿಕೆಗಳು 13 ವರ್ಷಗಳಿಂದಲೂ ಇಸ್ರೇಲ್‌ಗೆ ಹೇಗೆ ಅವರನ್ನು ಪತ್ತೆ ಮಾಡಲಾಗಿರಲಿಲ್ಲ ಎಂಬುದರ ಬಗ್ಗೆ ಏನನ್ನೂ ಹೇಳುವುದಿಲ್ಲ.
ಅಲ್ಲಿ ಅಕಸ್ಮಾತ್ ಆಗಿ ಯಹ್ಯಾ ಸಿನ್ವರ್ ಎದುರಾಗಬಹುದು ಎಂಬ ಊಹೆಯೂ ಇಸ್ರೇಲ್‌ಗೆ ಇರಲಿಲ್ಲ. ಸತ್ತುಬಿದ್ದಿದ್ದವರಲ್ಲಿ ಇದ್ದಕ್ಕಿದ್ದಂತೆ ಒಬ್ಬನ ಚಹರೆ ಹಮಾಸ್ ಲೀಡರ್ ಅನ್ನು ಹೋಲುತ್ತದೆ ಎನ್ನಿಸಿ ಪರಿಶೀಲಿಸಿದಾಗ ಯಹ್ಯಾ ಸಿನ್ವರ್ ಹತ್ಯೆಯಾಗಿರುವುದು ಗೊತ್ತಾಗಿದೆ. ಹೀಗೆ ಟ್ರೈನಿ ಸ್ಕ್ವಾಡ್ ಕಮಾಂಡರ್‌ಗಳು ತಮ್ಮ ಗುರಿಯ ಬಗ್ಗೆ ಗೊತ್ತೇ ಇಲ್ಲದೆಯೂ ಅವರನ್ನೇ ಕೊಂದಿದ್ದಾರೆ. ದಕ್ಷಿಣ ಗಾಝಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಮಾಸ್ ಪಾಲಿಗೆ ಆಘಾತಕಾರಿಯಾದ ಈ ಹತ್ಯೆ ನಡೆದಿದೆ.
‘ದಿ ಗಾರ್ಡಿಯನ್’ ವರದಿ ಕೂಡ ಅದನ್ನೇ ಹೇಳಿದೆ.ಇದಾವುದೂ ಯೋಜಿಸಿ ನಡೆಸಿದ ಕಾರ್ಯಾಚರಣೆಯಲ್ಲ. ಅಚಾನಕ್ ಆಗಿ ಯಹ್ಯಾ ಸಿನ್ವರ್ ಹತ್ಯೆ ಆಗಿಬಿಟ್ಟಿದೆ ಎಂದು ಗಾರ್ಡಿಯನ್ ವರದಿ ಹೇಳಿದೆ. ಆದರೆ ಅದನ್ನೀಗ ತಮ್ಮ ಮಹಾ ಕಾರ್ಯಾಚರಣೆ ಎಂದು ಪೋಸು ಕೊಡುವುದಕ್ಕೆ ಇಸ್ರೇಲ್ ಮತ್ತು ಅಮೆರಿಕ ಪೈಪೋಟಿಗೆ ಬಿದ್ದಿವೆ.
ಇಸ್ರೇಲ್‌ನ ಕೆನ್ ರೇಡಿಯೊ ಕೂಡ, ಆಕಸ್ಮಿಕವಾಗಿ ಯಹ್ಯಾ ಸಿನ್ವರ್ ಹತ್ಯೆಯಾಗಿರುವುದಾಗಿಯೇ ಹೇಳಿದೆ. ಇದು ಇಂಟೆಲಿಜೆನ್ಸ್ ಆತನ ಬೆನ್ನುಬಿದ್ದು ನಡೆಸಿದ ಹತ್ಯೆಯೇನೂ ಅಲ್ಲ ಎಂದು ಕೆನ್ ರೇಡಿಯೊ ಸ್ಪಷ್ಟಪಡಿಸಿದೆ.
‘ಫೈನಾನ್ಷಿಯಲ್ ಟೈಮ್ಸ್’ ಪ್ರಕಟಿಸಿರುವ ಚಿತ್ರದಲ್ಲಿ ಯಹ್ಯಾ ಸಿನ್ವರ್ ಶವವನ್ನು ಇಸ್ರೇಲಿ ಸೈನಿಕರು ತರುವ ಸನ್ನಿವೇಶ ಸೆರೆಯಾಗಿದೆ. ಆದರೆ ಎಲ್ಲ ಸೈನಿಕರ ಮುಖವನ್ನು ಬ್ಲರ್ ಮಾಡುವ ಮೂಲಕ ಮರೆಮಾಚಲಾಗಿದೆ.
