ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ಪ್ರಕರಣ: ಡಿಸಿಆರ್ಇ ಠಾಣೆ ಕಾರ್ಯಾರಂಭಕ್ಕೆ ಮೂಲಸೌಕರ್ಯಗಳ ಅಡ್ಡಿ..!

PC: facebook.com/prajavani.net
ಬೆಂಗಳೂರು, ಮಾ.4: ಸುದೀರ್ಘ ಹೋರಾಟದ ನಂತರ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ಗಳ ಮೇಲಿನ ಜಾತಿ ನಿಂದನೆ, ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬೆಂಗಳೂರಿಗೆ ಎರಡು ಸೇರಿ ಪ್ರತೀ ಜಿಲ್ಲೆಗೊಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ)ಕ್ಕೆವಿಶೇಷ ಮಾನ್ಯತೆ ನೀಡಿ ಠಾಣೆ ಸ್ಥಾಪನೆಗೆ ಆದೇಶಿಸಿದ್ದರೂ, ಸಮರ್ಪಕ ಮೌಲಸೌಕರ್ಯಗಳ ಅಡ್ಡಿಯಿಂದ ಕಾರ್ಯಾರಂಭ ವಿಳಂಬವಾಗಿದೆ.
ದಲಿತ ಸಮುದಾಯಗಳ ಮೇಲಿನ ಜಾತಿ ದೌರ್ಜನ್ಯ ಪ್ರಕರಣಗಳ ತ್ವರಿತಗತಿ ಇತ್ಯರ್ಥಕ್ಕೆ ಸಾಮಾನ್ಯ ಪೊಲೀಸ್ ಠಾಣೆಗಳ ಬದಲಿಗೆ ‘ಡಿಸಿಆರ್ಇ’ ಠಾಣೆಗಳನ್ನು ಸ್ಥಾಪಿಸುವ ಸರಕಾರದ ತೀರ್ಮಾನ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಇದೀಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್ಇ) ಠಾಣೆಗಳ ಸ್ಥಾಪನೆಗೆ ಮೂಲಸೌಕರ್ಯಗಳ ಕೊರತೆ ಎದುರಾಗಿದೆ.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಡಿಸಿಆರ್ಇ’ ಠಾಣೆಗಳನ್ನು ಸ್ಥಾಪಿಸಲು ಕೇವಲ ಜಾಗವನ್ನಷ್ಟೇ ಗುರುತಿಸಲಾಗಿದೆ. ‘ಡಿಸಿಆರ್ಇ’ ಠಾಣೆಗಳಿಗೆ ಅಗತ್ಯ ಸಿಬ್ಬಂದಿ, ಕಂಪ್ಯೂಟರ್, ಕುರ್ಚಿ, ಮೇಜು ಸೇರಿದಂತೆ ಈ ವರೆಗೂ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ದಲಿತ ನಾಯಕರು ಆರೋಪಿಸಿದ್ದಾರೆ.