ಇದೆಲ್ಲದರ ನಂತರ ಒಂದು ವಿಚಾರ ಸ್ಪಷ್ಟವಾಗುತ್ತಿಲ್ಲ. ಸಿನ್ವರ್‌ರನ್ನು ಕೊಂದಿರುವುದು ಇಸ್ರೇಲ್‌ನ ಬಹು ದೊಡ್ಡ ಯಶಸ್ಸೇ ಅಥವಾ ಅಲ್ಲವೇ ಎನ್ನುವುದು.
ಇಸ್ರೇಲ್ ಹೇಳುತ್ತಿರುವುದು ನಮ್ಮ ಯುದ್ಧ ಗಾಝಾ ವಿರುದ್ಧವಲ್ಲ, ಹಮಾಸ್ ವಿರುದ್ಧ. ಈಗ ಸಿನ್ವರ್ ಹತ್ಯೆ ಬಳಿಕ ಯುದ್ಧ ನಿಲ್ಲುವುದೇ?
ನೆತನ್ಯಾಹು ‘‘ಯುದ್ಧ ನಿಲ್ಲುತ್ತದೆ. ಆದರೆ ಹಮಾಸ್ ತನ್ನ ಶಸ್ತ್ರಗಳನ್ನು ಕೆಳಗಿಡಬೇಕು’’ ಅಂದರೆ, ಬೈಡನ್ ‘‘ಇನ್ನು ಅಲ್ಲಿ ಹಮಾಸ್ ಅಧಿಕಾರ ಇರಲು ಸಾಧ್ಯವಿಲ್ಲ. ಒಬ್ಬ ಫೆಲೆಸ್ತೀನಿ ಇಲ್ಲವೇ ಇಸ್ರೇಲ್ ವ್ಯಕ್ತಿಯ ಕೈಗೆ ಅಧಿಕಾರ ಹೋಗುತ್ತದೆ’’ ಎಂದು ಹೇಳುತ್ತಿದ್ದಾರೆ.
ಇಸ್ರೇಲ್ ಯಾವಾಗ ಗಾಝಾ ಮೇಲಿನ ಬಾಂಬ್ ದಾಳಿಗಳನ್ನು ನಿಲ್ಲಿಸಲಿದೆ ಎಂಬುದಕ್ಕೇ ಜಗತ್ತಿನಲ್ಲೇ ಯಾರಲ್ಲೂ ಉತ್ತರವಿಲ್ಲ.
ಫೆಲೆಸ್ತೀನಿಯರಿಗೆ ಯಹ್ಯಾ ಸಿನ್ವರ್ ದೊಡ್ಡ ಹೀರೋ, ಸ್ಥೈರ್ಯದ ಸಂಕೇತ. ಜೀವನವಿಡೀ ಇಸ್ರೇಲ್‌ನ ಆಕ್ರಮಣಗಳನ್ನು ಎದುರಿಸಿದ ಯಹ್ಯಾ ಸಿನ್ವರ್ ಮರಣದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಇಸ್ರೇಲ್ ವರ್ಷದಿಂದ ಹೇಳುತ್ತಿರುವಂತೆ ಯಹ್ಯಾ ಸಿನ್ವರ್ ಸುರಕ್ಷಿತ ಸ್ಥಳದಲ್ಲಿ ಅಡಗಿ ಕೂತಿರಲಿಲ್ಲ. ಜನರ ಮಧ್ಯೆ ಇದ್ದುಕೊಂಡು ಹ್ಯೂಮನ್ ಶೀಲ್ಡ್ ಬಳಸುತ್ತಿದ್ದಾರೆ ಎಂಬ ಮಾತನ್ನು ಯಹ್ಯಾ ಸಿನ್ವರ್ ಸಾಯುತ್ತಾ ಸುಳ್ಳಾಗಿಸಿದ್ದಾರೆ.
ಮೇ 2021ರಲ್ಲಿ ‘‘ಇಸ್ರೇಲ್ ನನಗೆ ನೀಡಬಹುದಾದ ದೊಡ್ಡ ಕೊಡುಗೆಯೆಂದರೆ ನನ್ನನ್ನು ಹತ್ಯೆ ಮಾಡುವುದು’’ ಎಂದು ಯಹ್ಯಾ ಸಿನ್ವರ್ ಹೇಳಿದ್ದರು. ‘‘ಕೊರೋನ ವೈರಸ್ ಅಥವಾ ಪಾರ್ಶ್ವವಾಯು ಅಥವಾ ಹೃದಯಾಘಾತದಿಂದ ಸಾಯುವುದಕ್ಕಿಂತ ಎಫ್-16ನಿಂದ ಹುತಾತ್ಮನಾಗಿ ಸಾಯಲು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದ್ದರು.