ಜೂನ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ 33 ‘ಡಿಸಿಆರ್ಇ’ ಠಾಣೆಗಳನ್ನು ಸ್ಥಾಪಿಸಲು ಅನುಮೋದನೆ ನೀಡಿತ್ತು. ಆ ಬಳಿಕ ಡಿಸೆಂಬರ್ನಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ 3 ತಿಂಗಳು ಕಳೆದರೂ ದಲಿತ ಸಮುದಾಯದ ಮೇಲಿನ ಜಾತಿ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಬೇಕಿದ್ದ 33 ‘ಡಿಸಿಆರ್ಇ’ ಠಾಣೆಗಳು ಇನ್ನೂ ಕಡತದಲ್ಲೇ ಉಳಿದಿವೆ ಎಂದು ಬಹುಜನ ಚಳವಳಿಯ ನಾಯಕ ಕನಕಪುರ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತ್ವರಿತಗತಿಯಲ್ಲಿ 33 ‘ಡಿಸಿಆರ್ಇ’ ಠಾಣೆಗಳು ಆರಂಭಗೊಳ್ಳಬೇಕಿದ್ದು, ಈ ಠಾಣೆಗಳಿಗೆ ಅಗತ್ಯ ಸಿಬ್ಬಂದಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಆ ಬಳಿಕವೇ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಡಿಸಿಆರ್ಇ ಠಾಣೆಗಳಿಗೆ ವರ್ಗಾವಣೆಗೊಳ್ಳಬೇಕು. ಅಲ್ಲದೆ, ಎಫ್ಐಆರ್ ದಾಖಲಿಸಲು ಸಾಫ್ಟ್ ವೇರ್ ರೂಪಿಸಬೇಕಿದೆ. ಹೀಗಾಗಿ ರಾಜ್ಯ ಮಟ್ಟದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ 33 ‘ಡಿಸಿಆರ್ಇ’ ಠಾಣೆಗಳ ಕಾರ್ಯಾರಂಭಕ್ಕೆ ಇನ್ನೂ 6 ತಿಂಗಳು ಸಮಯ ಹಿಡಿಯಲಿದೆ. ಹಂತ-ಹಂತವಾಗಿ ಡಿಸಿಆರ್ಇ ಠಾಣೆಗಳ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.
ಅದು ಅಲ್ಲದೆ, 1974ರಲ್ಲಿ ಡಿಸಿಆರ್ಇ ಸ್ಥಾಪನೆ ಆಗಿದ್ದು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕೆಲವು ವಿಷಯಗಳಲ್ಲಿ ವಿಚಾರಣೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸುವ ಅಧಿಕಾರ ಹೊಂದಿತ್ತು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡುತ್ತಿಲ್ಲವೆಂದು ಆರೋಪಿಸಿ ಡಿಸಿಆರ್ಇ ಘಟಕದ ಬಾಗಿಲು ತಟ್ಟುತ್ತಿದ್ದರು. ಆದರೆ, ಪೊಲೀಸ್ ಠಾಣೆ ಮಾನ್ಯತೆಯಿಲ್ಲದೇ ಕಾನೂನು ಪ್ರಕ್ರಿಯೆ ಕಾರ್ಯಗತ ಮಾಡುವುದು ಡಿಸಿಆರ್ಇ ಘಟಕಕ್ಕೆ ಅಸಾಧ್ಯವಾಗಿತ್ತು. ಅಧಿಕಾರಿಗಳು ಕೇವಲ ವಿಚಾರಣೆ ನಡೆಸಿ, ಕ್ರಮ ಜರುಗಿಸುವಂತೆ ಸ್ಥಳೀಯ ಠಾಣೆಗೆ ಶಿಫಾರಸು ಮಾಡಿ, ನೊಂದವರನ್ನು ಮತ್ತೆ ಸ್ಥಳೀಯ ಠಾಣೆಗಳಿಗೇ ಕಳುಹಿಸುತ್ತಿದ್ದರು.
ಸ್ಥಳೀಯ ಠಾಣೆಗಳಲ್ಲಿ ಇರುವ ಇತರ ಕೆಲಸಗಳ ಒತ್ತಡದಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾತಿ ಪ್ರಕ್ರಿಯೆ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಸುವುದು ವಿಳಂಬ ಆಗುತ್ತಿತ್ತು. ತನಿಖಾಧಿಕಾರಿಗಳು, ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಿ ಕೋರ್ಟ್ಗೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅದೂ ಸಾಧ್ಯವಾಗುತ್ತಿರಲಿಲ್ಲ.
ಈಗ ಡಿಸಿಆರ್ಇ ಘಟಕಗಳಿಗೆ ವಿಶೇಷ ಠಾಣೆ ಮಾನ್ಯತೆ ಲಭಿಸಿರುವ ಕಾರಣ, ಎಫ್ಐಆರ್ ದಾಖಲಿಸುವ ಅಧಿಕಾರ ದತ್ತವಾಗಿದೆ. ತ್ವರಿತವಾಗಿ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೂ ನೆರವಾಗಲಿದೆ ಎಂದೂ ಅಧಿಕಾರಿ ಉಲ್ಲೇಖಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ನ್ಯಾಯೋಚಿತವಾಗಿ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯ ನಿರ್ವಹಣೆ ಮಾಡಲು ಠಾಣೆಗಳ ಅಗತ್ಯವಿದ್ದು, ರಾಜ್ಯ ಸರಕಾರ ತುರ್ತು ಅನುದಾನ ಬಿಡುಗಡೆಗೊಳಿಸಿ ಮೂಲಸೌಕರ್ಯಗಳನ್ನು ಒಗದಗಿಸಲು ಕ್ರಮ ಕೈಗೊಳ್ಳಬೇಕು.
ಮಾರಸಂದ್ರ ಮುನಿಯಪ್ಪ, ರಾಜ್ಯಾಧ್ಯಕ್ಷ, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ
ಆರೋಪಿಗಳ ವಿರುದ್ಧ ತ್ವರಿತ ಕ್ರಮ
ರಾಜ್ಯ ಸರಕಾರ 2023ರಲ್ಲಿ ಡಿಸಿಆರ್ಇ ಘಟಕವನ್ನು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣಾ ಘಟಕವಾಗಿ ಘೋಷಣೆ ಮಾಡಿತ್ತು. ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ರಕ್ಷಣಾ ಕೋಶವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಅಸ್ಪೃಶ್ಯತಾ ನಿಷೇಧ ಕಾಯ್ದೆ-1955 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989ರ ಅಡಿಯಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ಪೊಲೀಸ್ ಠಾಣೆಗಳ ಮೂಲಕ ಆರೋಪಿಗಳ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.
ಡಿಸಿಆರ್ಇ ಕಾರ್ಯವೇನು?
ಸಮಾಜ ಕಲ್ಯಾಣ ಇಲಾಖೆಯು 1974ರಲ್ಲಿ ಹೊರಡಿಸಿದ ಆದೇಶದ ಪ್ರಕಾರ ಡಿಸಿಆರ್ಇ ಘಟಕವು 14 ಅಂಶಗಳ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವ ಅಧಿಕಾರವನ್ನು ಹೊಂದಿದೆ.
► ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ನೀಡಿದ ಅನುದಾನದ ದುರುಪಯೋಗ ► ಸರಕಾರಿ ಭೂಮಿ ಮಂಜೂರು ಮಾಡುವ ಆದೇಶದ ಉಲ್ಲಂಘನೆ ►ದಲಿತರನ್ನು ಗೋಮಾಳ ಭೂಮಿಯಿಂದ ಕಾನೂನಿಗೆ ವಿರುದ್ಧವಾಗಿ ಒಕ್ಕಲೆಬ್ಬಿಸಿದ ಪ್ರಕರಣಗಳು ► ದಲಿತರಿಗೆ ನೀಡಲಾದ ಇನಾಮ್ ಜಮೀನು, ನಿವೇಶನಗಳನ್ನು ನಿಯಮ ಬಾಹಿರವಾಗಿ ಪರಭಾರೆ ಮಾಡಿದ ಪ್ರಕರಣ ►ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಪ್ರಕರಣಗಳು ►ಜೀತ ನಿರ್ಮೂಲನಾ ಪದ್ಧತಿ 1975ರ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳು ► ಸಮಾಜ ಕಲ್ಯಾಣ ಇಲಾಖೆ, ಸರಕಾರಿ ಅನುದಾನಿತ ವಸತಿನಿಲಯಗಳಲ್ಲಿ ಆಗುವ ಅನುದಾನದ ದುರುಪಯೋಗ ►ಎಸ್ಸಿ, ಎಸ್ಟಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕಾನೂನು/ನಿಯಮಗಳ ಉಲ್ಲಂಘನೆ ► ಶೇ.18 ಮೀಸಲಾತಿ ಉಲ್ಲಂಘನೆ