ಇನ್ನೊಂದು ವೀಡಿಯೊದಲ್ಲಿ ‘‘ನಾನು ಇಲ್ಲಿಂದ ಮನೆಯವರೆಗೆ ನಡೆದುಕೊಂಡು ಹೋಗುತ್ತೇನೆ. 10 ನಿಮಿಷ ಕಾಲ ನಾನು ಇಲ್ಲಿ ಮಾತನಾಡಲಿದ್ದೇನೆ. ನಂತರ ಇಲ್ಲಿಂದ ಹೊರಡಲು ನನಗೆ 10 ನಿಮಿಷ ಹೆಚ್ಚು ಬೇಕು. ಒಂದು ಇಪ್ಪತ್ತು-ಮೂವತ್ತು ನಿಮಿಷಗಳ ಕಾಲ ನಾನು ನಡೆದುಕೊಂಡು ಹೋಗುತ್ತೇನೆ. ಸಾಧ್ಯವಾಗುವುದಾದರೆ ನನ್ನನ್ನು ಹತ್ಯೆ ಮಾಡಿ’’ ಎಂದು ಇಸ್ರೇಲ್‌ಗೆ ಯಹ್ಯಾ ಸಿನ್ವರ್ ಕರೆ ನೀಡುವುದನ್ನು ಕಾಣಬಹುದು. ಫೆಲೆಸ್ತೀನಿಯರ ಪ್ರತಿರೋಧ ಎಂತಹದ್ದು ಎಂದು ಸ್ಪಷ್ಟವಾಗಿ ತೋರಿಸುತ್ತವೆ ಯಹ್ಯಾ ಸಿನ್ವರ್ ಅವರ ಈ ಮಾತುಗಳು.
ಈಗ ಇಸ್ರೇಲ್ ಪಾಲಿಗೇನೋ ದೊಡ್ಡ ಯಶಸ್ಸು ಸಿಕ್ಕಿಬಿಟ್ಟಿದೆ. ಆದರೆ ಹಮಾಸ್ ಒಬ್ಬ ವ್ಯಕ್ತಿಯ ಮಾತಿನ ಮೇಲೆ ನಡೆಯುವ ಸಂಘಟನೆಯಂತೂ ಆಲ್ಲ. ಇಬ್ರಾಹೀಂ ಹಾನಿಯೆಹ್, ಯಹ್ಯಾ ಸಿನ್ವರ್ ಹತ್ಯೆ ಬಳಿಕ ಹಮಾಸ್ ಮುಗಿದೇ ಹೋಯಿತು ಎಂದು ಅಮೆರಿಕ, ಇಸ್ರೇಲ್ ಭಾವಿಸುತ್ತಿವೆ.
ಅಮೆರಿಕದ ನೆರವಿನೊಂದಿಗೆ ದಾಳಿಯಲ್ಲಿ ತೊಡಗಿರುವ ಇಸ್ರೇಲ್ ಎದುರು ಹಮಾಸ್ ಸ್ವಲ್ಪ ದುರ್ಬಲವಾಗಿದೆ. ಯಹ್ಯಾ ಸಿನ್ವರ್ ಹತ್ಯೆಯ ಕ್ಷಣವಂತೂ ಯಾರಿಗೂ ಗೊತ್ತಾಗಿಲ್ಲ.
ಸಿನ್ವರ್ ಹತ್ಯೆಯ ಬಳಿಕ ಫೆಲೆಸ್ತೀನ್ ವಿಷಯ ಕೂಡ ಮುಗಿದುಹೋಗಲಿದೆ ಎಂದು ಯಾರಾದರೂ ಭಾವಿಸಬಹುದು. ಆದರೆ ಅದು ನಿಜವೇ?
ಫೆಲೆಸ್ತೀನ್ ಒಂದು ಪ್ರತ್ಯೇಕ ದೇಶ. ಅದಕ್ಕೆ ಮಾನ್ಯತೆ ಸಿಗಬೇಕು ಎಂದು ಭಾರತವೂ ಹೇಳುತ್ತದೆ, ಅಮೆರಿಕವೂ ಹೇಳುತ್ತದೆ. ಆದರೆ ವಾಸ್ತವದಲ್ಲಿ ಆಗುತ್ತಿರುವುದೇನು?